ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಲೋಕದ ‘ಧರ್ಮ’ಸಂಕಟ: ಹಿಂಸಾತ್ಮಕ ರೂಪಕವಾಗಿ ‘ಲವ್‌ ಜಿಹಾದ್‌’

Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಮತಾಂತರಕ್ಕಾಗಿ ಮದುವೆ’ ಕುರಿತ ಚರ್ಚೆಯೀಗ ಮತ್ತೆ ಸದ್ದು ಮಾಡುತ್ತಿದೆ. ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್‌ ಜಿಹಾದ್‌’ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ಬಿಜೆಪಿ ಆಡಳಿತದ ಸರ್ಕಾರಗಳ ನಡೆಯನ್ನು ಸ್ವಾತಂತ್ರ್ಯ, ಮುಕ್ತತೆ, ಘನತೆ, ಸ್ವಾಯತ್ತತೆ ಮೇಲಿನ ‘ಕಾನೂನು ದಾಳಿ’ ಎಂದೂ ಅರ್ಥೈಸಲಾಗುತ್ತಿದೆ. ನಿಜಕ್ಕೂ ‘ಮತಾಂತರಕ್ಕಾಗಿ ಮದುವೆ’ಯ ಮಜಕೂರು ಏನು? ತೀಸ್ತಾ ಸೆಟಲ್ವಾಡ್‌ ಅವರವ್ಯಾಖ್ಯಾನಇಲ್ಲಿದೆ.

***

ಅದು 1998ರ ಅಕ್ಟೋಬರ್‌ 6ನೇ ತಾರೀಖು. ಅಫ್ಗಾನಿಸ್ತಾನದ ಕಾಬೂಲ್‌ನಿಂದ ಸುಮಾರು 130 ಕಿಲೊಮೀಟರ್‌ ದೂರದಲ್ಲಿ ಆರನೇ ಶತಮಾನಕ್ಕೆ ಸೇರಿದ ಮತ್ತು ಗಾಂಧಾರ ಕಲಾ ಸಂಸ್ಕೃತಿಯ ಪ್ರತೀಕವಾಗಿದ್ದ ‘ಬಮಿಯನ್‌ ಬುದ್ಧ’ರನ್ನು ತಾಲಿಬಾನೀಯರು ಸ್ಫೋಟಿಸುವುದಕ್ಕಿಂತ ಕರಾರುವಾಕ್ಕಾಗಿ ಎರಡು ವರ್ಷ, ಐದು ತಿಂಗಳ ಮೊದಲು. ಆ ದಿನ, ಗುಜರಾತ್‌ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಸಿ.ಪಿ. ಸಿಂಗ್‌ ಅವರನ್ನು ನಾನು ಸಂದರ್ಶನ ಮಾಡಿದ್ದೆ. ಅಪಹರಣ ಕೃತ್ಯ ಮತ್ತು ಬಲ ಪ್ರಯೋಗದ ಮೂಲಕ ಅಂತರಧರ್ಮೀಯ ಮದುವೆಗಳಿಗೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿ ಕ್ರೋಧೋನ್ಮತ್ತರಾಗಿದ್ದ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಾರ್ಯಕರ್ತರು ಅಲ್ಪಸಂಖ್ಯಾತರ ಮೇಲೆ ಸರಣಿ ದಾಳಿಗಳನ್ನು ನಡೆಸಿದ ದಿನಗಳು ಅವು.

‘ಬಲವಂತದ ಅಂತರಧರ್ಮೀಯ ವಿವಾಹಗಳು ಮತ್ತು ಮತಾಂತರದ ಕುರಿತ ಆರೋಪಗಳು ಹೆಚ್ಚಿನ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಆಧಾರರಹಿತ’ ಎಂದು ಡಿಜಿಪಿಯವರು ನನಗೆ ನೀಡಿದ ಸಂದರ್ಶನದಲ್ಲಿ (Communalism Combat, ಅಕ್ಟೋಬರ್ 1998) ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ತಿಳಿಸಿದ್ದರು. ಯುವತಿಯರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡು, ತಮಗೆ ಇಷ್ಟವಾದ ಸಂಗಾತಿಗಳೊಂದಿಗೆ ಸ್ವ–ಇಚ್ಛೆಯಿಂದಲೇ ಮದುವೆಯಾಗಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದರು. ಡಿಜಿಪಿ ಅಷ್ಟೊಂದು ಸ್ಪಷ್ಟ ಮಾಹಿತಿಯನ್ನು ಹೊಂದಿದ್ದರೂ ಮುಂದೆ (1998–2000) ಗುಜರಾತ್‌ ಪೊಲೀಸ್‌ ಇಲಾಖೆಯ ವತಿಯಿಂದ ಅಂತರಧರ್ಮೀಯ ವಿವಾಹಗಳ ‘ತನಿಖೆ’ಗಾಗಿ ವಿಶೇಷ ಘಟಕವನ್ನೇ ತೆರೆಯಲಾಯಿತು. ಸಮಾನತೆಯ ಹಕ್ಕು (ವಿಧಿ 14), ಘನತೆಯಿಂದ ಜೀವಿಸುವ ಹಕ್ಕು (ವಿಧಿ 21) ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ವಿಧಿ 25) ಸೇರಿದಂತೆ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು ಪೊಲೀಸ್‌ ಇಲಾಖೆಯ ಆ ಹೆಜ್ಜೆ.

ಮುಂದೆ, ಬರೋಬ್ಬರಿ ಎರಡು ವರ್ಷ, 124 ದಿನಗಳ ಬಳಿಕ, ಅಂದರೆ 2001ರ ಮಾರ್ಚ್ 2ರಂದು, ತಾಲಿಬಾನ್ ಸರ್ಕಾರವು ಪ್ರಾಚೀನ ‘ಬಮಿಯನ್ ಬುದ್ಧ’ರನ್ನು ಕೇವಲ ‘ವಿಗ್ರಹ’ಗಳು ಎಂದು ಘೋಷಿಸಿತು. ಆಗ ಮುಲ್ಲಾ ಮೊಹಮ್ಮದ್ ಒಮರ್ ಅವುಗಳ ಧ್ವಂಸಕ್ಕೆ ಹೊರಡಿಸಿದ ಆದೇಶದ ಪರಿಣಾಮ ‘ಜಿಹಾದ್’ ಎಂಬ ಪದವು ಜಾಗತಿಕವಾಗಿ ‘ಹಿಂಸಾತ್ಮಕ ಆಯುಧ’ ಎಂಬರ್ಥವನ್ನು ಪಡೆದುಕೊಂಡಿತು. ಇಸ್ಲಾಂ ಹೆಸರಿನಲ್ಲಿ ಹಿಂಸೆಯ ಪ್ರಚೋದಕರು ಹಾಗೂ ರಾಜಕೀಯ ಪಟ್ಟಭದ್ರರು ನೀಡಿದ ಈ ‘ಕೊಡುಗೆ’ ಹೇಗಿತ್ತೆಂದರೆ ‘ಜಿಹಾದ್’ ಎಂಬ ಆ ಅರೇಬಿಕ್ ಪದದ ಬಗ್ಗೆ ಎಷ್ಟು ದೀರ್ಘವಾದ ಹಾಗೂ ವಿದ್ವತ್‌ಪೂರ್ಣ ವಿವರಣೆಗಳನ್ನು ನೀಡಿದರೂ ಅದಕ್ಕೆ ಅಂಟಿದ ಹೊಸ ಅರ್ಥವನ್ನು ತೊಡೆದುಹಾಕಲು, ಹುಸಿ ನಂಬಿಕೆಯನ್ನು ಹೋಗಲಾಡಿಸಲು ಸಾಧ್ಯವಾಗಲೇ ಇಲ್ಲ.

ವಿಶೇಷ ಮದುವೆ ಕಾಯ್ದೆ–1954ರ ಅಡಿ ನೀಡಲಾದ ಅವಕಾಶವನ್ನು ಬಳಸಿಕೊಂಡು, ಜಾತಿ, ಧರ್ಮಗಳ ಎಲ್ಲೆಯನ್ನೂ ಮೀರಿ ಮದುವೆಯಾದ ಜೋಡಿಗಳ ವಿರುದ್ಧ, ‘ಹಿಂದೂ ರಾಷ್ಟ್ರದ ಮಾದರಿ ರಾಜ್ಯ’ ಗುಜರಾತ್‌ನಲ್ಲಿ, ಪೊಲೀಸ್‌ ವ್ಯವಸ್ಥೆಯನ್ನೂ ಕೋರ್ಟ್‌ಗಳನ್ನೂ ಎಗ್ಗಿಲ್ಲದೆ ಬಳಸಲಾಯಿತು. ತಿಂಗಳುಗಳು ಉರುಳಿದಂತೆ, ವರ್ಷಗಳು ಕಳೆದಂತೆ ಈ ಪ್ರವೃತ್ತಿ ಹೆಚ್ಚುತ್ತಾ ಹೋಯಿತು. 2002ರಲ್ಲಿ ನರೋಡಾ ಪಟಿಯಾದಲ್ಲಿ ನಡೆದ ಪೂರ್ವನಿಯೋಜಿತ ಹತ್ಯಾಕಾಂಡಕ್ಕೆ ಕಾರಣನಾದ ಬಾಬು ಬಜರಂಗಿ ಇದೀಗ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ. ಆತ ‘ನವಚೇತನ ಟ್ರಸ್ಟ್‌’ ಎಂಬ ಸಂಸ್ಥೆಯನ್ನೂ ನಡೆಸುತ್ತಿದ್ದ. ಮನೆಬಿಟ್ಟು ಓಡಿಬಂದು, ತಮ್ಮದಲ್ಲದ ಹೊರ ಸಮುದಾಯದವರ ಜತೆ ಮದುವೆಯಾದ 700 ಯುವತಿಯರನ್ನು ರಕ್ಷಿಸಿರುವುದಾಗಿ ಆತ ಹೇಳಿಕೊಂಡಿದ್ದ. ಹಾಗೆ ಆ ಸಂಸ್ಥೆ ‘ರಕ್ಷಣೆ’ ಮಾಡಿದವರಲ್ಲಿ ಹೆಚ್ಚಾಗಿ ಇದ್ದುದು ಪಟೇಲ್‌ ಸಮುದಾಯದ ಹುಡುಗಿಯರು. ಅವರು ಹಿಂದೂ ಧರ್ಮಕ್ಕೇ ಸೇರಿದ ಬೇರೆ ಸಮುದಾಯಗಳ ಹುಡುಗರೊಂದಿಗೆ ವಿವಾಹವಾಗಿದ್ದರು.

ಜಾತಿಯ ಪೂರ್ವಗ್ರಹಗಳನ್ನು ಹೋಗಲಾಡಿಸಲು, ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಮತ್ತು ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮೌಲ್ಯಗಳನ್ನು ಬಿತ್ತಲು, ಆ ಮೂಲಕ ಜಾತ್ಯತೀತ ಸಮಾಜ ಕಟ್ಟಲು ಶ್ರಮಿಸಿದ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಈಗಿನ, ಇಂತಹ ಸನ್ನಿವೇಶದ ಕುರಿತು ಏನು ಹೇಳುತ್ತಿದ್ದರೋ? ಬಾಬು ಬಜರಂಗಿ ಸ್ಥಾಪಿಸಿದ ಸಂಸ್ಥೆಯು ಜಾತಿಯ ಹೊರಗಿನ ಮದುವೆಗಳನ್ನು ಮುರಿಯಲು ಹಿಂಸಾತ್ಮಕ ಕೃತ್ಯಗಳಿಗೆ ಇಳಿದು ಬಲಪ್ರಯೋಗವನ್ನೂ ಮಾಡಿದ ಕುರಿತು ‘ಫ್ರಂಟ್‌ಲೈನ್‌’ ಪತ್ರಿಕೆಯು ವಿವರವಾಗಿ ವರದಿ ಮಾಡಿತ್ತು. ಜಾತಿ ಚೌಕಟ್ಟು ಮೀರಿ ಮದುವೆ ಮಾಡಿಕೊಂಡ ಜೋಡಿಗಳನ್ನು ಅಪಹರಣ ಕೂಡ ಮಾಡಲಾಗುತ್ತಿತ್ತು. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯಲ್ಲಿ ಸಂಪೂರ್ಣವಾಗಿ ಸೋತ ಪೊಲೀಸ್‌ ವ್ಯವಸ್ಥೆ, ಈ ರೀತಿಯ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿ ಉಳಿದು, ಕುಕೃತ್ಯಗಳನ್ನು ಪರೋಕ್ಷವಾಗಿ ಬೆಂಬಲಿಸಿತು.

‘ಲವ್‌ ಜಿಹಾದ್‌’ ಎಂಬ ಪದ ಸಾರ್ವಜನಿಕ ಭೂಮಿಕೆಗೆ ಪ್ರವೇಶ ಪಡೆದಿದ್ದು ಇದೇ ಹಂತದಲ್ಲಿ. ಅಂತರಧರ್ಮೀಯ ಮದುವೆಗಳನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನೋಡುತ್ತಿರುವ ದೃಷ್ಟಿಕೋನಗಳು ಈಗ ಹೇಗಿವೆ ಎನ್ನುವುದು ನಮ್ಮೆಲ್ಲರಿಗೆ ತಿಳಿದೇ ಇದೆ. ‘ಲವ್‌ ಜಿಹಾದ್‌’ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಸಂಪೂರ್ಣವಾಗಿ ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ. ‘ಇಸ್ಲಾಮೋಫೋಬಿಯಾ’ ಹಾಗೂ ಕೋಮು ದ್ವೇಷದಿಂದ ಇಲ್ಲದ ಕಥೆಯನ್ನೂ ಹೆಣೆಯಲಾಗಿದೆ. ಅದು, ಈಗ ಭಾರತೀಯ ಕೋರ್ಟ್‌ ರೂಮ್‌ಗಳವರೆಗೂ ನುಸುಳಿದೆ.

ಧಾರ್ಮಿಕ ಮೂಲಭೂತವಾದಿ ಸಂಸ್ಥೆಗಳು ಪ್ರೀತಿಯ ಹೆಸರಿನಲ್ಲಿ ಹಿಂದೂ ಧರ್ಮದ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುತ್ತಿವೆ ಎಂದು ಕೇರಳದಲ್ಲಿ ಮೊದಲು ಕೆಲವು ಪ್ರಕರಣಗಳು (ಸಹನ್‌ ಶಾ ಎ. ವಿರುದ್ಧ ಕೇರಳ ಸರ್ಕಾರ, 2009, ಮೊದಲನೆಯದು) ದಾಖಲಾದವು. ಅವುಗಳಲ್ಲಿ 2017ರಲ್ಲಿ ವರದಿಯಾದ ಹಾದಿಯಾ ಅಲಿಯಾಸ್‌ ಅಖಿಲಾ ಪ್ರಕರಣವು ತುಂಬಾ ಪ್ರಸಿದ್ಧವಾದುದು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದ ಆಕೆ, ಶಫೀನ್‌ ಜಹಾನ್‌ ಎಂಬುವವರನ್ನು ವಿವಾಹವಾದರು. ಹಾದಿಯಾ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತು. ಅಂತರಧರ್ಮೀಯ ಮದುವೆ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳಲ್ಲಿ ಮಹಿಳೆಯ ಸ್ವಾತಂತ್ರ್ಯ ಮತ್ತು ಅವಳ ಆಯ್ಕೆಗಳ ಕುರಿತಂತೆ ಸಂಘರ್ಷಗಳು ಹಾಗೂ ವೈರುಧ್ಯಗಳೇ ತುಂಬಿಹೋಗಿವೆ. ಮಹಿಳೆಯನ್ನು ಸದಾ ಕುಟುಂಬದ ಸ್ವತ್ತಾಗಿ ಪರಿಗಣಿಸುತ್ತಾ ಬರಲಾಗಿದ್ದು, ಸಮುದಾಯದ ಮರ್ಯಾದೆಯ ಸಂಕೇತದಂತೆ ಬಿಂಬಿಸಲಾಗುತ್ತಿದೆ.

ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ, ಅಂದರೆ 2020ರ ಅಕ್ಟೋಬರ್‌ 8ರಂದು, ನೀಡಿದ ಆದೇಶವು (ಪೂಜಾ ಅಲಿಯಾಸ್‌ ಜೋಯಾ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಮತ್ತು ಇತರರು) ಮತ್ತೆ ಕಿಡಿಯನ್ನು ಹೊತ್ತಿಸಿದೆ. ಈ ಆದೇಶವು ತುಂಬಾ ಚುಟುಕಾಗಿದ್ದು, ನೇರವಾಗಿ ವಿಷಯವನ್ನು ಕೇಂದ್ರೀಕರಿಸಿದೆ. ಗುಜರಾತ್‌ನಲ್ಲಿ ನಡೆದ ಹಲವು ಪ್ರಕರಣಗಳ ಚರ್ಚೆಗೆ ವ್ಯತಿರಿಕ್ತವಾಗಿ ಈ ಪ್ರಕರಣದಲ್ಲಿ ಕೋರ್ಟ್‌, ಏಳು ಪ್ರಶ್ನೆಗಳನ್ನು ದೂರುದಾರಳಾದ ಮಹಿಳೆಗೆ ಕೇಳಿತು. ಆಕೆ (ಪೂಜಾ ಅಲಿಯಾಸ್‌ ಜೋಯಾ, 19 ವರ್ಷ) ವಯಸ್ಕಳು ಎನ್ನುವುದು ಅದರ ಗಮನಕ್ಕೆ ಬಂದಮೇಲೆ, ಆಕೆಯ ಇಚ್ಛೆಯಂತೆ ಅವಳ ಗಂಡ ಶಾವೇಜ್‌ ಜತೆ ಬಾಳಲು ಅನುವು ಮಾಡಿಕೊಟ್ಟಿತು. ವಯಸ್ಕಳಾದ ಆಕೆ, ತಾನು ಬಯಸಿದ ಸ್ಥಳದಲ್ಲಿ ಉಳಿಯಲು ಮುಕ್ತಳು ಎಂದು ಆದೇಶಿಸಿದ ಕೋರ್ಟ್‌, ಪ್ರಕರಣವನ್ನು ಖುಲಾಸೆಗೊಳಿಸಿತು.

ಹೀಗಿದ್ದೂ ಕೋರ್ಟ್‌ ಇನ್ನೊಂದು ಮಾತನ್ನೂ ಹೇಳಿದೆ. ‘ಸಂವಿಧಾನದ ಪ್ರಕಾರ, ಯಾವುದೇ ಪ್ರಜೆ ಅವನ/ಅವಳ ಆಯ್ಕೆಯ ಧರ್ಮದ ಪ್ರಕಾರ ನಡೆಯಲು ಅಥವಾ ಅದರ ತತ್ವಗಳನ್ನು ಪ್ರಚಾರ ಮಾಡಲು ಹಕ್ಕು ಹೊಂದಿರುವುದೇನೋ ನಿಜ. ಆದರೆ, ಕೇವಲ ಮದುವೆಯ ಕಾರಣಕ್ಕಾಗಿ ಯಾವುದೇ ಪ್ರಜೆ ಮತಾಂತರ ಹೊಂದುವುದನ್ನು ಒಪ್ಪಲಾಗದು’ ಎಂದು ಅದು ಅಭಿಪ್ರಾಯಪಟ್ಟಿದೆ. ಮದುವೆ ಮತ್ತು ಧರ್ಮದ ನಡುವಿನ ವ್ಯತ್ಯಾಸವನ್ನು ಎತ್ತಿತೋರಿದ ಏಕಸದಸ್ಯ ನ್ಯಾಯಪೀಠ, ‘ಮದುವೆಯೇ ಬೇರೆ, ಧರ್ಮವೇ ಬೇರೆ. ಭಿನ್ನ ಮತಗಳಿಗೆ ಸೇರಿದ ಇಬ್ಬರು ಭಾರತೀಯ ಪ್ರಜೆಗಳು ಮದುವೆ ಮಾಡಿಕೊಳ್ಳಲು ಬಯಸಿದಲ್ಲಿ ವಿಶೇಷ ಮದುವೆ ಕಾಯ್ದೆ–1954ರ ಅಡಿಯಲ್ಲಿ ಅವರು ವಿವಾಹವಾಗಲು ಮುಕ್ತರು. ಈ ಅವಕಾಶವು ಏಕರೂಪ ನಾಗರಿಕ ಸಂಹಿತೆಯತ್ತ ಸಾಗುವ ಆರಂಭಿಕ ಮೆಟ್ಟಿಲು’ ಎಂದೂ ಹೇಳಿದೆ.

ಕೋರ್ಟ್‌ನ ಈ ಅಭಿಪ್ರಾಯದಿಂದ ಪ್ರೇರಿತರಾದ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಮುಖ್ಯಮಂತ್ರಿಗಳು ‘ಲವ್‌ ಜಿಹಾದ್‌’ ತಡೆಗೆ ಕಾನೂನು ರೂಪಿಸುವುದಾಗಿ ಹೇಳಿದ್ದಾರೆ. ಈ ಇಬ್ಬರೂ ರಾಜಕಾರಣಿಗಳು ಅಲ್ಪಸಂಖ್ಯಾತರ ಹಕ್ಕುಗಳನ್ನೇ ಹಿಂಸಾತ್ಮಕ ಗುರಿ ಮಾಡಿಕೊಂಡ, ತಮ್ಮ ಮತಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ ಎಂಬ ವ್ಯಾಧಿ ಅಂಟಿಸಿಕೊಂಡ ರಾಜಕೀಯ ಕೃಪಾಪೋಷಿತ ವ್ಯವಸ್ಥೆಯ ಸಂಕೇತಗಳಾಗಿ ಧ್ವನಿಸಿದ್ದಾರೆ (ಕರ್ನಾಟಕದ ಮುಖ್ಯಮಂತ್ರಿಯೂ ಇದೇ ಧಾಟಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ).

ತೀಸ್ತಾ ಸೆಟಲ್ವಾಡ್‌

ನಮ್ಮ ಸಂವಿಧಾನದ ಕೊಡುಗೆಗಳಾದ ಸ್ವಾತಂತ್ರ್ಯ, ಮುಕ್ತತೆ, ಘನತೆ, ಸ್ವಾಯತ್ತತೆ ಮೊದಲಾದ ಮೌಲ್ಯಗಳ ಮೇಲೆ ಈಗ ಮತ್ತೊಂದು ‘ಕಾನೂನು ದಾಳಿ’ ಎದುರಾಗಿರುವುದು ಸುಸ್ಪಷ್ಟ. ಈ ದಾಳಿಯನ್ನು ಹೇಗೆ ಎದುರಿಸಬೇಕು ಎಂಬ ವಿಷಯವಾಗಿ ನಾವು, ಉಳಿದ ಭಾರತೀಯರೆಲ್ಲ, ಗಂಭೀರವಾಗಿ ಆಲೋಚಿಸಬೇಕಿದೆ.

ಟಾಟಾ–ಟೈಟನ್‌ ಕಾರ್ಪೊರೇಟ್‌ನ ತನಿಷ್ಕ್‌ ಜ್ಯುವೆಲ್ಲರಿ ವತಿಯಿಂದ ಇತ್ತೀಚೆಗೆ ರೂಪಿಸಿದ್ದ ಜಾಹೀರಾತಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಂತರಧರ್ಮೀಯ ವಿವಾಹದ ಕಲಾತ್ಮಕವಾದ ಆ ಸೊಬಗನ್ನು ಆಸ್ವಾದಿಸುವುದು ದೂರದ ಮಾತಾಯಿತು. ಸಂಘ ಪರಿವಾರ ಸಮರ ಸಾರಿತು. ತಕ್ಷಣ ತನಿಷ್ಕ್‌ ಜ್ಯುವೆಲ್ಲರಿ ಆ ಜಾಹೀರಾತನ್ನು ಹಿಂಪಡೆಯಿತು.

ಜಾತಿಯ ಪೂರ್ವಗ್ರಹಗಳಿಂದ ಮುಕ್ತವಾದ, ಅಸ್ಪೃಶ್ಯತೆ ಆಚರಿಸದ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ ಕೂಡಿದ ಜಾತ್ಯತೀತ ಸಮಾಜದ ಕನಸುಕಂಡಿದ್ದ ಅಂಬೇಡ್ಕರ್‌ ಅವರ ವಿಚಾರಧಾರೆಯನ್ನು ಭಾರತೀಯರೆಲ್ಲರೂ ಅರಿತುಕೊಳ್ಳಲು ಇದು ಸಕಾಲ. ಮಣಿರತ್ನಂ ಅವರ ‘ಬಾಂಬೆ’ ಸಿನಿಮಾವು ಅಂತರಧರ್ಮೀಯ ವಿವಾಹವು ಹೇಗೆ ರಕ್ತಪಾತಕ್ಕೆ ಕಾರಣವಾಗಿ ಕೊನೆಗೆ ಎರಡೂ ಮತದವರನ್ನು ಒಂದುಗೂಡಿಸಿತು ಎಂಬುದನ್ನು ತೋರಿಸುತ್ತದೆ. ಆದರೆ, ಈ ಕಲ್ಪನೆ ಕೇವಲ ಸಿನಿಮಾಗೆ ಸೀಮಿತ. ಭಾರತದ ಇಂದಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಕುರಿತು ಯೋಚಿಸುವಾಗ ಕೂಡ ಸಾರ್ವಜನಿಕರ ಮನಸ್ಸಿನಲ್ಲಿ ಬುರ್ಖಾ ಹಾಗೂ ಘೂಂಘಟ್‌ಗಳೇ ಸುಳಿದಾಡುತ್ತವೆ.

ಲೇಖಕಿ: ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ, ಕನ್ನಡಕ್ಕೆ: ಪಿನಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT