ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಕಪ್ಪು-ಬಿಳುಪಿನ ನಡುವೆ ಹರಡಿರುವ ಛಾಯೆಗಳನ್ನು ನೋಡುವ ಕಣ್ಣು ನಮಗಿಂದು ಅಗತ್ಯವಾಗಿದೆ.
Published 5 ಜನವರಿ 2024, 0:08 IST
Last Updated 5 ಜನವರಿ 2024, 0:08 IST
ಅಕ್ಷರ ಗಾತ್ರ

‘ನೀನೊಂದು ಜಿರಲೆಯನ್ನು ಕೊಂದರೆ ಹೀರೊ, ಚಿಟ್ಟೆಯನ್ನು ಕೊಂದಾಗ ವಿಲನ್! ಏಕೆಂದರೆ, ಕೊಲೆಗೂ ಒಂದು ಸೌಂದರ್ಯಮೀಮಾಂಸೆಯ ಮಾನದಂಡವಿದೆ’ ಎಂದರು ಫ್ರೆಡರಿಕ್ ನೀಶೆ. ಹೀಗೆ ಸ್ಪಷ್ಟವಾಗಿ ಎಲ್ಲವನ್ನೂ ಕಪ್ಪು ಮತ್ತು ಬಿಳುಪಿನ ವರ್ಗೀಕರಣದ ಮೂಲಕ ನೋಡುವ ದೃಷ್ಟಿಕೋನದಲ್ಲೂ ಒಂದು ಮಿತಿಯಿದೆ.

‘ನಾಯಕ’ನಲ್ಲಿ ಇರಬಹುದಾದ ‘ಪ್ರತಿನಾಯಕ’ನ ಗುಣಗಳನ್ನು ಮತ್ತು ‘ಪ್ರತಿನಾಯಕ’ನಲ್ಲಿ ಇರಬಹುದಾದ ‘ನಾಯಕ’ನ ಗುಣಗಳನ್ನು ಇದು ನಿರಾಕರಿಸುತ್ತದೆ. ಅದಕ್ಕಿಂತ ಮುಖ್ಯವಾಗಿ ಹೀರೊ–ವಿಲನ್‍ಗಳ ನಡುವೆ ಇರುವ ಹಲವಾರು ಪೋಷಕ ಪಾತ್ರಗಳನ್ನೂ ಜಿರಲೆ–ಚಿಟ್ಟೆಯ ನಡುವೆ ಇರುವ ಅಸಂಖ್ಯ ಜೀವಿಗಳ ಪ್ರಾಣದ ಮಹತ್ವವನ್ನೂ ಇದು ಗೌಣವಾಗಿಸುತ್ತದೆ. ಕಪ್ಪು–ಬಿಳುಪಿನ ನಡುವೆ ಹರಡಿರುವ ಹಲವು ಛಾಯೆಗಳನ್ನು ನೋಡುವ ಕಣ್ಣು ನಮಗಿಂದು ಅಗತ್ಯವಾಗಿದೆ.

ಎಡ–ಬಲದ ಹೆಸರಿನಲ್ಲಿ ದೇಶವು ಸಾಂಸ್ಕೃತಿಕ ಧ್ರುವೀಕರಣಕ್ಕೆ ಒಳಗಾದ ಸನ್ನಿವೇಶವನ್ನು ಕೂಡ ಈ ಹಿನ್ನೆಲೆಯಲ್ಲಿಯೇ ಪರಿಶೀಲಿಸಬಹುದು. ‘ಜನಸಮು ದಾಯದ ಬಾಯಿ’ಯಾಗಿರುವ ಲೇಖಕರು ಹೀಗೆ ಸಿದ್ಧಾಂತಗಳ ಹೆಸರಲ್ಲಿ ಎರಡು ಹೋಳಾದರೆ, ಮಧ್ಯದಲ್ಲಿ ಹರಡಿಕೊಂಡಿರುವ ಅಲಿಪ್ತರಾದ ಅಗಣಿತ ಜನರಿಗೆ ಯಾರು ದನಿಯಾಗಬೇಕು ಎಂಬ ಪ್ರಶ್ನೆ ಉದ್ಭವಿಸು
ತ್ತದೆ. ಭಾರತದ ‘ಅಲಿಪ್ತ’ ನೀತಿಯನ್ನು, ‘ಮಾನವ ಜಾತಿ ತಾನೊಂದೇ ವಲಂ’ ಎಂಬ ಪಂಪನ ಧ್ಯೇಯವನ್ನು ಅಭಿಮಾನದಿಂದ ನಮ್ಮದೆಂದು ಹೇಳಿಕೊಳ್ಳುವ ನಾವು, ಈ ‘ಸಾಂಸ್ಕೃತಿಕ ಅಲಿಪ್ತತೆ’ಯನ್ನು ಮಾತ್ರ ಅವಕಾಶವಾದಿತನ ಎಂದು ಸರಳವಾಗಿ ತೇಲಿಸಿ, ಲೇಬಲ್ ಕಟ್ಟಿ ಅಪಮಾನಿಸುತ್ತೇವೆ.

ಬಹುಪಾಲು ಸಂದರ್ಭಗಳಲ್ಲಿ ಸತ್ಯವನ್ನು ಆವಿಷ್ಕರಿಸುವ ವಿಜ್ಞಾನ ಮತ್ತು ಅದನ್ನು ಕಲಾತ್ಮಕವಾಗಿಸಿ ಜನರಿಗೆ ತಲುಪಿಸುವ ಸಾಹಿತ್ಯವನ್ನು ಕೂಡ ಹೀಗೇ ವಿರುದ್ಧ ಧ್ರುವಗಳಲ್ಲಿ ನಿಲ್ಲಿಸಿ ನೋಡಲಾಗುತ್ತದೆ. ವಿಜ್ಞಾನಿಯ ಮಾತು ಒತ್ತಟ್ಟಿಗಿರಲಿ, ವೈಜ್ಞಾನಿಕ ಸಾಹಿತ್ಯ ಬರೆಯುವವರನ್ನೂ ನಮ್ಮ ಮನಸ್ಸು ಸಾಹಿತಿ ಎಂದು ಒಪ್ಪಿ
ಕೊಳ್ಳದಂತಾಗಿದೆ. ಸಾಹಿತಿಯೊಳಗಿರುವ ವಿಜ್ಞಾನಿಯನ್ನು ಅಂತೆಯೇ ವಿಜ್ಞಾನಿಯೊಳಗಿರುವ ಸಾಹಿತಿಯನ್ನು ನೋಡದಂತೆ ಒಂದು ಮುಸುಕನ್ನು ಇಂಥ ಸ್ಪಷ್ಟವಾದ ಕಪ್ಪು–ಬಿಳುಪು ವರ್ಗೀಕರಣಗಳು ನಮ್ಮ ಬುದ್ಧಿಗೆ ಹೊದೆಸುತ್ತಿರುತ್ತವೆ. ಈ ವೈರುಧ್ಯಗಳ ಫಲವಾಗಿ, ಅತ್ತ ವಿಜ್ಞಾನವೂ ಅಲ್ಲದ, ಇತ್ತ ಸಾಹಿತ್ಯವೂ ಅಲ್ಲದ ಸಮಾಜ ವಿಜ್ಞಾನದ ಸಾವಿರಾರು ಜ್ಞಾನಶಿಸ್ತುಗಳ ಮೇಲೆ ಬೆಳಕೇ ಬೀಳದಂತಾಗಿ, ಅವುಗಳ ಪಾತ್ರ ಸಮಾಜದಲ್ಲಿ ನಗಣ್ಯ ಆಗಿರಬಹುದು ಎಂಬ ಭಾವನೆ ಬಲಗೊಳ್ಳುತ್ತದೆ.

ಅದರಂತೆಯೇ ಅಲಕ್ಷಿತ ಪ್ರದೇಶ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶದ ನಡುವಿನ ವ್ಯತ್ಯಾಸವನ್ನು ಗಮನಿಸಬಹುದು. ಶಕ್ತಿ ಕೇಂದ್ರಕ್ಕೆ ಹತ್ತಿರವಿರುವ ಮುಂದುವರಿದ ನಾಲ್ಕಾರು ಜಿಲ್ಲೆಗಳಿಗೇ ಹೆಚ್ಚಿನ ಪ್ರಾತಿನಿಧ್ಯ ದೊರೆತಿರುವುದನ್ನು ಸರಿದೂಗಿಸುವ ಭರದಲ್ಲಿ, ದೂರದ ಅತಿ ಅಲಕ್ಷಿತ ಪ್ರದೇಶಕ್ಕೆ ಅವಕಾಶ ನೀಡುವ ಕ್ರಮವು ಮೇಲ್ನೋಟಕ್ಕೆ ಸರಿಯೆನಿಸಿದರೂ ಕಾಲಾನುಕ್ರಮದಲ್ಲಿ ಅಲ್ಲಿಯೂ ಮತ್ತೊಂದು ಶಕ್ತಿ ಕೇಂದ್ರ ಸೃಷ್ಟಿಯಾಗಿ ಯಾದಗಿರಿ–ಕೊಪ್ಪಳದಂಥ ಜಿಲ್ಲೆಗಳು ಮರೆಗೇ ಸರಿದುಬಿಡುತ್ತವೆ. ಈ ಅವಾಂತರದಲ್ಲಿ, ಇವೆರಡಕ್ಕೂ ಸೇರದ ಕರ್ನಾಟಕದ ಇತರ ಅಲಕ್ಷಿತ ಭೂಭಾಗಗಳು ಅವಕಾಶ
ಇಲ್ಲದೆ, ಅಸ್ಮಿತೆಯಿಲ್ಲದೆ ನರಳುತ್ತವೆ. ಇನ್ನು ಶಕ್ತಿ ಕೇಂದ್ರದ ಹತ್ತಿರವಿದ್ದೂ ಅವಕಾಶವಂಚಿತವಾದ ಪ್ರದೇಶಗಳೂ ಇರುತ್ತವೆ.

ಜಾತಿಯ ಆಧಾರದಲ್ಲಿ ಕೂಡ ಪ್ರಬಲ ವರ್ಗಕ್ಕೆ ವಿರುದ್ಧವಾಗಿ ದಮನಿತರ ಸಂವೇದನೆಗಳನ್ನು ತರಲಾಗುತ್ತದೆ. ತುಂಬಾ ತೆಳುವಾದ ಈ ವರ್ಗೀಕರಣವು ಪ್ರಬಲ ವರ್ಗವನ್ನು ಪುರೋಹಿತಶಾಹಿಯೂ ದುರ್ಬಲ ವರ್ಗವನ್ನು ದಮನಿತರ ಲೋಕವೂ ಪ್ರತಿನಿಧಿಸುತ್ತವೆ ಎಂಬ ಗ್ರಹಿಕೆಗೆ ದಾರಿ ಮಾಡಿಕೊಡುತ್ತದೆ. ಹಾಗಾದಾಗ ಪ್ರಬಲ ವರ್ಗಗಳೊಳಗೂ ಇರುವ ಮೇಲು–ಕೀಳು ಆಚರಣೆ, ಬಡತನ ಮತ್ತು ಶೋಷಣೆಗಳ ಮೇಲೆ ಹಾಗೂ ದಮನಿತರ ಒಳಗೇ ಇರುವ ಪುರೋಹಿತಶಾಹಿ ವ್ಯವಸ್ಥೆ ಮತ್ತು ಸಮಾಜೋ–ಆರ್ಥಿಕವಾಗಿ ಪ್ರಬಲರಾದ ಇತರ ಶೋಷಕರ ಮೇಲೆ ಬೆಳಕೇ ಬೀಳದಂತಾಗುತ್ತದೆ. ಇವೆರಡಕ್ಕಿಂತ ಮುಖ್ಯವಾಗಿ, ಇತ್ತ ಪ್ರಬಲ ವರ್ಗವೂ ಅಲ್ಲದ, ಅತ್ತ ದಮನಕ್ಕೂ ಒಳಗಾಗಿರದ ಸಾವಿರಾರು ಸಣ್ಣಪುಟ್ಟ ಜಾತಿಗಳು ಎರಡು ಕಡೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ವಿಚಿತ್ರ ತಬ್ಬಲಿತನದಲ್ಲಿ ನರಳುವಂತೆ ಆಗುತ್ತದೆ.

ಈವರೆಗೆ ಹೀಗೆ, ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು ಎಂದು ಕಪ್ಪುಬಿಳುಪಾಗಿ ವಿಭಜಿಸಿ ನೋಡುತ್ತ ಬರಲಾಯಿತು. ಇವೆರಡರ ನಡುವೆ ಹರಡಿರುವ ಹಲವು ಛಾಯೆಗಳು ಕಾಣದೆ ಉಳಿದವು. ಶತಶತಮಾನಗಳಿಂದ ಇದ್ದ ಬಲಾಢ್ಯರ ಕುರಿತ ಮಾತು ಹೇಗೆ ಒಮ್ಮುಖವಾಗಿತ್ತೋ ಅದರಂತೆಯೇ ಅತ್ಯಂತ ದುರ್ಬಲರ ಸಬಲೀಕರಣಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳು ಕೂಡ ಸೂಕ್ಷ್ಮಾರ್ಥದಲ್ಲಿ ಒಮ್ಮುಖವಾಗುತ್ತಾ ಹೋದವು.

ಶ್ರೇಷ್ಠವೋ ಕನಿಷ್ಠವೋ, ಕಪ್ಪೋ ಬಿಳುಪೋ ಅಂತೂ ನಾವು ಎರಡು ತುದಿಗಳ ಕಡೆಗೇ ನೋಡಿದೆವಾಗಲಿ, ಅವೆರಡರ ನಡುವಿನ ಕಡೆಗೆ ನೋಡಲಿಲ್ಲ. ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳು ಕಂದಕವೊಂದರಿಂದ ಬೇರ್ಪಟ್ಟಿರದೆ, ನಡುವಿನ ಭೂಭಾಗವೊಂದರ ಮೂಲಕ ಕ್ರಮೇಣವಾಗಿ ಜೋಡಿಸಿಕೊಂಡಿವೆ. ಪಾಶ್ಚಾತ್ಯ ಮತ್ತು ಪೌರ್ವಾತ್ಯ ಸಂಸ್ಕೃತಿಗಳ ನಡುವೆಯೂ ಹಲವಾರು ಸಂಸ್ಕೃತಿಗಳು ಜೀವಂತವಾಗಿವೆ. ಎಡ–ಬಲಗಳತ್ತ ವಾಲದೆ, ತಮ್ಮಷ್ಟಕ್ಕೆ ಇರುವ ಸಾವಿರಾರು ದನಿಗಳಿವೆ. ಅತ್ತ ಪ್ರಬಲ ಜಾತಿಯೂ ಅಲ್ಲದ ಇತ್ತ ದಮನಿತ ಜಾತಿಯೂ ಅಲ್ಲದ ಲಕ್ಷಾಂತರ ಸಣ್ಣ ಸಣ್ಣ ಸಮುದಾಯಗಳಿವೆ. ಧ್ರುವೀಕರಣದ ಅಪಾಯವೆಂದರೆ, ಈ ಕಡೆಯವರೋ ಆ ಕಡೆಯವರೋ ಅಂತೂ ಮುಂಚೂಣಿ ನಾಯಕರೇ ಪರದೆ ಮೇಲಿರುತ್ತಾರೆ. ಇವೆರಡು ಧ್ರುವಗಳ ‘ನಡುವೆ’ ಹರಡಿಕೊಂಡಿರುವ ಹಲವಾರು ಜನ ನೇಪಥ್ಯದಲ್ಲೇ ಇರುತ್ತಾರೆ. ಹಾಗೆಯೇ ಇವೆರಡು ಧ್ರುವಗಳಲ್ಲೂ ಇದ್ದಿರಬಹುದಾದ ಕೆಲವಾರು ಜನ- ಕಾಲಾಳು ಯೋಧರು ಕೂಡ ಮರೆಯಲ್ಲೇ ಉಳಿದುಬಿಡುತ್ತಾರೆ. ಈ ‘ನಡುವೆ’ ಎಂಬ ಅಗೋಚರ ವಲಯದಲ್ಲಿ ಎಲೆಮರೆಯ ಕಾಯಿಯಂಥ ಲಕ್ಷಾಂತರ ಹೀರೊಗಳಿದ್ದಾರೆ. ಈ ನಿರ್ಲಕ್ಷಿತರ ಬಗ್ಗೆ ಯಾರೆಂದರೆ ಯಾರೂ ಹಾಡಿಲ್ಲ.

ಇದನ್ನು ಎಡ–ಬಲಗಳ ಚರ್ಚೆಯಾಗಲ್ಲದೆ, ಎರಡು ‘ಅತಿ’ಗಳ ನಡುವೆ ಇರುವ ‘ಅಲಕ್ಷಿತ’ದ ಕುರಿತ ಚರ್ಚೆಯಾಗಿ ನೋಡಬೇಕಿದೆ. ಆಯುರ್ವೇದದಲ್ಲಿ ‘ಸರ್ವಧರ್ಮೇಷು ಮಧ್ಯಮಾಂ’ ಎಂಬ ಮಾತು ಬರುತ್ತದೆ. ‘ಯಾವುದರಲ್ಲೂ ಅತಿ ಬೇಡ; ಎಲ್ಲದರ ಒಳಿತು ಹೀರು, ಎಲ್ಲದರ ಕೆಡುಕು ಸರಿಸು. ಅತಿಯು ಅಪಾಯಕ್ಕೆ ದಾರಿ’ ಎಂದು ಇದರ ಅರ್ಥ.

ಶಿಕ್ಷಣ ಕ್ಷೇತ್ರದಲ್ಲಿಯೂ ‘ಡೆಮಾಕ್ರಟೈಸೇಷನ್‌ ಆಫ್‌ ದ ಕ್ಲಾಸ್‌ರೂಮ್‌’ ಎಂಬ ಒಂದು ಪರಿಕಲ್ಪನೆ ಇದೆ. ತರಗತಿಯ ಮೊದಲ ವಿದ್ಯಾರ್ಥಿಯಿಂದ ಹಿಡಿದು ಕಟ್ಟಕಡೆಯ ವಿದ್ಯಾರ್ಥಿಯವರೆಗೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುವುದೂ ಸೇರಿದಂತೆ ವಿಶಾಲವಾದ ಅರ್ಥವನ್ನು ಇದು ಹೊಂದಿದೆ. ಇದರಲ್ಲಿ ಮೊದಲ ವಿದ್ಯಾರ್ಥಿ ಮತ್ತು ಕಟ್ಟ ಕಡೆಯ ವಿದ್ಯಾರ್ಥಿ ಯಷ್ಟೇ ಅಲ್ಲದೆ, ಇವರಿಬ್ಬರ ಮಧ್ಯ ದಲ್ಲಿ ಇರುವ ಅತಿ ಹೆಚ್ಚು ಸಂಖ್ಯೆಯ ‘ಸಾಧಾರಣ’ ವಿದ್ಯಾರ್ಥಿಗಳೂ ಸೇರಿಕೊಂಡಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ, ಬೋಧಕನು ಬರೀ ಮೊದಲ ಮತ್ತು ಕಟ್ಟಕಡೆಯ ವಿದ್ಯಾರ್ಥಿಗೆ ಪಾಠ ಮಾಡಿ, ಪ್ರಜಾತಂತ್ರದ ಮೌಲ್ಯಗಳನ್ನು ತರಗತಿಯಲ್ಲಿ ಸರಿಯಾಗಿ ಅಳವಡಿಸಿ ಕೊಂಡಿದ್ದೇನೆ ಎಂದು ಬೀಗಿದ ಹಾಗಾಗುತ್ತದೆ ಅಷ್ಟೇ.

‌ಲಿಂಗತ್ವ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವವರೆಗೂ ನಮ್ಮ ಸಾಂಪ್ರದಾಯಿಕ ಮನಸ್ಸು ಸಹ ಹೀಗೆ ಎರಡು ಲಿಂಗಸಂಬಂಧಿ ಧ್ರುವಗಳಲ್ಲೇ ವಿಭಾಗೀಕರಣಗೊಂಡಿತ್ತು ಅಲ್ಲವೇ? ಈಗ ಇನ್ನೂ ಸೂಕ್ಷ್ಮಕ್ಕಿಳಿದು, ಎಲ್‍ಜಿಬಿಟಿಕ್ಯು ಸಮುದಾಯಗಳನ್ನೂ ಸಹಾನುಭೂತಿಯಿಂದ ಕಾಣುವಂಥ ಸ್ವಸ್ಥ ಮನಃಸ್ಥಿತಿಗೆ ಸಮಾಜ ತಲುಪಿದೆ. ಹಾಗಿರುವಾಗ, ನಾವೇ ಎದುರು ಬದುರಾಗಿ ನಿಲ್ಲಿಸಿರುವ, ಪರಸ್ಪರ ವಿರುದ್ಧವೆಂದು ಬಿಂಬಿಸಿ ನಂಬಿಸಿರುವ ಪಾಶ್ಚಾತ್ಯ-ಪೌರ್ವಾತ್ಯ, ಉತ್ತರ-ದಕ್ಷಿಣ, ಮೇಲ್ವರ್ಗ-ಕೆಳವರ್ಗ, ಎಡ-ಬಲ, ವಿಜ್ಞಾನ-ಸಾಹಿತ್ಯದಂತಹ ಎರಡು ಧ್ರುವಗಳ ನಡುವಿರುವ ನಿರ್ಲಕ್ಷಿತ ದೇಶ, ಭಾಷೆ, ಸಂಸ್ಕೃತಿ, ಸಿದ್ಧಾಂತ ಮತ್ತು ಸಮುದಾಯಗಳಿಗೂ ವೇದಿಕೆ ಒದಗಿಸುವಂತೆ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳ
ಬೇಕಿದೆ. ಆಗಲೇ ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯ ಮತ್ತು ಕುವೆಂಪು ಅವರ ಪೂರ್ಣದೃಷ್ಟಿ
ಪರಿಕಲ್ಪನೆಗಳಿಗೆ ನಿಜವಾದ ಅರ್ಥ ಬರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT