ಮಂಗಳವಾರ, ಜನವರಿ 31, 2023
18 °C
ಪವಾಡಗಳನ್ನು ಬಯಲಿಗೆಳೆಯಬೇಕಾದ ವಿಜ್ಞಾನಿಗಳೇ ಪವಾಡ ಸೃಷ್ಟಿಗೆ ನೆರವಾದರೆ ಹೇಗೆ?

ಶ್ರೀರಾಮನ ಹಣೆಗೆ ವಿಜ್ಞಾನದ ಲೈಟು: ನಾಗೇಶ ಹೆಗಡೆ ಲೇಖನ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಅಯೋಧ್ಯೆಯ ರಾಮಮಂದಿರ 2024ರಲ್ಲಿ ಪೂರ್ತಿಗೊಳ್ಳಲಿದೆ. ಮುಂದೆ ಪ್ರತಿವರ್ಷವೂ ರಾಮನವಮಿಯ ದಿನ ಅಲ್ಲಿನ ಶ್ರೀರಾಮನ ವಿಗ್ರಹದ ಮೇಲೆ ಸೂರ್ಯ ಕಿರಣಗಳು ಬೀಳುವಂತೆ ಮಾಡಬೇಕೆಂದು ಭಕ್ತಸಮೂಹ ನಮ್ಮ ದೇಶದ ವಿಜ್ಞಾನಿಗಳನ್ನು ಕೇಳಿಕೊಂಡಿದೆ. ಈ ಕೋರಿಕೆಯನ್ನು ಸುಗ್ರೀವಾಜ್ಞೆ ಎಂದೇ ಪರಿಗಣಿಸಿದಂತೆ ಭಾರತದ ಅತಿ ದೊಡ್ಡ ವಿಜ್ಞಾನ ತಂತ್ರಜ್ಞಾನ ಮಂಡಳಿ (ಸಿಎಸ್‌ಐಆರ್‌) ಅದಾಗಲೇ ಪರಿಣತರ ಒಂದು ತಂಡವನ್ನು ಕಟ್ಟಿ ಕೆಲಸ ಪ್ರಾರಂಭಿಸಿದೆ. ಈ ಮಧ್ಯೆ ಅದಕ್ಕೆ ಆಕ್ಷೇಪಣೆ ಎದ್ದಿದೆ. ಇಂಥ ಕೆಲಸಗಳಲ್ಲಿ ಭಾಗಿಯಾಗುವುದು ವಿಜ್ಞಾನಿಗಳಿಗೆ ತರವಲ್ಲವೆಂದು ಇನ್ನೊಂದು ಬಣದ ವಿಜ್ಞಾನಿಗಳು ಕೆಂಪು ಬಾವುಟ ಎತ್ತಿದ್ದಾರೆ. ಏನಿದರ ಆಳ-ಅಗಲ?

ರಾಮನವಮಿಯ ದಿನ ಶ್ರೀರಾಮನ ಹಣೆಯ ಮೇಲೆ ಸೂರ್ಯನ ಬೆಳಕು ಬಿದ್ದರೆ ಅದೊಂದು ಪವಾಡಸದೃಶ ಚಮತ್ಕಾರವೆಂದೇ ಬಿಂಬಿಸಬಹುದು. ಆದರೆ ಅದು ಸುಲಭದ ಕೆಲಸವಲ್ಲ. ಏಕೆಂದರೆ ಆಕಾಶದಲ್ಲಿ ಸೂರ್ಯನ ಪಥ ಪ್ರತಿವರ್ಷವೂ ತುಸುತುಸುವೇ ಬದಲಾಗುತ್ತಿರುತ್ತದೆ.
ಈ ವರ್ಷದ ರಾಮನವಮಿಯ ದಿನ ವಿಗ್ರಹದ ಹಣೆಯ ಮೇಲೆ ಸೂರ್ಯಕಿರಣ ಬಿದ್ದರೆ ಮುಂದಿನ ವರ್ಷ ಅದು ರಾಮನ ಬಿಲ್ಲಿನ ಮೇಲೋ ಅಥವಾ ಗೋಡೆಯ ಮೇಲೋ ಬೀಳಬಹುದು. ವಿಗ್ರಹದ ಹಣೆಯ ಮೇಲೆಯೇ ಪ್ರತಿವರ್ಷ ಬೆಳಕು ಬೀಳುವಂತೆ ಮಾಡಲು ಸುಲಭ ಉಪಾಯ ಇದೆ: ಅದೇನೆಂದರೆ ಗರ್ಭಗುಡಿಯೊಳಗೆ ಬಿಸಿಲು ಬೀಳುವಂತೆ ಮಾಡಿ ಅಲ್ಲಿನ ಒಂದೆರಡು ಕನ್ನಡಿಗಳ ಮೂಲಕ ವಿಗ್ರಹದ ಹಣೆಗೆ ಬೆಳಕನ್ನು ಚೆಲ್ಲಬಹುದು. ಅದಕ್ಕೆಂದೇ ತರಬೇತಿ ಪಡೆದ ಯಾರಿಗಾದರೂ ನಾರು ಮಡಿ ಉಡಿಸಿ ಅಲ್ಲಿ ನಿಲ್ಲಿಸಬಹುದು. ಆದರೆ ಹಾಗೆ ಮಾಡುವುದರಲ್ಲಿ ಏನು ಸ್ವಾರಸ್ಯ? ಯಾರ ಹಸ್ತಕ್ಷೇಪವೂ ಇಲ್ಲದೆ ಸೂರ್ಯರಶ್ಮಿ ತಂತಾನೇ ಬೀಳಬೇಕು. ಅಂದರೆ ಅಲ್ಲೊಂದು ಆಟೊಮ್ಯಾಟಿಕ್‌ ತಾಂತ್ರಿಕ ವ್ಯವಸ್ಥೆ ಇರಬೇಕು; ಅದಕ್ಕೇ ಖಗೋಳ ವಿಜ್ಞಾನಿಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಸೇರಿ ಸೂರ್ಯ ದೇವರು ಶ್ರೀರಾಮ ದೇವರನ್ನು ಸ್ಪರ್ಶಿಸುವಂತೆ ಮಾಡಬೇಕು.

ಅದು ನಿಜಕ್ಕೂ ಅಷ್ಟು ಕಷ್ಟದ ಕೆಲಸವೆ? ಬೆಂಗಳೂರಿನಲ್ಲಿ ಕ್ರಿ.ಶ. 9ನೇ ಶತಮಾನದಲ್ಲಿ ಸ್ಥಾಪಿಸಲಾದ ಗವಿ ಗಂಗಾಧರೇಶ್ವರನ ವಿಗ್ರಹದ ಮೇಲೆ ಬಿಸಿಲು ಬೀಳುತ್ತದಲ್ಲ? ಆಂಧ್ರಪ್ರದೇಶದ ಶ್ರೀಕಾಕುಲಂ ಬಳಿಯ ಅರಸವಳ್ಳಿಯಲ್ಲಿ ಕ್ರಿ.ಶ. ಏಳನೆಯ ಶತಮಾನದಲ್ಲಿ ನಿರ್ಮಿಸಲಾದ ಸೂರ್ಯನಾರಾಯಣ ದೇವಸ್ಥಾನದಲ್ಲೂ ಈ ವಿದ್ಯಮಾನವನ್ನು ವೀಕ್ಷಿಸಬಹುದು. ಥಾಯ್ಲೆಂಡಿನ ಬುರಿರಾಮ್‌ ಪ್ರಾಂತದ ಶಿವ ದೇವಾಲಯದಲ್ಲಿ, ಗದುಗಿನ ವೀರನಾರಾಯಣ ದೇಗುಲದಲ್ಲೂ ಈ ವ್ಯವಸ್ಥೆ ಇದೆ.

ಸೂರ್ಯನ ಚಲನೆಯನ್ನು ಆಧರಿಸಿ ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿನ ಬಹುತೇಕ ನಾಗರಿಕತೆ
ಗಳಲ್ಲಿ ಪಂಚಾಂಗಗಳನ್ನೂ ಸಿದ್ಧಪಡಿಸಿ ವಾಸ್ತುಶಿಲ್ಪಗಳನ್ನೂ
ರಚಿಸಿದ ಬಹಳಷ್ಟು ಉದಾಹರಣೆಗಳಿವೆ. ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನ ಹೇಯುವಾ ಸೋಫಿಯಾದಲ್ಲಿ ದಕ್ಷಿಣಾಯನದ ಆರಂಭದಲ್ಲಿ ಮತ್ತು ವೆನಿಸ್‌ನ ಸಾಂತಾ ಸೋಫಿಲಾ ಇಗರ್ಜಿಯಲ್ಲಿ ಉತ್ತರಾಯಣದ ಆರಂಭದಲ್ಲಿ ಸೂರ್ಯ ಕಿರಣ ಪ್ರವೇಶ ಮಾಡುತ್ತದೆ. ಇವೆರಡೂ ಹತ್ತನೇ ಶತಮಾನಕ್ಕೂ ಮೊದಲೇ ಕಟ್ಟಲಾದ ವಾಸ್ತುಶಿಲ್ಪಗಳು. ಎರಡು ಸಾವಿರ ವರ್ಷಗಳ ಹಿಂದೆ ಬೌದ್ಧರು ನಿರ್ಮಿಸಿದ ಅಜಂತಾ ಸಂಕೀರ್ಣದ 26ನೇ ಗುಹಾಲಯದಲ್ಲೂ ಈ ವಿದ್ಯಮಾನ ಜರುಗುತ್ತದೆ. ಅಷ್ಟೇಕೆ ಮೂರೂವರೆ ಸಾವಿರ ವರ್ಷಗಳ ಹಿಂದಿನ ಮಾಯನ್‌ ನಾಗರಿಕತೆಯಲ್ಲಿ, ಐದು ಸಾವಿರ ವರ್ಷಗಳ ಹಿಂದಿನ ಪಿರಮಿಡ್‌ಗಳಲ್ಲೂ ಶಿಲಾಸ್ತಂಭಗಳ ಮೇಲೆ ಬೀಳುವ ಸೂರ್ಯನ ಬೆಳಕನ್ನು ಆಧರಿಸಿದ ಕ್ಯಾಲೆಂಡರ್‌ ಗೀರುಗಳನ್ನು ಕೊರೆಯಲಾಗಿದೆ. ಹೊಸತೇನು ಬಂತು?

ಸೌರಮಾನ ಪಂಚಾಂಗದಲ್ಲಿ ವರ್ಷದ ಇಂಥ ದಿನ ಸೂರ್ಯ ಎಲ್ಲಿರುತ್ತಾನೆಂದು ನಿರ್ಧರಿಸುವುದು ಸುಲಭ. ರಾಮನವಮಿ ಹಾಗಲ್ಲ. ಅದನ್ನು ಚಾಂದ್ರಮಾನ ಪದ್ಧತಿಯಲ್ಲಿ ನಿರ್ಧರಿಸುವುದರಿಂದ ಅಂದು ಸೂರ್ಯ ಎಲ್ಲಿರುತ್ತಾನೆಂದು ನಿರ್ಧರಿಸಲು ಸೌರಮಾನ ಪದ್ಧತಿಯನ್ನೇ ಆಧರಿಸಬೇಕಾಗುತ್ತದೆ. ರಾಮನವಮಿ ಒಂದೊಂದು ವರ್ಷ ಒಂದೊಂದು ದಿನ ಬರುತ್ತದೆ. 2022ರಲ್ಲಿ ಏಪ್ರಿಲ್‌ 10, 2021ರಲ್ಲಿ ಏಪ್ರಿಲ್‌ 21, 2018ರಲ್ಲಿ ಮಾರ್ಚ್‌ 25, ಬರುವ 2024ರಲ್ಲಿ ಏಪ್ರಿಲ್‌ 17 ಹೀಗೆ ಬದಲಾಗುತ್ತ ಪ್ರತೀ 19 ವರ್ಷಗಳ ನಂತರ ಮತ್ತೆ ಮೊದಲಿನ ಸ್ಥಾನಕ್ಕೇ ಬರುತ್ತದೆ. ಹೀಗೆ ಚಾಂದ್ರಮಾನ, ಸೌರಮಾನ ಪದ್ಧತಿಗಳನ್ನು ಹೊಂದಿಸಲು ಗಣಿತಸೂತ್ರಗಳು ಬೇಕು. ಅದಕ್ಕೆಂದು 19 ವರ್ಷಗಳ ಒಂದು ಕಾಲಯಂತ್ರವನ್ನು ನಿರ್ಮಿಸಬೇಕು. ಅದರಲ್ಲಿ ಗಿಯರ್‌ ಮತ್ತು ಚಕ್ರಗಳನ್ನು ಕೂರಿಸಿ ಅದಕ್ಕೆ ಕನ್ನಡಿಗಳನ್ನು
ಜೋಡಿಸಬೇಕು. ಅವು ಕರಾರುವಾಕ್ಕಾಗಿ ಇಷ್ಟಿಷ್ಟೇ ಕೋನದಲ್ಲಿ ತಿರುಗುವಂತೆ ಮಾಡಲು ಇಲೆಕ್ಟ್ರಾನಿಕ್‌ ಸರ್ಕ್ಯೂಟ್‌ಗಳು ಬೇಕು. ನಮ್ಮ ವಿಜ್ಞಾನಿಗಳು ಹಿಂದೆಂದೂ ಇಂಥ ಗಡಿಯಾರವನ್ನು ನಿರ್ಮಿಸಿರಲಿಲ್ಲ. ಅದಕ್ಕೇ ಪುಣೆ, ಬೆಂಗಳೂರಿನ ಖಗೋಲವಿಜ್ಞಾನಿಗಳನ್ನೂ ರೂರ್ಕಿಯಲ್ಲಿನ ವಾಸ್ತುತಜ್ಞರನ್ನೂ ಸೇರಿಸಿ ಒಟ್ಟಾರೆ ವಿನ್ಯಾಸ ಸಿದ್ಧವಾಗಿದೆ. ಮೊದಲ ಪ್ರಾತ್ಯಕ್ಷಿಕೆಯನ್ನು ರಾಮಜನ್ಮಭೂಮಿ ಟ್ರಸ್ಟ್‌ನ ಪದಾಧಿಕಾರಿಗಳಿಗೆ ತೋರಿಸಲಾಗಿದೆ.

ಈ ‘ಸಾಹಸ’ಕ್ಕೆ ಬೆಂಗಳೂರು, ಪುಣೆ, ಮುಂಬೈ, ಕೋಲ್ಕತ್ತ, ಚೆನ್ನೈ ಸೇರಿದಂತೆ ಭಾರತದ ಹನ್ನೆರಡು ನಗರಗಳ ಪ್ರಮುಖ ವಿಜ್ಞಾನ- ಸಂಶೋಧನ ಸಂಸ್ಥೆಗಳ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಆಕ್ಷೇಪಣೆ ಏನೆಂದರೆ (1) ಕನ್ನಡಿಯನ್ನು ಕೈಯಲ್ಲಿ ಹೊರಳಿಸಿ ಸಲೀಸಾಗಿ ಮಾಡಬಹುದಾದ ಕೆಲಸಕ್ಕೆ ಅನಗತ್ಯವಾಗಿ ಕ್ಲಿಷ್ಟ ತಾಂತ್ರಿಕ ಸಲಕರಣೆಗಳನ್ನು ಹೂಡಲಾಗುತ್ತಿದೆ. ಇದು ‘ಇರುವೆಯನ್ನು ಕೊಲ್ಲಲೆಂದು ತುಪಾಕಿ ಬಳಸಿದಂತೆ’. (2) ಎಂಜಿನಿಯರಿಂಗ್‌ ಪದವಿ ಓದುವ ವಿದ್ಯಾರ್ಥಿಗಳು ಸಲೀಸಾಗಿ ಮಾಡಬಹುದಾದ ಈ ಪ್ರಾಜೆಕ್ಟ್‌ನಿಂದ ವಿಜ್ಞಾನಕ್ಕೆ ಹೊಸ ಕೊಡುಗೆಯೇನೂ ಸಿಕ್ಕಂತಾಗುವುದಿಲ್ಲ.
ಭಾರತದ ವಿಜ್ಞಾನಿಗಳ ಪ್ರತಿಷ್ಠೆ ಇದರಿಂದ ಇನ್ನಷ್ಟು ಕೆಳಕ್ಕಿಳಿಯುತ್ತದೆ ವಿನಾ ಮೇಲೇರುವುದಿಲ್ಲ. (3) ಸಂವಿಧಾನದ ಆಶಯದಂತೆ ವೈಜ್ಞಾನಿಕ ಮನೋವೃತ್ತಿ
ಯನ್ನು ಬೆಳೆಸುತ್ತ, ಹೊಸ ಸಂಶೋಧನೆಗಳತ್ತ ಸಾಗಬೇಕಾದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಇಂಥ ‘ಮೂರ್ಖ ಕೆಲಸಗಳಲ್ಲಿ’ ಮಗ್ನವಾಗುವುದು ತರವಲ್ಲ (ಮೂರ್ಖ ಕೆಲಸ, ಇರುವೆ-ತುಪಾಕಿ ಇವೆಲ್ಲವೂ ಈ ವಿಜ್ಞಾನಿಗಳ ಮೂಲ ಹೇಳಿಕೆಯಲ್ಲಿವೆ). ಒಟ್ಟಾರೆ ಇವರ ಆಶಯ ಏನೆಂದರೆ, ವಿಜ್ಞಾನವನ್ನು ಆರಾಧಿಸುವ ಬದಲು ದೈವೀಶಕ್ತಿಯ ಆರಾಧನೆಗೆ ಇನ್ನಷ್ಟು ಪ್ರೇರಣೆ ಕೊಡಬಲ್ಲ ಇಂಥ ಯೋಜನೆಗೆ ವಿಜ್ಞಾನಿಗಳು ಕೈಹಾಕಲೇಬಾರದಿತ್ತು. ತೆರಿಗೆದಾರನ ಹಣವನ್ನು ಹೀಗೆ ಒಂದು ದೇಗುಲದ ಪ್ರತಿಷ್ಠೆ
ಯನ್ನು ಮೇಲೇರಿಸುವ ಕೆಲಸಕ್ಕೆ ಬಳಸಬಾರದಿತ್ತು.

ರಾಮಭಕ್ತರಿಗೆ ಇದರಲ್ಲೇನೂ ತಪ್ಪು ಕಾಣುತ್ತಿಲ್ಲ. ಪುರಾತನ ಕಾಲದಿಂದಲೂ ದೇಗುಲಗಳ ನಿರ್ಮಾಣಕ್ಕೆ ವೈಜ್ಞಾನಿಕ ಚಿಂತನೆಯೇ ಮೂಲಾಧಾರವಾಗಿತ್ತು. ಈಗಿನದು ಅದರ ಮುಂದುವರಿಕೆಯೇ ಆಗಿದೆ. ಇಷ್ಟಕ್ಕೂ ಅಯೋಧ್ಯೆಯ ರಾಮಮಂದಿರದ ಬಳಿ ಭೂಕಂಪನ ಸಾಧ್ಯತೆಯ ಪರಿಶೀಲನೆಯಲ್ಲಿ, ಅಡಿಪಾಯದ ಮಣ್ಣು
ಪರೀಕ್ಷೆಯಲ್ಲಿ ಆಗಲೇ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳು ತಮ್ಮ ಸಹಯೋಗವನ್ನು ನೀಡಿವೆ. ಆಟೊಮ್ಯಾಟಿಕ್‌ ಕನ್ನಡಿ ಕೂರಿಸುವುದೂ ಆ ಸಹಯೋಗದ ಭಾಗವೇ ತಾನೆ? ಮೇಲಾಗಿ ಹಿಂದೂ ದೇವಾಲಯಗಳು ಸರ್ಕಾರಕ್ಕೆ ಭಾರೀ ಆದಾಯವನ್ನು ತಂದುಕೊಡುತ್ತಿವೆ, ಅದನ್ನು ಯಂತ್ರನಿರ್ಮಾಣಕ್ಕೆ ಬಳಸಿದರೇನು ತಪ್ಪು?

ಆದಾಯ, ವಿನಿಯೋಗದ ವಿಷಯ ಬಂದಾಗ ಈ ವಿಷಯ ತುಸು ಕ್ಲಿಷ್ಟ ಆಗುತ್ತದೆ. ರಾಮನವಮಿಯ ದಿನ ಸೂರ್ಯ ಕಿರಣ ಬೀಳುತ್ತದೆಂದು ಲಕ್ಷೋಪಲಕ್ಷ ಜನರು ಅದನ್ನು ನೇರವಾಗಿ ನೋಡಲಂತೂ ಸಾಧ್ಯವಿಲ್ಲ. ಸಿ.ಸಿ. ಟಿ.ವಿ. ಕ್ಯಾಮೆರಾದ ಮೂಲಕ ಜಗತ್ತಿಗೆಲ್ಲ ಪ್ರಸಾರ ಮಾಡಲೆಂದು ಯಾರೋ ಪ್ರಾಯೋಜಕತ್ವ ಪಡೆಯುತ್ತಾರೆ; ಯಾವ್ಯಾವುದೋ ಚಾನೆಲ್‌ಗಳು, ಜಾಲತಾಣಗಳು ‘ದೈವೀಪ್ರಭೆ’ಯ ಟಾಂಟಾಂ ಮಾಡುತ್ತವೆ. ಮೂಢನಂಬಿಕೆಯ ಇನ್ನಷ್ಟು ಪ್ರಖರ ಪ್ರಸಾರಕ್ಕೆಂದು ಸೂರ್ಯ-ಚಂದ್ರ ಗ್ರಹಣಗಳ ಚಂದದ ವಿಡಿಯೊ ಬಳಸಿದ ಹಾಗೆ.

ಎಂಥ ವಿಪರ್ಯಾಸ ನೋಡಿ! ನಮ್ಮೆಲ್ಲರ ಹಣೆಯ ಮೇಲೆ ನಿತ್ಯವೂ ಸೂರ್ಯ ಕಿರಣ ಬೀಳುತ್ತಲೇ ಇರುತ್ತದೆ. ಗುಡಿ ಕಟ್ಟಿ ದೇವರನ್ನು ಕತ್ತಲಲ್ಲಿ ಕೂರಿಸಿ ವರ್ಷಕ್ಕೊಮ್ಮೆ ಆತನ ಮೇಲೆ ತುಸು ಬೆಳಕು ಚೆಲ್ಲಲೆಂದು ಕ್ಲಿಷ್ಟ ಯಾಂತ್ರಿಕ ವ್ಯವಸ್ಥೆ ನಿರ್ಮಿಸಿ ಅದೊಂದು ಸಾಧನೆಯೆಂದು ಸಂಭ್ರಮಿಸುವುದು- ಇವೆಲ್ಲ ಯಾವ ದೇವರನ್ನು ಮೆಚ್ಚಿಸಲೆಂದೊ! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು