ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಗೋಹತ್ಯೆ ನಿಷೇಧ’ ಎಂಬ ಗೋಪಾಲಕರ ಮರಣ ಶಾಸನ!

Last Updated 13 ಡಿಸೆಂಬರ್ 2020, 15:15 IST
ಅಕ್ಷರ ಗಾತ್ರ

ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿ, ಸಚಿವರಾಗುವವರು ರಾಜ್ಯದ ಪ್ರತಿ ಪ್ರಜೆಯನ್ನೂ ಸಮಾನವಾಗಿ ನೋಡುತ್ತೇನೆ. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ. ಆಡಳಿತದ ನೀತಿ ನಿರೂಪಣೆಯಲ್ಲಿ ಅಸಮಾನತೆ, ದ್ವೇಷಭಾವನೆ ಮಾಡಬಾರದು ಎನ್ನುವುದೇ ಆ ಪ್ರಮಾಣವಚನದ ಆಶಯ. ಆದರೆ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ‘ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ಮಸೂದೆ 2020’ ಈ ಆಶಯಕ್ಕೆ ಅನುಗುಣವಾದಂತೆ ಕಾಣುತ್ತಿಲ್ಲ.

ಮಸೂದೆಯ ಕರಡಿನ ಸಾರಾಂಶದ ಪ್ರಕಾರ, 13 ವರ್ಷದ ಒಳಗಿನ ಯಾವುದೇ ಬಗೆಯ ಜಾನುವಾರುಗಳನ್ನು ಆಹಾರಕ್ಕಾಗಿ ಹತ್ಯೆ ಮಾಡುವುದು ಅಪರಾಧ. ಈ ಸಂಬಂಧ ದನಗಳ ವ್ಯಾಪಾರ ಮಾಡುವುದನ್ನೂ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ 4ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ. 50 ಸಾವಿರ ರೂಪಾಯಿಯಿಂದ ಐದು ಲಕ್ಷ ರೂಪಾಯಿಯವರೆಗೆ ದಂಡವನ್ನು ವಿಧಿಸಬಹುದು. ಇದಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಇಂಗಿತ ಅದರಲ್ಲಿದೆ. ಸದ್ಯ ತಹಶೀಲ್ದಾರ್‌ ಅಥವಾ ಪಶುವೈದ್ಯಾಧಿಕಾರಿ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಪ್ರಾಧಿಕಾರವನ್ನು ರಚಿಸುವುದಾಗಿ ತಿಳಿಸಿದೆ. ಸಬ್‌ಇನ್ಸ್‌ಪೆಕ್ಟರ್‌ ದರ್ಜೆಗಿಂತ ಕಡಿಮೆ ಇರದ ಅಧಿಕಾರಿಗಳು ಜಪ್ತಿ ನಡೆಸಲು, ಕಾನೂನು ಕ್ರಮ ಜರುಗಿಸಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕರಡಿನ 17ನೇ ಅಂಶ ‘ಸದ್ಭಾವನೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳ ಸಂರಕ್ಷಣೆ’ ಎಂದು ಹೇಳಿದೆ. ಈ ಅಧಿನಿಯಮದ ಅಡಿ ಸಾರ್ವಜನಿಕ ವ್ಯಕ್ತಿಯೊಬ್ಬ ಗೋಹತ್ಯೆ ನಿಷೇಧ ಸಂಬಂಧ ಅಧಿಕಾರ ಚಲಾಯಿಸಿದರೆ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಆ ವ್ಯಕ್ತಿಗೆ ಮಸೂದೆ ಹೇಳುತ್ತಿರುವ ‘ಅಧಿಕಾರ’ ಯಾರು ಕೊಟ್ಟಿದ್ದು? ಅದು ಹೇಗೆ ಅವನಿಗೆ ಸಿಗುತ್ತದೆ ಎನ್ನುವ ಸ್ಪಷ್ಟನೆ ಇಲ್ಲ. ಯಾರಾದರೂ ‘ಸದ್ಭಾವನೆಯಿಂದ’ ‘ಅಧಿಕಾರ’ ಚಲಾಯಿಸುವುದಾದರೆ ತಾಲ್ಲೂಕು ಮಟ್ಟದಲ್ಲಿ ಪ್ರಾಧಿಕಾರ ರಚಿಸುವ ಔಚಿತ್ಯ ಏನು ಎಂದು ಉದ್ಭವಿಸುವ ಪ್ರಶ್ನೆಗೆ ಮಸೂದೆಯಲ್ಲಿ ಉತ್ತರ ಇಲ್ಲ.

ಜಾನುವಾರು ಸಾಗಣೆಯನ್ನೂ ಮಸೂದೆಯಲ್ಲಿ ನಿರ್ಬಂಧಿಸಲಾಗಿದೆ. ಕೃಷಿ ಸಂಬಂಧಿತ ಚಟುವಟಿಕೆಗೆ ಮಾತ್ರ ಸಾಗಣೆ ಮಾಡಬಹುದು. ಅಂದರೆ ಯಾವ ಉದ್ದೇಶಕ್ಕೆ ಸಾಗಿಸಲಾಗುತ್ತಿದೆ ಎಂದು ನಿರ್ಧರಿಸುವುದು ಯಾರು? ಜಾನುವಾರು ವ್ಯಾಪಾರಿ– ದಲ್ಲಾಳಿಗಳು ಜಾನುವಾರು ಸಾಗಣೆ ಮಾಡಲೇಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ‘ಸದ್ಭಾವನೆಯಿಂದ ಅಧಿಕಾರ’ ಚಲಾಯಿಸುವ ವ್ಯಕ್ತಿಗಳು ಏಕಾಏಕಿ ದಾಳಿ ಮಾಡಿದರೂ ಈ ಕಾನೂನು ಅವರನ್ನು ರಕ್ಷಣೆ ಮಾಡುತ್ತದೆಯೇ ವಿನಃ ಗೋವು ವ್ಯಾಪಾರಿಯನ್ನು ಅಲ್ಲ. ಕರ್ನಾಟಕ, ಕೇರಳವೂ ಸೇರಿದಂತೆ ದೇಶವ್ಯಾಪಿ ಅನೇಕ ದೌರ್ಜನ್ಯಗಳು ಗೋ ರಕ್ಷಣೆಯ ನೆಪದಲ್ಲಿಯೇ ನಡೆದಿವೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಜಾರ್ಖಂಡ್‌ನಲ್ಲಿ ‘ಗೋವಿನ ಭಕ್ತಿಯ ನೆಪದಲ್ಲಿ ಜನರನ್ನು ಕೊಲ್ಲುವುದನ್ನು ಸರ್ಕಾರ ಸಹಿಸುವುದಿಲ್ಲ’ ಎಂಬ ಎಚ್ಚರಿಕೆ ಕೊಟ್ಟಿದ್ದರು. ಕರ್ನಾಟಕ ಸರ್ಕಾರ ರೂಪಿಸಹೊರಟಿರುವ ಕಾಯಿದೆ ಇಂಥ ದಾಳಿಗೂ ಅವಕಾಶವನ್ನು ಕಲ್ಪಿಸುವಂತೆ ಇದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಒಕ್ಕಣ್ಣಿನ ದೃಷ್ಟಿಕೋನ
ಇತ್ತೀಚೆಗೆ ಶಿವಮೊಗ್ಗದಲ್ಲಿ ಬಜರಂಗದಳದ ಸಹ ಸಂಚಾಲಕರೊಬ್ಬರ ಮೇಲೆ ದಾಳಿ ನಡೆದಿತ್ತು. ನಂತರ ಮಾಧ್ಯಮವನ್ನು ಉದ್ದೇಶಿಸಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಆಡಿದ ಮಾತುಗಳೂ ಕ್ಷೇತ್ರದ ಪ್ರತಿನಿಧಿಯಂತೆ ಕಾಣಿಸಲಿಲ್ಲ. ಮಾತು ಮಾತಿಗೂ ‘ಮುಸ್ಲಿಂ ಗೂಂಡಾ’ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದರು. ಮಾತ್ರವಲ್ಲ ಹಿಂದೂ ಸಮಾಜ ಈ ರೀತಿಯ ದಾಳಿಯನ್ನು ಸುಮ್ಮನೆ ಸಹಿಸುತ್ತಾ ಕೂರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಅವರ ಮನದಾಳದ ಬಯಕೆ ಬೇರೆ ಇನ್ನೇನನ್ನೋ ಧ್ವನಿಸುತ್ತಿತ್ತು. ಇಂಥ ನಿದರ್ಶನಗಳನ್ನು ನೋಡಿದರೆ ಸರ್ಕಾರಕ್ಕೆ ಸರ್ವಜನಾಂಗದ ಶಾಂತಿಯ ತೋಟವನ್ನು ನೋಡುವ ಮನಸ್ಸು ಇಲ್ಲವೇನೊ ಎಂಬ ಭಾವನೆ ಮೂಡುತ್ತದೆ.

ಗೋಹತ್ಯೆ ನಿಷೇಧವೂ ದ್ವೇಷವೇ
ಉದ್ದೇಶಿತ ಕಾಯಿದೆ ಕೂಡ ಮುಸ್ಲಿಮರನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ. ಮುಸ್ಲಿಮರಲ್ಲಿ ಬಹುತೇಕರು ಗೋಮಾಂಸ ಸೇವಿಸುತ್ತಾರೆ. ಅದನ್ನು ತಪ್ಪಿಸಬೇಕು ಎಂದು ಸರ್ಕಾರ ಎಣಿಸಿದಂತಿದೆ. ರಾಜ್ಯದಲ್ಲಿ ಮುಸ್ಲಿಂ– ಕ್ರೈಸ್ತರೂ ಸೇರಿದಂತೆ ಹಿಂದುಳಿದ ಮತ್ತು ದಲಿತ ಸಮುದಾಯದ ಅನೇಕರ ಆಹಾರ ಪದ್ಧತಿಯ ಭಾಗವೂ ಹೌದು. ಬೇರೆ ಬೇರೆ ಜಾತಿಯಲ್ಲಿಯೂ ಕೆಲವರು ಅಪೇಕ್ಷೆಪಟ್ಟು ತಿನ್ನುತ್ತಾರೆ. ಈಗ ಸದ್ದು ಮಾಡುತ್ತಿರುವ ಮಸೂದೆ ಈ ಹಿಂದೆಯೂ ಚರ್ಚೆಗೆ ಬಂದಿತ್ತು. 2010ರಲ್ಲಿ ಇದೇ ಬಿಜೆಪಿ ಸರ್ಕಾರ ‘ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ರೂಪಿಸಿತ್ತು. ನಂತರ ಕಾಂಗ್ರೆಸ್‌ ಸರ್ಕಾರ ಮಸೂದೆಯನ್ನು ಹಿಂದಕ್ಕೆ ಪಡೆದಿದ್ದರಿಂದ ಕಾನೂನು ರಚನೆಯಾಗಲಿಲ್ಲ. ಈಗ ಅದನ್ನೇ ಪರಿಷ್ಕರಿಸಿ ಮಂಡಿಸಿರುವುದಾಗಿ ಸರ್ಕಾರ 2020ರ ವಿಧೇಯಕದ ಆರಂಭದಲ್ಲಿ ಹೇಳಿದೆ. ಹಿಂದೆ ಎಮ್ಮೆ– ಕೋಣಗಳ ಹತ್ಯೆಯನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸಿರಲಿಲ್ಲ. ಈಗ ಎಲ್ಲ ಬಗೆಯ ಜಾನುವಾರುಗಳಿಗೂ ವಿಸ್ತರಿಸಲಾಗಿದೆ.

ಗೋಹತ್ಯೆ ನಿಷೇಧ ಹೊಸದೇನೂ ಅಲ್ಲ. ‘1964ರ ಗೋ ರಕ್ಷಣಾ ಕಾಯ್ದೆ’ಯಲ್ಲಿಯೇ ಗೋಹತ್ಯೆಗೆ ನಿಷೇಧ ಹಾಕಲಾಗಿದೆ. ಈ ಹಿಂದಿನ ಕಾಯ್ದೆಯ ಅನುಸಾರವೇ ಊರಹಬ್ಬ– ಮಾರಿ ಜಾತ್ರೆಗಳಲ್ಲಿ ಕೋಣಬಲಿಗೆ ನಿಷೇಧ ಇತ್ತು. ಆದರೆ, ರೈತ ಹಾಲು ಕೊಡದ ಆಕಳನ್ನೋ, ಬೇಸಾಯಕ್ಕೆ ಬಳಸಲು ಆಗದ ಮುದಿ ಎತ್ತನ್ನೋ ಕಟುಕರಿಗೆ ಮಾರಾಟ ಮಾಡಲು ಕಾನೂನಿನ ವ್ಯಾಪ್ತಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿತ್ತು. ಹಾಗಾಗಿ ಗೊಡ್ಡು ಆಕಳು, ಮುದಿಹಸುಗಳು, ಸೀಮೆ ಹಸುಗಳ ಗಂಡುಗರುಗಳನ್ನು ಮಾರುತ್ತಿದ್ದರು. ಗೋಹತ್ಯೆ ನಿಷೇಧ ಮುಸ್ಲಿಮರ ಆಹಾರ ಅಸ್ಮಿತೆಯನ್ನು ನಾಶ ಮಾಡಬೇಕು ಎನ್ನುವ ಉದ್ದೇಶದಿಂದ ರೂಪಿಸಿದಂತೆ ಕಂಡರೂ ಅದು ಅವರಿಗಿಂತ ಗೋಪಾಲಕರು ಮತ್ತು ಕೃಷಿಕರಿಗೆ ಹೆಚ್ಚು ನಷ್ಟ ಉಂಟುಮಾಡಬಹುದು. ಗೋವಿನ ಪಾಲನೆಯನ್ನು ಕ್ರೈಸ್ತರು– ಮಸ್ಲಿಂಯೇತರರೇ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಾರೆ. ಅವರಿಗೆಲ್ಲ ಉಪಯೋಗ ಆಗದ ದನಗಳ ಪಾಲನೆ ಮಾಡುವ ಅನಿವಾರ್ಯ ಶಿಕ್ಷೆ ನೀಡಿದಂತೆ ಆಗುತ್ತದೆ.

ಆಗಬೇಕಿರುವುದು ಗೋಪಾಲಕರ ರಕ್ಷಣೆ
ಗೋವು ರೈತನ ಆರ್ಥಿಕ ಮೂಲ ಸಂಪತ್ತು. ಇದು ಹೈನುಗಾರರ ರಕ್ಷಣೆಗೂ ತುಂಬಾ ಅನುಕೂಲಕರವಾಗಿದೆ. ಇಂದಿನ ವೈಜ್ಞಾನಿಕ ಅಡ್ಡ ಪರಿಣಾಮವನ್ನು ಎದುರಿಸಲು ಯಾವುದೇ ವೈಜ್ಞಾನಿಕ ಕ್ರಮಗಳಿಲ್ಲ. ಅಂದರೆ ಸೀಮೆ ಹಸುಗಳು ಹೆಣ್ಣುಗರುಗಳಿಗೆ ಮಾತ್ರ ಜೀವ ನೀಡುವಂತೆ ಮಾಡುವ ತಂತ್ರಜ್ಞಾನ ವೃದ್ಧಿಯಾಗಿಲ್ಲ. ಒಂದು ಪಕ್ಷ ಹುಟ್ಟಿದ ಕರು ಗಂಡಾದರೆ, ಅದನ್ನು ಸಾಕಲು ಪ್ರತಿದಿನ ಕನಿಷ್ಠ 300 ರೂಪಾಯಿಗಳನ್ನು ಗೋಪಾಲಕರು ವೆಚ್ಚ ಮಾಡಬೇಕು. ಆ ಸೀಮೆ ತಳಿಯ ಎತ್ತಿನಿಂದ ಸಗಣಿಯನ್ನು ಹೊರತುಪಡಿಸಿ ಬೇರೆ ಯಾವುದೇ ಉತ್ಪನ್ನ ದೊರೆಯುವುದಿಲ್ಲ. ನೀರಿಗಾಗಿ ಪರಿತಪಿಸುವ ಹೊತ್ತಿನಲ್ಲೂ ಕನಿಷ್ಠ 50 ಲೀಟರ್‌ ನೀರನ್ನು ಒಂದು ಎತ್ತಿಗೆ ನಿತ್ಯವೂ ಒದಗಿಸಬೇಕು. ಆನೆ ಗಾತ್ರದ ಆ ಹೋರಿಯನ್ನು ಬೇಸಾಯಕ್ಕಾಗಲಿ– ಚಕ್ಕಡಿ ಗಾಡಿಗೆ ಕಟ್ಟಲೂ ಆಗುವುದಿಲ್ಲ. ಹಾಗಾಗಿ ಆತ ಮಾರುತ್ತಾನೆ.

ರೈತನ ದೃಷ್ಟಿಯಲ್ಲಿ ನೋಡಿದರೆ, ಎತ್ತುಗಳು ಕಾದಾಟದಲ್ಲಿ ಕೊಂಬು ಮುರಿದುಕೊಂಡರೆ ಅಂತಹ ಎತ್ತನ್ನು ಕೆಲವರು ಬೇಸಾಯಕ್ಕೆ ಬಳಸುವುದಿಲ್ಲ. ಆಕಸ್ಮಿಕ ದುರ್ಘಟನೆಯಲ್ಲಿ ದನಗಳ ಕಾಲುಗಳು ಊನವಾದರೆ, ಯಾವುದಾದರೂ ರೋಗ ಕಾಡಿದ ಸಂದರ್ಭದಲ್ಲಿ ಅವುಗಳ ಪಾಲನೆ ಕಷ್ಟ ಎಂದೇ ರೈತ ಮಾರುತ್ತಾನೆ. ಅದರಿಂದ ಅವನಿಗೆ ಜವಾಬ್ದಾರಿಯಿಂದ ಮುಕ್ತಿ ಸಿಗುವ ಜೊತೆಗೆ ಆರ್ಥಿಕವಾಗಿಯೂ ನೆರವಾಗುತ್ತಿತ್ತು. ಈಗ ಇಂತಹ ಅನುಕೂಲಕ್ಕೂ ಅಡ್ಡಿಯಾದಂತೆ ಆಗುತ್ತದೆ. ತಿನ್ನುವವರಿಗೆ ಕಡಿಮೆ ಬೆಲೆಯಲ್ಲಿ ಪೋಷಕಾಂಶಯುಕ್ತ ಆಹಾರವಾದರೆ, ಮಾರುವವರಿಗೆ ಹಣಕಾಸಿನ ಬೆಂಬಲ ನೀಡುತ್ತಿತ್ತು. ಆದರೆ ಇಂತಹ ಶಾಸನ ಗೋಪಾಲಕರ ಪಾಲಿಗೆ ಮಾರಕ ಆಗುವುದರಲ್ಲಿ ಅನುಮಾನ ಇಲ್ಲ.

ಗೋವು ತಿಂದು ಗೋವಿನಂತಾದವರು...
ದನದ ಮಾಂಸ ಭಕ್ಷಣೆ ಈ ನೆಲದ ಪರಂಪರೆಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಬೆರೆತುಹೋಗಿದೆ. ಜನಪದರ ಆಚರಣೆಯಲ್ಲಿ ಅದು ಈಗಲೂ ಸಂಪ್ರದಾಯವಾಗಿ ರೂಢಿಯಲ್ಲಿದೆ. ಮಾರಿ- ಮಸಣಿ ದೇವತೆಗಳು ಬಲಿ ಬೇಡುವುದು ಕೋಣವನ್ನೇ. ಈ ಸಂಬಂಧ ಅಸಂಖ್ಯಾತ ಕಥೆ, ಗೀತೆಗಳೇ ರೂಪಿತವಾಗಿವೆ. ಕವಿ ಎನ್‌.ಕೆ. ಹನುಮಂತಯ್ಯ ‘ಗೋವು ತಿಂದು ಗೋವಿನಂತಾದೆ’ ಎಂಬ ಕವಿತೆಯನ್ನು ಬರೆದಿದ್ದಾರೆ. ಆ ಕಾವ್ಯದಲ್ಲಿ ಅವರು ಜಾತಿ ಶೋಷಣೆಯ, ಜೀತಗಾರಿಕೆಯ ಮಜಲನ್ನು ಪ್ರಶ್ನಿಸುತ್ತಾರೆ. ಹಸು ಹಾಲು ಕೊಡುವುದು ತನ್ನ ಕುರುವಿಗೆ ಹೊರತು ಮನುಷ್ಯನಿಗೆ ಅಲ್ಲ. ಕರುವಿನ ಹಾಲನ್ನು ಕಿತ್ತು ಕುಡಿಯುವ ಮನುಷ್ಯ ವಿಷವನ್ನೇ ಕಕ್ಕುತ್ತಾನೆ ಎನ್ನುವುದನ್ನು ಅವರು ಗುರುತಿಸುತ್ತಾರೆ.

ಶಿವಶರಣೆ ಕಾಳವ್ವೆ, 12ನೇ ಶತಮಾನದಲ್ಲಿಯೇ ಜಾತಿಯ ಕೀಳುತನವನ್ನು ಪ್ರಶ್ನಿಸುತ್ತಾರೆ.

‘ಕುರಿ ಕೋಳಿ- ಕಿರುಮೀನು ತಿಂಬುವರೆಲ್ಲ,
ಕುಲಜ ಕುಲಜರೆಂದಾದರೆ,
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬರು ಮಾದಿಗರು ಹೇಂಗಾದಾರು?
ಜಾತಿಗಳೇ ನೀವೇಕೆ ಕೀಳಾದಿರಿ- ಮಾರಯ್ಯ ಪ್ರಿಯ ಅಮರೇಶ್ವರ’ ಎನ್ನುತ್ತಾರೆ.

ಅಂದರೆ ಗೋವು ತಿನ್ನುವ ಪದ್ಧತಿ ಕೂಡ ಪರಂಪರೆಯ ಭಾಗವಾಗಿದೆ. ಹೀಗಿದ್ದಾಗ ತಿನ್ನುವರ ಹಕ್ಕನ್ನು ಏಕೆ ಕಿತ್ತುಕೊಳ್ಳಬೇಕು ಎನ್ನುವ ವಿವೇಚನೆಯನ್ನು ಸರ್ಕಾರ ಮಾಡಬೇಕು.

ಕಾರ್ನಾಡ್‌ ಹತ್ಯೆಗೆ ಸಂಚು...
ಬೆಂಗಳೂರಿನ ಪುರಭವನದ ಎದುರು ಉದ್ದೇಶಿತ 2010ರ ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಗೌರಿಲಂಕೇಶ್‌, ಕಾರ್ನಾಡ್‌ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು. ಅಲ್ಲಿ ಕೆಲವರು ಗೋಮಾಂಸ ಸೇವಿಸಿ ತಮ್ಮ ಪ್ರತಿರೋಧ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಕಾರ್ನಾಡ್‌ ಅವರಿಗೆ ಜೀವ ಬೆದರಿಕೆ ಕರೆಗಳು ಬರತೊಡಗಿದವು. ಅದಕ್ಕೆ ದೂರು ದಾಖಲಾಗಿ ಅವರನ್ನು ಸೇರಿದಂತೆ ಅನೇಕ ಹೋರಾಟಗಾರರಿಗೆ ಸರ್ಕಾರ ಭದ್ರತೆಯನ್ನು ಒದಗಿಸಿತ್ತು. ಆದರೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿದ್ದು ಇತಿಹಾಸ.

ಮತಾಂಧ ಶಕ್ತಿಗಳಿಗೆ ಮಹಾತ್ಮ ಗಾಂಧಿ ಆದರ್ಶವೇ ಆಗುವುದಿಲ್ಲ. ಜೀವನಪರ್ಯಂತ ಹಿಂದೂ ಧರ್ಮವನ್ನೇ ಪ್ರತಿಪಾದನೆ ಮಾಡಿದ್ದ ಗಾಂಧೀಜಿ ‘ಹೇ ರಾಮ್‌’ ಎಂದೇ ತಮ್ಮ ಕೊನೆಯುಸಿರು ಬಿಡುತ್ತಾರೆ. ದಕ್ಷಿಣ ಆಫ್ರಿಕದಂತಹ ದೇಶದಲ್ಲಿ ಸಸ್ಯಾಹಾರ ಆಂದೋಲನಕ್ಕೆ ಕಾರಣವಾದ ಗಾಂಧೀಜಿ ಅಹಿಂಸಾವಾದಿ. ಅವರು ಪರಮತ ಸಹಿಷ್ಣು ಕೂಡ. ಅಂತಹ ರಾಮ ಭಕ್ತ, ರಾಮಾಯಣದ ಹಿಂದೂ ಧರ್ಮಪಾಲಕನಲ್ಲಿ ನಾವು ಧರ್ಮದ ನಂಜಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT