ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬರಹ: ರೋಗವೇ ಮದ್ದಾದರೆ ಉಳಿಯಲು ಸಾಧ್ಯವೇ?

Last Updated 5 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಉಕ್ರೇನ್‌ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಸಾವನ್ನಪ್ಪಿದ ಬಳಿಕ ವೈದ್ಯಕೀಯ ಶಿಕ್ಷಣದ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನೀಟ್‌ ರದ್ದುಗೊಳಿಸುವಂತೆ ಹುಯಿಲು ಎದ್ದಿದೆ. ವಾಸ್ತವವಾಗಿ ನಮ್ಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುವುದೇಕೆ? ಅದನ್ನು ತಪ್ಪಿಸಲು ಮುಂದಿರುವ ದಾರಿ ಯಾವುದು?

***

ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಿಲುಕಿ ಹಾವೇರಿಯ ವಿದ್ಯಾರ್ಥಿ ಮೃತಪಟ್ಟದ್ದು, ಅಲ್ಲಿದ್ದ 18,000 ಭಾರತೀಯ ವೈದ್ಯ ವಿದ್ಯಾರ್ಥಿಗಳು ಕಷ್ಟಕ್ಕೀಡಾದದ್ದು ನಮ್ಮ ವೈದ್ಯಕೀಯ ಶಿಕ್ಷಣದ ಬಗ್ಗೆ ಚರ್ಚೆಯನ್ನೆಬ್ಬಿಸಿವೆ. ಪಿಯುಸಿಯಲ್ಲಿ ಶೇ 97ರಷ್ಟು ಅಂಕಗಳನ್ನು ಪಡೆದಿದ್ದರೂ ಜಾತಿ ಮೀಸಲಾತಿಯಿಂದಾಗಿ, ಕೋಟಿಗಟ್ಟಲೆ ಶುಲ್ಕದಿಂದಾಗಿ ಇಲ್ಲಿ ವೈದ್ಯಕೀಯ ಸೀಟು ಸಿಗಲಿಲ್ಲ ಎಂದ ಹೆತ್ತವರ ಹೇಳಿಕೆಯು ಭಾವನೆಗಳನ್ನು ಕೆರಳಿಸಿದೆ. ನೀಟ್ ಪರೀಕ್ಷೆಗಳಲ್ಲಿ ವಿಫಲರಾದವರಷ್ಟೇ ವಿದೇಶಕ್ಕೆ ಹೋಗುತ್ತಾರೆ, ಅಲ್ಲಿ ಕಲಿತ ಶೇ 90ರಷ್ಟು ವೈದ್ಯರು ಇಲ್ಲಿ ಮತ್ತೆ ಅನುತ್ತೀರ್ಣರಾಗಿ ಕಷ್ಟಕ್ಕೊಳಗಾಗುತ್ತಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದು ಟೀಕೆಗೊಳಗಾಗಿದೆ, ನೀಟ್ ಪರೀಕ್ಷೆಯೇ ರದ್ದಾಗಬೇಕೆಂಬ ಅಭಿಯಾನ ಆರಂಭಗೊಂಡಿದೆ.

ಮಾನ್ಯ ಪ್ರಧಾನಿಯವರು ದನಿಗೂಡಿಸಿ, ವೈದ್ಯರಾಗಲೆಂದು ಸಣ್ಣಪುಟ್ಟ ದೇಶಗಳಿಗೆಲ್ಲ ಹೋಗುವುದೇಕೆ, ದೇಶದ ಹಣ (!?) ಹೊರಹೋಗುವುದೇಕೆ, ಇಲ್ಲೇ ಖಾಸಗಿ ಬಂಡವಾಳಗಾರರು ಅಗಾಧ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬಾರದೇ, ರಾಜ್ಯ ಸರ್ಕಾರಗಳು ಅದಕ್ಕೆ ಭೂಮಿಯನ್ನು ನೀಡಬಾರದೇ ಎಂದು ಕೇಳಿದ್ದಾರೆ, ಜೊತೆಗೆ, ಆಯುಷ್ ಚಿಕಿತ್ಸೆಗೆ ಇನ್ನಷ್ಟು ಉತ್ತೇಜನ ದೊರೆಯಲಿ ಎಂದಿದ್ದಾರೆ. ಇದಕ್ಕೆ ಪೂರಕವಾಗಿ, ವೈದ್ಯಕೀಯ ಸೇವೆಗಳಲ್ಲಿ ವಿಚ್ಛಿದ್ರಕಾರಿಯಾದ ತಿರುವುಗಳಾಗಲಿವೆ ಎಂದು ನೀತಿ ಆಯೋಗವು ಹೇಳಿದೆ, ಆಧುನಿಕ ವೈದ್ಯ ಶಿಕ್ಷಣದಲ್ಲಿ ಆಯುಷ್ ಬೆರೆಸಬೇಕು ಎಂದು ಹೊಸ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ಆಧುನಿಕ ವೈದ್ಯ ಶಿಕ್ಷಣದಲ್ಲಿ ಚರಕ ಶಪಥ, ಯೋಗ, ಗಿಡಮೂಲಿಕೆ ಜ್ಞಾನ, ಆಯುಷ್ ಶಿಕ್ಷಣ ಎಲ್ಲವೂ ಇರಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಸ್ನಾತಕ ಶಿಕ್ಷಣ ಮಂಡಳಿಯು ಕೆಲವೇ ದಿನಗಳ ಹಿಂದೆ ಪ್ರಸ್ತಾಪವಿಟ್ಟಿದೆ.

ಇವುಗಳ ಬೆನ್ನಿಗೆ, ದೇಶದಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ಎನ್‌ಎಂಸಿಯ ಸ್ನಾತಕೋತ್ತರ ಶಿಕ್ಷಣ ಮಂಡಳಿಯ ಅಧ್ಯಕ್ಷ, ನಮ್ಮದೇ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್ ಅವರು ಈಗಿರುವ ಅರ್ಧಕ್ಕರ್ಧ ವೈದ್ಯರ ಕೌಶಲವು ಅಪೇಕ್ಷಿತ ಮಟ್ಟದಲ್ಲಿಲ್ಲ, ಇನ್ನಷ್ಟು ಹೊಸ ಕಾಲೇಜು ಸ್ಥಾಪಿಸುವುದಕ್ಕೆ ರಾಜಕಾರಣಿಗಳಿಗೆ ಆಸಕ್ತಿಯಿದ್ದರೂ ಅದು ಪರಿಹಾರವೇ ಅಲ್ಲ. ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದೇ ಅತಿಮುಖ್ಯ ಎಂದಿರುವುದು ವರದಿಯಾಗಿದೆ.

ಇವೆಲ್ಲವೂ ಆಧುನಿಕ ವೈದ್ಯ ಶಿಕ್ಷಣದ ಬಗೆಗಿರುವ ಗೊಂದಲಗಳನ್ನು ತೋರಿಸುತ್ತವೆ. ಆಧುನಿಕ ವೈದ್ಯ ವಿಜ್ಞಾನವು ರೋಗದ ಮೂಲ ಕಾರಣವನ್ನು ಪತ್ತೆ ಹಚ್ಚಿ ಅವುಗಳನ್ನು ನಿವಾರಿಸಲು ಮದ್ದು ನೀಡುತ್ತದೆ; ಆದರೆ ಪ್ರಧಾನಿ ಹೇಳಿದಂತೆ ಮತ್ತಷ್ಟು ಖಾಸಗಿ ಕಾಲೇಜುಗಳನ್ನು ತೆರೆಯುವುದೆಂದರೆ ರೋಗದ ಮೂಲ ಕಾರಣವನ್ನೇ ಮದ್ದಾಗಿ ಕೊಟ್ಟಂತಾಗುತ್ತದೆ! ಆಯುಷ್ ಅನ್ನು ಆಧುನಿಕ ವೈದ್ಯವಿಜ್ಞಾನದೊಳಕ್ಕೆ ಬೆರೆಸಿದರೆ ವೈದ್ಯ ಶಿಕ್ಷಣವೇ ನಾಶವಾಗಲಿದೆ, ಆಗ ಆಧುನಿಕ ವೈದ್ಯರಾಗಬಯಸುವ ಎಲ್ಲಾ ವಿದ್ಯಾರ್ಥಿಗಳು ಹೊರದೇಶಗಳಿಗೇ ಹೋಗಬೇಕಾಗುತ್ತದೆ! ನೀಟ್ ಪರೀಕ್ಷೆ, ಮೀಸಲಾತಿ, ಹುಟ್ಟಿದ ಜಾತಿಗಳಂತೂ ವೈದ್ಯಶಿಕ್ಷಣದ ರೋಗಕ್ಕೆ ಕಾರಣಗಳೇ ಅಲ್ಲ, ಅವುಗಳನ್ನು ದೂಷಿಸುವುದರಿಂದ ರೋಗ ಪರಿಹಾರವಾಗದು.

ಮತ್ತಷ್ಟು ವೈದ್ಯಕೀಯ ಕಾಲೇಜುಗಳು ಬೇಕೇ?

ದೇಶದಲ್ಲಿ ವೈದ್ಯರ ಬಹುದೊಡ್ಡ ಕೊರತೆಯಿದೆ, ಹಳ್ಳಿಗಳಲ್ಲಿ ವೈದ್ಯರಿಲ್ಲ, ವರ್ಷದಲ್ಲಿ ನೀಟ್ ಬರೆಯುವ 15 ಲಕ್ಷ ವಿದ್ಯಾರ್ಥಿಗಳಲ್ಲಿ 90 ಸಾವಿರ ಮಂದಿ ಮಾತ್ರ ಸೀಟು ಪಡೆಯುತ್ತಾರೆ, ಹಾಗಾಗಿ ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲೇ ಬೇಕು ಎಂದು ಪ್ರಧಾನಿಯಾದಿಯಾಗಿ ಎಲ್ಲರೂ ಹೇಳುತ್ತಿರುವುದು ಸರಿಯಿದೆಯೇ?

ದೇಶದಲ್ಲಿ 13 ಲಕ್ಷ ಆಧುನಿಕ ವೈದ್ಯರೂ, ಐದೂವರೆ ಲಕ್ಷ ಆಯುಷ್ ಚಿಕಿತ್ಸಕರೂ ಇದ್ದಾರೆ.ಇವರಲ್ಲಿ ಶೇ 80ರಷ್ಟು ಸಕ್ರಿಯರೆಂದರೂ 834 ಜನರಿಗೊಬ್ಬ ವೈದ್ಯನಿರುವಂತಾಯಿತು ಎಂದು ಕೇಂದ್ರ ಆರೋಗ್ಯ ಸಚಿವೆ ಡಾ. ಭಾರತಿ ಪವಾರ್ ಅವರು ಕಳೆದ ಡಿಸೆಂಬರ್‌ 14ರಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಆಯುಷ್ ಚಿಕಿತ್ಸಕರನ್ನು ಬಿಟ್ಟರೂ 1,070-1,300 ಜನರಿಗೊಬ್ಬ ಆಧುನಿಕ ವೈದ್ಯನಿದ್ದಾನೆಂದಾಯಿತು. ಅಂದರೆ, ಸಾವಿರ ಜನರಿಗೊಬ್ಬ ವೈದ್ಯನಿರಬೇಕೆಂಬ ಭೋರ್ ಸಮಿತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳ ಗುರಿಯ ಹತ್ತಿರಕ್ಕೆ ತಲುಪಿದಂತಾಯಿತು. ಸುಮಾರು 75-80 ಸಾವಿರದಷ್ಟು ಆಧುನಿಕ ವೈದ್ಯರಿರುವ ಕರ್ನಾಟಕವು ಸಾವಿರ ಜನರಿಗೊಬ್ಬ ವೈದ್ಯನಿರಬೇಕೆಂಬ ಗುರಿಯನ್ನು ಮೀರಿದಂತಾಯಿತು. ಈಗ 313 ಸರ್ಕಾರಿ ಹಾಗೂ 283 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವರ್ಷಕ್ಕೆ 90,824 ಎಂಬಿಬಿಎಸ್ ಸೀಟುಗಳಿವೆ. ರಾಜ್ಯದಲ್ಲಿ 19 ಸರ್ಕಾರಿ ಕಾಲೇಜುಗಳಲ್ಲಿ 2,900 ಹಾಗೂ 44 ಖಾಸಗಿ ಕಾಲೇಜುಗಳಲ್ಲಿ ಒಟ್ಟು 6,945 ಸೀಟುಗಳಿವೆ; ಪ್ರತೀ ವರ್ಷ ಇಷ್ಟು ಎಂಬಿಬಿಎಸ್ ವೈದ್ಯರು ಆರೋಗ್ಯ ಸೇವೆಗಳಿಗೆ ಸೇರುತ್ತಲೇ ಇರುತ್ತಾರೆ.

ಆಧುನಿಕ ವೈದ್ಯರ ಸಂಖ್ಯೆಯು ಸಾಕಷ್ಟಿದ್ದರೂ ಹಿಂದುಳಿದ ಹಾಗೂ ಗ್ರಾಮೀಣ ಭಾಗಗಳಲ್ಲಿ ಅವರ ಕೊರತೆ ಇದೆ ಎಂದರೆ ವೈದ್ಯರ ನಿಯೋಜನೆಯಲ್ಲಿ ಸಮಸ್ಯೆಯಿದೆ ಎಂದಾಗುತ್ತದೆ. ಹಾಗಿರುವಾಗ ಇನ್ನಷ್ಟು ಖಾಸಗಿ ಕಾಲೇಜುಗಳ ಅಗತ್ಯವೇನು?

ನೀಟ್ ಹೋದರೆ ಎಲ್ಲವೂ ಸರಿಯಾಗುತ್ತದೆಯೇ?

ವೈದ್ಯಕೀಯ ಕಲಿಕೆಯು ದುಸ್ತರವಾಗಿರುವುದಕ್ಕೆ ನೀಟ್ ಪರೀಕ್ಷೆಯನ್ನು ದೂಷಿಸಿ, ಅದನ್ನು ರದ್ದು ಮಾಡಬೇಕೆಂಬ ಕೂಗು ಜೋರಾಗುತ್ತಿದೆ. ಆದರೆ, ವಿಶ್ವದೆಲ್ಲೆಡೆ ವೈದ್ಯಕೀಯ, ತಂತ್ರಜ್ಞಾನ, ಕಾನೂನು ಇತ್ಯಾದಿ ಉನ್ನತ ವೃತ್ತಿಗಳ ಕಲಿಕೆಗೆ ಪ್ರವೇಶ ಪಡೆಯಲು ಸಾಕಷ್ಟು ಕಠಿಣವಾದ ಮಾನದಂಡಗಳೇ ಇರುತ್ತವೆ, ಅವು ಬಹಳ ಸ್ಪರ್ಧಾತ್ಮಕವೂ ಆಗಿರುತ್ತವೆ. ಹಾಗಿರುವಾಗ, ಭಾರತದಲ್ಲಿ ವೈದ್ಯಕೀಯ ಪ್ರವೇಶಾತಿಯ ಮಾನದಂಡವನ್ನು ಕಿತ್ತೊಗೆದರೆ ಇನ್ನಷ್ಟು ಸಮಸ್ಯೆಗಳೇ ಆಗಲಿವೆ.

ಎಂಬತ್ತರ ದಶಕದವರೆಗೆ ಪಿಯುಸಿ ಅಂಕಗಳ ಆಧಾರದಲ್ಲೇ ವೈದ್ಯಕೀಯ ಸೀಟುಗಳನ್ನು ನೀಡಲಾಗುತ್ತಿತ್ತು. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಪ್ರಭಾವವೂ ಹೆಚ್ಚಿದಂತೆ ಅಂಕಗಳಿಲ್ಲದವರು ಕ್ಯಾಪಿಟೇಶನ್ ಶುಲ್ಕಕ್ಕೆ ಸೀಟು ಪಡೆಯುವುದು ಹೆಚ್ಚುತ್ತಾ ಹೋಯಿತು. ಇತ್ತ ಲಂಚ ಕೊಟ್ಟು ಪಿಯುಸಿ ಅಂಕಗಳನ್ನೇ ತಿದ್ದಿ, ಪ್ರಭಾವ ಬೀರಿ ಸರ್ಕಾರಿ ಕಾಲೇಜುಗಳ ಸೀಟುಗಳನ್ನು ವಶಪಡಿಸಿಕೊಳ್ಳುವುದೂ ಹೆಚ್ಚತೊಡಗಿತು. ವೈದ್ಯರಾಗಲು ಅತ್ಯಾಸಕ್ತರಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಈ ವಂಚನೆಗಳನ್ನು ಪ್ರತಿಭಟಿಸಿ ಬೀದಿಗಿಳಿದರು; ಅಂಕ ತಿದ್ದುವ ಮೋಸವನ್ನು ತಡೆಯಲು ಪ್ರವೇಶ ಪರೀಕ್ಷೆಗಾಗಿಯೂ ಕ್ಯಾಪಿಟೇಶನ್ ಶುಲ್ಕ ತಡೆಯಲು ಖಾಸಗೀಕರಣದ ವಿರೋಧವಾಗಿಯೂ ಎಂಬತ್ತರ ದಶಕದಲ್ಲಿ ದೇಶದಾದ್ಯಂತ ಹೋರಾಟಗಳಾಗಿ, ಕರ್ನಾಟಕದಲ್ಲಿ 1984ರಲ್ಲಿ ಪ್ರವೇಶ ಪರೀಕ್ಷೆಗಳು ತೊಡಗಿದವು, ಖಾಸಗೀಕರಣದ ಭರಾಟೆಗೂ ಲಗಾಮು ಬಿತ್ತು.

ಆದರೆ ತೊಂಬತ್ತರ ಆರಂಭದಲ್ಲಿ ಹೊಸ ಆರ್ಥಿಕ ನೀತಿ ಬಂತು, ವಿದ್ಯಾರ್ಥಿ ಚಳವಳಿಗಳೂ ದುರ್ಬಲಗೊಂಡವು. ಎಲ್ಲೆಂದರಲ್ಲಿ ಖಾಸಗಿ ಕಾಲೇಜುಗಳು ತೆರೆದವು; ಅವು ತಮಗೆ ಹಣ ನೀಡಿದವರಿಗೆ ಸೀಟುಗಳನ್ನು ಕೊಡಿಸುವುದಕ್ಕಾಗಿ ಸರ್ಕಾರಗಳು ನಡೆಸುತ್ತಿದ್ದ ಪ್ರವೇಶ ಪರೀಕ್ಷೆಗಳನ್ನು ತಿರುಚಿಕೊಳ್ಳುವ ವ್ಯವಸ್ಥೆಗಳನ್ನು ಮಾಡಿಕೊಂಡವು, ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನೂ ಆರಂಭಿಸಿದವು. ಇದನ್ನು ತೊಡೆದುಹಾಕಲು ಇಡೀ ದೇಶಕ್ಕೆ ಅನ್ವಯಿಸುವಂತೆ 2013ರಲ್ಲಿ ನೀಟ್ ಪರೀಕ್ಷೆಯನ್ನು ತರಲಾಯಿತು. ಖಾಸಗಿ ಕಾಲೇಜುಗಳು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ರದ್ದುಪಡಿಸಲು ಯಶಸ್ವಿಯಾದವು. ಆದರೆ ಆ ತೀರ್ಪಿನ ಬಗ್ಗೆ ನ್ಯಾಯಮೂರ್ತಿಗಳೇ ಪ್ರಶ್ನೆಗಳನ್ನೆತ್ತಿದ್ದರಿಂದ ತೀರ್ಪನ್ನು ಹಿಂಪಡೆಯುವಂತಾಗಿ 2016ರಿಂದ ನೀಟ್ ನಿರಂತರವಾಗಿ ನಡೆಯತೊಡಗಿತು.

ಖಾಸಗಿ ಕಾಲೇಜುಗಳು ನೀಟ್ ಅನ್ನು ಬಗ್ಗಿಸುವುದಕ್ಕೂ ದಾರಿ ಮಾಡಿಕೊಂಡವು, ಒಮ್ಮಿಂದೊಮ್ಮೆಗೇ ತಮ್ಮ ಶುಲ್ಕವನ್ನು ಆರೇಳು ಪಟ್ಟು ಹೆಚ್ಚಿಸಿಕೊಂಡವು. ಒಳ್ಳೆಯ ಅಂಕಗಳಿದ್ದ ವಿದ್ಯಾರ್ಥಿಗಳಲ್ಲಿ ಅಷ್ಟೊಂದು ಹಣವಿಲ್ಲದೆ ಸೀಟುಗಳು ತುಂಬದಾದಾಗ ಹಣವಷ್ಟೇ ಇದ್ದು ಅಂಕಗಳಿಲ್ಲದವರಿಗೆ ಸೀಟು ನೀಡುವುದಕ್ಕಾಗಿ ನೀಟ್‌‌ನ ಮರುವರ್ಷವೇ, 2017ರಲ್ಲಿ, ಅರ್ಹತಾ ಅಂಕಗಳನ್ನೇ ಕೇಂದ್ರ ಸರ್ಕಾರವು ಬದಲಿಸುವಂತೆ ಮಾಡಲಾಯಿತು; ಕನಿಷ್ಠ ಶೇ 50ರಷ್ಟು ಅಂಕಗಳ ಮಾನದಂಡವನ್ನು ಬದಲಿಸಿ ಮೇಲಿನ ಶೇ 50ರಷ್ಟು ಆಕಾಂಕ್ಷಿಗಳೆಲ್ಲರಿಗೂ ಅರ್ಹತೆಯನ್ನು ನೀಡಲಾಯಿತು. ಸರ್ಕಾರದ ಕೋಟಾ ಖೋತಾ ಮಾಡುವುದು, ಸೀಟು ಹಂಚಿಕೆಯಲ್ಲಿ ಹಗರಣಗಳು ಕೂಡ ಜೊತೆಗೆ ಸೇರಿದವು.

ಅಂದರೆ, ಪಿಯುಸಿ ಅಂಕಗಳಿರಲಿ, ರಾಜ್ಯಗಳ ಸಿಇಟಿ ಯಾ ರಾಷ್ಟ್ರ ಮಟ್ಟದ ನೀಟ್ ಆಗಿರಲಿ, ಖಾಸಗಿ ಕಾಲೇಜುಗಳು ದುಡ್ಡು ಕೊಟ್ಟವರಿಗೆ ಸೀಟು ಕೊಡುವುದಕ್ಕೆ ದಾರಿಯನ್ನು ಮಾಡಿಕೊಳ್ಳುತ್ತವೆ. ಹಾಗೆಯೇ, ಎಲ್ಲ ಬಗೆಯ ಪರೀಕ್ಷೆಗಳಿಗೆ ದುಡ್ಡಿದ್ದವರಿಗೆ, ನಗರವಾಸಿಗಳಿಗೆ, ಆಂಗ್ಲ ಮಾಧ್ಯಮದವರಿಗೆ ವಿಶೇಷ ಕೋಚಿಂಗ್ ಸೌಲಭ್ಯಗಳು ದೊರೆಯುತ್ತವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಅಲ್ಲೂ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಹಲವು ಮಕ್ಕಳು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರೂ ಪ್ರವೇಶ ಪರೀಕ್ಷೆಗಳಲ್ಲಿ ಹಿಂದೆ ಬೀಳುತ್ತಾರೆ. ಆದ್ದರಿಂದ ಮಾನದಂಡ ಯಾವುದೇ ಇದ್ದರೂ ಅವುಗಳನ್ನು ಪಾರದರ್ಶಕವಾಗಿ, ಭ್ರಷ್ಟಾಚಾರ ಮುಕ್ತವಾಗಿ, ಎಲ್ಲರಿಗೂ ಎಟಕುವಂತೆ ಮಾಡುವುದೇ ಮುಖ್ಯವಾಗುತ್ತದೆ.

ಸಾಂವಿಧಾನಿಕ ಮೀಸಲಾತಿಯಿಂದ ವಂಚನೆಯಾಗುತ್ತಿದೆಯೇ?

ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಅಸಾಧ್ಯವಾದಾಗ ಸಂವಿಧಾನಬದ್ಧವಾದ ಮೀಸಲಾತಿಯನ್ನು ದೂರುವುದು ಅತ್ಯಂತ ಸಾಮಾನ್ಯವಾಗಿ ಬಿಟ್ಟಿದೆ. ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ, ಆ ಕಷ್ಟಗಳಿಂದಾಗಿ ಸಮಾನ ಶಿಕ್ಷಣದಿಂದ ವಂಚಿತರಾದವರಿಗೆ ವೃತ್ತಿ ವ್ಯಾಸಂಗದಲ್ಲಿ ಮೀಸಲಾತಿ ನೀಡುತ್ತಿರುವುದನ್ನು ದೂರುವುದೆಂದರೆ ಆ ವರ್ಗದ ಮಕ್ಕಳನ್ನು ಮತ್ತೆ ಅವಮಾನಿಸಿ ದೌರ್ಜನ್ಯವೆಸಗಿದಂತೆಯೇ ಆಗುತ್ತದೆ.

ವಸ್ತುಸ್ಥಿತಿಯೇನೆಂದರೆ, ವೈದ್ಯಕೀಯ ಶಿಕ್ಷಣದ ಖಾಸಗೀಕರಣದಿಂದಾಗಿ ಇಂದು ಅರ್ಧಕ್ಕೂ ಹೆಚ್ಚು ಸೀಟುಗಳು ಖಾಸಗಿ ಕಾಲೇಜುಗಳಲ್ಲೇ ಇವೆ, ಅಲ್ಲಿರುವ ಖಾಸಗಿ ಕೋಟಾದ ಸೀಟುಗಳಿಗೆ ಸಾಂವಿಧಾನಿಕ ಮೀಸಲಾತಿಯು ಅನ್ವಯಿಸುವುದೇ ಇಲ್ಲ. ಸರ್ಕಾರಿ ಕಾಲೇಜುಗಳ ಶುಲ್ಕಕ್ಕೆ ಹೋಲಿಸಿದರೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಮೂರು ಪಟ್ಟು, ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಹೆಸರಿನ ಕೋಟಾದ ಸೀಟುಗಳಿಗೆ 10-20 ಪಟ್ಟು ಹೆಚ್ಚು ಶುಲ್ಕವಿರುವುದರಿಂದ, ಅತ್ಯುತ್ತಮ ಅಂಕಗಳನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಹಿಂಜರಿಯಬೇಕಾಗುತ್ತದೆ.

ರೆಮಾ ನಾಗರಾಜನ್ ಅವರು 2017ರಲ್ಲಿ ವರದಿ ಮಾಡಿದಂತೆ, ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ, ಒಬಿಸಿ, ಎಸ್‌ಸಿ, ಎಸ್‌ಟಿ ಕೋಟಾಗಳಲ್ಲಿ ಕ್ರಮವಾಗಿ 524, 465, 398, 332 (ಸರಾಸರಿ 470) ಅಂಕಗಳಿದ್ದವರಿಗೆ ಸೀಟು ದೊರೆತರೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ 399, ಮ್ಯಾನೇಜ್‌ಮೆಂಟ್ ಕೋಟಾದಲ್ಲಿ 315, ಎನ್‌ಆರ್‌ಐ ಕೋಟಾದಲ್ಲಿ 221 (ಸರಾಸರಿ 345) ಅಂಕಗಳಿದ್ದವರಿಗೆ ದೊರೆತಿತ್ತು; ಸರ್ಕಾರಿ ಕಾಲೇಜುಗಳಲ್ಲಿ ಎಸ್‌ಸಿ ಕೋಟಾದ ವಿದ್ಯಾರ್ಥಿಗಳ ಅಂಕಗಳು 398 ಆಗಿದ್ದರೆ, ಎಲ್ಲಾ ಸೀಟುಗಳನ್ನೂ ಪರಿಗಣಿಸಿದರೆ 367 ಆಗಿತ್ತು, ಅಂದರೆ, ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾದಲ್ಲಿ ಪ್ರವೇಶ ಪಡೆದವರಿಗಿಂತಲೂ ಎಸ್‌ಸಿ ವಿದ್ಯಾರ್ಥಿಗಳಿಗೆ 52 ಅಂಕಗಳು ಹೆಚ್ಚೇ ಇದ್ದವು. ಅದೇ ವರ್ಷ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದ ಕನಿಷ್ಠ 400 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಕೇವಲ ಒಂದಂಕೆಯ ಅಂಕಗಳನ್ನು ಪಡೆದಿದ್ದರು ಮತ್ತು 110 ವಿದ್ಯಾರ್ಥಿಗಳು ಭೌತ ಹಾಗೂ ರಸಾಯನ ವಿಜ್ಞಾನಗಳಲ್ಲಿ ಸೊನ್ನೆ ಯಾ ನೆಗೆಟಿವ್ ಅಂಕಗಳನ್ನು ಪಡೆದಿದ್ದರು! ಕಳೆದ ವರ್ಷ ಕೇವಲ 138 (ಶೇ 19) ಅಂಕಗಳಿದ್ದವರು ಖಾಸಗಿ ಕಾಲೇಜಿಗೆ ಸೇರಲು ಅರ್ಹರಾಗಿದ್ದರು, 7.5 ಲಕ್ಷ ರ‍್ಯಾಂಕ್‌ಗೂ ಖಾಸಗಿ ಸೀಟು ದಕ್ಕಿತ್ತು!

ಆದ್ದರಿಂದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟುಗಳು ದೊರೆಯದಾಗಲು ವೈದ್ಯ ಶಿಕ್ಷಣದ ಖಾಸಗೀಕರಣ, ಅಲ್ಲಿನ ವಿಪರೀತ ಶಿಕ್ಷಣ ಶುಲ್ಕ ಹಾಗೂ ಅತಿ ಹೆಚ್ಚಿನ ಹಣ ತೆತ್ತರೆ ಅತಿ ಕಡಿಮೆ ಅಂಕಗಳಿದ್ದವರಿಗೆ ಸೀಟು ಕೊಡುವ ವ್ಯವಸ್ಥೆಯ ಮೂಲಕ ನೀಟ್ ಪರೀಕ್ಷೆಯ ಆಶಯವನ್ನು ಬುಡಮೇಲು ಮಾಡಿರುವುದೇ ಕಾರಣ ಹೊರತು, ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗಿರುವ ಸಾಂವಿಧಾನಿಕ ಮೀಸಲಾತಿಯಲ್ಲ ಎನ್ನುವುದು ಸುಸ್ಪಷ್ಟ. ಆದ್ದರಿಂದ, ಕಷ್ಟಗಳಿಂದ ನರಳಿ ಕಲಿಯಲಾಗದವರಿಗೆ ನೀಡುವ ಮೀಸಲಾತಿಯನ್ನು ದೂಷಿಸುವ ಬದಲು, ಅತಿ ಶ್ರೀಮಂತರಾಗಿದ್ದು ಎಲ್ಲಾ ಸವಲತ್ತುಗಳಿದ್ದರೂ ಅಂಕಗಳನ್ನು ಪಡೆಯಲಾಗದವರಿಗೆ ಹಣಕ್ಕೆ ಸೀಟು ನೀಡುವ ವ್ಯವಸ್ಥೆಯನ್ನು ದೂಷಿಸಿ, ಅದನ್ನು ನಿರ್ಮೂಲನೆ ಮಾಡುವಂತೆ ಒತ್ತಾಯಿಸಬೇಕು.

ಪರಿಣಾಮಕಾರಿ ಮದ್ದೇನು?

ಹಾಗಿರುವಾಗ, ದೇಶದ ಅಧುನಿಕ ವೈದ್ಯ ಶಿಕ್ಷಣವು ಅರ್ಹರಿಗಷ್ಟೇ ದೊರೆಯಬೇಕಾದರೆ ವೈದ್ಯ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು, ಹೊಸ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು, ಖಾಸಗಿ ಕಾಲೇಜುಗಳಲ್ಲಿ ಶುಲ್ಕವನ್ನು ಸರ್ಕಾರಿ ಕಾಲೇಜುಗಳ ಮಟ್ಟಕ್ಕೆ ಇಳಿಸಬೇಕು, ಮ್ಯಾನೇಜ್‌ಮೆಂಟ್ ಕೋಟಾ ಹೋಗಬೇಕು ಮತ್ತು ಎನ್‌ಆರ್‌ಐ ಕೋಟಾವನ್ನು ಶುದ್ಧ ಎನ್‌ಆರ್‌ಐಗಳಿಗೆ ಮಾತ್ರವೇ ನೀಡಬೇಕು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಎಲ್ಲಾ ಸೀಟುಗಳಿಗೂ ಸಾಮಾಜಿಕ ಮೀಸಲಾತಿಯು ಅನ್ವಯಿಸಬೇಕು, ನೀಟ್ ಪರೀಕ್ಷೆಗಳು ರಾಜ್ಯ ಭಾಷೆಗಳಲ್ಲೂ ನಡೆಯಬೇಕು, ಹಿಂದುಳಿದ ವಿಭಾಗಗಳ ಮಕ್ಕಳಿಗೆ ಅದನ್ನು ಬರೆಯಲು ಎಲ್ಲಾ ನೆರವನ್ನೂ ಒದಗಿಸಬೇಕು, ಆಧುನಿಕ ವೈದ್ಯ ವಿಜ್ಞಾನದೊಳಕ್ಕೆ ಆಯುಷ್ ಬೆರಕೆ ಮಾಡುವ ಯೋಜನೆಯನ್ನು ಕೂಡಲೇ ತಡೆಯಬೇಕು, ಉಪಕೇಂದ್ರಗಳನ್ನು ಆಯುಷ್‌ಗೆ ಒಪ್ಪಿಸಬಾರದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೆ ಯಾವುದನ್ನೂ ಖಾಸಗಿಯವರಿಗೊಪ್ಪಿಸದೆ, ಸರ್ಕಾರವೇ ನಡೆಸಬೇಕು ಮತ್ತು ಅಲ್ಲಿಗೆಲ್ಲ ಉತ್ತಮ ಸಂಬಳಕ್ಕೆ ಆಧುನಿಕ ವೈದ್ಯರನ್ನು ನೇಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT