ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಳೆಗುಂದಿದ ಮಾಹಿತಿ ಹಕ್ಕು

ಮಾಹಿತಿ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅವಿಶ್ವಾಸ, ಅನುಮಾನ ಏಕೆ?
Last Updated 26 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರತಿವರ್ಷ ಸೆಪ್ಟೆಂಬರ್ 28ನೆಯ ತಾರೀಕನ್ನು‘ಅಂತರರಾಷ್ಟ್ರೀಯ ಮಾಹಿತಿ ದಿನ’ವನ್ನಾಗಿ ಆಚರಿಸಬೇಕೆಂಬ ನಿರ್ಣಯವನ್ನು ಯುನೆಸ್ಕೊ 2015ರಲ್ಲಿ ಕೈಗೊಂಡಿತು. ಇದಕ್ಕೂ ಮುನ್ನ ಬಲ್ಗೇರಿಯಾ, ದಕ್ಷಿಣ ಆಫ್ರಿಕಾದಂತಹ ಕೆಲವು ರಾಷ್ಟ್ರಗಳಲ್ಲಿ 2002ರಿಂದ ಈ ದಿನವನ್ನು
‘ರೈಟ್ ಟು ನೊ ಡೆ’ (Right to know day) ಎಂದು ಕೆಲವು ಸಂಸ್ಥೆಗಳು ಆಚರಿಸು ತ್ತಿದ್ದವು. ಸರ್ಕಾರದ ಬಳಿ ಇರುವ ಮಾಹಿತಿ ಸಾರ್ವಜನಿಕ ರಿಗೆ ಸುಲಭವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ.

ಸಾರ್ವಜನಿಕರ ಒತ್ತಾಯ ಮತ್ತು ಹೋರಾಟದ ಫಲವಾಗಿ 17 ವರ್ಷಗಳ ಹಿಂದೆ ನಮ್ಮ ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸಿತು. ಆರಂಭಿಕ ವರ್ಷ ಗಳಲ್ಲಿ ನಾಗರಿಕರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕ ಪ್ರಾಧಿಕಾರದ ಮೇಲೆ ಒತ್ತಡ ತಂದು ಆಡಳಿತದಲ್ಲಿ ಪಾರದರ್ಶಕತೆಗೆ ಕಾರಣರಾಗಿದ್ದರು. ಸರ್ಕಾರದ ಕಾರ್ಯವೈಖರಿ, ಸಾರ್ವ ಜನಿಕ ಹಣದ ದುರುಪಯೋಗ, ಯೋಜನೆಗಳ ಅನುಷ್ಠಾನದಲ್ಲಿ ಲೋಪದೋಷದಂತಹ ಸಂಗತಿಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದ್ದರು. ಮಾಹಿತಿ ಹಕ್ಕು ಕಾಯ್ದೆಯ ಕಾರಣದಿಂದಾಗಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಹೊರಬಂದಿದ್ದವು. ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳು ಸಹ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದವು. ಮಾಹಿತಿ ಬಯಸಿ ಸಾರ್ವಜನಿಕರಿಂದ ಅರ್ಜಿಗಳ ಮಹಾಪೂರವೇ ಬರುತ್ತಿತ್ತು.

ಆದರೆ ಕಳೆದ ಐದಾರು ವರ್ಷಗಳಿಂದ ಮಾಹಿತಿ ಹಕ್ಕಿನ ಬಗ್ಗೆ, ವಿಶೇಷವಾಗಿ ಕಾಯ್ದೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಮಾಹಿತಿ ಆಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅವಿಶ್ವಾಸ, ಅನುಮಾನ ಮತ್ತು ಜುಗುಪ್ಸೆ ವ್ಯಕ್ತವಾಗುತ್ತಿದೆ. ಮಾಹಿತಿ ಆಯೋಗಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಅಪಾಯಕಾರಿ ಬೆಳವಣಿಗೆಗೆ ಮುಖ್ಯ ಕಾರಣ ಸರ್ಕಾರ ಹಾಗೂ ಮಾಹಿತಿ ಆಯೋಗದ ಕಾರ್ಯವೈಖರಿ.

ಕಾಯ್ದೆಯ ಯಶಸ್ಸು ಸಾರ್ವಜನಿಕ ಮಾಹಿತಿ ಅಧಿ ಕಾರಿಗಳು ಮತ್ತು ಮಾಹಿತಿ ಆಯುಕ್ತರನ್ನು ಅವಲಂಬಿಸಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಕಚೇರಿಯ ಪ್ರಥಮ ದರ್ಜೆ ಸಹಾಯಕ, ಕೇಸ್‍ವರ್ಕರ್‌ ಹುದ್ದೆಯಲ್ಲಿರುವವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಹಲವು ಸಂದರ್ಭ ಗಳಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಸಹ ಮಾಹಿತಿ ಅಧಿಕಾರಿಗಳು ಭಾಗವಹಿಸುತ್ತಿಲ್ಲ.

ಕಾಯ್ದೆಯ ಪ್ರಕಾರ, ಸಾರ್ವಜನಿಕ ಪ್ರಾಧಿಕಾರವು ಕೆಲವು ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ತನ್ನ ವೆಬ್‍ಸೈಟ್‍ನಲ್ಲಿ ಸ್ವಯಂಪ್ರೇರಿತವಾಗಿ ಅಳವಡಿಸಬೇಕು ಹಾಗೂ ಪ್ರಕಟಿಸಬೇಕು. ಸಾರ್ವಜನಿಕ ಪ್ರಾಧಿಕಾರಗಳು ಇದನ್ನು ಮಾಡಿದ್ದರೆ ಮಾಹಿತಿ ಹಕ್ಕು ಇವತ್ತಿನ ದುಃಸ್ಥಿತಿಗೆ ಬರುತ್ತಿರಲಿಲ್ಲ. ಕೆಲವು ಇಲಾಖೆಗಳು ಕೈಪಿಡಿ ಪ್ರಕಟಿಸಿದ್ದರೂ ಅದನ್ನು ನವೀಕರಿಸಿಲ್ಲ. ಮಾಹಿತಿ ಹಕ್ಕು ಜಾರಿಗೆ ಬಂದ ಹೊಸದರಲ್ಲಿ ಸಿದ್ಧಪಡಿಸಿದ್ದ ಕೈಪಿಡಿಯನ್ನೇ ಈಗಲೂ ವೆಬ್‍ಸೈಟ್‍ನಲ್ಲಿ ಕಾಣಬಹುದು. ಅದರಲ್ಲಿ ನಮೂದಿಸಿರುವ ಅಧಿಕಾರಿಗಳ ಪೈಕಿ ಅನೇಕರು ನಿವೃತ್ತಿ ಹೊಂದಿದ್ದಾರೆ, ಬೇರೊಂದು ಇಲಾಖೆಗೆ ವರ್ಗವಾಗಿದ್ದಾರೆ, ಅಂಕಿ ಅಂಶಗಳು ಬದಲಾಗಿವೆ. ಇದಾವುದನ್ನೂ ಪರಿಷ್ಕರಿಸಿಲ್ಲ. ಉದಾಹರಣೆಗೆ, ಕರ್ನಾಟಕ ಕಾನೂನು ಮಾಪನಶಾಸ್ತ್ರ ಇಲಾಖೆಯ ವೆಬ್‍ಸೈಟ್‍ನಲ್ಲಿ ಈ ಕೈಪಿಡಿ ಇಲ್ಲ. ಅಧಿಕಾರಿಗಳ ವಿವರವಷ್ಟೇ ಇದೆ. ಸಾರಿಗೆ ಇಲಾಖೆಯ ಕೈಪಿಡಿ ಒಂದು ವರ್ಷ ಹಳೆಯದು. ಆಹಾರ ಇಲಾಖೆಯ ವೆಬ್‍ಸೈಟ್‍ನಲ್ಲಿರುವ ಕೈಪಿಡಿಯು 2011ನೇ ವರ್ಷಕ್ಕೆ ಸಂಬಂಧಿಸಿದ್ದು. ಆಹಾರ ಭದ್ರತಾ ಆಯೋಗದ ವೆಬ್‍ಸೈಟ್ ಇಲ್ಲ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದ ವೆಬ್‍ಸೈಟ್‍ನಲ್ಲಿ ಮಾಹಿತಿ ಹಕ್ಕಿಗೆ ಸಂಬಂಧಿಸಿದ ಕೊಂಡಿ ಇದ್ದರೂ ಅದನ್ನು ಕ್ಲಿಕ್ ಮಾಡಿದರೆ ಯಾವುದೇ ಮಾಹಿತಿ ದೊರೆಯುವುದಿಲ್ಲ.

ಕರ್ನಾಟಕ ಮಾಹಿತಿ ಆಯೋಗ ಸ್ಥಾಪನೆಯಾದದ್ದು 2006- 07ರಲ್ಲಿ. ರಾಜ್ಯ ಸರ್ಕಾರವು ಆಯೋಗಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡಿದೆ. ಪ್ರತಿವರ್ಷ ಆಯೋಗಕ್ಕೆ ಬೇಕಾದ ಹಣ ಬಿಡುಗಡೆ ಮಾಡುತ್ತಿದೆ. ಆಯೋಗಕ್ಕೆ ಸ್ವತಂತ್ರ ಕಟ್ಟಡ ನಿರ್ಮಿಸಿಕೊಟ್ಟಿದೆ. ಆಯೋಗದ ವಾರ್ಷಿಕ ಖರ್ಚು ಸುಮಾರು ₹ 5 ಕೋಟಿ. ಇಷ್ಟೆಲ್ಲಾ ಸೌಲಭ್ಯ ಇದ್ದರೂ ಆಯೋಗದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕಾಯ್ದೆಯ ಪ್ರಕಾರ, ಮಾಹಿತಿ ಹಕ್ಕಿನ ಅನು ಷ್ಠಾನದ ಬಗ್ಗೆ ವಾರ್ಷಿಕ ವರದಿ ಸಿದ್ಧಪಡಿಸುವುದು ಆಯೋಗದ ಜವಾಬ್ದಾರಿ. ಅಲ್ಲದೆ ವರದಿಯನ್ನು ಆದಷ್ಟು ಶೀಘ್ರವಾಗಿ ಸದನದಲ್ಲಿ ಮಂಡಿಸಬೇಕು. ಕರ್ನಾಟಕ ಮಾಹಿತಿ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಇತ್ತೀ ಚಿನ ವಾರ್ಷಿಕ ವರದಿಯು 2016-17ಕ್ಕೆ ಸಂಬಂಧಿಸಿದ್ದು. ಆರು ವರ್ಷಗಳಿಂದ ವಾರ್ಷಿಕ ವರದಿ ಬಾಕಿ ಉಳಿದಿದೆ. ಮಾಹಿತಿ ಹಕ್ಕು ಅರ್ಜಿಯ ಸ್ವೀಕೃತಿ, ವಿಲೇವಾರಿ ಬಗ್ಗೆ ಇತ್ತೀಚಿನ ಮಾಹಿತಿ ಲಭ್ಯವಿಲ್ಲ. ಮಾಹಿತಿ ಆಯುಕ್ತರ ನೇಮಕಾತಿಯಲ್ಲೂ ಅಪಸ್ವರ ಕೇಳಿಬಂದಿದೆ. ಮಾಹಿತಿ ಹಕ್ಕು ಅರ್ಜಿ ವಿಲೇವಾರಿಯ ವಿಷಯದಲ್ಲೂ ಆಯೋಗ ಹಿಂದೆ ಉಳಿದಿದೆ. ಮಾಹಿತಿ ಹಕ್ಕು ಕಾರ್ಯಕರ್ತ
ರೊಬ್ಬರು ಹೇಳುವ ಪ್ರಕಾರ, ಮಾರ್ಚ್ 2022ರ ಅಂತ್ಯ ದಲ್ಲಿ ಸುಮಾರು 20,000 ಅರ್ಜಿಗಳು ಬಾಕಿ ಇದ್ದವು.

ಮಾಹಿತಿ ಹಕ್ಕಿನ ಇವತ್ತಿನ ಸ್ಥಿತಿಗೆ ಅರ್ಜಿದಾರರೂ ಸ್ವಲ್ಪಮಟ್ಟಿಗೆ ಕಾರಣ. ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುವುದಕ್ಕಾಗಿ ಕಾಯ್ದೆ ಜಾರಿಗೊಳಿಸಲಾಗಿದೆ. ಮಾಹಿತಿ ಪಡೆಯುವ ಮೂಲಕ ಸರ್ಕಾರದ ಸೇವಾ ಗುಣಮಟ್ಟ ಹೆಚ್ಚಿಸುವುದು, ಅಧಿಕಾರಿಗಳಲ್ಲಿ ಉತ್ತರದಾಯಿತ್ವ ಉಂಟುಮಾಡುವಂತಹ ವಿಷಯಗಳಿಗೆ ಮಾಹಿತಿ ಹಕ್ಕು ಉಪಯೋಗಿಸಬಹುದು. ಕೆಲವು ವೈಯಕ್ತಿಕ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆ ಯುವುದಕ್ಕೂ ಅವಕಾಶವಿದೆ. ಆದರೆ ಈ 17 ವರ್ಷಗಳಲ್ಲಿ ಮಾಹಿತಿ ಹಕ್ಕನ್ನು ಈ ರೀತಿಯ ಉದ್ದೇಶಕ್ಕೆ ಬಳಸಿರುವುದು ಕಡಿಮೆ. ಸರ್ಕಾರಿ ಅಧಿಕಾರಿಗಳ ಮೇಲಿನ ದ್ವೇಷಕ್ಕಾಗಿ ಮಾಹಿತಿ ಹಕ್ಕನ್ನು ಬಳಸುವುದು ಕಂಡುಬಂದಿದೆ.

ಸರ್ಕಾರಿ ಅಧಿಕಾರಿ ಕೆಲಸಕ್ಕೆ ಸೇರಿದಾಗಿನಿಂದ ಈವರೆಗೆ ಎಲ್ಲೆಲ್ಲಿ ಕೆಲಸ ಮಾಡಿದರು, ಸಂಬಳ ಎಷ್ಟಿತ್ತು, ಈಗ ಎಷ್ಟಿದೆ, ಅಧಿಕಾರಿಗೆ ನೀಡಿದ ನೇಮಕಾತಿ ಪತ್ರ, ವರ್ಗಾವಣೆ ಪತ್ರ, ರಜೆ ಚೀಟಿಯ ಪ್ರತಿ ಹೀಗೆ ಹತ್ತಾರು ಮಾಹಿತಿ ಕೇಳುವುದು ಕಂಡುಬಂದಿದೆ. ಅಧಿಕಾರಿಯ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳ ವಿವರ, ವಿಳಾಸ ಕೇಳಿರುವುದೂ ಇದೆ. ಕೆಲವು ಪ್ರಕರಣಗಳಲ್ಲಿ ಈ ರೀತಿ ಮಾಹಿತಿಗೆ ಅವಕಾಶವಿಲ್ಲ ಎಂದು ಆಯೋಗ ಮತ್ತು ನ್ಯಾಯಾಲಯ ತೀರ್ಪು ನೀಡಿದ್ದರೂ ಪದೇಪದೇ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ನಾಗರಿಕರು ಮಾಹಿತಿ ಹಕ್ಕು ಕಾಯ್ದೆಯ ಇತಿಮಿತಿಗಳನ್ನು ಅರ್ಥಮಾಡಿಕೊಂಡು ಅದನ್ನು ಮೇಲ್‍ಸ್ಥರಕ್ಕೆ ಕೊಂಡೊಯ್ಯುವುದು ಅವಶ್ಯ.

ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಹಳಷ್ಟು ವಿಚಾರ ವಿನಿಮಯ ನಡೆದಿದೆ. ಸರ್ಕಾರ ನೇಮಕ ಮಾಡಿದ ಸಮಿತಿ ಹಾಗೂ ಸರ್ಕಾರೇತರ ಸಂಸ್ಥೆಗಳು ನಡೆಸಿರುವ ಅಧ್ಯಯನ ಆಧರಿಸಿ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಕೈಪಿಡಿಯನ್ನು ವರ್ಷಕ್ಕೊಮ್ಮೆಯಾದರೂ ನವೀಕರಿಸುವುದು, ಸಾರ್ವಜನಿಕರು ಅರ್ಜಿ ಸಲ್ಲಿಸಲು ಎಲ್ಲ ಅನುಕೂಲ ಮಾಡಿಕೊಡುವುದು, ಮಾಹಿತಿ ಅಧಿಕಾರಿಯ ನೇಮಕ, ಅರ್ಜಿಗಳಿಗೆ ನಿಗದಿತ ವಾಯ್ದೆ ಯಲ್ಲಿ ಉತ್ತರಿಸುವಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಾಹಿತಿ ನೀಡಲು ವಿನಾಕಾರಣ ವಿಳಂಬ ಮಾಡಿದ ಅಧಿಕಾರಿಗಳಿಗೆ ದಂಡ ವಿಧಿಸುವುದು, ವೆಬ್‍ಸೈಟ್ ಉತ್ತಮಪಡಿಸುವುದು, ಅಗತ್ಯ ಸಂಖ್ಯೆಯಲ್ಲಿ ಮಾಹಿತಿ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಚಿಸುವಂತಹ ಕ್ರಮ ಕೈಗೊಳ್ಳಬೇಕಿದೆ.

ವೈ.ಜಿ.ಮುರಳೀಧರನ್
ವೈ.ಜಿ.ಮುರಳೀಧರನ್

ಆಯೋಗಕ್ಕೆ ಹಣ ಬಿಡುಗಡೆ ಮಾಡಿ ತನ್ನ ಜವಾಬ್ದಾರಿ ಮುಗಿಯಿತು ಎಂದು ರಾಜ್ಯ ಸರ್ಕಾರ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದಲ್ಲಿ ‘ಟ್ರಾನ್ಸ್‌ಪರೆನ್ಸಿ ಆಫೀಸರ್’ ನೇಮಕ ಮಾಡ ಬೇಕೆಂದು ಹಾಗೂ ಸಾರ್ವಜನಿಕ ಪ್ರಾಧಿಕಾರ ಪ್ರಕಟಿಸುವ ಸ್ವಯಂಪ್ರೇರಿತ ಕೈಪಿಡಿಯನ್ನು ಆಡಿಟ್ ಮಾಡಿಸಬೇಕೆಂಬ ಸಲಹೆಯನ್ನೂ ಕೇಂದ್ರ ಸರ್ಕಾರ ನೀಡಿದೆ. ಇವೆಲ್ಲವನ್ನೂ ಕೂಲಂಕಷವಾಗಿ ಚರ್ಚಿಸಿ ಸರ್ಕಾರಕ್ಕೆ ಸಲಹೆ ನೀಡಲು ‘ಮಾಹಿತಿ ಹಕ್ಕು ಸಲಹಾ ಸಮಿತಿ’ ರಚಿಸುವುದು ಸೂಕ್ತವೆಂದು ತೋರುತ್ತದೆ. ಮಾಹಿತಿ ಹಕ್ಕು ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರ, ಆಯೋಗ, ನಾಗರಿಕರು ಇದರತ್ತ ಗಮನಹರಿಸಬೇಕಿದೆ.

ಲೇಖಕ: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT