ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ |ಅತಿರೇಕದ ಅಭಿವೃದ್ಧಿ: ಅನಾಹುತಕ್ಕೆ ಬುನಾದಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಶರಾವತಿ ನದಿಗೆ ಮಾತ್ರವಲ್ಲ ಅಭಯಾರಣ್ಯಕ್ಕೂ ಕುತ್ತು
Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕರ್ನಾಟಕದ ಕೆಲವು ಜಿಲ್ಲೆಗಳು, ಅದರಲ್ಲೂ ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳು ಸರಾಸರಿ ಮಳೆಗಿಂತ ಹೆಚ್ಚು ಮಳೆಯನ್ನು ಕಾಣುತ್ತಿದ್ದರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಪ್ರದೇಶಗಳು ಮಳೆ ಕೊರತೆಯಿಂದ ನರಳುತ್ತಿವೆ. ಮಲೆನಾಡಿನಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗುತ್ತಿದೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 2018ರಲ್ಲಿ 7,000 ಪ್ರದೇಶಗಳಲ್ಲಿ ಗುಡ್ಡ ಕುಸಿತವಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ಹವಾಗುಣ ಬದಲಾವಣೆಯ ವಿದ್ಯಮಾನದಿಂದಾಗಿ, ತಿಂಗಳಲ್ಲಿ ಸುರಿಯುವ ಮಳೆ ವಾರದಲ್ಲೇ ಸುರಿಯುತ್ತಿದೆ. ಇಂತಹ ವಿಪರೀತದ ವಿದ್ಯಮಾನವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಣ್ಣು ತೆರೆಸಿದಂತೆ ತೋರುತ್ತದೆ. ಪಶ್ಚಿಮಘಟ್ಟಗಳ 56 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಕೇಂದ್ರವು ಸೂಕ್ಷ್ಮ ಎಂದು ಗುರುತಿಸಿ, ಆರನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ರಾಜ್ಯ ಅರಣ್ಯ ಸಚಿವರು, 2015ರ ನಂತರದಲ್ಲಿ ಆದ ಅರಣ್ಯ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಹೇಳಿದ್ದು ವರದಿಯಾಗಿದೆ.

ಕೇಂದ್ರ ಹಾಗೂ ರಾಜ್ಯದ ಈಗಿನ ಸರ್ಕಾರಗಳ ಧೋರಣೆಗಳು ಮೇಲ್ನೋಟಕ್ಕೆ ಪರಿಸರಸ್ನೇಹಿಯಾಗಿ ತೋರುತ್ತವೆಯಾದರೂ ಅಭಿವೃದ್ಧಿ ಯೋಜನೆಗಳ ಪಟ್ಟಿ ನೋಡಿದರೆ, ಪರಿಸರನಾಶಕ್ಕೆ ಕಾರಣವಾಗುವ ಯೋಜನೆಗಳೇ ಮುನ್ನೆಲೆಗೆ ಬಂದಿರುವುದು ತಿಳಿಯುತ್ತದೆ. ಇದಕ್ಕೆ ಒಂದು ತಾಜಾ ಉದಾಹರಣೆಯೆಂದರೆ, ಶರಾವತಿ ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ.

ಅರಣ್ಯ ಸಂರಕ್ಷಣಾ ಕಾಯ್ದೆ– 1980ರ ಅಡಿ, ಹಿಂದಿನ ಹದಿನೈದು ವರ್ಷಗಳಲ್ಲಿ 3 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಕೇಂದ್ರ ಅರಣ್ಯ ಸಚಿವರು ಲೋಕಸಭೆಯಲ್ಲಿ ಲಿಖಿತ ಹೇಳಿಕೆಯನ್ನೇ ನೀಡಿದ್ದಾರೆ. ಗಣಿಗಾರಿಕೆ, ಹೆದ್ದಾರಿ ವಿಸ್ತರಣೆ, ನೀರಾವರಿ, ವಿದ್ಯುತ್ ಪ್ರಸರಣಾ ಮಾರ್ಗ, ಭದ್ರತೆ, ಜಲವಿದ್ಯುತ್ ಯೋಜನೆ, ರೈಲು ಮಾರ್ಗ, ಅಣುವಿದ್ಯುತ್ ಸ್ಥಾವರ ಹಾಗೂ ಪವನ ವಿದ್ಯುತ್‌ ಉತ್ಪಾದನಾ ಯಂತ್ರ ಅಳವಡಿಕೆಗಾಗಿ ಈ ಪ್ರದೇಶ ಬಳಕೆಯಾಗಿದೆ ಎಂಬುದು ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ.

ಕರ್ನಾಟಕದ ವಿದ್ಯುತ್ ಕೊರತೆಯನ್ನು ನೀಗಿಸಲು ಸುಮಾರು ₹ 8 ಸಾವಿರ ಕೋಟಿ ಅಂದಾಜುವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶದಿಂದ ವಿಸ್ತೃತ ಯೋಜನಾ ವರದಿಯನ್ನು ದಾಖಲೆ ಅವಧಿಯಲ್ಲಿ ತಯಾರಿಸಲಾಗಿದೆ. ಇದಕ್ಕೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮೋದನೆಯನ್ನೂ ನೀಡಿದೆ. ಸುಮಾರು 500ಕ್ಕೂ ಹೆಚ್ಚು ಸಸ್ಯಪ್ರಭೇದಗಳು ಹಾಗೂ 330ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿರುವ ಹಾಗೂ 930 ಚದರ ಕಿ.ಮೀ. ವ್ಯಾಪ್ತಿಯ ಶರಾವತಿ ಸಿಂಗಳೀಕ ಅಭಯಾರಣ್ಯದ ಅತಿಸೂಕ್ಷ್ಮ ಹಾಗೂ ಪ್ರಪಂಚದಲ್ಲೇ ಅತ್ಯಪರೂಪದ ಸಿಂಗಳೀಕ, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಪಕ್ಷಿಗಳ ಆವಾಸಸ್ಥಾನವನ್ನು ಯೋಜನೆಗೆ ಬಳಸಿಕೊಳ್ಳಲು ಕೆಪಿಸಿಎಲ್ ಮುಂದಾಗಿದೆ.

ಜೋಗ ಸಮೀಪದ ತಲಕಳಲೆ ಅಣೆಕಟ್ಟೆಯಿಂದ ಒಂದು ಬಾರಿ ವಿದ್ಯುತ್ ಉತ್ಪಾದನೆಯಾದ ನಂತರ ಆ ನೀರು ಆರು ಕಿ.ಮೀ. ದೂರದಲ್ಲಿರುವ ಹಾಗೂ 550 ಮೀಟರ್ ಆಳದಲ್ಲಿರುವ ಗೇರುಸೊಪ್ಪ ಅಣೆಕಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಆ ನೀರಿನಿಂದ ಮತ್ತೆ 240 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡಿದ ನೀರು ಮುಂದೆ ನದಿಯಲ್ಲಿ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ 550 ಮೀಟರ್ ಮೇಲೆತ್ತಿ ತಲಕಳಲೆ ಅಣೆಕಟ್ಟಿಗೆ ತರುವುದು, ಆ ನೀರಿನಿಂದ ಮತ್ತೆ 2,000 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಗೇರುಸೊಪ್ಪ ಅಣೆಕಟ್ಟೆಯಿಂದ ತಲಕಳಲೆ ಅಣೆಕಟ್ಟೆಗೆ ನೀರನ್ನು ಎತ್ತಿ ತರಲು 2,500 ಮೆಗಾವಾಟ್‌ ವಿದ್ಯುತ್ ಬೇಕಾಗುತ್ತದೆ. ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ (ರಾತ್ರಿ ಹತ್ತು ಗಂಟೆಯ ನಂತರ), ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಬಳಸಿಕೊಂಡು ನೀರನ್ನು ಮೇಲೆ ಎತ್ತಿ ತರಲಾಗುವುದು, ವಿದ್ಯುತ್ ಉತ್ಪಾದಿಸಿ, ಅಧಿಕವಾಗಿ ವಿದ್ಯುತ್ ಬೇಡಿಕೆ ಇರುವ ಬೆಳಗಿನ ಹಾಗೂ ಸಂಜೆಯ ಸಮಯದಲ್ಲಿ ಗ್ರಾಹಕರಿಗೆ ನೀಡಲಾಗುವುದು ಎಂದು ಕೆಪಿಸಿಎಲ್ ಹೇಳುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಅಡಿಯಲ್ಲಿ, ಸಿಂಗಳೀಕಗಳಿಗೆ ಅತಿಹೆಚ್ಚು ಭದ್ರತೆ ನೀಡಲಾಗಿದೆ. ಶರಾವತಿ ಸಿಂಗಳೀಕ ಅಭಯಾರಣ್ಯ ಎಂದು ಘೋಷಣೆಯಾದ ಹನ್ನೊಂದು ತಿಂಗಳಲ್ಲೇ ಅಂದರೆ, 2020ರ ಮೇ ತಿಂಗಳಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಯು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪೂರ್ವಭಾವಿ ಪರೀಕ್ಷೆ ನಡೆಸಲು, ಸೂಕ್ಷ್ಮ ಪ್ರದೇಶದಲ್ಲಿ ಹನ್ನೆರಡು ಬೋರ್‌ಹೋಲ್ ಕೊರೆಯಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬೇಕು. ಇಡೀ ಪ್ರಪಂಚದಲ್ಲಿ ವಯಸ್ಕ ಸಿಂಗಳೀಕಗಳ ಸಂಖ್ಯೆ ಬರೀ 2,500. ಅಂದರೆ, ಭಾರತದ ಒಂದು ಗ್ರಾಮದಲ್ಲಿರುವ ಸರಾಸರಿ ಜನಸಂಖ್ಯೆಗೆ ಇದು ಸಮ. 6,40,867 ಗ್ರಾಮಗಳಿರುವ ಹಾಗೂ ಪ್ರತಿ ಚದರ ಕಿ.ಮೀ. ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಅಳಿವಿನಂಚಿನ ಪ್ರಾಣಿ, ಪಕ್ಷಿಗಳಿಗೆ ಉಳಿಗಾಲ ಇಲ್ಲ ಎಂದು ದೂರದೃಷ್ಟಿ ಕೊರತೆಯ ಈ ಯೋಜನೆ ಎತ್ತಿ ತೋರಿಸುತ್ತಿದೆ.

2017ರಲ್ಲಿ ಮುನ್ನೆಲೆಗೆ ಬಂದಾಗ ಈ ಯೋಜನೆಯ ಅಂದಾಜುವೆಚ್ಚ ₹ 4,862 ಕೋಟಿ ಆಗಿತ್ತು. ಯೋಜನೆಯ ಈಗಿನ ಅಂದಾಜುವೆಚ್ಚ ₹ 8,000 ಕೋಟಿ. ಅಭಯಾರಣ್ಯದ ಸೂಕ್ಷ್ಮ ಪ್ರದೇಶದ 877 ಎಕರೆ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಲ್ಲಿ 153 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಸುರಂಗಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲಾಗುವುದು ಎಂದು ಹೇಳಲಾಗಿತ್ತು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಸಾಗಣೆಗಾಗಿ ಎಷ್ಟು ಮರಗಳನ್ನು ತೆರವುಗೊಳಿಸಬೇಕು ಅಥವಾ ಎಷ್ಟು ಅರಣ್ಯ ಪ್ರದೇಶ ನಾಶವಾಗಲಿದೆ ಎಂಬುದು ಯೋಜನಾಪೂರ್ವ ವರದಿಯಲ್ಲಿ ಉಲ್ಲೇಖವಾಗಿಲ್ಲ. ಯೋಜನೆಯ ಇನ್ನೊಂದು ದೊಡ್ಡ ಅಪಾಯವೆಂದರೆ, ಗುಡ್ಡಗಳನ್ನು ಯಂತ್ರಗಳ ಮೂಲಕ ಕೊರೆದು ನೆಲದಾಳದಲ್ಲಿ ಸ್ಥಾಪಿಸಲಾಗುವ ಯೋಜನೆಯಿಂದಾಗಿ ಆ ಪ್ರದೇಶದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡ್ಡ ಕುಸಿತವಾದಲ್ಲಿ, ಹೂಳು ಗೇರುಸೊಪ್ಪ ಅಣೆಕಟ್ಟು ಸೇರುತ್ತದೆ.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದು ನಿಜವಾದರೂ ಬೇರೆ ಬೇರೆ ಕಾರಣಗಳಿಂದಾಗಿ ಈ ಯೋಜನೆ ಜಾರಿ ಸಾಧುವಲ್ಲ ಎಂಬುದು ವಿದ್ಯುತ್ ಕ್ಷೇತ್ರದ ಪರಿಣತರ ಅಭಿಪ್ರಾಯ. ಆರ್ಥಿಕವಾಗಿಯೂ ಯೋಜನೆ ಲಾಭದಾಯಕವಲ್ಲ. ಶರಾವತಿ ನದಿಯನ್ನೇ ನಂಬಿಕೊಂಡಿರುವ ಸಾವಿರಾರು ಬೆಸ್ತರ ಕುಟುಂಬಗಳು ನದಿ ಹರಿವಿನ ಕೊರತೆಯಿಂದ ತೊಂದರೆಗೆ ಒಳಗಾಗಲಿವೆ. ಶರಾವತಿ ನದಿ ಅಳಿವೆಯಲ್ಲಿ ಸಂತಾನೋತ್ಪತ್ತಿ ಮಾಡುವ ಜಲಚರಗಳ ಬದುಕಿಗೂ ಈ ಯೋಜನೆ ಅಡ್ಡಿಯಾಗಲಿದೆ.

ಬರೀ 132 ಕಿ.ಮೀ. ಉದ್ದವಿರುವ ಶರಾವತಿ ನದಿಯು ಅಣೆಕಟ್ಟು ಮತ್ತು ವಿದ್ಯುತ್ ಉತ್ಪಾದನೆಗಾಗಿ ಅತಿಹೆಚ್ಚು ಶೋಷಣೆಗೊಳಗಾದ ನದಿಯಾಗಿದೆ. ದೂರದೃಷ್ಟಿಯಿಲ್ಲದ ಈ ರೀತಿಯ ಅತಿರೇಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಹವಾಗುಣ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಮುಂದಡಿ ಇಡುವುದು ವಿವೇಕಯುತ ಎಂದು ಅನ್ನಿಸಿಕೊಳ್ಳುವುದಿಲ್ಲ.

ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸುವುದು ಅಗತ್ಯ. ಆದರೆ ಅದಕ್ಕೆ ಪರ್ಯಾಯ ಮಾರ್ಗಗಳು ಬೇಕಾದಷ್ಟು ಇವೆ. ಆ ದಿಸೆಯಲ್ಲಿ ಸರ್ಕಾರ ಯೋಚಿಸಬೇಕು. ತಜ್ಞರ ಜೊತೆ ಸಮಾಲೋಚಿಸಬೇಕು. ಪರಿಸರಕ್ಕೆ ಬಾಧಕ ಆಗದಂತಹ ಮರ್ಗೋಪಾಯಗಳನ್ನು ಶೋಧಿಸಬೇಕು. ಕೆಪಿಸಿಎಲ್ ಇನ್ನೂ ಹೆಚ್ಚು ಹೆಚ್ಚು ಪರಿಸರಸ್ನೇಹಿಯಾಗಿ ಬದಲಾಗಬೇಕಾದ ಕಾಲ ಬಂದಿದೆ. ಕೆಪಿಸಿಎಲ್‌ಗೆ ಸೇರಿದ ಸಾವಿರಾರು ಎಕರೆ ಪ್ರದೇಶವು ಶರಾವತಿ ಹಿನ್ನೀರಿನ ಪಕ್ಕದಲ್ಲೇ ಇದೆ. ಈ ಪ್ರದೇಶದಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಇರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಈ ಬಗ್ಗೆ ಸರ್ಕಾರ ಚಿಂತಿಸಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT