ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಿಲ್ಕ್ಯಾರಾ– ಮತ್ತೆ ಶುರು ಕಾಮಗಾರಿ

ನ. 12ರ ಅವಘಡದಿಂದ ಯಾವ ಪಾಠ ಕಲಿಯಾಗಿದೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಮಾತ್ರ ಸಿಕ್ಕಿಲ್ಲ
Published 22 ಫೆಬ್ರುವರಿ 2024, 19:56 IST
Last Updated 22 ಫೆಬ್ರುವರಿ 2024, 19:56 IST
ಅಕ್ಷರ ಗಾತ್ರ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ- ಬಡಕೋಟ್ ಸುರಂಗದ ಭಾಗವೊಂದು ಹೋದ ವರ್ಷದ ನವೆಂಬರ್ 12ರಂದು ಕುಸಿದು, ಹದಿನೇಳು ದಿನಗಳ ಕಾಲ ಅಲ್ಲಿ ಸಿಕ್ಕಿಬಿದ್ದಿದ್ದ 41 ಕಾರ್ಮಿಕರನ್ನು ಅಸಾಧಾರಣ ಸಂಘಟಿತ ಕಾರ್ಯಾಚರಣೆಯಿಂದ ರಕ್ಷಿಸಿ, ಹೊರತಂದ ಎರಡೂವರೆ ತಿಂಗಳ ನಂತರ, ಸ್ಥಗಿತಗೊಂಡಿದ್ದ ಸುರಂಗದ ಕಾಮಗಾರಿ ಇದೀಗ ಮತ್ತೆ ಪ್ರಾರಂಭವಾಗಿದೆ.

4.5 ಕಿ.ಮೀ. ಉದ್ದದ ಸಿಲ್ಕ್ಯಾರಾ- ಬಡಕೋಟ್ ಸುರಂಗ, ಪ್ರತಿಷ್ಠಿತ ಚಾರ್‌ಧಾಮ್ ಯೋಜನೆಯ ಒಂದು ಭಾಗ. ಈ ಯೋಜನೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಉನ್ನತಾಧಿಕಾರ ಸಮಿತಿಯು 2021ರಲ್ಲಿ ನೀಡಿದ ವರದಿಯಲ್ಲಿ, ‘ಚಾರ್‌ಧಾಮ್ ಯೋಜನೆ ಸಂಪೂರ್ಣವಾಗಿ ಎಂಜಿನಿಯರಿಂಗ್ ಯೋಜನೆಯಾಗಿದೆಯೇ ವಿನಾ, ಪರ್ವತ ಪ್ರದೇಶದ ಹಸಿರು ಹೊದಿಕೆಯ ನಾಶದ ಬಗ್ಗೆ ಅದಕ್ಕೆ ಯಾವ ಕಾಳಜಿಯೂ ಇಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ನವೆಂಬರ್ 12ರ ಅವಘಡವು ಎಂಜಿನಿಯರಿಂಗ್ ಯೋಜನೆಯಾದರೂ ಸಂಪೂರ್ಣವಾಗಿ ದೋಷಮುಕ್ತವಾಗಿದೆಯೇ ಎಂಬ ಪ್ರಶ್ನೆಯನ್ನೆತ್ತಿದೆ.

ಈ ಅವಘಡದ ನಂತರ, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬಾರ್ಡರ್ ರೋಡ್ ಆರ್ಗನೈಸೇಷನ್‍ನ ಹೆಚ್ಚುವರಿ ಮಹಾನಿರ್ದೇಶಕ ಆರ್.ಕೆ.ಧಿಮಾನ್ ಅವರ ನೇತೃತ್ವದಲ್ಲಿ ಐವರು ಪರಿಣತರನ್ನು ಒಳಗೊಂಡ ಸಮಿತಿಯನ್ನು ನೇಮಿಸಿತು. ಐಐಟಿ ದೆಹಲಿ, ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯ, ರೈಲ್ವೆ ಇಲಾಖೆಯ ಪರಿಣತರನ್ನು ಒಳಗೊಂಡ ಈ ತಂಡವು ಡಿಸೆಂಬರ್ 13- 15ರ ನಡುವೆ ಸುರಂಗಕ್ಕೆ ಭೇಟಿ ಕೊಟ್ಟು, ವಿವರವಾದ ಅಧ್ಯಯನ ನಡೆಸಿ, ಹಲವಾರು ಮುಖ್ಯ ಅಂಶಗಳನ್ನು ಒಳಗೊಂಡ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಸಿಲ್ಕ್ಯಾರಾ- ಬಡಕೋಟ್ ಸುರಂಗವು ಪರ್ವತ ಪ್ರದೇಶದ ಮೂಲಕ ಹಾದುಹೋಗುವಾಗ ಪ್ರಬಲವಾದ ‘ಅನುರೂಪಣಾ ವಲಯ’ (ಶಿಯರ್ ಜೋನ್) ಎದುರಾಗುತ್ತದೆ. ಈ ವಲಯದಲ್ಲಿ ಬಲವಾದ ತುಯ್ತಕ್ಕೆ ಒಳಗಾದ ಬಂಡೆಗಳು ತಮ್ಮ ಆಕಾರದಲ್ಲಿನ ಬದಲಾವಣೆಯಿಂದಾಗಿ ವಿರೂಪಗೊಂಡಿವೆ. ಶಿಲೆಗಳು ಬಿರಿಯುವುದರೊಂದಿಗೆ ಪಕ್ಕದ ಶಿಲೆಗಳ ಮೇಲೆ ಸ್ಥಾನಾಂತರಗೊಂಡಿರುವುದೂ ಉಂಟು. ಸಿಲ್ಕ್ಯಾರಾ ಭಾಗದ ಶಿಲೆಯು ಬಡಕೋಟ್ ಭಾಗದ ಶಿಲೆಗೆ ಹೋಲಿಸಿದರೆ ದುರ್ಬಲವಾಗಿದ್ದು, ‘ಸ್ಲಿಪ್ ಸರ್ಕ್ಲ್ಯುಲರ್ ಫೈಲ್ಯೂರ್’ ಆಗುವ ಸಾಧ್ಯತೆಯ ಬಗ್ಗೆ ಯೋಜನೆಯ ಹಂತದಲ್ಲೇ ಎಚ್ಚರಿಕೆ ನೀಡಲಾಗಿತ್ತು. ಇಂತಹ ವಲಯದ ಮೂಲಕ ಸುರಂಗ ಕೊರೆಯುವಾಗ ಅತಿಮುಖ್ಯವಾದ ‘ಸಾಲುಗೂಡಿಕೆ’ಯಲ್ಲಿ (ಅಲೈನ್‍ಮೆಂಟ್) ದೋಷವಿದೆಯೆಂದು ಸಮಿತಿ ಅಭಿಪ್ರಾಯಪಟ್ಟಿದೆ.

ದುರ್ಬಲ ಶಿಲೆಗಳಿರುವ ವಲಯದಲ್ಲಿ ಕೊರೆದ ಸುರಂಗಕ್ಕೆ ವಿಶೇಷವಾದ, ಬಲವಾದ ಆಧಾರವನ್ನು ಒದಗಿಸಿ ಭದ್ರಗೊಳಿಸಬೇಕು. ಇದರಲ್ಲಿ ಹಲವಾರು ವಿಧಾನಗಳಿವೆ. ಇವು ಸುರಂಗಕ್ಕೆ ಮತ್ತು ಕಾರ್ಮಿಕರಿಗೆ ರಕ್ಷಣೆಯನ್ನು ಒದಗಿಸುತ್ತವೆ. ಈ ಕೆಲಸದಲ್ಲಿ ನ್ಯೂನತೆಗಳಿವೆ ಎಂಬುದು ಪರಿಣತರ ತಂಡ ಗಮನಿಸಿರುವ ಎರಡನೆಯ ಮುಖ್ಯ ಅಂಶ. ಸುರಂಗವನ್ನು ಕೊರೆಯುವಾಗ ಅಲ್ಲಲ್ಲಿ ಸಣ್ಣ ಪ್ರಮಾಣದ ಕುಸಿತಗಳಾಗುವುದು ಸಹಜ. ಆದರೆ ಹಿಂದಿನ ಐದು ವರ್ಷಗಳಲ್ಲಿ 4.5 ಕಿ.ಮೀ. ಉದ್ದದ ಈ ಸುರಂಗದ ಕಾಮಗಾರಿಯಲ್ಲಿ 20 ಬಾರಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕುಸಿತಗಳು ಉಂಟಾಗಿದ್ದರೂ ಅವುಗಳಿಂದ ಯಾವ ಪಾಠವನ್ನೂ ಕಲಿತಿಲ್ಲವೆಂಬ ಟೀಕೆಯೂ ವರದಿಯಲ್ಲಿದೆ.

ಸುರಂಗದೊಳಗೆ ಕಾಮಗಾರಿ ನಡೆಯುತ್ತಿರುವಾಗ, ಮಣ್ಣು, ಕಲ್ಲು, ಬಂಡೆಗಳು, ನೀರಿನ ಒರತೆ ಮುಂತಾದವುಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸುವ ಸಂವೇದಕ ಉಪಕರಣಗಳ ಕೊರತೆಯ ಜೊತೆಗೆ, ನ್ಯಾಷನಲ್ ಹೈವೇಸ್‌ ಆ್ಯಂಡ್‌ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್‌ ಕಾರ್ಪೊರೇಷನ್ ಲಿಮಿಟೆಡ್ (ಎನ್‍ಎಚ್‍ಐಡಿಸಿಎಲ್) ನೇಮಿಸಿದ್ದ ಪರಿಣತ ಎಂಜಿನಿಯರ್‌ರಿಂದ ಒಪ್ಪಿಗೆ ಪಡೆಯದೇ ಕಾಮಗಾರಿಯ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿರುವುದು ಮತ್ತು ಎನ್‍ಎಚ್‍ಐಡಿಸಿಎಲ್ ಅಧಿಕಾರಿಗಳ ನಿಗಾವಣೆ ಮತ್ತು ಮೇಲುಸ್ತುವಾರಿಯಲ್ಲಿನ ಕೊರತೆಯನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿನ 9.02 ಕಿ.ಮೀ. ಉದ್ದದ ಅಟಲ್ ಸುರಂಗದಲ್ಲಿ, ಮುಖ್ಯ ಸುರಂಗದ ಕೆಳಭಾಗದಲ್ಲಿ ಅಪಾಯದ ಸಂದರ್ಭದಲ್ಲಿ ಪಾರಾಗುವ ಎಸ್ಕೇಪ್ ಸುರಂಗವಿದ್ದು, ಪ್ರತಿ 400 ಮೀಟರ್‌ಗಳಿಗೆ, ಮುಖ್ಯ ಸುರಂಗದಿಂದ ಅದರೊಳಗೆ ಪ್ರವೇಶಿಸುವ ದ್ವಾರವಿದೆ. ಸಿಲ್ಕ್ಯಾರಾ ಸುರಂಗದ ಯೋಜನೆಯ ಹಂತದಲ್ಲಿ ಸರ್ಕಾರಕ್ಕೆ ನೀಡಿದ ‘ಪರಿಸರ ಪರಿಣಾಮ ಮೌಲ್ಯಮಾಪನ’ ವರದಿಯಲ್ಲಿ, 3.5 ಮೀಟರ್ ವ್ಯಾಸದ ‘ಎಸ್ಕೇಪ್ ಟನಲ್’ ನಿರ್ಮಿಸುವಂತೆ ಸೂಚಿಸಲಾಗಿತ್ತು. ಆದರೆ ಅಂತಹ ಸುರಂಗದ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಸಮಯದ ದೃಷ್ಟಿಯಿಂದ ಅದನ್ನು ಕಾರ್ಯಗತಗೊಳಿಸಿಲ್ಲವೆಂಬ ಅಭಿಪ್ರಾಯವಿದೆ.

ಸಿಲ್ಕ್ಯಾರ- ಬಡಕೋಟ್ ಸುರಂಗದಲ್ಲಿ ಎರಡೂ ಕಡೆಗಳಿಂದ ಏಕಕಾಲದಲ್ಲಿ ಸಂಚಾರ ಸಾಧ್ಯ. ಸುರಂಗದ ಉದ್ದಕ್ಕೂ ಮಧ್ಯಭಾಗದಲ್ಲಿ ಬರಲಿರುವ ಗೋಡೆಯು ಸುರಂಗವನ್ನು ಎರಡು ಭಾಗಗಳಾಗಿ ಪ್ರತ್ಯೇಕಿಸುತ್ತದೆ. ಸುರಂಗದ ಪಥದಲ್ಲಿ ಪ್ರತಿ 565 ಮೀಟರ್‌ಗಳ ದೂರದಲ್ಲಿ ಪಕ್ಕದ ಪಥಕ್ಕೆ ವಾಹನಗಳು ತೆರಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಅದೇ ರೀತಿಯಲ್ಲಿ ನಡೆಯಬೇಕಾಗಿ ಬಂದ ಸಂದರ್ಭದಲ್ಲಿ ಪಾದಚಾರಿಗಳಿಗೆ ಪ್ರತಿ 300 ಮೀಟರ್‌ಗಳಿಗೊಮ್ಮೆ ಪಕ್ಕದ ಪಥಕ್ಕೆ ತಪ್ಪಿಸಿಕೊಳ್ಳುವ ದ್ವಾರವಿರಲಿದೆ.

ಕೇಂದ್ರ ಸರ್ಕಾರ ನೇಮಿಸಿದ್ದ ಪರಿಣತರ ತಂಡವು ರಸ್ತೆ ಮತ್ತು ರೈಲು ಯೋಜನೆಗಳಲ್ಲಿ ಎದುರಾಗುವ ಸುರಂಗ ನಿರ್ಮಾಣದ ಸಮಸ್ಯೆ ಮತ್ತು ಸವಾಲುಗಳನ್ನು ನಿರ್ವಹಿಸಲು ಪ್ರತ್ಯೇಕ ‘ಸುರಂಗ ಕೇಂದ್ರ’ವೊಂದನ್ನು ಸ್ಥಾಪಿಸಬೇಕೆಂಬ ಸಲಹೆ ನೀಡಿದೆ. ‘ಸುರಂಗ ಸುರಕ್ಷತೆ’ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ ಅನ್ನು ರೂಪಿಸಿ ಜಾರಿಗೆ ತರುವಂತೆ ಸೂಚನೆ ನೀಡುವುದರೊಡನೆ, ಹಿಮಾಲಯ ಪರ್ವತ ಶ್ರೇಣಿಯ ಸುರಂಗಗಳ ವಿನ್ಯಾಸ, ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಎಲ್ಲ ಸಂಬಂಧಿತ ಕ್ಷೇತ್ರಗಳ ಪರಿಣತರನ್ನು ಒಳಗೊಂಡ ‘ಕೊಲಾಬೊರೇಟಿವ್ ಜಿಯೊಲಾಜಿಕಲ್ ಪ್ಲಾಟ್‍ಫಾರ್ಮ್‌’ವೊಂದನ್ನು ಸಂಘಟಿಸಲು ಸಲಹೆ ನೀಡಿದೆ.

ಸಿಲ್ಕ್ಯಾರಾ- ಬಡಕೋಟ್ ಅವಘಡದ ನಂತರ, ಕರ್ನಾಟಕದ 23.6 ಕಿ.ಮೀ. ಉದ್ದದ ಶಿರಾಡಿ ಘಾಟ್ ಸುರಂಗವೂ ಸೇರಿದಂತೆ ದೇಶದ ಒಂಬತ್ತು ರಾಜ್ಯಗಳಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿರುವ 29 ಸುರಂಗಗಳ ‘ಸುರಕ್ಷತಾ ಪರಿಶೋಧನೆ’ಯ (ಸೇಫ್ಟಿ ಆಡಿಟ್) ಕೆಲಸವನ್ನು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಾರಂಭಿಸಿದೆ. ಈ ಸುರಂಗಗಳಲ್ಲಿ ಗರಿಷ್ಠ 12 ಸುರಂಗಗಳು ಹಿಮಾಚಲ ಪ್ರದೇಶಲ್ಲಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ 6 ಸುರಂಗಗಳಿವೆ. ಉಳಿದಂತೆ ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನದಲ್ಲಿ ತಲಾ 2 ಮತ್ತು ಮಧ್ಯಪ್ರದೇಶ, ಕರ್ನಾಟಕ, ಛತ್ತೀಸಗಢ, ಉತ್ತರಾಖಂಡ ಮತ್ತು ದೆಹಲಿಯ ವ್ಯಾಪ್ತಿಯಲ್ಲಿ ತಲಾ ಒಂದು ಸುರಂಗವಿದೆ. ಈ ನಡುವೆ ಕಟ್ಟಡಗಳ ನಿರ್ಮಾಣಕ್ಕೆ ಮಾನಕ ಅಥವಾ ಪ್ರಮಾಣಕಗಳನ್ನು ರೂಪಿಸುವ ಜವಾಬ್ದಾರಿ ಹೊತ್ತಿರುವ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್, ಸುರಂಗ ಮತ್ತು ಇನ್ನಿತರ ನೆಲದಾಳದ ಕಾಮಗಾರಿಗಳ ಭಾಗವಾಗಿ, ಅಪಾಯದಿಂದ ತಪ್ಪಿಸಿಕೊಳ್ಳಲು ನೆರವಾಗುವ ‘ಪಾರಾಗುವ ಮಾರ್ಗ’ವನ್ನು ಕಡ್ಡಾಯವಾಗಿ ಸೇರಿಸುವ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸಿದೆ. ಸುರಂಗಗಳಿಗೆ ಸಂಬಂಧಿಸಿದಂತೆ ರೂಪುಗೊಳ್ಳುತ್ತಿರುವ ಹೊಸ ಮಾನಕದಲ್ಲಿ, ಮುಖ್ಯ ಸುರಂಗಕ್ಕೆ ಸಮಾನಾಂತರವಾಗಿ ಸಣ್ಣವ್ಯಾಸದ ಎಸ್ಕೇಪ್ ಸುರಂಗ ಇರಲಿದ್ದು, ಪ್ರತಿ ಎರಡು ಕಿ.ಮೀಗೆ ಈ ಸುರಂಗಕ್ಕೆ ಪ್ರವೇಶ ಕಲ್ಪಿಸುವ ವ್ಯವಸ್ಥೆಯಿರುವುದು ಕಡ್ಡಾಯವಾಗಲಿದೆ ಎಂಬ ಮಾಹಿತಿಯಿದೆ.

ಸಿಲ್ಕ್ಯಾರಾ ಅನಾಹುತದ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶದಲ್ಲಿ ಮೊದಲ ಬಾರಿಗೆ ‘ನ್ಯಾಷನಲ್ ಟನಲ್ ರೆಸ್ಕ್ಯೂ ಗೈಡ್‍ಲೈನ್ಸ್’ ರೂಪಿಸಲು ಪ್ರಾರಂಭಿಸಿದೆ. ಎಲ್ಲ ಸಂಬಂಧಿತ ಸಂಸ್ಥೆಗಳ ಸಹಯೋಗದಲ್ಲಿ ರೂಪುಗೊಳ್ಳುತ್ತಿರುವ ಮಾರ್ಗದರ್ಶಿ ಸೂತ್ರಗಳ ಕರಡನ್ನು ಚರ್ಚೆ, ಸಲಹೆಗಳಿಗೆ ಬಿಡುಗಡೆ ಮಾಡಿ, ಆನಂತರ ಅಂತಿಮ ರೂಪ ನೀಡುವುದಾಗಿ ಪ್ರಾಧಿಕಾರ ತಿಳಿಸಿದೆ.

ಕೇಂದ್ರ ಸರ್ಕಾರ ನೇಮಿಸಿದ ತಜ್ಞರ ಸಮಿತಿ ವರದಿ ನೀಡಿದ ಒಂದೇ ತಿಂಗಳ ಒಳಗಾಗಿ ಸುರಂಗದ ಕೆಲಸ ಮತ್ತೆ ಪ್ರಾರಂಭವಾಗಿದೆ! ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುಮತಿಯ ನಂತರ ಪ್ರಾರಂಭವಾಗಿರುವ ಈ ಕಾಮಗಾರಿಗಳು ಸದ್ಯದಲ್ಲಿ ಸಂಪೂರ್ಣವಾಗಿ ರಕ್ಷಣಾ ಸ್ವರೂಪದಲ್ಲಿ ಇರುವುದಾಗಿ ಎನ್‍ಎಚ್‍ಐಡಿಸಿಎಲ್ ಹಿರಿಯ ಅಧಿಕಾರಿ ಕರ್ನಲ್ ದೀಪಕ್ ಪಾಟೀಲ್ ತಿಳಿಸಿದ್ದಾರೆ.

ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಅಪಾಯದಿಂದ ಪಾರಾಗುವ ವ್ಯವಸ್ಥೆ ಮಾಡಿ, ಆನಂತರ ಸುರಂಗದಲ್ಲಿರುವ ಮಣ್ಣು, ಕಲ್ಲುಗಳನ್ನು ಹೊರಕ್ಕೆ ಸಾಗಿಸಿ, ನೀರನ್ನು ಹೊರಹರಿಸಿ, ಗೋಡೆ, ಚಾವಣಿಗಳಲ್ಲಿ ಉಂಟಾಗಿರುವ ಟೊಳ್ಳು, ಪೊಳ್ಳು, ಕುಳಿಗಳನ್ನು ಮುಚ್ಚಿ, ಸಂಸ್ಕರಿಸಿದ ನಂತರ ಸುರಂಗ ಕೊರೆಯುವ ಕೆಲಸ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಲ್ಕ್ಯಾರ- ಬಡಕೋಟ್ ಅವಘಡದಿಂದ ಯಾವ ಪಾಠವನ್ನು ಕಲಿಯಲಾಗಿದೆ, ಸಂಭವಿಸಿದ ಅನಾಹುತಕ್ಕೆ ಯಾರು ಹೊಣೆ, ಕಾರ್ಮಿಕರ ಸುರಕ್ಷತೆ ಎಷ್ಟರಮಟ್ಟಿಗೆ ಉತ್ತಮಗೊಂಡಿದೆ, ಸುರಕ್ಷತೆಯ ಭರವಸೆಯನ್ನು ಯಾರು ನೀಡಿದ್ದಾರೆ ಎಂಬಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆತಿಲ್ಲ ಎಂಬುದು ಅನೇಕ ಪರಿಣತರು, ನಾಗರಿಕ ಸಂಘಟನೆಗಳ ಅಭಿಪ್ರಾಯ.

********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT