ಭಾನುವಾರ, ಏಪ್ರಿಲ್ 11, 2021
28 °C

ಅನುಭವ ಮಂಟಪ: ಮೀಸಲಾತಿಗೆ ಕುತ್ತು

ಆರ್.ಎಚ್. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ಮಾರ್ಚ್ 1ರ ಸಂಚಿಕೆಯ ಅನುಭವ ಮಂಟಪದ ‘ಮೀಸಲಾತಿ, ಹೋರಾಟವಲ್ಲ ಧಮ್ಕಿ’ ಎಂಬ ಲೇಖನದಲ್ಲಿ  ಜೆ. ಶ್ರೀನಿವಾಸನ್ ಅವರು ಮೀಸಲಾತಿ ಹೋರಾಟದ ಹಿಂದಿನ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ವಾಸ್ತವಕ್ಕೆ ಕನ್ನಡಿ ಹಿಡಿದಿದ್ದಾರೆ. 

ಸಮಾಜದ ಅವಕಾಶ ವಂಚಿತ ಸಮುದಾಯಗಳ ಉನ್ನತಿಗಾಗಿ ಅಸ್ತಿತ್ವಕ್ಕೆ ಬಂದ ಮೀಸಲು ವ್ಯವಸ್ಥೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಸಾಮಾಜಿಕ ಅಸಮಾನತೆಯ ನಿವಾರಣೆಗಾಗಿ ಜಾರಿಗೆ ಬಂದ ಮೀಸಲಾತಿ ಈಗ ಮಠಾಧೀಶರ ಹೋರಾಟದ ಪರಿಣಾಮ ಇನ್ನಷ್ಟು ರಾಜಕೀಯ ಬಣ್ಣ ಪಡೆದುಕೊಂಡಿದೆ. ಮೇಲ್ನೋಟಕ್ಕೆ ಇದು ಮೀಸಲು ಬೇಡಿಕೆಯ ಹೋರಾಟವಾದರೂ ಒಳಸುಳಿಗಳಲ್ಲಿ ರಾಜಕೀಯವಿದೆ. ಸಮಾಜದಲ್ಲಿ ಸಾಕಷ್ಟು ಮಾನ್ಯತೆ‌ ಪಡೆದಿರುವ ಪಂಚಮಸಾಲಿ ಸಮುದಾಯವು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕೇಳುತ್ತಿದ್ದರೆ, 2ಎ ಪ್ರವರ್ಗದ ಮೀಸಲಾತಿಯಲ್ಲಿ ಸಾಕಷ್ಟು ಲಾಭ ಪಡೆದಿರುವ ಕುರುಬರು ಪರಿಶಿಷ್ಟ ವರ್ಗದ ಮಾನ್ಯತೆ ಕೇಳುತ್ತಿದ್ದಾರೆ. ಮೀಸಲಾತಿ ಬೇಕು ಎನ್ನುವ ಪಟ್ಟಿಗೆ ವೈಶ್ಯ, ಒಕ್ಕಲಿಗ ಸೇರಿ ಬಹುತೇಕ ಎಲ್ಲಾ ಮುಂದುವರಿದ‌ ಜಾತಿಗಳು ಸೇರಿವೆ; ಹೋರಾಟಕ್ಕೆ ಮುಂದಾಗಿವೆ. ಈ ಎಲ್ಲಾ ಸಮುದಾಯಗಳ ಕಣ್ಣು ಪ್ರವರ್ಗ 2ಎ ಮೇಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆಯಿರುವ ನೂರಕ್ಕೂ ಹೆಚ್ಚು ಜಾತಿಗಳು ಈ ಪ್ರವರ್ಗದಲ್ಲಿ ಇವೆ. ಈ ಜಾತಿಗಳ ಪಾಲು ಕಸಿಯಲು ಪ್ರಯತ್ನ ನಡೆದಿದೆ ಎಂಬ ಆತಂಕವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ.

ಇದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದರೆ ಇದರ ಹಿಂದೆ ಬೇರೆಯೇ ಹುನ್ನಾರವಿದೆ; ಈ ಹೋರಾಟಗಳ ಹಿಂದಿರುವ ಪ್ರಮುಖ ನಾಯಕರು ಸಂಘ ಪರಿವಾರದ ಹಿನ್ನೆಲೆಯುಳ್ಳವರು. ಮೀಸಲಾತಿ ಕುರಿತಂತೆ‌ ಸಂಘ ಪರಿವಾರದ ನಿಲುವು ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಸಾಗಿದೆ. 1981ರಲ್ಲಿ ನಡೆದ ಅರ್‌ಎಸ್ಎಸ್ ಪ್ರತಿನಿಧಿ ಸಭಾದಲ್ಲಿ ಮೀಸಲಾತಿ ಪುನರ್ ವಿಮರ್ಶೆ ಆಗಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಸರಸಂಘಚಾಲಕರಂತೂ ಹಲವು ಬಾರಿ ಈ ಬಗ್ಗೆ ಆಗ್ರಹ ಮಂಡಿಸಿದ್ದಾರೆ. ಈಗ ಎಲ್ಲಾ ಸಮುದಾಯಗಳ ಬೇಡಿಕೆ ಗಮನಿಸಿ ಸರ್ಕಾರ ಪುನರ್ ವಿಮರ್ಶೆಯ ತೀರ್ಮಾನ ಕೈಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಸಂಘ ಪರಿವಾರ ಹೊಂದಿರುವ ಹಿಡಿತವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಂತಹ ತೀರ್ಮಾನ ಕೈಗೊಂಡು ಪುನರ್ ವಿಮರ್ಶೆಗೆ ತಜ್ಙರ ಸಮಿತಿ ರಚಿಸಿ, ಈ ಸಮಿತಿ ವರದಿ ನೀಡುವವರೆಗೆ ಮೀಸಲಾತಿ ಅಮಾನತಿನಲ್ಲಿಡುವ ನಿರ್ಧಾರ ಹೊರಬಿದ್ದರೂ ಅಚ್ಚರಿಯಿಲ್ಲ.

ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಮೀಸಲು ಇನ್ನೂ ಕನಸಿನ ಗಂಟಾಗಿದೆ. ಧ್ವನಿಯಿಲ್ಲದವರನ್ನು ತುಳಿಯುವ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಎಂಬುದು ಅರ್ಥ ಕಳೆದುಕೊಂಡಿದೆ. ಈ ಧ್ವನಿಯಿಲ್ಲದ ಸಮುದಾಯಗಳ ಮತದಾರರ ಸಂಖ್ಯೆ ಅತ್ಯಂತ ಕಡಿಮೆ. ಇವುಗಳ ಬಗ್ಗೆ ಮತಬ್ಯಾಂಕ್ ರಾಜಕಾರಣ ನಂಬಿಕೊಂಡಿರುವ ಆಡಳಿತ ಪಕ್ಷ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ, ಬಹುಸಂಖ್ಯಾತರ ಓಲೈಕೆಯ ತೀರ್ಮಾನ ಹೊರಬೀಳಬಹುದು. ಇದನ್ನು ಹೋರಾಟ ಬೆಂಬಲಿಸುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.

ಆರು ಸಲ ಕುಲಶಾಸ್ತ್ರೀಯ ಅಧ್ಯಯನ ನಡೆದು ಲಿಂಗಾಯತ ಸಮುದಾಯವನ್ನು ಮೀಸಲು ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಮಿಲ್ಲರ್ ಆಯೋಗ, ನಾಗನಗೌಡ ಆಯೋಗ, ವೆಂಕಟಸ್ವಾಮಿ ಆಯೋಗ ಇದನ್ನೇ ಹೇಳಿವೆ. ಆದರೆ, ಹಾವನೂರು ಆಯೋಗ ಮಾತ್ರ ಲಿಂಗಾಯತ ಸಮುದಾಯದಲ್ಲೂ ಸಾಮಾಜಿಕವಾಗಿ ಹಿಂದುಳಿದವರಿದ್ದಾರೆಂದು ಗುರುತಿಸಿ ಆ ಸಮುದಾಯದ ಕೆಲ ಕಾಯಕಜೀವಿ ಜನ ವಿಭಾಗಗಳಿಗೆ ಮೀಸಲು ವ್ಯವಸ್ಥೆ ನೀಡಲು ಶಿಪಾರಸು ಮಾಡಿದೆ. ಮೀಸಲಾತಿಯಿಂದ ಶಿಕ್ಷಣ ಮತ್ತು ಸರ್ಕಾರಿ ನೌಕರಿ ಸಿಗುತ್ತದೆ ಎಂಬುದು ಸಾರ್ವತ್ರಿಕವಾದ ಅಭಿಪ್ರಾಯ. ಆದರೆ, ಸರ್ಕಾರದ ನೀತಿಯಿಂದಾಗಿ ಈ ಸಾಧ್ಯತೆಗಳು ಕಮರುತ್ತಾ ಸಾಗಿವೆ. ಅತಿ ಹೆಚ್ಚು ಉದ್ಯೋಗ ಅವಕಾಶಗಳಿರುವ ಬ್ಯಾಂಕಿಂಗ್‌, ವಿಮೆ, ರೈಲ್ವೆ ಮೊದಲಾದ ವಲಯಗಳು ಖಾಸಗೀಕರಣಗೊಳ್ಳುತ್ತಿವೆ. ಹೀಗಾದರೆ, ಮೀಸಲಾತಿಯ ಆಶಯವೇ ಮರೆಯಾಗುತ್ತದೆ. ಖಾಲಿಯಿರುವ ಹುದ್ದೆಗಳನ್ನು ತುಂಬುವುದನ್ನು ಮಿತವ್ಯಯದ ಕಾರಣ ಹೇಳಿ ಸ್ಥಗಿತಗೊಳಿಸಲಾಗಿದೆ. ಹೊರಗುತ್ತಿಗೆಯ ಮೇಲೆಯೇ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಯಾವುದೇ ಸಮುದಾಯಕ್ಕೆ ಮೀಸಲು ನೀಡಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಈ ಬಗ್ಗೆ ಮೀಸಲಾತಿಗಾಗಿ ಧ್ವನಿ ಎತ್ತುತ್ತಿರುವರು ಯೋಚಿಸಬೇಕಾಗಿದೆ.

ಖಾಸಗೀಕರಣದ ಹೊಡೆತಕ್ಕೆ ಸಿಕ್ಕು ತತ್ತರಿಸಿರುವ ಮೀಸಲು ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಚಿಂತನೆ ನಡೆಯಬೇಕಾಗಿದೆ. ಅದಕ್ಕಾಗಿ ನಮ್ಮ ಎಲ್ಲ ಸಮುದಾಯಗಳು ಖಾಸಗೀಕರಣದ ವಿರುದ್ಧ ಮೊದಲು ಧ್ವನಿಯೆತ್ತಬೇಕಾಗಿದೆ. ಇಲ್ಲವೇ ಖಾಸಗಿ ವಲಯದಲ್ಲಿ ಮೀಸಲಾತಿಗೆ ಆಗ್ರಹಿಸಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಬೇಕಿದೆ. ಇಲ್ಲವಾದರೆ ಮೀಸಲಾತಿಯ ಸ್ವರೂಪವೇ ನಶಿಸಿಹೋಗುವ ಅಪಾಯವಿದೆ.

- ಆರ್.ಎಚ್. ನಟರಾಜ್, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು