ಬುಧವಾರ, ಅಕ್ಟೋಬರ್ 28, 2020
18 °C
ಹೊಸ ಆವಿಷ್ಕಾರಗಳ ಜಾಗತಿಕ ಸ್ಪರ್ಧೆ ನಮ್ಮ ಪೇಟೆಂಟ್ ಕಾನೂನು ಪ್ರಕ್ರಿಯೆಗಳಿಗೆ ಸವಾಲಾಗಿದೆ

ಪೇಟೆಂಟ್ ಪ್ರಕ್ರಿಯೆಯ ಈ ಪರಿ

ಡಾ. ಎಚ್.ಆರ್.ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯಾವುದೇ ಸಂಶೋಧನೆಗೆ ಪೇಟೆಂಟ್ ದೊರೆಯಬೇಕಾದರೆ ಅದು ಮೂರು ಷರತ್ತುಗಳನ್ನು ಪೂರೈಸಬೇಕು. ಮೊದಲನೆಯದಾಗಿ, ಸಂಶೋಧನೆ ಹೊಸದಾಗಿರಬೇಕು. ಎರಡನೆಯದಾಗಿ, ಅದರಲ್ಲಿ ಆವಿಷ್ಕಾರದ ಹೊಸ ಹೆಜ್ಜೆ ಇರಬೇಕು. ಮೂರನೆಯದಾಗಿ, ಆ ಸಂಶೋಧನೆ ಕೃಷಿ, ಕೈಗಾರಿಕೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವಂತೆ ಇರಬೇಕು. ಇವುಗಳನ್ನು ನಾವೆಲ್ಟಿ, ನಾನ್ ಆಬ್‍ವಿಯಸ್‍ನೆಸ್ ಮತ್ತು ಯುಟಿಲಿಟಿ ಎಂದು ಕರೆಯುವುದು ವಾಡಿಕೆ.

ಈ ಮೂರು ಲಕ್ಷಣಗಳಿಂದ, ಯಾವುದೇ ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಜೀವಂತಿಕೆ, ಸೃಜನ ಶೀಲತೆ, ಕ್ರಿಯಾಶಕ್ತಿಯನ್ನು ಎತ್ತಿ ತೋರುವ, ವಿಶ್ವಸನೀಯವಾದ ಒಂದು ಸೂಚ್ಯಂಕವಾಗಿ ಪೇಟೆಂಟ್‍ಗಳನ್ನು ಬಳಸಲಾಗುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ‘ವಿಜ್ಞಾನ ಮತ್ತು ತಂತ್ರಜ್ಞಾನ ಸೂಚ್ಯಂಕಗಳು- 2019’ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ದೇಶದಲ್ಲಿ ಪೇಟೆಂಟ್‍ಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ನೀಡುವ ಈ ಪ್ರಕಟಣೆ ಅನೇಕ ಮಹತ್ವದ ಪ್ರಶ್ನೆಗಳಿಗೂ ದಾರಿ ಮಾಡಿಕೊಟ್ಟಿದೆ.

2005– 06ರಿಂದ 2017– 18ರ ಅವಧಿಯ 13 ವರ್ಷಗಳಲ್ಲಿ ಭಾರತದ ಪೇಟೆಂಟ್ ಮಹಾ ನಿಯಂತ್ರಕರ ಕಚೇರಿಗೆ ಬಂದ ಪೇಟೆಂಟ್ ಅರ್ಜಿಗಳ ಸಂಖ್ಯೆ 5.1 ಲಕ್ಷ. ಇದರಲ್ಲಿ ವಿದೇಶಿಯರ ಅರ್ಜಿಗಳ ಸಂಖ್ಯೆ 3.9 ಲಕ್ಷ. ಭಾರತೀಯರದು 1.2 ಲಕ್ಷ. ಬಂದ ಅರ್ಜಿಗಳಲ್ಲಿ ವಿದೇಶಿಯರದೇ ಸಿಂಹಪಾಲು. ಅಷ್ಟೇ ಅಲ್ಲ, ವಿವಿಧ ದೇಶಗಳಲ್ಲಿ ಸಲ್ಲಿಕೆಯಾಗಿರುವ ಪೇಟೆಂಟ್ ಅರ್ಜಿಗಳ ಸಂಖ್ಯೆಗೆ ಹೋಲಿಸಿದರೂ ನಾವು ಹಿಂದಿದ್ದೇವೆ. 2017ರಲ್ಲಿ ಚೀನಾದ ಪೇಟೆಂಟ್ ಕಚೇರಿಗೆ ಬಂದ ಅರ್ಜಿಗಳ ಸಂಖ್ಯೆ 13 ಲಕ್ಷ. ಅಮೆರಿಕದಲ್ಲಿ 6 ಲಕ್ಷವಾದರೆ ನಮ್ಮ ದೇಶದಲ್ಲಿ ಕೇವಲ 46 ಸಾವಿರ. ಏಕೆ ಹೀಗೆ? ನಮ್ಮ ಸಂಶೋಧಕರಿಗೆ ಪೇಟೆಂಟ್‍ಗಳ ಮಹತ್ವ ತಿಳಿದಿಲ್ಲವೇ?


ಡಾ. ಎಚ್.ಆರ್.ಕೃಷ್ಣಮೂರ್ತಿ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪೇಟೆಂಟ್‍ಗಳು ಬೇಕಾದರೆ ಸಂಶೋಧನೆ ನಡೆಯಬೇಕು. ಅವಿರತ ಸಂಶೋಧನೆಗೆ ಹಣ ಬೇಕು. ಬಂಡವಾಳ ತೊಡಗಿಸಿದಾಗ ಮಾತ್ರ ಗುಣಮಟ್ಟದ ಸಂಶೋಧನೆ ಸಾಧ್ಯ. 2017ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ನೀಡಿದ ಹಣ ದೇಶದ ಜಿಡಿಪಿಯ ಶೇ 0.7ರಷ್ಟು ಮಾತ್ರ. ಅದೇ ವರ್ಷ ಅಮೆರಿಕ, ಚೀನಾ ಮತ್ತು ಜಪಾನ್‍ ಹೂಡಿದ ಹಣ ಕ್ರಮವಾಗಿ ಆಯಾ ದೇಶದ ಜಿಡಿಪಿಯ 2.8%, 2.1% ಮತ್ತು 3.2%. ಇದರತ್ತ ಪ್ರೊ. ಸಿ.ಎನ್.ಆರ್.ರಾವ್ ಅವರು ಸರ್ಕಾರದ ಗಮನ ಸೆಳೆಯುತ್ತ ಬಂದಿದ್ದರೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಪೇಟೆಂಟ್‍ಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಹೆಚ್ಚಳ ಸಾಧಿಸಲು ಬಂಡವಾಳದ ಜೊತೆಗೆ ಪೇಟೆಂಟ್ ಪಡೆಯುವ ವಿಧಿ ವಿಧಾನಗಳಲ್ಲಿ ತ್ವರಿತಗತಿಯ ಬದಲಾವಣೆ ಅಗತ್ಯವಿದೆ.

ಪೇಟೆಂಟ್‌ಗಾಗಿ ಸಲ್ಲಿಸಿದ ಅರ್ಜಿಯನ್ನು ಪೇಟೆಂಟ್ ಕಚೇರಿಯು ಇಂಡಿಯನ್ ಪೇಟೆಂಟ್ ಜರ್ನಲ್‍ನಲ್ಲಿ
ಪ್ರಕಟಿಸುತ್ತದೆ. ಈ ಪ್ರಕಟಣೆಗೆ 18 ತಿಂಗಳು ಕಾಯಬೇಕು. ಇದಾದ ನಂತರ ಮತ್ತೊಂದು ಅರ್ಜಿ ಸಲ್ಲಿಸಿ ಪೇಟೆಂಟನ್ನು ವಿವರವಾಗಿ ಪರೀಕ್ಷಿಸಲು ಕೋರಬೇಕು. ನಿಗದಿತ ಅವಧಿಯಲ್ಲಿ ಈ ಅರ್ಜಿ ಬರದಿದ್ದರೆ ಪೇಟೆಂಟ್ ತಿರಸ್ಕೃತವಾಗುತ್ತದೆ. ಇಂಥ ಕೋರಿಕೆ ಬಂದ ನಂತರ ಪೇಟೆಂಟ್ ಪರೀಕ್ಷಕರು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುತ್ತಾರೆ. ಅದರಲ್ಲಿನ ಪ್ರಶ್ನೆಗಳಿಗೆ, ಆಕ್ಷೇಪಗಳಿಗೆ ಅರ್ಜಿದಾರ ಉತ್ತರಿಸಿದ ನಂತರ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹೀಗೆ ಎಲ್ಲ ಹಂತಗಳೂ ಮುಗಿದು ಕಡೆಗೊಮ್ಮೆ ಪೇಟೆಂಟ್ ದೊರೆಯಲು 2015ರಲ್ಲಿ 84 ತಿಂಗಳು ಬೇಕಾಗುತ್ತಿತ್ತು. ಈಗ 64 ತಿಂಗಳು ಬೇಕು.

ಪೇಟೆಂಟ್‍ಗಾಗಿ ಕಾದು ಕುಳಿತ ಅವಧಿಯಲ್ಲಿ ಅರ್ಜಿಯಲ್ಲಿ ನಮೂದಾಗಿರುವ ತಂತ್ರಜ್ಞಾನ, ಕಾರ್ಯವಿಧಾನಗಳು ಹಳೆಯವಾಗಿ, ನಿಷ್ಫಲವಾಗಿರುವ ಅನೇಕ ಪ್ರಸಂಗಗಳಿವೆ. ಇದಕ್ಕೆ ವಿರುದ್ಧವಾಗಿ ಚೀನಾ ಮತ್ತು ಯುರೋಪಿಯನ್ ಯೂನಿಯನ್ ದೇಶಗಳಲ್ಲಿ 22 ತಿಂಗಳಿನಲ್ಲಿ, ಅಮೆರಿಕದಲ್ಲಿ 24 ತಿಂಗಳಿನಲ್ಲಿ ಪೇಟೆಂಟ್‍ಗಳು ದೊರೆಯುತ್ತವೆ. ವಿದೇಶಗಳಲ್ಲಿ ಅರ್ಜಿ ಸಲ್ಲಿಸಿ ಪೇಟೆಂಟ್ ಪಡೆಯುವುದು ಬಹಳ ದುಬಾರಿಯಾದ್ದರಿಂದ ಭಾರತೀಯ ಸಂಶೋಧಕರು ವೈಯಕ್ತಿಕವಾಗಿ ಅಂತಹ ಪ್ರಯತ್ನ ಮಾಡುವುದು ಬಹಳ ಕಡಿಮೆ. ಪೇಟೆಂಟ್ ಪರೀಕ್ಷೆಯ ಹಂತದಲ್ಲಿ ವಿಶೇಷ ಶುಲ್ಕ ನೀಡಿ ಪರಿಶೀಲನೆಯನ್ನು ತ್ವರಿತಗೊಳಿಸುವ ಅವಕಾಶವಿದ್ದು, ವಿದೇಶಿ ಸಂಶೋಧಕರು ಈ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೀಗ ನಮ್ಮ ದೇಶದ ಅನೇಕ ಸ್ಟಾರ್ಟ್‌ಅಪ್ ಕಂಪನಿಗಳು ಈ ಮಾರ್ಗ ಹಿಡಿಯುತ್ತಿವೆ.

ವಿದೇಶಿ ಸಂಶೋಧಕರ ಅತಿ ಹೆಚ್ಚಿನ ಪೇಟೆಂಟ್ ಅರ್ಜಿಗಳಿಗೆ ಮುಖ್ಯ ಕಾರಣವೆಂದರೆ, ವಿದೇಶಗಳಲ್ಲಿ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳ ನಡುವೆಯಿರುವ ಸಹಯೋಗ ಹಾಗೂ ಅದರಿಂದ ವಿಶ್ವವಿದ್ಯಾಲಯಗಳಿಗೆ ಹರಿದು ಬರುವ ಧನಸಹಾಯ. ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿಯ ಪ್ರವರ್ಧಮಾನಕ್ಕೆ ಸ್ಟ್ಯಾನ್‍ಫರ್ಡ್‍ ವಿಶ್ವವಿದ್ಯಾಲಯ ಬಹುಮಟ್ಟಿಗೆ ಕಾರಣವೆಂಬುದನ್ನು ಗಮನಿಸಬೇಕು. ನಮ್ಮಲ್ಲಿ ಈ ರೀತಿಯ ಸಹಯೋಗ ಬಹುಮಟ್ಟಿಗೆ ಐಐಟಿ ಸಂಸ್ಥೆಗಳು, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಬೆರಳೆಣಿಕೆಯಷ್ಟು ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಿದೆ. 2018- 19ರಲ್ಲಿ ಈ ರೀತಿಯ ಸಹಯೋಗದ ಫಲವಾಗಿ ಮುಂಬೈ ಐಐಟಿಗೆ ಬಂದ ಧನಸಹಾಯ ₹ 335 ಕೋಟಿ. ಆ ವರ್ಷ ಅದು ಸಲ್ಲಿಸಿದ ಪೇಟೆಂಟ್‍ಗಳ ಸಂಖ್ಯೆ 98.

ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಪೇಟೆಂಟ್‍ಗಳನ್ನು ಪಡೆದಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‍ಐಆರ್) ಮಹಾನಿರ್ದೇಶಕ ಡಾ. ಶೇಖರ್‌ ಮಾಂಡೆ, ನಮ್ಮ ಸಂಶೋಧಕರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಮೌಲ್ಯ, ಪೇಟೆಂಟ್‍ಗಳ ಮಹತ್ವ ಮುಂತಾದವುಗಳ ಬಗ್ಗೆ ಹೆಚ್ಚಿನ ಅರಿವಿಲ್ಲ ಎನ್ನುತ್ತಾರೆ. ರಾಷ್ಟ್ರೀಯ ಸಂಶೋಧನಾ ಕೇಂದ್ರವೊಂದು ಚಿಕನ್ ಉಪ್ಪಿನಕಾಯಿಗೆ ಗೋಂಗೂರ ಸೊಪ್ಪನ್ನು ಸೇರಿಸಿ ಮಾಡಿದ ಹೊಸ ರುಚಿಗೆ ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿ, ನಗೆಪಾಟಲಿಗೀಡಾದ ಪ್ರಕರಣ ಇತ್ತೀಚಿನದು. ಈ ಪರಿಸ್ಥಿತಿಯನ್ನು ಬದಲಿಸಲು ಸಿಎಸ್‍ಐಆರ್ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ನಮ್ಮ ಅನೇಕ ವಿಜ್ಞಾನಿಗಳಿಗೆ ಪೇಟೆಂಟ್ ಪಡೆಯುವುದಕ್ಕಿಂತ ತಮ್ಮ ಸಂಶೋಧನೆಗಳನ್ನು ಪ್ರತಿಷ್ಠಿತ ಜರ್ನಲ್‍ಗಳಲ್ಲಿ ಪ್ರಕಟಿಸುವುದರಲ್ಲೇ ಹೆಚ್ಚಿನ ಒಲವಿದೆ ಎಂಬ ಅಭಿಪ್ರಾಯವಿದೆ. ಪೇಟೆಂಟ್‌ಗಾಗಿ ಕಾಯುವ ಅವಧಿ ಕಡಿಮೆಯಾದಲ್ಲಿ ಈ ಪರಿಸ್ಥಿತಿ ಬದಲಾಗಬಹುದು. ಈ ದಿಕ್ಕಿನಲ್ಲಿ ಪೇಟೆಂಟ್ ಕಚೇರಿಗಳ ಸಂಪೂರ್ಣ ಡಿಜಿಟಲೀಕರಣ, ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಂಟ್ ಪರೀಕ್ಷಕರ ನೇಮಕಾತಿಯಂಥ ಕ್ರಮಗಳು ಪ್ರಾರಂಭವಾಗಿವೆ.

ದೇಶದಲ್ಲಿ ಪೇಟೆಂಟ್‍ಗಳಿಗೆ ಸಂಬಂಧಿಸಿದ ಕಾನೂನು ಗಳು ರೂಪುಗೊಂಡಿರುವುದು 1970ರ ಪೇಟೆಂಟ್ ಅಧಿನಿಯಮದಲ್ಲಿರುವ ವಿವಿಧ ಅನುಬಂಧಗಳ ಆಧಾರದ ಮೇಲೆ. ಆದರೆ ಇಂದು ಬೃಹತ್ ದತ್ತಾಂಶ, ಮಶೀನ್ ಲರ್ನಿಂಗ್, ರೊಬಾಟಿಕ್ಸ್ ಮುಂತಾದ ಕ್ಷೇತ್ರ
ಗಳಲ್ಲಿ ನಡೆಯುತ್ತಿರುವ ಅಸಾಧಾರಣ ವೇಗದ ಪ್ರಗತಿಯು ನಮ್ಮ ಪೇಟೆಂಟ್ ಕಾನೂನುಗಳಿಗೆ ಅನೇಕ ಸವಾಲುಗಳನ್ನೊಡ್ಡುತ್ತಿದೆ. ಉದಾಹರಣೆಗೆ, ಮಾನವನ ಮಧ್ಯಪ್ರವೇಶವಿಲ್ಲದ ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್‍ನ ಹೊಸ ಆವಿಷ್ಕಾರಗಳಿಗೆ ಪೇಟೆಂಟ್ ದೊರೆಯುವುದಿಲ್ಲ. ಅಲ್ಗಾರಿದಮ್, ಕಂಪ್ಯೂಟರ್ ಪ್ರೋಗ್ರಾಮ್‌ಗಳಿಗೆ ಪೇಟೆಂಟ್ ನೀಡಿಕೆಯ ಪ್ರಶ್ನೆಗಳಲ್ಲಿ ಅನೇಕ ಗೊಂದಲಗಳಿವೆ. 1970ರ ಅಧಿನಿಯಮದಲ್ಲಿರುವ ಗತಕಾಲದ ಅನುಬಂಧಗಳನ್ನು ಕೈಬಿಟ್ಟು, ಅಗತ್ಯವಿರುವ ತಿದ್ದುಪಡಿಗಳನ್ನು ತ್ವರಿತಗತಿಯಲ್ಲಿ ತರುವ ತುರ್ತಿದೆ.

ದೇಶದ ಆಯ್ದ 900 ವಿಶ್ವವಿದ್ಯಾಲಯಗಳಲ್ಲಿ ಹೊಸ ಆವಿಷ್ಕಾರಗಳ, ಸೃಜನಾತ್ಮಕ ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಪ್ರಸ್ತಾಪಿಸಿದ್ದಾರೆ.

‘ಇನ್ನೊವೇಟ್, ಪೇಟೆಂಟ್, ಪ್ರೊಡ್ಯೂಸ್, ಪ್ರಾಸ್ಪರ್’- ಇದು ಈ ವರ್ಷದ ಪ್ರಾರಂಭದಲ್ಲಿ ಯುವವಿಜ್ಞಾನಿಗಳಿಗೆ ಪ್ರಧಾನಿ ನೀಡಿದ ಕರೆ. ಘೋಷಣೆ ಆಕರ್ಷಕವಾಗಿದೆ. ಆದರೆ ಇದನ್ನು ಕಾರ್ಯರೂಪಕ್ಕೆ ತರಲು, ಪೇಟೆಂಟ್ ಪಡೆಯುವ ಪ್ರಕ್ರಿಯೆಯಲ್ಲಿರುವ ಅನೇಕ ಎಡರು ತೊಡರು, ಕಿರಿಕಿರಿಗಳನ್ನು ಸಮರ್ಥವಾಗಿ, ತ್ವರಿತವಾಗಿ ದೂರ ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು