ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೆಳಗಬೇಕಿದೆ ಪಾರದರ್ಶಕತೆಯ ದೀಪ

ವ್ಯವಸ್ಥೆಯನ್ನು ಹಾಸುಹೊಕ್ಕಿರುವ ಭ್ರಷ್ಟಾಚಾರಕ್ಕೆ ಮೇಲಿನಿಂದ ಕೆಳಗಿನವರೆಗೆ ಬೇಕಿದೆ ಚಿಕಿತ್ಸೆ
Last Updated 29 ನವೆಂಬರ್ 2020, 12:36 IST
ಅಕ್ಷರ ಗಾತ್ರ

ಆತ ಕಟ್ಟಡ ಕಾರ್ಮಿಕ. ಇತ್ತೀಚೆಗಷ್ಟೇ ಮಗಳನ್ನು ಮದುವೆ ಮಾಡಿದ್ದ. ಕಾರ್ಮಿಕರ ಕಲ್ಯಾಣಕ್ಕಾಗಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರ ಸಂಘ, ಸದಸ್ಯರ ಮಕ್ಕಳ ವಿವಾಹದ ಖರ್ಚಿಗೆ ನೀಡುವ ಆರ್ಥಿಕ ನೆರವು ಪಡೆಯಲು ಆತನಿಗೆ ಮಗಳ ಮದುವೆ ಪ್ರಮಾಣಪತ್ರ ಬೇಕಿತ್ತು. ಉಪ ನೋಂದಣಾಧಿಕಾರಿ ಕಚೇರಿಗೆ ಮಗಳು ಮತ್ತು ಅಳಿಯನೊಂದಿಗೆ ಹೋದ ಅವರನ್ನು ಬಾಗಿಲ ಬಳಿಯೇ ತಡೆದ ಮಹಿಳೆಯೊಬ್ಬರು, ‘ಏನಾಗಬೇಕಿತ್ತು’ ಎಂದು ಪ್ರಶ್ನಿಸಿದಳು. ಈಕೆ ಇಲ್ಲಿಯ ಅಧಿಕಾರಿ ಇರಬೇಕೆಂದು ಭಾವಿಸಿದ ಆತ, ‘ಮ್ಯಾರೇಜ್ ಸರ್ಟಿಫಿಕೇಟ್ ಬೇಕಿತ್ತು’ ಎಂದರು.

‘ಹೌದಾ, ಹಾಗಾದರೆ ಇಲ್ಲಿ ಬನ್ನಿ’ ಎಂದು ಕಚೇರಿಯ ಹೊರಾಂಗಣಕ್ಕೆ ಕರೆದೊಯ್ದ ಮಹಿಳೆ, ‘ನೀವೊಂದು ಫಾರಂ ತುಂಬಿ, ಭಾವಚಿತ್ರ ಕೊಟ್ಟು ಹೋದರೆ ಸಾಕು. ಮಧ್ಯಾಹ್ನದ ಹೊತ್ತಿಗೆ ಸರ್ಟಿಫಿಕೇಟ್ ನಿಮ್ಮ ಕೈ ಸೇರುತ್ತೆ. ಇದಕ್ಕೆಲ್ಲಾ ₹3 ಸಾವಿರ ಆಗುತ್ತೆ. ನೀವು ತೀರಾ ಬಡವರಂತೆ ಕಾಣಿಸ್ತಿದ್ದೀರಿ. ಹಾಗಾಗಿ, ಐನೂರು ರೂಪಾಯಿ ಡಿಸ್ಕೌಂಟ್ ಮಾಡಿ ₹2,500 ಕೊಡಿ’ ಎಂದಳು. ಆಕೆಯ ಮಾತು ಕೇಳಿದ ಕಾರ್ಮಿಕ, ತನ್ನ ಕಿಸೆ ನೋಡಿಕೊಂಡಾಗ ಅಲ್ಲಿದ್ದದ್ದು ಐನೂರು ರೂಪಾಯಿ ಮೇಲೆ ಒಂದಿಷ್ಟು ಚಿಲ್ಲರೆ. ‘ಇದಕ್ಕೆಲ್ಲಾ ಹೆಚ್ಚೆಂದರೆ, ನೂರೈವತ್ತರಿಂದ ಇನ್ನೂರು ಶುಲ್ಕವಾಗಬಹುದು’ ಎಂದು ಪೇಪರ್‌ನಲ್ಲಿ ಕೆಲಸ ಮಾಡುವ ನಮ್ಮನೆ ಪಕ್ಕದವರೊಬ್ಬರು ಹೇಳಿದ್ರು. ನೀವು ನೋಡಿದ್ರೆ ₹2,500 ಫೀಸ್ ಕೇಳ್ತಿದ್ದೀರಾ’ ಎಂದು ಮಹಿಳೆಯನ್ನು ಪ್ರಶ್ನಿಸಿದ.

‘ನೀವು ನಾನು ಹೇಳಿದಷ್ಟು ಕೊಟ್ಟು ಹೋದರೆ, ಮಧ್ಯಾಹ್ನದ ಹೊತ್ತಿಗೆ ನಿಮ್ಮ ಸರ್ಟಿಫಿಕೇಟ್ ರೆಡಿ ಇರುತ್ತೆ. ಇಲ್ಲಾಂದ್ರೆ, ಅಲ್ನೋಡಿ ಜನರ ಕ್ಯೂ. ಬೆಳಿಗ್ಗೆಯಿಂದಲೇ ಬಂದು ನಿಂತಿದ್ದಾರೆ. ನೀವು ಅಲ್ಲಿ ನಿಂತು ಮಾಡಿಸಿಕೊಳ್ಳುವುದಕ್ಕೆ ಇವತ್ತಿಗಂತೂ ಆಗಲ್ಲ. ನೋಡಿ ನಿಮ್ಮಿಷ್ಟ. ಬೇಕಿದ್ರೆ ಇನ್ನೂ ಐನೂರು ರೂಪಾಯಿ ಕಮ್ಮಿ ಕೊಡಿ’ ಎಂದಳು ಆ ಮಹಿಳೆ. ಆಕೆಗೆ ಕೊಡಲು ಹಣವಿಲ್ಲದೆ ಅಸಹಾಯಕನಾಗಿದ್ದ ಕಾರ್ಮಿಕ ತನಗೆ ಪರಿಚಿತನಾಗಿದ್ದ ಪೇಪರ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕರೆ ಮಾಡಿದ. ಸ್ಥಳಕ್ಕೆ ಬಂದ ಆತ, ನಡೆದಿದ್ದೆಲ್ಲವನ್ನೂ ತಿಳಿದುಕೊಂಡ. ಬಳಿಕ ಆ ಮಹಿಳೆಗೆ ‘ನೀವು ಕಚೇರಿಯಲ್ಲಿ ಕೆಲಸ ಮಾಡುವವರೇ?’ ಎಂದು ಕೇಳಿದ. ‘ಹೌದು’, ಎಂದ ಆಕೆ, ‘ನೀವಾದ್ರೂ ಇವರಿಗೆ ಹೇಳಿ ಸಾರ್. ಬೇಗ ಸರ್ಟಿಫಿಕೇಟ್ ಸಿಗುತ್ತೆ ನೋಡಿ’ ಅಂದಳು.

ಆದಕ್ಕೆ ಆತ, ‘ನಾನು ನ್ಯೂಸ್ ಪೇಪರ್‌ನಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಸಾಹೇಬ್ರನ್ನು ಮೀಟ್ ಮಾಡ್ಬೇಕು. ಒಳಗೆ ಇದ್ದಾರಾ?’ ಎಂದಾಗ, ಆಕೆ ಹೌಹಾರಿದಳು. ತಕ್ಷಣ ತನ್ನ ಮೊಬೈಲ್ ಅನ್ನು ಕಿವಿಗೊತ್ತಿಕೊಂಡು ‘ಎರಡು ನಿಮಿಷ ಸಾರ್’ ಎಂದು ಸ್ಥಳದಿಂದ ನಾಪತ್ತೆಯಾದಳು. ಬಳಿಕ, ಆತ ಕಾರ್ಮಿಕನ ಮಗಳು ಮತ್ತು ಅಳಿಯನನ್ನು ಕಚೇರಿಯೊಳಗೆ ಕರೆದೊಯ್ದು ಅಲ್ಲಿದ್ದ ಅಧಿಕಾರಿಗೆ ಭೇಟಿ ಮಾಡಿಸಿ, ಅವರು ಬಂದಿದ್ದ ಉದ್ದೇಶ ತಿಳಿಸಿದ. ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಭರ್ತಿ ಮಾಡಿಕೊಟ್ಟು, ದಾಖಲೆಗಳನ್ನು ಅಟ್ಯಾಚ್ ಮಾಡಿ ಕೊಟ್ಟು, ‘ಕ್ಯೂನಲ್ಲಿ ನಿಲ್ಲಿ. ನಿಮ್ಮ ಸರದಿ ಬಂದಾಗ ಅಧಿಕಾರಿ ಕರೆಯುತ್ತಾರೆ’ ಎಂದು ಹೇಳಿ ಹೋದ. ಮಧ್ಯಾಹ್ನದ ಹೊತ್ತಿಗೆ ಅವರಿಗೆ ಮದುವೆ ಪ್ರಮಾಣಪತ್ರ ಸಿಕ್ಕಿತು. ಇದಕ್ಕೆ ತಗುಲಿದ ಶುಲ್ಕ 150 ರೂಪಾಯಿಯಷ್ಟೆ.

ಮೇಲಿನ ಘಟನೆ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರದ ಪರಿಯ ಸಣ್ಣ ನಿದರ್ಶನವಷ್ಟೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಪ್ರಭಾವ ಬೀರುವಂತಹ ಐಡೆಂಟಿಟಿ ಇಲ್ಲದವರ ಕೆಲಸಗಳು, ಟೇಬಲ್ ಕೆಳಗಿನ ವ್ಯವಹಾರವಿಲ್ಲದೆ ಕಾಲಮಿತಿಯಲ್ಲಿ ಸರಾಗವಾಗಿ ನಡೆಯುವುದು ತೀರಾ ಕಮ್ಮಿ. ವೃಕ್ಷವನ್ನು ಅಡಿಯಿಂದ ಮುಡಿಯವರೆಗೆ ತಬ್ಬಿಕೊಳ್ಳುವ ಬಳ್ಳಿಯಂತೆ ಲಂಚಗುಳಿತನ ನಮ್ಮ ವ್ಯವಸ್ಥೆಯನ್ನು ಹಾಸುಹೊಕ್ಕಾಗಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವರದಿಗಳು, ಸಮೀಕ್ಷೆಗಳು ಈ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಲೇ ಇವೆ. ಆದರೂ, ನಮ್ಮ ಭ್ರಷ್ಟ ವ್ಯವಸ್ಥೆ ಬಲಗೊಳ್ಳುತ್ತಲೇ ಇದೆ.

ಟ್ರಾನ್‌ಸ್ಪರೆನ್ಸಿ ಇಂಟರ್‌ನ್ಯಾಷನಲ್ ಎಂಬ ಭ್ರಷ್ಟಾಚಾರದ ಮೇಲಿನ ಕಣ್ಗಾವಲು ಸಂಸ್ಥೆಯು, ಏಷ್ಯಾ ಖಂಡದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಭಾರತ ಲಂಚಗುಳಿತನದಲ್ಲಿ ಅಗ್ರಸ್ಥಾನ ಪಡೆದಿದೆ. ಈ ಸಮೀಕ್ಷೆ, ಕೇವಲ ಇಲಾಖೆಗಳ ಮಟ್ಟದ ಭ್ರಷ್ಟಾಚಾರವನ್ನಷ್ಟೇ ಅಲ್ಲದೆ, ರಾಜಕೀಯದಲ್ಲಿ ಬೇರೂರಿರುವ ಲಂಚಾವತಾರಕ್ಕೂ ಭೂತಗನ್ನಡಿ ಹಿಡಿದಿದೆ. ಲೈಂಗಿಕ ಶೋಷಣೆಯೂ ಭ್ರಷ್ಟಾಚಾರದ ಭಾಗವಾಗಿರುವುದನ್ನು, ತಮ್ಮ ಕೆಲಸಕ್ಕಾಗಿ ಲಂಚ ನೀಡಲು ಹಣವಿಲ್ಲದವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ವ್ಯವಸ್ಥೆಯ ಮೇಲೆಯೂ ಸಮೀಕ್ಷೆ ಬೆಳಕು ಚೆಲ್ಲಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರದ ಅಮರ್ತ್ಯ ಸೇನ್ ಹೇಳುವಂತೆ, ‘ಭಾರತದಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ, ಇನ್ನೊಂದು ನರಳುವವರ ಭಾರತ’. ಭ್ರಷ್ಟಾಚಾರ ವ್ಯವಸ್ಥೆಯ ಬಲಿಪಶು ಸೇನ್ ಉಲ್ಲೇಖಿಸಿರುವ ನರಳುವವರ ಭಾರತ. ರಾಜಕೀಯ ಮತ್ತು ಅಧಿಕಾರಶಾಹಿಯ ಪ್ರಭಾವಳಿಯಿಂದಾಗಿ ಉಳ್ಳವರ ಭಾರತ ಮತ್ತಷ್ಟು ದಷ್ಟಪುಷ್ಟವಾಗುತ್ತಲೇ ಇದೆ.

2019ರಲ್ಲಿ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತವು 80ನೇ ಸ್ಥಾನ ಪಡೆದಿತ್ತು. 180 ದೇಶಗಳಲ್ಲಿ ನಡೆದಿದ್ದ ಈ ಸಮೀಕ್ಷೆಯಲ್ಲಿ ಹಿಂದಿನ ವರ್ಷಕ್ಕಿಂತ ಎರಡು ಸ್ಥಾನ (78) ಕುಸಿತವಾಗಿತ್ತು. ಸೂಚ್ಯಂಕದಲ್ಲಿ ದೇಶದ ಸ್ಥಾನ ಇಳಿಮುಖವಾಗುತ್ತಲೇ ಇದೆ. ದೇಶದ 20 ರಾಜ್ಯಗಳ 1.90 ಲಕ್ಷ ಜನರನ್ನು ಸಮೀಕ್ಷೆ ನಡೆಸಲಾಗಿತ್ತು.

ಭಾರತದಲ್ಲಿ ಇಬ್ಬರ ಪೈಕಿ ಒಬ್ಬರು ಲಂಚ ನೀಡಿದ್ದಾರೆ. ಭ್ರಷ್ಟಾಚಾರ ಭಾರತೀಯರ ಬದುಕಿನ ಭಾಗವಾಗಿದೆ. ಅದರಲ್ಲೂ ಸ್ಥಳೀಯ ಮಟ್ಟದ ನಾಗರಿಕ ಸೇವೆಗಳಲ್ಲಿ ಲಂಚಗುಳಿತನ ವ್ಯಾಪಕವಾಗಿದೆ. ಆಸ್ತಿ ನೋಂದಣಿ, ಭೂ ವ್ಯಾಜ್ಯ ಹಾಗೂ ಪೊಲೀಸ್, ತೆರಿಗೆ ಇಲಾಖೆ, ಸಾರಿಗೆ ಕಚೇರಿ, ಮುನ್ಸಿಪಲ್, ಕಾರ್ಪೊರೇಷನ್ ಹಾಗೂ ಸ್ಥಳೀಯ ಕಚೇರಿಗಳು ಭ್ರಷ್ಟಾಚಾರದ ಪ್ರಮುಖ ಕೇಂದ್ರಗಳು ಎಂಬುದನ್ನು ಸಮೀಕ್ಷೆ ಬೆರಳು ಮಾಡಿ ತೋರಿಸಿತ್ತು.

2016ರ ಕೇಂದ್ರ ಸರ್ಕಾರ ಕೈಗೊಂಡಿದ್ದ ನೋಟುಗಳ ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿ ದೇಶದಲ್ಲಿ ಆರ್ಥಿಕ ವ್ಯವಸ್ಥೆಯ ಮಹತ್ವದ ಬೆಳವಣಿಗೆಗಳು. ನೋಟ್ ಬ್ಯಾನ್ ಅನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದ ದಂಧೆಗೆ ನರೇಂದ್ರ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್ ಎಂದೇ ಬಣ್ಣಿಸಲಾಗಿತ್ತು. ಆ ಸ್ಟ್ರೈಕ್ಗೆ ಇದೀಗ ಬರೋಬ್ಬರಿ ನಾಲ್ಕು ವರ್ಷಗಳಾಗಿವೆ. ವಿಪರ್ಯಾಸವೆಂದರೆ, ಏಷ್ಯಾ ಖಂಡದ ರಾಷ್ಟ್ರಗಳ ಪೈಕಿ ಭಾರತದಲ್ಲೇ ಹೆಚ್ಚು ಲಂಚಗುಳಿತನ ಇದೆ ಎಂಬ ಅಂತರರಾಷ್ಟ್ರೀಯ ಸಮೀಕ್ಷೆ ದೇಶದ ಮಾನವನ್ನು ಹರಾಜು ಹಾಕಿದೆ.

ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ಮೊಳಗಿದ್ದ ದನಿಯನ್ನೇ ಏಣಿ ಮಾಡಿಕೊಂಡು ಅಧಿಕಾರ ಹಿಡಿದಿದ್ದ ಬಿಜೆಪಿಯ ಆಡಳಿತ ವೈಖರಿಗೂ, ಅದಕ್ಕೂ ಮುಂಚೆ ಅಧಿಕಾರದಲ್ಲಿದ್ದವರ ನಡುವೆ ಅಂತಹ ವ್ಯತ್ಯಾಸಗಳೇನೂ ಕಾಣುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಗಾಂಧಿ ಮಾರ್ಗದ ಯುದ್ಧ ಸಾರಿ, ದೇಶವನ್ನು ಬಡಿದೆಬ್ಬಿಸಿದ್ದ ಅಣ್ಣಾ ಹಜಾರೆ ಈಗ ಮೌನವ್ರತಕ್ಕೆ ಜಾರಿದ್ದಾರೆ. ಅವರ ತಂಡದಲ್ಲಿದ್ದ ಕೆಲವರು ಎಎಪಿ ಪಕ್ಷ ಕಟ್ಟಿ, ರಾಜಧಾನಿ ದೆಹಲಿಯನ್ನು ಆಳುತ್ತಿದ್ದಾರೆ. ಏನಾದರೂ ಬದಲಾವಣೆಯಾಗಬಹುದೇ ಎಂದು ಬೆರಗುಗಣ್ಣುಗಳಿಂದ ನೋಡುತ್ತಿದ್ದವರೀಗ, ಅದೇ ವ್ಯವಸ್ಥೆಗೆ ಹೊಂದಿಕೊಂಡು ಹೋಗುತ್ತಿದ್ದಾರೆ.

ದೇಶದಲ್ಲಿ ಭ್ರಷ್ಟಾಚಾರ ತಡೆಗಾಗಿ ಕೇಂದ್ರ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಅನೇಕ ಸಂಸ್ಥೆಗಳಿವೆ. ಆದರೆ, ಇವೆಲ್ಲವೂ ಆಳುವ ಪಕ್ಷಗಳ ಕೈಗೊಂಬೆಗಳಾಗಿವೆ. ಲಂಚದ ಪಿಡುಗಿಗೆ ಕಡಿವಾಣ ಹಾಕಿ, ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕಿದ್ದ ಈ ಸಂಸ್ಥೆಗಳು ಅಧಿಕಾರ ಹಿಡಿದವರು ತಮ್ಮ ಎದುರಾಳಿಗಳನ್ನು ಹಣಿಯುವ ಆಯುಧಗಳಾಗಿವೆ. ಇವುಗಳು ನಡೆಸಿದ ದಾಳಿಗಳು ಹಾಗೂ ಶಿಕ್ಷೆಯಾದ ಪ್ರಮಾಣ, ಈ ಸಂಸ್ಥೆಗಳ ಕರ್ತವ್ಯನಿಷ್ಠೆಯನ್ನು ಸಂಶಯದಿಂದ ನೋಡುವಂತಾಗಿದೆ. ಹಾಗಾಗಿ, ಜನರಿಗೂ ಇವುಗಳ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೇ ಪತ್ರಕರ್ತ ಪಿ. ಸಾಯಿನಾಥ್, ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂದು ಹೇಳಿರಬೇಕು. ಜನರಿಗೆ ತತ್ವಾರ ಎನಿಸುವ ಸಮಸ್ಯೆಗಳು ಆಯಕಟ್ಟಿನ ಜಾಗದಲ್ಲಿ ಕುಳಿತ ಅಧಿಕಾರಿಗಳಿಗೆ ಲಂಚ ಹೊಡೆಯುವ ಸಾಧನಗಳು. ಭ್ರಷ್ಟಾಚಾರದ ಕಬಂಧಬಾಹುಗಳು ನೆಲೆಯೂರುವುದು ಇಲ್ಲಿಂದಲೇ.

ಭ್ರಷ್ಟಾಚಾರ ಕೇವಲ ಒಂದು ಕೈ ಚಪ್ಪಾಳೆಯಲ್ಲ. ರಾಜಕಾರಣ ಮತ್ತು ಅಧಿಕಾರಶಾಹಿ ಸೃಷ್ಟಿಸುವ ಇಂತಹದ್ದೊಂದು ವ್ಯವಸ್ಥೆಗೆ ಜನರೂ ಅನಿವಾರ್ಯುವಾಗಿ ಕೈ ಜೋಡಿಸಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬದಲಾವಣೆ ಎಂಬುದು ಕೆಳಗಿನಿಂದಷ್ಟೇ ಅಲ್ಲ, ಏಕಕಾಲದಲ್ಲಿ ಮೇಲಿನಿಂದಲೂ ಆಗಬೇಕಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆ ಕಂಡಿರುವ ’ಆ್ಯಕ್ಟ್ –1978’ ಸಿನಿಮಾದಲ್ಲಿ ನಿರ್ದೇಶಕ ಹೇಳುವಂತೆ, ಜನಸಾಮಾನ್ಯನ ಸಾತ್ವಿಕ ಸಿಟ್ಟು ರಾಜಕಾರಣ ಮತ್ತು ಅಧಿಕಾರಶಾಹಿಯನ್ನು ತಟ್ಟಬೇಕಿದೆ. ಅವರೊಳಗೆ ಪರಿವರ್ತನೆಯ ದೀಪ ಬೆಳಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT