ಸೋಮವಾರ, ಏಪ್ರಿಲ್ 12, 2021
26 °C

ಚರ್ಚೆ: ಹೊಳೆವ ಚೇತನಗಳು ತುಳಿದ ಹಾದಿ...

ಎಂ.ಎಸ್. ಶೇಖರ್ Updated:

ಅಕ್ಷರ ಗಾತ್ರ : | |

ಇಪ್ಪತ್ತನೆಯ ಶತಮಾನದಲ್ಲಿ ಭಾರತಾಂಬೆಯ ಇಬ್ಬರು ಹೆಮ್ಮೆಯ ಪುತ್ರರು ವಿಶ್ವಚೇತನಗಳಾಗಿದ್ದಾರೆ. ಅವರೇ ಗಾಂಧೀಜಿ ಮತ್ತು ಅಂಬೇಡ್ಕರ್. ವಿಶ್ವಸಂಸ್ಥೆಯು ಗಾಂಧೀಜಿ ಅವರ ಜನ್ಮದಿನವನ್ನು ‘ವಿಶ್ವ ಅಹಿಂಸಾ ದಿನ’ ಎಂದೂ ಅಂಬೇಡ್ಕರ್ ಜನ್ಮದಿನವನ್ನು ‘ವಿಶ್ವ ಜ್ಞಾನ ದಿನ’ ಎಂದೂ ಆಚರಿಸುತ್ತದೆ. ಅಪಾರ ಮಾನವ ಪ್ರೀತಿಯಿಂದ ಮಾಡಿದ ಚಿಂತನೆ, ನಡೆಸಿದ ಹೋರಾಟ, ಮನುಷ್ಯತ್ವದ ಘನತೆಯನ್ನು ಮಾನವೀಯವಾಗಿ, ಅಹಿಂಸಾ ನೆಲೆಯಲ್ಲಿ ಅರ್ಥಮಾಡಿಸಲು ಕೈಗೊಂಡ ಯತ್ನ – ಈ ಇಬ್ಬರೂ ವಿಶ್ವಚೇತನಗಳಾಗಿ ಹೊಳೆಯುವುದಕ್ಕೆ ಕಾರಣ. ಸಮಾಜದ ಅನಿಷ್ಟಗಳನ್ನು ನಿವಾರಿಸಲು ಗಾಂಧೀಜಿ ಅವರು ಸರಳ ಸೌಮ್ಯತೆಯಿಂದ, ಒಳಗಿನ ಕಾಠಿಣ್ಯದಿಂದ ಹೆಣಗಿದರೆ; ಅಂಬೇಡ್ಕರ್ ಅವರು ಬಹು ದಿಟ್ಟತನದಿಂದ, ಅಂತರಂಗದ ತಾಯಿತನದಿಂದ ಹೆಣಗಿದ್ದಾರೆ.

ಗಾಂಧೀಜಿ ಮತ್ತು ಅಂಬೇಡ್ಕರ್ ಈ ಇಬ್ಬರೂ ಒಂದಲ್ಲ ಒಂದು ಬಗೆಯ ಅವಮಾನಿತರೇ. ಗಾಂಧೀಜಿಯವರು ಬೆಳೆದು ದೊಡ್ಡವರಾಗಿ, ಬ್ಯಾರಿಸ್ಟರ್‌ ಆಗಿ, ದಕ್ಷಿಣ ಆಫ್ರಿಕಾದ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಕಾಲದಲ್ಲಿ, ವರ್ಣಭೇದದ ಕಾರಣದಿಂದ ಅವಮಾನಿತರಾದವರು. ಭಾರತದ ಜಾತಿ, ಉಪಜಾತಿಗಳ ಶ್ರೇಣೀಕೃತ ಪಿರಮಿಡ್ಡಿನಲ್ಲಿ, ವೈಶ್ಯ ಸಮಾಜದಲ್ಲಿ ಜನಿಸಿದ ಗಾಂಧೀಜಿ ಕೂಡ ಜಾತಿ ಶ್ರೇಣಿಯಲ್ಲಿ ಮೊದಲಿಗರೇನಾಗಿರಲಿಲ್ಲ. ಆ ಅರಿವು ಅವರಿಗೆ ಇದ್ದೇ ಇತ್ತು. ತೀರಾ ಅಮಾನವೀಯವಾಗಿರುವ ಅಸ್ಪೃಶ್ಯತೆ ಆಚರಣೆಯ ಕ್ರೌರ್ಯದ ಮುಳ್ಳು ಅವರಿಗೂ ಚುಚ್ಚಿತ್ತು. ಅದು ಅವರ ಅಂತರಂಗಕ್ಕೂ ಹೊಕ್ಕು ಜೀವನಪರ್ಯಂತ ಕಾಡಿತ್ತು.

ಶತಶತಮಾನಗಳಿಂದ ಪರೋಪಕಾರದಿಂದ ದುಡಿಯುತ್ತಾ ಪ್ರಕೃತಿಯ ಕಂದಮ್ಮಗಳಂತಿರುವ ಹರಿಜನ ಬಂಧುಗಳನ್ನು ತಮ್ಮ ಎದೆಗೆ ಅವುಚಿಕೊಳ್ಳುವ ಕೆಲಸವನ್ನು ಗಾಂಧೀಜಿಯವರು ನಿರಂತರವಾಗಿ ಮಾಡಿದರು. ಹರಿಜನರಿಗೆ ಯಾವುದೇ ಬಗೆಯ ಹಿಂಸೆ ಮಾಡಿದರೂ ಅದು ಪಾಪದ ಕೆಲಸವಾಗುತ್ತದೆ ಎಂಬುದನ್ನು ಸವರ್ಣೀಯ ಮನಸ್ಸುಗಳಿಗೆ ಮನದಟ್ಟು ಮಾಡಿಕೊಡಲು ತಮ್ಮ ಬದುಕಿನುದ್ದಕ್ಕೂ ಹೆಣಗಿದರು. ಅವರು ಗಾಢವಾಗಿ ನಂಬಿದ್ದ ಅಹಿಂಸೆ ಮತ್ತು ಸತ್ಯಾಗ್ರಹಗಳಂತಹ ಪ್ರಬಲ ಅಸ್ತ್ರಗಳ ಮೂಲಕವೇ ಸವರ್ಣೀಯ ಮನಸ್ಸುಗಳ ಹೃದಯ ಪರಿವರ್ತನೆಯ ಕೆಲಸವನ್ನು ಮಾಡುವುದಕ್ಕೆ ಶ್ರಮಿಸಿದರು.

ಬಲಹೀನರನ್ನು ಭಾವೈಕ್ಯದಿಂದಲೇ ಬೆಸೆಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದರು. ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಬದುಕುತ್ತ ಪ್ರಯೋಗಶೀಲರಾಗಿದ್ದ ಅಪ್ರತಿಮ ಮಾನವಪ್ರೇಮಿ ಗಾಂಧೀಜಿ, ಮೊದಮೊದಲು ‘ಸರಳ ವಿವಾಹಕ್ಕೆ ಮಾತ್ರ ಬರುವೆ’ ಎಂದು ಹೇಳುತ್ತಿದ್ದರು. ಆನಂತರ ‘ಸರಳ ವಿವಾಹ ಮಾತ್ರ ಅಲ್ಲ, ವಿವಾಹವಾಗುವ ಹುಡುಗ ಅಥವಾ ಹುಡುಗಿ ಯಾರಾದರೊಬ್ಬರು ಕಡ್ಡಾಯವಾಗಿ ಹರಿಜನರಾಗಿರಲೇಬೇಕು. ಅಂತಹ ಸರಳ ವಿವಾಹಗಳಲ್ಲಿ ಮಾತ್ರ ಭಾಗವಹಿಸುವೆ’ ಎಂದು ಹೇಳುತ್ತಿದ್ದರು. ಇದು ಗಾಂಧೀಜಿಯವರ ಮಾಗಿದ ದಟ್ಟ ಮನುಷ್ಯಪ್ರೀತಿಯ ದ್ಯೋತಕ. ಹಾಗಾಗಿಯೇ ‘ಪ್ರೀತಿಯೊಂದೇ ಮಾನವರೆಲ್ಲರನ್ನು ಕೂಡಿಸಬಲ್ಲುದು’ ಎಂಬ ಮಹಾವಿವೇಕವನ್ನು ತಿಳಿ ಹೇಳಿದರು.

ಮಹಾರ್ ಸಮುದಾಯದಲ್ಲಿ ಹುಟ್ಟಿ ಬೆಳೆದ ಬಿ.ಆರ್. ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೇ ನೇರವಾಗಿ ಶ್ರೇಣೀಕೃತ ಜಾತಿವ್ಯವಸ್ಥೆಯ, ಅಸ್ಪೃಶ್ಯತೆಯ ಕರಾಳ ದರ್ಶನವಾಯಿತು. ಅವರು ಹುಟ್ಟಿಬೆಳೆದ ಕಬೀರ್ ಮನೆತನದ ಸಂಸ್ಕಾರ ಉನ್ನತ ಮಟ್ಟದ್ದಾಗಿತ್ತು. ದೈಹಿಕವಾಗಿ, ಮಾನಸಿಕವಾಗಿ, ಗಟ್ಟಿ ಹಿನ್ನೆಲೆಯ ಮನೆತನವಾಗಿತ್ತು. ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಸಂಜೆ ಪೂಜೆ, ಧ್ಯಾನದ ಪದ್ಧತಿ ಇತ್ತು. ಶುಚಿಯಲ್ಲಿ ಕಡಿಮೆ ಇರಲಿಲ್ಲ. ಸೌಂದರ್ಯದಲ್ಲಿಯೂ ಸ್ಫುರದ್ರೂಪಿಯಾಗಿದ್ದರು. ಮೇಲಾಗಿ ಆ ಕಾಲದಲ್ಲಿಯೆ ಸುಬೇದಾರ್‌ನ ಮಗನಾಗಿದ್ದರು. ಹೀಗಿದ್ದೂ ತಾಯ್ನಾಡಿನಲ್ಲಿಯೇ ಅಂಬೇಡ್ಕರ್ ಅವಮಾನಕ್ಕೆ ಒಳಗಾದರು. ಇದು ತುಂಬಾ ಸೂಕ್ಷ್ಮಸಂವೇದನೆಯ, ಪ್ರತಿಭಾಶಾಲಿಯಾಗಿದ್ದ ಅಂಬೇಡ್ಕರ್ ಅವರನ್ನು ತೀವ್ರವಾಗಿ ಕಾಡಿತ್ತು.

ಗಾಂಧೀಜಿ ಮತ್ತು ಅಂಬೇಡ್ಕರ್ ಅವರಿಗೆ ವರ್ಣಭೇದದ ವಿಚಾರದಲ್ಲಿ ಬೇರೆ ಬೇರೆ ರೀತಿಯ ಅವಮಾನಗಳಾದವು. ಅಂಬೇಡ್ಕರ್ ಅವರಿಗೆ ಅಸ್ಪೃಶ್ಯತೆಯಿಂದ ತಳಮಟ್ಟದಲ್ಲಿ ಅವಮಾನಗಳಾಗಿದ್ದರೆ, ಗಾಂಧೀಜಿ ಅವರಿಗೆ ಮೇಲ್ಮಟ್ಟದಲ್ಲಿಯೇ ಅವಮಾನಗಳಾದವು. ಗಾಂಧೀಜಿ ಅವರು ಹರಿಜನರ ಸೇವೆ ಮಾಡುವಾಗ ಸವರ್ಣೀಯ ಮನಸ್ಸುಗಳಿಂದ ಇರಸುಮುರಸನ್ನು ಅನುಭವಿಸಿದರು.

ಇಷ್ಟಾಗಿಯೂ ಅಂಬೇಡ್ಕರ್ ಅವರು ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಸಾರಾಸಗಟಾಗಿ ತಿರಸ್ಕೃತರಾದವರಲ್ಲ. ಎಲ್ಲ ಹಂತಗಳಲ್ಲಿಯೂ ಮೌಢ್ಯ ತುಂಬಿಕೊಂಡಿದ್ದ ಮನಸ್ಸುಗಳಿಂದ ದೊಡ್ಡ ಪ್ರಮಾಣದಲ್ಲಿಯೇ ಅವಮಾನವನ್ನು ಉಂಡಿದ್ದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಸಣ್ಣಪ್ರಮಾಣದ ಪ್ರೀತಿಯನ್ನೂ ಉಂಡರು. ಅವಮಾನವನ್ನು ಮಾಡುವ ವ್ಯವಸ್ಥೆಯಿಂದಲೇ ಬಂದಿದ್ದ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅಂಬೇಡ್ಕರ್ ಎಂಬ ಅವರ ಗುರುಗಳು ಬಾಲಕ ಭೀಮರಾವ್‍ನ ಕಣ್ಣೊಳಗಿನ ಕಾಂತಿಯಿಂದಲೇ ಮುಂದೆ ಇವನು ಮಹಾನ್ ಮಾನವನಾಗುತ್ತಾನೆ ಎಂಬುದನ್ನು ಗ್ರಹಿಸಿದರು. ಅಂತರಂಗದಿಂದಲೂ ಬಹಿರಂಗದಿಂದಲೂ ಶುದ್ಧ ಸುಂದರನಾಗಿದ್ದ ಬಾಲಕ ಭೀಮರಾವ್‍ನನ್ನು ಸ್ಪರ್ಶ ಮಾಡಿದ್ದರು. ಪ್ರೀತಿಯಧಾರೆ ಎರೆದಿದ್ದರು. ಅದರ ಕುರುಹಾಗಿ ತುಂಬು ಅಭಿಮಾನದಿಂದ ಅಂಬೇಡ್ಕರ್ ಎಂಬ ತಮ್ಮ ಹೆಸರನ್ನು ಸೇರಿಸಿ ಇಟ್ಟು ಹರಸಿದರು.

ಸೂಕ್ಷ್ಮ ಸಂವೇದಿಯಾಗಿದ್ದ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಪ್ರೀತಿ- ಅವಮಾನಗಳೆರಡನ್ನೂ ಉಂಡು ಬೆಳೆದಿದ್ದು ವಾಸ್ತವ ಸಂಗತಿ. ಹಾಗಾಗಿಯೇ ಅವರು ಚಿಂತಿಸಿದ ರೀತಿಗಳಿಗೆ, ಹೋರಾಟ ಮಾಡಿದ ದಾರಿಗಳಿಗೆ, ಅವರು ಬರೆದ ಬಹಳ ದೊಡ್ಡ ಪ್ರಮಾಣದ ಬರಹಗಳಿಗೆ ಹಾಗೂ ಸಂವಿಧಾನ ರೂಪಿಸಿದ ಮಹಾಯಜ್ಞದ ಕೆಲಸದೊಳಗೆ ಎಲ್ಲಿಯೂ ಪ್ರತೀಕಾರದ ಸುಳಿವು ಇಲ್ಲದಂತೆ ನೋಡಿಕೊಂಡರು. ಅಂಗುಲಿಮಾಲನನ್ನು ಪರಿವರ್ತಿಸಿದ ಬುದ್ಧಗುರುವನ್ನು ಅಪ್ಪಿಕೊಂಡಿದ್ದ ಅಂಬೇಡ್ಕರ್ ಅವರು ಸಮಗ್ರ ಜನತೆಯ ಸರ್ವೋದಯದ ಕನಸು ಕಂಡು ಅದು ಸಾಕಾರಗೊಳ್ಳಲು ಭದ್ರಬುನಾದಿಯನ್ನು ಹಾಕಿದವರು. ಅವಮಾನಿಸಿದವರ ಎದೆಗಳಿಗೂ ತಮ್ಮ ಹೃದಯ ಶ್ರೀಮಂತಿಕೆಯ ಮಹಾನ್ ವಿಚಾರಗಳಿಂದ ವಿವೇಕ ಬೆಳೆಸಿಕೊಳ್ಳಲು ಕಾನೂನು ಚೌಕಟ್ಟಿನ ನಿಷ್ಕಲ್ಮಷ ಸಂವಿಧಾನ ಎಂಬ ಮಹಾಮನೆಯನ್ನು ರೂಪಿಸಿದವರು.

ಆಳವಾಗಿ ಸೂಕ್ಷ್ಮವಾಗಿ ತುಂಬ ವಿಶಾಲದೃಷ್ಟಿಯಲ್ಲಿ ಒಳಗಣ್ಣಿನ ಅರಿವಿನಿಂದ ನೋಡ ಹೊರಟವರಿಗೆ ಮಾತ್ರ ಈ ಇಬ್ಬರ ಆಶಯವೂ ಒಂದೇ ಆಗಿದೆ ಎಂಬುದು ಗ್ರಹಿತವಾಗುತ್ತ ಹೋಗುತ್ತದೆ. ಆದರೆ, ಇವರು ಪ್ರಕೃತಿ ಸಹಜವಾದ ಭಿನ್ನ ಭಿನ್ನ ನಿಲುವುಗಳಿಂದ ಚಿಂತಿಸಿದರು ಅಷ್ಟೆ. ಇದಕ್ಕೆ ಅವರು ಬೆಳೆದು ಬಂದ ಹಿನ್ನೆಲೆ ಕಾರಣವಾಗಿರಬಹುದೇ ವಿನಾ ಅನ್ಯ ಕಾರಣಗಳಿಲ್ಲ. ಇಬ್ಬರೂ ಗ್ರಹಿಸುವುದು ಒಂದು ಸಮಾಜದ ಸಾಮಾಜಿಕ ನೆಮ್ಮದಿ, ಸಾಂಸ್ಕೃತಿಕ ನೆಮ್ಮದಿ, ಧಾರ್ಮಿಕ ನೆಮ್ಮದಿ, ರಾಜಕೀಯ ನೆಮ್ಮದಿ ಮತ್ತು ಆರ್ಥಿಕ ನೆಮ್ಮದಿಯನ್ನು.

ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸುವಾಗ ಸೃಷ್ಟಿಶಕ್ತಿಯ ಪ್ರಧಾನವಾಗಿರುವ ಮಹಿಳೆಯರು ಸೇರಿದಂತೆ ಸಾಮಾಜಿಕ ನ್ಯಾಯದ ತಳಹದಿಯಾಗಿ, ಸರ್ವರ ಏಳಿಗೆಯನ್ನು, ಸರ್ವರ ಸುಧಾರಣೆಯನ್ನು ಸರ್ವರ ಅಭಿವೃದ್ಧಿಯನ್ನು ಬಯಸಿದರು. ‘ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರ ಭಾವನೆಯ ತಳಹದಿಯ ಮೇಲೆ ಮಾತ್ರ ನಾವು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ’, ‘ಭೂಮಿಯ ರಾಷ್ಟ್ರೀಕರಣ ಮತ್ತು ಸಹಕಾರ ಪದ್ಧತಿಯ ಬೇಸಾಯದ ಮೂಲಕ ಸಕಲರ ಏಳಿಗೆಯನ್ನು ಕಾಣಲು ಸಾಧ್ಯವಾಗುತ್ತದೆ’ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿರುವುದು ಸರ್ವೋದಯದ ಪರಿಕಲ್ಪನೆಯೇ ಆಗಿದೆ. ಅಂಬೇಡ್ಕರ್ ಅವರು ಸಮಗ್ರ ಭಾರತದ ಏಳಿಗೆಗಾಗಿ ರೂಪಿಸಿರುವ ಭಾರತದ ಸಂವಿಧಾನ ಇಂದಿಗೂ ಅದನ್ನು ಕಾಪಿಡುತ್ತಿದೆ.

ಗಾಂಧೀಜಿಯವರಂತೂ ತಮ್ಮ ಜೀವನದಲ್ಲಿ ಒಂದು ಯಜ್ಞದಂತೆ ಸರಳತೆ, ಸತ್ಯಸಂಧತೆ, ಮನುಷ್ಯಪ್ರೀತಿ, ಅಹಿಂಸಾ ನಿಲುವುಗಳನ್ನು ಇವು ಪ್ರಾಕೃತಿಕವಾಗಿ ಸಹಜವಾದುವು ಎಂದು ಗಾಢವಾಗಿ ನಂಬಿದರು. ಯಾವ ಜನಾಂಗವೇ ಆಗಲಿ, ಯಾವ ಬಗೆಯಲ್ಲೂ ಅದು ಭೌತಿಕವಾಗಿಯಾಗಲಿ, ಮಾನಸಿಕವಾಗಿಯಾಗಲಿ ಹಿಂಸೆಗೆ ಒಳಗಾಗಬಾರದು ಎಂದು ಪ್ರತಿಪಾದಿಸಿದರು. ಇಡೀ ಭಾರತವನ್ನು ಪ್ರವಾಸ ಮಾಡುತ್ತ, ಹರಿಜನ ಸುಧಾರಣೆ, ಅಸ್ಪೃಶ್ಯತೆ ನಿವಾರಣೆಯಂಥ ಕೆಲಸವನ್ನು ಮಾಡಿದರು. ಇವುಗಳನ್ನು ತಮ್ಮ ಒಳ ಕಾಠಿಣ್ಯದಿಂದ, ಮೇಲು ಎಂಬುವವರ ಅಹಂನ್ನು ಕರಗಿಸುವ, ಕೀಳು ಎಂಬುವವರ ಕೀಳರಿಮೆಯನ್ನು ಕಳಚುವ ಹೃದಯಂಗಮ ಕೆಲಸ ಮಾಡಿದರು. ತಮ್ಮ ‘ಹರಿಜನ್, ‘ಯಂಗ್ ಇಂಡಿಯಾ’ ಪತ್ರಿಕೆಗಳಲ್ಲಿ ಮನುಷ್ಯಪರ ಕಾಳಜಿಯುಳ್ಳ ಬರಹಗಳ ಮೂಲಕ ಮಾನವ ಸೌಹಾರ್ದದ ಘನತೆಯನ್ನು ಒತ್ತಿ ಹೇಳಿದರು. ತಮ್ಮ ಕೊನೆಯ ಉಸಿರಿರುವವರೆಗೂ ಹೀಗೆಯೇ ಬದುಕಿದರು.

ಯಾವ ಕಾಲದಲ್ಲೂ ಸುಳ್ಳು ಬೇಗ ಬೇಗ ಹರಡಿ ತನ್ನ ಸ್ವಾರ್ಥವನ್ನು ತೀರಿಸಿಕೊಂಡು ವಿನಾಶದತ್ತ ಸಾಗುತ್ತದೆ. ಆದರೆ, ಸತ್ಯ ತನ್ನ ಸತ್ಯದಿಂದಲೇ ಗರಿಕೆಯ ರೀತಿ ಒಡನಾಡಿಕೊಂಡೇ ನಿಧಾನವಾಗಿಯಾದರೂ ತಣ್ಣಗೆ ತನ್ನ ಪ್ರವೃತ್ತಿಯನ್ನು ಹೆಚ್ಚಿಸುತ್ತ ಹೋಗುತ್ತದೆ. ಆ ರೀತಿಯ ಮನುಷ್ಯ ಘನತೆಯ ಮಹಾನ್ ವಿವೇಕದಂತಿರುವ, ಸರ್ವರ ಹಿತವನ್ನು ಸದಾ ಬಯಸಿದ ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಸತ್ಯಗೋಚರ ಶಕ್ತಿಗಳು, ಸತ್ಯಗೋಚರ ಮನಸ್ಸುಗಳು ಹೆಚ್ಚಾದಂತೆಲ್ಲ ಹೆಚ್ಚೆಚ್ಚು ಪ್ರಸ್ತುತರಾಗುತ್ತಾರೆ. ಸದಾ ತಣ್ಣಗೆ ಉರಿಯುವ ಜ್ಯೋತಿಗಳಾಗುತ್ತಾರೆ. ವಿಶ್ವಕ್ಕೆ ಅನಿಕೇತನದ ಸಂದೇಶ ಸಾರಿರುವ ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿ ಉಳಿಯುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು