ತ್ರಿಭಾಷಾ ಸೂತ್ರದ ವಾಗ್ವಾದಗಳೆಲ್ಲ ಹಿಂದಿ ಅಥವಾ ಹಿಂದಿಯ ಪರವಾದ ಚರ್ಚೆಗಳಾಗಿ ಉಳಿದು ಕನ್ನಡದ ಪ್ರಶ್ನೆಯು ಕಳೆದೇ ಹೋಗುವುದು ಈ ಚರ್ಚೆಗಳ ಲಕ್ಷಣವಾಗಿದೆ. ಆದರೆ ಕನ್ನಡಕ್ಕೆ ಬದಲಿಗಳಿಲ್ಲ. ಕರ್ನಾಟಕದಲ್ಲಿ ಕನ್ನಡ ಕಲಿಕೆ, ಕನ್ನಡ ಮತ್ತು ಅದರ ಸಹಭಾಷೆಗಳ ಯಜಮಾನಿಕೆ ಪ್ರಶ್ನಾತೀತವಾಗಿ ಇರಬೇಕು. ಆದ್ದರಿಂದ ಈ ಚರ್ಚೆಯನ್ನು ತುಲನಾತ್ಮಕವಾಗಿ ಹಿಂದಿ ಮತ್ತು ಇಂಗ್ಲಿಷ್ನ ಚರ್ಚೆಯಾಗಿ ಮಾತ್ರವೇ ಬೆಳೆಸಬೇಕಾದ ಅಗತ್ಯವಿದೆ.

ಹಿಂದಿ, ಇಂಗ್ಲಿಷ್ ಎರಡೂ ಕರ್ನಾಟಕಕ್ಕೆ ಪರಕೀಯ ಭಾಷೆಗಳೇ ಆಗಿರುವುದರಿಂದ ಈ ಚರ್ಚೆಗೆ ಭಾವನಾತ್ಮಕ ನೆಲೆ ಒದಗಿಸಬೇಕಾದ ಅಗತ್ಯವಿಲ್ಲ. ಹಿಂದಿ ಪ್ರತಿಪಾದನೆಯೊಂದಿಗೆ ರಾಷ್ಟ್ರೀಯತೆಯ ವಿಚಾರ ಸೇರಿಕೊಂಡಿದೆ. ರಾಷ್ಟ್ರೀಯತೆಯು ಭಾವನಾತ್ಮಕ ಅಂಶವೂ ಹೌದು, ಕರ್ನಾಟಕದ ಅಗತ್ಯವೂ ಹೌದು. ಆದರೆ ಹಿಂದಿ ಭಾಷೆಯು ರಾಷ್ಟ್ರೀಯತೆಯ ಅಂಶವಲ್ಲ. ಆದ್ದರಿಂದ ಹಿಂದಿಯನ್ನು ರಾಷ್ಟ್ರೀಯತೆಯೊಂದಿಗೆ ಬೆಸೆಯುವ ತಂತ್ರಗಾರಿಕೆಯನ್ನು ಪರಿಗಣಿಸದೆಯೇ ವ್ಯಾವಹಾರಿಕ ಅಗತ್ಯದ ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ.

ಹಿಂದಿಯನ್ನು ರಾಷ್ಟ್ರೀಯ ಏಕತೆಯೊಂದಿಗೆ ಬೆಸೆಯುವ ಚಿಂತನೆಗಳು ಸ್ವಾತಂತ್ರ್ಯ ಹೋರಾಟದ ಕಾಲದವು. ಚೆನ್ನೈಯಲ್ಲಿ ಹಿಂದಿ ಪ್ರಚಾರ ಸಭಾವನ್ನು ಗಾಂಧೀಜಿ ಪ್ರಾರಂಭಿಸಿದರು. ಆದರೆ ಆಗ ಭಾರತವು ಆಧುನಿಕ ಅರ್ಥದಲ್ಲಿ, ಒಂದು ರಾಷ್ಟ್ರವಾಗಿ ರೂಪುಗೊಂಡಿರಲಿಲ್ಲ. ಆಗ ರಾಷ್ಟ್ರೀಯ ಏಕತೆಯನ್ನು ತರಬಲ್ಲ ಸಾಧನಗಳನ್ನು ಹುಡುಕಾಡುತ್ತಿದ್ದಾಗ ಭಾಷೆಯೂ ಒಂದು ಸಾಧನ ಆಗಬಲ್ಲದು ಎಂದನಿಸಿ, ಹಿಂದಿಯನ್ನು ಇಡೀ ಭಾರತದ ಸಂಪರ್ಕ ಭಾಷೆಯಾಗಿ ರೂಪಿಸಬೇಕೆಂಬ ಚಿಂತನೆ ಹುಟ್ಟಿಕೊಂಡಿದ್ದರೆ ಅದು ಸಹಜ. ಆದರೆ ಇಂದು ರಾಷ್ಟ್ರೀಯ ಏಕತೆಗೂ ಹಿಂದಿಗೂ ಯಾವ ಸಂಬಂಧವೂ ಇಲ್ಲ. ಏಕೆಂದರೆ ಹಿಂದಿ ಎಲ್ಲರ ಭಾಷೆಯಾಗದೆಯೇ ಭಾರತವು ಒಂದು ರಾಷ್ಟ್ರವಾಗಿ ಉಳಿಯಲು ಸಮರ್ಥವಿದೆ ಎಂಬುದನ್ನು ಹಿಂದಿನ 75 ವರ್ಷಗಳಲ್ಲಿ ದೃಢೀಕರಿಸಿ ಆಗಿದೆ. ತ್ರಿಭಾಷಾ ಸೂತ್ರವನ್ನು ಕೂಡ ಒಪ್ಪದೇ ಇದ್ದ ತಮಿಳುನಾಡು ಸಹ ಭಾರತೀಯ ಒಕ್ಕೂಟದಲ್ಲೇ ಉಳಿದು ರಾಷ್ಟ್ರೀಯ ಏಕತೆಯ ಚೌಕಟ್ಟಿನಿಂದ ಹೊರಹೋಗಿಲ್ಲ. ಅಂದರೆ ರಾಷ್ಟ್ರೀಯ ಏಕತೆ ಸಾಧಿಸಲು ಸಂವಿಧಾನವೇ ಸಮರ್ಥವಾಗಿದೆ ಎಂದು ಅರ್ಥ.

ಯಾವುದೇ ಭಾಷೆಯ ಉಪಯೋಗವು ಸಂವಹನ, ಜ್ಞಾನ ಗಳಿಕೆ ಮತ್ತು ಜ್ಞಾನದ ಮುಖಾಂತರ ಅನ್ನ ಗಳಿಕೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಈ ಮೂರರಲ್ಲಿ ವರ್ತಮಾನದಲ್ಲಿ ಭಾಷಾ ಕಲಿಕೆಗೆ ಜನರ ಬೇಡಿಕೆ ಇರುವುದು ಅನ್ನ ಗಳಿಕೆಯ ಸಾಧನವಾಗಿ ಯಾವ ಭಾಷೆಗೆ ಹೆಚ್ಚು ಉಪಯುಕ್ತತೆ ಇದೆ ಎನ್ನುವುದಕ್ಕಾಗಿದೆ. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಇಂಗ್ಲಿಷ್ಗೇ ಅನ್ನ ಗಳಿಕೆಯ ಶಕ್ತಿ ಜಾಸ್ತಿ ಇದೆ ಎನ್ನುವುದರಲ್ಲಿ ಯಾರಲ್ಲೂ ಅನುಮಾನಗಳು ಇಲ್ಲ. ಉದಾಹರಣೆಗೆ, ಸರ್ಕಾರದ ನೇಮಕಾತಿಯಲ್ಲಿ ಸಮಾನತೆಯ ತತ್ವ ಇರುವುದರಿಂದ ಹಿಂದಿ ಭಾಷಾ ಅಧ್ಯಾಪಕರಿಗೂ ಇಂಗ್ಲಿಷ್ ಭಾಷಾ ಅಧ್ಯಾಪಕರಿಗೂ ಸಮಾನ ವೇತನವೇ ಸಿಗುತ್ತದೆ. ಆದರೆ ಖಾಸಗಿ ಸಂಸ್ಥೆಗಳಿಗೆ ಬಂದಾಗ ವ್ಯತ್ಯಾಸ ಗೊತ್ತಾಗುತ್ತದೆ. ಹಿಂದಿಯನ್ನು ಕಲಿಸುವವರಿಗಿಂತ ಇಂಗ್ಲಿಷನ್ನು ಕಲಿಸುವವರಿಗೆ ನಾಲ್ಕು ಪಟ್ಟು ಜಾಸ್ತಿ ವೇತನ ಕೊಡುವ ವ್ಯವಸ್ಥೆಯೂ ಇದೆ ಮತ್ತು ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಂದಿ ಭಾಷಾ ವಲಯವಾದ ಉತ್ತರ ಭಾರತದಲ್ಲೂ ಇಂಗ್ಲಿಷನ್ನು ಕಲಿಸುವವರಿಗಿಂತ ಜಾಸ್ತಿ ವೇತನವನ್ನು ಹಿಂದಿಯನ್ನು ಕಲಿಸುವವರಿಗೆ ಕೊಡುತ್ತಿಲ್ಲ. ಅಂದರೆ ಹಿಂದಿಗಿಂತ ಇಂಗ್ಲಿಷ್ ಹೆಚ್ಚು ಸಶಕ್ತವಾಗಿದೆ ಎಂಬುದನ್ನು ಹಿಂದಿ ಭಾಷಾ ವಲಯದ ರಾಜ್ಯಗಳ ಜನರೂ ಒಪ್ಪಿಕೊಂಡಿದ್ದಾರೆ.

ಎರಡನೆಯದಾಗಿ, ಸಾಂವಿಧಾನಿಕವಾಗಿ ಹಿಂದಿಯು ಒಕ್ಕೂಟ ಸರ್ಕಾರದ ಆಡಳಿತ ಭಾಷೆ. ಆದರೆ ಒಕ್ಕೂಟ ಸರ್ಕಾರವೂ ಹಿಂದಿಯನ್ನು ಕಲಿಯುವವರಿಗೆ ವಿಶೇಷ ಸ್ಕಾಲರ್ಶಿಪ್, ಕಲಿಸುವವರಿಗೆ ವಿಶೇಷ ಭತ್ಯೆ ಅಥವಾ ಉದ್ಯೋಗ ಖಾತರಿಯಂತಹ ಯೋಜನೆಗಳನ್ನು ರೂಪಿಸಿಲ್ಲ. ಅಂದರೆ ಹಿಂದಿಗೆ ವಿಶೇಷ ಪ್ರೋತ್ಸಾಹ ಕೊಟ್ಟು ಹಿಂದಿ ಪರಿಣತರನ್ನು ರೂಪಿಸಬೇಕಾದಷ್ಟು ಮಹತ್ವ ಇಲ್ಲ ಎನ್ನುವುದು ಸರ್ಕಾರಕ್ಕೂ ಗೊತ್ತಿದೆ. ಅಂದರೆ ಅನ್ನ ಗಳಿಕೆಯ ಭಾಷೆಯಾಗಿ ಕನ್ನಡಕ್ಕಿಂತ ಜಾಸ್ತಿ ಶಕ್ತಿ ಹಿಂದಿಗೆ ಇಲ್ಲ. ಆದರೆ ಕನ್ನಡಕ್ಕಿಂತ ಜಾಸ್ತಿ ವ್ಯಾಪ್ತಿ ಹಿಂದಿಗೆ ಇದೆ.

ಹಿಂದಿಯ ಪರವಾಗಿರುವ ಬಹುಮುಖ್ಯವಾದ ವಾದವೆಂದರೆ, ಇಂಗ್ಲಿಷ್ ಉನ್ನತ ಮಟ್ಟದ ವ್ಯವಹಾರಕ್ಕೆ ಸಾಕಾಗುತ್ತದೆ, ಆದರೆ ಸಾಮಾನ್ಯ ವ್ಯವಹಾರದ ಭಾಷೆಯಾಗಿ ಇಂಗ್ಲಿಷ್ಗೆ ಉತ್ತರ ಭಾರತದಲ್ಲಿ ಮಹತ್ವ ಇಲ್ಲ ಎನ್ನುವುದು. ಈ ವಾದ ಸರಿಯಾಗಿಯೇ ಇದೆ. ಐಎಎಸ್ ಅಧಿಕಾರಿ ವರ್ಗದ ಮಟ್ಟದಲ್ಲಿ, ಕಂಪನಿಯ ನೌಕರರ ಮಟ್ಟದಲ್ಲಿ ಇಂಗ್ಲಿಷ್ ನಡೆಯುತ್ತದೆ. ಆದರೆ ಉತ್ತರ ಭಾರತದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಕಾದರೆ, ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ವ್ಯಕ್ತಿ, ಹೋಟೆಲ್ ಮಾಣಿ ಆಗಬೇಕಾದರೆ ಹಿಂದಿಯನ್ನು ಮಾತನಾಡಲು ಬರಬೇಕಾಗುತ್ತದೆ. ಆದರೆ ಈ ಉದ್ಯೋಗಗಳ ಮೂಲಕ ಅನ್ನ ಸಂಪಾದಿಸುವವರು ಕರ್ನಾಟಕದಲ್ಲೇ ಅದನ್ನು ಮಾಡುತ್ತಾರೆ; ಲಖನೌ, ಜೈಪುರ, ದೆಹಲಿಗೆಲ್ಲ ಯಾಕೆ ಹೋಗುತ್ತಾರೆ?

ಕರ್ನಾಟಕದಲ್ಲಿ ವ್ಯವಹರಿಸಲು ಹಿಂದಿಯ ಅಗತ್ಯವೂ ಇಲ್ಲ, ಇಂಗ್ಲಿಷ್ನ ಅಗತ್ಯವೂ ಇಲ್ಲ. ಹೋಟೆಲ್ ಮಾಲೀಕರ ಬಳಿ ಮಾತಾಡಿದರೆ ಸಾಕು, ಕೆಲಸಕ್ಕೆ ಜನ ಸಿಗುತ್ತಿಲ್ಲ ಎನ್ನುವುದೇ ಅವರ ಮುಖ್ಯ ದೂರಾಗಿರುತ್ತದೆ. ಕರ್ನಾಟಕದ ಹೋಟೆಲ್ಗಳಲ್ಲೇ ಉದ್ಯೋಗ ಇರುವಾಗ ಹಿಂದಿಯನ್ನು ಕಲಿತು ಉತ್ತರ ಭಾರತಕ್ಕೆ ಹೋಗಿ ಹೋಟೆಲ್ ಮಾಣಿಯಾಗಿ ಸಾಧಿಸುವುದಾದರೂ ಏನಿದೆ? ಆದರೂ ಕರ್ನಾಟಕದಿಂದ ಉತ್ತರ ಭಾರತಕ್ಕೆ ಹೋಗುವ ವಲಸೆ ಕಾರ್ಮಿಕರಿಗೆ ಮೂರು ತಿಂಗಳ ‘ಸಂವಹನ ಹಿಂದಿ ಕಲಿಕೆ’ ಕೋರ್ಸುಗಳನ್ನು ಅಲ್ಲಿನ ರಾಜ್ಯ ಸರ್ಕಾರಗಳು ಮಾಡಬೇಕು. ಅದೇ ರೀತಿ, ಉತ್ತರ ಭಾರತದಿಂದ ಕರ್ನಾಟಕಕ್ಕೆ ಬರುವ ವಲಸೆ ಕಾರ್ಮಿಕರಿಗೆ ‘ಸಂವಹನ ಕನ್ನಡ ಕಲಿಕೆ’ಯ ಕೋರ್ಸನ್ನು ಕರ್ನಾಟಕ ಸರ್ಕಾರ ಮಾಡಬೇಕು. ಇನ್ನು ಉಳಿದಿರುವುದು ಜ್ಞಾನ ಗಳಿಕೆಯ ಸಾಧನವಾಗಿ ಹಿಂದಿಗೆ ಇರುವ ಮಹತ್ವ. ಜ್ಞಾನವನ್ನು ತಾನು ಮೂಲ ಭಾಷೆಯಲ್ಲೇ ಓದಿಕೊಂಡು ಗಳಿಸಿಕೊಳ್ಳಬೇಕು ಎನ್ನುವವನಿಗೆ ಕೂಡ, ಆಧುನಿಕ ಜ್ಞಾನ ಮೂಲಗಳು ಇಂಗ್ಲಿಷ್ನಲ್ಲಿವೆ, ಪುರಾತನ ಜ್ಞಾನ ಮೂಲಗಳು ಸಂಸ್ಕೃತದಲ್ಲಿವೆ, ಯುರೋಪಿನ ಪುರಾತನ ಜ್ಞಾನ ಮೂಲಗಳು ಲ್ಯಾಟಿನ್ ಭಾಷೆಯಲ್ಲಿವೆ. ಅಂದರೆ ಈ ನೆಲೆಯಲ್ಲೂ ಹಿಂದಿಗೆ ಪ್ರಮುಖ ಪಾತ್ರವೇನೂ ಇಲ್ಲ.

ಹಿಂದಿಯು ಸಂಗೀತಾತ್ಮಕ ಗುಣವಿರುವ ಒಂದು ಸುಂದರ ಭಾಷೆ. ಸ್ವ–ಇಚ್ಛೆಯಿಂದ ಹಿಂದಿ ಕಲಿಯಲು
ಬಯಸಿದವರಿಗೆ ಕಲಿಕೆಗೆ ಅವಕಾಶ ಇರಬೇಕು. ಹಿಂದಿ ಕಲಿಕೆಗೆ ವಿರೋಧ ಮಾಡಬೇಕಾದ ಯಾವ ಅಗತ್ಯವೂ ಇಲ್ಲ. ಆದರೆ ಹಿಂದಿ ಪ್ರತಿಪಾದನೆಯ ಹಿಂದಿರುವ, ‘ಭಾರತೀಯರೆಲ್ಲರನ್ನೂ ಹಿಂದಿಯ ಅಧೀನಕ್ಕೆ ಒಳಪಡಿಸ
ಬೇಕು’ ಎನ್ನುವ ಮನೋಧರ್ಮವನ್ನು ವಿರೋಧಿಸಬೇಕು ಮತ್ತು ಆ ವಿರೋಧವು ಭಾಷಾಂಧತೆಯಾಗದ ಹಾಗೆ ಎಚ್ಚರ ವಹಿಸಬೇಕು. ಉದಾಹರಣೆಗೆ, ಇಂಗ್ಲಿಷ್ನ ಪ್ರಬಲ ಪ್ರತಿಪಾದಕರಲ್ಲಿ ಕೆಲವರು ಸಂಸ್ಕೃತದ ಪದಗಳನ್ನೆಲ್ಲ ಕಿತ್ತು ಹಾಕಿದ ಕನ್ನಡವನ್ನು ರೂಪಿಸುವ ಪ್ರತಿಪಾದನೆ ನಡೆಸಿದ್ದಾರೆ. ವಾಸ್ತವದಲ್ಲಿ ಇದೆಲ್ಲ ಆಗುವುದಿಲ್ಲ. ‘ಪಿರಿದು’ ಎಂಬ ಒಂದು ಪದ ‘ಹಿರಿದು’ ಎಂದು ಸಾರ್ವತ್ರಿಕವಾಗಿ ರೂಪಾಂತರಗೊಳ್ಳಬೇಕಾದರೆ ಇನ್ನೂರು ವರ್ಷಗಳು ಬೇಕಾಗಿತ್ತು.

ಕನ್ನಡದಿಂದ ಸಂಸ್ಕೃತ ಪದಗಳನ್ನು ತೆಗೆಯುತ್ತೇವೆ, ಹಿಂದಿ ಪದಗಳನ್ನು ತೆಗೆಯುತ್ತೇವೆ ಎನ್ನುವುದೆಲ್ಲ ವಾಸ್ತವದಲ್ಲಿ ಕಾರ್ಯಸಾಧ್ಯವಾಗುವುದಿಲ್ಲ. ಹಿಂದಿಯ ಪ್ರತಿಪಾದಕರು ಸಂಸ್ಕೃತದ ಪ್ರತಿಪಾದಕರೂ ಆಗಿರುವುದರಿಂದ ಈ ರೀತಿಯ ಭಾಷಾಂಧತೆಗಳು ಹುಟ್ಟಿಕೊಂಡಿವೆ. ಆದರೆ ಸಂಸ್ಕೃತಕ್ಕೆ ಅದರದೇ ರಾಜಕೀಯ ಪ್ರಭುತ್ವದ ಭಾಷಾ ವಲಯವಿಲ್ಲ. ಮೂಲ ರೂಪದಲ್ಲಿ ಅದು ಸಂವಹನ ಭಾಷೆ
ಆಗಿಯೂ ಇಲ್ಲ. ಆದ್ದರಿಂದ ಸಂಸ್ಕೃತವನ್ನು ಹೇರಿಕೆ ಮಾಡಲು ಸಾಧ್ಯವಿಲ್ಲ. ಆದರೆ ಇತರ ಭಾರತೀಯ ಭಾಷೆ
ಗಳಲ್ಲಿ ಪದಗಳಾಗಿ, ವ್ಯಾಕರಣವಾಗಿ, ಛಂದಸ್ಸಾಗಿ ಸಂಸ್ಕೃತದ ಅಸ್ತಿತ್ವವಿದೆ. ಆದ್ದರಿಂದಲೇ ಗೋವಾ ವಿಮೋಚನಾ ಚಳವಳಿಯ ನಾಯಕ ಟಿ.ಬಿ. ಕುನ್ಹ, ಸಂಸ್ಕೃತವು ಭಾರತವನ್ನು ಒಗ್ಗೂಡಿಸುತ್ತದೆ ಎಂದಿದ್ದರು.

ಸಂಸ್ಕೃತದ ಪ್ರತಿಪಾದಕರು ಸಂಸ್ಕೃತವನ್ನು ಬೆಳೆಸುವುದೆಂದರೆ ಇತರ ಭಾರತೀಯ ಭಾಷೆಗಳನ್ನು ಸಬಲೀಕರಿಸುವುದೇ ಆಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಅಂತಹ ಇತರ ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆಯೇ ವಿನಾ ಕರ್ನಾಟಕದಲ್ಲಿ ಕನ್ನಡ ಮತ್ತು ಅದರ ಸಹ ಭಾಷೆಗಳ ಯಜಮಾನಿಕೆಗೆ ಪರ್ಯಾಯ ಅಲ್ಲ. ಇಂಗ್ಲಿಷ್ ಕೂಡ ಕರ್ನಾಟಕದಲ್ಲಿ ಕನ್ನಡ ಮತ್ತದರ ಸಹ ಭಾಷೆಗಳ ಯಜಮಾನಿಕೆಗೆ ಪರ್ಯಾಯವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.