ಕೃತಕ ಬುದ್ಧಿಮತ್ತೆ (ಎ.ಐ.) ತಂತ್ರಜ್ಞಾನದ ಬೆಳವಣಿಗೆಯ ಶರವೇಗವನ್ನು ಗಮನಿಸಿದರೆ ಹೊರಜಗತ್ತಿನ ಮೂವತ್ತು ವರ್ಷಗಳಲ್ಲಿ ಆಗುವಂತಹ ಬದಲಾವಣೆಗಳು ಈ ಕ್ಷೇತ್ರದಲ್ಲಿ ಮೂವತ್ತು ದಿನಗಳಲ್ಲಿ ಆಗುತ್ತವೆ ಅನ್ನಬಹುದು. ಕಳೆದ ಮೂವತ್ತು ದಿನಗಳು ಇದಕ್ಕೆ ಹೊರತಾಗಿರಲಿಲ್ಲ. ಈ ಕ್ಷೇತ್ರದ ಇತ್ತೀಚಿನ ಕೆಲವು ಮುಖ್ಯ ಬೆಳವಣಿಗೆಗಳ ದಿಕ್ಕನ್ನು ಅರಿಯುವ ಪ್ರಯತ್ನ ಮಾಡಿದರೆ, ಮುಂದಿನ ಕೆಲವು ವರ್ಷಗಳ ಎ.ಐ. ಬೆಳವಣಿಗೆ ಯಾವ ರೀತಿಯಲ್ಲಿರಲಿದೆ ಎಂದು ಊಹಿಸಬಹುದು.

ಮನುಷ್ಯರಂತೆಯೇ ಯೋಚಿಸುವ, ಭಾವನೆಗಳಿಗೆ ಸ್ಪಂದಿಸುವ ಹಾಗೂ ಬೌದ್ಧಿಕವಾದ ಯಾವುದೇ ಕೆಲಸಗಳನ್ನು ಮನುಷ್ಯರಿಗಿಂತಲೂ ಚೆನ್ನಾಗಿ ಮಾಡುವ ಶಕ್ತಿಯನ್ನು ಒಂದೆರಡು ವರ್ಷಗಳಲ್ಲಿ ಎ.ಐ. ಪಡೆಯಲಿದೆ; ಆ ಮೂಲಕ, ಎ.ಜಿ.ಐ. (ಆರ್ಟಿಫಿಷಿಯಲ್ ಜನರಲ್ ಇಂಟೆಲಿಜನ್ಸ್) ಆಗಿ ರೂಪಾಂತರ ಹೊಂದಲಿದೆ ಎನ್ನುವ ಮಾತು ಈ ವಲಯದಲ್ಲಿತ್ತು. ಅಂತಹದೊಂದು ಜ್ಞಾನ ಸ್ಫೋಟದ ಸಾಧ್ಯತೆಗೆ ಜಗತ್ತಿನ್ನೂ ಸಿದ್ಧಗೊಂಡಿಲ್ಲ ಎನ್ನುವ ಆತಂಕವೂ ಎ.ಐ. ಕ್ಷೇತ್ರದಲ್ಲಿತ್ತು. ಆದರೆ, ಈಗ ಎ.ಜಿ.ಐ. ಸಾಧ್ಯತೆ ಸಾಕಾರಗೊಳ್ಳಲು ಇನ್ನೂ ಐದರಿಂದ ಹತ್ತು ವರ್ಷಗಳಾದರೂ ಬೇಕು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಎ.ಐ. ತಂತ್ರಜ್ಞಾನದ ವಿಷಯದಲ್ಲಿ ‘ಆ್ಯಪಲ್’ ಸಂಸ್ಥೆಯ ಹೂಡಿಕೆ ಕಡಿಮೆ. ಈ ಕಾರಣಕ್ಕೆ ಅದು ಬಹಳಷ್ಟು ಟೀಕೆಗೂ ಒಳಗಾಗಿದೆ. ಏನೇ ಮಾಡಿದರೂ ಜಗತ್ತನ್ನು ಅಚ್ಚರಿಗೆ ಕೆಡಹುವ ಆ್ಯಪಲ್, ಎ.ಐ. ಮಾದರಿಗಳ ಕುರಿತ ವರದಿಯೊಂದನ್ನು ಇತ್ತೀಚೆಗೆ ಹೊರತಂದಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿರುವ ‘ಒಪನ್ ಎ.ಐ.’, ‘ಅಂತ್ರೋಪಿಕ್’ ಮತ್ತು ಚೀನಾದ ‘ಡೀಪ್ಸೀಕ್’ನ ದೊಡ್ಡ ತಾರ್ಕಿಕ ಮಾದರಿಗಳನ್ನು (ಲಾರ್ಜ್ ರೀಸನಿಂಗ್ ಮಾಡೆಲ್ಸ್– ಮನುಷ್ಯರು ಒಂದು ಸಮಸ್ಯೆಯನ್ನು ಕ್ರಮಬದ್ಧವಾಗಿ ಬಗೆಹರಿಸುವ ರೀತಿಯಲ್ಲೇ ಯೋಚಿಸುವ ನುಡಿ ಮಾದರಿ ಅನ್ನಬಹುದು) ಎತ್ತಿಕೊಂಡು, ಅವುಗಳಿಗೆ ಕಷ್ಟಕರವಾದ ಸಮಸ್ಯೆಗಳನ್ನು ಬಿಡಿಸುವ ಕೆಲಸವನ್ನು ಆ್ಯಪಲ್ ಸಂಸ್ಥೆಯ ಸಂಶೋಧಕರು ಕೊಟ್ಟರು. ಆದರೆ, ಒಂದು ಹಂತದ ಸಂಕೀರ್ಣ ಸ್ಥಿತಿ ದಾಟಿದ ಮೇಲೆ ಎಲ್ಲ ಎ.ಐ. ಮಾದರಿಗಳು ಸೋತು ಕೈಚೆಲ್ಲಿದವು. ಹೇಳಿಕೊಟ್ಟಿದ್ದನ್ನು ಹಾಗೂ ನೆನಪಿನಲ್ಲಿ ಇಟ್ಟುಕೊಂಡಿದ್ದನ್ನು ಮಾತ್ರ ಎ.ಐ. ಮಾದರಿಗಳು ಉತ್ತರಿಸಬಲ್ಲವು; ತಾವಾಗಿಯೇ ಯೋಚಿಸುವ ಸಂದರ್ಭ ಬಂದಾಗ ಅವು ಸೋಲುತ್ತವೆ ಎಂದು ಈ ಸಂಶೋಧಕರು ವಾದಿಸಿದರು. ‘ಆಳವಾಗಿ ಯೋಚಿಸಬಲ್ಲವು ಅನ್ನುವ ಭ್ರಮೆಯನ್ನು ಎ.ಐ. ಮಾದರಿಗಳು ನಮಗೆ ಹುಟ್ಟುಹಾಕಿವೆ’ ಎಂದು ಆ್ಯಪಲ್ ವರದಿ ಹೇಳಿದೆ. ಈ ವರದಿ, ತಮ್ಮ ಬಳಿ ಅಗಾಧವಾದ ವಿಶ್ಲೇಷಣಾ ಶಕ್ತಿಯಿದ್ದಾಗಲೂ ಎ.ಐ. ಮಾದರಿಗಳು ಸೋತಿರುವುದನ್ನು ನೋಡಿದರೆ, ಎ.ಜಿ.ಐ. ಸಾಕಾರಗೊಳ್ಳುವ ಕಾಲ ದೂರವಿದೆ ಎನ್ನುವ ವಿಶ್ಲೇಷಣೆಗೆ ಕಾರಣವಾಗಿದೆ.

ಸಿಲಿಕಾನ್ ವ್ಯಾಲಿಯಲ್ಲಿ ಎ.ಐ. ಕುರಿತ ಪಾಡ್ಕಾಸ್ಟ್ಗಳ (ಆಡಿಯೊ ರೂಪದಲ್ಲಿರುವ ಮಾತುಕತೆ) ಮೂಲಕ ಪ್ರಸಿದ್ಧರಾಗಿರುವ ಭಾರತ ಮೂಲದ ದ್ವಾರಕೇಶ್ ಪಟೇಲ್ ಕೂಡ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಪಾಡ್ಕಾಸ್ಟ್ಗಳ ನಿರ್ಮಾಣದ ಹಂತದಲ್ಲಿ ಎ.ಐ. ಬಳಸಲು ಮಾಡಿದ ಪ್ರಯತ್ನಗಳ ಕುರಿತು ಬರೆದಿರುವ ಅವರ ಅಭಿಪ್ರಾಯ ಹೀಗಿದೆ: ‘ಮನುಷ್ಯರಂತೆ ನಿರಂತರವಾಗಿ ತಾವೇ ಕಲಿಯುವ ಹಾಗೂ ತಪ್ಪು ತಿದ್ದಿಕೊಳ್ಳುವ ಗುಣ ಎ.ಐ. ಮಾದರಿಗಳಿಗಿಲ್ಲ. ಅವುಗಳಿಗೆ ಯಾವುದೇ ವಿಷಯದ ಬಗ್ಗೆ ಒಂದು ಸಮಗ್ರ ನೋಟ ಬೆಳೆಸಿಕೊಳ್ಳುವ ಗುಣವಿಲ್ಲ. ಚುಟುಕಾದ ಕೆಲಸಗಳನ್ನು ಚುರುಕಾಗಿ ಮಾಡಲು ಸಹಾಯ ನೀಡುವ ಮಟ್ಟಿಗೆ ಅವು ಸಮರ್ಥವಾಗಿದ್ದರೂ, ಮನುಷ್ಯರಂತೆ ಒಂದಿಡೀ ಸಮಸ್ಯೆಯನ್ನು ಆಮೂಲಾಗ್ರವಾಗಿ ಅರ್ಥೈಸಿಕೊಂಡು ಪರಿಹಾರ ಕಲ್ಪಿಸುವ ಮಟ್ಟಿಗೆ ಅವು ಇನ್ನೂ ಬೆಳೆದಿಲ್ಲ. ಆ ಹಂತವನ್ನು ಮುಟ್ಟಲು ಇನ್ನೂ ಹತ್ತು ವರ್ಷವಾದರೂ ಬೇಕು’. ಆ್ಯಪಲ್ ವರದಿಯ ಜೊತೆಗೆ ದ್ವಾರಕೇಶ್ ಪಟೇಲ್ ಅವರ ವಿಶ್ಲೇಷಣೆಯೂ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಎ.ಜಿ.ಐ. ಸಾಕಾರಗೊಳ್ಳುವ ದಿನ ದೂರದಲ್ಲಿದ್ದರೂ ಈಗಾಗಲೇ ಎ.ಐ. ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ ಕಡಿಮೆಯದೇನಲ್ಲ. ಆರಂಭಿಕ ಹಂತದಲ್ಲಿನ ವೃತ್ತಿಪರ ಕೆಲಸಗಳನ್ನು (ಎಂಟ್ರಿ ಲೆವೆಲ್ ವೈಟ್ ಕಾಲರ್ ಜಾಬ್ಸ್) ಸಮರ್ಥವಾಗಿ ನಿಭಾಯಿಸುವ ಶಕ್ತಿ ಪಡೆದಿರುವುದರಿಂದ, ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಆರಂಭಿಕ ಹಂತದ ಶೇ 50ರಷ್ಟು ವೃತ್ತಿಪರ ಕೆಲಸಗಳನ್ನು ಎ.ಐ. ಕಸಿದುಕೊಳ್ಳಲಿದೆ. ಇದರಿಂದಾಗಿ, ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ 20ಕ್ಕೆ ಮುಟ್ಟಬಹುದು ಎಂದು ಎ.ಐ. ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲೊಂದಾದ ‘ಅಂತ್ರೋಪಿಕ್’ ಮುಖ್ಯಸ್ಥ ಡ್ಯಾರಿಯೋ ಅಮೋಡೈ ಎಚ್ಚರಿಸಿದ್ದಾರೆ. ಈ ಆತಂಕಕ್ಕೆ ದನಿಗೂಡಿಸಿರುವ ‘ಪ್ಯಾಲೆಂಟಿರ್’ ಸಂಸ್ಥೆಯ ಮುಖ್ಯಸ್ಥ ಅಲೆಕ್ಸ್ ಕಾರ್ಪ್, ‘ಎ.ಐ. ತಂತ್ರಜ್ಞಾನವನ್ನು ಲೋಕದ ಹಿತಕ್ಕೆ ಬಳಸುವಂತೆ ಮಾಡುವುದು ಅತ್ಯಂತ ಶ್ರಮದ ಕೆಲಸ. ಅದನ್ನು ಮಾಡದೇ ಹೋದಲ್ಲಿ ಎದುರಾಗುವ ಸಾಮಾಜಿಕ ತಲ್ಲಣಗಳು ಊಹಿಸಲಾಗದ ಮಟ್ಟದಲ್ಲಿರಲಿವೆ’ ಎಂದಿದ್ದಾರೆ. ಎ.ಐ. ಬೆಳವಣಿಗೆ ಮತ್ತು ಪರಿಣಾಮಗಳ ಬಗ್ಗೆ ದೇಶದ ರಾಜಕಾರಣ ಚರ್ಚಿಸುವ ಹೊತ್ತು ಬಂದಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಹೇಳಿದ್ದಾರೆ.

ಎ.ಐ. ಬೆಳವಣಿಗೆ ಕುರಿತ ಚರ್ಚೆಗಳಿಗೆ ಹಲವು ಆಯಾಮಗಳಿವೆ. ಎ.ಐ. ತಂತ್ರಜ್ಞಾನದ ಸಾಧ್ಯತೆಗಳಿಗೆ ಆಕಾಶವೇ ಮಿತಿ. ಹಾಗಾಗಿ, ಆ ತಂತ್ರಜ್ಞಾನವನ್ನು ಮನುಕುಲದ ಒಳಿತಿನ ಸಾಧನವಾಗಿಸಿಕೊಳ್ಳಬೇಕು. ಅದಕ್ಕೊಂದು ಜಾಗತಿಕ ಸಮನ್ವಯ ಬೇಕು. ಎ.ಐ. ಬೆಳವಣಿಗೆಯನ್ನು ಸರಿದಿಕ್ಕಿನಲ್ಲಿ ನಡೆಸಲು ಸರಿಯಾದ ನೀತಿನಿಯಮಗಳು ಬೇಕು ಅನ್ನುವುದು ಚರ್ಚೆಯ ಒಂದು ಆಯಾಮ. ಆರ್ಥಿಕತೆ ಮತ್ತು ಉದ್ಯೋಗದ ಮಾರುಕಟ್ಟೆಯ ಮೇಲೆ ಅದು ಉಂಟು ಮಾಡುವ ತೀವ್ರ ಮತ್ತು ವೇಗದ ಪರಿಣಾಮಗಳನ್ನು ದೊಡ್ಡ ಮಟ್ಟದ ಸಾಮಾಜಿಕ ತಲ್ಲಣಗಳಿಲ್ಲದೆ ಅರಗಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಚರ್ಚೆಯೂ ವ್ಯಾಪಕವಾಗಿ ನಡೆಯುತ್ತಿದೆ. ಈ ಚರ್ಚೆ, ‘ಸಾರ್ವತ್ರಿಕ ಮೂಲ ಆದಾಯ’ (ಯುಬಿಐ – ಯೂನಿವರ್ಸಲ್ ಬೇಸಿಕ್ ಇನ್ಕಂ) ಎನ್ನುವ ವಿಷಯದತ್ತ ತಿರುಗುತ್ತಿದೆ. ಎ.ಐ. ಕಾರಣದಿಂದ ಸೃಷ್ಟಿಯಾಗುವ ಹೆಚ್ಚಿನ ಆರ್ಥಿಕತೆಯ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಬೇಕು ಹಾಗೂ ಅದರಿಂದ ಸಂಗ್ರಹವಾಗುವ ನಿಧಿಯನ್ನು ಎ.ಐ. ಕಾರಣದಿಂದ ಕೆಲಸ ಕಳೆದುಕೊಳ್ಳುವವರಿಗೆ ನೀಡುವ ಪರಿಕಲ್ಪನೆ ಇದಾಗಿದೆ.

ನಮ್ಮ ದೇಶದಲ್ಲಿ ‘ಗ್ಯಾರಂಟಿ ಯೋಜನೆ’ಗಳು ಜನರಿಗೆ ಒಳಿತು ಮಾಡಿವೆಯೇ ಇಲ್ಲವೇ ಅವರನ್ನು ಸೋಮಾರಿಗಳನ್ನಾಗಿಸುತ್ತಿವೆಯೇ ಅನ್ನುವ ಚರ್ಚೆ ನಡೆಯುತ್ತಿರುವಂತೆ, ಅಮೆರಿಕದಲ್ಲಿ ಯುಬಿಐ ಕುರಿತ ಪರ– ವಿರೋಧದ ಚರ್ಚೆ ಶುರುವಾಗಿದೆ. ಅಮೆರಿಕ ಸರ್ಕಾರ ಮುಂದೊಂದು ದಿನ ‘ಯುಬಿಐ ಭಾಗ್ಯ’ ಯೋಜನೆ ಆರಂಭಿಸಿದರೆ ಅಚ್ಚರಿಯೇನಿಲ್ಲ. ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಅಥವಾ ದೇಶದ ಕೈಯಲ್ಲಿ ಅಧಿಕಾರ ಕೇಂದ್ರಿಕೃತಗೊಂಡಾಗ, ಅಲ್ಲಿ ಆರ್ಥಿಕ–ಸಾಮಾಜಿಕ ತಾರತಮ್ಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಇತಿಹಾಸದುದ್ದಕ್ಕೂ ನಿದರ್ಶನಗಳಿವೆ. ಎ.ಐ. ಪೈಪೋಟಿಯಲ್ಲಿ ಅಧಿಕಾರ ಮತ್ತು ನಿಯಂತ್ರಣ ಕೆಲವೇ ಕೆಲವು ಖಾಸಗಿ ಸಂಸ್ಥೆಗಳ ಹಿಡಿತಕ್ಕೆ ಸಿಲುಕುವ ಮುನ್ನ, ಎ.ಐ. ಏಕಸ್ವಾಮ್ಯವನ್ನು ತಡೆಯಲು ಬೇಕಾದ ಸಾಂಸ್ಥಿಕ ಏರ್ಪಾಡುಗಳನ್ನು ಕಟ್ಟಿಕೊಳ್ಳುವತ್ತ ಸರ್ಕಾರಗಳು ಗಮನಹರಿಸಬೇಕು. ಇದಾಗದೆ ಹೋದರೆ, ತೆರಿಗೆ ವಿಧಿಸುವುದರಲ್ಲಾಗಲೀ ಅಥವಾ ಮರುಹಂಚಿಕೆ ಮಾಡುವುದರಲ್ಲಾಗಲೀ ಏನೂ ಮಾಡಲಾಗದ ಸ್ಥಿತಿ ಎದುರಾಗಬಹುದು.

ಎ.ಐ. ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯ ಮೂಲಸ್ವರೂಪವೇ ಬದಲಾಗುವ ದಿನಗಳು ದೂರವಿಲ್ಲ. ಎ.ಐ. ಯಾವ ರೀತಿಯ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಉತ್ತರ ನಿಚ್ಚಳಗೊಳ್ಳುವ ಮುಂದಿನ ಒಂದು ದಶಕ ಬಹಳಷ್ಟು ಅನಿಶ್ಚಿತತೆಯಿಂದ ಕೂಡಿರಲಿದೆ. ಆ ವೇಳೆಗೆ ಎ.ಐ. ಮನುಷ್ಯರಂತೆ ಯೋಚಿಸುವ ಮಟ್ಟ ಮುಟ್ಟದಿರಬಹುದು. ಆದರೆ, ಎ.ಐ. ತಂತ್ರಜ್ಞಾನ ಎ.ಜಿ.ಐ. ಹಂತಕ್ಕೆ ತಲಪುವ ಸಂದರ್ಭದಲ್ಲಿ ಆ ಹೊಸ ಜಗತ್ತನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನಾವು ಈಗಿನಿಂದಲೇ ಯೋಚಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.