ಸೋಮವಾರ, ಆಗಸ್ಟ್ 15, 2022
24 °C

ಸದಾಶಿವ ವರದಿ ಬಚ್ಚಿಟ್ಟದ್ದು ಏಕೆ: ವಕೀಲ ಅನಂತ ನಾಯಕ

ಅನಂತ ನಾಯಕ ಎನ್. Updated:

ಅಕ್ಷರ ಗಾತ್ರ : | |

Prajavani

ಭಾರತ ಬಹುತ್ವವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ದೇಶ. ನಮ್ಮಲ್ಲಿ 4,635 ಜಾತಿ, ಜನಾಂಗ, ಬುಡಕಟ್ಟುಗಳಿವೆ. ಸ್ವಾತಂತ್ರ್ಯಪೂರ್ವ ಮತ್ತು ನಂತರ ಸಿಕ್ಕ ಮೀಸಲಾತಿಯ ಅವಕಾಶಗಳಿಂದಾಗಿ ವಂಚಿತ ಸಮುದಾಯಗಳು ಮುಖ್ಯವಾಹಿನಿಗೆ ಬರುತ್ತಿವೆಯಾರೂ ಜಾತಿ ತಾರತಮ್ಯದ ಕಳಂಕ ಇಂದಿಗೂ ತಪ್ಪಿಲ್ಲ.

ಆಂಧ್ರ ಪ್ರದೇಶ ಸರ್ಕಾರ ಪರಿಶಿಷ್ಟ ಜಾತಿಯೊಳಗಿನ ಮಾಲ ಮತ್ತು ಮಾದಿಗ ಸಮುದಾಯಗಳಿಗೆ ಒಳಮೀಸಲಾತಿ ಹಂಚಿಕೆ ಮಾಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಇ.ವಿ.ಚಿನ್ನಯ್ಯ ವಿರುದ್ಧ ಆಂಧ್ರಪ್ರದೇಶ ರಾಜ್ಯ (ಎಐಆರ್ 2005 ಎಸ್‍ಸಿ 162) ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಐವರು ಸದಸ್ಯರ ಪೀಠ ‘ಪರಿಶಿಷ್ಟ ಜಾತಿಗಳ ವರ್ಗೀಕರಣ ಅಸಾಂವಿಧಾನಿಕ’ ಎಂದು ತೀರ್ಪು ನೀಡಿ, ಒಳಮೀಸಲಾತಿ ವರ್ಗೀಕರಣವನ್ನು ಅಸಿಂಧುಗೊಳಿಸಿತು.

ಈನಡುವೆ, ಪರಿಶಿಷ್ಟ ಜಾತಿಗಳ ನಡುವೆ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಕರ್ನಾಟಕದಲ್ಲೂ ಹೋರಾಟಗಳು ನಡೆದ ಕಾರಣಕ್ಕೆ, ಪರಿಶಿಷ್ಟ ಜಾತಿಗಳ ಮಧ್ಯೆ ಸೌಲಭ್ಯಗಳ ಹಂಚಿಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ 2005ರಲ್ಲಿ ರಾಜ್ಯ ಸರ್ಕಾರ ಆಯೋಗವೊಂದನ್ನು ರಚಿಸಿತು.

ನ್ಯಾಯಮೂರ್ತಿಗಳಾದ ಎನ್.ವೈ. ಹನುಮಂತಪ್ಪ ಮತ್ತು ಬಾಲಕೃಷ್ಣ ಅವರಿಂದ ಕಾರಣಾಂತರದಿಂದ ತೆರವಾಗಿದ್ದ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ನ್ಯಾ. ಎ.ಜೆ. ಸದಾಶಿವ ಅವರು ನೇಮಕಗೊಂಡರು. ಮೀಸಲಾತಿ ಕುರಿತು ಅಧ್ಯಯನ ನಡೆಸಿದ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂಟು ವರ್ಷಗಳು ಉರುಳಿವೆ.

ಹತ್ತಾರು ಕೋಟಿ ರೂಪಾಯಿಯನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಆದರೆ, ಸರ್ಕಾರ ಈ ವರದಿಯನ್ನು ಬಹಿರಂಗಪಡಿಸದೆ ಬಚ್ಚಿಟ್ಟಿದೆ. ಪರಿಶಿಷ್ಟ ಸಮುದಾಯಗಳ ಪ್ರಗತಿ ಮತ್ತು ಏಕತೆಯನ್ನು ಬಲಪಡಿಸುವ ಉದ್ದೇಶ ಸರ್ಕಾರಕ್ಕೆ ಇದ್ದಲ್ಲಿ ಈ ವರದಿಯನ್ನು ಬಚ್ಚಿಡುವ ಅಗತ್ಯವಿರಲಿಲ್ಲ. ಸಹೋದರ ಸಮುದಾಯಗಳು ಪರ- ವಿರೋಧಿ ಹೋರಾಟ ನಡೆಸುತ್ತಿರುವುದನ್ನು ನೋಡುತ್ತಾ ಸರ್ಕಾರ ಮೌನವಾಗಿದೆ.

ಸಹಬಾಳ್ವೆ ಮತ್ತು ಪ್ರಜಾತಂತ್ರ ನೀತಿಗಳನ್ನು ಬಲಪಡಿಸುವ  ಪ್ರಕ್ರಿಯೆಗಳ ಬಗ್ಗೆ ನಮ್ಮ ಸರ್ಕಾರಗಳಿಗೆ ಕಾಳಜಿ ಇದ್ದಲ್ಲಿ ತಕ್ಷಣವೇ ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಬಿಡಬೇಕು. ವರದಿಯನ್ನು ಕನ್ನಡಕ್ಕೆ ಭಾಷಾಂತರಿಸಿ, ಪರಿಶಿಷ್ಟರ ಪಟ್ಟಿಯಲ್ಲಿರುವ 101 ಬಾಧಿತ ಜಾತಿಗಳಿಗೆ ಹಂಚಬೇಕು. ಕಾನೂನು ತಜ್ಞರು, ಆಸಕ್ತರಿಗೆ ಇದರ ಪ್ರತಿ ಲಭ್ಯವಾಗುವಂತೆ ಮಾಡಬೇಕು. ಸಂಬಂಧಪಟ್ಟವರಿಗೆ ವರದಿಯಲ್ಲಿರುವುದನ್ನು ಅರಿಯಲು ಅವಕಾಶ ಮಾಡಿಕೊಡಬೇಕು. ಈ ವರದಿಯ ಬಗ್ಗೆ ಯಾರಿಗಾದರೂ ಪ್ರಶ್ನೆಗಳು ಉಂಟಾದರೆ, ಆಕ್ಷೇಪಣೆ, ತಕರಾರು ಸಲ್ಲಿಸಲು ಕಾಲಾವಕಾಶ ನೀಡಬೇಕು. ತದನಂತರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪ್ರಜಾಸತ್ತಾತ್ಮಕವಾಗಿ ಚರ್ಚೆಗೊಳಪಡಿಸಬೇಕು. ಈ ವರದಿ ಅವೈಜ್ಞಾನಿಕ ಅಥವಾ ಅಪ್ರಸ್ತುತ ಎನಿಸಿದರೆ, ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಅಥವಾ ಭಾಗಶಃ ಅಂಶಗಳನ್ನು ಒಪ್ಪುವ ಅಧಿಕಾರ ಸರ್ಕಾರಕ್ಕಿದೆ. ಕಾನೂನು ಸಮ್ಮತವಾಗಿದ್ದಲ್ಲಿ ಒಪ್ಪುವುದು ಅಥವಾ ಬಿಡುವುದು ವಿಧಾನಸಭೆಯ ಪರಮಾಧಿಕಾರ.
ನ್ಯಾಯಾಲಯದ ಪ್ರಕ್ರಿಯೆಗಳಂತೂ ಬಾಧಿತ ಜನರ ಪಾಲಿಗೆ ಇದ್ದೇ ಇವೆ.

ವರದಿಯನ್ನು ಚರ್ಚೆಗೆ ಒಳಪಡಿಸದೆ, ಬಾಧಿತ ಸಮುದಾಯಗಳಿಗೂ ಗೊತ್ತಿಲ್ಲದೆ, ವಿಧಾನಸಭೆ ಅಥವಾ ನ್ಯಾಯಾಲಯದ ವ್ಯಾಪ್ತಿಗೂ ತರದೆ ಏಕಪಕ್ಷೀಯವಾಗಿ ಮತ್ತು ಗೌಪ್ಯವಾಗಿ ‘ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ’ ಎನ್ನುವುದು ಪ್ರಜಾಸತ್ತಾತ್ಮಕ ನಡವಳಿಕೆಯಲ್ಲ. ವರದಿಯನ್ನು ತಕ್ಷಣ ಜಾರಿ ಮಾಡಿ ಎನ್ನುವುದು ಸರ್ವಾಧಿಕಾರಿ ಮನೋಭಾವವಾಗುತ್ತದೆ. ‘ವರದಿಯನ್ನು ಬಹಿರಂಗಪಡಿಸಲೇಬೇಡಿ’ ಎನ್ನುವುದು ಮತ್ತೊಂದು ರೀತಿಯ ಬೆದರಿಕೆ. ಪರ- ವಿರೋಧಿ ಗುಂಪುಗಳು ಸಂಯಮದಿಂದ ಕಾನೂನು ಪರಿಧಿಯಲ್ಲಿ ವರ್ತಿಸುವುದು ಇಂದಿನ ಅಗತ್ಯವಾಗಿದೆ.

ಈ ವರದಿಯ ದೃಢೀಕೃತ ಪ್ರತಿ ಯಾರಿಗೂ ಸಿಗದಿರುವುದರಿಂದ ಹಲವಾರು ಊಹಾಪೋಹಗಳೆದ್ದಿವೆ. ಆಯೋಗದ ಕಾರ್ಯ ವಿಧಾನದ ಬಗ್ಗೆ ಸಹಜವಾಗಿಯೇ ಸಂಬಂಧಪಟ್ಟ ಸಮುದಾಯಗಳ ನಡುವೆ ಗುಮಾನಿಗಳಿವೆ. ಮನೆ ಮನೆ ಸಮೀಕ್ಷೆ ಮಾಡಿದ್ದಾರೆಯೇ? ವರದಿ ತಯಾರಿಸಲು ಸಮೀಕ್ಷೆ ಮತ್ತು ಅಧ್ಯಯನಕ್ಕಾಗಿ ಎಷ್ಟು ಸಿಬ್ಬಂದಿಯನ್ನು, ಎಲ್ಲಿಂದ ನಿಯೋಜಿಸಲಾಗಿತ್ತು? ಅವರ ಕಾರ್ಯವಿಧಾನ ಹೇಗಿತ್ತು? ಇಷ್ಟು ದೊಡ್ಡ ಸಮುದಾಯವನ್ನು ಸಮಗ್ರವಾಗಿ ಸಮೀಕ್ಷೆಗೆ ಒಳಪಡಿಸಿದ್ದು ಹೇಗೆ? ಆಯೋಗದ ಕಾರ್ಯವಿಧಾನ ಮತ್ತು ಅಧ್ಯಯನದ ಮಾನದಂಡಗಳೇನು...  ಹೀಗೆ ಹಲವು ಪ್ರಶ್ನೆಗಳೆದ್ದಿವೆ. ಹಿಂದೊಮ್ಮೆ ನ್ಯಾ. ಸದಾಶಿವ ಅವರೇ ಮಾಧ್ಯಮ ಗೋಷ್ಠಿಯಲ್ಲಿ, ‘ಸರ್ಕಾರವು ನಮ್ಮ ಆಯೋಗಕ್ಕೆ ಅಗತ್ಯ ಸಿಬ್ಬಂದಿ, ಸೌಲಭ್ಯ ಒದಗಿಸಿಲ್ಲ’ ಎಂದು ಬೇಸರ  ವ್ಯಕ್ತಪಡಿಸಿದ್ದರು.

ಸೋರಿಕೆಯಾಗಿರುವ ಈ ವರದಿಯಲ್ಲಿನ ಕೆಲವು ಅಂಶಗಳು ಈಗಾಗಲೇ ಪರಿಶಿಷ್ಟ ಜಾತಿಗಳ ಜನರಲ್ಲಿ ಗೊಂದಲ, ಗುಮಾನಿ ಮತ್ತು ಆತಂಕಗಳನ್ನು ಸೃಷ್ಟಿಸಿವೆ. ‘ಅಯೋಗದ ವರದಿಯಲ್ಲಿವೆ ಎನ್ನಲಾಗುವ ಅಂಕಿಅಂಶಗಳು, ವರ್ಗೀಕರಣದ ವಿಧಾನ, ಸಂಬಂಧಿತ ಜಾತಿಗಳನ್ನು ಗುಂಪುಗಳನ್ನು ಮಾಡಲು ಬಳಸಿರುವ ಮಾನದಂಡ, ಸಮುದಾಯಗಳ ವ್ಯಾಖ್ಯಾನ, ಸ್ಥಿತಿಗತಿಗಳ ದಾಖಲೀಕರಣ, ಇತ್ಯಾದಿ ಅಂಶಗಳು ಪ್ರಶ್ನಾರ್ಹವಾಗಿವೆ’ ಎಂಬುದು ಛಲವಾದಿ, ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜಾತಿಗಳ ಸಂಘಟನೆಗಳ ಆರೋಪವಾಗಿವೆ.

ಎಡ-ಬಲ, ಸ್ಪೃಶ್ಯ–ಅಸ್ಪೃಶ್ಯ ಇತ್ಯಾದಿ ಅಸಾಂವಿಧಾನಿಕ ಶಬ್ದಗಳ ಬಳಕೆ ಪರಿಶಿಷ್ಟ ಜಾತಿ ಸಹೋದರ ಸಮುದಾಯಗಳ ಮಧ್ಯೆ ಕಂದಕವನ್ನು ಸೃಷ್ಟಿಸಿದೆ. ಹೀಗಾಗಿ ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕಾಗಿದೆ.

‘ಕೆನೆಪದರ’ ಎಂಬ ಕಂಟಕ 

ಸುಪ್ರೀಂ ಕೋರ್ಟ್‌ನ ‘ದೇವಿಂದರ್ ಸಿಂಗ್ ಮತ್ತು ಪಂಜಾಬ್’ ಪ್ರಕರಣದಲ್ಲಿ ಐವರು ಸದಸ್ಯರ ಪೀಠ ಹೇಳಿದ ಅಭಿಪ್ರಾಯ ದೇಶಾದ್ಯಂತ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಪರಿಶಿಷ್ಟ ಜಾತಿಗಳಲ್ಲಿ ಕೆನೆಪದರ ಪರಿಕಲ್ಪನೆ ಅಳವಡಿಕೆ ಮಾಡಬೇಕೆನ್ನುವ ನ್ಯಾಯಾಲಯದ ಅಭಿಪ್ರಾಯ ಸಾಮಾಜಿಕ ಮೀಸಲಾತಿಗೆ ಕಂಟಕವೆಂಬುದಂತೂ ದಿಟ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟಿನ ವಿಸ್ತೃತ ಪೀಠದಲ್ಲಿ ಇದು ಚರ್ಚೆಗೆ ಬರಲಿದೆ. ಈ ಪ್ರಕ್ರಿಯೆಗಳಿಗಾಗಿ ಕಾಯೋಣ. ಅಗತ್ಯವಿದ್ದಾಗ ನ್ಯಾಯಾಲಯದಲ್ಲಿ ಮಧ್ಯಪ್ರವೇಶ ಮಾಡಲು ಸಮುದಾಯಗಳಿಗೆ ಅವಕಾಶ ಇರುತ್ತದೆ. ಆದರೆ ಪರಿಶಿಷ್ಟ ಜಾತಿಗಳ ಮೇಲೆ ಕೆನೆಪದರ ನೀತಿ ಅಳವಡಿಕೆ ಪ್ರಸ್ತಾವ ಪರಿಶಿಷ್ಟರ ಮೀಸಲಾತಿ ಹಕ್ಕನ್ನು ಬುಡಮೇಲು ಮಾಡುವ ಹುನ್ನಾರದಂತೆ ಕಾಣುತ್ತಿದೆ.

ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ‘ಕೆನೆಪದರ ನೀತಿ ಹಿಂದುಳಿದ ಜಾತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಿದ್ದಾಗ್ಯೂ ಈಗ ಕೆನೆಪದರ ಚರ್ಚೆ ಮುನ್ನೆಲೆಗೆ ತರುತ್ತಿರುವುದರ ಹಿಂದಿನ ಉದ್ದೇಶಗಳ ಬಗ್ಗೆ ಸಹಜವಾಗಿಯೇ ಅನುಮಾನಗಳು ಮೂಡಿವೆ. ಆರ್ಥಿಕ ಕಾರಣದಿಂದಾಗಿ ಕೆನೆಪದರ ನೀತಿಯನ್ನು ಅನ್ವಯಿಸಿ ಮೀಸಲಾತಿ ಪಟ್ಟಿಯಿಂದ ಪರಿಶಿಷ್ಟ ಜಾತಿ ಅಥವಾ ಕುಟುಂಬಗಳನ್ನು ಹೊರ ಹಾಕುವುದು ಈ ತೀರ್ಪಿನ ಒಳ ಮರ್ಮ ಇದ್ದಂತೆ ಕಾಣುತ್ತಿದೆ. ಕೇವಲ ಆರ್ಥಿಕ ಪ್ರಗತಿಯಿಂದ ಸಾಮಾಜಿಕ ತಾರತಮ್ಯ ಅಥವಾ ಸಾಮಾಜಿಕ ಅಪಮಾನವನ್ನು ದೂರೀಕರಿಸಲಾಗದು. ಮೀಸಲಾತಿಯು ಬಡತನ ನಿರ್ಮೂಲನೆ ಕಾರ್ಯಕ್ರಮ ಅಲ್ಲ. ಅದು ಸಾಮಾಜಿಕ ಸಮಾನತೆ ಸಾಧಿಸಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ಚಿಕ್ಕ ಸಾಧನ. ಸಾಮಾಜಿಕ ಸಮಭಾವದ ಸಮಾಜ ನಿರ್ಮಾಣ ಆಗುವವರೆಗೂ ಮೀಸಲಾತಿ ಮತ್ತು ಸೂಕ್ತ ಪ್ರಾತಿನಿಧ್ಯದ ಅಗತ್ಯವಿದೆ. ಹೀಗಾಗಿ ಎಸ್ಸಿ ಮತ್ತು ಎಸ್ಟಿಗಳಲ್ಲಿ ಕೆನೆಪದರ ಅನ್ವಯಿಸುವ ಚರ್ಚೆಯೇ ಸದ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತ.

(ಲೇಖಕ ಹೈಕೋರ್ಟ್‌ ವಕೀಲ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು