ಶನಿವಾರ, ಸೆಪ್ಟೆಂಬರ್ 18, 2021
30 °C
ಭಾರತೀಯ ದಂಡ ಸಂಹಿತೆಯಸೆಕ್ಷನ್‌ 124 ಎ ರದ್ದುಪಡಿಸಬೇಕೇ?

‘ದೇಶ ದ್ರೋಹಿ’ಗಳನ್ನು ದಂಡಿಸಲು ಕಾನೂನು ಬೇಕು: ಡಿಎಚ್‌ ಶಂಕರಮೂರ್ತಿ

ಡಿ.ಎಚ್‌.ಶಂಕರಮೂರ್ತಿ Updated:

ಅಕ್ಷರ ಗಾತ್ರ : | |

1948ರಲ್ಲಿ ಸೆಕ್ಷನ್‌ 124 ಎ ಜತೆಗೆ ಬಳಸುತ್ತಿದ್ದ ‘ದೇಶದ್ರೋಹ’ ಪದವನ್ನು ತೆಗೆಯಲಾಯಿತು. ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದು, ಕೆ.ಎಂ.ಮುನ್ಷಿ ಅವರು ಬ್ರಿಟಿಷ್‌ ಕಾಲದಿಂದ ಬಳಕೆಯಲ್ಲಿದ್ದ ‘ದೇಶದ್ರೋಹ’ ಪದ ತೆಗೆಯಲು ಪ್ರಸ್ತಾವನೆ ಮಂಡಿಸಿದ್ದರು. 1949ರಲ್ಲಿ ಸಂವಿಧಾನವನ್ನು ಒಪ್ಪಿಕೊಂಡಾಗ ಅದರಲ್ಲಿ ‘ದೇಶದ್ರೋಹ’ ಪದ ಇರಲಿಲ್ಲ. ಸಂಪೂರ್ಣ ವಾಕ್‌ ಸ್ವಾತಂತ್ರ್ಯ ನೀಡುವ 19(ಎ) ಅನ್ನು ಸೇರಿಸಲಾಗಿತ್ತು. ‘ದೇಶದ್ರೋಹ’ ಪದ ತೆಗೆದರೂ ಅದರ ಆಶಯವುಳ್ಳ 124 ಎ ಸೆಕ್ಷನ್‌ ಅನ್ನು ಐಪಿಸಿಯಲ್ಲಿ ಮುಂದುವರಿಸಲಾಯಿತು. 1951ರಲ್ಲಿ ಅಂದಿನ ಪ್ರಧಾನಿ ಹಾಗೂ ‘ಸ್ವಾತಂತ್ರ್ಯ ಪ್ರೇಮಿ’ ಎಂದು ಕರೆಸಿಕೊಳ್ಳುತ್ತಿದ್ದ ಜವಾಹರಲಾಲ್‌ ನೆಹರೂ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಪೂರ್ಣ ವಾಕ್‌ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ, ಕೆಲವು ನಿರ್ಬಂಧಗಳನ್ನು ವಿಧಿಸಿದರು. ಸರ್ಕಾರಕ್ಕೆ ದಂಡನೆಯ ‘ಅಧಿಕಾರ’ ನೀಡಿದರು. ‘ದೇಶ ದ್ರೋಹ’ ಸೆಕ್ಷನ್ ಮರುಸ್ಥಾಪನೆ ಮಾಡಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಇಂದಿರಾಗಾಂಧಿ ಅವರು ಸೆಕ್ಷನ್‌ 124 ಎ ಅನ್ನು ‘ದಂಡಾರ್ಹ ಅಪರಾಧ’ದ ವ್ಯಾಪ್ತಿಗೆ ಒಳಪಡಿಸಿ, ವಾರಂಟ್‌ ಇಲ್ಲದೆ ಬಂಧಿಸುವ ಅಧಿಕಾರವನ್ನೂ ಪೊಲೀಸರಿಗೆ ನೀಡಿದರು. ಈ ಕಾಯ್ದೆ ರದ್ದು ಮಾಡಬೇಕು ಎಂದು ವಾದಿಸುವವರು ಇದನ್ನು ಪ್ರಸ್ತಾಪಿಸುತ್ತಿಲ್ಲ ಏಕೆ?

ಇಂದಿನ ಸಂದರ್ಭದಲ್ಲಿ ಕಾಯ್ದೆಯ ಅಗತ್ಯವಿದೆ. ಆದರೆ, ಅದನ್ನು ವಿವೇಚನೆಯಿಂದ ಬಳಸಬೇಕು. ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ್ದ ನನ್ನನ್ನೂ ಅದೇ ಕಾಯ್ದೆ ಬಳಸಿ 19 ತಿಂಗಳು ಜೈಲಿಗೆ ಹಾಕಿದ್ದರು. ನಾವು ಹೋರಾಟ ಮಾಡಿದ್ದು ತುರ್ತುಪರಿಸ್ಥಿತಿ ವಿರುದ್ಧವೇ ಹೊರತು, ದೇಶದ ವಿರುದ್ಧ ಅಲ್ಲ.

ಆದರೆ, ದೇಶದ ವಿರುದ್ಧ ಪಿತೂರಿ ಮಾಡುವವರು, ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸುವವರನ್ನು ನೋಡಿಕೊಂಡು ಸುಮ್ಮನೆ ಬಿಡಬೇಕೇ? ಅವರನ್ನು ಶಿಕ್ಷಿಸಬಾರದೇ? ದೇಶವನ್ನು ತುಂಡು ತುಂಡು ಮಾಡುತ್ತೇವೆ ಎನ್ನುವವರನ್ನು, ದೇಶದ ವಿರುದ್ಧ ಭಯೋತ್ಪಾದನೆ ಸಾರಿದ್ದ ಅಫ್ಜಲ್‌ ಗುರುವನ್ನು ಬೆಂಬಲಿಸಿ ಮಾತನಾಡುವವರನ್ನು ‘ವಾಕ್‌ ಸ್ವಾತಂತ್ರ್ಯ’ದ ಹೆಸರಿನಲ್ಲಿ ಸಹಿಸಿಕೊಂಡು ಸುಮ್ಮನಿರಬೇಕೇ? ಪ್ರಜಾತಂತ್ರ ವ್ಯವಸ್ಥೆಯನ್ನು ಕಿತ್ತೊಗೆದು ‘ಪರ್ಯಾಯ’ ವ್ಯವಸ್ಥೆ ಹೇರುವ ಪಿತೂರಿಗಳಿಗೆ ಅವಕಾಶ ನೀಡಬೇಕೇ? ಇದನ್ನು ದೇಶದ ಎಲ್ಲ ಜನರೂ ಯೋಚಿಸಬೇಕು.

ದೇಶದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಬಂದ ಸರ್ಕಾರಗಳು ಈ ಕಾನೂನನ್ನು ತಮಗೆ ಬೇಕಾದಂತೆ ಬಳಸಿವೆ. ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ, 2012ರಲ್ಲಿ ಕೂಡಂಕುಳಂ ಹಿಂಸಾಚಾರ ಪ್ರಕರಣದಲ್ಲಿ ಒಂದೇ ದಿನ 9,000 ಜನರ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಒಟ್ಟು 55,795 ಸಾವಿರ ಜನರ ಮೇಲೆ ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸಿದ್ದರು. 23,000 ಜನರನ್ನು ಬಂಧಿಸಲಾಯಿತು. ಆಗಲೂ ಪತ್ರಕರ್ತರು, ಹೋರಾಟಗಾರರು, ಚಿಂತಕರ ಮೇಲೆ ‘ದೇಶದ ವಿರುದ್ಧ ಸಮರ ಸಾರಿದ್ದಾರೆ’ ಎಂದೇ ಕೇಸು ದಾಖಲಿಸಲಾಗಿತ್ತು. ಅತ್ಯಲ್ಪ ಸಮಯದಲ್ಲಿ ಅತಿ ಹೆಚ್ಚು ದೇಶ ದ್ರೋಹದ ಪ್ರಕರಣ ದಾಖಲಿಸಿದ ಕೀರ್ತಿ ಯುಪಿಎ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ.  ಈಗ ದೊಡ್ಡ ಭಾಷಣ ಬಿಗಿಯುವ ಪಿ.ಚಿದಂಬರಂ ಆಗ ಗೃಹ ಸಚಿವರಾಗಿದ್ದರು. ಕಪಿಲ್ ಸಿಬಲ್‌ ಕಾನೂನು ಮಂತ್ರಿ ಆಗಿದ್ದರು. ಈಗ ಇವರೇ ಈ ಕಾಯ್ದೆ ಕಿತ್ತು ಹಾಕಬೇಕು ಎನ್ನುತ್ತಿದ್ದಾರೆ.

ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಈ ಕಾನೂನಿನ ಬಳಕೆ ಹಿಂದೆಂದಿಗಿಂತಲೂ ಕಡಿಮೆ ಆಗಿದೆ. ಅವರನ್ನು ಟೀಕಿಸಿದ ಕಾರಣಕ್ಕೆ ‘ದೇಶದ್ರೋಹ’ ಸೆಕ್ಷನ್‌ ಅಡಿಯಲ್ಲಿ ದೂರು  ದಾಖಲು ಮಾಡಿದ ಒಂದೇ ಒಂದು ಪ್ರಕರಣ ಇದ್ದರೆ ತೋರಿಸಿ? ಯುಪಿಎ ಸರ್ಕಾರವನ್ನು ಟೀಕಿಸಿ ವ್ಯಂಗ್ಯ ಚಿತ್ರ ಬರೆದವರನ್ನು ಜೈಲಿಗೆ ಹಾಕಿದ ಹಲವು ನಿದರ್ಶನಗಳಿವೆ. ಕೆಲವರು ದಿನವೂ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅದನ್ನೇ ಮತ್ತೆ ಮತ್ತೆ ದೊಡ್ಡ ಧ್ವನಿಯಲ್ಲಿ ಪ್ರಸಾರ ಮಾಡುವುದೇ ಅವರಿಗೆ ಒಂದು ಕೆಲಸವಾಗಿದೆ. ವಾಕ್‌ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇರಬೇಕು. ನಿತ್ಯವೂ ಬಾಯಿಗೆ ಬಂದ ಹಾಗೆ ಕೀಳು ಮಟ್ಟದ ಭಾಷೆಯಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸುತ್ತಾರೆ. ಅವರು ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಪಡೆದು ಪ್ರಧಾನಿ ಆದವರು. ಆದರೂ ಅವರನ್ನು ನಿಂದಿಸುವವರ ವಿರುದ್ಧ ಒಂದೇ ಒಂದು ದೇಶ ದ್ರೋಹದ ಪ್ರಕರಣ ದಾಖಲಿಸಲಿಲ್ಲ. ಯಾರಾದರೂ ಹಾಗೆ ಹೇಳುತ್ತಿದ್ದರೆ ಅದು ಅಪ್ಪಟ ಸುಳ್ಳು.

ಮೋದಿ ನೇತೃತ್ವದ ಸರ್ಕಾರ ತಂದ ಕೃಷಿ ಕಾಯ್ದೆ, ಸಿಎಎ ಸೇರಿದಂತೆ ಯಾವುದೇ ಕಾಯ್ದೆ, ಕಾನೂನಿನ ಬಗ್ಗೆ ಅಭಿಪ್ರಾಯ ಬೇಧವಿದ್ದರೆ ಅದನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಿ, ಗೆದ್ದು ಬಂದು ಬದಲಿಸಲಿ. ಯಾರು ಬೇಡ ಎನ್ನುತ್ತಾರೆ. ಆದರೆ, ಇಲ್ಲಿ ದೇಶದ ವಿರುದ್ಧ ದಂಗೆ ಸೃಷ್ಟಿಸುವ ಪ್ರಯತ್ನವನ್ನು ಕೆಲವು ಹಿತಾಸಕ್ತಿಗಳು ಮಾಡುತ್ತಿವೆ. ಇದು ದೊಡ್ಡ ಮಟ್ಟದ ಪಿತೂರಿ. ಇವರಿಗೆ ಮೋದಿ ಸರ್ಕಾರ ಇರುವುದು ಬೇಕಿಲ್ಲ. ದೇಶವನ್ನು ಅಲ್ಲಾಡಿಸಲು ನೆಪಕ್ಕಾಗಿ ಕಾದು ಕುಳಿತಿರುತ್ತಾರೆ. ಪ್ರತಿಯೊಂದು ಅವಕಾಶವನ್ನು ತಮ್ಮ ಸಿದ್ಧಾಂತ ಮತ್ತು ನಿರೂಪಣೆಗೆ ತಕ್ಕಂತೆ ಸನ್ನಿವೇಶ ಬದಲಿಸಲು, ಕಥೆ ಕಟ್ಟಲು ಕಾದಿರುತ್ತಾರೆ. ಬೌದ್ಧಿಕ ವಲಯದ ಒಂದು ವರ್ಗ ಇದಕ್ಕೆ ಪ್ರಚೋದನೆ ನೀಡುತ್ತಿದೆ. ಇದನ್ನು ಕೇವಲ ಅಭಿ‍ಪ್ರಾಯ ಸ್ವಾತಂತ್ರ್ಯ ಎಂದು ಹೇಳಿ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ? ಇಂತಹ ವಿಚ್ಛಿದ್ರ ಶಕ್ತಿಗಳ ಮೇಲೆ ಲಂಗುಲಗಾಮು ಇಲ್ಲದಿದ್ದರೆ, ದೇಶದ ಕಥೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಇರಬೇಕು. ಬಾಯಿ ಇದೆ ಎಂದು, ಮನಸ್ಸಿನಲ್ಲಿ ಕಂಡಿದ್ದು ಕಾರುವುದು ಮತ್ತು ಅದನ್ನು ಸಮರ್ಥಿಸಿಕೊಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಆಗಲು ಸಾಧ್ಯವಿಲ್ಲ. ಕೆಲವೇ ಮಂದಿಯ ‘ವಿಚ್ಛಿದ್ರ ಚಿಂತನೆ’ಗಳನ್ನು ದೇಶದ ಮೇಲೆ ಹೇರುವುದನ್ನು ಒಪ್ಪಲು ಸಾಧ್ಯವಿಲ್ಲ.

ನಾವು (ಬಿಜೆಪಿ) ಹಲವು ದಶಕ ವಿರೋಧ ಪಕ್ಷದಲ್ಲಿ ಇದ್ದೆವು. ಹಲವು ಕಾಯ್ದೆ, ಕಾನೂನುಗಳನ್ನು ಪ್ರಜಾತಂತ್ರದ ಚೌಕಟ್ಟಿನಲ್ಲಿ ವಿರೋಧಿಸಿದ್ದೆವು. ಆದರೆ, ದೇಶವನ್ನು ಭಂಜನೆ ಮಾಡುವ ಕೆಲಸ ಮಾಡಲಿಲ್ಲ. 370ನೇ ವಿಧಿಯ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ವಿಚಾರವನ್ನು ನಮ್ಮ ಪಕ್ಷ ಪೂರ್ಣ ಬಹುಮತ ಬಂದ ಬಳಿಕ ಸಂಸತ್ತಿನ ಒಪ್ಪಿಗೆ ಪಡೆದೇ ಮಾಡಿದೆ. ಸಿಎಎ ಅಥವಾ ಕೃಷಿ ಕಾನೂನು ಕೂಡ ಸಂಸತ್ತಿನ ಒಪ್ಪಿಗೆ ಪಡೆದೇ ಮಾಡಿದ್ದೇವೆ. ಇದು ಬೇಡ ಎನ್ನುವವರು ಮುಂದೆ ಅಧಿಕಾರಕ್ಕೆ ಬಂದಾಗ ಬದಲಿಸಲಿ. ಪ್ರಜಾತಂತ್ರದಲ್ಲಿ ಅದಕ್ಕೆ ಅವಕಾಶ ಇದೆ. ಆದರೆ, ದೇಶ ವಿರೋಧಿ ಶಕ್ತಿಗಳ ಅಟ್ಟಹಾಸ ಅದು ಯಾವುದೇ ರೂಪದ ‘ಮುಸುಕು’ ಹಾಕಿಕೊಂಡ ಬಂದರೂ ಬಿಡುವ ಅಗತ್ಯವಿಲ್ಲ. ಎಲ್ಲದಕ್ಕಿಂತ ದೇಶದ  ಸಾರ್ವಭೌಮತೆ, ಅಖಂಡತೆ ಮುಖ್ಯ. ಅದಕ್ಕೆ ಕುತ್ತು ತರುವವರನ್ನು ಸುಮ್ಮನೆ ಬಿಡುವ ಅಗತ್ಯವೂ ಇಲ್ಲ.

ಲೇಖಕ: ವಿಧಾನಪರಿಷತ್ತಿನ ಮಾಜಿ ಸಭಾಪತಿ

ನಿರೂಪಣೆ: ಎಸ್‌. ರವಿಪ್ರಕಾಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು