ಭಾನುವಾರ, ಜನವರಿ 17, 2021
18 °C

PV Web Exclusive: ಹಾರಾಡುವ ಕನಸು ಬಿತ್ತುವ ಗಾಳಿಪಟ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಉತ್ತರಾಯಣ ಕಾಲದಲ್ಲಿ ಬಾನೆತ್ತರಕ್ಕೆ ಗಾಳಿಪಟಗಳನ್ನು ಹಾರಿಬಿಡುವ ಆಕಾಂಕ್ಷೆ ಗರಿಗೆದರುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಆಗಸದಲ್ಲಿ ಎತ್ತರೆತ್ತರಕ್ಕೆ ಏರುವ ಈ ಗಾಳಿಪಟ ಎಂದರೆ ಅದೇನೋ ಉತ್ಸಾಹ, ಕೌತುಕ. ಕೈಯಲ್ಲಿ ಅದರ ದಾರ ಸಿಕ್ಕಿದರೆ ಬಾಲ್ಯ ಮರುಕಳಿಸಿದ ನೆನಪು.

ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದೇಶದೆಲ್ಲೆಡೆ ಗಾಳಿಪಟಗಳ ಓಲಾಟ, ಕಾಳಗ, ಸ್ಪರ್ಧೆಗಳ ತುರುಸು ಸಾಮಾನ್ಯ. ಕೆಲವರಿಗೆ ಆಷಾಢದ ಸಂದರ್ಭದಲ್ಲಿ ಬೀಸುವ ತಂಗಾಳಿಗೆ ಗಾಳಿಪಟ ಹಾರಿಸುವ ಉಮೇದು. ಆದರೆ, ಈ ಬಾರಿ ‘ಕೋವಿಡ್‌ ಲಾಕ್‌ಡೌನ್‌’ ಎಂಬುದು ವರ್ಷವಿಡೀ ಗಾಳಿಪಟಗಳು ಹಾರಾಡುವಂತೆ ಮಾಡಿದೆ.

ಮನೆಯಲ್ಲೇ ಇರಬೇಕಾದ ಅನಿವಾರ್ಯ, ಪಾರ್ಕ್‌ಗಳೂ ಬಂದ್‌ ಆದ ಕಾರಣ ಹಲವು ಮಕ್ಕಳ ಚಿತ್ತ ಗಾಳಿಪಟದತ್ತ ಹೊರಳುವಂತೆ ಮಾಡಿದ್ದು ನಿಜ. ಹೀಗಾಗಿ ಕಳೆದ ಮಾರ್ಚ್ ಮಧ್ಯದಿಂದಲೇ ಗಾಳಿಪಟ ಮಾರುಕಟ್ಟೆ ಎತ್ತರಕ್ಕೆ ಏರಿದೆ.

ದೆಹಲಿಯಲ್ಲಿ ಕೊರೊನಾ ತೀವ್ರವಾಗಿದ್ದ ಕಾಲದಲ್ಲಿ ಮನೆಯಲ್ಲೇ ಉಳಿಯಬೇಕಾದ ಜನರು ಮನರಂಜನೆಗೆ ಮೊರೆ ಹೋಗಿದ್ದು ಗಾಳಿಪಟಕ್ಕೆ ಎಂಬ ಸಂಗತಿ ಮಾಧ್ಯಮಗಳಲ್ಲಿ ವರದಿಯಾಯಿತು. ಗಾಳಿಪಟ ಮಾರಾಟ ಪ್ರಮಾಣ ಹಿಂದೆಂದೂ ಕಾಣದಷ್ಟು ಏರಿಕೆಯಾಗಿರುವ ಸಂಗತಿಯನ್ನು ಅಲ್ಲಿಯ ವ್ಯಾಪಾರಸ್ಥರೂ ಖಚಿತ ಪಡಿಸಿದರು. ಶಾಲೆಗಳೂ ಬಂದ್‌ ಆಗಿರುವುದರಿಂದ ಮಕ್ಕಳು ಬೀದಿಬೀದಿಗಳಲ್ಲಿ ಗಾಳಿಪಟ ಹಿಡಿದು ತಿರುಗುವುದನ್ನು ಎಲ್ಲೆಡೆ ಈಗಲೂ ಕಾಣಬಹುದು.

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗುಜರಾತಿನಲ್ಲಿ ಏರ್ಪಡಿಸಲಾಗುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಈ ಬಾರಿ ಕೋವಿಡ್‌ ಕಾರಣದಿಂದ ರದ್ದು ಪಡಿಸಲಾಗಿದೆ. 1989ರಿಂದ ಆಚರಿಸಲಾಗುವ ಈ ಉತ್ಸವ ಹಲವು ಆಯಾಮಗಳಿಂದ ಮಹತ್ವ ಪಡೆದಿದೆ. ಇದರಲ್ಲಿ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದ 100ಕ್ಕೂ ಹೆಚ್ಚು ಗಾಳಿಪಟ ತಜ್ಞರು ಪಾಲ್ಗೊಂಡು ಕೌಶಲ ಮೆರೆಯುತ್ತಿದ್ದರು. ಈ ಬಾರಿ ಉತ್ಸವ ಇಲ್ಲದಿದ್ದರೂ ಮನೆಯ ಸುತ್ತಮುತ್ತ ಜನ ಸೇರದಂತೆ ಗಾಳಿಪಟ ಹಾರಿಸಲು ಅನುಮತಿ ನೀಡಲಾಗಿದೆ.

ಗುಜರಾತ್‌ನಲ್ಲಿ ಗಾಳಿಪಟ ತಯಾರಿಸುವ ಕೈಗಾರಿಕೆ ವರ್ಷವರ್ಷವೂ ವಿಸ್ತರಿಸುತ್ತಿದೆ. ಅಲ್ಲಿ ಸರ್ಕಾರವು ಪ್ರವಾಸೋದ್ಯಮ ಇಲಾಖೆ ವತಿಯಿಂದಲೇ ಪ್ರತಿವರ್ಷ ಈ ಉತ್ಸವ ಆಚರಿಸುತ್ತದೆ. ಇಲ್ಲಿ ಇದು ಸಾವಿರಾರು ಕುಟುಂಬಗಳಿಗೆ ‘ವರ್ಕ್‌ ಫ್ರಮ್‌ ಹೋಮ್‌’ ಒದಗಿಸುತ್ತಿದೆ. ಶೇ 70 ಉದ್ಯೋಗಿಗಳು ಮಹಿಳೆಯರು ಎನ್ನುವುದು ಗಮನಾರ್ಹ. ಸಂಕ್ರಾಂತಿಯ ವೇಳೆ ನಡೆಯುವ ಉತ್ಸವಕ್ಕಾಗಿ 2–3 ತಿಂಗಳ ಮುಂಚೆಯೇ ಗಾಳಿಪಟ ಮಾರುಕಟ್ಟೆಗೆ ಜೀವ ಬಂದಿರುತ್ತದೆ. 2017–18ರಲ್ಲಿ ಈ ಉದ್ಯಮದ ವಹಿವಾಟು ₹ 625 ಕೋಟಿಗೆ ತಲುಪಿದೆ. 1,28,000ರಷ್ಟು ಜನ ಇದನ್ನು ನಂಬಿ ಜೀವನ ನಡೆಸುತ್ತಾರೆ. ದೇಶದ ಗಾಳಿಪಟ ಉದ್ಯಮದ ಶೇ 40ರಷ್ಟು ಭಾಗ ಗುಜರಾತ್‌ನಲ್ಲೇ ಇದೆ.

ವಡೋದರಾ, ಸೂರತ್‌ಗಳಲ್ಲೂ ಗಾಳಿಪಟ ಉತ್ಸವಗಳು ನಡೆಯುತ್ತವೆ. ಉಳಿದಂತೆ ಬಿಹಾರ್‌, ಜಾರ್ಖಂಡ್‌, ಪಶ್ಚಿಮ ಬಂಗಾಳ, ರಾಜಸ್ಥಾನ, ತಮಿಳುನಾಡು, ಪಂಜಾಬ್‌ಗಳಲ್ಲಿಯೂ ಗಾಳಿಪಟ ಆಟ ಪ್ರಸಿದ್ಧ. ಸಂಕ್ರಾತಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಲಕ್ಷಗಟ್ಟಲೇ ಜನ ಗಾಳಿಪಟಗಳನ್ನು ಹಾರಿಸುತ್ತ ಆನಂದಿಸುವುದನ್ನು ಕಾಣಬಹುದು.

ಗಾಳಿಪಟ ಕಾಳಗಗಳೂ ಅಲ್ಲಲ್ಲಿ ಖ್ಯಾತ. ಇನ್ನೊಬ್ಬರ ಗಾಳಿಪಟ ತುಂಡರಿಸುವ ಸ್ಪರ್ಧೆಗಳನ್ನೂ ಕಾಣಬಹುದು. ಕಾಗದ ಹಾಗೂ ಬಿದಿರಿನ ಕಡ್ಡಿಗಳನ್ನು ಬಳಸಿ ಮಾಡುವ ಗಾಳಿಪಟಗಳು ದೇಶದಲ್ಲಿ ಹೆಚ್ಚು ಜನಪ್ರಿಯ. ಉಳಿದಂತೆ ರೇಷ್ಮೆ ವಸ್ತ್ರ, ಹಗುರವಾದ ಸಿಂಥೆಟಿಕ್‌ ವಸ್ತುಗಳು, ಪ್ಲಾಸ್ಟಿಕ್‌ ಫಿಲ್ಮ್‌, ಕಾಗದ, ದಾರ, ಬಿದಿರಿನ ಕಡ್ಡಿಗಳನ್ನು ಬಳಸಲಾಗುತ್ತದೆ. ರಾಜ್ಯದಲ್ಲೂ ಗಾಳಿಪಟ ಉತ್ಸವಗಳು ಅಲ್ಲಲ್ಲಿ ನಡೆಯುತ್ತವೆ. ಕಾಗದ ಹಾಗೂ ಬಿದಿರಿನ ಕಡ್ಡಿಗಳಿಂದ ಮಾಡಿದ ವಜ್ರಾಕಾರದ ಗಾಳಿಪಟಗಳೇ ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಸಿಗುತ್ತವೆ. ಮನೆಯಲ್ಲೇ ತಯಾರಿಸಿ ಮಕ್ಕಳಿಗೆ ಆಡಲು ಕೊಡುವವರೂ ಇದ್ದಾರೆ. ಪಂಜಾಬ್‌ನಲ್ಲಿ ಜನವರಿ 13ರಂದು ನಡೆಯಲಿರುವ ಲೋಹ್ರಿ ಹಬ್ಬದಲ್ಲೂ ಗಾಳಿಪಟಗಳಿಗೆ ವಿಶೇಷ ಸ್ಥಾನವಿದೆ.

ಈಚೆಗೆ ಮಕ್ಕಳ ನೆಚ್ಚಿನ ಕಾರ್ಟೂನ್‌ ಚಿತ್ರಗಳಿರುವ, ಆರಾಧ್ಯ ದೇವ–ದೇವಿಯರ, ಪೌರಾಣಿಕ ನಾಯಕರ, ಜನಪ್ರಿಯ ರಾಜಕಾರಣಿಗಳ ಚಿತ್ರ ಹೊತ್ತ ಗಾಳಿಪಟಗಳು ಮಾರುಕಟ್ಟೆಗಳಲ್ಲಿ ಟ್ರೆಂಡ್‌ ಆಗುತ್ತಿವೆ. ಕೈಟ್‌ ಫೆಸ್ಟಿವಲ್‌ಗಳಲ್ಲಿ ಕಲಾವಿದರ ಕೌಶಲಗಳಿಂದ ಮೂಡಿಬರುವ ನವನವೀನ ಮಾದರಿಯ ಗಾಳಿಪಟಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿರುತ್ತಾರೆ.

ಆವಿಷ್ಕಾರಗಳನ್ನು ಹುಟ್ಟು ಹಾಕಿದ ಬಾನಾಡಿ
ಈಚೆಗೆ ಸಂಪೂರ್ಣ ಮನರಂಜನೆಗಾಗಿಯೇ ಮೀಸಲಾಗಿರುವ ಗಾಳಿಪಟ ನೂರಾರು ವರ್ಷಗಳ ಹಿಂದೆ ಹಲವು ವೈಜ್ಞಾನಿಕ ಆವಿಷ್ಕಾರಗಳಿಗೆ ಮುನ್ನುಡಿ ಬರೆದಿತ್ತು.

ಮಿಂಚು ಉಂಟಾದಾಗ ವಿದ್ಯುತ್ ಪ್ರವಹಿಸುತ್ತದೆ ಎಂಬುದನ್ನು ತೋರಿಸಲು 1752ರಲ್ಲಿ ಬೆಂಝಮಿನ್‌ ಫ್ರಾಂಕಲಿನ್‌ ಗಾಳಿಪಟದ ಪ್ರಯೋಗ ಕೈಗೊಂಡಿದ್ದ. ರೈಟ್‌ ಸಹೋದರರು ವಿಮಾನ ಆವಿಷ್ಕಾರ ಮಾಡಲು ಮೂಲ ದ್ರವ್ಯ ಒದಗಿಸಿದ್ದು ಇದೇ ಗಾಳಿಪಟ. ಮಾನವನನ್ನು ಹೊತ್ತೊಯ್ಯಬಲ್ಲ ಹಲವು ಗಾಳಿಪಟ ಮಾದರಿಯ ವಿಮಾನಗಳನ್ನು ತಯಾರಿಸಿ ಇವರು ಪ್ರಯೋಗಕ್ಕೆ ಒಳಪಡಿಸಿದರು. 20ನೇ ಶತಮಾನದಲ್ಲಿ ಹವಾಮಾನ ಸಂಶೋಧನೆ, ವೈಮಾನಿಕ ತಂತ್ರಜ್ಞಾನ, ವೈರ್‌ಲೆಸ್‌ ತಂತ್ರಜ್ಞಾನ ಹಾಗೂ ಫೋಟೊಗ್ರಫಿಗಳ ಬೆಳವಣಿಗೆಯಲ್ಲಿ ಇವುಗಳ ಬಳಕೆಯಾಗಿತ್ತು. ಇದರ ಪ್ರಯೋಗಗಳ ಆಧಾರದ ಮೇಲೆಯೇ ಪ್ಯಾರಾಗ್ಲೈಡಿಂಗ್‌, ಪ್ಯಾರಾಚೂಟ್‌ಗಳ ಬಳಕೆಗಳೂ ಶುರುವಾದವು.

ವಿಚಕ್ಷಣೆ ಹಾಗೂ ಯುದ್ಧತಂತ್ರಗಳಲ್ಲೂ ಬಳಕೆಯಾಗುತ್ತಿದ್ದ ಗಾಳಿಪಟಗಳು 2ನೇ ವಿಶ್ವಯುದ್ಧದ ನಂತರ ಮಹತ್ವ ಕಳೆದುಕೊಂಡವು. ತಂತ್ರಜ್ಞಾನದ ಅಪಾರ ಬೆಳವಣಿಗೆಯಿಂದಾಗಿ ಗಾಳಿಪಟ ಈಗ ಮನರಂಜನೆಗಷ್ಟೇ ಸೀಮಿತವಾಗಿದೆ. ಆದರೆ ಈಗಲೂ ಮಕ್ಕಳಲ್ಲಿ ಆಗಸದಲ್ಲಿ ಹಾರಾಡುವ ಕನಸನ್ನು ಬಿತ್ತುವುದನ್ನು ಇದು ಬಿಟ್ಟಿಲ್ಲ.

ಗಾಳಿಪಟಗಳ ಕೆಲವು ವಿಶೇಷಗಳು

* ಅಫ್ಘಾನಿಸ್ಥಾನದಲ್ಲಿ ಕೈಟ್‌ ಫ್ಲೈಯಿಂಗ್‌ ಒಂದು ಜನಪ್ರಿಯ ಆಟ. ಪಾಕಿಸ್ತಾನದಲ್ಲಿ ಪತಂಗ್‌ ಬಾಜಿ ಎಂದೇ ಖ್ಯಾತ.

* ಜಪಾನ್‌, ಚೈನಾ, ಇಂಗ್ಲೆಂಡ್‌, ಮಲೇಷಿಯಾ, ಇಂಡೋನೇಷಿಯಾ, ತೈವಾನ್‌, ಥಾಯ್ಲೆಂಡ್‌ ಹಾಗೂ ಯುಎಸ್‌ಎಗಳಲ್ಲಿ ಕೈಟ್‌ ಮ್ಯೂಸಿಯಂಗಳೂ ಇವೆ.

* ಪಟದ ದಾರಕ್ಕೆ ಮಾಂಝಾ ಹಚ್ಚುತ್ತಾರೆ. ಅದನ್ನು ಗಾಜಿನ ಪುಡಿಯಿಂದ ಮಾಡುತ್ತಾರೆ. ಅದಕ್ಕೆ ಹಕ್ಕಿ ತಗುಲಿದರೆ ಅದರ ಪ್ರಾಣಕ್ಕೆ ಸಂಚಕಾರ. ಹೀಗಾಗಿ ಇದನ್ನು ಕೆಲವು ಕಡೆ ನಿಷೇಧಿಸಲಾಗಿದೆ.

ನೆನಪಿಡಬೇಕಾದ ಅಂಶಗಳು

* ಗಾಳಿಪಟದ ದಾರಗಳು ಪಕ್ಷಿಗಳಿಗೆ ಆಗಾಗ ಕಂಟಕ ತರುತ್ತಿರುವ ಪ್ರಸಂಗಗಳು ಬೆಳಕಿಗೆ ಬರುತ್ತಿವೆ. ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವ ರೂಢಿ ಇರುವುದರಿಂದ ಆ ಸಂದರ್ಭದಲ್ಲಿ ದಾರಕ್ಕೆ ಸಿಕ್ಕಿಹಾಕಿಕೊಂಡ ಪಕ್ಷಿಗಳನ್ನು ಸ್ಥಳೀಯರು, ಪರಿಸರಪ್ರಿಯರು ರಕ್ಷಿಸಿದ ಉದಾಹರಣೆಗಳು ಹಲವು ಇವೆ. ಹೀಗಾಗಿ ಪಕ್ಷಿಗಳಿಗೆ ಸಮಸ್ಯೆ ತಂದೊಡ್ಡದಂತೆ ಎಚ್ಚರಿಕೆ ವಹಿಸಬೇಕಿದೆ.

* ನೈಲಾನ್ ದಾರ, ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಿ ತಯಾರಿಸುವಂತಹ ಗಾಳಿಪಟ ಬಳಸುವುದನ್ನು ಕಡಿಮೆ ಮಾಡಬೇಕು. ತುಂಡಾಗುವ ಗಾಳಿಪಟಗಳು ಮರಗಳ ಕೊಂಬೆಗಳಲ್ಲಿ ಅಥವಾ ವಿದ್ಯುತ್ ತಂತಿಗಳಿಗೆ ಸಿಲುಕಿ ಕೊಳ್ಳುವುದರಿಂದ ಅಲ್ಲಿ ಹಾರಾಡುವ ಪಕ್ಷಿಗಳ ರೆಕ್ಕೆಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇರುತ್ತವೆ. ಹೀಗಾಗಿ ಬಯಲು ಪ್ರದೇಶಗಳಲ್ಲಿ ಗಾಳಿಪಟ ಹಾರಿಸುವುದು ಹೆಚ್ಚು ಸೂಕ್ತ.

* ಮನೆಗಳ ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮಕ್ಕಳ ಕಡೆ ಪೋಷಕರು ಗಮನ ಹರಿಸಬೇಕಾಗುತ್ತದೆ. ಗಾಳಿಪಟಗಳ ಕಡೆ ಗಮನ ಕೇಂದ್ರೀಕರಿಸುವುದರಿಂದ ಕಟ್ಟಡಗಳ ಮೇಲಿಂದ ಬಿದ್ದು ಅಪಾಯಕ್ಕೆ ಸಿಲುಕಿಕೊಳ್ಳುವ ಸಂಭವ ಇರುತ್ತದೆ.

*ವಿದ್ಯುತ್ ತಂತಿಯ ಸಮೀಪ ಗಾಳಿಪಟ ಹಾರಿಸಬಾರದು ಹಾಗೂ ವಿದ್ಯುತ್ ತಂತಿಗೆ ಸಿಲುಕಿಕೊಂಡ ಗಾಳಿಪಟ ಎಳೆಯಬಾರದು ಎಂಬ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಶಾರ್ಟ್ ಸರ್ಕೀಟ್‌ ಆಗುವ ಸಂಭವ ಇರುವುದರಿಂದ ಎಚ್ಚರಿಕೆ ವಹಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು