ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನಿಯನ್ನರ ಧೈರ್ಯ, ಉತ್ಸಾಹವೇ ರಷ್ಯಾಗೆ ಸವಾಲು! 

Last Updated 4 ಮಾರ್ಚ್ 2022, 14:19 IST
ಅಕ್ಷರ ಗಾತ್ರ

ರಷ್ಯನ್ನರು ಉಕ್ರೇನ್ ಅನ್ನು ಇನ್ನಷ್ಟೇ ಪೂರ್ತಿಯಾಗಿ ವಶಪಡಿಸಿಕೊಳ್ಳಬೇಕು. ಆದರೆ, ಅಷ್ಟು ಸುಲಭವಾಗಿ ಹಿಡಿತ ಸಾಧಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಉಕ್ರೇನಿಯನ್ನರು ಕಳೆದ ಕೆಲವು ದಿನಗಳಿಂದ ತೋರಿಸಿದ್ದಾರೆ.

ಇನ್ನೊಂದು ವಾರದೊಳಗೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧದ ಯುದ್ಧವನ್ನು ಗೆಲ್ಲಬಹುದು. ಹಾಗಿದ್ದರೂ, ಅವರು ಕಳೆದುಕೊಳ್ಳುವುದೇ ಹೆಚ್ಚು.

ಪುಟಿನ್ ರಷ್ಯಾದ ಸಾಮ್ರಾಜ್ಯವನ್ನು ಮತ್ತೆ ನಿರ್ಮಿಸುವ, ಗತವೈಭವಕ್ಕೆ ಮರಳಿಸುವ ಕನಸು ಕಾಣುತ್ತಿದ್ದಾರೆ. ಉಕ್ರೇನ್ ಸ್ವತಂತ್ರ ರಾಷ್ಟ್ರವಲ್ಲ ಎಂಬುದು ಸಾಮಾನ್ಯ ನಂಬಿಕೆ. ಉಕ್ರೇನಿಯನ್ನರು ಕೀವ್, ಹಾರ್ಕಿವ್ ಮತ್ತು ಎಲ್ವಿವ್ ನಿವಾಸಿಗಳಲ್ಲ. ಅವರು ಮಾಸ್ಕೋದ ಆಡಳಿತಕ್ಕೆ ಒಳಗಾಗಲು ಬಯಸುತ್ತಾರೆ. ಆದರೆ ಸತ್ಯವೆಂದರೆ, ಉಕ್ರೇನ್‌ಗೆ ಇತಿಹಾಸವಿದೆ- ಸಾವಿರಾರು ವರ್ಷಗಳ ಇತಿಹಾಸವಿದೆ. ಕೀವ್ ಪ್ರಮುಖ ಮಹಾನಗರವಾಗಿದ್ದ ಸಂದರ್ಭದಲ್ಲಿ ಮಾಸ್ಕೋ ಇನ್ನೂ ಒಂದು ಹಳ್ಳಿಯೂ ಆಗಿರಲಿಲ್ಲ. ಆದರೆ, ಆ ಬಗ್ಗೆ ಪುಟಿನ್ ಅನೇಕ ಬಾರಿ ಸುಳ್ಳು ಹೇಳಿದ್ದಾರೆ, ತಾವು ಹೇಳುತ್ತಿರುವುದೇ ಸತ್ಯವೆಂದು ಭ್ರಮಿಸಿದ್ದಾರೆ.

ಉಕ್ರೇನ್‌ ಮೇಲೆ ಆಕ್ರಮಣವನ್ನು ಯೋಜಿಸುವಾಗ, ಉಕ್ರೇನ್‌ಗೆ ಹೋಲಿಸಿದರೆ ರಷ್ಯಾದ ಸೈನ್ಯವು ಬೃಹತ್ತಾಗಿದೆ, ತುಂಬ ಬಲಿಷ್ಠವಾಗಿದೆ ಎಂದು ಪುಟಿನ್ ತಿಳಿದಿದ್ದರು. ಉಕ್ರೇನ್‌ಗೆ ಸಹಾಯ ಮಾಡಲು ನ್ಯಾಟೊ (NATO) ತನ್ನ ಪಡೆಗಳನ್ನು ಕಳುಹಿಸುವುದಿಲ್ಲ ಎಂದು ಅವರು ಭಾವಿಸಿದ್ದರು. ರಷ್ಯಾದ ತೈಲ ಮತ್ತು ಅನಿಲದ ಮೇಲೆ ಯುರೋಪಿನ ಅವಲಂಬನೆಯು ಜರ್ಮನಿಯಂತಹ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಹಿಂಜರಿಯುವಂತೆ ಮಾಡುತ್ತವೆ ಎಂದು ಪುಟಿನ್ ಅಂದುಕೊಂಡಿದ್ದರು. ಸದ್ಯಕ್ಕೆ ತಿಳಿದು ಬಂದಿರುವಂತೆ, ಉಕ್ರೇನ್ ಮೇಲೆ ತೀವ್ರ ಸ್ವರೂಪದ ದಾಳಿ ಮಾಡುವುದು, ಆದಷ್ಟು ಬೇಗನೆ ಯುದ್ಧವನ್ನು ಮುಗಿಸಿ, ಉಕ್ರೇನ್ ಸರ್ಕಾರವನ್ನು ಉರುಳಿಸುವುದು, ತನ್ನ ಕೈಗೊಂಬೆಯಾಗಿರುವ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಅಧೀನ ಆಡಳಿತವನ್ನು ಸ್ಥಾಪಿಸುವುದು ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳನ್ನು ಮೆಟ್ಟಿ ನಿಲ್ಲುವುದು ಆರಂಭದಲ್ಲಿ ಅವರ ಯೋಜನೆಯಾಗಿತ್ತು.

ಆದರೆ, ಈ ಯೋಜನೆಯ ಬಗ್ಗೆ ತಿಳಿಯದಿರುವ ಒಂದು ವಿಷಯವಿತ್ತು. ಅಮೆರಿಕನ್ನರು ಇರಾಕ್‌ನಲ್ಲಿ ಮತ್ತು ಸೋವಿಯತ್‌ ಯೂನಿಯನ್‌ ಅಫ್ಗಾನಿಸ್ತಾನದಲ್ಲಿ ಕಲಿತಂತೆ, ಒಂದು ದೇಶವನ್ನು ಹಿಡಿದಿಟ್ಟುಕೊಳ್ಳುವುದಕ್ಕಿಂತ ವಶಪಡಿಸಿಕೊಳ್ಳುವುದು ತುಂಬಾ ಸುಲಭ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಶಕ್ತಿ ತಮ್ಮಲ್ಲಿದೆ ಎಂದು ಪುಟಿನ್ ತಿಳಿದಿದ್ದರು. ಆದರೆ ಮಾಸ್ಕೋದ ಕೈಗೊಂಬೆಯಾಗಿರುವ ವ್ಯಕ್ತಿಯ ಆಡಳಿತವನ್ನು ಉಕ್ರೇನಿಯನ್ನರು ಒಪ್ಪಿಕೊಳ್ಳುತ್ತಾರೆಯೇ ಎಂದು ಅವರು ಅರ್ಥ ಮಾಡಿಕೊಂಡಿದ್ದಾರೆಯೇ? ಒಪ್ಪಿಕೊಳ್ಳುವರೆಂದೇ ನಂಬಿ ಪುಟಿನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದಕ್ಕೆ ಕಾರಣಗಳೂ ಇವೆ. 2014ರಲ್ಲಿ, ಕ್ರೈಮಿಯಾದಲ್ಲಿ ಜನರು ರಷ್ಯಾದ ಆಕ್ರಮಣಕಾರರನ್ನು ಅಷ್ಟೇನೂ ವಿರೋಧಿಸಲಿಲ್ಲ ಮತ್ತು ಇಡೀ ಉಕ್ರೇನ್ ಅದನ್ನು ಅನುಸರಿಸುತ್ತದೆ ಎಂದು ನಂಬಿದ್ದರು.

ಯುದ್ಧ ಆರಂಭವಾಗಿ ಏಳು ದಿನಗಳು ಕಳೆದರೂ ಪುಟಿನ್ ಅವರ ಅದೃಷ್ಟ ಪರೀಕ್ಷೆಯ ಪ್ರಯತ್ನ ಫಲ ನೀಡಿಲ್ಲ. ಉಕ್ರೇನ್ ಜನರು ವಿರೋಧಿಸುತ್ತಿದ್ದಾರೆ, 'ನಾವು ಕೊನೆಯವರೆಗೂ ಹೋರಾಡುತ್ತೇವೆ' ಎಂದು ಎದೆ ಸೆಟೆಸಿ ನಿಂತಿದ್ದಾರೆ. ರಷ್ಯಾ ಸೈನಿಕರಿಗೆ ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ. ಅವರ ಕೆಚ್ಚೆದೆಯನ್ನು ಇಡೀ ಜಗತ್ತು ಪ್ರಶಂಸಿಸುತ್ತಿದೆ.

ರಷ್ಯನ್ನರು ಇಡೀ ಉಕ್ರೇನ್ ಅನ್ನು ವಶಪಡಿಸಿಕೊಳ್ಳಬಹುದು. ಆದರೆ ಯುದ್ಧವನ್ನು ಗೆಲ್ಲಲು, ರಷ್ಯನ್ನರು ಉಕ್ರೇನ್ ಅನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಜನರು ಅವಕಾಶ ನೀಡಿದರೆ ಮಾತ್ರ ಅವರು ಅದನ್ನು ಮಾಡಬಹುದು

ರಷ್ಯಾದ ಒಂದು ಟ್ಯಾಂಕ್ ನಾಶ ಮಾಡಿದಾಗ, ಒಬ್ಬ ಸೈನಿಕನನ್ನು ಹತ್ಯೆ ಮಾಡಿದಾಗ ಈ ಸಣ್ಣ ದೇಶದ ಜನರ ಉತ್ಸಾಹ ಇಮ್ಮಡಿಸುತ್ತಿದೆ. ಆಕ್ರಮಣವನ್ನು ತಡೆಗಟ್ಟಲು ಇನ್ನಷ್ಟು ಸ್ಫೂರ್ತಿಯುತವಾಗಿ ಹೋರಾಡುವಂತೆ ಉತ್ತೇಜನ ನೀಡುತ್ತಿದೆ. ಪ್ರತಿಯೊಬ್ಬ 'ಸ್ವಾತಂತ್ರ್ಯ ಹೋರಾಟಗಾರ'ನ ಸಾವು ಆಕ್ರಮಣಕಾರರ ಮೇಲಿನ ದ್ವೇಷವನ್ನು ಹೆಚ್ಚಿಸುತ್ತದೆ. ದ್ವೇಷವು ಅತ್ಯಂತ ಕೊಳಕಾದ ಭಾವನೆಯಾಗಿದೆ. ಆದರೆ, ತುಳಿತಕ್ಕೊಳಗಾದ ರಾಷ್ಟ್ರಗಳಿಗೆ, ದ್ವೇಷವು ಗುಪ್ತ ನಿಧಿಯಾಗಿದೆ. ಹೃದಯದಲ್ಲಿ ಆಳವಾಗಿ ಬೇರೂರಿ, ಅದು ಹಲವು ತಲೆಮಾರುಗಳವರೆಗೆ ಪ್ರತಿರೋಧವನ್ನು ಉಳಿಸಿಕೊಳ್ಳುತ್ತದೆ.

ರಷ್ಯಾದ ಸಾಮ್ರಾಜ್ಯವನ್ನು ಮರುಸ್ಥಾಪಿಸಬೇಕಿದ್ದರೆ, ಪುಟಿನ್ ಅವರಿಗೆ ರಕ್ತರಹಿತ ವಿಜಯದ ಅಗತ್ಯವಿದೆ. ಆಗ ದ್ವೇಷರಹಿತವಾಗಿ ಅದನ್ನು ಅವರು ಸಾಧಿಸಬಹುದಾಗಿದೆ. ಆದರೆ, ಹೆಚ್ಚಿನ ರಕ್ತಪಾತದ ಮೂಲಕ ರಷ್ಯಾವನ್ನು ಏಕೀಕರಿಸುವ ತಮ್ಮ ಕನಸಿಗೆ ವಿರುದ್ಧವಾಗಿ ಪುಟಿನ್ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡರೇ ಎಂದು ಭಾವಿಸಬೇಕಾಗುತ್ತದೆ. ರಷ್ಯಾ ಸಾಮ್ರಾಜ್ಯದ ಮರಣ ಪ್ರಮಾಣಪತ್ರದಲ್ಲಿ ಬರೆಯುವ ಹೆಸರು ಮಿಖಾಯಿಲ್ ಗೋರ್ಬಚೇವ್ ಅವರದಲ್ಲ, ವ್ಲಾಡಿಮಿರ್ ಪುಟಿನ್ ಅವರದು. ಗೋರ್ಬಚೇವ್ ರಷ್ಯಾ ಮತ್ತು ಉಕ್ರೇನ್ ಅನ್ನು ಒಡಹುಟ್ಟಿದವರಂತೆ ಭಾವಿಸಿದ್ದರು; ಪುಟಿನ್ ಮಾತ್ರ ಅವರನ್ನು ಶತ್ರುಗಳಾಗಿ ಪರಿವರ್ತಿಸಿದ್ದಾರೆ.

ರಾಷ್ಟ್ರಗಳನ್ನು ಅಂತಿಮವಾಗಿ ನಿರ್ಮಿಸುವುದು ಇಂತಹ ಕಥೆಗಳೇ. ಮುಂಬರುವ ಕರಾಳ ದಿನಗಳಲ್ಲಿ ಮಾತ್ರವಲ್ಲ, ಇನ್ನೂ ಹಲವು ದಶಕಗಳಲ್ಲಿ ಮತ್ತು ತಲೆಮಾರುಗಳಲ್ಲಿ ಉಕ್ರೇನ್ ಈ ದ್ವೇಷದ ಕಥೆಯನ್ನು ಹೇಳುತ್ತದೆ. ರಾಜಧಾನಿಯಿಂದ ಪಲಾಯನ ಮಾಡಲು ನಿರಾಕರಿಸಿದ ಉಕ್ರೇನ್ ಅಧ್ಯಕ್ಷರು, ತಮಗೆ ಮದ್ದುಗುಂಡುಗಳು ಬೇಕು, ತಮ್ಮನ್ನು ಕರೆದೊಯ್ಯುವ ವ್ಯವಸ್ಥೆಯಲ್ಲ ಎಂದು ಹೇಳಿದ್ದಾರೆ. ಸ್ನೇಕ್ ಐಲ್ಯಾಂಡ್‌ನ ಸೈನಿಕರು ರಷ್ಯಾದ ಯುದ್ಧನೌಕೆಗೆ 'ಹಾಳಾಗಿ ಹೋಗಿ, ಬೇಕಾದ್ದನ್ನು ಮಾಡಿಕೊಳ್ಳಿ' ಎಂದು ಆಕ್ರೋಶದಿಂದ ಹೇಳಿದರು; ನಾಗರಿಕರು ರಸ್ತೆಯಲ್ಲಿ ಅಡ್ಡ ಕುಳಿತು ರಷ್ಯಾದ ಟ್ಯಾಂಕ್‌ಗಳನ್ನು ಪ್ರತಿರೋಧಿಸಲು ಪ್ರಯತ್ನಿಸಿದರು. ರಾಷ್ಟ್ರ ನಿರ್ಮಾಣವು ಇದರಿಂದಲೇ ಆಗುತ್ತದೆ. ಟ್ಯಾಂಕ್‌ಗಳಿಗಿಂತ ಈ ಕಥೆಗಳೇ ಹೆಚ್ಚು ಸಶಕ್ತವಾಗಿವೆ.

ಜರ್ಮನ್ ದೌರ್ಜನ್ಯಗಳು ಮತ್ತು ಲೆನಿನ್‌ಗ್ರಾಡ್‌ನ ಮುತ್ತಿಗೆಯಲ್ಲಿ ರಷ್ಯಾದ ಶೌರ್ಯದ ಕುರಿತಾದ ಕಥೆಗಳನ್ನು ಬಾಲ್ಯದಲ್ಲಿ ಕೇಳುತ್ತಲೇ ಪುಟಿನ್ ಬೆಳೆದರು. ಪುಟಿನ್ ಅವರೇ ಈಗ ಆ ರೀತಿಯ ಕಥೆಗಳನ್ನು ನಿರ್ಮಿಸುತ್ತಿದ್ದಾರೆ, ಆದರೆ ಹಿಟ್ಲರ್ ಪಾತ್ರದಲ್ಲಿ ಸ್ವತಃ ನಟಿಸುತ್ತಿದ್ದಾರೆ.

ಉಕ್ರೇನ್‌ನ ಶೌರ್ಯದ ಕಥೆಗಳು ಇಡೀ ಜಗತ್ತಿಗೆ ಮಾದರಿಯಾಗಿವೆ. ಈ ಕಥೆಗಳು ಯುರೋಪಿಯನ್ ರಾಷ್ಟ್ರಗಳಿಗೆ, ಅಮೆರಿಕ ಆಡಳಿತಕ್ಕೆ ಮತ್ತು ರಷ್ಯಾದ ತುಳಿತಕ್ಕೊಳಗಾದ ನಾಗರಿಕರಿಗೆ ಧೈರ್ಯವನ್ನು ನೀಡುತ್ತವೆ. ಇಲ್ಲಿನ ಜನರು ಬರಿಗೈಯಿಂದ ಟ್ಯಾಂಕ್ ನಿಲ್ಲಿಸಲು ಧೈರ್ಯ ಮಾಡಿದರೆ, ಜರ್ಮನ್ ಸರ್ಕಾರವು ಅವರಿಗೆ ಕೆಲವು ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಪೂರೈಸಲು ಧೈರ್ಯ ಮಾಡಬಹುದು, ಅಮೆರಿಕ ಸರ್ಕಾರವು ರಷ್ಯಾವನ್ನು ಸ್ವಿಫ್ಟ್‌ (Swift)ನಿಂದ ಬೇರ್ಪಡಿಸುವ ಧೈರ್ಯ ಮಾಡಬಹುದು ಮತ್ತು ರಷ್ಯಾದ ಸಾಮಾನ್ಯ ಜನರು ಈ ಅರ್ಥಹೀನ ಯುದ್ಧವನ್ನು ವಿರೋಧಿಸಬಹುದು.

ದೇಣಿಗೆ ನೀಡುವುದಿರಲಿ, ನಿರಾಶ್ರಿತರನ್ನು ಸ್ವಾಗತಿಸುವುದಿರಲಿ ಅಥವಾ ಆನ್‌ಲೈನ್ ಹೋರಾಟಕ್ಕೆ ಸಹಾಯ ಮಾಡುವುದಿರಲಿ- ಇಂತಹ ಏನನ್ನಾದರೂ ನಾವೆಲ್ಲರೂ ಮಾಡಬೇಕೆಂದು ಅದು ಪ್ರೇರೇಪಿಸುತ್ತದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಇಡೀ ಪ್ರಪಂಚದ ಭವಿಷ್ಯವನ್ನು ರೂಪಿಸುತ್ತದೆ. ದಬ್ಬಾಳಿಕೆ ಮತ್ತು ಆಕ್ರಮಣಶೀಲತೆಯನ್ನು ಗೆಲ್ಲಲು ಬಿಟ್ಟರೆ, ನಾವೆಲ್ಲರೂ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಮೂಕ ಪ್ರೇಕ್ಷಕರಾಗಿ ಉಳಿಯುವುದರಲ್ಲಿ ಅರ್ಥವಿಲ್ಲ. ಇದು ಎದ್ದು ನಿಲ್ಲುವ, ಎಣಿಕೆಗೆ ಸಿಗುವ ಏನನ್ನಾದರೂ ಮಾಡುವ ಸಮಯ.

ಈ ಕಾರಣದಿಂದ ಯುದ್ಧವು ದೀರ್ಘಕಾಲ ನಡೆಯುವ ಸಾಧ್ಯತೆಯಿದೆ. ವಿಭಿನ್ನ ರೂಪಗಳನ್ನು ತಾಳಿ, ಇದು ಹಲವು ವರ್ಷಗಳವರೆಗೆ ಮುಂದುವರಿಯಬಹುದು. ಆದರೆ ಪ್ರಮುಖ ಸಮಸ್ಯೆಯನ್ನು ಈಗಾಗಲೇ ನಿರ್ಧರಿಸಲಾಗಿದೆ. ಕಳೆದ ಕೆಲವು ದಿನಗಳು ಉಕ್ರೇನ್ ತಾನು ಧೈರ್ಯಶಾಲಿ, ಉತ್ಸಾಹಭರಿತ ಜನರನ್ನು ಹೊಂದಿರುವ ಮುಕ್ತ ರಾಷ್ಟ್ರ ಎಂದು ಇಡೀ ಜಗತ್ತಿಗೆ ಸಾಬೀತುಪಡಿಸಿದೆ. ಅವರು ಆಕ್ರಮಣಶೀಲತೆಗೆ ಒಳಪಡುವುದಿಲ್ಲ ಅಥವಾ ವಿಸ್ತರಣಾವಾದಿಯ ವಿನ್ಯಾಸದಲ್ಲಿ ವಿಮೋಚನೆ ಹೊಂದುವುದಿಲ್ಲ.

10 ಸಾವಿರ ದಾಟಿತೇ ಸಾವಿನ ಸಂಖ್ಯೆ?

ಮಾರ್ಚ್ 2ರಂತೆ, ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿರುವಂತೆ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ 498 ರಷ್ಯನ್ ಸೈನಿಕರು ಅಸುನೀಗಿದ್ದಾರೆ ಹಾಗೂ 1,597ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ, ಇದು 'ಸೀಮಿತ ವಿಶೇಷ ಸೇನಾ ಕಾರ್ಯಾಚರಣೆ' ಎಂಬ ವಾದವು ಇಲ್ಲಿಗೆ ಕೊನೆಗೊಳ್ಳುತ್ತದೆ.

ಉಕ್ರೇನ್‌ನಲ್ಲಿ ಸಂಭವಿಸಿದ ಸಾವು-ನೋವಿನ ಪ್ರಮಾಣ ಇಂತಿದೆ:

ಉಕ್ರೇನ್‌ನ ತುರ್ತು ಸೇವೆಗಳ ಪ್ರಕಾರ, 2,000ಕ್ಕೂ ಹೆಚ್ಚು ನಾಗರಿಕರು ಯುದ್ಧದಲ್ಲಿ ಮಡಿದಿದ್ದಾರೆ. 2,870 ಉಕ್ರೇನ್ ಯೋಧರನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ ಅಧ್ಯಕ್ಷರು, ತಮ್ಮ ಸೇನೆಯು 9,000ಕ್ಕೂ ಹೆಚ್ಚು ರಷ್ಯನ್ ಯೋಧರ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ತನ್ನ 498 ಸೈನಿಕರು ಮಡಿದಿದ್ದಾರೆ ಎಂದು ರಷ್ಯಾ ಹೇಳಿದೆ.

ಫೆಬ್ರುವರಿ 24ರಿಂದ ರಷ್ಯಾ ನಡೆಸುತ್ತಿರುವ ಆಕ್ರಮಣದಲ್ಲಿ ಉಕ್ರೇನ್ ನಾಗರಿಕರು, ಸೈನಿಕರು, ರಷ್ಯಾದ ಯೋಧರು - ಎಲ್ಲ ಸೇರಿ 10,000ಕ್ಕೂ ಹೆಚ್ಚು ಜನರು ಜೀವ ತೆತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಉಕ್ರೇನ್ ಸಂಪರ್ಕ ವ್ಯವಸ್ಥೆಯು ಸಂಪೂರ್ಣ ನೆಲಕಚ್ಚಿದ್ದರಿಂದ ಯಾವುದೇ ಅಧಿಕೃತ ಅಥವಾ ದೃಢೀಕೃತ ಮಾಹಿತಿ ಲಭ್ಯವಿಲ್ಲ. ರಷ್ಯಾ ಏನು ಹೇಳಿಕೊಳ್ಳುತ್ತದೋ, ಅದನ್ನು ನಂಬಬೇಕಾಗಿದೆ.

ಉಕ್ರೇನ್ ಈವರೆಗೂ ಹೇಗೆ ಉಳಿದುಕೊಂಡಿತು?

ರಷ್ಯಾ (USSR) ಭಾಗವೇ ಆಗಿದ್ದ ಉಕ್ರೇನ್, ಬಲಿಷ್ಠವಾದ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ರಷ್ಯಾ ಕೆಲವು ಆಯಕಟ್ಟಿನ ಹಾಗೂ ರಾಜಕೀಯ ಪ್ರಾಮುಖ್ಯದ ಸ್ಥಳಗಳನ್ನು ವಶಪಡಿಸಿಕೊಂಡು, ಉಕ್ರೇನ್ ಶರಣಾಗುವಂತೆ ಮಾಡುತ್ತಿದೆ. ಇಡೀ ದೇಶವನ್ನು ನಾಶಪಡಿಸುವ ಉದ್ದೇಶ ಅದಕ್ಕಿಲ್ಲ. ವಿದ್ಯುತ್ ಪೂರೈಕೆ, ಸಂವಹನ, ಟಿವಿ ಸ್ಟೇಷನ್‌ಗಳು, ಸೇನಾ ನೆಲೆಗಳು- ಮುಂತಾದ ಆಯ್ದ ಸ್ಥಳಗಳ ಮೇಲೆ ಬಾಂಬ್‌ಗಳನ್ನು ಬೀಳಿಸುತ್ತಿದೆ. ಉಕ್ರೇನ್ ಜನರನ್ನು ಕೊಲ್ಲುವಲ್ಲಿ ಅದು ಆಸಕ್ತವಾಗಿಲ್ಲ. ಏಕೆಂದರೆ, ಅವರು ರಷ್ಯನ್ನರೂ ಆಗಿದ್ದಾರೆ. ಉಕ್ರೇನ್ ಸರ್ಕಾರವನ್ನು ಶರಣಾಗುವಂತೆ ಮಾಡುವುದು ಅದರ ಉದ್ದೇಶ. ಹೀಗಾಗಿ, ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿಗಳನ್ನು ಕೈಗೊಳ್ಳುತ್ತಿದೆ.

ಇದೇ ಯುದ್ಧವನ್ನು ಅಮೆರಿಕವು ಕೈಗೊಂಡಿದ್ದರೆ, ಇರಾಕ್‌ನಲ್ಲಿ ಮಾಡಿದಂತೆ ಅದು ಸಿಕ್ಕ ಸಿಕ್ಕಲ್ಲೆಲ್ಲ ಬಾಂಬ್ ದಾಳಿ ನಡೆಸುತ್ತಿತ್ತು. ಒಂದೇ ಹೊಡೆತಕ್ಕೆ ಅದು ಇರಾಕ್‌ ಅನ್ನು ನಾಶ ಮಾಡಿತು, ಆದರೆ ಹಲವು ಉಗ್ರಗಾಮಿಗಳನ್ನು ಸೃಷ್ಟಿಸಿತು.

ರಷ್ಯಾ ಮನಸ್ಸು ಮಾಡಿದರೆ, ಅದು ಉಕ್ರೇನ್‌ ಅನ್ನು ನಾಶ ಮಾಡಬಲ್ಲದು. ಆದರೆ, ಹಾಗೆ ಮಾಡುತ್ತಿಲ್ಲ. ಆ ದೇಶದ ನಾಗರಿಕರನ್ನು ದುರ್ಬಲಗೊಳಿಸಿ, ಶರಣಾಗುವಂತೆ ಮಾಡುತ್ತಿದೆ. ಅಮೆರಿಕ ಮತ್ತು ರಷ್ಯಾ ಯುದ್ಧ ಮಾಡುವ ವಿಧಾನಗಳಲ್ಲಿ ತುಂಬ ವ್ಯತ್ಯಾಸಗಳಿವೆ.

ರಷ್ಯಾವನ್ನು ಎದುರಿಸಲು ಉಕ್ರೇನ್ ವೀರೋಚಿತ ಪ್ರಯತ್ನಗಳನ್ನು ಮಾಡುತ್ತಿದೆ. ಉಕ್ರೇನ್ ಸೈನ್ಯದ ಮೇಲೆ ನಂಬಿಕೆ ಇರಿಸದೆ ಅಲ್ಲಿನ ಜನರಿಗೆ ಗತ್ಯಂತರವಿಲ್ಲ. ರಷ್ಯಾವನ್ನು ದ್ವೇಷಿಸಲು ಜನ ಒಗ್ಗಟ್ಟಾಗಿದ್ದಾರೆ. ಆ ದೇಶವು ಬಲವಾದ ವಾಯುಯಾನ ಮತ್ತು ಸೇನಾ ಇತಿಹಾಸವನ್ನು ಹೊಂದಿದೆ.

ರಷ್ಯಾ, ಉಕ್ರೇನಿನ ರಾಜಕೀಯ ನಾಯಕರನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ. ಪಾಶ್ಚಿಮಾತ್ಯ ಶಕ್ತಿಗಳತ್ತ ಒಲವಿರುವ ವ್ಯಕ್ತಿಗಳನ್ನು ಮುಗಿಸಲು, ಸೇನಾ ನೆಲೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮೇಲಾಧಾರ ಕಟ್ಟಡಗಳನ್ನು ಗುರಿ ಮಾಡಿಕೊಂಡಿದೆ. ಮನಸೋ ಇಚ್ಛೆ ಬಾಂಬ್ ದಾಳಿ ಮಾಡುವುದಿಲ್ಲ. ಅವರು ಪೆಟ್ರೋಲ್ ಬಂಕ್‌ಗಳು, ವಿದ್ಯುತ್ ಸ್ಥಾವರಗಳು, ರಸ್ತೆಗಳು, ಸೇತುವೆಗಳನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿದ್ದಾರೆ. ಅವರು ನಾಗರಿಕರನ್ನು ನೋಯಿಸಲು ಬಯಸುವುದಿಲ್ಲ, ಉಕ್ರೇನ್ ರಾಜಕೀಯ ನಾಯಕರನ್ನು ರಷ್ಯನ್ನರು ಖಂಡಿತ ಸೆರೆ ಹಿಡಿಯುತ್ತಾರೆ. ಅದಕ್ಕೆ ಒಂದಿಷ್ಟು ಸಮಯ ಬೇಕಾದೀತು. ಸಂವಹನ, ಇಂಧನ ಮಾರ್ಗಗಳು, ರೈಲ್ವೆ ಲೈನ್‌ಗಳು, ವಿದ್ಯುತ್ ಘಟಕಗಳು, ಸೇನಾ ನಿರ್ಮಾಣಗಳಿಗೆ ಹಾನಿ ಮಾಡದೆ ಒಬ್ಬ ವ್ಯಕ್ತಿಯನ್ನು ಸೆರೆ ಹಿಡಿಯುವುದು ಸುಲಭವಲ್ಲ. ಆದರೆ, ಒಂದು ರಾಷ್ಟ್ರ ನಿರ್ಮಾಣಕ್ಕೆ ಶತ ಶತಮಾನಗಳ ಅಗತ್ಯವಿದೆ ಎಂಬ ಅರಿವು ರಷ್ಯಾಕ್ಕಿದೆ. ಹೀಗಾಗಿ, ಕಡಿಮೆ ಹಾನಿಯ ಮೂಲಕ ಗರಿಷ್ಠ ಫಲಿತಾಂಶವನ್ನು ಪಡೆಯಲು ಅದು ಯೋಜನಾಬದ್ಧವಾಗಿ ಮುನ್ನಡೆಯುತ್ತಿದೆ. ತನ್ನ ಶಕ್ತಿಗೆ ಉಕ್ರೇನ್ ಎಂದಿಗೂ ಸಮನಲ್ಲ ಎಂಬ ಅರಿವು ರಷ್ಯಾಗಿದೆ. ಅಮೆರಿಕವು ಇರಾಕ್‌ ಅನ್ನು 24 ತಾಸುಗಳಲ್ಲಿ ನಾಶ ಮಾಡಿದಂತೆ ರಷ್ಯನ್ನರು ವರ್ತಿಸಲಾರರು.

ಲೇಖಕರು-ರಕ್ಷಣಾ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT