ಜಗತ್ತಿನ ಇತಿಹಾಸದಲ್ಲಿ ಸುಖ, ಸಮೃದ್ಧಿ, ಅಭಿವೃದ್ಧಿಯ ಜೊತೆಯಲ್ಲಿಯೇ ಹಿಂಸೆ, ದೌರ್ಜನ್ಯ, ಅನ್ಯಾಯವೂ ಅವಿರತವಾಗಿ ನಡೆದುಬಂದಿವೆ. ಅದರಂತೆಯೇ ಪ್ರತಿ ಯುಗದಲ್ಲಿಯೂ ಸತ್ಯ, ಅಹಿಂಸೆ, ನ್ಯಾಯಕ್ಕಾಗಿ ಹೋರಾಡುವ ಹಾಗೂ ಈ ಅನಂತ ಸೃಷ್ಟಿಯ ಉತ್ಕ್ರಾಂತಿಯ ಕ್ರಮದಲ್ಲಿ ಮನುಷ್ಯಜನ್ಮದ ಅರ್ಥ, ಉದ್ದೇಶಗಳನ್ನು ಸಾರಿ ಹೇಳುವ ಮಹಾನ್ ನಾಯಕರೂ ಹುಟ್ಟುತ್ತಲೇ ಇರುತ್ತಾರೆ. ಇವರು ಧರ್ಮಗುರುಗಳೇ ಆಗಿರಬೇಕೆಂದೇನೂ ಇಲ್ಲ. ಮಹಾತ್ಮ ಗಾಂಧಿ ಯಾವುದೇ ಹಿಂದೂ ಧಾರ್ಮಿಕ ಸಂಸ್ಥೆಯ ಪ್ರಮುಖರಾಗಿರಲಿಲ್ಲ. ಆದರೂ ಅವರು ತಮ್ಮ ಕಾಲದ- ಅಲ್ಲದೆ ಈಗಿನ ಮತ್ತು ಭವಿಷ್ಯದ- ನೈತಿಕ ನಾಯಕರಾದರು.

ನಮ್ಮ ಸಮಕಾಲೀನ ಜಗತ್ತಿನಲ್ಲಿ ಮನುಷ್ಯತ್ವದ ಸಂರಕ್ಷಣೆಗಾಗಿ ಹೋರಾಟ ನಡೆಸಿದವರು ಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವೇನೂ ಅಲ್ಲ. ಅವರು ಮೊನ್ನೆ ನಮ್ಮಿಂದ ಅಗಲಿದ ಧರ್ಮಗುರು ಪೋಪ್ ಫ್ರಾನ್ಸಿಸ್. ನಮ್ಮ ಯುಗದ ಗಾಂಧಿ. ಬಡತನ, ಹಿಂಸೆ, ಯುದ್ಧ ಮತ್ತು ಅನ್ಯಾಯಗಳ ವಿರುದ್ಧ ಹಾಗೂ ಏಕತೆ, ಸಹೋದರತ್ವಕ್ಕಾಗಿ ಅವರಷ್ಟು ಧೈರ್ಯದಿಂದ, ಬದ್ಧತೆಯಿಂದ ಇತ್ತೀಚಿನ ಕಾಲಘಟ್ಟದಲ್ಲಿ ಯಾವ ಧರ್ಮಗುರುವಾಗಲಿ ಅಥವಾ ರಾಜಕೀಯ, ಸಾಮಾಜಿಕ ನಾಯಕನೇ ಆಗಲಿ ದನಿಯೆತ್ತಿರಲಿಲ್ಲ. ಮುಖದ ಮೇಲೆ ಮುಗ್ಧ ಮಗುವಿನಂತಹ ನಗು. ಆದರೆ ಅವರ ಅಂತರಾಳದಲ್ಲಿ ಜಗದ ಇಂದಿನ ದುರವಸ್ಥೆಯ ಬಗ್ಗೆ ಅತೀವ ನೋವು, ಪ್ರಕ್ಷುಬ್ಧತೆ ತುಂಬಿತ್ತು.

‘ಬಡಜನರ ಪೋಪ್’ ಎಂದೇ ಅವರು ಖ್ಯಾತಿ ಪಡೆದಿದ್ದರು. ಅರ್ಜೆಂಟೀನಾದಲ್ಲಿ ಜನಿಸಿದ ಅವರು ರಾಜಧಾನಿ ಬ್ಯೂನಸ್ ಐರಿಸ್ನ ಕೊಳೆಗೇರಿಗಳಲ್ಲಿ ಕೆಲಸ ಮಾಡುವಾಗಲೇ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ವಿಷಮ ಪರಿಸ್ಥಿತಿಯ ಕರಾಳ ವಾಸ್ತವವನ್ನು ಅರಿತುಕೊಂಡರು. 2013ರ ಮಾರ್ಚ್ನಲ್ಲಿ ಜಾಗತಿಕ ಕ್ಯಾಥೊಲಿಕ್ ಚರ್ಚ್ನ ಪೋಪ್ ಆದ ಕೂಡಲೇ ಅವರು ಗರ್ಜಿಸಿದರು: ‘ಜಗತ್ತಿನಲ್ಲಿ ಇಂದು ಇರುವ ದಾರುಣವಾದ ಬಡತನವು ಅಕ್ಷಮ್ಯವಾದ ಒಂದು ಸಮಸ್ಯೆ. ಅಗಾಧವಾದ ಸಂಪತ್ತು ಮತ್ತು ಸಂಪನ್ಮೂಲಗಳು ಇರುವಾಗಲೂ ಹಸಿದ, ಶಿಕ್ಷಣ ಪಡೆಯದ ಇಷ್ಟೊಂದು ಮಕ್ಕಳು ಏಕಿದ್ದಾರೆ?’

ಆಫ್ರಿಕಾ ಮತ್ತು ಏಷ್ಯಾದ ಯುದ್ಧಪೀಡಿತ ಹಾಗೂ ಬಡತನದಿಂದ ಬಳಲುತ್ತಿರುವ ಪ್ರದೇಶಗಳಿಂದ ಯುರೋಪಿಗೆ ವಲಸೆ ಬರುವ ದುಃಖಿತ ನಿರಾಶ್ರಿತರಿಗೆ ಗೌರವಾನ್ವಿತ ಜೀವನಾವಕಾಶ ಸಿಗಬೇಕೆಂದು ಅವರು ಪ್ರತಿಪಾದಿಸಿದರು. ಇದಕ್ಕಾಗಿ ಯುರೋಪಿನ ಅನೇಕ ಕ್ರೈಸ್ತ ನಾಯಕರು ಅವರನ್ನು ವಿರೋಧಿಸಿದರೂ ಪೋಪ್ ಫ್ರಾನ್ಸಿಸ್ ‘ನಿರಾಶ್ರಿತರು ಕೂಡ ದೇವರ ಮಕ್ಕಳೇ ಅಲ್ಲವೆ?’ ಎಂದು ಪ್ರಶ್ನಿಸಿದರು.

ಅವರ ಈ ಪ್ರಗತಿಪರ ನಿಲುವಿಗೆ ಕಾರಣವಿತ್ತು. ಅವರ ಮೂಲನಾಮ ಜಾರ್ಜ್ ಮಾರಿಯೊ ಬರ್ಗೋಗ್ಲಿಯೊ. ವ್ಯಾಟಿಕನ್ನಿನ ಪ್ರಮುಖರಾದ ನಂತರ ಅವರು ತಮಗಾಗಿ ಆರಿಸಿಕೊಂಡ ಹೆಸರು ಪೋಪ್ ಫ್ರಾನ್ಸಿಸ್. ಏಕೆಂದರೆ ಅವರಿಗೆ ಪ್ರೇರಣೆ ನೀಡಿದ ಆಧ್ಯಾತ್ಮಿಕ ನಾಯಕ, ಇಟಲಿಯ ಅಸ್ಸೀಸಿಯಲ್ಲಿನ 13ನೇ ಶತಮಾನದ ಮಹಾನ್ ತಪಸ್ವಿ, ಸಂತ ಫ್ರಾನ್ಸಿಸ್. ಮನುಷ್ಯರನ್ನಷ್ಟೇ ಅಲ್ಲ ಸಕಲ ಪ್ರಾಣಿಪಕ್ಷಿ, ಜೀವಜಂತುಗಳನ್ನೂ ಪ್ರೀತಿಸಿದ ಮಹಾತ್ಮ ಆತ. ಗಾಂಧೀಜಿಗೂ ಸಂತ ಫ್ರಾನ್ಸಿಸ್ ಅವರ ಬಗ್ಗೆ ಅಪಾರ ಆದರವಿತ್ತು.

ಧರ್ಮವು ಭಕ್ತರನ್ನು ಬರೀ ಕರ್ಮಕಾಂಡದಲ್ಲಿ ಬಂಧಿಸಿ ಇಡಬಾರದು, ಅದು ಜಗತ್ತನ್ನು, ಜೀವನವನ್ನು ಸುಧಾರಿಸುವ ದಿಸೆಯಲ್ಲಿ ಜಾಗೃತಿ ಹುಟ್ಟಿಸಬೇಕು ಎಂದು ನಂಬಿದವರು ಪೋಪ್ ಫ್ರಾನ್ಸಿಸ್. ಹವಾಮಾನ ವೈಪರೀತ್ಯದ ಸಂಕಟದಿಂದ ಪ್ರಕೃತಿ ಮಾತೆಯನ್ನು ರಕ್ಷಿಸಲು ಅವರು ಅತ್ಯಂತ ಮಹತ್ವದ ಕಾರ್ಯವನ್ನು ಹಮ್ಮಿಕೊಂಡರು. 2015ರಲ್ಲಿ ಪ್ಯಾರಿಸ್ ಹವಾಮಾನ ಶೃಂಗಸಭೆಗೆ ಮುನ್ನ ಅವರು ‘ಆನ್ ಕೇರ್ ಫಾರ್ ಅವರ್ ಕಾಮನ್ ಹೋಮ್’ ಎಂಬ ಶೀರ್ಷಿಕೆಯ ಘೋಷಣಾಪತ್ರವನ್ನು ಬಿಡುಗಡೆ ಮಾಡಿ ‘ಭೂಮಿಯ ಕೂಗು ಮತ್ತು ಬಡವರ ಕೂಗನ್ನು’ ಆಲಿಸುವಂತೆ ವಿಶ್ವ ನಾಯಕರ ಸಾಮೂಹಿಕ ಅಂತಃಸಾಕ್ಷಿಗೆ ಮನವಿ ಮಾಡಿದರು.

ಜಗತ್ತಿನಲ್ಲಿ ಎಲ್ಲಿಯೇ ಯುದ್ಧ ನಡೆಯುತ್ತಿರಲಿ ಅದನ್ನು ತಡೆಯಲು ಪೋಪ್ ಸತತವಾಗಿ ಹೆಣಗಿದರು. ಜೀವನದ ಕೊನೆಯ ತಿಂಗಳುಗಳಲ್ಲಿ ಕೂಡ ಆಸ್ಪತ್ರೆಯ ಹಾಸಿಗೆಯಿಂದ ಅವರು ಸಂದೇಶ ಕಳಿಸಿ, ಉಕ್ರೇನ್ ಯುದ್ಧ ಮೂರು ವರ್ಷಗಳಾದರೂ ನಿಲ್ಲದೇ ಇರುವುದು ಮಾನವೀಯತೆಗೆ ಕಳಂಕ ಎಂದು ತಮ್ಮ ನೋವನ್ನು ಬಿತ್ತರಿಸಿದರು. ಗಾಜಾದ ಮೇಲೆ ಇಸ್ರೇಲ್ನ ಮಿಲಿಟರಿ ದಾಳಿಗಳಿಂದ ನಡೆದದ್ದು ನರಮೇಧವೇ ಎಂದು ನಿರ್ಧರಿಸಲು ಅವರು ತನಿಖೆಗೆ ಕರೆ ನೀಡಿದರು. ಅಮಾಯಕ ಪ್ಯಾಲೆಸ್ಟೀನಿಯನ್ನರ ಉದ್ದೇಶಪೂರ್ವಕ ಸಾಮೂಹಿಕ ಹತ್ಯೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ತಪ್ಪಿತಸ್ಥರು ಎಂದು ಘೋಷಿಸಿದರು. ಗಾಜಾ ಯುದ್ಧವನ್ನು ಕೊನೆಗೊಳಿಸುವಲ್ಲಿ ವಿಶ್ವ ನಾಯಕರ ‘ನಾಚಿಕೆಗೇಡಿನ ಅಸಾಮರ್ಥ್ಯ’ವನ್ನು ಅವರು ಟೀಕಿಸಿದರು. ವಿವಿಧ ಧರ್ಮಗಳ ಅನುಯಾಯಿಗಳ ನಡುವೆ ಶಾಂತಿ, ಸೌಹಾರ್ದ, ಸಹಕಾರ, ಬಂಧುಭಾವ ಬೆಳೆಸಲು ಮತ್ತು ಅದಕ್ಕಾಗಿ ಸತತವಾಗಿ ಅಂತರಧರ್ಮೀಯ ಸಂವಾದ ನಡೆಸಲು ಪೋಪ್ ಅವರು ಮಾಡಿದಷ್ಟು ಭಗೀರಥ ಪ್ರಯತ್ನವನ್ನು ಇತರ ಯಾವುದೇ ಧಾರ್ಮಿಕ ನಾಯಕರೂ ಮಾಡಲಿಲ್ಲ.

2019ರಲ್ಲಿ ಪೋಪ್ ನೇತೃತ್ವದಲ್ಲಿ ಅಬುಧಾಬಿಯಲ್ಲಿ ನಡೆದ ‘ಮಾನವ ಸಹೋದರತ್ವ’ ಶೃಂಗಸಭೆಯಲ್ಲಿ ನಾನು ಭಾಗವಹಿಸಿದ್ದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಕ್ಯಾಥೊಲಿಕ್ ಚರ್ಚ್ನ ಮುಖ್ಯಸ್ಥರೊಬ್ಬರು ಅರೇಬಿಯನ್ ನೆಲಕ್ಕೆ ಕಾಲಿಟ್ಟಿದ್ದರು. ಅಲ್ಲದೆ, ಇತಿಹಾಸದಲ್ಲಿ ಮೊದಲ ಬಾರಿಗೆ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವದ ಪ್ರಮುಖ ಇಸ್ಲಾಮಿಕ್ ಕೇಂದ್ರವಾದ ಈಜಿಪ್ಟ್ನ ಅಲ್ ಅಜರ್ನ ಇಮಾಮ್ ಅಹ್ಮದ್ ಅಲ್ ತಯ್ಯೆಬ್ ಅವರು ಜಂಟಿ ಘೋಷಣೆಯೊಂದಕ್ಕೆ ಸಹಿ ಹಾಕಿದರು. ‘ಧರ್ಮಗಳು ಎಂದಿಗೂ ಯುದ್ಧ, ದ್ವೇಷಪೂರಿತ ವರ್ತನೆ, ಅಸಹಿಷ್ಣುತೆ, ಹಗೆತನ ಮತ್ತು ಉಗ್ರವಾದವನ್ನು ಪೋಷಿಸಬಾರದು. ಹಿಂಸೆ ಅಥವಾ ರಕ್ತಪಾತವನ್ನು ಪ್ರಚೋದಿಸಬಾರದು’ ಎಂದು ಹೇಳುವುದರ ಜೊತೆಗೆ ‘ಮನುಷ್ಯರ ಹೃದಯದಲ್ಲಿ ಶಾಂತಿಯ ಬೀಜ ಬಿತ್ತೋಣ’ ಎಂದು ಕರೆ ಕೊಟ್ಟರು.

ದುಃಖಕರ ಸಂಗತಿಯೆಂದರೆ, ಆ ಐತಿಹಾಸಿಕ ಕ್ರೈಸ್ತ- ಮುಸ್ಲಿಂ ಸಂವಾದದ ನಂತರ, ಅಷ್ಟೇ ಅಗತ್ಯವಿರುವ ಕ್ರೈಸ್ತ- ಹಿಂದೂ ಸಂವಾದ ಶುರುವಾಗಲಿಲ್ಲ. ಪೋಪ್ ಫ್ರಾನ್ಸಿಸ್ ಅಂತಹದ್ದೊಂದು ಸಂವಾದವನ್ನು ತೀವ್ರವಾಗಿ ಬಯಸಿದ್ದರು. 2016ರಲ್ಲಿ ನಾನು ಅವರನ್ನು ಇಟಲಿಯ ಅಸ್ಸೀಸಿಯಲ್ಲಿ ಭೇಟಿಯಾಗಿದ್ದೆ. ವಿಶ್ವಶಾಂತಿಗಾಗಿ ನಡೆದ ಅಂತರಧರ್ಮೀಯ ಸಭೆಯಲ್ಲಿ ಭಾಗವಹಿಸಲು ನಾನು ಅಲ್ಲಿಗೆ ತೆರಳಿದ್ದೆ. ಸ್ವಾಮಿ ವಿವೇಕಾನಂದ ಮತ್ತು ಮಹಾತ್ಮ ಗಾಂಧಿ ಅವರ ಕುರಿತಾದ ನನ್ನ ಪುಸ್ತಕಗಳನ್ನು ಅವರಿಗೆ ಗೌರವಪೂರ್ವಕವಾಗಿ ಅರ್ಪಿಸಿ ‘ಇವರಿಬ್ಬರೂ ಹಿಂದೂ ಧರ್ಮದ ಅತ್ಯುತ್ತಮ ಪ್ರತಿನಿಧಿಗಳು’ ಎಂದು ಹೇಳಿದೆ. ಅವರು ಬಹುಶಃ ಮೊದಲ ಬಾರಿಗೆ ವಿವೇಕಾನಂದರ ಬಗ್ಗೆ ಕೇಳಿರಬಹುದು. ಆದರೆ ಸ್ವಾಮೀಜಿಯ ಬೋಧನೆಗಳಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು. ನಂತರ ನಾನು ಅವರನ್ನು ಪ್ರಾರ್ಥಿಸಿದೆ: ‘ಪವಿತ್ರರೇ, ನಾನೊಬ್ಬ ಧರ್ಮನಿಷ್ಠ ಹಿಂದೂ. ಆದರೆ ಬುದ್ಧ ಮತ್ತು ಗಾಂಧಿಯವರ ಪವಿತ್ರ ಭೂಮಿಯಾದ ಭಾರತಕ್ಕೆ ನೀವು ಭೇಟಿ ನೀಡಬೇಕೆಂದು ನನ್ನ ವಿನಂತಿ’. ನನ್ನ ಮಾತನ್ನು ಗಮನವಿಟ್ಟು ಕೇಳಿದ ನಂತರ ಅವರು ಉತ್ತರಿಸಿದರು: ‘ಭಾರತಕ್ಕೆ ಬರಲು ನಾನು ತುಂಬಾ ಇಚ್ಛೆಪಟ್ಟಿದ್ದೇನೆ. ಭಾರತ ಮತ್ತು ಅದರ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ನನಗೆ ಅಪಾರ ಗೌರವವಿದೆ’.

ನಾನು ಹಿಂದಿರುಗಿದ ನಂತರ, ಪೋಪ್ ಅವರನ್ನು ಭಾರತಕ್ಕೆ ಆಹ್ವಾನಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದೆ. ಭಾರತದ ಕ್ರೈಸ್ತ ಸಮುದಾಯದ ನಾಯಕರು ಕೂಡ ಇದೇ ರೀತಿಯ ಮನವಿಯನ್ನು ಮಾಡಿದರು. 2021ರ ಅಕ್ಟೋಬರ್ನಲ್ಲಿ ರೋಮ್ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಸ್ವತಃ ಪೋಪ್ ಅವರನ್ನು ಭೇಟಿ ಮಾಡಿ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಆದರೆ ಪೋಪ್ ಫ್ರಾನ್ಸಿಸ್ ನಮ್ಮ ನೆರೆಹೊರೆಯ, ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶ, ಬೌದ್ಧ ಬಹುಸಂಖ್ಯಾತ ಶ್ರೀಲಂಕಾ ಮತ್ತು ಮ್ಯಾನ್ಮಾರ್ಗೆ ಭೇಟಿ ನೀಡಿದ್ದರೂ ಭಾರತ ಅವರನ್ನು ಬರಮಾಡಿಕೊಳ್ಳಲಿಲ್ಲ.

‘ದೇವರ ಮೇಲೆ ಅಪಾರವಾದ ಭಕ್ತಿ, ಸಕಲ ಮನುಷ್ಯರ ಮೇಲೆ ಅಸೀಮವಾದ ಪ್ರೀತಿ. ಇದುವೇ ನಿಜವಾದ ಧಾರ್ಮಿಕ ನಾಯಕನ ಲಕ್ಷಣ’ ಎಂದು ಸ್ವಾಮಿ ವಿವೇಕಾನಂದರ ಪ್ರಮುಖ ಶಿಷ್ಯರಾದ ಸ್ವಾಮಿ ರಂಗನಾಥಾನಂದ ಹೇಳಿದ್ದಾರೆ. ನಾನು ಭಾರತ ಮತ್ತು ಪ್ರಪಂಚದಾದ್ಯಂತ ಅನೇಕ ಧಾರ್ಮಿಕ ನಾಯಕರನ್ನು ಭೇಟಿ ಮಾಡಿದ್ದೇನೆ. ಈ ಆದರ್ಶವನ್ನು ಪೋಪ್ ಫ್ರಾನ್ಸಿಸ್ ಅವರಿಗಿಂತ ಉತ್ತಮವಾಗಿ ಯಾರೂ ಸಾಕಾರಗೊಳಿಸಿಲ್ಲ. ಪೋಪ್ ಅವರಿಗೆ ನನ್ನ ಮನದಾಳದ ಶ್ರದ್ಧಾಂಜಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.