ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ, ಅಧಿಕಾರ, ಅಹಂಕಾರ

ವ್ಯಕ್ತಿ ಘನತೆ, ವೃತ್ತಿ ಘನತೆ, ಸಾಮಾಜಿಕ ಘನತೆ ಅರಿತವರಿಂದಷ್ಟೇ ಸಾರ್ವಜನಿಕ ಜೀವನ ಹಸನಾಗಬಹುದು
Last Updated 16 ಜೂನ್ 2021, 19:30 IST
ಅಕ್ಷರ ಗಾತ್ರ

ಉಂಡು ತೃಪ್ತರಾದವರ ಮುಖಗಳ ಹೊಳಪಲ್ಲಿ ಅಮ್ಮಂದಿರು ಮೀಯುವುದ ಕಂಡಾಗ, ಅಡುಗೆ ಮಾಡುವುದು ದಿವ್ಯ ಆನಂದ ಎಂದುಕೊಂಡಿದ್ದೆವು. ಅಜ್ಜಿ, ಮುತ್ತಜ್ಜಿಯರು ಅಡುಗೆಯನ್ನು ಒಂದು ತಪದಂತೆ ಆಚರಿಸಿ ಹಸಿವು ನೀಗಿಸುತ್ತಿದ್ದರು. ನಿಧಾನ ನಾರು ಬಿಡಿಸಿ, ಸೋಸಿ, ಸಣ್ಣಗೆ ಹೆಚ್ಚಿ, ಹುರಿದು, ಕರಿದು ಅಡುಗೆಯಲ್ಲಿ ತಮ್ಮ ನೈಪುಣ್ಯವನ್ನು ಒರೆಗೆ ಹಚ್ಚುತ್ತಿದ್ದರು. ಒರಳು ಕಲ್ಲಿನ ಮುಂದೆ ನಿಮೀಲಿತ ನೇತ್ರಗಳಲ್ಲಿ ಧ್ಯಾನದಂತೆ ಅರೆಯುತ್ತಾ, ಅರಿಯುತ್ತಾ ಬದುಕಿನ ಸ್ವಾದ ಹೆಚ್ಚಿಸಿದ್ದರು.

ಹಿಟ್ಟು ಬೀಸುವ, ರೊಟ್ಟಿ ತಟ್ಟುವ, ಗಂಜಿ ಬಸಿಯುವ, ಮುದ್ದೆ ತಿರುವುವ ಎಷ್ಟೊಂದು ಅವ್ವಂದಿರು ಅಡುಗೆ ಮನೆಯನ್ನು ಶ್ರಮ ಹಾಗೂ ಸೃಜನಶೀಲತೆಯ ಪರಾಕಾಷ್ಠೆಗೆ ಕೊಂಡೊಯ್ಯುತ್ತಿದ್ದರು. ಅಲ್ಲಿ ಹಾಡು ಹುಟ್ಟುತ್ತಿದ್ದವು. ಕತೆಗಳು ಸುರುಳಿ ಬಿಚ್ಚುತ್ತಿದ್ದವು. ಆ ಮಡಿಲುಗಳಲ್ಲಿ ಲಾಲಿ ಕೇಳುತ್ತ ಮಲಗಿದಾಗ ಲೋಕ ಎಷ್ಟು ಚಿಕ್ಕದೆನಿಸುತ್ತಿತ್ತು. ಅವರ ಮಮತೆಗೆ ಬ್ರಹ್ಮಾಂಡವನೇ ತೂಗಿ ಮಲಗಿಸುವ ಲಯವಿತ್ತು. ಅವರು ಪಾತ್ರೆ ತೊಳೆಯುವುದನ್ನು, ನೆಲ ಸಾರಿಸುವುದನ್ನು ಎಂದೂ ಕೀಳೆಂದುಕೊಂಡಿರಲಿಲ್ಲ. ಪಾತ್ರೆ ‘ಬೆಳಗುವುದು’ ಎಂಬ ಶಬ್ದವೇ ಎಷ್ಟು ಚೆಂದ!

ನೆಲಕ್ಕೆ ಸೆಗಣಿಯ ಕಪ್ಪು ಸಾರಿಸಿ, ಕೆಮ್ಮಣ್ಣಿನ ಅಂಚು ಬಳಿದು, ಬೆಳ್ಳಗಿನ ಶೇಡಿಯಲ್ಲಿ ನೆಲವನ್ನೇ ಸಿಂಗರಿಸಿ ಸಂಭ್ರಮಿಸುತ್ತಿದ್ದರು. ಯಾವಾಗ ಈ ಜೀವಪೋಷಣೆಯ ಸ್ವಭಾವವನ್ನು ಪುರುಷಾಧಿಕಾರ ನಿಯಂತ್ರಿಸಲು ತೊಡಗಿತೋ, ಯಾವಾಗ ಅವನು ‘ಅಡುಗೆ ಮಾಡುತ್ತ ಬಿದ್ದಿರು’ ಅಂದನೋ, ‘ಎಲ್ಲ ಸಾಕು ನಡಿ, ಪಾತ್ರೆ ತಿಕ್ಕುತ್ತ ಸವೆಯುತ್ತಿರು’ ಅಂತ ದರ್ಪ ತೋರಿದನೋ ಆಗ ಲಿಂಗರಾಜಕಾರಣ ಉದಿಸಿತು. ಅವಳ ಸೃಜನಶೀಲತೆ, ಸೌಂದರ್ಯಪ್ರಜ್ಞೆ, ಸಲಹುವ ಅದಮ್ಯ ಜೀವನಪ್ರೀತಿಯನ್ನು, ಕೊನೆಗೆ ಅವಳ ದೇಹ, ಮನಸ್ಸು ಎಲ್ಲವನ್ನೂ ನಿಯಂತ್ರಿಸತೊಡಗಿದನೋ ಆಗ ಅವಳು ಕೊಡವಿ ಎದ್ದು ಹೊರಡಲೇಬೇಕಾಯಿತು. ಬದುಕು ನಿರಂತರ ಅನ್ವೇಷಣೆಯ ಮೂಲಕ ರೂಪುಗೊಳ್ಳುತ್ತಲೇ ಇರುವ ಪ್ರಕ್ರಿಯೆಯೇ ಹೊರತು ಪೂರ್ವಗ್ರಹಗಳಿಂದ ನಿರ್ದೇಶಿಸಲ್ಪಡುವ ಜಡ ಸಂಗತಿಯಲ್ಲ.

ಹೆಣ್ಣಿನ ಪ್ರಾಕೃತಿಕ ಸ್ವರೂಪವನ್ನು ವಿರೂಪಗೊಳಿಸಿದ ಪಿತೃಪ್ರಧಾನ ವ್ಯವಸ್ಥೆ ಅದನ್ನು ವಿವಾಹ ಸಂಸ್ಥೆಯ ಮೂಲಕ ಮುಂದುವರಿಸುತ್ತಿದೆ. ಅವಳ ದೇಹ ಸುಂದರವಾಗಿಯೂ ಗಟ್ಟಿಮುಟ್ಟಾಗಿಯೂ ಇರಬೇಕು. ಏಕೆಂದರೆ ಅದೊಂದು ಪುನರುತ್ಪಾದನೆಯ ಕಾರ್ಖಾನೆ. ಏನನ್ನೂ ಪ್ರಶ್ನಿಸದೆ ಗೇಯಲು ಸಿದ್ಧವಾದ ಯಂತ್ರ. ವಧುಪರೀಕ್ಷೆಯೆಂಬ
ಪ್ರಹಸನಗಳಲ್ಲಿ ಪರೀಕ್ಷೆಗೊಳಪಡುತ್ತಿದ್ದ ಅವಳ ಅಂಗಭಂಗಿ, ಮಾತು ಎಲ್ಲವೂ ಅವಳು ಎಷ್ಟು ಬಾಗಲು ಸಿದ್ಧಳಿದ್ದಾಳೆ ಎಂಬುದನ್ನು ನಿರ್ಧರಿಸಲೆಂದೇ ಆಗಿರುತ್ತಿತ್ತು. ಹೆಣ್ಣು ಕೊಡುವುದು, ಹೆಣ್ಣು ತೆಗೆದುಕೊಂಡು ಬರುವುದು ಎಂಬ ವ್ಯಾಪಾರದ ಪರಿಭಾಷೆಗಳೇ ಅಲ್ಲಿ ಬಳಕೆಯಾಗುತ್ತಿದ್ದುದು. ವಿಧೇಯತೆ ಮೈವೆತ್ತವಳನ್ನೇ ಸುಸಂಸ್ಕೃತ ಹೆಣ್ಣೆಂದು ತನ್ನ ನಿರೂಪಣೆಗಳ ಮೂಲಕ ಸಮರ್ಥಿಸುತ್ತಾ, ಅವಳನ್ನು ಅಧಿಕಾರ ರಚನೆಗಳಿಂದ ಹೊರಗಿಟ್ಟು
ದುರ್ಬಲಗೊಳಿಸಲಾಯಿತು.

ಪುರುಷ ಶ್ರೇಷ್ಠತೆಯ ಪ್ರಜ್ಞೆ ಅವನಿಗೆ ತಂದುಕೊಡುವ ಅಧಿಕಾರವು ವಿವಾಹ ಹಾಗೂ ಕುಟುಂಬದಾಚೆ ಬದುಕಿನ ಎಲ್ಲ ಸ್ತರಗಳಿಗೂ ವಿಸ್ತರಿಸುತ್ತ ಹೋಗಿದ್ದು ಇತಿಹಾಸ. ಅಧೀನತೆ ವಿಧಿಯಲ್ಲ, ಹೇರಲ್ಪಟ್ಟ ನಾಜೂಕು, ಮೋಸ ಎಂಬುದು ಶಿಕ್ಷಣದ ಹೊಸ ಗಾಳಿ ಬೆಳಕುಗಳ ಮೂಲಕ ಅರಿವಾದಾಗ ಅವರು ಕಟ್ಟುಬಿಚ್ಚಿ ಕಲಕಲ ಹರಿಯ
ತೊಡಗಿದರು. ತಮಗೊಂದು ಆಯ್ಕೆಯ ಬದುಕಿದೆಯೆಂದು ಹೆಣ್ಣಿಗೆ ಅರಿವಾದುದೇ ಆವಾಗ.

ಹೆಣ್ಣು ತನ್ನ ಆಯ್ಕೆ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಯತ್ನಿಸಿದಾಗಲೆಲ್ಲ ಅವಳನ್ನು ಸ್ವಾರ್ಥಿಯೆಂದು ಬಿಂಬಿಸಲಾಗುತ್ತದೆ. ಮದುವೆಯನ್ನು ನಿರಾಕರಿಸಿ ಸ್ವತಂತ್ರವಾಗಿ
ರಲು ಬಯಸಿದರೆ ಅದು ಸ್ವೇಚ್ಛೆ ಎನಿಸಿಕೊಳ್ಳುತ್ತದೆ. ಅವಳು ಕುಟುಂಬ ವಿರೋಧಿ ಎನಿಸಿಕೊಳ್ಳುತ್ತಾಳೆ. ಅವಳೇನೇ ಸಾಧಿಸುವುದಿದ್ದರೂ ಕುಟುಂಬ ವಿಧಿಸಿದ ಗೃಹಿಣಿತ್ವದ ಕರ್ತವ್ಯವನ್ನೆಲ್ಲ ನಿಭಾಯಿಸಿಯೇ ತೀರಬೇಕು. ಅದೂ ಹಾಗೆ ಮಾಡುವುದು ಅವಳಿಗೆ ಕೊಟ್ಟ ಉದಾರ ಅವಕಾಶವೆಂದು ಬದುಕಿಡೀ ಅದಕ್ಕಾಗಿ ಅವಳು ಋಣಿಯಾಗಿರಬೇಕು! ಹಾರಲು ಬಿಟ್ಟರೂ ಸೂತ್ರ ನಮ್ಮ ಕೈಲಿದೆಯೆಂಬ ಅಹಂ ತೃಪ್ತಿಗೊಳಿಸಿಯೇ ಆಕೆ ತನ್ನ ಕಾರ್ಯಕ್ಷೇತ್ರವನ್ನು ಪ್ರವೇಶಿಸಬೇಕು. ಅಡುಗೆ ಮಾಡದಿದ್ದರೆ, ಮಕ್ಕಳು ಮನೆವಾರ್ತೆಯಲ್ಲಿ ತೊಡಗದಿದ್ದರೆ ಆಕೆ ಅತೀವ ಅಪರಾಧಿಪ್ರಜ್ಞೆಯಲ್ಲಿ ನರಳಬೇಕು. ಆಕೆ ತನ್ನ ವೃತ್ತಿ ಜಗತ್ತಿನ ಎಲ್ಲ ಸವಾಲುಗಳಿಗೆ ಎದೆಗೊಟ್ಟು ನಿಭಾಯಿಸಿ ಸಮಯಕ್ಕೆ ಸರಿಯಾಗಿ ನಗುನಗುತ್ತ ಮನೆಗೆ ಹಾಜರಾಗಬೇಕು. ತನ್ನ ದೇಹಭಾಷೆಯಲ್ಲಿ, ಮಾತಿನಲ್ಲಿ, ಎಲ್ಲಿಯೂ ಹೊರಗೆ ಗಳಿಸಿಕೊಂಡ ಆತ್ಮವಿಶ್ವಾಸದ ಪಸೆಯಿರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಅವಳು ಬದಲಾಗಿ ಬಿಟ್ಟಿದ್ದಾಳೆ, ಅಹಂಕಾರ ತಲೆಗೇರಿದೆ ಎಂಬ ಬಿರುದು ಧರಿಸಬೇಕು.

ತಾನು ಒಳ್ಳೆಯ ತಾಯಿಯಾಗಲಿಲ್ಲವೇನೋ ಎಂಬ ಅಪರಾಧಿಭಾವ ಉದ್ಯೋಗಸ್ಥ ಮಹಿಳೆಗೆ ಯಾಕೆ ಆ ಪರಿ ಕಾಡಬೇಕು? ಅದು ತಂದೆಯನ್ನೇಕೆ ಎಂದೂ ಬಾಧಿಸುವುದಿಲ್ಲ? ಅವನಿಗಿರುವ ಅವನದೇ ಸ್ಪೇಸ್, ಅವನದೇ ಚಾಯ್ಸ್ ಅವಳಿಗೇಕೆ ಭಿಕ್ಷೆಯಂತೆ ಭಾಸವಾಗಬೇಕು? ಅವಳು ಇದನ್ನೆಲ್ಲ ಪ್ರಶ್ನಿಸದೇ ಮೌನವಾಗಿರಬೇಕು. ಏಕೆಂದರೆ ಪುರುಷಅಹಂ ಕೆರಳಿಸಿದಷ್ಟೂ ಮನೆ ಯುದ್ಧರಂಗವಾಗಿಬಿಡುತ್ತದೆ.

ಹೊರಗಾದರೂ ಏನಿದೆ ಮತ್ತೆ? ಅವಳು ತನ್ನ ವಿದ್ಯೆ ಹಾಗೂ ಕಾರ್ಯಕ್ಷಮತೆಯ ಬಲದಿಂದ ತಮಗೆ ಸರಿಸಮನಾಗಿ ಕುಳಿತುಕೊಳ್ಳುವುದನ್ನು ಅನೇಕ ಪುರುಷರು ಸಹಿಸುವುದಿಲ್ಲ. ಅವಳ ಕೆಳಗಿನವರಿಗೂ ಅವಳ ಆಜ್ಞೆಗಳನ್ನು ಪಾಲಿಸುವುದು ಮರ್ಮಾಘಾತ
ವೆನಿಸುತ್ತದೆ. ಅವಳು ತನ್ನ ಸಾಂಪ್ರದಾಯಿಕ ಪಾತ್ರಗಳಾಚೆ ಬೆಳೆದಾಗ ಅದನ್ನು ಕತ್ತರಿಸಬೇಕೆನಿಸುತ್ತದೆ. ನೇರವಾಗಿ ಸಾಧ್ಯವಾಗದಿದ್ದಾಗ ಕ್ಷುದ್ರ ತಂತ್ರಗಾರಿಕೆ ಆರಂಭವಾಗಿಬಿಡುತ್ತದೆ. ಮನೆಯ ಒಳಹೊರಗೂ ಈ ಅಂತರ್ಯುದ್ಧ ಗಳಲ್ಲಿ ಹೈರಾಣಾಗುವ ಅವಳು ಒಂದೋ ಖಿನ್ನತೆಗೆ ಜಾರಬೇಕು, ಇಲ್ಲ ಮೊಂಡು ಬೀಳಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನವು ಕೊಟ್ಟ ಅವಕಾಶಗಳಿಂದಾಗಿ ಹೆಣ್ಣಿನ ಕಾರ್ಯಕ್ಷೇತ್ರ ವಿಂದು ವಿಸ್ತಾರವಾಗಿದೆ. ಅವಳ ಅಂತರಂಗದ ಜಗತ್ತು ಹಿಗ್ಗಿದೆ. ಇದುವರೆಗೂ ನಡೆಯಲಾಗದ ಹೊಸ ದಾರಿಗಳನ್ನು ಅನ್ವೇಷಿಸುತ್ತ ಅವಳು ನಡೆಯುತ್ತಿ
ದ್ದಾಳೆ. ಮದುವೆಯೆಂಬುದು ಅವಳ ಏಕೈಕ ಆದ್ಯತೆಯಾಗಿ ಇಂದು ಉಳಿದಿಲ್ಲ. ಅಡುಗೆ ಹಾಗೂ ಮಕ್ಕಳ ಪೋಷಣೆ ಇಡೀ ಕುಟುಂಬದ ಹೊಣೆಯಾಗಿರುವುದರಿಂದ ಶ್ರಮ
ವಿಭಜನೆಯ ಸ್ವರೂಪವು ಇಂದಿನ ಕಾಲಕ್ಕೆ ತಕ್ಕಂತೆ ಬದಲಾದರೆ ಮಾತ್ರ ಮದುವೆಯೆಂಬ ವ್ಯವಸ್ಥೆ ಉಳಿಯಬಹುದು. ಯಾವ ಅಹಮ್ಮುಗಳೂ ಅವಳನ್ನು ಕಟ್ಟಿಕೆಡವಲು ಇನ್ನು ಸಾಧ್ಯವಿಲ್ಲ. ಇಂಥವಳನ್ನು ಮತ್ತೆ ಹಿಮ್ಮೊಗವಾಗಿ ಚಲಿಸುವಂತೆ ನಮ್ಮ ಧರ್ಮ ಹಾಗೂ ರಾಜಕಾರಣಗಳು ನಿರ್ದೇಶಿಸುತ್ತಿರುವುದು ವಿಪರ್ಯಾಸ.

ಸ್ವಜಾತಿಯಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂಬ ಹತಾಶೆಯಲ್ಲಿ ಸಮುದಾಯವೊಂದು ‘ಅವಳನ್ನು ಜಾಸ್ತಿ ಓದಿಸಿದ್ದಕ್ಕೇ ಹೀಗಾಯಿತು. ಅವಳ ಆಯ್ಕೆಗಳನ್ನು ಮಿತಿಗೊಳಿಸಿ’ ಎಂದು ಬೊಬ್ಬೆ ಹೊಡೆಯುತ್ತಿದೆ. ಅವಳಿಗೆ ‘ಸಂಸ್ಕಾರ’ ಕಲಿಸಿ ಎಂದು ಧರ್ಮಪೀಠಗಳು ಒರಲು
ತ್ತಿರುವುದು ಅವಳನ್ನು ಮತ್ತೆ ಬಂಧಿಸುವುದಕ್ಕಾಗಿಯೇ. ಮೊನ್ನೆ ಪ್ರಜಾಪ್ರತಿನಿಧಿಯೊಬ್ಬರು ಮಹಿಳಾ ಅಧಿಕಾರಿಗೆ ‘ರಾಜೀನಾಮೆ ಕೊಟ್ಟು ಅಡುಗೆ ಮಾಡಿಕೊಂಡಿರಲಿ’ ಎಂದು ಕುಹಕವಾಡಿರುವಲ್ಲಿಯೂ ಅದೇ ಅಹಂಪೀಡಿತ ಮನಃಸ್ಥಿತಿಯೇ ಕಾಣುತ್ತದೆ. ಅವರ ಆರೋಪ ಪ್ರತ್ಯಾರೋಪಗಳ ಸತ್ಯಾಸತ್ಯತೆ ಏನೇ ಇರಲಿ, ಲಿಂಗಸಂವೇದನಾ ಶೀಲತೆಯಿಲ್ಲದ ರೂಕ್ಷ ರಾಜಕೀಯ ವ್ಯವಸ್ಥೆಯೊಂದು ಢಾಳಾಗಿ ಕಾಣಿಸುತ್ತಿದೆ. ವೈಯಕ್ತಿಕ ಪೂರ್ವಗ್ರಹವು
ವ್ಯವಸ್ಥೆಯನ್ನೂ ಹದಗೆಡಿಸುತ್ತದೆ.

ಅಹಂಕಾರದ ನಡೆಯು ಹೆಣ್ಣು, ಗಂಡು ಇಬ್ಬರಿಗೂ ಶೋಭೆಯಲ್ಲ. ಆತ್ಮವಿಶ್ವಾಸವು ಅಹಂಕಾರವಾಗದ ಸೂಕ್ಷ್ಮ ನಡೆಯನ್ನು ನಡೆಯಲು ಅಪಾರ ಸಹಿಷ್ಣುತೆ ಬೇಕು. ಹಾಗಂತ ಅಡುಗೆ ಮಾಡುತ್ತ ಮಕ್ಕಳನ್ನು ನೋಡಿಕೊಂಡಿರುವುದು ಹೆಣ್ಣೊಬ್ಬಳ ವೈಯಕ್ತಿಕ ಆಯ್ಕೆಯಾಗಿದ್ದರೆ ಅದರಲ್ಲಿ ಏನೂ ತಪ್ಪಿಲ್ಲ. ಅದು ಆಡಳಿತದಷ್ಟೇ ಘನವಾದುದು. ವ್ಯಕ್ತಿ ಘನತೆ, ವೃತ್ತಿ ಘನತೆ ಹಾಗೂ ಸಾಮಾಜಿಕ ಘನತೆಯನ್ನು ಅರಿತ ವ್ಯಕ್ತಿಗಳಿಂದ ಮಾತ್ರ ನಮ್ಮ ಸಾರ್ವಜನಿಕ ಜೀವನ ಹಸನಾಗಬಹುದು. ಹೆಣ್ಣುತನವನ್ನು ಈ ಗಂಡಾಳಿಕೆಯ ಫರಮಾನುಗಳಿಂದ, ಅದರ ಕುಬ್ಜ ಮಾನದಂಡಗಳಿಂದ ಬಿಡುಗಡೆಗೊಳಿಸದೇ ವಿಧಿಯಿಲ್ಲ. ಸೇವೆ ಹೆಣ್ಣಿನದು, ಅಧಿಕಾರ ಗಂಡಿನದು ಎಂಬ ಗೆರೆಗಳು ಅಳಿಸಿ ಅಧಿಕಾರಕ್ಕೆ ತಾಯ್ತನವೂ ತಾಯ್ತನಕ್ಕೆ ಸಹಜಾಧಿಕಾರವೂ ಒದಗುತ್ತ ಹೋಗುವುದು ಸರಿಯಾದ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT