ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಹೊನಲು: ಹೇಗಿರಬೇಕು ನನ್ನ ಭಾರತ? ವಿವಿಧ ಗಣ್ಯರ ಮನದಾಳದ ಮುಕ್ತ ಮಾತುಗಳು

Last Updated 14 ಆಗಸ್ಟ್ 2022, 0:15 IST
ಅಕ್ಷರ ಗಾತ್ರ

‘ನನ್ನ ಕನಸಿನ ಭಾರತ ಎಂತಹದ್ದು, ವಾಸ್ತವಿಕ ಭಾರತ ಹೇಗಿದೆ’ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ತಲೆಮಾರಿನವರು (25+, 50+ ಮತ್ತು 75+) ನಡೆಸಿದ ವಿಶ್ಲೇಷಣೆಗಳು ಪುರವಣಿಯ ಪುಟಗಳಲ್ಲಿ ಹರಡಿವೆ. ಈ ವಿಶ್ಲೇಷಣೆಗಳಲ್ಲಿ ಭಾರತದ ಕುರಿತು ಹಲವು
ಕನಸುಗಳು ಬಿಚ್ಚಿಕೊಂಡಿವೆ. ವಾಸ್ತವದ ಬಿಕ್ಕಟ್ಟುಗಳಿಗೆ ಮರುಕವೂ ಇದೆ. ಮೈಕೊಡವಿ ಎದ್ದು ನಿಲ್ಲುವ ಉತ್ಸಾಹವೂ ಈ ಸಾಲುಗಳಲ್ಲಿ ತುಂಬಿಕೊಂಡಿದೆ.

ಮತ ಮಾರಿಕೊಳ್ಳುವಷ್ಟು ಕೀಳಾದರೇ ಜನ?

ಪರತಂತ್ರದಿಂದ ಸ್ವಾತಂತ್ರ್ಯದತ್ತ ಹೆಜ್ಜೆ ಇಟ್ಟಾಗ ದೇಶ ಆರ್ಥಿಕವಾಗಿ ಹಿಂದುಳಿದಿದ್ದರೂ ಸೌಹಾರ್ದ, ಸಮನ್ವಯ, ಸಮರಸ ತತ್ವಗಳಿಗೆ ಕೊರತೆ ಇರಲಿಲ್ಲ. ಬಡತನ, ಅಸಮಾನತೆ, ಅನಕ್ಷರತೆ ನಿರ್ಮೂಲನೆ ನಮ್ಮೆಲ್ಲರ ಗುರಿಯಾಗಿತ್ತು. ಶಿಕ್ಷಣದಿಂದ ಮಾತ್ರ ಸಮಸಮಾಜ ನಿರ್ಮಿಸಲು ಸಾಧ್ಯ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಈ ಉದ್ದೇಶ ಸಾಧನೆಗಾಗಿಯೇ ಭಾರತೀಯ ಸಂವಿಧಾನ ರಚನೆಯಾಗಿತ್ತು. ಈ ನೆಲದ ಕಾನೂನಿಗೆ ನಾವೆಲ್ಲರೂ ಒಪ್ಪಿ ಹೆಜ್ಜೆ ಆರಂಭಿಸಿದ್ದೆವು.

ಆದರೆ, ವಾಸ್ತವದಲ್ಲಿ ಈಗೇನಾಗಿದೆ? ಆರ್ಥಿಕವಾಗಿ ನಾವು ಶಕ್ತಿಯುತವಾಗಿದ್ದೇವೆ ನಿಜ. ಆದರೆ ಸೌಹಾರ್ದ, ಸಮನ್ವಯತೆಗೆ ಪೆಟ್ಟು ಬಿದ್ದಿದೆ. ಚುನಾವಣಾ ವ್ಯವಸ್ಥೆ ಸರಿಪಡಿಸಲಾಗದಷ್ಟು ಅಧೋಗತಿಗೆ ಕುಸಿದಿದೆ. ಜನರು ಮತ ಮಾರಿಕೊಳ್ಳುವಷ್ಟು ಹೀನ ಸ್ಥಿತಿಗೆ ತಲುಪಲು ಕಾರಣಕರ್ತರು ಯಾರು ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ.

ಸ್ವಾತಂತ್ರ್ಯ ಬಂದಾಗ ಚುನಾವಣೆಗಳು ಶುದ್ಧವಾಗಿದ್ದವು. ಜನರ ಖರ್ಚಿನಿಂದಲೇ ಜನಪ್ರತಿನಿಧಿಗಳು ಆರಿಸಿ ಬರುತ್ತಿದ್ದರು. ಆದರೆ ಈಗ ಮೌಲ್ಯಗಳ ಕುಸಿತ, ನೈತಿಕ ಅಧಃಪತನ ರಾರಾಜಿಸುತ್ತಿದೆ. ಕೇವಲ 75 ವರ್ಷಗಳಲ್ಲಿ ಸ್ವಾತಂತ್ರ್ಯ ತನ್ನ ಅರ್ಥ ಕಳೆದುಕೊಂಡಿದೆ. ಆಳ್ವಿಕೆಯ ಮಾರ್ಗ ಖಂಡಿತಾ ಸರಿ ಇಲ್ಲ, ದಾರಿ ಸುಧಾರಣೆಯಾಗದಿದ್ದರೆ ನಡಿಗೆ ಸುಸ್ಥಿತಿಗೆ ಬರಲಾರದು.

–ಕೆ.ಟಿ.ಚಂದು, ಸ್ವಾತಂತ್ರ್ಯ ಹೋರಾಟಗಾರ,ಮದ್ದೂರು (ಮಂಡ್ಯ)

–––

ಸಮಾನತೆಯ ಆಶಯ ಈಡೇರಲಿ

ಸ್ವಾತಂತ್ರ್ಯ ದೊರೆತು ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸಕರವಾದದ್ದೇ. ಬಹುತ್ವದ ಭಾರತದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ ಹಲವರಿಗೆ ತಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯವಿದೆಯಾದರೂ ಅದಿನ್ನೂ ಪರಿಪೂರ್ಣವಾಗಿ ದಕ್ಕಿಲ್ಲ. ಎಲ್ಲೆಡೆ, ಎಲ್ಲ ರಂಗದಲ್ಲೂ ಸಮಾನತೆಯ ಹಾದಿ ಇನ್ನೂ ದೂರವಿದೆ.

ಲಿಂಗತ್ವ ಅಲ್ಪಸಂಖ್ಯಾತೆಯಾಗಿರುವ ನನ್ನನ್ನೂ ಒಳಗೊಂಡು ಅನೇಕರಿಗೆ ಸರ್ಕಾರ ಉನ್ನತ ಸ್ಥಾನಮಾನ ನೀಡಿರುವುದು ಶ್ಲಾಘನೀಯ. ಆದರೆ, ಸಮಾಜ ಮಾತ್ರ ನಮ್ಮನ್ನು ಇನ್ನೂ ಮುಕ್ತವಾಗಿ ಒಪ್ಪಿಕೊಂಡಿಲ್ಲ. ಅದರಲ್ಲೂ ಪೋಷಕರು ತಮ್ಮ ಮಗ ಸುಳ್ಳ, ಕಳ್ಳ, ಕೊಲೆಗಡುಕ ಏನೇ ಆಗಿರಲಿ ಒಪ್ಪಿಕೊಂಡು ಬಿಡುತ್ತಾರೆ. ಅದೇ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವ ಅಂದರೆ ಸಾಕು ಏನೋ ಆಗಬಾರದ್ದು ಆಗಿದೆ ಎಂಬಂತೆ ವರ್ತಿಸುತ್ತಾರೆ.

ನನ್ನ ಭಾರತದಲ್ಲಿ ಮುಂದಿನ ದಿನಗಳಲ್ಲಿ ನಮ್ಮನ್ನೂ ಪೋಷಕರು ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಗಲಿ ಅನ್ನುವ ಆಶಯ ನನ್ನದು. ಮುಖ್ಯವಾಗಿ ನಮ್ಮ ಸಮುದಾಯದಕ್ಕೆ ಶಿಕ್ಷಣದ ಅಗತ್ಯವಿದೆ. ಶಾಲಾ–ಕಾಲೇಜುಗಳಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅಗತ್ಯವಿದೆ. ಇಂದು ಹೆಣ್ಣು ಗಂಡಿಗೆ ಸರಿಸಮಾನವಾಗಿ ಎಲ್ಲ ರಂಗಗಳಲ್ಲೂ ಜೊತೆಯಾಗಿ ಸಾಗುತ್ತಿದ್ದಾಳೆ. ಅಂತೆಯೇ ಇವರಿಬ್ಬರಿಗೆ ಸಮನಾಗಿ ಲಿಂಗತ್ವ ಅಲ್ಪಸಂಖ್ಯಾತರು ಜತೆಯಾಗಿ ಸಾಗುವ ದಿನಗಳು ಬರಬೇಕಿದೆ. ಈ ಬಗ್ಗೆ ನಾನಂತೂ ಆಶಾವಾದಿಯಾಗಿದ್ದೇನೆ. ಮಧ್ಯರಾತ್ರಿಯಲ್ಲಿ ಒಂಟಿ ಮಹಿಳೆಯಷ್ಟೇ ಅಲ್ಲ, ನಮ್ಮ ಸಮುದಾಯದವರೂ ನಿರ್ಭೀತಿಯಿಂದ ಓಡಾಡುವ ದಿನಗಳು ಬರಲಿ. ಬಸವಣ್ಣ, ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಲಿ.
–ಮಂಜಮ್ಮ ಜೋಗತಿ, ಜಾನಪದ ಕಲಾವಿದೆ, ಬಳ್ಳಾರಿ

----

ನಿಜದ ಭಾರತ ಎನ್ನುವಂತೆ ಬಿಂಬಿಸುವ ಯತ್ನ

‘ಭಾರತಕ್ಕೆ ಸ್ವಾತಂತ್ರ್ಯ’ ಎನ್ನುವ ಪರಿಕಲ್ಪನೆ ಶಾಲೆಯಲ್ಲಿ ಮೊದಲು ಕಲಿತಾಗ ಕಣ್ಣಮುಂದೆ ಬರುತ್ತಿದ್ದುದು ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ ತೋಟ’. ಒಬ್ಬರ ಪಕ್ಕ ಇನ್ನೊಬ್ಬರು ಕೂತು ಉಣ್ಣುವ, ಆಡುವ, ದೊಡ್ಡವರಾಗುವ ಕನಸಲ್ಲಿ ಧರ್ಮ ರಾಜಕಾರಣವಿರಲಿಲ್ಲ, ಕುತ್ಸಿತ ಮನೋಭಾವ ಇರಲಿಲ್ಲ. ಮುಂದೆಂದೂ ನಾವೆಲ್ಲರೂ ಒಂದೇ ಎನ್ನುವ ಭಾವವೊಂದೇ ಇತ್ತು. ಆದರೆ 75ರ ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಿಂತು ನೋಡುವಾಗ ಒಂದೇ ತಟ್ಟೆಯಲ್ಲಿ ಅನ್ನ ಹಂಚಿಕೊಂಡು ಉಣ್ಣುತ್ತಿದ್ದವರು ದೂರಾಗಿರುವ ಸತ್ಯ ಕಣ್ಣಿಗೆ ರಾಚುತ್ತದೆ. ಈಗೀಗ ಪರಸ್ಪರ ಅಪನಂಬಿಕೆ ಎಷ್ಟರ ಮಟ್ಟಿಗೆ ಇದೆಯೆಂದರೆ ಅಪರಿಚಿತರನ್ನು ಕ್ಷಣಮಾತ್ರಕ್ಕೆ ದಿಟ್ಟಿಸಿದರೂ ಸಣ್ಣದೊಂದು ಆತಂಕ ಮೂಡುತ್ತದೆ. ನಿಜ, ದೇಶದ ಬಹುಪಾಲು ಜನ ಹೀಗಿಲ್ಲ. ಈ ನೆಲ ಹೊಟ್ಟನ್ನೆಲ್ಲಾ ತೂರಿ ಗಟ್ಟಿ ಕಾಳನ್ನು ಹಿಡಿದಿಟ್ಟುಕೊಳ್ಳುವಷ್ಟು ಶಕ್ತ ಮತ್ತು ಸತ್ವಯುತ. ಆದರೆ ಮುಖ್ಯವಾಹಿನಿಯಲ್ಲಿ ಸೌಹಾರ್ದ, ಶಾಂತಿ ಬಯಸದ ಕೆಲವೇ ಕೆಲವು ಮಂದಿ ರಾರಾಜಿಸುತ್ತಿದ್ದಾರೆ. ಅದೇ ‘ನಿಜದ ಭಾರತ’ ಎನ್ನುವಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.

ಈ ದೇಶದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾದರೆ ಸಾಂಸ್ಕೃತಿಕ ವೈವಿಧ್ಯ ಮತ್ತು ಕೊಡುಕೊಳ್ಳುವಿಕೆ ಹೆಚ್ಚಾಗುತ್ತದೆ ಎಂದು ನಾವು ನಂಬಿಕೊಂಡಿದ್ದೆವು. ಹೆಚ್ಚು ಶಿಕ್ಷಿತರಾದಂತೆ ಹೆಚ್ಚು ವಿಚಾರವಂತರಾಗಬೇಕಿತ್ತು, ಹೆಚ್ಚು ಪ್ರಜ್ಞಾವಂತರಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅದರ ಬದಲು ಅಶಿಕ್ಷಿತ ಅಥವಾ ಕಡಿಮೆ ಶಿಕ್ಷಣವಿದ್ದ ನಮ್ಮ ಹಿಂದಿನ ತಲೆಮಾರು ಅತ್ಯಂತ ಜತನದಿಂದ ಕಾಯ್ದುಕೊಂಡು ಬಂದಿದ್ದ ಸೌಹಾರ್ದವನ್ನು ಹಾಳು ಮಾಡಿದ್ದೇವೆ.

–ಫಾತಿಮಾ ರಲಿಯಾ, ಕಥೆಗಾರ್ತಿ, ಹೆಜಮಾಡಿ, ಉಡುಪಿ

---

ಸ್ವಚ್ಛ ಭಾರತವನ್ನು ನೋಡುವಾಸೆ

1967–68ರ ಸುಮಾರಿಗೆ ರಷ್ಯಾದಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದ್ದಾಗ ಭಾರತದಿಂದ ನಾನು ಮತ್ತು ನನ್ನ ಪತಿ ಹೋಗಿದ್ದೆವು. ಅಲ್ಲಿ ಲೆನಿನ್ ಅವರ ಮೃತದೇಹವನ್ನು ಸಂರಕ್ಷಿಸಿಡಲಾಗಿದೆ. ಅದನ್ನು ನೋಡಲು ಸರತಿ ಸಾಲಿನಲ್ಲಿ ನಿಂತಿದ್ದೆವು. ಆಗ ಅಲ್ಲಿನ ಸಿಬ್ಬಂದಿಯೊಬ್ಬರು ನಮ್ಮ ಬಳಿ ಬಂದು ನಮ್ಮನ್ನು ಕರೆದು ನೀವು ಮುಂದೆ ಹೋಗಿ ಲೆನಿನ್ ಅವರ ಸ್ಮಾರಕ ನೋಡಿ. ನೀವು ಭಾರತದಿಂದ ಬಂದಿರುವಿರಿ ಅಲ್ಲವೇ? ನಿಮ್ಮ ಸೀರೆ ನೋಡಿ ಕಂಡುಹಿಡಿದೆ. ಬನ್ನಿ ಎಂದು ಅವಕಾಶ ಮಾಡಿಕೊಟ್ಟರು. ಭಾರತೀಯಳಾಗಿ ನನಗೆ ಅದೊಂದು ಹೆಮ್ಮೆಯ ಸಂಗತಿ.

ದೇಶದಲ್ಲೀಗ ಎಲ್ಲೆಡೆ ಶೈಕ್ಷಣಿಕ ಕ್ರಾಂತಿಯಾಗಿದೆ. ಸಣ್ಣ ಕೆಲಸದವರೂ ತಮ್ಮ ಮಕ್ಕಳು ಅಕ್ಷರ ಜ್ಞಾನ ಪಡೆಯಲಿ ಎಂದು ಹಂಬಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ವಿದ್ಯೆ ಕಲಿತರೆ ಗೌರವದಿಂದ ಬಾಳುವ ಅವಕಾಶ ಖಂಡಿತಾ ಸಿಗುತ್ತದೆ ಎನ್ನುವ ವಿಶ್ವಾಸ ನನ್ನದು. ನಮ್ಮ ದೇಶದಲ್ಲಷ್ಟೇ ನದಿಗಳಿಗೆ ಹೆಣ್ಣುಮಕ್ಕಳ ಹೆಸರಿಟ್ಟಿದ್ದಾರೆ. ನಮ್ಮಲ್ಲಷ್ಟೇ ಕೂಡುಕುಟುಂಬಗಳಿಗೆ ಆದ್ಯತೆ ಇದೆ. ಆಚಾರ, ಸಂಸ್ಕೃತಿ, ನಡವಳಿಕೆಯ ವಿಚಾರದಲ್ಲಿ ಭಾರತ ಇತರರಿಗಿಂತ ಭಿನ್ನ ಅನ್ನುವ ಬಗ್ಗೆ ಹೆಮ್ಮೆ ಇದೆ. ಆದರೆ, ಆಡಳಿತಾತ್ಮಕ ವಿಚಾರದಲ್ಲಿ ದೇಶದಲ್ಲಿ ಸುಧಾರಣೆಯಾಗಬೇಕಿದೆ. ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿ ಅಲೆಯುವಂತೆ ಆಗಬಾರದು. ಅಂತೆಯೇ ನನ್ನ ಕನಸಿನ ಭಾರತ ಸ್ವಚ್ಛ ಭಾರತವಾಗಿ ರೂಪುಗೊಳ್ಳಬೇಕೆಂಬ ಆಸೆ ನನ್ನದು.

–ಬಿ. ಸರೋಜಾ ದೇವಿ,ಹಿರಿಯ ಕಲಾವಿದೆ, ಬೆಂಗಳೂರು

-----

ಈ ಉದ್ಯಾನದ ಅಂದ ಕೆಡದಿರಲಿ

ನನ್ನ ಭಾರತ ಅನ್ನುವುದು ಹಲವು ಭಾಷೆಗಳು, ಹಲವು ಬುಡಕಟ್ಟುಗಳು, ಹಲವು ಜಾತಿ, ಧರ್ಮ, ಪಂಗಡಗಳನ್ನು ಒಳಗೊಂಡ ವಿಶಿಷ್ಟವಾದ ಉದ್ಯಾನ. ಇಲ್ಲಿರುವ ಎಲ್ಲಾ ಭಾಷೆಗಳು, ಎಲ್ಲಾ ರೀತಿಯ ಸಾಂಸ್ಕೃತಿಕ ವಿವರಗಳು ಒಟ್ಟಾಗಿ ಕೂಡಿ ನಗುನಗುತ್ತಾ ಬಾಳುಬೇಕೆನ್ನುವುದು ನನ್ನ ಕನಸಿನ ಭಾರತ. ಆದರೆ, ಇತ್ತೀಚಿನ ದಿನಗಳಲ್ಲಿ ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ’ ಅನ್ನುವಂತಹ ಘೋಷಣೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ನಾವು ಮತ್ತೆ ಮತ್ತೆ ನೆನಪಿಟ್ಟುಕೊಳ್ಳಬೇಕಾದ್ದು ಇಂತಹ ಮಾತುಗಳು ಭಾರತದ ವಿಘಟನೆಗೆ ಬೀಜ ಬಿತ್ತುತ್ತವೆ ಎಂಬುದು. ಎಪ್ಪತ್ತೈದು ವರ್ಷದ ಹಿಂದೆ ಆದ ಮೊದಲ ವಿಭಜನೆಯ ದುರಂತದ ನೆನಪು ಎಂದಿಗೂ ಮಾಸದಿರಲಿ.

ಜನರ ಬದುಕಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನೆಮ್ಮದಿ ಸಿಗಬೇಕಿರುವುದು ಇಂದಿನ ತುರ್ತು. ‘ಸಾಮಾಜಿಕ ಭದ್ರತೆ’ ಪ್ರತಿಯೊಬ್ಬರಿಗೂ ಸಿಗುವ ಹಾಗೆ ಆದಾಗ ಮತ್ತು ಎಲ್ಲರ ಹಸಿವು ನೀಗುವ ಹಂತ ತಲುಪಿದಾಗ ಮಾತ್ರ ಇಡೀ ಸಮಾಜ/ ದೇಶ ನೆಮ್ಮದಿಯಿಂದಿರಲು ಸಾಧ್ಯ. ಆ ಹಿನ್ನೆಲೆಯಲ್ಲಿ ಎಲ್ಲರ ಒಳಗೊಳ್ಳುವಿಕೆ ಪ್ರಧಾನ ಆದ್ಯತೆ ಆಗಬೇಕು. ಯಾವುದೇ ಧರ್ಮವನ್ನಾಗಲಿ, ಜನವನ್ನಾಗಲಿ ದೂರವಿಡದೆ, ಇವನು ಬೇರೆಯವನು ಎಂದು ಗುರುತಿಸದೇ ‘ಇವ ನಮ್ಮವ’ ಎಂಬ ಬಸವ ವಚನದ ಆಶಯದಂತೆ ಎಲ್ಲರನ್ನೂ ಒಳಗೊಳ್ಳುವ ಹಾಗೆ ನಮ್ಮ ಸಮಾಜವನ್ನು/ ದೇಶವನ್ನು ಕಟ್ಟಿಕೊಳ್ಳಬೇಕಿದೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ತೆಗೆದುಕೊಳ್ಳಬೇಕಾದ ತೀರ್ಮಾನ. ಹಾಗಾದಾಗ ಮಾತ್ರ ನನ್ನ ಕನಸಿನ ಭಾರತವು ಶಾಶ್ವತವಾಗಿ ಬಹುಕಾಲ ಉಳಿಯಬಲ್ಲದು.

–ಬಿ. ಸುರೇಶ, ರಂಗಕರ್ಮಿ,ಚಲನಚಿತ್ರ ತಯಾರಕ, ಬೆಂಗಳೂರು

----

ಯಾರ ಎದೆಯಲ್ಲಿ ಹುಡುಕಲಿ?

ಸ್ವಾತಂತ್ರ್ಯದ ಅಮೃತ ಮಹೋತ್ಸವ ಇದಾದರೂ, ಭಾರತದ ಸದ್ಯದ ದ್ವಂದ್ವ ಪರಿಸ್ಥಿತಿಯನ್ನು ಬದಲಾಯಿಸಲು ವಿಜೃಂಭಣೆಯ ಸಮಾರಂಭಗಳಿಂದ ಸಾಧ್ಯವಿಲ್ಲ. ಈ ಹೊತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ, ಜೀವನ ತ್ಯಾಗ ಮಾಡಿದವರನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಅವರ ಬಲಿದಾನವನ್ನು ಎಷ್ಟರಮಟ್ಟಿಗೆ ಸಾರ್ಥಕಗೊಳಿಸಿಕೊಳ್ಳುತ್ತಿದ್ದೇವೆ ಎನ್ನುವ ಪ್ರಶ್ನೆಯನ್ನೂ ನಮಗೆ ನಾವು ಕೇಳಿಕೊಳ್ಳಬೇಕಾದ ಜರೂರು ಇದೆ. ಧರ್ಮ, ವರ್ಗ, ರಾಜಕೀಯ, ಆರ್ಥಿಕತೆಗಳು ಧ್ರುವೀಕರಣಗೊಳ್ಳುತ್ತಿರುವ ವಿಷಮ ಸ್ಥಿತಿ ನಿರ್ಮಾಣವಾಗಿದೆ. ಬುದ್ಧ ಹೇಳಿಕೊಟ್ಟ ಜೀವಪ್ರೀತಿ, ಅಂಬೇಡ್ಕರ್‌ ಅವರ ಸಮಾನತೆಯ ದೃಷ್ಟಿಕೋನ, ಗಾಂಧೀಜಿಯವರ ಅಹಿಂಸೆಯನ್ನು ಯಾರ ಎದೆಯ ಧಮನಿಗಳಲ್ಲಿ ಹುಡುಕುವುದು?

ಎಲ್ಲವುಗಳ ಬೆಲೆಗಳು ಗಗನಕ್ಕೇರಿರುವಾಗ ಅಗ್ಗವಾಗಿರುವುದು ಮನುಷ್ಯನ ರಕ್ತ ಮಾತ್ರ. ಧರ್ಮದ ಅಫೀಮನ್ನು ನೆತ್ತಿಗೇರಿಸಿಕೊಂಡು ಉದ್ವೇಗಕ್ಕೊಳಗಾಗಿ ಮನಸು ಮನಸುಗಳ ನಡುವೆ ಕಿಡಿಹೊತ್ತಿಸುವ ಘೋಷಣೆಗಳ ಸದ್ದು ಮುಗಿಯುವ ಮೊದಲೇ ಹೆಣಗಳೆರೆಡು ಉರುಳಿಬೀಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಧ್ವಜ ಹಾರಿಸುವ ದುಸ್ಥಿತಿ ಎದುರಾಗಿರುವುದು ದೌರ್ಭಾಗ್ಯವೇ ಸರಿ. ಎಲ್ಲರೆದೆಯಲ್ಲಿ ಸೌಹಾರ್ದದ ಹೂವು ಯಾವಾಗ ಅರಳುವುದೋ ಅಂದು ನನ್ನ ಭಾರತ ಸಂಭ್ರಮಿಸುತ್ತದೆ.

–ಇಸ್ಮಾಯಿಲ್‌ ತಳಕಲ್‌, ಶಿಕ್ಷಕ, ಬೆಳಗಾವಿ

----

ಬೇಕಿದೆ ನೆಮ್ಮದಿಯ ಸ್ವಾತಂತ್ರ್ಯ

ಬ್ರಿಟಿಷರಿಂದ, ರಜಾಕಾರರ ಹಾವಳಿಯಿಂದ, ಅವರ ದಾಸ್ಯದಿಂದ ಮುಕ್ತಿಪಡೆದು ನೆಮ್ಮದಿಯಾಗಿ ಬದುಕಿದರೆ ಸಾಕು; ಅದೇ ಸ್ವಾತಂತ್ರ್ಯವೆಂದು ನಾವೆಲ್ಲರೂ ಭಾವಿಸಿದ್ದೆವು. ನಾವು ಅಂದುಕೊಂಡಿದ್ದೆಲ್ಲವೂ ಸಿಕ್ಕಿತು.

ಒಂದೂರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೆ ದಿನಗಟ್ಟಲೆ, ತಿಂಗಳುಗಟ್ಟಲೆ ನಡೆಯಬೇಕಾದ ಕೆಟ್ಟ ಪರಿಸ್ಥಿತಿಯಿತ್ತು. ಒಪ್ಪೊತ್ತಿನ ಊಟಕ್ಕೆ ಪರದಾಡಬೇಕಾಗಿತ್ತು. ಅದೆಲ್ಲವೂ ಈಗ ದೂರವಾಗಿದೆ. ಹೋರಾಟಕ್ಕಾಗಿ ನಮ್ಮ ಮುಂದೆಯೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೋವು ಅನುಭವಿಸಿದ್ದಾರೆ. ಆ ದುರಂತವನ್ನೆಲ್ಲ ನೋಡಿದರೆ ಸ್ವಾತಂತ್ರ್ಯ ಆದಷ್ಟು ಬೇಗನೆ ಸಿಗಬೇಕು ಅನ್ನಿಸಿದ್ದು ಸುಳ್ಳಲ್ಲ.

ಆದರೆ, ಈಗ ಜಾತಿಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷ, ಘರ್ಷಣೆ ನೋಡಿದರೆ ಮತ್ತೆ ನಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದೇವೆ. ಇನ್ನೊಬ್ಬರ ತಾಳಕ್ಕೆ ಕುಣಿಯುತ್ತಿದ್ದೇವೆ ಎನ್ನುವ ಆತಂಕ ಶುರುವಾಗಿದೆ.

ನಮ್ಮೂರಿನಲ್ಲಿ ಕುಟುಂಬದವರು, ಬಂಧುಗಳು, ಸ್ನೇಹಿತರು, ಎಲ್ಲಾ ಸಮಾಜದವರು ಒಟ್ಟಿಗೆ ಸೇರಿ ಊಟ ಮಾಡುವ, ಹರಟೆ ಹೊಡೆಯುವ ಸಂಭ್ರಮದ ಹಾಗೂ ನೆಮ್ಮದಿಯ ದಿನಗಳನ್ನು ಸಾಕಷ್ಟು ಅನುಭವಿಸಿದ್ದೇನೆ. ಆದರೆ, ಈಗ ಅನೇಕರು ಹೊಟ್ಟೆಪಾಡಿಗಾಗಿ ಊರು, ದೇಶ ಬಿಟ್ಟು ಹೋಗುತ್ತಿದ್ದಾರೆ. ಎಲ್ಲರೂ ನೆಮ್ಮದಿಗಾಗಿ ಅಲೆದಾಡುವಂತಾಗಿದೆ. ದೇಶ, ವಿದೇಶದ ಸುತ್ತಾಟ ಸಾಕಾಗಿ ಮತ್ತೆ ಹುಟ್ಟೂರಿಗೆ ಬಂದಾಗ ನೆಮ್ಮದಿಯ, ಸ್ವಾತಂತ್ರ್ಯದ ಸುಖ ಅನುಭವಿಸುತ್ತಾರೆ. ಈ ಸುಖ ಎಲ್ಲರಿಗೂ ಇದ್ದೂರಿನಲ್ಲಿಯೇ ಸಿಗಬೇಕು. ಆಗಮಾತ್ರ ಅಮೃತ ಮಹೋತ್ಸವ ಸಂಭ್ರಮಕ್ಕೆ ಅರ್ಥ ಬರುತ್ತದೆ.

–ಮಲ್ಲಮ್ಮ ಮೂಲಿಮನಿ,ಸ್ವಾತಂತ್ರ್ಯ ಹೋರಾಟಗಾರನ ಪತ್ನಿ, ತಳಕಲ್‌ (ಕೊಪ್ಪಳ)

----

ದೇವರ ಕೃಪೆ ನಿರಂತರ...

ಸಂಗೀತ, ಸಾಹಿತ್ಯ, ಸಂಸ್ಕೃತಿಯ ಸಂಪತ್ಭರಿತ ದೇಶ ನಮ್ಮದು, ಋಷಿ, ಮುನಿ, ಗುರುವರ್ಯರು ಓಡಾಡಿದ ನೆಲ ನಮ್ಮದು. ನಿಸ್ವಾರ್ಥ ಸೇವೆಯೇ ನಮ್ಮ ದೇಶದ ಶಕ್ತಿ. ಸಂಗೀತ, ಸಂಸ್ಕೃತಿ ಎಂದೂ ವ್ಯವಹಾರವಾಗಿಲ್ಲ. ಆ ನಿಟ್ಟಿನಲ್ಲಿ ಮೊದಲಿನಿಂದಲೂ ನಮ್ಮ ದೇಶ ಇಡೀ ವಿಶ್ವದಲ್ಲೇ ಆದರ್ಶ ಎನಿಸಿದೆ. ನಮ್ಮ ಜೊತೆಯಲ್ಲಿ ಹಾಸುಹೊಕ್ಕಾಗಿರುವ ಅಧ್ಯಾತ್ಮದ ಹೊದಿಕೆ ನಮ್ಮನ್ನು ಮತ್ತಷ್ಟು ಸದೃಢಗೊಳಿಸಿದೆ. ದೇವರ ಕೃಪೆ ನಿರಂತರವಾದುದು. ಇಡೀ ಪ್ರಪಂಚ ಅನುಸರಿಸಬಹುದಾದ ಅಧ್ಯಾತ್ಮ ಶಕ್ತಿ ನಮ್ಮ ದೇಶದಲ್ಲಿದೆ. ನಮ್ಮ ಯೋಗ ಸಂಸ್ಕೃತಿ ಪ್ರಪಂಚಕ್ಕೆ ಆರೋಗ್ಯ ಕರುಣಿಸಿದ್ದು ನಮ್ಮ ದೇಶಕ್ಕೆ ಗುರುವಿನ ಸ್ಥಾನವಿದೆ.

ವಾಸ್ತವಿಕ ಭಾರತದಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ಕೆಲವು ಬದಲಾವಣೆಗಳಾಗಿವೆ. ಹಲವು ಆಕರ್ಷಣೆಗಳ ನಡುವೆ ಸಂಸ್ಕೃತಿ ಮಾಸಿದಂತೆ ಕಾಣುತ್ತಿದೆ, ಆದರೆ ಅದು ನಿಜವಲ್ಲ. ಸಂಸ್ಕೃತಿ, ಸಾಹಿತ್ಯ, ಸಂಗೀತ ಕ್ಷೇತ್ರ ಇಂದಿಗೂ ಶ್ರೀಮಂತವಾಗಿದೆ. ಸಂಸ್ಕೃತಿಯನ್ನು ಪ್ರೀತಿಸುವ ಹೊಸ ಪೀಳಿಗೆ ಹುಟ್ಟಿ ಬರುತ್ತಿದೆ. ಸಂಗೀತವನ್ನು ಬಹಳ ಗಂಭೀರವಾಗಿ ಸ್ವೀಕಾರ ಮಾಡಿರುವ ಯುವಕರನ್ನು ಕಂಡರೆ ಕಣ್ತುಂಬಿ ಬರುತ್ತದೆ. ಅವರ ಗಾಯನವನ್ನು ಕೇಳಿದಾಗ ಮನಸ್ಸು ಆರ್ದ್ರಗೊಳ್ಳುತ್ತದೆ. ದೇವರ ಕೃಪೆ ಎಂದಿಗೂ ನಿಲ್ಲುವಂಥದ್ದಲ್ಲ.

–ಪಂ.ಎಂ.ವೆಂಕಟೇಶ ಕುಮಾರ್‌,ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಧಾರವಾಡ

----

ಸೌಲಭ್ಯ ಹೆಚ್ಚಿಸಿದರೆ ಅದುವೇ ‘ಅಮೃತ’...

ಕ್ರೀಡಾಕ್ಷೇತ್ರದಲ್ಲಿ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದ ಪದಕಗಳೇ ಸಾಕ್ಷಿ.

ಕ್ರೀಡಾಪಟುಗಳ ಸಾಧನೆ ಕೂಡ ದೇಶದ ಅಭಿವೃದ್ಧಿ ಹಾಗೂ ಅಲ್ಲಿನ ಸಾಧಕರಿಗೆ ನೀಡಿದ ಮುಕ್ತ ಸ್ವಾತಂತ್ರ್ಯದ ಸಂಕೇತವೆಂದು ಭಾವಿಸಿದ್ದೇನೆ. ಈ ಪದಕಗಳನ್ನು ದುಪ್ಪಟ್ಟು ಮಾಡಲು ನಮಗೆ ಸ್ಥಳೀಯವಾಗಿ ಗುಣಮಟ್ಟದ ಸೌಲಭ್ಯಗಳು, ತರಬೇತುದಾರರು ಹಾಗೂ ಸಾಮಗ್ರಿಗಳನ್ನು ಒದಗಿಸಬೇಕು. ನಮಗೆ ಬೇಕಾದ ಕೋಚ್‌ ಆಯ್ಕೆ ಮಾಡಿಕೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಬೇಕು, ಬಯಸಿದ ಸ್ಥಳದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಿಕೊಡಬೇಕು.

ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅವಕಾಶಗಳು, ಸಾಮಗ್ರಿಗಳು ಸಿಕ್ಕಿವೆ. ಹೀಗಿದ್ದೂ ಇವು ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ತೀರಾ ಕಡಿಮೆ. ನಮ್ಮೂರಿನಲ್ಲಿಯೇ ಸೈಕ್ಲಿಂಗ್‌ ವೆಲೊಡ್ರೋಮ್‌, ಪ್ರತ್ಯೇಕ ಸೈಕಲ್‌ ಟ್ರ್ಯಾಕ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಕೊಟ್ಟರೆ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ವಿಶ್ವದ ಕ್ರೀಡಾ ವೇದಿಕೆಯಲ್ಲಿದೇಶದ ಕೀರ್ತಿ ಪತಾಕೆ ಹಾರಿಸಲು ಸಾಧ್ಯವಾಗುತ್ತದೆ. ಅವಕಾಶ ಸಿಗದೇ ಕುಗ್ರಾಮಗಳಲ್ಲಿದ್ದುಕೊಂಡು ದೊಡ್ಡ ಸಾಧನೆಯ ಕನಸು ಹೊತ್ತು ಕಾಯುತ್ತಿರುವ ನನ್ನಂಥ ಲಕ್ಷಾಂತರ ಕ್ರೀಡಾಪಟುಗಳಿಗೆ ‘ಸವಲತ್ತುಗಳ ಸ್ವಾತಂತ್ರ್ಯ’ ಬೇಕಿದೆ. ಆಗ ಮಾತ್ರ ಈಗಿನ ಸಾಧನೆಯ ಹೊಳಪು ಮತ್ತಷ್ಟು ಪ್ರಜ್ವಲಿಸಲು ಸಾಧ್ಯ. ಇದರಿಂದ ದೇಶದ ’ಅಮೃತ‘ದ ಸಂಭ್ರಮವೂ ಹೆಚ್ಚಾಗುತ್ತದೆ.

–ದಾನಮ್ಮ ಚಿಚಖಂಡಿ,ಅಂತರರಾಷ್ಟ್ರೀಯ ಸೈಕ್ಲಿಸ್ಟ್‌, ಬಾಗಲಕೋಟೆ

----

ನಿರ್ಭೀತ ಮನೋಭಾವದ ನೆಲವಾಗಲಿ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೋರಾಟಗಾರರು ಹಾಗೂ ಪ್ರಜಾಪ್ರಭುತ್ವದ ಭದ್ರಬುನಾದಿಯನ್ನು ಹಾಕಿಕೊಟ್ಟ ಸಂವಿಧಾನ ರಚನೆಕಾರರಿಗೆ ನನ್ನ ವಿನಯಪೂರ್ವಕ ಗೌರವವನ್ನು ಸಲ್ಲಿಸುವ ಈ ಸಂದರ್ಭದಲ್ಲಿ, ಕೊಂಚ ಕಳವಳದಿಂದ ಭವಿಷ್ಯವನ್ನು ನೋಡಲಿಚ್ಛಿಸುತ್ತೇನೆ.

ಭಾರತದ ಇತಿಹಾಸದಲ್ಲಿ 75 ವರ್ಷ ಎನ್ನುವುದು ಕೇವಲ ಒಂದು ಅಧ್ಯಾಯವಷ್ಟೆ. ಈ ಅವಧಿಯಲ್ಲಿ ನಾವು ದಾಪುಗಾಲಿಟ್ಟಿದ್ದೇವೆ ಹಾಗೂ ಸಾಕಷ್ಟು ಸಾಧಿಸಿದ್ದೇವೆ. ಆದರೆ ವಿಶ್ರಾಂತಿಗೂ ಮುನ್ನ ಕ್ರಮಿಸಬೇಕಾದ ದಾರಿ ಇನ್ನೂ ಇದೆ.

ಭವಿಷ್ಯದ ಬಗ್ಗೆ ನನ್ನದೊಂದು ಕಲ್ಪನೆಯಿದೆ. ಸರ್ವರಿಗೂ ಸಮಾನ ಅವಕಾಶ ಹಾಗೂ ಗೌರವ, ಧಾರ್ಮಿಕ ಸ್ವಾತಂತ್ರ್ಯ, ಆರ್ಥಿಕ ರಕ್ಷಣೆ ಇರುವ ಶಾಂತಿಯುತ, ಎಲ್ಲರನ್ನೂ ಒಳಗೊಂಡ, ಜಾತ್ಯತೀತ ರಾಷ್ಟ್ರದ ಕನಸು ನನ್ನದು. ದೇಶದ ಮೂಲೆಮೂಲೆಯ ಎಲ್ಲ ಜಾತಿ, ಬಣ್ಣ ಹಾಗೂ ಮತದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಜೊತೆಯಾಗಿ ಎದ್ದುನಿಂತು, ‘ಇಂದು, ಎಂದೆಂದೂ ನಾನು ಭಾರತೀಯ ಎನ್ನಲು ಹೆಮ್ಮೆ ಇದೆ’ ಎನ್ನುವಂಥ ನನ್ನ ತಾಯ್ನಾಡನ್ನು ನಾನು ಕಾಣಬೇಕು. ಗುರುದೇವ ಟ್ಯಾಗೋರರು ಹೇಳುವಂತೆ ನನ್ನ ಈ ರಾಷ್ಟ್ರ ನಿರ್ಭೀತ ಮನೋಭಾವಕ್ಕೆ ಆಸ್ಪದವಿರುವ, ಹೆಮ್ಮೆಯಿಂದ ತಲೆಎತ್ತಿ ನಿಲ್ಲುವ, ಮುಕ್ತಜ್ಞಾನದ ನೆಲವಾಗಬೇಕು. ಅದೇ ನನ್ನ ಪಾಲಿನ ನಿಜವಾದ ಸ್ವಾತಂತ್ರ್ಯ.

–ಮಾರ್ಗರೆಟ್‌ ಆಳ್ವ, ಹಿರಿಯ ರಾಜಕಾರಣಿ, ಕಾರವಾರ

----

ಮಾಯದ ಗಾಯದಂತೆ ನೋಯುತಿದೆ

ಯಾಕೋ ನನ್ನ ಕನಸಿನ ಭಾರತ ಗಾಯಗಳಿಂದಲೇ ತುಂಬಿದೆ ಅನಿಸುತ್ತದೆ. ಅಪ್ಪ ಜೀತಕ್ಕಿದ್ದ ಒಡೆಯರ ಮನೆಗೆ ಹೋದರೆ ವಿಶೇಷ ಊಟ, ತಿಂಡಿ ಸಿಗುತ್ತಿತ್ತು. ಕೊಟ್ಟಿಗೆಯಲ್ಲಿ, ಹಿತ್ತಲಲ್ಲಿ ಕೂತು, ಉಂಡು ಸವಿಯುತ್ತಿದ್ದೆ. ಸ್ವಾತಂತ್ರ್ಯದ ದಿನ ಕೂಡಾ ಜಗಲಿ ಕೆಳಗೆ ಕೈ ಒಡ್ಡಿ ನಿಂತು ಕೊಟ್ಟಿಗೆ, ಹಿತ್ತಲಲ್ಲಿ ಹಬ್ಬ ಮಾಡುತ್ತಿದ್ದೆ. ಒಡೆಯನ ಮನೆ ಎದುರಿಗಿದ್ದ ಭಟ್ಟರು, ಅಯ್ಯನವರು ಬಾಗಿಲು ದಾಟಿ ಆಚೆ ತಂದು ತಿಂಡಿ, ಪ್ರಸಾದವನ್ನು ಎತ್ತರದಿಂದ ಇಡುತ್ತಿದ್ದರು. ಯಾಕೋ ಎಲ್ಲವೂ ಇಂದು ಮಾಯದ ಗಾಯದಂತೆ ನೋಯುತಿವೆ.

ನಮ್ಮನ್ನು ನಾವೇ ಆಳಿಕೊಳ್ಳುವುದೆಂದರೆ ಸುಖ ಸಮೃದ್ಧಿಯ ಜೀವನ ಅಂದುಕೊಂಡಿದ್ದೆವು. ಊರು, ಕೇರಿ, ನಾಡು, ದೇಶಕ್ಕೆಲ್ಲ ಸುಭಿಕ್ಷ ಎಂದೂ ಅಂದುಕೊಂಡಿದ್ದೆವು. ನಮ್ಮವರದೇ ಸರ್ಕಾರ, ನಮ್ಮವರೇ ನಾಯಕರು, ಸರ್ವರಿಗೂ ಸಮಬಾಳು, ಸಮಪಾಲು ಅಂದುಕೊಂಡಿದ್ದೆವು. ಭೂಮಿ, ಉದ್ಯೋಗ, ಶಿಕ್ಷಣ, ಆರೋಗ್ಯ ಅನ್ನ, ನೀರು ಎಲ್ಲವೂ ಎಲ್ಲರಿಗೂ ಅಂದುಕೊಂಡಿದ್ದೆವು. ಈ ಎಲ್ಲವೂ ಕನಸುಗಳಾಗಿ, ನಿರೀಕ್ಷೆಗಳಾಗಿಯೇ ಉಳಿದು ಹೋದದ್ದು ಯಾವ ಕಾಲಘಟ್ಟದಲ್ಲಿ ಎಂಬ ಅಂದಾಜೇ ಸಿಗುತ್ತಿಲ್ಲ. ಸಮಾಜ, ಸಮುದಾಯಗಳನ್ನು ಬೆಸೆಯುವ, ಕಟ್ಟುವ ಕೆಲಸ ಮಾಡಬೇಕಾದುದು ಇಂದಿನ ತುರ್ತು. ‘ಈ ದೇಶದ ಅಧಿಕಾರ ಮತ್ತು ಸಂಪತ್ತು ಪ್ರತಿಯೊಂದು ಜಾತಿ, ಜನಸಂಖ್ಯೆಗೆ ಅನುಗುಣವಾಗಿ ಸಮನಾಗಿ ಹಂಚಿಕೆಯಾಗಬೇಕು’ ಎಂಬ ಅಂಬೇಡ್ಕರ್‌ ವಾದದ ಅನುಷ್ಠಾನವೇ ನನ್ನ ಕನಸಿನ ಭಾರತ.

–ಮಹಾದೇವ ಶಂಕನಪುರ, ಕವಿ, ಚಾಮರಾಜನಗರ

----

ನನ್ನ ಕನಸಿನ ಭಾರತ ಪ್ರಬುದ್ಧ ಭಾರತ.

ನನ್ನ ಕನಸಿನ ಭಾರತ ಪ್ರಬುದ್ಧ ಭಾರತ. ಸಂವಿಧಾನದ ಆಶಯದಂತೆ ಎಲ್ಲ ಧರ್ಮ, ಪಂಥ, ಸಮುದಾಯಗಳನ್ನು ಗೌರವಿಸುವ ಮತ್ತು ಘನತೆಯಿಂದ ಕಾಣುವ ಭಾರತ. ಯಾವುದೇ ವ್ಯಕ್ತಿ, ಅಥವಾ ಸಮುದಾಯಗಳನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿಗೆ ರಾಷ್ರಪ್ರೇಮದ ಹೆಸರು ಕೊಡದಿರುವ ಭಾರತ. ಇತಿಹಾಸದ ಪಾಠಗಳನ್ನು ನಾವು ಮರೆಯದಿರೋಣ. ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಎರಡು ಮಹಾಯುದ್ಧಗಳು ಮತ್ತು ಈಗಲೂ ಉಕ್ರೇನ್, ಪ್ಯಾಲಿಸ್ತೇನ್‌ನಂತಹ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿಂದೆ ಅತಿರೇಕದ ರಾಷ್ಟ್ರವಾದ ಕೂಡ ಕಾರಣಕರ್ತವಾಗಿದೆ. ನಮಗೆ ಬೇಕಿರುವುದು ರಾಷ್ಟ್ರಪ್ರೇಮವೇ ಹೊರತು ಅತಿರೇಕದ ರಾಷ್ಟ್ರವಾದವಲ್ಲ.

ನನ್ನ ಕನಸಿನ ಭಾರತ ಹುಸಿ ದೇಶಪ್ರೇಮದ ಅಮಲಿಗೆ ಒಳಗಾಗದ ಸರ್ವರನ್ನು ಒಗ್ಗೂಡಿಸುವ ಭಾರತ. ಜಾತಿ ಧರ್ಮದ ಸಮೂಹ ಸನ್ನಿಗೆ ಸಿಲುಕದೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮಂಚೂಣಿ ಸ್ಥಾನದಲ್ಲಿ ಗುರುತಿಸಲ್ಪಡುವಂತಹ ಆಧುನಿಕ ಭಾರತ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಹಸಿವಿನಿಂದ ಮುಕ್ತವಾಗಿರುವಂತಹ ಭಾರತ. ಸಮಾಜದ ಸಾಮರಸ್ಯದ ಎಳೆಗಳು ಇನ್ನಷ್ಟು ಗಟ್ಟಿಗೊಂಡಂತಹ ಭಾರತ. ಎಂದೆಂದಿಗೂ ಬಹುತ್ವವನ್ನು ತನ್ನ ಎದೆಯಲ್ಲಿ ಹಾಗೇ ಕಾಪಿಟ್ಟುಕೊಳ್ಳುವ ಭಾರತ. ಅಂತಹ ಭಾರತಕ್ಕಾಗಿ ಮನಸ್ಸು ಹಂಬಲಿಸುತ್ತಿದೆ. ಆದರೆ, ಸ್ವಾತಂತ್ರ್ಯದ ಅಮೃತದ ಈ ಗಳಿಗೆ ಅಮೃತಕ್ಕಿಂತ ಅದಕ್ಕೆ ವಿರುದ್ಧವಾದುದನ್ನೇ ಎತ್ತಿ ತೋರುತ್ತಿದೆ. ಆ ವಿಷಾದ ಕಾಡುತ್ತಿದೆ.

-ಎಂ.ಆರ್‌. ಸತ್ಯಪ್ರಕಾಶ್‌, ಸಹ ಪ್ರಾಧ್ಯಾಪಕ, ಶಿವಮೊಗ್ಗ

*******

ನಿರ್ವಹಣೆ: ಮಂಜುಶ್ರೀ ಕಡಕೀಳ, ಶರತ್‌ ಹೆಗ್ಡೆ, ಯೋಗೇಶ್‌ ಎಂ.ಎನ್‌., ಪ್ರಮೋದ್‌, ಅಭಿಲಾಷ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT