ಬುಧವಾರ, ಮಾರ್ಚ್ 22, 2023
26 °C
ಭ್ರಮೆ ಚಿಮ್ಮಿಸುವ ಯೋಜನೆಗಳು ಸಾಕು; ಜಲಸುರಕ್ಷತೆ ಸಾಧಿಸುವ ಮಾದರಿಗಳು ಬೇಕು

ಕೇಶವ ಎಚ್. ಕೊರ್ಸೆ ವಿಶ್ಲೇಷಣೆ: ನೀರ ನೆಮ್ಮದಿಯೆಂಬ ಮೃಗಜಲ!

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ಕಳೆದ ಆಗಸ್ಟ್‌ನಲ್ಲಷ್ಟೇ ನೆರೆಯಿಂದ ತತ್ತರಿಸಿದ್ದ ಗದಗ ಜಿಲ್ಲೆಯ ಬೆಣ್ಣಿಹಳ್ಳದ ಚಿತ್ರಗಳ ನೆನಪಿನಲ್ಲಿ, ಈಗೊಮ್ಮೆ ಆ ಪ್ರದೇಶದಲ್ಲಿ ಸಂಚರಿಸಿದರೆ ಆಘಾತವಾಗುತ್ತದೆ. ಒಂಟಿಮರದ ನೆರಳೂ ಅಪರೂಪವಾಗಿರುವ ಒಣಭೂಮಿಯ ಹೊಳೆ-ಹಳ್ಳಗಳೆಲ್ಲ ಬತ್ತಿ ಆರು ತಿಂಗಳೇ ಸಂದಿವೆ. ಕೆರೆಗಳಲ್ಲಿ ಹೂಳುತುಂಬಿ ನೀರು ಆರುತ್ತಿದೆ. ಬೇಸಿಗೆಯಲ್ಲಿನ್ನು ಮನೆಬಳಕೆಯ ಬಿಂದಿಗೆ ನೀರು ತರಲೂ ಮಹಿಳೆಯರು ಶ್ರಮಪಡಬೇಕು. ಆರು ತಿಂಗಳ ಅಂತರದಲ್ಲಿ ಕಾಡುವ ನೆರೆ ಹಾಗೂ ಬರಗಳ ನಡುವಿನ ಸೆಣಸಾಟವಾಗಿದೆ ಇಲ್ಲಿನ ಜನಸಾಮಾನ್ಯರ ಬದುಕು!

ಎಂಬತ್ತರ ದಶಕದಂಚಿನ ಮಾತು. ಹಿಂದಿನ ವರ್ಷಗಳ ಬರದಿಂದ ತತ್ತರಿಸಿದ್ದ ನಾಡಿನ ಜನ, ದೇಶಕ್ಕೇ ಮಾದರಿಯೆಂಬಂತೆ ಆಗಷ್ಟೇ ಜಾರಿಯಾಗಿದ್ದ ಪಂಚಾಯಿತಿ ವ್ಯವಸ್ಥೆಯಿಂದ ಹೊಸ ಚೈತನ್ಯ ಪಡೆಯಲು ಮುಂದಾಗಿದ್ದ ಕಾಲವದು. ಗ್ರಾಮೀಣಾಭಿವೃದ್ಧಿ ಸಚಿವ ನಜೀರ್‌ಸಾಬರು ತಂದ ಸಮುದಾಯ ಕೊಳವೆಬಾವಿಗಳು, ತೊಟ್ಟು ನೀರಿಗೂ ತತ್ವಾರವಾಗಿದ್ದ ಒಳನಾಡಿನ ಹಳ್ಳಿಗರಿಗೆ ಸಂಜೀವಿನಿಯಂತೆ ತೋರಿದ್ದವು. ಹಸಿರುಕ್ರಾಂತಿಯ ತಂತ್ರಜ್ಞಾನಗಳು ಕೃಷಿಭೂಮಿಯನ್ನು ಬಂಜರಾಗಿಸುತ್ತಿದ್ದ ಅರಿವಿನ ಪ್ರಸರಣದಿಂದಾಗಿ, ಅನೇಕ ನವ ಪದವೀಧರರು ಹಳ್ಳಿಗಳಿಗೆ ಹಿಂತಿರುಗಿ ಸಾವಯವ ಕೃಷಿ ಕೈಗೊಳ್ಳಲೂ ಕನಸತೊಡಗಿದ್ದರು. ಆಗಷ್ಟೇ ಕನ್ನಡದಲ್ಲೂ ಪ್ರಕಟವಾಗಿದ್ದ ಜಪಾನಿ ಸಂತ ಫುಕುವೊಕಾರ ‘ಒಂದು ಹುಲ್ಲಿನ ಕ್ರಾಂತಿ’ಯಿಂದ ಪ್ರೇರಿತರಾದ ಅನೇಕ ರೈತರು, ತಮ್ಮಲ್ಲೇ ಸಂಘಟಿತರಾಗಿ ಸಹಜಕೃಷಿಯ ದೇಸಿಮಾರ್ಗಗಳನ್ನು ಅನ್ವೇಷಿಸತೊಡಗಿದ್ದರು.

ಇಂಥ ಸಂಕ್ರಮಣದಲ್ಲಿ, ಗದುಗಿನ ಭರಮಗೌಡರಂಥ ಸಾವಯವ ಕೃಷಿಕರ ಪ್ರೇರಣೆಯೊಂದಿಗೆ ಉತ್ತರಕರ್ನಾಟಕದಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದ ನಮ್ಮಂಥ ಯುವತಲೆಮಾರಿಗೆ, ಮುಂದಿನ ದಶಕಗಳಲ್ಲಿ ರಾಜ್ಯದಲ್ಲಿ ಪರಿಸರಸ್ನೇಹಿ ಕೃಷಿ ಹಾಗೂ ಗ್ರಾಮೀಣಾ
ಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ! ಆದರೆ, ಒಳನಾಡಿನಲ್ಲೀಗ ಆಗುತ್ತಿರುವುದಾದರೂ ಏನು? ಹಸಿರು ಕವಚವೆಲ್ಲ ಮಾಯವಾಗಿ, ಕೃಷಿಭೂಮಿಯ ತೇವಾಂಶ ಮತ್ತಷ್ಟು ಕುಸಿದಿದೆ. ಕೃಷಿಅರಣ್ಯ ತತ್ವ ಮಾಯವಾಗಿ, ಹೊಳೆಬದಿಯ ಮರಗಿಡಗಳ ಸಾಲು ಕರಗಿ, ನದಿಯಂಚು ಅತಿಕ್ರಮಣವಾಗಿ, ಸಣ್ಣ ಮಳೆಗೂ ಪ್ರವಾಹ ಉಕ್ಕುತ್ತಿದೆ. ಹೂಳು ತುಂಬಿದ ಹಾಗೂ ಏರಿ ಒಡೆದ ಕೆರೆಗಳಲ್ಲಿ ನೀರು ನಿಲ್ಲದಾಗುತ್ತಿದೆ. ಕುಡಿಯುವ ನೀರು ಹಾಗೂ ಮಿತಿಯುಳ್ಳ ನೀರಾವರಿಗೆ ಮಾತ್ರ ಬಳಕೆಯಾಗಬೇಕಿದ್ದ ಕೊಳವೆಬಾವಿಗಳು ಖಾಸಗಿಯವರ ದಾಹಕ್ಕೆ ಬಲಿಯಾಗಿ, ಸಾವಿರಾರು ಅಡಿ ಆಳಕ್ಕಿಳಿದರೂ ನೀರು ದೊರಕದಷ್ಟು ಅಂತರ್ಜಲ ಕುಸಿದಿದೆ! ಇಷ್ಟಿದ್ದರೂ, ಹಿಂಗಾರಿನಲ್ಲೂ ಭತ್ತ, ಕಬ್ಬು ಬೆಳೆಯುವ ಅಥವಾ ಒಣಭೂಮಿಯಲ್ಲೂ ನೀರು ಬೇಡುವ ಅಡಿಕೆಯಂಥ ಆರ್ಥಿಕ ಬೆಳೆಗೆ ಕೈಹಾಕುವ ದೊಡ್ಡ ರೈತರ ನಡವಳಿಕೆಯಲ್ಲಿ ಬದಲಾವಣೆ ತೋರುತ್ತಿಲ್ಲ. ಬಹುಪಾಲು ಬಾವಿ-ಕೆರೆಗಳಿಗೆ ಊರು-ನಗರಗಳ ಕೊಳಚೆ ಸೇರುತ್ತಿರುವುದರಿಂದ, ಕುಡಿಯುವ ನೀರಿನ ಪರದಾಟವಂತೂ ನಿಲ್ಲುತ್ತಲೇ ಇಲ್ಲ.

ಅಂದರೆ, ಕೃಷಿ ಹಾಗೂ ಮನೆಬಳಕೆಯ ಕನಿಷ್ಠ ನೀರನ್ನೂ ಸರ್ಕಾರವೇ ಪೂರೈಸಬೇಕಾದ ಅನಿವಾರ್ಯಕ್ಕೆ ಒಳನಾಡು ತಲುಪಿದೆ. ಕಾಡು, ಗೋಮಾಳ, ಹೊಳೆ, ಕೆರೆ-ಎಲ್ಲ ಬಗೆಯ ನೆಲ-ಜಲಮೂಲಗಳನ್ನು ಅನಾದಿಯಿಂದ ನಿರ್ವಹಿಸುತ್ತಿದ್ದ ಹಳ್ಳಿಗರ ಹಕ್ಕನ್ನು ಕಸಿದು, ಅವರ ಸ್ವಾವಲಂಬಿತನವನ್ನೇ ಮುರಿಯಲು ಮೊದಲು ಆರಂಭಿಸಿದ್ದು ವಸಾಹತುಶಾಹಿ ಆಡಳಿತ. ಆದರೆ, ಕ್ಷಮತೆ ಹಾಗೂ ಪಾರದರ್ಶಕತೆಯೇ ಇಲ್ಲದ ತನ್ನ ಪಾದಕ್ಕೇ ಎಲ್ಲರನ್ನೂ ಕೆಡವಿ, ಹಳ್ಳಿಗರ ಸ್ವಾಯತ್ತತೆಯನ್ನೇ ಹರಣ ಮಾಡುವ ಕಾರ್ಯ ಪೂರ್ತಿಗೊಳಿಸುತ್ತಿರುವುದು ಮಾತ್ರ ಅಧಿಕಾರ ರಾಜಕಾರಣದಲ್ಲಿ ಮಿಂದೇಳುತ್ತಿರುವ ನಮ್ಮದೇ ಚುನಾಯಿತ ಸರ್ಕಾರಗಳು!

ನೆಲ-ಜಲವನ್ನು ಹಿತಮಿತವಾಗಿ ಬಳಸಿ, ಕೃಷಿಪರಿಸರ ಹಾಗೂ ಗ್ರಾಮೀಣ ಬದುಕನ್ನು ಹಸನಾಗಿಸಲು ಶ್ರಮಿಸು ತ್ತಿರುವ ಅಸಂಖ್ಯ ಪ್ರಗತಿಪರ ಕೃಷಿಕರು ಹಾಗೂ ಸಮುದಾ ಯಾಧಾರಿತ ಸಂಘ-ಸಂಸ್ಥೆಗಳ ಯಶೋಗಾಥೆಗಳನ್ನು ಈ ಸರ್ಕಾರಿ ಧೋರಣೆಯು ಬಲಿ ತೆಗೆದುಕೊಳ್ಳುತ್ತಿದೆ.

ನೀರು ಒದಗಿಸುವ ದಾರಿಗಳನ್ನು ಸರ್ಕಾರ ಶೋಧಿಸುತ್ತಿಲ್ಲವೆಂದೇನೂ ಅಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಲಮೂಲ ರಕ್ಷಿಸುವ ಹಾಗೂ ಕುಡಿಯುವ ನೀರು ಒದಗಿಸುವ ಅನೇಕ ಯೋಜನೆಗಳಿವೆ. ನಗರಾ ಭಿವೃದ್ಧಿ ಇಲಾಖೆಯು ಪಟ್ಟಣಗಳ ತ್ಯಾಜ್ಯ ಸಂಸ್ಕರಿಸಿ, ಜಲಮೂಲಗಳ ಶುದ್ಧತೆ ಕಾಪಾಡಲು ಪ್ರಯತ್ನಿಸುತ್ತಿದೆ. ಕೃಷಿಹೊಂಡ, ಹನಿ ನೀರಾವರಿ ಯೋಜನೆಗಳು ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಲ್ಲಿವೆ. ನರೇಗಾ ಯೋಜನೆಯಾದರೋ ನೈಸರ್ಗಿಕ ಸಂಪನ್ಮೂಲ ಗಳನ್ನು ಬೆಳೆಸಿಯೇ ಜೀವನೋಪಾಯ ಕಲ್ಪಿಸುವ ಉದ್ದೇಶದ್ದು. ಕೃಷಿಅರಣ್ಯ ತತ್ವಾಧಾರಿತ ಮಾದರಿ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು, ವಿಶ್ವಬ್ಯಾಂಕ್ ಅನುದಾನದೊಂದಿಗೆ ಜಲಾನಯನ ಇಲಾಖೆಯು ಹಲವು ಜಿಲ್ಲೆಗಳಲ್ಲಿ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳುತ್ತಿದೆ. ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಅರಣ್ಯ ವಿಭಾಗವು ಕಾಡಿನಲ್ಲಿ ಮಳೆನೀರು ಇಂಗಿಸಿ ಊರಿನ ಅಂತರ್ಜಲ ಹೆಚ್ಚಿಸುವ ಇಂಗುಗುಂಡಿಗಳನ್ನು ತೋಡುತ್ತಿದೆ.

2014ರಲ್ಲಿ ರಚಿತವಾದ ‘ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ’ವು ಸಣ್ಣ ನೀರಾವರಿ ಇಲಾಖೆಯ ಮೂಲಕ ರಾಜ್ಯದ ಕೆರೆಗಳನ್ನೆಲ್ಲ ಸುಸ್ಥಿತಿಗೆ ತರಲು ಚಿಂತಿಸುತ್ತಿದೆ. ಕೆರೆ ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸುವ ಹಾಗೂ ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡುವ ಯೋಜನೆಗಳೂ ಜಿಲ್ಲಾ ಪಂಚಾಯಿತಿಯಡಿ ಬಂದಾಗಿವೆ. ಸಾವಯವ ಹಾಗೂ ಶೂನ್ಯ ಬಂಡವಾಳದ ಕೃಷಿಗೂ ಯೋಜನೆಗಳು ಜಾರಿಯಾಗಿವೆ. ಆದರೆ, ಮೂರು ದಶಕಗಳಿಂದ ಜಾರಿಯಾಗುತ್ತಲೇ ಇರುವ ಈ ಬಗೆಯಯೋಜನೆಗಳೆಲ್ಲದರ ಫಲಶ್ರುತಿಯಾದರೂ ಏನು? ದಿಕ್ಕುತಪ್ಪಿದ ಆಡಳಿತ ನೀತಿ ಹಾಗೂ ಅಧಿಕಾರಶಾಹಿಗೆ, ಅವೈಜ್ಞಾನಿಕ ಕಾಮಗಾರಿ ಹಾಗೂ ಭ್ರಷ್ಟಾಚಾರಗಳೂ ಜೊತೆಯಾಗಿ, ಯೋಜನೆಗಳಲ್ಲಿ ಜನಸಹಭಾಗಿತ್ವ ಇಲ್ಲದಾಗಿ, ಆಶಯಗಳೆಲ್ಲ ಸರ್ಕಾರಿ ದಾಖಲೆ ಗಳಲ್ಲೇ ಉಳಿದವಲ್ಲ! ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಗದಗ, ಕೊಪ್ಪಳ, ರಾಯಚೂರು- ಒಳನಾಡಿನ ಎಲ್ಲಿ ನೋಡಿದರೂ ನೀರಿನ ಲಭ್ಯತೆ ಮಾತ್ರ ಮರೀಚಿಕೆಯಾಗುತ್ತಿದೆ.


-ಕೇಶವ ಎಚ್. ಕೊರ್ಸೆ

ಪಾರಂಪರಿಕ ಜಲಸುರಕ್ಷತೆ ವಿಧಾನಗಳನ್ನೆಲ್ಲ ಪ್ರಜ್ಞಾಪೂರ್ವಕವಾಗಿ ಹೊಸಕಿಹಾಕಿ, ಸರ್ಕಾರವೇ ಸೃಷ್ಟಿಸುತ್ತಿರುವ ಈ ಅಪಾಯಕಾರಿ ಬೆಳವಣಿಗೆಗಳ ಲಾಭ ಪಡೆಯುತ್ತಿರುವುದು ಮಾತ್ರ ಸರ್ಕಾರಿ ಪೋಷಿತ ಸಿವಿಲ್ ಕಾಮಗಾರಿ ಉದ್ಯಮಲೋಕ. ಎಲ್ಲೆಂದರಲ್ಲಿ ಒಡ್ಡು-ಜಲಾಶಯ ನಿರ್ಮಿಸಿ, ಎಲ್ಲೆಡೆ ಕಾಲುವೆ ಹಾಗೂ ಕೊಳವೆಗಳಲ್ಲಿ ನೀರು ಹರಿಸುವ ಭ್ರಮೆಯನ್ನು ಬೃಹತ್ ನೀರಾವರಿ ಇಲಾಖೆ ಹಾಗೂ ಅದರ ಜಲನಿಗಮಗಳು ಸೃಷ್ಟಿಸುತ್ತಿವೆ. ಈ ಕಾಮಗಾರಿ ಮೋಹದ ವ್ಯೂಹಕ್ಕೆ ಸರ್ಕಾರವೂ ಕೈಜೋಡಿಸುತ್ತಿದೆ ಎನ್ನದೆ ವಿಧಿಯಿಲ್ಲ. ಇಲ್ಲವೆಂದರೆ, ಈಗಿರುವ ಹಲವು ಕಾಲುವೆಗಳಲ್ಲೇ ಇನ್ನೂ ನೀರು ಹರಿಯದಿರುವಾಗ, ಹೊಸ ಪ್ರಸ್ತಾಪಗಳಿಗೆ ಸರ್ಕಾರ ಒಪ್ಪುತ್ತಿತ್ತೇ? ಕೈಗೊಂಡ ನೀರಾವರಿ ಯೋಜನೆಗಳೇ ಅಧ್ವಾನವಾಗಿರುವಾಗ, ಕುಡಿಯುವ ನೀರಿನ ಹೆಸರಿನಲ್ಲಿ ಪರಿಸರ ಕಾನೂನುಗಳಿಗೆಲ್ಲ ಮಣ್ಣೆರಚಿ ಅವೈಜ್ಞಾನಿಕವಾಗಿ ಎತ್ತಿನಹೊಳೆಯಂಥ ಯೋಜನೆ ಕೈಗೆತ್ತಿಕೊಳ್ಳುತ್ತಿತ್ತೇ?

ಇದೀಗ, ಸಹ್ಯಾದ್ರಿ ತಪ್ಪಲಿನಲ್ಲಿ ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯಿಂದ ಗದಗ- ರಾಯಚೂರಿನೆಡೆಗೆ ನೀರು ಒಯ್ಯುವ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪವಾಗಿದೆ. ಅಕ್ಷರಶಃ ಹೆಚ್ಚುವರಿ ನೀರಿಲ್ಲದ ಆ ನದಿಯಿಂದ ನೀರೊದಗಿಸುವ ಭ್ರಮೆ ಚಿಮ್ಮಿಸುವ ಇಂಥ ಯೋಜನೆ ಏಕೆ ಬೇಕು? ನಾಡನ್ನು ಬೆಂಗಾಡಾಗಿಸುವ ಈ ಅರಾಜಕತೆ ಕೊನೆಗೊಳ್ಳಲೇಬೇಕಿದೆ.

ಮಳೆನೀರು ಸಂಗ್ರಹ, ಜನಸಹಭಾಗಿತ್ವದ ನಿರ್ವಹಣೆ ಹಾಗೂ ವೈಜ್ಞಾನಿಕ ಬಳಕೆಯ ಮೂಲಕ ಜಲಸುರಕ್ಷತೆ ಸಾಧಿಸುವ ಮಾದರಿಗಳು ಮುನ್ನೆಲೆಗೆ ಬರಬೇಕಿದೆ. ಈ ದಿಸೆಯಲ್ಲಿ ಸಮಗ್ರ ಪರಿಹಾರ ನೀಡಬಲ್ಲ ಮಾರ್ಗಗಳು ‘ಕರ್ನಾಟಕ ಜ್ಞಾನ ಆಯೋಗ’ವು ಸರ್ಕಾರಕ್ಕೆ ಸಲ್ಲಿಸಿರುವ ‘ಕರ್ನಾಟಕ ಜಲನೀತಿ- 2019’ರಲ್ಲಿವೆ. ಅವುಗಳ ಅನುಷ್ಠಾನವಷ್ಟೇ ಬಾಕಿಯಿದೆ.

ಆಹಾರಬೆಳೆಯ ಕಣಜವಾದ ಸಮೃದ್ಧ ಒಳನಾಡಿನ ಜನರ ಮೊಗದಲ್ಲಿ ನೀರನೆಮ್ಮದಿ ಕಾಣುವಂತಾಗಬೇಕು. ಗದಗದ ಬೆಣ್ಣಿಹಳ್ಳದ ನೆರೆ ನೀರನ್ನು, ಪಂಚಾಯಿತಿ ವ್ಯವಸ್ಥೆಯ ಮೂಲಕವೇ ತುಂಗಭದ್ರಾ ಕಣಿವೆಯ ಕೆರೆಗಳಿಗೆ ತುಂಬಿಸುವಂಥ ಸುಸ್ಥಿರ ಮಾರ್ಗಗಳಿಂದ ಅದು ಖಂಡಿತ ಸಾಧ್ಯವಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು