ಸಾರ್ವಜನಿಕ ಶಿಕ್ಷಣ ರಾಷ್ಟ್ರದ ಅಭಿವೃದ್ಧಿಗೆ ಬುನಾದಿ. ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಬದಲಾವಣೆಯ ತಳಹದಿಗೆ ಗುಣಮಟ್ಟದ ಶಿಕ್ಷಣ ಅಗತ್ಯ ಎಂಬುದನ್ನು ಜಗತ್ತಿನ ಹಲವು ರಾಷ್ಟ್ರಗಳು ನಿರೂಪಿಸಿವೆ. ಇದನ್ನರಿತ ನಮ್ಮ ಸಂವಿಧಾನ ರಚನಕಾರರು ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒಂದು ಕಾಲಮಿತಿ ಅವಕಾಶವನ್ನಾಗಿ ರಾಜ್ಯ ನಿರ್ದೇಶಕ ತತ್ತ್ವಗಳಲ್ಲಿ ಕಲ್ಪಿಸಿದ್ದರು. ಸಂವಿಧಾನದ ಆಶಯದಂತೆ ಎಲ್ಲ ಮಕ್ಕಳಿಗೆ ಸಂವಿಧಾನ ಜಾರಿಯಾದ ಹತ್ತು ವರ್ಷಗಳಲ್ಲಿ, ಅಂದರೆ 1960ರೊಳಗೆ ಶಿಕ್ಷಣ ಲಭಿಸಬೇಕಿತ್ತು. ಅದು ಸಾಧ್ಯವಾಗಲಿಲ್ಲ.

ಸಂವಿಧಾನದ ಆಶಯವನ್ನು ಈಡೇರಿಸುವಲ್ಲಿ ನಿರೀಕ್ಷಿತ ಸಾಧನೆಯಾಗದ ಕಾರಣಕ್ಕೆ ಶಿಕ್ಷಣ ಕ್ಷೇತ್ರದ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ವರದಿ ನೀಡುವಂತೆ 1964ರಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಆಯೋಗವನ್ನು ನೇಮಿಸಿತು. ಕೊಥಾರಿ ಆಯೋಗವೆಂದೇ ಹೆಸರಾಗಿರುವ ಆ ಆಯೋಗ, ಶಿಕ್ಷಣ ವ್ಯವಸ್ಥೆಯ ಎಲ್ಲ ಕ್ಷೇತ್ರಗಳನ್ನು ಬಹುಮುಖ ದೃಷ್ಟಿಕೋನದಿಂದ ವಿಶ್ಲೇಷಿಸಿ, 1966ರಲ್ಲಿ ‘ದೇಶದ ಭವಿಷ್ಯ ಆಕೆಯ ತರಗತಿಗಳಲ್ಲಿ ರೂಪುಗೊಳ್ಳುತ್ತದೆ’ ಎಂಬ ಘೋಷವಾಕ್ಯದೊಂದಿಗೆ ವರದಿ ನೀಡಿತು. ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ)ಶೇ 6ರಷ್ಟನ್ನು ಶಿಕ್ಷಣಕ್ಕೆ ತೊಡಗಿಸುವ ಮೂಲಕ, ಸಮಾನ ಶಾಲಾ ಶಿಕ್ಷಣ ತತ್ತ್ವದ ಅಡಿಯಲ್ಲಿ ಬಲಿಷ್ಠ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಅದರ
ಅನ್ವಯ, 1968, 1986 ಮತ್ತು 1992ರಲ್ಲಿ ರಾಷ್ಟ್ರೀಯ ಶಿಕ್ಷಣನೀತಿಗಳನ್ನು ಜಾರಿಗೊಳಿಸಲಾಯಿತು.

ಈ ಪ್ರಯತ್ನಗಳಿಂದ 70, 80 ಮತ್ತು 90ರ ದಶಕದಲ್ಲಿ ಒಂದು ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸಲು ಸಾಧ್ಯವಾಯಿತು. ಶಿಕ್ಷಣದ ಸಾರ್ವತ್ರೀಕರಣದಿಂದ ಸಮಾನತೆಯ ನೆಲೆಯಲ್ಲಿ ಬಲಿಷ್ಠ ಶಿಕ್ಷಣ ವ್ಯವಸ್ಥೆ ಕಟ್ಟಿಕೊಳ್ಳಲು ಉತ್ತಮ ಭೂಮಿಕೆ ದೇಶದಲ್ಲಿ ಸಿದ್ಧವಾಗಿತ್ತು. ಹೆಚ್ಚಿನ ಶ್ರಮವಿಲ್ಲದೆ, ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿತ್ತು ಎಂದರೆ ಉತ್ಪ್ರೇಕ್ಷೆಯಾಗಲಾರದು. ಆಯಾ ಊರಿನ ಮಕ್ಕಳು, ಬಡವರು ಶ್ರೀಮಂತರೆನ್ನದೆ, ಸಮೀಪದಲ್ಲಿದ್ದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರು. ಇಂದು, ಉನ್ನತ ಸ್ಥಾನದಲ್ಲಿರುವ ಬಹುತೇಕ ಮಹನೀಯರು ಕಲಿತು ಬಂದ ವ್ಯವಸ್ಥೆ ಅದಾಗಿತ್ತು. ಸಮಸ್ಯೆಯೇ ಇರಲಿಲ್ಲವೆಂದಲ್ಲ. ಅಲ್ಲಿಯೂ, ಜಾತಿ– ಧರ್ಮದ ಹೆಸರಿನಲ್ಲಿ ತಾರತಮ್ಯ ಇತ್ತು. ಆದರೆ, ಎಲ್ಲರೂ ಒಂದೇ ಶಾಲೆಯಲ್ಲಿ ಸಮಾನ ಅವಕಾಶದ ನೆಲೆಯಲ್ಲಿ ಕಲಿಯುತ್ತಿದ್ದರು.

ಸಮಾನ ಅವಕಾಶದ ಕಲಿಕೆಯ ವ್ಯವಸ್ಥೆ ಹೆಚ್ಚು ದಿನ ಮುಂದುವರಿಯಲಿಲ್ಲ. 1991ರ ನಂತರ ಭಾರತ ಅನುಷ್ಠಾನಗೊಳಿಸಿದ ಉದಾರೀಕರಣ–ಖಾಸಗೀಕರಣ–ಜಾಗತೀಕರಣ ನೀತಿ ಹೊಸ ಬಗೆಯ ಸಂಕಥನವನ್ನು ಪ್ರಾರಂಭಿಸಿತು. ಸರ್ಕಾರಿ ವಲಯದಲ್ಲಿರುವುದೆಲ್ಲ ಕಳಪೆ–ಕನಿಷ್ಠ, ಖಾಸಗಿ ವಲಯದಲ್ಲಿರುವುದು ಉತ್ತಮ–ಶ್ರೇಷ್ಠ ಎಂಬ ಧೋರಣೆಯನ್ನು ಹುಟ್ಟುಹಾಕುವ ಮೂಲಕ, ಶಿಕ್ಷಣದ ಖಾಸಗೀಕರಣ ಪ್ರಾರಂಭವಾಯಿತು. ಅಲ್ಲಿಯವರೆಗೆ ಭಾರತದ ಸಂವಿಧಾನದ ಅನ್ವಯ ಸಮಾನತೆ, ಸಮಾಜವಾದ, ಸಮಾನ ಅವಕಾಶದ ನೆಲೆಯಲ್ಲಿ ರೂಪಿಸಿದ್ದ ಸಾರ್ವತ್ರಿಕ ಶಿಕ್ಷಣ, ಸಾರ್ವತ್ರಿಕ ಆರೋಗ್ಯ, ಸಾರ್ವಜನಿಕ ಉದ್ದಿಮೆ, ಇತ್ಯಾದಿ ಸಾಮಾಜಿಕ ಒಳಿತಿನ ಸೇವಾ ಕ್ಷೇತ್ರಗಳನ್ನು ಖಾಸಗಿ ಲಾಭದಾಯಕ ಉದ್ದಿಮೆಗಳನ್ನಾಗಿಸುವ ಕೆಲಸ ಪ್ರಾರಂಭವಾಯಿತು. ಇದಕ್ಕಾಗಿ ಸರ್ಕಾರಗಳು ನೀಲನಕಾಶೆಯನ್ನು ರೂಪಿಸಿದವು. ಅಲ್ಲಿಂದ ಸಾರ್ವಜನಿಕ ಶಿಕ್ಷಣದ ಅವನತಿ ಪ್ರಾರಂಭವಾಯಿತು.

ಇವೆಲ್ಲದರ ಮಧ್ಯೆಯೂ, ನ್ಯಾಯಾಂಗದ ಕ್ರಿಯಾಶೀಲತೆಯಿಂದ, ರಾಜ್ಯ ನಿರ್ದೇಶಕ ತತ್ತ್ವಗಳ ಅಡಿಯಲ್ಲಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ 1993ರಲ್ಲಿ ಮೂಲಭೂತ ಹಕ್ಕೆಂದು ಘೋಷಣೆಯಾಯಿತು. ಮೂಲಭೂತ ಹಕ್ಕಾಗಿರುವ ಜೀವಿಸುವ ಹಕ್ಕಿನ ಭಾಗವಾಗಿ ಶಿಕ್ಷಣದ ಹಕ್ಕು ಪ್ರಾಪ್ತವಾಗುತ್ತದೆ ಎಂಬ ಐತಿಹಾಸಿಕ ತೀರ್ಪು, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿತು. 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ, ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕಾಗಿ ಸೇರಿತು (ಅನುಚ್ಛೇದ 21–ಎ). ಇದರ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ’ ನೀಡುವ ಬದ್ಧತೆ ಮತ್ತು ಹೊಣೆಗಾರಿಕೆ ಹೊಂದಿದ್ದವು. ಆ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ಸರ್ಕಾರ 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ, 2010ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು– ರೂಪಿಸಿ ಜಾರಿಗೊಳಿಸಿತು. ಕರ್ನಾಟಕದಲ್ಲಿ ಈ ನಿಯಮಗಳು 2012ರಲ್ಲಿ ಜಾರಿಯಾದವು.

ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕಾದರೇನು? ಅದನ್ನು ಬದ್ಧತೆಯಿಂದ ಜಾರಿಗೊಳಿಸಬೇಕಾದ ಸರ್ಕಾರಗಳಿಗೆ ಅದು ಮೂಲಭೂತ ಕರ್ತವ್ಯವೆನಿಸಲಿಲ್ಲ. ಮೂಲಭೂತ ಹಕ್ಕನ್ನು ಜಾರಿಗೊಳಿಸಬೇಕಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ದಿವ್ಯ ನಿರ್ಲಕ್ಷ್ಯ ತಳೆದಿವೆ. ಕಳೆದ ಎರಡು ದಶಕ ದಿಂದ, ದೇಶದಾದ್ಯಂತ ಸರ್ಕಾರಿ ಶಾಲೆಗಳು ದೊಡ್ಡ ಸಂಖ್ಯೆಯಲ್ಲಿ ಮುಚ್ಚಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ–ಹಾಜರಾತಿ ಗಣನೀಯವಾಗಿ ಕುಸಿದಿದೆ.

ಸಂಸತ್ತಿನಲ್ಲಿ ಶಿಕ್ಷಣ ಖಾತೆಯ ರಾಜ್ಯ ಸಚಿವರು ನೀಡಿದ ಉತ್ತರದ ಪ್ರಕಾರ, 2024–25ನೇ ಶೈಕ್ಷಣಿಕ ವರ್ಷದಲ್ಲಿ 11.7 ಲಕ್ಷ ಮಕ್ಕಳು ದೇಶದಲ್ಲಿ ಶಾಲೆಯಿಂದ ಹೊರಗಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶಾಲೆಯಿಂದ ಅತಿಹೆಚ್ಚು ಮಕ್ಕಳು (7,84,228) ಹೊರಗುಳಿದ ಕುಖ್ಯಾತಿ ಉತ್ತರ ಪ್ರದೇಶದ್ದಾಗಿದೆ. ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ 9,448.

ಒಂದೆಡೆ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಮುಚ್ಚುತ್ತಿವೆ. 2014–15ನೇ ಸಾಲಿನಲ್ಲಿ, ಭಾರತದಲ್ಲಿ ಒಟ್ಟು 11,07,101 ಸರ್ಕಾರಿ ಶಾಲೆಗಳಿದ್ದವು. 2024–25ರಲ್ಲಿ ಇವುಗಳ ಸಂಖ್ಯೆ 10,13,322ಕ್ಕೆ ಇಳಿದಿದೆ. ಅಂದರೆ, ಕಳೆದ ಒಂದು ದಶಕದಲ್ಲಿ ಬರೋಬ್ಬರಿ 93,779 ಶಾಲೆಗಳನ್ನು ಮುಚ್ಚಿದ್ದೇವೆ. ಶೇಕಡಾವಾರು ಅತಿಹೆಚ್ಚು ಶಾಲೆಗಳನ್ನು ಮುಚ್ಚಿದ ರಾಜ್ಯಗಳಲ್ಲಿ ಕ್ರಮವಾಗಿ ಮಧ್ಯಪ್ರದೇಶ (ಶೇ 24.1), ಜಮ್ಮು ಮತ್ತು ಕಾಶ್ಮೀರ (ಶೇ 21.4), ಒಡಿಶಾ (ಶೇ 17.1), ಅರುಣಾಚಲ ಪ್ರದೇಶ (ಶೇ 16.4), ಉತ್ತರ ಪ್ರದೇಶ (ಶೇ 15.5), ನಾಗಾಲ್ಯಾಂಡ್ (ಶೇ 14.4), ಜಾರ್ಖಂಡ್ (ಶೇ 13.4), ಗೋವಾ (ಶೇ 12.9), ಉತ್ತರಾಖಂಡ (ಶೇ 8.7) ಮತ್ತು ಕರ್ನಾಟಕ (ಶೇ 6.46) ಸೇರಿವೆ. ಇದೇ ಅವಧಿಯಲ್ಲಿ, ಖಾಸಗಿ ಶಾಲೆಗಳ ಸಂಖ್ಯೆ 2,88,164ರಿಂದ 3,31,108ಕ್ಕೆ ಏರಿದೆ.

2023–24ರಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ 12.75 ಕೋಟಿಯಿದ್ದದ್ದು, 2024–25ರಲ್ಲಿ 12.16 ಕೋಟಿಗೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ 9 ಕೋಟಿಯಿಂದ 9.58 ಕೋಟಿಗೆ ಹೆಚ್ಚಿದೆ. ಕರ್ನಾಟಕದಲ್ಲಿ 2023–24ರಲ್ಲಿ ಸರ್ಕಾರಿ ಶಾಲೆಯಲ್ಲಿ ದಾಖಲಾಗಿದ್ದ 49.86 ಲಕ್ಷ ಮಕ್ಕಳ ಸಂಖ್ಯೆ 2024–25ರಲ್ಲಿ 47.34 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ 54.81 ಲಕ್ಷದಿಂದ 56.64 ಲಕ್ಷಕ್ಕೆ ಏರಿದೆ. ಶೂನ್ಯ ಅಥವಾ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ 2023–24ರಲ್ಲಿ 59,510 ಇದ್ದುದು 2024–25ರಲ್ಲಿ 65,054 ಏರಿದೆ. ಇದು ಕರ್ನಾಟಕದಲ್ಲಿ ಕ್ರಮವಾಗಿ 4,523 ಮತ್ತು 5,327.

ಮೂಲಭೂತ ಸೌಕರ್ಯಗಳ ಸ್ಥಿತಿಗತಿ ನೋಡಿದರೆ, ಶೇ 8.7ರಷ್ಟು ಪ್ರಾಥಮಿಕ ಹಾಗೂ ಶೇ 5.7ರಷ್ಟು ತರಗತಿ ಕೋಣೆಗಳು ಶಿಥಿಲಾವಸ್ಥೆಯಲ್ಲಿವೆ. ಕರ್ನಾಟಕದಲ್ಲಿ ಈ ಸಂಖ್ಯೆ ಕ್ರಮವಾಗಿ ಶೇ 7.6 ಹಾಗೂ ಶೇ 2.5ರಷ್ಟಿದೆ. ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಒಂಬತ್ತು ಮೂಲಸೌಕರ್ಯ ಮಾನದಂಡಗಳನ್ನು ಪೂರೈಸುವ ವಿಷಯದಲ್ಲಿ ಅನುಪಾಲನೆಯಾಗಿರುವ ರಾಷ್ಟ್ರೀಯ ಸರಾಸರಿ ಶೇಕಡಾವಾರು ಪ್ರಮಾಣ ಬರೀ 25.5 ಮಾತ್ರ. ಕರ್ನಾಟಕದಲ್ಲಿ ಇದು ಶೇ 23.6ರಷ್ಟಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂಲಸೌಕರ್ಯ ಒದಗಿಸಲು ಸೋತಿರುವುದು, ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ನೋಮ್ ಚೋಮ್ಸ್ಕಿ ಹೇಳುವಂತೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಬೇಕೆಂದರೆ, ಅದಕ್ಕೆ ಹೂಡುವ ಹಣವನ್ನು ಕಡಿಮೆ ಮಾಡುತ್ತ ಮೂಲಸೌಕರ್ಯಗಳು ಇಲ್ಲದಂತೆ ಮಾಡಿದರೆ, ಜನರು ತಾವಾಗಿಯೇ ಸಾರ್ವಜನಿಕ ಶಿಕ್ಷಣ–ಆರೋಗ್ಯ ವ್ಯವಸ್ಥೆಯಿಂದ ದೂರ ಸರಿಯುತ್ತಾರೆ.

ಶಿಕ್ಷಣದ ಉದ್ಯಮಿಗಳೂ ಆಗಿರುವ ರಾಜಕಾರಣಿಗಳು ಲಾಭದಾಯಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುವುದನ್ನು ತಮ್ಮ ರಾಜಕೀಯ ಕಾರ್ಯಸೂಚಿ ಮಾಡಿಕೊಂಡಿದ್ದಾರೆ. 2029ರ ವೇಳೆಗೆ ಸುಮಾರು 11.83 ಟ್ರಿಲಿಯನ್ ಡಾಲರ್ ಮೊತ್ತವನ್ನು ಜಾಗತಿಕ ಶಿಕ್ಷಣ ಮಾರುಕಟ್ಟೆಯ ಭಾಗವಾಗಿಸುವ ಪ್ರಯತ್ನ ರಾಜಕಾರಣಿಗಳದು.

ಶಿಕ್ಷಣದ ‘ರಾಜಕೀಯ ಅರ್ಥಶಾಸ್ತ್ರ’ ಜನರಿಗೆ ಅರ್ಥವಾಗದ ಹೊರತು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಹೋರಾಟ ಯಶಸ್ವಿಯಾಗುವುದು ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.