ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪ್ರತಿ ಯೂನಿಟ್ ಮೇಲಿದೆ ಭವಿಷ್ಯದ ನೆರಳು!

ವಿದ್ಯುತ್ ಉತ್ಪಾದನೆ, ಸಾಗಣೆ, ಬಳಕೆಯಲ್ಲಿ ಕ್ಷಮತೆ ಹೆಚ್ಚಿಸುವತ್ತ ಗಮನಹರಿಸಬೇಕಿದೆ
Published 14 ಜೂನ್ 2023, 19:48 IST
Last Updated 14 ಜೂನ್ 2023, 19:48 IST
ಅಕ್ಷರ ಗಾತ್ರ

ಡಾ. ಕೇಶವ ಎಚ್. ಕೊರ್ಸೆ

ದೇಶದಲ್ಲಿ ಆರ್ಥಿಕ ಉದಾರೀಕರಣ ಆರಂಭಗೊಂಡ ತೊಂಬತ್ತರ ದಶಕದ ಆದಿಭಾಗದಲ್ಲಿ, ಲಂಗು ಲಗಾಮಿಲ್ಲದೆ ಜಾಗತೀಕರಣ ನೀತಿಯನ್ನು ಅಪ್ಪಿಕೊಳ್ಳುವುದನ್ನು ವಿರೋಧಿಸುವ ಜನಾಂದೋಲನದ ಮಂಚೂಣಿಯಲ್ಲಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪ್ರತಿಪಾದಿಸುತ್ತಿದ್ದ ಮಾತೊಂದಿತ್ತು. ‘ಮುಕ್ತ ಮಾರುಕಟ್ಟೆ ನೀತಿಯು ಸಂಪತ್ತನ್ನು ಹೆಚ್ಚಿಸಬಹುದು. ಆದರೆ, ಬಡವರು ಇನ್ನಷ್ಟು ಬಡವರಾದಾರು, ಕೃಷಿಯ ನೆಲೆಗಟ್ಟಾದ ನೈಸರ್ಗಿಕ ಪರಿಸರ ಇನ್ನಷ್ಟು ಕುಸಿಯಬಹುದು’ ಎಂದು.

ಉದಾರೀಕರಣ ನೀತಿಗಳು ಜಾರಿಯಾಗಿ ಮೂರು ದಶಕಗಳ ನಂತರದ ಈಗಿನ ಪರಿಸ್ಥಿಯನ್ನೊಮ್ಮೆ ಅವಲೋಕಿಸಿದರೆ, ಅವರ ಮಾತು ಬಹುಪಾಲು ನಿಜವಾಗಿರುವುದು ತೋರುತ್ತದಲ್ಲವೇ? ದೇಶದ ಆರ್ಥಿಕತೆ ಮೂರೂವರೆ ಟ್ರಿಲಿಯನ್ ಡಾಲರ್ (ಅಂದಾಜು ₹ 287 ಲಕ್ಷ ಕೋಟಿ) ಮೀರಿ ಬೆಳೆಯುತ್ತಿದ್ದರೂ, ಬಡವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ನೈಸರ್ಗಿಕ ಸಂಪನ್ಮೂಲಗಳು ನಾಶವಾಗುತ್ತ ಆರ್ಥಿಕತೆಯ ಬುಡವೇ ಅಲ್ಲಾಡುತ್ತಿದೆ!

ಮುಕ್ತ ಮಾರುಕಟ್ಟೆ ಆರ್ಥಿಕತೆ ರೂಪುಗೊಂಡರೆ, ಸಂಪತ್ತು ಸೃಷ್ಟಿ ಅಧಿಕಗೊಂಡು, ಕೆಳಮುಖವಾಗಿ ಹರಿದು ಬಡವರ ಜೀವನ ಸುಧಾರಿಸಬಲ್ಲದು ಎಂಬ ನಂಬಿಕೆ ಅರ್ಥಶಾಸ್ತ್ರಜ್ಞರದ್ದು. ಆದರೆ, ಇಂದಿನ ಅಭಿವೃದ್ಧಿ ಮಾದರಿಯಲ್ಲಿ ಸಾಕಷ್ಟು ಉದ್ಯೋಗಗಳೇ ಸೃಷ್ಟಿಯಾಗದಿರುವುದರಿಂದ, ಸಂಪತ್ತೆಲ್ಲ ಸೀಮಿತ ಜನಸಂಖ್ಯೆಯಲ್ಲಿ ಕ್ರೋಡೀಕರಣವಾಗುತ್ತಿದೆ. ಈ ಸನ್ನಿವೇಶದಲ್ಲಿ, ಕಲ್ಯಾಣರಾಜ್ಯದ ಹೊಣೆಯಿರುವ ಸರ್ಕಾರವು ನಾಗರಿಕರಿಗೆ ಸಹಾಯಹಸ್ತ ಚಾಚುವುದು ಅನಿವಾರ್ಯವಾಗುತ್ತದೆ. ರಾಜ್ಯದ ನೂತನ ಸರ್ಕಾರವು ಈಗ ಜಾರಿ ಮಾಡುತ್ತಿರುವ ‘ಗ್ಯಾರಂಟಿ’ ಯೋಜನೆಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಿದೆ.

ಈಗ ಜಾರಿಗೆ ಬರುತ್ತಿರುವ ಈ ಐದು ಯೋಜನೆಗಳನ್ನು ಮೂರು ಪ್ರಕಾರಗಳಲ್ಲಿ ವಿಂಗಡಿಸಬಹುದು. ಮೊದಲಿನದು, ಬಡತನರೇಖೆಗಿಂತ ಕೆಳಗಿರುವವರಿಗೆ ಆಹಾರಧಾನ್ಯ ನೀಡುವ ‘ಅನ್ನಭಾಗ್ಯ’ ಕಾರ್ಯಕ್ರಮ. ಹಸಿವು ನೀಗಿಸುವ ಈ ಪ್ರಯತ್ನ ನಿಜಕ್ಕೂ ಅಗತ್ಯವಾದದ್ದು. ಎರಡನೇ ಬಗೆಯದು, ನಿರುದ್ಯೋಗಿ ಪದವೀಧರರು ಹಾಗೂ ಕುಟುಂಬ ಮುನ್ನಡೆಸುವ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ‘ಯುವನಿಧಿ’ ಹಾಗೂ ‘ಗೃಹಲಕ್ಷ್ಮಿ’ ಯೋಜನೆಗಳು. ದೈನಂದಿನ ಬದುಕಿಗೆ ಸಹಾಯವಾಗುವಂತೆ ‘ನೇರ ಹಣ ಸಂದಾಯ’ ತತ್ವದಡಿ ಕನಿಷ್ಠ ಮೊತ್ತವನ್ನು ಕೊಡಮಾಡುವ ಈ ಯೋಜನೆಗಳೂ ಸ್ವಾಗತಾರ್ಹ. ಅವು ಅರ್ಹರಿಗಷ್ಟೇ ತಲುಪುವಂತೆ ಖಚಿತಪಡಿಸಬೇಕಾದ ಜವಾಬ್ದಾರಿ ಮಾತ್ರ ಸರ್ಕಾರಕ್ಕಿದೆ.

ಇನ್ನು, ಮೂರನೇ ವಿಧದ್ದೆಂದರೆ, ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಕುಟುಂಬವೊಂದಕ್ಕೆ ಎರಡು ನೂರು ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಸೌಕರ್ಯ ಯೋಜನೆಗಳು’. ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳ ಸ್ವಾಯತ್ತತೆ ಹಾಗೂ ಸಾರ್ವಜನಿಕ ಸಾರಿಗೆಯ ಸುಸ್ಥಿರತೆ- ಇವೆರಡನ್ನೂ ನಿರ್ವಹಿಸಬೇಕಾದ ಸವಾಲು ಈ ‘ಉಚಿತ ಪ್ರಯಾಣ’ ಯೋಜನೆಯ ಹೆಗಲಿಗಿದೆ. ಹೀಗಾಗಿ, ಈ ಸಂಕೀರ್ಣ ವಿಷಯದ ವಿಶ್ಲೇಷಣೆಗೆ ಪ್ರತ್ಯೇಕ ಚಿಂತನೆಯೇ ಬೇಕು. ಉಚಿತ ವಿದ್ಯುತ್ ಯೋಜನೆ ಜಾರಿಗೊಳ್ಳುತ್ತಿರುವುದರಿಂದ, ಭವಿಷ್ಯದಲ್ಲಿ ವಿದ್ಯುತ್ ಸೌಕರ್ಯವನ್ನು ಸುಸ್ಥಿರವಾಗಿಸಲು ಕೈಗೊಳ್ಳಬೇಕಾದ ಅಗತ್ಯದ ಅಂಶಗಳನ್ನು ಮಾತ್ರ ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

ಮೊದಲಿನದು, ಅತ್ಯಗತ್ಯ ಸಂಪನ್ಮೂಲವಾದ ವಿದ್ಯುತ್ತಿನ ಸ್ವರೂಪದ ಕುರಿತು ಜನಮಾನಸದಲ್ಲಿ ಕನಿಷ್ಠ ಅರಿವನ್ನಾದರೂ ಮೂಡಿಸುವ ಕುರಿತು. ವಿದ್ಯುತ್ತನ್ನು ಶೇಖರಿಸಿಡುವ ತಂತ್ರಜ್ಞಾನ ಇನ್ನೂ ಬಳಕೆಯ ಮಟ್ಟಕ್ಕಿಳಿದಿಲ್ಲ. ಹೀಗಾಗಿ, ನಾವು ವಿದ್ಯುತ್ ಬಳಸುವ ಕ್ಷಣಗಳಲ್ಲೆಲ್ಲ, ಯಾವುದೋ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅದು ಉತ್ಪಾದನೆಯಾಗುತ್ತಿದೆಯೆಂದೇ ಅರ್ಥ. ಮನೆಯ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸುವುದರ ಜೊತೆಗೆ, ಸಿಎಫ್‌ಎಲ್ ಹಾಗೂ ಎಲ್ಇಡಿ ಬಲ್ಬ್ ಬಳಸಿದರೆ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಹೀಟರ್, ರೆಫ್ರಿಜರೇಟರ್, ಇಸ್ತ್ರಿಪೆಟ್ಟಿಗೆ- ಯಾವುದೇ ಇರಲಿ, ಕಡಿಮೆ ವಿದ್ಯುತ್ತಿನಲ್ಲಿ ಹೆಚ್ಚು ಕ್ಷಮತೆಯಿಂದ ಕೆಲಸ ಮಾಡುವ ‘ಐದು ನಕ್ಷತ್ರ’ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನೇ ಬಳಸಬೇಕು. ಸ್ಥಳೀಯವಾಗಿ ಉತ್ಪಾದಿಸಲು ಸಾಧ್ಯವಿರುವ ಸೌರಶಕ್ತಿ, ಜೈವಿಕ ಅನಿಲಗಳಂಥ ಪರಿಸರಸ್ನೇಹಿ ಇಂಧನಮೂಲಗಳನ್ನು ಸಾಧ್ಯವಿದ್ದಲ್ಲೆಲ್ಲ ಬಳಸಬೇಕು.

ಇಂಥ ಅಗತ್ಯದ ಅಂಶಗಳೆಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನಸೂತ್ರಗಳಾಗಬೇಕಿದೆ. ಈ ಜನಜಾಗೃತಿಯನ್ನು ವ್ಯಾಪಕವಾಗಿಸಲು ಸರ್ಕಾರ ಸೂಕ್ತ ಕಾರ್ಯಕ್ರಮವನ್ನು ರೂಪಿಸಬೇಕು.

ಎರಡನೆಯದು, ಸಾಗಣೆಯಲ್ಲಾಗುವ ವಿದ್ಯುತ್ ನಷ್ಟದ ಕುರಿತು. ಉತ್ಪಾದನೆಯ ಕನಿಷ್ಠ ಶೇ 20ಕ್ಕೂ ಮಿಕ್ಕಿ ವಿದ್ಯುತ್, ಸಾಗಣೆಯ ಹಂತದಲ್ಲೇ ನಷ್ಟವಾಗುತ್ತಿರುವುದು ನಿರೂಪಿತ ಸಂಗತಿ. ಹಳೆಯ ತಂತಿಮಾರ್ಗಗಳು, ಕ್ಷಮತೆಯಿರದ ವಿದ್ಯುತ್ ಪರಿವರ್ತಕಗಳು, ನಿರ್ವಹಣೆಯಿರದ ಗ್ರಿಡ್, ನುರಿತ ಸಿಬ್ಬಂದಿಯ ಕೊರತೆ, ವಿದ್ಯುತ್ ನಿಗಮಗಳ ಅದಕ್ಷತೆ- ಎಷ್ಟೆಲ್ಲ ಕಾರಣಗಳು! ಸೂಕ್ತ ಆಡಳಿತತಂತ್ರ ಹಾಗೂ ತಂತ್ರಜ್ಞಾನಗಳೊಂದಿಗೆ ಇವನ್ನು ಸರಿಪಡಿಸಲೇಬೇಕಿದೆ. ಈಗಾಗಲೇ ಅಳವಡಿಸಿಕೊಂಡಿರುವ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆಯನ್ನು (ಎಸ್‌ಸಿಎಡಿಎ) ಪರಿಣಾಮಕಾರಿಯಾಗಿ ಬಳಸಿಕೊಂಡು, ವಿದ್ಯುತ್ ಕಳ್ಳತನ ಹಾಗೂ ಸೋರಿಕೆಯನ್ನೂ ತಡೆಯಬೇಕಿದೆ.

ಅಂತಿಮವಾಗಿ, ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸುಸ್ಥಿರಗೊಳಿಸುವ ಕುರಿತು. ರಾಜ್ಯದ ಒಟ್ಟೂ ವಾರ್ಷಿಕ ಬಳಕೆ ಸುಮಾರು 75 ಸಾವಿರ ಗಿಗಾವ್ಯಾಟ್ ತಲುಪುತ್ತಿದ್ದು, ವಾರ್ಷಿಕ ಸುಮಾರು ಶೇ 10ರ ವೇಗದಲ್ಲಿ ಹೆಚ್ಚುತ್ತಿದೆ. ರಾಜ್ಯದ ದೈನಂದಿನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸುಮಾರು 32 ಸಾವಿರ ಮೆಗಾವ್ಯಾಟ್‌ನಷ್ಟಿದ್ದರೂ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಆ ಉತ್ಪಾದನೆಯ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇದನ್ನು ಮೊದಲು ಸಾಧಿಸಬೇಕಿದೆ. ಈ ಹಿಂದೆ ಜಾರಿ ಮಾಡಿದ್ದ ‘ಉಜಾಲಾ’ ಯೋಜನೆಯನ್ನು ಪುನಃ ಅನುಷ್ಠಾನಗೊಳಿಸಿ, ಎಲ್ಇಡಿ ದೀಪಗಳ ಬಳಕೆಯನ್ನು ಪ್ರೋತ್ಸಾಹಿಸಬೇಕಿದೆ.

ಈಗಾಗಲೇ ಸರ್ಕಾರ ಒಪ್ಪಿಕೊಂಡಿರುವ ‘ಕರ್ನಾಟಕ ಇಂಧನ ನೀತಿ: 2022- 27’ರ ಅನ್ವಯ, 2030ರ ವೇಳೆಗೆ ಬಳಕೆಯ ಕನಿಷ್ಠ ಶೇ 50ರಷ್ಟನ್ನಾದರೂ ನವೀಕರಿಸಬಹುದಾದ ಇಂಧನಮೂಲಗಳಾದ ಸೌರಶಕ್ತಿ, ಪವನಶಕ್ತಿ, ಜೈವಿಕ ಇಂಧನದಂತಹವುಗಳಿಂದ ಪಡೆಯುವ ದಾರಿ ಕಂಡುಕೊಳ್ಳಬೇಕಿದೆ. ಮನೆಯ ಮೇಲ್ಚಾವಣಿಯಲ್ಲಿ ಸೌರಫಲಕ ಇರಿಸಿ ವಿದ್ಯುತ್ ಉತ್ಪಾದಿಸಿ ‘ಗ್ರಿಡ್’ಗೆ ಮಾರುವ ಯೋಜನೆಯೊಂದನ್ನು ರಾಜ್ಯ ಸರ್ಕಾರವು ಹಿಂದಿನ ದಶಕದಲ್ಲೇ ದೇಶಕ್ಕೇ ಮಾದರಿಯಾಗಿ ಜಾರಿಗೆ ತಂದಿತ್ತು. ಆದರೆ, ತಾಂತ್ರಿಕದೋಷ ಹಾಗೂ ಆಡಳಿತ ವೈಫಲ್ಯದಿಂದಾಗಿ ಬೇಸತ್ತಿರುವ ಜನರು, ಈ ಯೋಜನೆಯಿಂದಲೇ ಈಗ ಹಿಂದೆ ಸರಿಯುತ್ತಿರುವುದು ವಿಷಾದದ ಸಂಗತಿ. ಈ ನ್ಯೂನತೆಯನ್ನು ಶೀಘ್ರ ಸರಿಪಡಿಸಬೇಕಿದೆ.

ಉಚಿತವಾಗಿ ನೀಡುವ ವಿದ್ಯುತ್, ನಿಜಕ್ಕೂ ಉಚಿತವಾಗಿ ದೊರಕದು ತಾನೇ? ಯೂನಿಟ್ ಒಂದರ ಸರಾಸರಿ ಉತ್ಪಾದನಾ ವೆಚ್ಚ ಈಗಾಗಲೇ ಆರು ರೂಪಾಯಿಗೂ ಮೀರಿದೆ. ಇದು ನೇರ ವೆಚ್ಚ. ಇನ್ನು, ವಿದ್ಯುತ್ ಉತ್ಪಾದಿಸಲೆಂದು ಕಡಿದ ಕಾಡು, ಜಲಾಶಯಗಳು ಮುಳುಗಿಸಿದ ನದಿಕಣಿವೆಗಳು, ಯೋಜನೆಯ ಸಂತ್ರಸ್ತ ಕುಟುಂಬಗಳ ಸಂಕಷ್ಟ, ಉಷ್ಣವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಸುಡುವಾಗ ಉಂಟಾಗುವ ವಾಯು ಹಾಗೂ ಜಲಮಾಲಿನ್ಯ- ಇವನ್ನೆಲ್ಲ ಲೆಕ್ಕ ಹಾಕಿದರೆ, ಒಂದು ಯೂನಿಟ್ ವಿದ್ಯುತ್ ಮೌಲ್ಯ ಎಷ್ಟಾದೀತು? ಊಹಿಸಿ.

ಬಳಸಿದ ವಿದ್ಯುತ್ ಉಚಿತದ್ದಾಗಲಿ ಅಥವಾ ಹಣ ನೀಡಿದ್ದಾಗಲಿ- ಒಂದೊಂದು ಯೂನಿಟ್ ಮೇಲೂ ಭವಿಷ್ಯದ ಆರ್ಥಿಕತೆ ಹಾಗೂ ಪರಿಸರದ ಸುರಕ್ಷತೆಗೆ ಭಂಗ ತರುವ ನಮ್ಮ ಹೆಜ್ಜೆ ಗುರುತಿದೆ ಎಂಬುದನ್ನು ಮರೆಯದಿರೋಣ! ವಿದ್ಯುತ್ತನ್ನು ಕೊಳ್ಳುಬಾಕ ಸಂಸ್ಕೃತಿಯ ಸರಕಾಗಿ ಪೋಲುಮಾಡದೆ, ನೀರು, ಆಹಾರದಂತೆಯೇ ಅತ್ಯಗತ್ಯ ಸಂಪನ್ಮೂಲವಾಗಿ ಜತನದಿಂದ ಬಳಸಬೇಕಿದೆ. ಅಧಿಕಾರ ರಾಜಕಾರಣದ ಭರದಲ್ಲಿ ಸರ್ಕಾರವಾಗಲಿ ಅಥವಾ ಉಚಿತದ ಆಕರ್ಷಣೆಯಲ್ಲಿ ಜನಮಾನಸವಾಗಲಿ ಇದನ್ನು ಮರೆಯಬಾರದಲ್ಲವೇ?

ನೇರ ನಡೆನುಡಿಯ ಪ್ರೊ. ನಂಜುಂಡಸ್ವಾಮಿ ಅವರು ಇಂದು ಇದ್ದಿದ್ದರೆ, ಖಂಡಿತಾ ಗಟ್ಟಿಧ್ವನಿಯಲ್ಲಿ ಈ ಎಚ್ಚರಿಕೆ ನುಡಿಯನ್ನು ಹೇಳುತ್ತಿದ್ದರೇನೋ.

ಸರ್ಕಾರ ಹಾಗೂ ಸಮಾಜ- ಎರಡಕ್ಕೂ ಈ ವಿವೇಕ ಇರಲೆಂದು ಆಶಿಸೋಣ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT