ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ಆತ್ಮದರ್ಶನದ ಕ್ರಾಂತಿ

ಇಂದು ಸಂಕ್ರಾಂತಿ
Last Updated 14 ಜನವರಿ 2022, 19:30 IST
ಅಕ್ಷರ ಗಾತ್ರ

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನೇ ‘ಸಂಕ್ರಾಂತಿ’ ಎಂದು ಕರೆಯುವುದು. ಈ ಎಣಿಕೆಯಂತೆ ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಉಂಟಾಗುತ್ತವೆ. ಆದರೆ ಮಕರಸಂಕ್ರಾಂತಿಯನ್ನೇ ವಿಶೇಷವಾಗಿ ಆಚರಿಸಲು ಕಾರಣ ಎಂದರೆ ಸೂರ್ಯನು ತನ್ನ ಸಂಚಾರವನ್ನು ದಕ್ಷಿಣದಿಕ್ಕಿನಿಂದ ಉತ್ತರದ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎನ್ನುವುದು.

ಸೂರ್ಯ ನಮ್ಮ ಜೀವನವನ್ನು ಪ್ರಭಾವಿಸುವ ಪ್ರತ್ಯಕ್ಷ ದೈವ. ಹೀಗಾಗಿಯೇ ಅವನ ಆರಾಧನೆಯನ್ನು ನಮ್ಮ ಸಂಸ್ಕೃತಿಯೂ ರೂಢಿಸಿಕೊಂಡಿತು. ನಮಗೆ ಒಳಿತು ಮಾಡುವವರನ್ನು ಆರಾಧಿಸುವುದು, ಅವರ ಇರುವಿಕೆಯನ್ನೇ ಸಂಭ್ರಮಿಸುವುದು – ಇಂಥವೆಲ್ಲ ಸಂಸ್ಕೃತಿಯ ರೂಢಿಗಳೇ ಅಲ್ಲವೆ? ಹೆಚ್ಚು ಕಡಿಮೆ ಎಲ್ಲ ಪ್ರಾಚೀನ ಸಂಸ್ಕೃತಿಗಳೂ ಸೂರ್ಯನನ್ನು ಆರಾಧಿಸುತ್ತ ಬಂದಿವೆ.

ವೇದಗಳಲ್ಲಿರುವ ಸೂರ್ಯನ ಕಲ್ಪನೆಯ ವಿವರಗಳು ಸೂರ್ಯತತ್ತ್ವದ ಹಲವು ಆಯಾಮಗಳನ್ನು ಸೂಚಿಸುತ್ತವೆ. ಸೂರ್ಯನ ಹೆಸರುಗಳಲ್ಲೂ ಈ ತತ್ತ್ವದ ಮಹತ್ವ ಎದ್ದುಕಾಣುವುದು. ಸೂರ್ಯನಿಗೆ ಮೊದಲಿಗೆ ಇಬ್ಬರು ಹೆಂಡತಿಯರಿದ್ದರಂತೆ; ಉಷಸ್ಸು ಮತ್ತು ಶರಣ್ಯು. ಸೂರ್ಯೋದಯದ ಪೂರ್ವಕಾಲವೇ ಉಷಸ್ಸು. ಇವಳನ್ನು ಪ್ರೇಮಿಯಾಗಿ ಸೂರ್ಯ ಹಿಂಬಾಲಿಸಿ ಬರುತ್ತಾನಂತೆ; ವೇದಗಳಲ್ಲಿಯ ಉಷಸ್ಸಿನ ವರ್ಣನೆಯ ಈ ಭಾಗಗಳು ತುಂಬ ಕಾವ್ಯಮಯವಾಗಿವೆ. ಶರಣ್ಯು – ಇವಳೇ ದ್ವೌ, ಸಂಜ್ಞಾ, ರಾಜ್ಞಿ; ಆಕಾಶಸ್ವರೂಪಿಯಾದವಳು. ನಿಕ್ಷುಭಾ ಎಂಬುವಳು ಸೂರ್ಯನಿಗೆ ಮೂರನೆಯ ಹೆಂಡತಿಯಾದಳು; ಇವಳೇ ’ಛಾಯಾ‘ ಎಂಬ ಹೆಸರನ್ನು ಪಡೆದಳು. ಇವಳು ಭೂಮಿಗೂ ಸಂಕೇತ; ಅನ್ನ, ಅಮೃತ, ಔಷಧಗಳನ್ನು ಸೃಜಿಸುವವಳು ಇವಳೇ.

ಸೂರ್ಯನ ರಥಕ್ಕೆ ಒಂದೇ ಕುದುರೆ ಎಂದೂ ವರ್ಣನೆಯಿದೆ. ಇದು ಬೆಳಕು, ಎಂದರೆ ಜ್ಞಾನದ ಅದ್ವೈತವನ್ನು ಸೂಚಿಸುವಂತಿದೆ. ಬ್ರಾಹ್ಮಣಗಳಲ್ಲಿ, ಉಪನಿಷತ್ತುಗಳಲ್ಲಿ ಆದಿತ್ಯನನ್ನು ಬ್ರಹ್ಮ ಎನ್ನಲಾಗಿದೆ. ಆದಿತ್ಯ ಎಂಬುದು ಸೂರ್ಯನ ಇನ್ನೊಂದು ಹೆಸರು ಅಲ್ಲವೆ? ಸೂರ್ಯನ ರಥಕ್ಕೆ ಏಳು ಕುದುರೆಗಳು ಎಂಬ ಕಲ್ಪನೆಯೂ ಇದೆ. ಏಳು ಎಂಬುದು ಕಿರಣಗಳ ಸಂಕೇತ; ವಾರಗಳಿಗೂ ಸಂಕೇತ; ರಥದ ಚಕ್ರಗಳಿಗಿರುವ ಹನ್ನೆರಡು ಅರಗಳು ಸಂವತ್ಸರವನ್ನು ಪ್ರತಿನಿಧಿಸುತ್ತವೆ. ಸೂರ್ಯ ಎಂದರೆ ಕಾಲ, ಎಂದರೆ ಸೃಷ್ಟಿಯ ಯಾನವನ್ನು ಸಂಕೇತಿಸುವ ದೇವತೆ. ಏಳು ಕುದುರೆಗಳು ಏಳು ಛಂದಸ್ಸುಗಳನ್ನು ಸೂಚಿಸುತ್ತದೆ ಎಂದೂ ಅರ್ಥಮಾಡುತ್ತಾರೆ. ಏಳು ಛಂದಸ್ಸುಗಳಲ್ಲಿಯೇ ವೇದ, ಎಂದರೆ ಅರಿವು ಹರಡಿಕೊಂಡಿರುವುದು. ಸೂರ್ಯನ ಎಡ–ಬಲಭಾಗದಲ್ಲಿ ಇಬ್ಬರು ಪರಿವಾರದೇವತೆಗಳಿದ್ದಾರೆ. ಬಲಭಾಗದಲ್ಲಿರುವವನು ಲೇಖನಿಯನ್ನೂ ಮಸಿಕುಡಿಕೆಯನ್ನೂ ಹಿಡಿದಿರುವಂತೆಯೂ, ಎಡಭಾಗದಲ್ಲಿರುವವನು ಖಡ್ಗವನ್ನು ಹಿಡಿದಿರುವಂತೆಯೂ ತೋರಿಸಲಾಗುತ್ತದೆ. ಜ್ಞಾನ ಮತ್ತು ಬಲ, ಬುದ್ಧಿ ಮತ್ತು ಕ್ರಿಯಾಶೀಲತೆಯ ಸಮನ್ವಯವನ್ನು ಇಲ್ಲಿ ಕಾಣಬಹುದು. ಒಟ್ಟಿನಲ್ಲಿ, ಸೂರ್ಯನಿರದ ನಮ್ಮ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ.

ಸೂರ್ಯನನ್ನು ವೇದಗಳಲ್ಲಿ ಒಬ್ಬ ವೈದ್ಯನಂತೆಯೂ ಸ್ತುತಿಸಲಾಗಿದೆ; ಎಲ್ಲ ರೋಗಗಳನ್ನೂ ಪರಿಹರಿಸಬಲ್ಲವನು ಎಂದು ಕೊಂಡಾಡಿದ್ದಾರೆ. ಸೂರ್ಯನ ಬೆಳಕು ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರದು ಎಂಬ ವಾಸ್ತವವನ್ನು ಗ್ರಹಿಸಿದರೂ ವೇದಗಳ ಈ ಸಾಂಕೇತಿಕತೆ ಮನವರಿಕೆಯಾದೀತು. ನಮಗೆ ಇಂದು ಸೂರ್ಯ ಮುಖ್ಯವಾಗಿ ಒದಗಬೇಕಾದದ್ದು ಸರ್ವರೋಗನಿವಾರಕನ ಸ್ವರೂಪದಲ್ಲಿಯೇ ಹೌದಲ್ಲವೆ? ಗಾಯತ್ರೀಮಂತ್ರದ ಉದ್ದೇಶವೇ ಸೂರ್ಯನ ಪ್ರಾರ್ಥನೆ; ಒಳ್ಳೆಯ ಬುದ್ಧಿಯನ್ನು ನಮ್ಮಲ್ಲಿ ಪ್ರಚೋದಿಸು – ಎಂಬುದು ಅದರ ತಾತ್ಪರ್ಯ. ಇಂದು ನಮಗೆ ಒದಗಿರುವ ಸಂಕಷ್ಟದಿಂದ ಪಾರಾಗಲು ನಮ್ಮ ಮನಸ್ಸು–ಬುದ್ಧಿ–ದೇಹಗಳು ಸರಿಯಾದ ಕ್ರಮದಲ್ಲಿ ಕೆಲಸಮಾಡಬೇಕು; ಈ ತಿಳಿವಳಿಕೆ ಹರಳುಗಟ್ಟುವುದೇ ಸೂರ್ಯನ ಅನುಗ್ರಹದಿಂದ. ಉತ್ತರದಿಕ್ಕಿನ ಕಡೆಗೆ ಸೂರ್ಯನ ಪಯಣ ಎಂದರೆ ದೇವಯಾನದ ಕಡೆಗೆ ಪಯಣ. ದೈವತ್ವ ಎಂದರೆ ನಮ್ಮ ಬಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಷ್ಟೆ. ವ್ಯಷ್ಟಿ–ಸಮಷ್ಟಿಗಳ ಆರೋಗ್ಯ–ಆನಂದಗಳು ನಮ್ಮ ಭಾವ–ಬುದ್ಧಿಗಳ ಬೆಳಕಿನಲ್ಲಿ ಸೃಷ್ಟಿಯಾಗುವಂಥ ಆತ್ಮತತ್ತ್ವಗಳು ಎಂಬ ಮಹಾದರ್ಶನವನ್ನು ಇಂದಿನ ಸಂಕ್ರಾಂತಿ ನಮಗೆ ಒದಗಿಸುವ ಕ್ರಾಂತದರ್ಶನವಾಗಲಿ. ಎಳ್ಳು–ಬೆಲ್ಲವನ್ನು ತಿಂದು ಒಳ್ಳೆಯ ಮಾತನ್ನು ಆಡೋಣ. ಮಾತು ನಮ್ಮ ಜೀವನದ ಮಹಾಪಥವೇ ಹೌದಲ್ಲವೆ? ದಾರಿ ಚೆನ್ನಾಗಿದ್ದರೆ – ಪ್ರಯಾಣವೂ ಸೊಗಸು, ಗುರಿಯೂ ಸುಲಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT