ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗರ್ಭಪಾತ ಮತ್ತು ಆಯ್ಕೆ ಹಕ್ಕು

ಅಮೆರಿಕದ ಸುಪ್ರೀಂ ಕೋರ್ಟ್‌ ತೀರ್ಪು ಜಾಗತಿಕವಾಗಿಯೂ ಪ್ರಭಾವ ಬೀರುವ ಸಾಧ್ಯತೆ ಇದೆ
Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ಅಮೆರಿಕದ ಮಹಿಳಾ ಹಕ್ಕುಗಳ ಹೋರಾಟದ ಇತಿಹಾಸದಲ್ಲಿ, ರೋ ಮತ್ತು ವೇಡ್‌ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1973ರಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಒಂದು ಮೈಲಿಗಲ್ಲು. ಈ ತೀರ್ಪು ಅಮೆರಿಕದ ಮಹಿಳೆಯರಿಗೆ ನಿರ್ದಿಷ್ಟ ಅವಧಿಯೊಳಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಕಲ್ಪಿಸಿತ್ತು. ಐವತ್ತು ವರ್ಷಗಳಿಂದ ಮಹಿಳೆಯರು ಅನುಭವಿಸಿಕೊಂಡು ಬಂದಿದ್ದ ಈ ಮೂಲಭೂತ ಹಕ್ಕಿಗೆ ಈಗ ಚ್ಯುತಿ ಬಂದಿದೆ.ರೋ ಮತ್ತು ವೇಡ್ ನಡುವಣ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಜೂನ್‌ 24ರಂದು ಸುಪ್ರೀಂ ಕೋರ್ಟ್‌
ಅಸಿಂಧುಗೊಳಿಸಿರುವುದೇ ಇದಕ್ಕೆ ಕಾರಣ.

ಅಮೆರಿಕದ ರಾಜ್ಯಗಳು ಪ್ರತ್ಯೇಕ ಕಾನೂನು ರೂಪಿಸುವ ಮೂಲಕ, ನಿರ್ದಿಷ್ಟ ಅವಧಿಯವರೆಗಿನ ಗರ್ಭಪಾತವನ್ನು ನಿಷೇಧಿಸಲು ಈ ತೀರ್ಪು ಅನುವಾಗಿಸುತ್ತದೆ.ಒಂಬತ್ತು ಮಂದಿ ನ್ಯಾಯಮೂರ್ತಿಗಳು ಇದ್ದ ನ್ಯಾಯಪೀಠವು 6–3ರ ಬಹುಮತದ ಆಧಾರದಲ್ಲಿ ಈ ತೀರ್ಪು ನೀಡಿದೆ. ಈ ತೀರ್ಪು ಗರ್ಭಪಾತಕ್ಕೆ ಸಂಬಂಧಿಸದೇ ಇರುವ ಮಹಿಳೆಯರ ಇತರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಭಾವಿಸಬೇಕಿಲ್ಲ ಎಂದು, ನಿಷೇಧದ ಪರವಾಗಿ ತೀರ್ಪು ಬರೆದಿರುವ ಆರು ಮಂದಿ ನ್ಯಾಯಮೂರ್ತಿಗಳುಸ್ಪಷ್ಟಪಡಿಸಿದ್ದಾರೆ. ಆದರೆ, ಭಿನ್ನ ನಿಲುವನ್ನು ತಳೆದು, ಗರ್ಭಪಾತಕ್ಕೆ ಮಹಿಳೆಯರಿಗೆ ಇರುವ ಸ್ವಾತಂತ್ರ್ಯವನ್ನು ಬೆಂಬಲಿಸಿದ ಉಳಿದ ಮೂವರು ನ್ಯಾಯಮೂರ್ತಿಗಳು, ವಿವಾಹ, ಲೈಂಗಿಕತೆ ಮತ್ತು ಜನನ ನಿಯಂತ್ರಣಕ್ಕೆ ಸಂಬಂಧಿಸಿದ ಇತರ ಸ್ವಾತಂತ್ರ್ಯಗಳನ್ನೂ ಮೊಟಕುಗೊಳಿಸಲು ಈ ತೀರ್ಪು ದಾರಿ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪಿನ ಪರಿಣಾಮವಾಗಿ ಅಮೆರಿಕದ ಅರ್ಧಕ್ಕೂ ಹೆಚ್ಚು ರಾಜ್ಯಗಳು ಗರ್ಭಪಾತವನ್ನು ನಿಷೇಧಿಸಲು ಮುಂದಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ. ಬೇರೆ ಬೇರೆ ನೆಲೆಯಲ್ಲಿ ಜಾಗತಿಕವಾಗಿಯೂ ಇದು ಪ್ರಭಾವ ಬೀರುವ ಸಾಧ್ಯತೆ ಇದೆ.

‘ಗರ್ಭಪಾತ’ ಎಂದರೆ ಮೂಡಿದ ಜೀವವನ್ನು ಕೊಲ್ಲುವುದು ಎಂದರ್ಥ. ಹಾಗಾಗಿ ಗರ್ಭಪಾತದ ಬಗ್ಗೆ ಚರ್ಚೆ ಎಂದರೆ, ಕಾನೂನಿನ ಪ್ರಕಾರ ಅದಕ್ಕೆ ಅನುಮತಿ ಇದೆಯೇ ಇಲ್ಲವೇ ಎಂಬಷ್ಟಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದರಲ್ಲಿ ಧಾರ್ಮಿಕ ನಂಬಿಕೆಯೂ ತಳುಕು ಹಾಕಿಕೊಂಡಿರುತ್ತದೆ. ಹಾಗಾಗಿ ಈ ಚರ್ಚೆ, ವೈಯಕ್ತಿಕ ಹಕ್ಕುಗಳ ನೆಲೆಯನ್ನು ದಾಟಿ ಧಾರ್ಮಿಕ ನೆಲೆಗಟ್ಟಿನ ಆಯಾಮವನ್ನು ಪಡೆದುಕೊಳ್ಳುತ್ತದೆ. ಗರ್ಭಪಾತಕ್ಕೆ ಪೂರ್ಣ ಅವಕಾಶವನ್ನು ಕೊಟ್ಟಿದ್ದೇ ಆದರೆ, ಅದು ಸಾಮಾಜಿಕ ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸ
ಬಹುದಾದ ಸಾಧ್ಯತೆ ಇರುವುದರಿಂದ, ಈ ಚರ್ಚೆಯನ್ನು ಸಾಮಾಜಿಕ ನೆಲೆಗಟ್ಟಿನ ಆಯಾಮದಿಂದಲೂ ವಿಶ್ಲೇಷಿಸಬೇಕಾಗುತ್ತದೆ. ಈ ಬಗೆಗಿನ ಎಲ್ಲ ಆಯಾಮಗಳಲ್ಲಿ ನಡೆಯುವ ವಾದಗಳೂ ಜೀವಪರ ಮತ್ತು ಆಯ್ಕೆ ಪರವಾದ ಗುಂಪುಗಳ ವಾದಗಳೇ ಆಗಿರುತ್ತವೆ. ಹಾಗಾಗಿ ಅವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ನೈತಿಕತೆ ನಡುವಿನ ಸಂಘರ್ಷವಾಗುತ್ತವೆ.

ಗರ್ಭಪಾತದ ಹಕ್ಕು, ಮಹಿಳಾ ಹಕ್ಕುಗಳ ಚಳವಳಿಯ ಒಂದು ಬೇಡಿಕೆಯಾಗಿ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಒತ್ತಾಯ, ತಾರತಮ್ಯ, ಹಿಂಸೆಗಳಿಂದ ಮುಕ್ತವಾದ ಲೈಂಗಿಕತೆ ಮತ್ತು ಆ ಬಗ್ಗೆ ಮುಕ್ತವಾಗಿ, ವಿವೇಚನೆಯಿಂದ ನಿರ್ಧಾರ ಕೈಗೊಳ್ಳುವ ಹಕ್ಕು ಮತ್ತು ಪ್ರಜನನ ಸ್ವಾತಂತ್ರ್ಯದ ಹಕ್ಕುಗಳೂ ಮಹಿಳೆಯರ ಮಾನವ ಹಕ್ಕುಗಳಲ್ಲಿ ಸೇರುತ್ತವೆ. ಪ್ರಜನನ ಹಕ್ಕುಗಳಲ್ಲಿ ಬಹು ಮುಖ್ಯವಾದುದೆಂದರೆ ಗರ್ಭಪಾತದ ಹಕ್ಕು. ಇದು ಖಾಸಗಿತನಕ್ಕೆ ಇರುವ ಹಕ್ಕಿನ ಒಂದು ಭಾಗ ಎಂಬುದು ಈ ವಾದದ ಮುಖ್ಯ ಅಂಶ. ಈ ವಾದ ವಿವಾದಗಳಿಂದಾದ ಒಂದು ರಚನಾತ್ಮಕ ಬದಲಾವಣೆಯೆಂದರೆ, ಗರ್ಭಪಾತ ಅಪರಾಧ ಎಂಬ ಭಾವನೆ ಬದಲಾದುದು ಮತ್ತು ಅದು ಮಹಿಳೆಯರ ಹಕ್ಕು ಎಂದು ಪರಿಗಣಿಸುವ ದಿಸೆಯಲ್ಲಿ ಮನೋಭೂಮಿಕೆ ಸಿದ್ಧವಾದುದು. ಇದರ ಫಲವಾಗಿ, ತಾಯಿಯ ಜೀವವನ್ನು ಉಳಿಸಲು ಗರ್ಭಪಾತಕ್ಕೆ ಅನುಮತಿ ನೀಡಬಹುದು ಎಂಬ ಮಟ್ಟಿಗೆ ನೈತಿಕ ನಿಲುವು ಉದಾರಗೊಂಡಿತು. ಎಲ್ಲ ದೇಶಗಳ ಎಲ್ಲ ಧರ್ಮಗಳೂ ನೈತಿಕತೆಯ ನೆಲೆಯಲ್ಲಿ ಗರ್ಭಪಾತವನ್ನು ವಿರೋಧಿಸಿದವುಗಳೇ! ಆದರೆ ಸಾಮಾಜಿಕ ಸ್ಥಿತ್ಯಂತರಗಳಿಗೆ ಹೊಂದುವಂತೆ ಸರಿಸುಮಾರು ಎಲ್ಲ ದೇಶಗಳೂ ತಮ್ಮ ನಿಲುವಿನಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿವೆ.

ಗರ್ಭಪಾತಕ್ಕೆ ಅನುಮತಿ ನೀಡಬಹುದಾದ ಅವಧಿಯನ್ನು ಬಹುಪಾಲು ದೇಶಗಳ ಕಾನೂನುಗಳು 20 ವಾರಗಳಿಂದ 25 ವಾರಗಳು ಎಂದು ನಿಗದಿಪಡಿಸಿವೆ. ಇದರ ಉದ್ದೇಶ, 20-25 ವಾರಗಳನ್ನು ದಾಟಿದ ನಂತರ ಭ್ರೂಣ ಸಾಕಷ್ಟು ಬೆಳೆದಿರುತ್ತದೆ. ಆಗ ಗರ್ಭಪಾತ ಮಾಡಿಸಿಕೊಂಡರೆ ತಾಯಿಯ ಜೀವಕ್ಕೆ ಅಪಾಯ ಆಗುತ್ತದೆ ಎಂಬುದು. ಆದರೆ, ಮಗು ಗರ್ಭಾವಸ್ಥೆಯಲ್ಲೇ ಜೀವಿಸುವ ಹಕ್ಕನ್ನು ಪಡೆದಿರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಜೀವ ಯಾವಾಗ ಆರಂಭವಾಗುತ್ತದೆ? ವೀರ್ಯಾಣು ಹಾಗೂ ಅಂಡಾಣು ಸೇರಿದ ಕ್ಷಣದಿಂದಲೋ? ಅಥವಾ ಭ್ರೂಣ 24-28 ವಾರಗಳನ್ನು ಕಳೆದ ನಂತರವೋ? ಅಥವಾ ಮಗು ತಾಯಿಯ ಹೊಟ್ಟೆಯಿಂದ ಹೊರಬಂದು ಸ್ವತಂತ್ರವಾಗಿ ಜೀವಿಸಲು ಆರಂಭಿಸಿದ ದಿನದಿಂದಲೋ? ಚರ್ಚೆ ನಡೆದೇ ಇದೆ.

ನಾಡಿನ ಕಾನೂನು, ಧಾರ್ಮಿಕ ನಂಬಿಕೆಗಳು ಮತ್ತು ಆರೋಗ್ಯ ಸಮಸ್ಯೆಗಳು ಇವು ಯಾವುವೂ ಗರ್ಭವನ್ನು ಇಳಿಸಿಕೊಳ್ಳ ಬಯಸುವ ಮಹಿಳೆಗೆ ಮುಖ್ಯವಾಗುವುದಿಲ್ಲ. ಆ ಕ್ಷಣಕ್ಕೆ ಅವಳಿಗೆ ಬೇಕಾಗುವುದು ಅದಕ್ಕೆ ಅಗತ್ಯವಾದ ವೈದ್ಯಕೀಯ ನೆರವು ಅಷ್ಟೇ. ಆದರೆ ಈ ಸುಳಿಗಳ ನಡುವೆ ಅವಳು ಅಸಹಾಯಕಳಾಗಿರುತ್ತಾಳೆ! ಸಂದಿಗ್ಧತೆ, ಅನುಮಾನ ಇದ್ದಾಗ, ವಿವೇಚನಾಯುತ ತೀರ್ಮಾನಗಳಿಗೆ ಧಾರ್ಮಿಕ ನಂಬಿಕೆಗಳು ಅಡ್ಡಬಂದಾಗ ಮೊರೆ ಹೋಗುವುದು ಕಾನೂನನ್ನೇ. ಆದ್ದರಿಂದ ಈ ಬಗ್ಗೆ ದೇಶದ ಕಾನೂನು ಅನುಮತಿ ನೀಡುತ್ತದೆಯೇ ಇಲ್ಲವೇ ಎನ್ನುವುದಷ್ಟೇ ಮುಖ್ಯವಾಗುತ್ತದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಮಿಷೆಲ್ ಬ್ಯಾಚಲೆಟ್ ಅವರು, ಗರ್ಭಪಾತಕ್ಕೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮಹಿಳೆಯರ ಹಕ್ಕುಗಳಿಗೆ ಮತ್ತು ಲಿಂಗ ಸಮಾನತೆಗೆ ಕೊಟ್ಟ ದೊಡ್ಡ ಪೆಟ್ಟು ಎಂದಿದ್ದಾರೆ. ಗರ್ಭಪಾತಕ್ಕೆ ನಿರ್ಬಂಧ ಹೇರಿದ ಮಾತ್ರಕ್ಕೆ ಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ಅಷ್ಟೇ ಅಲ್ಲ, ಅನ್ಯ ಮಾರ್ಗಗಳನ್ನು ಅವಲಂಬಿಸುವುದರಿಂದ ಇನ್ನಷ್ಟು ಅಪಾಯಕಾರಿಯನ್ನಾಗಿಸುತ್ತದೆ ಎಂದು ಪರಿಣತರು ಅಭಿಪ್ರಾಯ
ಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ಜಗತ್ತಿನ ಜನಸಂಖ್ಯೆಯ ಸ್ಥಿತಿಗತಿ ಬಗೆಗೆ ಸಲ್ಲಿಸಿರುವ ವರದಿಯ ಪ್ರಕಾರ, ಈಗ ಆಗುತ್ತಿರುವ ಗರ್ಭಪಾತಗಳ ಪೈಕಿ ಶೇ 45ರಷ್ಟು ಸುರಕ್ಷಿತವಲ್ಲದ ಗರ್ಭಪಾತಗಳು. ಇನ್ನು, ಕಾನೂನು ತೊಡಕು ಉಂಟಾದರೆ ಈ ಪ್ರಮಾಣ ಇನ್ನೂ ಹೆಚ್ಚುತ್ತದೆ ಮತ್ತು ತಾಯಂದಿರ ಸಾವಿಗೆ ಇದು ಮುಖ್ಯ ಕಾರಣವೂ ಆಗಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

ಗರ್ಭಪಾತಕ್ಕೆ ಸಂಬಂಧಿಸಿದ ಕಟ್ಟುನಿಟ್ಟಾದ ಕಾನೂನನ್ನು ಸಡಿಲಿಸಬೇಕೆಂಬ ಅಂತರರಾಷ್ಟ್ರೀಯ ಒಡಂಬಡಿಕೆಯ ಆಶಯಕ್ಕೆ ಅಮೆರಿಕ ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು ವಿರುದ್ಧವಾದುದಾಗಿದೆ. ಜಗತ್ತಿನಲ್ಲೇ ಅತಿ ಮುಂದುವರಿದ ದೇಶ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕದಲ್ಲಿ, ಗರ್ಭಪಾತ ಕುರಿತಂತೆ ಹೊರಬಿದ್ದಿರುವ ಈ ತೀರ್ಪು ಪ್ರತಿಗಾಮಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ವ್ಯಕ್ತವಾಗಿವೆ. ಇದಕ್ಕೆ ಅಮೆರಿಕದಲ್ಲಿ ವ್ಯಾಪಕ ಪ್ರತಿರೋಧವೂ ವ್ಯಕ್ತವಾಗಿದೆ. ತೀರ್ಪಿನ ಪ್ರಭಾವವು ಜಗತ್ತಿನ ಬೇರೆ ಬೇರೆ ದೇಶಗಳ ಮೇಲೂ ಆಗಬಹುದು ಎಂಬ ಆತಂಕ ಎದುರಾಗಿದೆ.

ಭಾರತದಲ್ಲಿ ಜಾರಿಯಲ್ಲಿರುವ ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನಿನ ಪ್ರಕಾರ, ಗರ್ಭಪಾತಕ್ಕೆ ಅನುಮತಿಯನ್ನು ವಿಸ್ತೃತವಾದ ವೈದ್ಯಕೀಯ, ಮಾನವೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ನೀಡಬಹುದಾಗಿದೆ.

– ಡಾ. ಗೀತಾ ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT