ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಜೋಗ ಜಲಪಾತಕ್ಕೆ ಅಭಿವೃದ್ಧಿಯೇ ಮುಳುವು?!

ಸಂರಕ್ಷಿತ ತಾಣಗಳಲ್ಲಿ ಮಾನವಕೇಂದ್ರಿತ ಅಭಿವೃದ್ಧಿಗೆ ತಡೆ ಹಾಕಬೇಕಾಗಿದೆ
Published 2 ಜುಲೈ 2023, 19:38 IST
Last Updated 2 ಜುಲೈ 2023, 19:38 IST
ಅಕ್ಷರ ಗಾತ್ರ

ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟುವ ಹೊತ್ತಿನ ಆ ಕಾಲದಲ್ಲಿ ಈ ಭಾಗದಲ್ಲಿ ವಾರ್ಷಿಕ 320 ಇಂಚು ಮಳೆ ಸುರಿಯುತ್ತಿತ್ತು. ಜೋಗ ಜಲಪಾತದ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿದೇಶಗಳಿಂದ ಜನ ಬರುತ್ತಿದ್ದರು. 830 ಅಡಿ ಎತ್ತರದಿಂದ ರಭಸವಾಗಿ ಧುಮ್ಮಿಕ್ಕುತ್ತಿದ್ದ ಜಲಪಾತದ ಶಬ್ದಕ್ಕೆ ಕಿಲೊಮೀಟರ್ ದೂರದಲ್ಲಿರುವ ಬ್ರಿಟಿಷ್ ಬಂಗಲೆಯ ಮಹಾದ್ವಾರದ ಕೆ.ಜಿ. ತೂಕದ ಹಿತ್ತಾಳೆ ಬೀಗ ಪತರಗುಟ್ಟಿ ನಡುಗುತ್ತಿತ್ತು.

ಅದೆಷ್ಟೋ ವಿದೇಶಿ ಪ್ರವಾಸಿಗರು ಹೊನ್ನಾವರಕ್ಕೆ ಹೋಗಿ ಅಲ್ಲಿಂದ ದೋಣಿಯ ಮೂಲಕ ಗೇರುಸೊಪ್ಪೆಯವರೆಗೆ ಬಂದು, ಅಲ್ಲಿಂದ ನಡೆದುಕೊಂಡೋ ಅಥವಾ ಕುದುರೆಗಳ ಮೇಲೋ ಜೋಗ ಜಲಪಾತವನ್ನು ನೋಡಲು ಬರುತ್ತಿದ್ದರು. ವಿದೇಶಿ ಪ್ರವಾಸಿಗರಿಂದ ರಾಜ್ಯದ ಬೊಕ್ಕಸಕ್ಕೆ ಆದಾಯವೂ ಬರುತ್ತಿತ್ತು. ಜೋಗದ ವೈಭವದ ಕುರಿತಾಗಿ ವಿದೇಶಿಯರು ಬರೆದ ಅದ್ಭುತ ಟಿಪ್ಪಣಿಗಳು ಈಗಲೂ ಜೋಗ ಜಲಪಾತ ವೀಕ್ಷಕರ ಪುಸ್ತಕದಲ್ಲಿ ದಾಖಲಾಗಿವೆ. 1898ರಲ್ಲೇ ಕೆಲ ಬ್ರಿಟಿಷ್ ಕಂಪನಿಗಳು ಜೋಗದಲ್ಲಿ ಜಲ ವಿದ್ಯುತ್ ಯೋಜನೆಯನ್ನು ಆರಂಭಿಸಲು ಮುಂದಾಗಿದ್ದವು. ಈ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಬ್ರಿಟಿಷ್ ಸರ್ಕಾರ ಆಗಿನ ವೈಸ್‌ರಾಯ್ ಆಗಿದ್ದ ಲಾರ್ಡ್ ಕರ್ಜನ್ ಅವರನ್ನು ಕೇಳಿಕೊಂಡಿತು.

1902ರಲ್ಲಿ ಜೋಗ ಜಲಪಾತಕ್ಕೆ ಬಂದ ಲಾರ್ಡ್ ಕರ್ಜನ್ ‘ಜಲವಿದ್ಯುತ್ ಯೋಜನೆ ಮತ್ತೆ ಪ್ರಸ್ತಾಪಕ್ಕೆ ಬಂದರೆ, ನನ್ನ ನಂತರ ಈ ಸ್ಥಾನಕ್ಕೆ ಬರುವವರು ಈ ಹೀನಕೃತ್ಯಕ್ಕೆ ಒಪ್ಪಿಗೆ ಕೊಡುವ ಮೊದಲು ನಿಧಾನವಾಗಿ ಯೋಚಿಸಬೇಕು ಎಂದು ಸೂಚಿಸುತ್ತೇನೆ. ಅವರು ಸ್ವತಃ ಈ ಜಲಪಾತಕ್ಕೆ ಭೇಟಿ ಇತ್ತ ವಿನಾ ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು’ ಎಂಬ ಷರಾ ಬರೆದು, ಜಲವಿದ್ಯುತ್ ಯೋಜನೆ ಪ್ರಸ್ತಾವವನ್ನು ಸ್ಪಷ್ಟವಾಗಿ ನಿರಾಕರಿಸುತ್ತಾನೆ.

ರಾಜ್ಯಕ್ಕೆ ಬೆಳಕು ನೀಡಬೇಕೆಂಬ ಪ್ರಸ್ತಾವಕ್ಕೆ ಜೀವ ಬಂದು, ಶರಾವತಿ ಜಲವಿದ್ಯುತ್ ಯೋಜನೆ ಜಾರಿಯಾಯಿತು. ಜಲಪಾತ ನೋಡಲು ಬರುವವರ ಸಂಖ್ಯೆಯೂ ಹೆಚ್ಚಿತು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಜಲಪಾತದ ಆಜುಬಾಜಿನಲ್ಲಿ ಮಾಡಲಾಯಿತು. ವರ್ಷಪೂರ್ತಿ ಧುಮ್ಮಿಕ್ಕುವ ಜಲಪಾತ ಕ್ರಮೇಣ ಮಳೆಗಾಲದಲ್ಲಿ ಮಾತ್ರ ಕಂಡುಬರುವಂತಾಯಿತು. ಈಗಂತೂ ಅಭಿವೃದ್ಧಿಯ ಹೆಸರಿನಲ್ಲಿ ವಿಕೃತಗೊಂಡ ಜೋಗವನ್ನು ನೋಡಲು ಯಾವುದೇ ವಿದೇಶಿ ಪ್ರವಾಸಿಗರು ಬರುತ್ತಿಲ್ಲವೆಂಬ ಗಂಭೀರ ವಿಷಯವನ್ನು, ಮುಳುಗಡೆ ಸಂತ್ರಸ್ತರ ಕಣ್ಣೀರ ಕಥೆಯನ್ನು ನಾ.ಡಿಸೋಜ ಬಹಳ ಬೇಸರದಿಂದಲೇ ತಮ್ಮ ಕಾದಂಬರಿಯೊಂದರಲ್ಲಿ ದಾಖಲಿಸಿದ್ದಾರೆ.

ವಿಶ್ವದ ಎರಡನೇ ಅತಿದೊಡ್ಡ ಜಲಪಾತವೆಂಬ ಹೆಗ್ಗಳಿಕೆಗೆ ಪಾತ್ರವಾದ ನೈಸರ್ಗಿಕ ಜೋಗವನ್ನು ಹಿಂದಿನ ಇಪ್ಪತ್ತೈದು ವರ್ಷಗಳಿಂದ ಅಭಿವೃದ್ಧಿ ಪಿಪಾಸು ಬಲಿ ತೆಗೆದುಕೊಳ್ಳುತ್ತಲೇ ಇದೆ. ಬೃಹತ್ ಯಂತ್ರಗಳು ಈಗಲೂ ಕೆಲಸ ಮಾಡುತ್ತಿವೆ. ಡೈನಮೈಟ್ ಸಿಡಿಸಿ ಕಲ್ಲುಗಳನ್ನು ಒಡೆಯಲಾಗುತ್ತಿದೆ. ಸಹಜ ನೈಸರ್ಗಿಕ ಮರಗಳು ಧರೆಗುರುಳಿ, ಕಾಂಕ್ರೀಟ್ ಕಾಡು ನಿರ್ಮಾಣವಾಗುತ್ತಿದೆ. ಶರಾವತಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇತ್ತ ಸರ್ವಋತು ಜಲಪಾತ ರೂಪಿಸುವ ಯೋಜನೆಯನ್ನು ಕೈಬಿಟ್ಟಿಲ್ಲ, ಕೇಬಲ್ ಕಾರು ರೂಪಿಸುವ ಯೋಚನೆಯೂ ಜೀವಂತವಾಗಿದೆ, ಸಾಹಸ ಕ್ರೀಡೆಯಾದ ಝಿಪ್ ಲೈನ್ ನಿರ್ಮಾಣವಾಗಿದ್ದರೂ ನಿರುಪಯುಕ್ತವಾಗಿದೆ. ಅಂತಹವುಗಳ ಜೊತೆಯಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ಪ್ರಯತ್ನ ಮುಂದುವರಿದಿದೆ. ವಿಪರ್ಯಾಸದ ಸಂಗತಿ ಎಂದರೆ ಈಗ ಇರುವ ಐಷಾರಾಮಿ ಹೋಟೆಲಿನ ಕೊಠಡಿಗಳು ಭರ್ತಿಯಾದ ದಾಖಲೆ ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಇಲ್ಲವೆಂದು, ಅದರ ನಿರ್ವಹಣೆ ಮಾಡುವ ಮೇಟಿ ಹೇಳುತ್ತಾರೆ.

ಜೋಗದ ಶರಾವತಿ ಕಣಿವೆಯ ರೀತಿಯ ಮತ್ತೊಂದು ಕಣಿವೆ ಇಡೀ ಪಶ್ಚಿಮಘಟ್ಟದಲ್ಲಿ ಇಲ್ಲ. ಇಲ್ಲಿಗೆ ಸೀಮಿತವಾಗಿರುವ ಹಸಿರು, ನೀಲಿ ಪಾರಿವಾಳಗಳು ಹಾಗೂ ಅವುಗಳನ್ನು ಅವಲಂಬಿಸಿ ಬದುಕುವ ಡೇಗೆಗಳ ಆವಾಸಸ್ಥಾನವಿದು. ಇವುಗಳ ಹಾರಾಟಕ್ಕೆ ಅಡಚಣೆಯಾಗುವಂತಹ ಕೇಬಲ್ ಕಾರಿನಂತಹ ಯೋಜನೆ ನಿರ್ಮಿಸಿದಲ್ಲಿ, ಈ ಅಪರೂಪದ ಸಂತತಿ ಶಾಶ್ವತವಾಗಿ ನಾಶವಾಗಲಿವೆ ಎಂದು ವನ್ಯಜೀವಿ ತಜ್ಞರು ಎಚ್ಚರಿಸುತ್ತಾರೆ.

ಜೋಗ ಆವರಣವು ಶರಾವತಿ ಸಿಂಗಳೀಕ ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕಿದ್ದಲ್ಲಿ, ಕೇಂದ್ರ ಅರಣ್ಯ-ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಜೋಗ ಪರಿಸರದ ಅಭಿವೃದ್ಧಿ ವಿಚಾರದಲ್ಲಿ ಇದ್ಯಾವುದೂ ಬೇಕಾಗಿಲ್ಲ. ಅತ್ಯಂತ ಸೂಕ್ಷ್ಮವಾಗಿ ಹಾಗೂ ಲಂಬವಾಗಿ ರಚನೆಯಾಗಿರುವ ಜಲಪಾತದ ಬಂಡೆಗಳು ಒಂದೊಂದೇ ಕಳಚಿ ಬೀಳುತ್ತಿವೆ. ಜೋಗದ ಧಾರಣಾ ಸಾಮರ್ಥ್ಯ ಮುಗಿದುಹೋಗಿದೆ. ಇದೇ ಭರದಲ್ಲಿ ಅಭಿವೃದ್ಧಿ ಸಾಗಿದರೆ, ಇಡೀ ಜಲಪಾತವೇ ಕುಸಿದುಬೀಳುವ ಅಪಾಯವಿದೆ ಎಂಬುದು ತಜ್ಞರು ಹಾಗೂ ಸ್ಥಳೀಯರ ಅಭಿಪ್ರಾಯ.

ಶರಾವತಿ ಸಿಂಗಳೀಕ ಅಭಯಾರಣ್ಯದ ಶರಾವತಿ ಮತ್ತು ಅಘನಾಶಿನಿ ನದಿ ಕಣಿವೆಗಳ ಅರಣ್ಯ ಪ್ರದೇಶದಲ್ಲಿ ಸಿಂಗಳೀಕಗಳ ಸಂಖ್ಯೆ ಸುಸ್ಥಿರವಾಗಿದೆ ಎಂಬ ವರದಿಯನ್ನು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ನೀಡಿದೆಯೆಂದು ಅರಣ್ಯ ಇಲಾಖೆ ಹೇಳಿಕೊಂಡಿದೆ. 2015ರಲ್ಲಿ ಇವುಗಳ ಸಂಖ್ಯೆ 30 ಗುಂಪುಗಳಲ್ಲಿ ವಿಂಗಡಣೆಯಾಗಿ 600 ಇತ್ತು, ಈಗ 32 ಗುಂಪುಗಳಲ್ಲಿ ಈ ಸಂಖ್ಯೆ 730ಕ್ಕೆ ತಲುಪಿದೆ. ಹೆಚ್ಚಳವಾದ ಸಂಖ್ಯೆ ವನ್ಯಜೀವಿ ಪ್ರೇಮಿಗಳಲ್ಲಿ ಸಂತಸ ತರುವ ವಿಷಯವಾದರೂ, ವಾಸ್ತವಿಕ ನೆಲೆಗಟ್ಟಿನಲ್ಲಿ ಅಲ್ಲಿನ ಕ್ಷೇತ್ರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನ ಮಾಡಬೇಕಿದೆ.

ಅನೇಕ ಅನವಶ್ಯಕ ಅಭಿವೃದ್ಧಿ ಕೆಲಸಗಳು ಸಿಂಗಳೀಕಗಳ ಆವಾಸಸ್ಥಾನವನ್ನು ನಾಶ ಮಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ. ಎನ್.ಎಚ್.766ಇ ಎಂದು ಕರೆಯಲಾಗುವ ಈ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈಗಾಗಲೇ 55 ಸಾವಿರಕ್ಕೂ ಹೆಚ್ಚು ಪಾರಂಪರಿಕ ಮರಗಳನ್ನು ಕಡಿಯಲಾಗಿದೆ. ಎತ್ತರದ ಮರಗಳ ರೆಂಬೆಕೊಂಬೆಗಳು ಒತ್ತಾಗಿ ಕೂಡಿಕೊಂಡಿರುವ ಮೇಲಾವರಣ ಅಥವಾ ಸಿಂಗಳೀಕ ಗುಂಪುಗಳು ಚಲಿಸುವ ಪಥ ಛಿದ್ರವಾಗಿ, ಆ ಭಾಗದಲ್ಲಿ ಅವುಗಳ ಆವಾಸಸ್ಥಾನ ಸೀಮಿತಗೊಂಡಿದೆ. 766ಸಿ ಎಂಬ ಹೊಸ ರಾಷ್ಟ್ರೀಯ ಹೆದ್ದಾರಿಯು ಶಿಕಾರಿಪುರ-ಹೊಸನಗರ-ನಗರ-ನಿಟ್ಟೂರು ಮಾರ್ಗವಾಗಿ ಬೈಂದೂರು ತಲುಪಲಿದ್ದು, ಇದು ಮತ್ತೆ ಶರಾವತಿ ಸಿಂಗಳೀಕ ಅಭಯಾರಣ್ಯದ ಸೂಕ್ಷ್ಮ ಭಾಗವನ್ನು ಛಿದ್ರಗೊಳಿಸಲಿದೆ. ಇಲ್ಲು ಕೂಡ ಸಿಂಗಳೀಕಗಳ ಪಥ ತುಂಡಾಗಿ, ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದೆ.

ಶರಾವತಿ ಸಿಂಗಳೀಕ ಅಭಯಾರಣ್ಯದ ಹೃದಯಭಾಗದಲ್ಲಿ ಅಂತರ್ಗತ ಜಲವಿದ್ಯುತ್ ಯೋಜನೆಯನ್ನು ರೂಪಿಸುವ ಪ್ರಸ್ತಾವವೂ ಇದೆ. ಈ ಯೋಜನೆಗಾಗಿ 800 ಹೆಕ್ಟೇರಿನಷ್ಟು ದಟ್ಟಾರಣ್ಯ ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲೇ ಅತಿಹೆಚ್ಚು ಸಿಂಗಳೀಕಗಳ ಗುಂಪುಗಳು ವಾಸಿಸುತ್ತಿವೆ ಎಂಬುದು ಗಮನಾರ್ಹ. 

ಅಭಿವೃದ್ಧಿ ಹರಿಕಾರರಿಗೆ ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಿಸುವ ಯೋಚನೆ ಇದ್ದೇ ಇದೆ. ಪ್ರಸ್ತಾವಿತ ರೈಲು ಮಾರ್ಗವು ಮತ್ತೆ ಶರಾವತಿ ಸಿಂಗಳೀಕ ಅಭಯಾರಣ್ಯವನ್ನು ನಿಶ್ಚಿತವಾಗಿ ಛಿದ್ರಗೊಳಿಸಲಿದ್ದು, ಮೇರುಪ್ರಾಣಿಯಾದ ಸಿಂಗಳೀಕಗಳ ಆವಾಸಸ್ಥಾನ ಶಾಶ್ವತವಾಗಿ ನಾಶವಾಗಲಿದೆ. ಅತ್ತ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾಳಿ ಹುಲಿಯೋಜನೆ ಅಭಯಾರಣ್ಯ ಹೀಗೆ ಎಲ್ಲೆಲ್ಲೂ ರಸ್ತೆ ವಿಸ್ತರಣೆ ಹಾಗೂ ರೈಲು ಮಾರ್ಗಗಳ ಯೋಜನೆಗಳು ನಡೆಯುತ್ತಿವೆ. ಈ ಎಲ್ಲ ಭಾಗದಲ್ಲೂ ಬರೀ ಸಿಂಗಳೀಕಗಳಷ್ಟೇ ಅಲ್ಲ, ಇನ್ನೂ ನೂರಾರು ಜೀವಿವೈವಿಧ್ಯ ಪ್ರಭೇದಗಳಿವೆ. ಮಾನವಕೇಂದ್ರಿತ ಅಭಿವೃದ್ಧಿಗಾಗಿ ನೈಸರ್ಗಿಕ ನೆಲೆಗಳನ್ನು ಕಳೆದುಕೊಳ್ಳುವ ವನ್ಯಜೀವಿಗಳು ವಿಧಿಯಿಲ್ಲದೇ ರೈತರ ತೋಟಕ್ಕೆ ನುಗ್ಗುತ್ತವೆ. ಮಾನವ-ವನ್ಯಜೀವಿ ಸಂಘರ್ಷ ತಾರಕಕ್ಕೇರುತ್ತದೆ. ಇದನ್ನು ನಿರ್ವಹಣೆ ಮಾಡುವುದು ಸರ್ಕಾರಕ್ಕೆ ಅತಿದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅಂತಿಮವಾಗಿ ಸೋಲುವುದು ನೆಲೆ ಕಳೆದುಕೊಳ್ಳಲಿರುವ ವನ್ಯಜೀವಿಗಳು ಎಂದು ಬಿಡಿಸಿ ಹೇಳಬೇಕಿಲ್ಲ.

ಜೂನ್ ತಿಂಗಳು ಮುಗಿದರೂ ಮಲೆನಾಡಿನಲ್ಲಿ ವಾಡಿಕೆಯ ಮಳೆಗಾಲವಿನ್ನೂ ಪ್ರಾರಂಭವಾಗಿಲ್ಲ. ಇದೇ ಹೊತ್ತಿನಲ್ಲಿ ಅರಣ್ಯ ಸಚಿವರು, ಮುಂದಿನ ಐದು ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ ಹೊಂದಿ, ಕಾರ್ಯಪ್ರವೃತ್ತರಾಗಲು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಅದರ ಮೊದಲ ಭಾಗವಾಗಿ ಈ ವರ್ಷ ಐದು ಕೋಟಿ ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದ್ದಾರೆ. ಈ ತರಹ ಯೋಚನೆಗಳು ಹಾಗೂ ಯೋಜನೆಗಳು ಕೇಳುವ ಕಿವಿಗಳಿಗೆ ಹಿತವಾಗಬಲ್ಲವೇ ವಿನಾ, ಅವು ಅನುಷ್ಠಾನಗೊಂಡು, ಫಲಿತಾಂಶ ನೀಡುವುದು ತೀರಾ ತೀರಾ ವಿರಳ.

ಲಿಂಗನಮಕ್ಕಿ ಅಣೆಕಟ್ಟಿನ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ಪ್ರದೇಶಕ್ಕೆ ಎ.ಬಿ.ಸೈಟ್ ಎಂದು ಕರೆಯುತ್ತಾರೆ. ಅಂದರೆ, ಅದು ಆಗಿನ ಆನೆಬೈಲು ಎಂದು ಕರೆಯಲಾಗುವ ಆನೆಪಥವಾಗಿತ್ತು. ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣದ ನಂತರದಲ್ಲಿ ಆನೆಪಥ ಶಾಶ್ವತವಾಗಿ ನಾಶವಾಯಿತು. ಈಗ ಈ ಭಾಗದಲ್ಲಿ ಆನೆಗಳು ಕಂಡುಬರುವುದಿಲ್ಲ. 

ಅಳಿದುಳಿದ ಅರಣ್ಯಗಳನ್ನು, ವನ್ಯಜೀವಿ ನೆಲೆಗಳನ್ನು ಇನ್ನಷ್ಟು ಮತ್ತಷ್ಟು ಎಂದು ಅಭಿವೃದ್ಧಿಯ ಭೀಮಚಕ್ರದಡಿಯಲ್ಲಿ ಹೊಸಕಿ ಹಾಕುತ್ತಾ ಹೋದರೆ, ಸಹ್ಯಾದ್ರಿ ತಪ್ಪಲಿನ ಭವಿಷ್ಯದ ಜೊತೆ ತಪ್ಪಲನ್ನೇ ನಂಬಿಕೊಂಡ ಬಯಲುನಾಡೂ ಸಂಕಷ್ಟದಲ್ಲಿ ಸಿಲುಕಲಿದೆ. ಸಂರಕ್ಷಿತ ತಾಣಗಳಲ್ಲಿ ಮಾನವಕೇಂದ್ರಿತ ಅಭಿವೃದ್ಧಿಗೆ ತಡೆ ಹಾಕಬೇಕಾಗಿದೆ. ಅರಣ್ಯ ಸಚಿವರು ಗಮನ ಹರಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT