ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ | ಜೆಡಿಎಸ್‌ ನಡೆ ಮತೀಯತೆಯೆಡೆಗಾದರೆ...

ಜಾತ್ಯತೀತ ಜನತಾದಳವನ್ನು ಜನ ಸೋಲಿಸಿದ್ದು ಅದರ ಉಳಿವಿಗಾಗಿ, ಅಳಿವಿಗಲ್ಲ
Published 22 ಜುಲೈ 2023, 1:06 IST
Last Updated 22 ಜುಲೈ 2023, 1:06 IST
ಅಕ್ಷರ ಗಾತ್ರ

ಅದು, 1999ನೇ ಸಾಲು. ಕರ್ನಾಟಕದಲ್ಲಿ ಅವಿಭಜಿತ ಜನತಾದಳದ ಬಣರಾಜಕೀಯವು ತಾರಕಕ್ಕೇರಿದ್ದ ಸಮಯ. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಒಂದು ದಿನ ಬಿಜೆಪಿಯನ್ನು ‘ಕ್ಯಾನ್ಸರ್’ ಎಂದು ಕರೆದಿದ್ದರು. ಈಗಿನ ಪರಿಸ್ಥಿತಿಯಲ್ಲಾದರೆ ದೊಡ್ಡ ಪ್ರತಿಭಟನೆಗೆ ಕಾರಣವಾಗಿಬಿಡಬಹುದಾಗಿದ್ದ ಇಂತಹದ್ದೊಂದು ಮಾತನ್ನು ಆಡಿ ಅರಗಿಸಿಕೊಳ್ಳಲು ಪಟೇಲರಿಗೆ ಮಾತ್ರ ಸಾಧ್ಯವಿತ್ತು. ಅದೇನೇ ಇರಲಿ, ವಿಚಿತ್ರವೇನೆಂದರೆ, ಪಟೇಲ್ ಅವರಿದ್ದ ಬಣ ಮರುದಿನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿತು. ‘ನಿನ್ನೆಯಷ್ಟೇ ಬಿಜೆಪಿಯನ್ನು ಕ್ಯಾನ್ಸರ್ ಎಂದು ಕರೆದಿದ್ದಿರಲ್ಲಾ’ ಎಂಬ ಪ್ರಶ್ನೆಗೆ ಪಟೇಲ್ ಅವರು ಒಂದಿಷ್ಟೂ ವಿಚಲಿತರಾಗದೆ, ‘ಕ್ಯಾನ್ಸರ್‌ ಕ್ಯಾನ್‌ ಬಿ ಕ್ಯೂರ್ಡ್‌’ (ಕ್ಯಾನ್ಸರ್ ಅನ್ನು ಗುಣಪಡಿಸಬಹುದು) ಎಂದಿದ್ದರು.

ಗುಣಪಡಿಸುವ ವಿಚಾರ ಹಾಗಿರಲಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಆ ಬಣ, ಅಂದರೆ ಜನತಾದಳ (ಸಂಯುಕ್ತ) ಕರ್ನಾಟಕದಲ್ಲಿ ಚುನಾವಣೆಯಿಂದ ಚುನಾವಣೆಗೆ ವಿನಾಶದತ್ತ ಸಾಗಿ ಈಗ ಹೆಸರಿಗಷ್ಟೇ ಉಳಿದುಕೊಂಡಿದೆ. ಅಂದು ಜನತಾದಳ (ಸಂಯುಕ್ತ) ಹೊರನಡೆದಾಗ ಮೂಲ ಜನತಾದಳದಲ್ಲೇ ಉಳಿದವರು ತಮ್ಮನ್ನು ತಾವು ಜನತಾದಳ (ಜಾತ್ಯತೀತ) ಎಂದು ಕರೆದುಕೊಂಡರು. ಇಂಗ್ಲಿಷ್‌ನಲ್ಲಿ ಜನತಾದಳ ಸೆಕ್ಯುಲರ್. ಇಂಗ್ಲಿಷ್‌ನ ಸೆಕ್ಯುಲರ್ ಎಂಬ ಪದಕ್ಕೆ ಜಾತ್ಯತೀತ ಎನ್ನುವುದು ಸರಿಯಾದ ಭಾಷಾಂತರ ಅಲ್ಲ. ಆ ಸೂಕ್ಷ್ಮಗಳೆಲ್ಲಾ ಅಲ್ಲಿ ಮುಖ್ಯವಾಗಿರಲಿಲ್ಲ. ತಾನು ಬಿಜೆಪಿಯ ಜತೆಗೆ ಹೋಗಿಲ್ಲ ಮತ್ತು ಹೋಗುವ ಜಾಯಮಾನ ತನ್ನದಲ್ಲ ಎನ್ನುವುದನ್ನು ಸಾರುವ ಉದ್ದೇಶದಿಂದ ಮಾತ್ರ ಜಾತ್ಯತೀತ ಎನ್ನುವ ಪದ ಅಲ್ಲಿ ಬಳಕೆಯಾಗಿದ್ದು.

ಆ ನಿಲುವು ಫಲ ನೀಡಿತ್ತು. ಅದು, 2006ರಲ್ಲಿ ತನ್ನ ಜಾತ್ಯತೀತ ನಿಲುವಿನಲ್ಲಿ 180 ಡಿಗ್ರಿ ತಿರುವು ತೆಗೆದುಕೊಂಡು, 20 ತಿಂಗಳು ಬಿಜೆಪಿಯೊಂದಿಗೆ ಅಧಿಕಾರ ನಡೆಸುವತನಕ ಜಾತ್ಯತೀತ ಜನತಾದಳ ಅಥವಾ ಜೆಡಿಎಸ್‌ನ ರಾಜಕೀಯ ಗ್ರಾಫ್‌ ಮೇಲ್ಮುಖವಾಗಿಯೇ ಇತ್ತು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡ ನಡುಪಂಥೀಯ ಪಕ್ಷವೊಂದು ತಮಗೆ ಬೇಕು ಎನ್ನುವುದು ಕರ್ನಾಟಕದ ಮತದಾರರ ಸ್ಪಷ್ಟ ಸಂದೇಶವಾಗಿತ್ತು. ಆದಕಾರಣ, ಯಾವತ್ತು ಬಿಜೆಪಿಯೊಂದಿಗೆ ಜಾತ್ಯತೀತ ಜನತಾದಳ ಮೈತ್ರಿ ಮಾಡಿಕೊಂಡಿತೋ ಅಲ್ಲಿಗೆ ಅದು ತನ್ನ ಮತದಾರರ ಜತೆಗಿನ ಒಂದು ಹಂತದ ಸಂಬಂಧ ಕಡಿದುಕೊಂಡಿತು. ಆನಂತರ ಅದು ಬಿಜೆಪಿಯೊಂದಿಗಿನ ಸಂಬಂಧ ಕಳಚಿಕೊಂಡರೂ ಅದರ ಚುನಾವಣಾ ಫಲಿತಾಂಶದ ಗ್ರಾಫ್‌ ಮುಂದಿನ ಚುನಾವಣೆಗಳಲ್ಲಿ ಇಳಿಮುಖವಾಗುತ್ತಲೇ ಬಂದಿತು.

ಈ ಚಾರಿತ್ರಿಕ ಸತ್ಯ ಎದುರಿಗಿರುವಾಗಲೇ ಈಗ ಜಾತ್ಯತೀತ ಜನತಾದಳ ಮತ್ತೆ ಬಿಜೆಪಿಯ ಜತೆ ಮೈತ್ರಿಗೋ ವಿಲೀನಕ್ಕೋ ಸಿದ್ಧವಾಗಿದೆ ಎನ್ನುವ ವರ್ತಮಾನ ಬರುತ್ತಿದೆ. ಅಂದರೆ ತನ್ನ ‘ಜಾತ್ಯತೀತ’ ನಿಲುವಿನಿಂದ ಸಂಪೂರ್ಣ 360 ಡಿಗ್ರಿ ತಿರುವಿಗೆ ಸಿದ್ಧವಾಗಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಆ ಕುರಿತು ಬರುವ ಸಮಾಜಾಯಿಷಿಗಳಿಗೂ ಆ ಪಕ್ಷದ ನಾಯಕತ್ವದ ನಡೆಗೂ ತಾಳೆಯಾಗದ ಕಾರಣ, ಅಂತಹದ್ದೊಂದು ಯೋಚನೆ ಆ ಪಕ್ಷದಲ್ಲಿ ಇದೆ ಎಂಬ ಭಾವನೆ ಮೂಡುತ್ತದೆ.

ಚುನಾವಣಾ ಸೋಲಿನಿಂದ ದುರ್ಬಲವಾಗಿರುವ ಪಕ್ಷವೊಂದು ತನ್ನ ಭವಿಷ್ಯದ ದೃಷ್ಟಿಯಿಂದ ಯಾವುದಾದರೂ ಒಂದು ನಿರ್ಧಾರಕ್ಕೆ ಬರುವುದಕ್ಕೆ ವ್ಯಾವಹಾರಿಕವಾದ ಸಾವಿರ ಕಾರಣಗಳಿರಬಹುದು. ಅದು ಆ ಪಕ್ಷದ ಆಂತರಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರ. ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ನೈತಿಕವಾಗಿ ಕೆಲವು ಪ್ರಶ್ನೆಗಳನ್ನು ಎತ್ತಬಹುದು. ಆದರೆ, ರಾಜಕೀಯ ಲಾಭ– ನಷ್ಟಗಳ ಲೆಕ್ಕಾಚಾರದಲ್ಲಿ ನೈತಿಕತೆಯ ವಿಚಾರಕ್ಕೆ ಅಷ್ಟೇನೂ ಮಹತ್ವದ ಸ್ಥಾನವನ್ನು ಯಾವ ಪಕ್ಷವೂ ನೀಡದೇ ಇರುವ ಕಾರಣ, ಜಾತ್ಯತೀತ ಜನತಾದಳ ಮಾತ್ರ ಆ ಭಾರವನ್ನು ಹೊತ್ತುಕೊಳ್ಳಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಹಾಗಾಗಿ, ಈ ವ್ಯಾವಹಾರಿಕ ಮತ್ತು ನೈತಿಕ ಎನ್ನಬಹುದಾದ ಪ್ರಶ್ನೆಗಳನ್ನು ಬದಿಗಿಟ್ಟು, ಒಂದು ವೇಳೆ ಜಾತ್ಯತೀತ ಜನತಾದಳವು ಬಿಜೆಪಿಯೊಂದಿಗೆ ಮೈತ್ರಿಗೋ ವಿಲೀನಕ್ಕೋ ಮುಂದಾದರೆ, ಅದರಿಂದಾಗಿ ಕರ್ನಾಟಕದ ರಾಜಕೀಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆಯಷ್ಟೇ ಈ ಹಂತದಲ್ಲಿ ಏನನ್ನಾದರೂ ಹೇಳಬೇಕಾಗಿರುವುದು ಅಥವಾ ಹೇಳಬಹುದಾಗಿರುವುದು ಅಂತ ಅನ್ನಿಸುತ್ತದೆ.

ಇಲ್ಲೊಂದು ಮಹತ್ವದ ವಿಚಾರವಿದೆ. ಅದೇನೆಂದರೆ, 2023ರ ಚುನಾವಣೆಯಲ್ಲಿ ಜಾತ್ಯತೀತ ಜನತಾದಳವನ್ನು ಅಥವಾ ನಿರೀಕ್ಷಿತ ಮಟ್ಟದಲ್ಲಿ ಅದರ ಅಭ್ಯರ್ಥಿಗಳನ್ನು ಗೆಲ್ಲಿಸದೇ ಇದ್ದದ್ದಕ್ಕೆ ಕಾರಣ ಆ ಪಕ್ಷವನ್ನು ರಾಜ್ಯದಲ್ಲಿ ಉಳಿಸಿಕೊಳ್ಳಬೇಕು ಎಂಬುದಾಗಿತ್ತೇ ವಿನಾ ಅದನ್ನು ಕಳೆದುಕೊಳ್ಳಬೇಕು ಎಂಬುದಾಗಿರಲಿಲ್ಲ. ಉಳಿಸಿಕೊಳ್ಳಬೇಕೆಂದಿದ್ದರೆ ಮತ್ತೆ ಸೋಲಿಸಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. ಹೌದು, ಮತದಾರರು ಜಾತ್ಯತೀತ ಜನತಾದಳವನ್ನು ಉಳಿಸಿಕೊಳ್ಳಬೇಕೆಂದೇ ಅದನ್ನು ಸೋಲಿಸಿದ್ದು ಯಾಕೆ ಎಂದರೆ, ಆ ಪಕ್ಷಕ್ಕೆ ತಿಳಿಯದೇ ಹೋದ ಅಥವಾ ತಿಳಿದರೂ ಅದು ಒಪ್ಪಿಕೊಳ್ಳದೇ ಹೋದ ಸತ್ಯವೊಂದು ಮತದಾರರ (ಶೇಕಡ 44ರಷ್ಟು ಮತದಾರರ) ಸಮಷ್ಟಿ ಪ್ರಜ್ಞೆಗೆ ಹೊಳೆದಿತ್ತು. ಜಾತ್ಯತೀತ ಜನತಾದಳವಾಗಲೀ ಅಥವಾ ಅದಕ್ಕಿಂತ ಜಾತ್ಯತೀತವಾದ ಇನ್ಯಾವುದೆ ಪಕ್ಷವಾಗಲೀ ಕರ್ನಾಟಕದಲ್ಲಿ ಉಳಿಯಬೇಕು ಎಂದಾದರೆ, ಮೊದಲು ಕರ್ನಾಟಕವನ್ನು ಉಳಿಸಿಕೊಳ್ಳಬೇಕು ಎನ್ನುವುದಾಗಿತ್ತು ಆ ಸತ್ಯ.

ಹೆಬ್ಬಾವಿನಂತೆ ಇಡಿಯಾಗಿಯೇ ನುಂಗುವ, ಕಾರ್ಕೋಟಕದಂತೆ ವಿಷ ಉಗುಳಿ ಪ್ರತಿಸ್ಪರ್ಧಿಗಳನ್ನೆಲ್ಲಾ ವಿರೂಪಗೊಳಿಸುವ ವಿಲಕ್ಷಣ ರಾಜಕೀಯವೊಂದು ಕರ್ನಾಟಕವನ್ನು ಕರ್ನಾಟಕವಾಗಿ ಉಳಿಯಗೊಡುವುದಿಲ್ಲ ಎಂಬ ಸ್ಥಿತಿಯಲ್ಲಿ ಮತದಾರರು ಏನು ಮಾಡಬೇಕೋ ಅದನ್ನು ಮಾಡಿದರು. ಮತದಾರರ ಈ ನಿಲುವಿಗೆ ಜಾತ್ಯತೀತ ಜನತಾದಳದ ನಿರೀಕ್ಷೆಗಳು ತಲೆಕೆಳಗಾಗಿದ್ದು ಆಕಸ್ಮಿಕ ಮತ್ತು ತಾತ್ಕಾಲಿಕ. ಅದರ ಅಳಿದುಳಿದ ನಡುಪಂಥೀಯತೆಗೆ, ಸ್ಥಿತಿಸ್ಥಾಪಕ (ಎಲಾಸ್ಟಿಕ್‌) ಜಾತ್ಯತೀತತೆಗೆ ಕರ್ನಾಟಕದ ಜನಮನದಲ್ಲೊಂದು ಸ್ಥಾನ ಖಂಡಿತವಾಗಿಯೂ ಉಳಿದುಕೊಂಡಿತ್ತು. ಬಿಜೆಪಿಯ ಪಾಲಿಗೆ ಕರ್ನಾಟಕವು ದಕ್ಷಿಣದ ಹೆಬ್ಬಾಗಿಲಾಗಿ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳದೇ ಹೋಗಿದ್ದರೆ ಅದರಲ್ಲಿ ಜಾತ್ಯತೀತ ಜನತಾದಳದ ಪಾತ್ರವೂ ಇದೆ ಎಂಬ ಸತ್ಯವನ್ನು ರಾಜ್ಯದಲ್ಲಿ ಸಂವಿಧಾನವನ್ನು ನಂಬಿರುವ ಮತದಾರರು ಮರೆಯಲು ಸಾಧ್ಯವಿಲ್ಲ.

ಆದರೆ ಜಾತ್ಯತೀತ ಜನತಾದಳದ ಉದ್ದೇಶಿತ ನಡೆ ಈಗ ಬಿಜೆಪಿಯ ಕಡೆ ಎಂದಾದರೆ, ಅದು ಈತನಕ ಏನನ್ನು ಪ್ರತಿಪಾದಿಸುತ್ತಾ ಏನನ್ನು ಪ್ರತಿನಿಧಿಸುತ್ತಾ ಕರ್ನಾಟಕ ರಾಜಕೀಯ ಜೀವನಾಡಿಯ ಅವಿಭಾಜ್ಯ ಅಂಗವಾಗಿತ್ತೋ ಅದೆಲ್ಲವನ್ನೂ ಈಗ ಮೈತ್ರಿಬಂಧದ ಒತ್ತಡದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಅದು ‘ಉರಿಗೌಡ- ನಂಜೇಗೌಡ’ರನ್ನು ಚಾರಿತ್ರಿಕ ವ್ಯಕ್ತಿಗಳೆಂದು ಒಪ್ಪಬೇಕಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಅಂತಹ ನೂರಾರು ಕೃತಕ ಸೃಷ್ಟಿ ಕಾರ್ಯದಲ್ಲಿ ಯಥಾಶಕ್ತಿ ದೇಣಿಗೆ ನೀಡಬೇಕಾಗುತ್ತದೆ.

ಟಿಪ್ಪು ಸುಲ್ತಾನ್ ಮತಾಂಧ, ಭಾಷಾಂಧ ಎಂಬ ರಾಜಕೀಯಪ್ರೇರಿತ ವಾದವನ್ನು ಸ್ವೀಕರಿಸಬೇಕಾಗುತ್ತದೆ. ತಾನೇ ಹಿಂದೊಮ್ಮೆ ಪ್ರಸ್ತಾಪಿಸಿದ್ದ ‘ಪೇಶ್ವಾ ಮನೋಸ್ಥಿತಿಯ’ ವಿಚಾರದಲ್ಲಿ ರಾಜಿಯಾಗಬೇಕಾಗುತ್ತದೆ. ಮುಸ್ಲಿಮರಿಗೆ ತಾನೇ ನೀಡಿದ್ದ ಮೀಸಲಾತಿಯನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕಾಗುತ್ತದೆ. ತಾನೇ ಖಂಡಿಸಿದ್ದ ‘ಹೆಣ ರಾಜಕೀಯ’ಕ್ಕೆ ಹೆಗಲು ನೀಡಬೇಕಾಗುತ್ತದೆ. ಸಂವಿಧಾನವು ಕಟ್ಟಲು ಹೊರಟ ಸರ್ವರ ಭಾರತದ ಪರಿಕಲ್ಪನೆಯನ್ನು ಬದಿಗೆಸೆದು, ಮತೀಯವಾದಿಗಳು ಪ್ರತಿಪಾದಿಸುವ ವೈದಿಕ ಹಿಂದೂರಾಷ್ಟ್ರದ ಕನಸಿಗೆ ನೀರೆರೆಯಬೇಕಾಗುತ್ತದೆ. ಅನೈತಿಕ ಪೊಲೀಸ್‌ಗಿರಿ ಮತ್ತು ಗುಂಪುಕೊಲೆಗಳು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎನ್ನುವ ಪ್ರತಿಪಾದನೆಯಲ್ಲಿ ಭಾಗೀದಾರ ಆಗಬೇಕಾಗುತ್ತದೆ.

ಯಾವ್ಯಾವ ಬೆಳವಣಿಗೆಗಳಿಂದಾಗಿ, ಕರ್ನಾಟಕ ಕಳೆದುಹೋಗುತ್ತದೆ ಎಂದು ಹೋದ ಚುನಾವಣೆಯ ಕಾಲದಲ್ಲಿ ಮತದಾರರು ಆತಂಕಗೊಂಡಿದ್ದರೋ ಅವೆಲ್ಲವುಗಳ ಮುಂದುವರಿಕೆಗೆ ಜಾತ್ಯತೀತ ಜನತಾದಳ ಕೈಜೋಡಿಸಿದರೆ ಅದರಿಂದ ಜಾತ್ಯತೀತ ಜನತಾದಳಕ್ಕೆ ಒಳಿತಾಗುತ್ತದೋ ಕೆಡುಕಾಗುತ್ತದೋ ಎನ್ನುವ ವಿಚಾರ ಏನೇ ಇರಲಿ, ರಾಜ್ಯ ರಾಜಕಾರಣ ಪಡೆಯಬಾರದ ತಿರುವೊಂದನ್ನು ಪಡೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT