ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lal Bahadur Shastri: ಪಾಕ್ ಆಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದ ಧೀಮಂತ ನಾಯಕ

Last Updated 11 ಜನವರಿ 2023, 7:35 IST
ಅಕ್ಷರ ಗಾತ್ರ

"ನಾವು ಇಷ್ಟು ಕಾಲ ಸಾಕಷ್ಟು ಸಂಯಮದಿಂದಲೇ ನಡೆದುಕೊಳ್ಳುತ್ತಾ ಬಂದೆವು. ಆದರೆ ಈಗ ಮರಳಿನ ಗಡಿಯಾರದ ಸಮಯ ಮುಗಿಯುತ್ತಾ ಬಂದಿದೆ" ಎಂದು ಆಗಿನ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೇ 3, 1965ರಂದು ಸಂಸತ್ತಿನಲ್ಲಿ ಹೇಳಿದ್ದರು. ಅವರು ಯಥಾಸ್ಥಿತಿ ಸ್ಥಾಪನೆಯಾಗದ ಹೊರತು ರಣ್ ಆಫ್ ಕಚ್ ಪ್ರದೇಶದಲ್ಲಿ ಪಾಕಿಸ್ತಾನದೊಡನೆ ಕದನ ವಿರಾಮ ಸಾಧ್ಯವೇ ಇಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಸಂಸತ್ತಿನಲ್ಲಿ ದಿನ ಪೂರ್ತಿ ಚರ್ಚೆಗಳು ನಡೆದಿದ್ದವು.

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆ ಮಾತುಗಳನ್ನು ಆಡಿ, ಬಹುತೇಕ 58 ವರ್ಷಗಳಾದವು. ಆದರೆ ಆ ಮಾತುಗಳು ಭಾರತ - ಪಾಕಿಸ್ತಾನ ಮಧ್ಯದ ಸಮಸ್ಯೆಯನ್ನು ಇಂದಿಗೂ ಅನ್ವಯವಾಗುವಂತೆ ನೈಜವಾಗಿ ವಿವಿರಿಸಿದ್ದವು. "ಪಾಕಿಸ್ತಾನ ನಮಗೆ ಒಡ್ಡುತ್ತಿರುವ ಅಪಾಯ ನೈಜವಾದದ್ದು ಮತ್ತು ಅದು ಈ ಕ್ಷಣದಲ್ಲಿ ನಮ್ಮ ಮುಂದಿದೆ. ನಾವು ಈ ಅಪಾಯವನ್ನು ನಮ್ಮೆಲ್ಲ ಸಾಮರ್ಥ್ಯದಿಂದ ಎದುರಿಸಬೇಕು. ಹಾಗೆಂದು ಒಂದು ಪೂರ್ಣಪ್ರಮಾಣದ ಯುದ್ಧ ನಡೆದರೂ, ಅದು ಭಾರತ ಸರ್ಕಾರ ಪ್ರಜೆಗಳ ಅಭಿವೃದ್ಧಿಗಾಗಿ ಕೈಗೊಳ್ಳುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಂತೆ ತಡೆಯಲು ಸಾಧ್ಯವಿಲ್ಲ. ಒಂದು ವೇಳೆ ಯಾವ ಸರ್ಕಾರವಾದರೂ ತನ್ನ ಆಕ್ರಮಣಕಾರಿ ನೆರೆ ರಾಷ್ಟ್ರ ಬಲಪ್ರಯೋಗದಿಂದ ದೇಶದ ಭಾಗಗಳನ್ನು ಆಕ್ರಮಿಸಿಕೊಳ್ಳಲು ಅನುವು ಮಾಡಿದರೆ ಆ ಸರ್ಕಾರ ವ್ಯರ್ಥ" ಎಂದು ಶಾಸ್ತ್ರಿಯವರು ಹೇಳಿದ್ದರು.

ಆ ದಿನ ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ಶಾಸ್ತ್ರಿ ಅತ್ಯಂತ ಆತ್ಮವಿಶ್ವಾಸದಿಂದ, ದೃಢತೆಯಿಂದ ಮಾತನಾಡಿದ್ದರೂ, ಯುದ್ಧದಾಹವನ್ನು ತೋರಿರಲಿಲ್ಲ. ಅವರು ಪಾಕಿಸ್ತಾನ ಏನಾದರೂ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದರೆ ಅದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದರೂ, ಅವರು ಪಾಕಿಸ್ತಾನದ ಜನತೆಗೆ ಸ್ನೇಹ ಹಸ್ತ ಚಾಚಲು ಮರೆತಿರಲಿಲ್ಲ. ಭಾರತ ಪಾಕಿಸ್ತಾನದೊಡನೆ ಶಾಶ್ವತ ಸ್ನೇಹ ಮತ್ತು ಸೌಹಾರ್ದತೆಯನ್ನು ಬಯಸುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ಸಂಬಂಧವನ್ನು ಹಾಳು ಮಾಡುವ ಎಲ್ಲ ಸಮಸ್ಯೆಗಳನ್ನೂ ಗೌರವಯುತವಾಗಿ ಪರಿಹರಿಸಲು ಬಯಸುತ್ತದೆ ಎಂದಿದ್ದರು.

ಆದರೆ ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್ ತನ್ನ ಹೇಳಿಕೆಗಳಲ್ಲಿ ಆಕ್ರಮಣಶೀಲತೆಯನ್ನೇ ತೋರುತ್ತಿದ್ದರು. ಅದರ ಕುರಿತಾಗಿ ಮಾತನಾಡಿದ ಭಾರತದ ರಕ್ಷಣಾ ಸಚಿವ ವೈ ಬಿ ಚೌಹಾಣ್, "ಮಾತುಗಳಿಗೆ ಮೂಳೆ ಮುರಿಯುವ ಸಾಮರ್ಥ್ಯವಿಲ್ಲ. ನಾವು ಬಾಯಿ ಮಾತಿಗೆ ಹೆದರುವವರಲ್ಲ" ಎಂದು ಪ್ರತ್ಯುತ್ತರ ನೀಡಿದ್ದರು. ಕೆಲವು ದಿನಗಳ ಹಿಂದಿನ ತನ್ನ ರೇಡಿಯೋ ಭಾಷಣದಲ್ಲಿ ಅಯೂಬ್ ಖಾನ್ ಭಾರತದ ವಿರುದ್ಧ ಪೂರ್ಣ ಪ್ರಮಾಣದ ಯುದ್ಧದ ಬೆದರಿಕೆ ಒಡ್ಡಿದ್ದರು. ಇದರ ಕುರಿತು ಪ್ರತಿಕ್ರಿಯಿಸಿದ ಚೌಹಾಣ್, ಭಾರತ ಸರ್ಕಾರ ಕಾರ್ಯಾಚರಣಾ ವಿಚಾರಗಳಲ್ಲಿ ಸೇನೆಯ ನಿರ್ಧಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ, ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೇನೆಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ನಾಗರಿಕ ವಿಚಾರದಲ್ಲಿ ಅಧಿಕಾರಿಗಳು ನಿರ್ಣಯ ಕೈಗೊಳ್ಳುತ್ತಾರೆ ಎಂದಿದ್ದರು.

ಪ್ರಧಾನ ಮಂತ್ರಿ ಶಾಸ್ತ್ರಿ ಮತ್ತು ಭಾರತ ಶಾಂತಿ ಮತ್ತು ದ್ವಿಪಕ್ಷೀಯ ಮಾತುಕತೆಗೆ ನೀಡಿದ ಮಹತ್ವವನ್ನು 1965ರ ಆ ಪ್ರಕ್ಷುಬ್ಧ ಸಮಯದಲ್ಲಿ ಸೋವಿಯತ್ ಒಕ್ಕೂಟ ಶ್ಲಾಘಿಸಿತ್ತು. "ಸೋವಿಯತ್ ನಾಯಕರು ಭಾರತದ ಪ್ರಧಾನ ಮಂತ್ರಿ ಗಡಿ ವಿವಾದದ ಪರಿಹಾರಕ್ಕಾಗಿ ಶಾಂತಿಯುತ ಮಾರ್ಗವನ್ನು ಬಯಸುವುದನ್ನು ಸೋವಿಯತ್ ನಾಯಕರು ಸಂಪೂರ್ಣವಾಗಿ ಶ್ಲಾಘಿಸಿದ್ದಾರೆ. ಅವರು ಗಡಿ ಸಮಸ್ಯೆಗಳಿಗೆ ಮಿಲಿಟರಿ ಪರಿಹಾರಕ್ಕೆ ವಿರುದ್ಧವಾಗಿದ್ದಾರೆ. ಸೋವಿಯತ್ ಒಕ್ಕೂಟದಲ್ಲಿ ಪಾಕಿಸ್ತಾನದ ಇಂತಹ ಆಕ್ರಮಣಕಾರಿ ನಡೆಯನ್ನು ಮೂರನೇ ಶಕ್ತಿಗಳು ಪ್ರೇರೇಪಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸೋವಿಯತ್ ನಾಯಕರು ಭಾರತದ ಜನರಾಗಲಿ, ಪಾಕಿಸ್ತಾನದ ಜನರಾಗಲಿ ಯುದ್ಧ ಬೇಕೆಂದು ಬಯಸುವುದಿಲ್ಲ ಎಂದು ನಂಬಿದ್ದಾರೆ" ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು.

ಕಳೆದ ದಶಕಗಳಲ್ಲಿ ಭಾರತ - ಪಾಕಿಸ್ತಾನಗಳ ಗಡಿ ವಿವಾದದ ಕುರಿತ ಚರ್ಚೆಗಳು, ಸಮಸ್ಯೆಗಳು ಹಾಗೂ ರಾಜತಾಂತ್ರಿಕ ಮಾತುಕತೆಗಳು ಬಹುತೇಕ ಸತತವಾಗಿ ಸಾಗಿ ಬಂದಿವೆ. 2022ರಲ್ಲಿ ನವದೆಹಲಿಯ ತೀನ್ ಮೂರ್ತಿ ಭವನ್ ಸಂಕೀರ್ಣದಲ್ಲಿ ಸ್ಥಾಪಿಸಲಾದ ಪ್ರಧಾನ್ ಮಂತ್ರಿ ಸಂಗ್ರಹಾಲಯ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು 1965ರ ಯುದ್ಧದ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ವಿದೇಶಾಂಗ ನೀತಿ ತಜ್ಞರಿಗೆ ಹಾಗೂ ಯವ ಜನತೆಗೆ ಇದು ರಾಜತಾಂತ್ರಿಕತೆಯ ಹಾದಿಯನ್ನು ತೋರುತ್ತದೆ.

ಅಮೆರಿಕಾದ ಮಿಲಿಟರಿ ಉಪಕರಣಗಳ ಬಳಕೆ:

1965ರ ಯುದ್ಧ ಪೂರ್ವ ತಿಂಗಳುಗಳಲ್ಲಿ, ಭಾರತ ಅಮೆರಿಕಾದ ವಿದೇಶಾಂಗ ಇಲಾಖೆಯೊಡನೆ ಮಾತನಾಡುತ್ತಾ, ಅಮೆರಿಕಾ ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಎಲ್ಲ ಯುದ್ಧೋಪಕರಣಗಳು, ಆಯುಧಗಳು ಭಾರತದ ವಿರುದ್ಧ ಉಪಯೋಗಿಸಲ್ಪಡುತ್ತಿವೆ ಎಂದು ತಿಳಿಸಲು ಎಲ್ಲ ಪ್ರಯತ್ನ ನಡೆಸಿತು. ನವದೆಹಲಿಯ ಯುಎಸ್ ಮಿಲಿಟರಿ ಏಡ್ ಮಿಷನ್‌ನ ಬ್ರಿಗೇಡಿಯರ್ ಜನರಲ್ ಟಿಬ್ಬೆಟ್ಸ್ ಹಾಗೂ ಕರ್ನಲ್ ವಿಲಿಯಮ್ಸ್ ಕಚ್ ಮತ್ತು ಸಿಂಧ್ ಪ್ರಾಂತ್ಯದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಭಾರತದ ಆರೋಪಗಳ ಕುರಿತು ಪರಿಶೀಲನೆ ನಡೆಸಿದರು. ಅವರಿಗೆ ಪಾಕಿಸ್ತಾನಿಯರು ಅಮೆರಿಕಾ ನೀಡಿದ ಟ್ಯಾಂಕ್‌ಗಳನ್ನು ಭಾರತದ ವಿರುದ್ಧ ಉಪಯೋಗಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿತ್ತು.

ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅತ್ಯಂತ ವಿಶ್ವಾಸದಿಂದ, ದೃಢತೆಯಿಂದ ನಡೆದುಕೊಂಡಿದ್ದರು. ಗಾಂಧೀವಾದಿಯಾಗಿದ್ದ ಅವರು ಸಂಸತ್ತಿನಲ್ಲಾಗಲಿ, ಹೊರಗಡೆಯಾಗಲಿ ಅವರು ಯುದ್ಧದಾಹಿಯಂತೆ ಮಾತನಾಡಿರಲಿಲ್ಲ. ಶಾಂತಿಸ್ಥಾಪನೆಯ ವಿಚಾರ ಬಂದಾಗ, ಶಾಸ್ತ್ರಿ ಓರ್ವ ನೈಜ ಗಾಂಧೀವಾದಿಯಾಗಿದ್ದು, ಅಹಿಂಸೆಯನ್ನು ಬಲವಾಗಿ ನಂಬಿದ್ದರು. ಆದರೆ ವಿದೇಶಾಂಗ ನೀತಿಯ ವಿಚಾರದಲ್ಲಿ ಅವರು ನೆಹರೂವಾದಿಯಾಗಿದ್ದರು.

ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಸೋವಿಯತ್ ಮುಖ್ಯಸ್ಥ ಅಲೆಕ್ಸಿ ಕೋಸಿಗಿನ್ ಜೊತೆಗಿನ 1965ರ ಬೇಸಿಗೆಯಲ್ಲಿ ಸುದೀರ್ಘ ಸಂವಾದ ನಡೆಸಿದರು. ಆಗ ಕಚ್ ಗಡಿಯಲ್ಲಾಗಲಿ, ಕಾಶ್ಮೀರದಲ್ಲಾಗಲಿ ಪಾಕಿಸ್ತಾನ ತೋರುತ್ತಿರುವ ಆಕ್ರಮಣಶೀಲತೆ ಆಲಿಪ್ತ ನೀತಿಗೆ ಮಾರಕವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಅವರು ಕೇವಲ ಭಾರತ - ಪಾಕ್ ಗಡಿ ವಿಚಾರದ ಬಗ್ಗೆ ಮಾತ್ರವೇ ಮಾತನಾಡಿರಲಿಲ್ಲ. ಅವರು ವಿಯೆಟ್ನಾಂ ವಿಚಾರ ಮತ್ತು ನಿರಸ್ತ್ರೀಕರಣದ ಕುರಿತೂ ಮಾತನಾಡಿದ್ದರು. ಅವರ ಮುಂದಿದ್ದ ದೊಡ್ಡ ಚಿತ್ರಣ ಜಾಗತಿಕ ಶಾಂತಿ ಸ್ಥಾಪನೆ ಮತ್ತು ಎಲ್ಲ ಮಾನವರಿಗೂ ಶಾಂತಿ ಒದಗಿಸುವ ಬಹುಪಕ್ಷೀಯ ಪ್ರಯತ್ನವಾಗಿತ್ತು.

ಜಾಗತಿಕ ಶಾಂತಿಗೆ ಮಹತ್ವ:

ಪ್ರಧಾನಿ ಶಾಸ್ತ್ರಿ 1965ರ ಮೇ 13ರಂದು ಸೋವಿಯತ್ ಪ್ರಧಾನಿಯವರಿಗೆ ಭಾರತೀಯ ರಾಯಭಾರ ಕಚೇರಿಯಲ್ಲಿ ಭೋಜನ ಕೂಟ ಏರ್ಪಡಿಸಿದ್ದರು. ಕೋಸಿಗಿನ್ ಅವರು ಭಾರತ ಮತ್ತು ಸೋವಿಯತ್ ಒಕ್ಕೂಟ ಹಲವು ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಸಮಾನ ಧೋರಣೆ ಹೊಂದಿದ್ದು, ಎರಡೂ ರಾಷ್ಟ್ರಗಳೂ ಶಾಂತಿಯುತ ಪರಿಹಾರವನ್ನು ಬಯಸುತ್ತಿವೆ ಎಂದಿದ್ದರು. ಶಾಸ್ತ್ರಿಯವರು ಭಾರತ ಮತ್ತು ರಷ್ಯಾದ ಜನತೆ ಒಂದಾಗಿ ಜಾಗತಿಕ ಶಾಂತಿಯನ್ನು ಪ್ರತಿಪಾದಿಸಲು ಬಹುದೊಡ್ಡ ಶಕ್ತಿಯಾಗುತ್ತಾರೆ ಎಂದಿದ್ದರು.

ಈ ಘಟನೆಗಳೆಲ್ಲ ವಿಯೆಟ್ನಾಂ ಮೇಲೆ ಅಮೆರಿಕಾದ ಯುದ್ಧದ ಸಂದರ್ಭದಲ್ಲಿ ನಡೆದಿದ್ದವು. ಆ ಸಮಯದಲ್ಲಿ ಅಮೆರಿಕಾದ ವಿಮಾನಗಳು ಉತ್ತರ ವಿಯೆಟ್ನಾಂನ ಹಳ್ಳಿಗಳ ಮೇಲೆ ಬಾಂಬ್‌ಗಳ ಸುರಿಮಳೆಗೈಯುತ್ತಿದ್ದವು. ಸೈಗಾನ್ ಮೇಲೆ ಇಳಿಯುತ್ತಿದ್ದ ಪ್ಯಾರಾ ಟ್ರೂಪರ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿತ್ತು. ಹಾಗಿದ್ದರೂ, 1965ರ ಭಾರತ - ಪಾಕ್ ಯುದ್ಧದ ಅವಧಿಯಲ್ಲಿ ಶಾಸ್ತ್ರಿ ಮತ್ತು ಅವರ ಸರ್ಕಾರ ತಳೆದ ಧೋರಣೆ ಶ್ಲಾಘನೀಯವಾಗಿತ್ತು. ಜಾಗತಿಕ ರಾಜತಾಂತ್ರಿಕ ಮಾತುಕತೆಗಳು ಸಹ ಪ್ರಧಾನಿಯಾಗಿ ಶಾಸ್ತ್ರಿಯವರು ಗಳಿಸಿದ್ದ ಜನಪ್ರೀತಿ ಮತ್ತು ಅವರ ಕ್ಯಾಬಿನೆಟ್ ಸಹಯೋಗಿಗಳಾದ ಸರ್ದಾರ್ ಸ್ವರಣ್ ಸಿಂಗ್ (ವಿದೇಶಾಂಗ ಸಚಿವ) ಮತ್ತು ವೈ ಬಿ ಚೌಹಾಣ್ (ರಕ್ಷಣಾ ಸಚಿವ) ಅವರನ್ನೂ ಶ್ಲಾಘಿಸಿದ್ದವು.

1965ರ ಸೆಪ್ಟೆಂಬರ್ 4ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ (ಯುಎನ್‌ಎಸ್‌ಸಿ) ತಕ್ಷಣವೇ ಕಾಶ್ಮೀರದಲ್ಲಿ ಕದನ ವಿರಾಮಕ್ಕೆ ಕರೆ ನೀಡಿ, ಭಾರತ ಮತ್ತು ಪಾಕಿಸ್ತಾನಗಳಿಗೆ ಕದನ ವಿರಾಮವನ್ನು ಗೌರವಿಸುವಂತೆ ಆಗ್ರಹಿಸಿತು. ನಿಮ್ಮ ನಿಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದಿತು. ಭಾರತ ಔಪಚಾರಿಕವಾಗಿ ಪಾಕಿಸ್ತಾನವನ್ನು ಆಕ್ರಮಣಶೀಲ ಎಂದು ಕರೆಯುವಂತೆ, ಅದಕ್ಕೆ ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಎಲ್ಲ ಭಾಗಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಹೇಳುವಂತೆ ಮನವಿ ಮಾಡಿತ್ತು.

ಭದ್ರತಾ ಸಮಿತಿಯ 11 ರಾಷ್ಟ್ರಗಳ ಸಭೆಯಲ್ಲಿ ಭಾರತದ ಪ್ರತಿನಿಧಿ ಜಿ ಪಾರ್ಥಸಾರಥಿ "ಸಮಿತಿ ಪಾಕಿಸ್ತಾನದ ವಂಚಕ ಮಾತುಗಳಿಗೆ ಮರುಳಾಗಿ, ಯಾವುದೇ ಕಾರಣಕ್ಕೂ ತಾನು ಕ್ರಮ ಕೈಗೊಳ್ಳುವುದರಿಂದ ವಿಮುಖವಾಗಬಾರದು. ಪಾಕಿಸ್ತಾನವನ್ನು ಅದರ ಪ್ರಜ್ಞೆಗೆ ಬರುವಂತೆ ಮಾಡುವುದು ಸಮಿತಿಯ ಕರ್ತವ್ಯ. ಭಾರತ ಪಾಕಿಸ್ತಾನ ಸಮಸ್ಯೆ 17 ವರ್ಷಗಳಿಂದ ಸಮಿತಿಯ ಅಜೆಂಡಾದಲ್ಲಿದ್ದು, ಇದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ. ಅಷ್ಟೇ ಅಲ್ಲದೆ, ಪಾಕಿಸ್ತಾನ ಸತತವಾಗಿ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದರೂ, ಸಮಿತಿ ಪಾಕಿಸ್ತಾನ ಆಕ್ರಮಣಶೀಲವಾಗಿದೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ" ಎಂದಿದ್ದರು.

ಭಾರತದ ಮಾಧ್ಯಮಗಳು ಸೆಪ್ಟೆಂಬರ್ 5ರಂದು ಭಾರತ ಪಾಕಿಸ್ತಾನದ ಯುದ್ಧ ಸಾಧ್ಯತೆಗಳ ಬಗ್ಗೆ ವರದಿ ಮಾಡಿರಲಿಲ್ಲ. ಅವುಗಳು ರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆಗೆ ಹೆಚ್ಚಿನ ಒತ್ತು ನೀಡಿದ್ದವು. ಶಿಕ್ಷಕರಿಗೆ ತನ್ನ ಸಂದೇಶದಲ್ಲಿ ಹಿರಿಯ ತತ್ವಜ್ಞಾನಿ - ಮುತ್ಸದ್ದಿ ರಾಧಾಕೃಷ್ಣನ್ ಕೊನೆಯಲ್ಲಿ ನಾವೇ ಜಯಶಾಲಿಗಳಾಗುತ್ತೇವೆ ಎಂದಿದ್ದರು. ಅವರು ವಿಶ್ವಸಂಸ್ಥೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು ಥಾಂಟ್ ತನ್ನ ವರದಿಯಲ್ಲಿ ಕಾಶ್ಮೀರದ ಆಗಿನ ಸಮಸ್ಯೆಗೆ ಮೂಲ ಕಾರಣ ಪಾಕಿಸ್ತಾನ ನಡೆಸಿದ ಅಪಾರ ಪ್ರಮಾಣದ ಒಳನುಸುಳುವಿಕೆ ಎಂದಿದ್ದರು. ಅವರು ಆ ಸಂದರ್ಭದಲ್ಲಿ ಪಾಕಿಸ್ತಾನ ಸೃಷ್ಟಿಸಿದ ಪರಿಸ್ಥಿತಿಗೆ ಭಾರತ ಉತ್ತರಿಸುತ್ತಿದೆ ಅಷ್ಟೇ ಎಂದೂ ದಾಖಲಿಸಿದ್ದರು.

ಯುದ್ಧ ನಡೆದ ಐವತ್ತೆಂಟು ವರ್ಷಗಳ ಬಳಿಕವೂ, ಆಗಿನ ನಿರ್ಣಯಗಳು, ವರದಿಗಳು, ಭಾಷಣಗಳು, ಘೋಷಣೆಗಳನ್ನು ಗಮನಿಸಿದಾಗ ರಾಜತಾಂತ್ರಿಕ ಮತ್ತು ಮಿಲಿಟರಿ ವಿಚಾರಗಳಲ್ಲಾದ ಅಪಾರ ಬದಲಾವಣೆಗಳು ಕಾಣಿಸುತ್ತವೆ. ಆ ಯುದ್ಧದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಹುಮುಖ್ಯ ಪಾತ್ರವೂ ಗೋಚರಿಸುತ್ತದೆ.

"ಯುದ್ಧದಲ್ಲಿ 73 ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ, ನಮ್ಮ 35 ಸಮರ ವಿಮಾನಗಳನ್ನು ಕಳೆದುಕೊಂಡೆವು" ಎಂದು ಭಾರತ ಹೇಳಿದರೆ, "ಭಾರತದ 104 ಯುದ್ಧ ವಿಮಾನಗಳನ್ನು ಕೆಡವಿದ್ದೇವೆ, ನಮ್ಮ 19 ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ" ಎಂದು ಪಾಕಿಸ್ತಾನ ಹೇಳಿಕೊಂಡಿತು. ಕಾಡಾಕಾಡಿ ಯುದ್ಧವಾಯಿತಾದರೂ, ಕೊನೆಗೆ 1965ರ ಸೆ.23ರಂದು ಕದನ ವಿರಾಮ ಘೋಷಿಸಲಾಯಿತು.

"ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮಾಸ್ಕೋ ಭೇಟಿಯ ಎರಡನೇ ದಿನ ಐತಿಹಾಸಿಕ ಕೆಂಪು ಚೌಕದಲ್ಲಿ ಲೆನಿನ್ ಅವರಿಗೆ ಗೌರವ ನೀಡುವ ಮೂಲಕ ಆರಂಭವಾಯಿತು. ಕ್ರೆಮ್ಲಿನ್ನಿನ ಸ್ಪಾಸ್ ಗೇಟ್ ಮೂಲಕ ಹೋದ ಶಾಸ್ತ್ರಿಯವರು ಕೆಂಪು ಚೌಕದ ಗ್ರ್ಯಾನೈಟ್ ಸಮಾಧಿಯ ಮುಂದೆ ಒಂದು ನಿಮಿಷ ಮೌನವಾಗಿ ನಿಂತಿದ್ದರು. ರಷ್ಯಾದ ಟ್ಯುಲಿಪ್‌ಗಳು ಶಾಸ್ತ್ರಿಯವರ ಸಂದೇಶದೊಡನೆ ಅಲ್ಲಿದ್ದವು. 'ಭಾರತದ ನೈಜ ಸ್ನೇಹಿತ, ಗ್ರೇಟ್ ವಿ ಐ ಲೆನಿನ್ ಅವರ ನೆನಪಿಗೆ ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಂದ ಅರ್ಪಣೆ' ಎಂದು ಅದರಲ್ಲಿ ಬರೆದಿತ್ತು.

ಇಂದು ಶಾಸ್ತ್ರಿಯವರ ಸ್ಮೃತಿ ದಿನದಂದು ಅವರ ದೃಢ ಸಂಕಲ್ಪ ಶಕ್ತಿ ಮತ್ತು ನಿರ್ಧಾರಗಳನ್ನು ನಾವು ಸ್ಮರಿಸಬೇಕಿದೆ. ಅವರ ನಿಧನಾನಂತರ ಅವರ ಸಾಧನೆಗಳು ಮತ್ತು ರಾಷ್ಟ್ರಸೇವೆಯ ದ್ಯೋತಕವಾಗಿ 1966ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT