ಜಮ್ಮು-ಕಾಶ್ಮೀರದ ಮತದಾರರು 90 ಸದಸ್ಯರನ್ನು ಒಳಗೊಂಡ ಹೊಸ ವಿಧಾನಸಭೆಗೆ ಸದ್ಯದಲ್ಲೇ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಲಿದ್ದಾರೆ. 2014ರ ನಂತರ ಅಲ್ಲಿ ವಿಧಾನಸಭಾ ಚುನಾವಣೆ ನಡೆದಿರಲಿಲ್ಲ. ಅಂದರೆ ಒಂದು ದಶಕದ ನಂತರ ಅಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಕ್ಷೋಭೆಗೊಳಗಾಗಿರುವ ಈ ಪ್ರದೇಶದಲ್ಲಿ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1ರಂದು ಮೂರು ಹಂತದ ಮತದಾನ ನಿಗದಿಯಾಗಿದೆ.
ಭಾರತದ ಉತ್ತರದ ತುದಿಯ ಈ ರಾಜ್ಯ, ಕೇಂದ್ರಾಡಳಿತ ಪ್ರದೇಶವಾದ ಮೇಲೆ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಮುನ್ನ 2019 ಹಾಗೂ 2024ರಲ್ಲಿ ಲೋಕಸಭೆ ಚುನಾವಣೆಗಳು ನಡೆದಿದ್ದವು. ಈ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಅಭೂತಪೂರ್ವ ಎನ್ನಬಹುದಾದ ಶೇ 58ರಷ್ಟು ಮತದಾನವಾಯಿತು. ಇದಕ್ಕೆ ಹೋಲಿಸಿದರೆ, 2019ರಲ್ಲಿ ಬರೀ ಶೇ 19ರಷ್ಟು ಜನ ಮತ ಚಲಾಯಿಸಿದ್ದರು.
ಇತರ ರಾಜ್ಯಗಳೊಂದಿಗೆ ತುಲನೆ ಮಾಡಿದರೆ, ಜಮ್ಮು-ಕಾಶ್ಮೀರ ಬಹಳ ಭಿನ್ನ. ಪಾಕಿಸ್ತಾನದ ಜತೆ ಬಹಳ ಉದ್ದದ ಗಡಿಯನ್ನು ಹೊಂದಿರುವ ಈ ಪ್ರದೇಶ, ಅನೇಕ ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಂದ ನಲುಗಿಹೋಗಿದೆ. ಭಾರತದ ಸಂವಿಧಾನದ ಅನೇಕ ನಿಬಂಧನೆಗಳು ಇಲ್ಲಿಗೆ ಅನ್ವಯಿಸುತ್ತಿರಲಿಲ್ಲ. ಇಲ್ಲಿಗೆ ಮಾತ್ರ ಅನ್ವಯಿಸುತ್ತಿದ್ದ ಹಾಗೂ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರದ್ದುಗೊಳಿಸಿತು. ಜತೆಗೆ, ವಿಧಿ 35 (ಎ) ಅಡಿಯಲ್ಲಿ ಇಲ್ಲಿನ ನಾಗರಿಕರಿಗೆ ದೊರೆಯುತ್ತಿದ್ದ ವಿಶೇಷ ಹಕ್ಕುಗಳನ್ನು ಕೂಡ ರದ್ದು ಮಾಡಿತು.
2022ರಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯಿಂದಾಗಿ ಹಿಂದೂಗಳೇ ಹೆಚ್ಚಾಗಿರುವ ಜಮ್ಮು ವಿಭಾಗಕ್ಕೆ 6 ಹಾಗೂ ಮುಸ್ಲಿಮರು ಜಾಸ್ತಿ ಇರುವ ಕಾಶ್ಮೀರ ವಿಭಾಗಕ್ಕೆ 1 ಕ್ಷೇತ್ರ ಹೆಚ್ಚುವರಿಯಾಗಿ ದೊರೆಯಿತು. ಕೇಂದ್ರ ಸರ್ಕಾರ ಜುಲೈ 17ರಂದು ಇಲ್ಲಿನ ಲೆಫ್ಟಿನೆಂಟ್ ಗವರ್ನರ್ (ಎಲ್.ಜಿ) ಅಧಿಕಾರವನ್ನು ಹೆಚ್ಚಿಸಿ, ದೆಹಲಿ ಎಲ್.ಜಿಯ ರೀತಿ ಅವರಿಗೆ ಪೊಲೀಸ್, ಐಪಿಎಸ್- ಐಎಎಸ್ ನೇಮಕಾತಿ, ಅಡ್ವೊಕೇಟ್ ಜನರಲ್ ನೇಮಕಾತಿ, ಪ್ರಾಸಿಕ್ಯೂಷನ್‌ಗೆ ಅನುಮತಿಯಂತಹ ಹೊಣೆಗಾರಿಕೆಯನ್ನು ಕೊಟ್ಟಿದೆ.
ಈ ನಿರ್ಧಾರಗಳನ್ನು ಜಾರಿ ಮಾಡಿದ ಬಿಜೆಪಿಗೆ ಮೇಲಿನ ಈ ಎಲ್ಲ ಕಾರಣಗಳಿಂದ ಹಾಲಿ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಲಿದೆ. ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಉಳಿದ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಹಾಗೂ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆ ಹೆಚ್ಚು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2 (3ರಲ್ಲಿ ಸ್ಪರ್ಧೆ, ಶೇ 24.36 ಮತ ಗಳಿಕೆ), ಎನ್‌ಸಿ 2 (3ರಲ್ಲಿ ಸ್ಪರ್ಧೆ, ಶೇ 22.3 ಮತ ಗಳಿಕೆ), ಸ್ವತಂತ್ರ ಅಭ್ಯರ್ಥಿ 1ರಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಪಿಡಿಪಿ (3ರಲ್ಲಿ ಸ್ಪರ್ಧೆ ಶೇ 8.48 ಮತ ಗಳಿಕೆ), ಕಾಂಗ್ರೆಸ್ (2ರಲ್ಲಿ ಸ್ಪರ್ಧೆ, ಶೇ 19.38 ಮತ ಗಳಿಕೆ) ಪಕ್ಷಗಳಿಗೆ ಜಯ ದೊರೆತಿರಲಿಲ್ಲ. ಬಿಜೆಪಿಯು ತನ್ನ ಭದ್ರಕೋಟೆಯಾದ ಜಮ್ಮು ವಿಭಾಗದಲ್ಲಿ ಎರಡು ಕ್ಷೇತ್ರಗಳನ್ನು ಹಾಗೂ ಕಾಶ್ಮೀರ ಕಣಿವೆಯಲ್ಲಿ ಎನ್‌ಸಿ ಎರಡು ಕ್ಷೇತ್ರಗಳನ್ನು ಗೆದ್ದವು. ಭಯೋತ್ಪಾದನೆ ಜೊತೆ ಸಂಬಂಧ ಇದೆ ಎನ್ನಲಾದ ‘ಎಂಜಿನಿಯರ್ ರಶೀದ್’ ಬಾರಾಮುಲ್ಲ ಕ್ಷೇತ್ರದಲ್ಲಿ ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದರು.
2014ರಲ್ಲಿ ನಡೆದ ಅಸೆಂಬ್ಲಿ ಸೆಣಸಾಟದಲ್ಲಿ ಪಿಡಿಪಿ 28, ಬಿಜೆಪಿ 25, ಎನ್‌ಸಿ 15 ಹಾಗೂ ಕಾಂಗ್ರೆಸ್ 12ರಲ್ಲಿ ಜಯ ಸಾಧಿಸಿದ್ದವು. ಪಿಡಿಪಿ–ಬಿಜೆಪಿ ಮೈತ್ರಿ ಏರ್ಪಟ್ಟು 2015ರಲ್ಲಿ ಸರ್ಕಾರ ರಚನೆಯಾಯಿತು. 2018ರಲ್ಲಿ ಬಿಜೆಪಿ ‘ಭದ್ರತಾ ಪರಿಸ್ಥಿತಿ ಹದಗೆಡುತ್ತಿದೆ’ ಎಂದು ಹೇಳಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ವಾಪಸ್ ಪಡೆದು ರಾಷ್ಟ್ರಪತಿ ಆಡಳಿತವನ್ನು ಹೇರಿತು. ಅದು ಇಂದಿನವರೆಗೂ ಜಾರಿಯಲ್ಲಿದೆ.
ಈ ಬಾರಿ ಜಮ್ಮು ವಿಭಾಗದ 43 ಕ್ಷೇತ್ರಗಳಲ್ಲಿ ಕೇಸರಿ ಪಕ್ಷ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸುವುದರಲ್ಲಿ ಬಹುಶಃ ಯಾರಿಗೂ ಸಂಶಯವಿಲ್ಲ. ಇದೇ ಕಾರಣಕ್ಕೆ ಜಮ್ಮು ವಿಭಾಗದ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಬಿಜೆಪಿ ವಿರೋಧಿಗಳು ಹೇಳುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯು ಕಾಂಗ್ರೆಸ್ಸನ್ನು ಸೋಲಿಸಿತ್ತು. ಎನ್‌ಸಿ ಗೆದ್ದ ಎರಡೂ ಕ್ಷೇತ್ರಗಳು ಕಾಶ್ಮೀರ ಕಣಿವೆಗೆ ಸೇರಿವೆ (ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎನ್‌ಸಿ ಹಾಗೂ ಪಿಡಿಪಿ ಒಟ್ಟು 46 ಮತ್ತು ಬಿಜೆಪಿ- ಅಪ್ನಾ ಪಾರ್ಟಿ ಒಟ್ಟು 30 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು). ಆಶ್ಚರ್ಯವೆಂದರೆ, ಬಾರಾಮುಲ್ಲ ಕ್ಷೇತ್ರದಲ್ಲಿ ಎಂಜಿನಿಯರ್ ರಶೀದ್ ಅವರ ವಿಜಯ. ಈ ಫಲಿತಾಂಶ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರುವುದೇ? ಈ ಜಯದಿಂದ ಉತ್ತೇಜಿತಗೊಂಡು, ಪ್ರತ್ಯೇಕತಾವಾದಿ ಹೋರಾಟಗಳ ಜತೆ ಗುರುತಿಸಿಕೊಂಡಿರುವ ಜನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬಹುದೇ?
ಎನ್‌ಸಿ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಈಗಾಗಲೇ ಘೋಷಣೆಯಾಗಿದೆ. ಎನ್‌ಸಿಯ ಚುನಾವಣಾ ಪ್ರಣಾಳಿಕೆ ಬಹಳಷ್ಟು ವಿವಾದವನ್ನು ಹುಟ್ಟುಹಾಕಿದೆ. ಅಧಿಕಾರಕ್ಕೆ ಬಂದರೆ 370ನೇ ವಿಧಿಯಡಿ ಮತ್ತೆ ವಿಶೇಷ ಸ್ಥಾನಮಾನ ದೊರಕುವಂತೆ ಮಾಡುವುದು, ಪಾಕಿಸ್ತಾನದ ಜತೆ ಮಾತುಕತೆ, ಎಲ್ಲ ರಾಜಕೀಯ ಕೈದಿಗಳ ಬಿಡುಗಡೆಯಂತಹ ಭರವಸೆಗಳನ್ನು ಅದು ನೀಡಿದೆ. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್‌ಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಎನ್‌ಸಿಯ ಪ್ರಣಾಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಎನ್‌ಸಿಯ ಈ ಮೇಲಿನ ವಿವಾದಾತ್ಮಕ ಅಂಶಗಳ ಬಗ್ಗೆ ಕಾಂಗ್ರೆಸ್‌ನ ನಿಲುವೇನು ಎನ್ನುವುದನ್ನು ತಿಳಿಸಬೇಕು ಎಂದಿದ್ದಾರೆ.
‘ಸುಪ್ರೀಂ ಕೋರ್ಟ್ ಈ ಬಗ್ಗೆ ಈಗಾಗಲೇ ತೀರ್ಪು ಕೊಟ್ಟಾಗಿದೆ ಹಾಗೂ ಈ ವಿಷಯದಲ್ಲಿ ಚರ್ಚೆಯ ಅಗತ್ಯವಿಲ್ಲ’ ಎಂದು ಹಿಂದಿನ ವರ್ಷದ ಕೋರ್ಟ್ ತೀರ್ಪಿನ ನಂತರ ಕಾಂಗ್ರೆಸ್ ಹೇಳಿತ್ತು. ಆದರೆ ಎನ್‌ಸಿ ಪ್ರಣಾಳಿಕೆ ಬಗ್ಗೆ ಪಕ್ಷ ಈವರೆಗೂ ತನ್ನ ಪ್ರತಿಕ್ರಿಯೆ ನೀಡಿಲ್ಲ. ‘ಚುನಾವಣೆ ಗೆದ್ದಾದ ನಂತರ ಸರ್ಕಾರ ರಚನೆಯ ವೇಳೆಗೆ ಎರಡೂ ಪಕ್ಷಗಳು ಸೇರಿ ಅಂತಿಮಗೊಳಿಸಿದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಪ್ರಕಟಿಸಲಾಗುವುದು’ ಎಂದು ಕಾಂಗ್ರೆಸ್‌ನ ವಕ್ತಾರರೊಬ್ಬರು ಹೇಳಿದ್ದಾರೆ.
ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಣಿವೆ ಪ್ರದೇಶದಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಅಪ್ನಿ ಪಾರ್ಟಿ, ಗುಲಾಮ್ ನಬಿ ಆಜಾದ್ ಅವರ ಪಕ್ಷ, ಸಜ್ಜದ್ ಲೋನ್ ಅವರ ಪೀಪಲ್ಸ್ (ಕಾನ್ಫರೆನ್ಸ್) ಪಾರ್ಟಿಯಂತಹ ಚಿಕ್ಕ ಪಕ್ಷಗಳ ಜತೆ ಅಘೋಷಿತ ಒಪ್ಪಂದ ಮಾಡಿಕೊಂಡಿತ್ತೆಂದು ಹೇಳಲಾಗಿತ್ತು. ಈ ಬಾರಿ ಕಣಿವೆ ಭಾಗದಲ್ಲಿ ಬಿಜೆಪಿ ಸ್ಪರ್ಧಿಸುವುದೇ? ಈ ಬಗ್ಗೆ ಸ್ಪಷ್ಟನೆ ಇಲ್ಲ. ಜಮ್ಮು ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ, ಕಣಿವೆಯ ಕೆಲವು ಕ್ಷೇತ್ರಗಳಲ್ಲಿ ಮೇಲ್ಕಂಡ ಚಿಕ್ಕ ಪಕ್ಷಗಳು ಗೆದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೆ ಆಶ್ಚರ್ಯವಿಲ್ಲ. ಹಾಗಾದರೆ, ಅಲ್ಪಸಂಖ್ಯಾತ ಮುಸ್ಲಿಮರೇ ಹೆಚ್ಚಾಗಿರುವ ಈ ಕೇಂದ್ರಾಡಳಿತ ಪ್ರದೇಶಕ್ಕೆ ಒಬ್ಬ ಹಿಂದೂ ಮುಖ್ಯಮಂತ್ರಿಯಾಗಿ ಬರಬಹುದು.
ಬಿಜೆಪಿಯು 2014ರ ಚುನಾವಣೆಯ ನಂತರ ಪಿಡಿಪಿ ಜತೆ ಕೈ ಜೋಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಈ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯವೂ ಸೇರಿದಂತೆ ಅನೇಕ ಕ್ಷೇತ್ರಗಳ ನಾಯಕರ ಜತೆ ಸಂಪರ್ಕ ಇಟ್ಟುಕೊಂಡಿರುವ ರಾಮ್ ಮಾಧವ್ ಅವರನ್ನು ಪಕ್ಷದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರು 370ನೇ ವಿಧಿಯಡಿ ಮತ್ತೆ ವಿಶೇಷ ಸ್ಥಾನಮಾನ ನೀಡುವವರೆಗೂ ತಾವು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಈಗ ಬಂದಿರುವ ಸುದ್ದಿ ಪ್ರಕಾರ ಒಮರ್ ಅವರು ಗಾಂದರ್‌ಬಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎನ್‌ಸಿ ಘೋಷಿಸಿದೆ. ಮೆಹಬೂಬ ಅವರ ನಿಲವು ಇನ್ನೂ ಹೊರಬಿದ್ದಿಲ್ಲ. ಹಿಂದಿನ 70ಕ್ಕೂ ಹೆಚ್ಚು ವರ್ಷಗಳಲ್ಲಿ ಅಬ್ದುಲ್ಲಾ ಅವರ ಕುಟುಂಬ 30 ವರ್ಷ ಜಮ್ಮು-ಕಾಶ್ಮೀರವನ್ನು ಆಳಿದೆ. ಮೆಹಬೂಬ ಮತ್ತು ಅವರ ತಂದೆ ಮುಫ್ತಿ ಮಹಮ್ಮದ್ ಸಯೀದ್ ಸುಮಾರು 6 ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಿದರು. ಉಳಿದ ಅವಧಿಯಲ್ಲಿ ದೆಹಲಿ ಆಡಳಿತವಿತ್ತು.
ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ, ಈಗಿನ ಚುನಾವಣೆ ಜಮ್ಮು-ಕಾಶ್ಮೀರದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಆಗಬಹುದು. ಹೊಸ ಸರ್ಕಾರ ಸ್ಥಿರವಾದುದಾಗಿರಬೇಕು ಹಾಗೂ ಜನರ ಆಶೋತ್ತರಗಳನ್ನು ಗಮನದಲ್ಲಿ ಇಟ್ಟುಕೊಂಡು ಆಡಳಿತ ನಡೆಸಬೇಕಾಗುತ್ತದೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟದ ನೇತೃತ್ವದಲ್ಲಿ ಸರ್ಕಾರ ರಚನೆಯಾದರೂ ಇಲ್ಲಿನ ಹಾಗೂ ಕೇಂದ್ರದ ಸಂಬಂಧ ಮುಂದಿನ ದಿನಗಳಲ್ಲಿ ಮಹತ್ವಪೂರ್ಣದ್ದಾಗಿರುತ್ತದೆ.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.