ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಧಿಕಾರಿಗಳಿಗೆ ‘ಆಯಕಟ್ಟಿನ’ ಸ್ಥಳ ಏಕೆ?

ಅಧಿಕಾರಿಗಳ ಸ್ಥಾನಗಳಿಗೆ ಬಳಸುವ ‘ಆಯಕಟ್ಟಿನ’ ಪದ ಬಹಳ ‘ಅರ್ಥ’ಪೂರ್ಣವಾಗಿದೆ!
Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ, ‘ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂಬ ಹೇಳಿಕೆಯಿಂದ ರಾಜಕೀಯ–ಸಾಮಾಜಿಕ ವಿವಾದ ಮಾತ್ರ ಸೃಷ್ಟಿಯಾಗಿಲ್ಲ; ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಹಲವು ಬಹಿರಂಗ ರಹಸ್ಯಗಳ ಅವಲೋಕನಕ್ಕೆ ಆಸ್ಪದವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಶಿವಶಂಕರಪ್ಪ ಅವರ ಹೇಳಿಕೆಯ ಮೂಲದಲ್ಲಿ ಎರಡು ಪ್ರಮುಖ ಅಂಶಗಳು ಅಡಕವಾಗಿವೆ. ಮೊದಲನೆಯದು, ವರ್ತಮಾನದ ಕೊರಗು ಮತ್ತು ಎರಡನೆಯದು, ಭೂತಕಾಲದ ವೈಭವ.

‘ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಅಂತಹ ‘ಒಳ್ಳೆಯ’ ಸ್ಥಾನಗಳು ಸಿಗುತ್ತಿಲ್ಲ’ ಎಂಬ ಅವರ ಅಸಹನೆಯಲ್ಲಿ ವರ್ತಮಾನದ ಕೊರಗನ್ನು ಗುರುತಿಸಬಹುದು. ಹಾಗೆಯೇ, ‘ಎಸ್.ನಿಜಲಿಂಗಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ‘ಆಯಕಟ್ಟಿನ’ ಸ್ಥಾನಗಳು ಇರುತ್ತಿದ್ದವು’ ಎಂಬ ಅವರ ವಿವರಣೆಯಲ್ಲಿ ಗತವೈಭವ ಹೊಳೆಯುತ್ತದೆ.

ಶಿವಶಂಕರಪ್ಪನವರು ಅಧಿಕಾರಿಗಳ ಸ್ಥಾನಗಳಿಗೆ ಸಂಬಂಧಿಸಿದಂತೆ ಬಳಸಿದ ‘ಒಳ್ಳೆಯ’ ಮತ್ತು ‘ಆಯಕಟ್ಟಿನ’ ಪದಗಳು ಬಹಳ ‘ಅರ್ಥ’ಪೂರ್ಣವಾಗಿವೆ. ಅಧಿಕಾರಿಗಳ ವಲಯದಲ್ಲಿ ಆಯಕಟ್ಟಿನ ಸ್ಥಾನಬಲದಿಂದ ಪ್ರಾಮಾಣಿಕವಾಗಿ, ಜನಪರವಾಗಿ, ದಕ್ಷವಾಗಿ ಸೇವೆ ಸಲ್ಲಿಸುವ ಮನಸ್ಸುಗಳು ಇಲ್ಲವಾಗಿ ಬಹಳ ಕಾಲವಾಗಿದೆ. ಈಗೇನಿದ್ದರೂ ದಂಡಿಯಾಗಿ ಕಬಳಿಕೆಗೆ ಅನುಕೂಲ ಕಲ್ಪಿಸುವ ಸ್ಥಾನಗಳನ್ನೇ ಆಯಕಟ್ಟಿನವು ಎಂದು ಪರಿಗಣಿಸಲಾಗುವುದು. ಅನ್ಯ ಮಾರ್ಗಗಳಿಂದ ಹಣ ಹುಟ್ಟಿಸುವ ಸಾಮರ್ಥ್ಯವನ್ನೇ ದಕ್ಷತೆ ಎಂದು ಕರೆಯುವ ಕಾಲವನ್ನು ನಾವು ಪ್ರವೇಶಿಸಿಯಾಗಿದೆ.

ಶಿವಶಂಕರಪ್ಪನವರು ಕಳಕಳಿ ತೋರುತ್ತಿರುವ ಅಧಿಕಾರಿಗಳು ಸಹ ಸಾಮಾನ್ಯ ವರ್ಗದವರೇನಲ್ಲ. ಅವರು ಐಎಎಸ್, ಐಪಿಎಸ್, ಕೆಎಎಸ್ ದರ್ಜೆಯ ಉನ್ನತ ಅಧಿಕಾರಿಗಳು. ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಿಗೆ ನಿಯೋಜಿಸುವ ಮೂಲಕ ಲಭಿಸುವ ಆದಾಯ ಮತ್ತು ಅಧಿಕಾರದಲ್ಲಿ ಅವರನ್ನು ರಕ್ಷಿಸುವ ಜನಪ್ರತಿನಿಧಿಗಳ ಪಾಲು ಪೂರ್ವನಿಗದಿತವಾಗಿರುತ್ತದೆ ಎಂದು ಪ್ರತ್ಯೇಕವಾಗಿ ಉಲ್ಲೇಖಿಸುವ ಅಗತ್ಯವಿಲ್ಲ. ಉಳಿದಂತೆ ಈ ಆಯಕಟ್ಟಿನ ಸ್ಥಳ ಮಹಿಮೆಯು ರಾಜಕಾರಣಿಗಳ ಪಾಲಿಗೆ ವರದಾನವಾಗುವ ವಿಶೇಷ ಸಂದರ್ಭಗಳೆಂದರೆ ಚುನಾವಣೆ ಮತ್ತು ಸ್ಥಳೀಯ ಬಿಕ್ಕಟ್ಟುಗಳ ಸಮಯ. ಆಗ ಆಯಕಟ್ಟಿನ ಸ್ಥಾನಗಳಲ್ಲಿ ಆಸೀನರಾದ ಅಧಿಕಾರಿಗಳು ತಮ್ಮ ರಕ್ಷಕರಿಗೆ ಲಾಭದಾಯಕವಾಗುವಂತೆ ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಋಣಭಾರ ಇಳಿಸಿಕೊಳ್ಳುತ್ತಾರೆ.

ಸರ್ಕಾರ ನಡೆಸುವವರು ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡುವಾಗ ತಮ್ಮ ಸಮುದಾಯಗಳಿಗೆ ಆದ್ಯತೆ ನೀಡುತ್ತಾರೆ ಎಂಬ ಶಿವಶಂಕರಪ್ಪನವರ ಹೇಳಿಕೆಯಲ್ಲಿ ಕೂಡ ಅರ್ಧಸತ್ಯ ಮಾತ್ರವಿದೆ. ಇನ್ನರ್ಧ ಸತ್ಯ ಆಯಾ ಸ್ಥಾನಗಳಿಗೆ ನಿಗದಿಯಾಗಿರುವ ‘ಬೆಲೆ’ಯನ್ನು ಅವಲಂಬಿಸಿರುತ್ತದೆ ಎಂಬುದರಲ್ಲಿ ಅಡಗಿರುತ್ತದೆ. ಇತ್ತೀಚೆಗೆ ಭೇಟಿಯಾಗಿದ್ದ, ಆಯಕಟ್ಟಿನ ಸ್ಥಾನದ ಕನಸನ್ನು ಕಾಣಲೂ ಸಾಧ್ಯವಿಲ್ಲದ ಅಪ್ಪಟ ಪ್ರಾಮಾಣಿಕ ಅಧಿಕಾರಿಯೊಬ್ಬರು ಹೇಳಿದ ಹೊಸ ಬೆಳವಣಿಗೆ ಕೇಳಿದರೆ ಯಾರಾದರೂ ಬೆಚ್ಚಿಬೀಳಬೇಕು.ಅದು ಹೀಗಿದೆ:

ಕೆಲವು ಆಯ್ದ ಆಯಕಟ್ಟಿನ ಸ್ಥಾನಗಳ ಆಕಾಂಕ್ಷಿ ಅಧಿಕಾರಿಗಳು ತಾವೇ ‘ಸ್ಥಾನಬೆಲೆ’ ಸಂದಾಯ ಮಾಡುವ ಅಗತ್ಯವಿಲ್ಲವಂತೆ. ಅಗತ್ಯವಿರುವ ಬಂಡವಾಳ ಹೂಡುವ ಮಧ್ಯವರ್ತಿಗಳೇ ಹುಟ್ಟಿಕೊಂಡಿದ್ದಾರೆ. ಒಂದು ನಿರ್ದಿಷ್ಟ ಸ್ಥಾನಕ್ಕೆ ನಿಗದಿಯಾಗಿರುವ ಮೊತ್ತವನ್ನು ಅಧಿಕಾರಿ ಪರವಾಗಿ ಹೂಡಿಕೆ ಮಾಡುವ ಈ ಹೊಸ ವರ್ಗದವರು ಅಧಿಕಾರಿಯ ವ್ಯಾಪ್ತಿಯಲ್ಲಿನ ಎಲ್ಲಾ ಆದಾಯ ಮೂಲಗಳನ್ನು ತಾವೇ ನಿರ್ವಹಿಸಿ ಅದರಲ್ಲಿ ಸಣ್ಣ ಪಾಲನ್ನು ಅಧಿಕಾರಿಗೂ ಕೊಡುತ್ತಾರೆ. ಅಧಿಕಾರಿಗಳ ಆಯಕಟ್ಟಿನ ಸ್ಥಾನಗಳಿಗೆ ಸಂಬಂಧಿಸಿದಂತೆ ಎಷ್ಟೊಂದು ಆಕರ್ಷಣೆ, ಬದಲಾವಣೆ, ಬೆಳವಣಿಗೆ!

ಅಧಿಕಾರಿಗಳ ಆಯಕಟ್ಟಿನ ಸ್ಥಾನ‘ಮಾನ’ ಹೀಗಿರುವಾಗ ಶಾಮನೂರು ಶಿವಶಂಕರಪ್ಪನವರು ‘ಎಸ್.ನಿಜಲಿಂಗಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ‘ಆಯಕಟ್ಟಿನ’ ಸ್ಥಾನಗಳು ಇರುತ್ತಿದ್ದವು’ ಎಂದು ಹೇಳುವಾಗ ತಮ್ಮ ಸಮಾಜದ ಮಾಜಿ ಮುಖ್ಯಮಂತ್ರಿಗಳಿಗೆ ಮತ್ತು ಆಗಿನ ಸರ್ಕಾರಗಳಿಗೆ ಮಾಡುತ್ತಿರುವ ಅವಮಾನ ಮತ್ತು ಹಾನಿಯ ಅರಿವು ಅವರಿಗೆ ಇದ್ದಂತಿಲ್ಲ! ಅವರು ಸಾರಾಸಗಟಾಗಿ ತಮ್ಮ ಸಮುದಾಯದಿಂದ ಆಗಿಹೋದ ಎಲ್ಲಾ ಮುಖ್ಯಮಂತ್ರಿಗಳನ್ನು, ಅದರಲ್ಲೂ ವೀರೇಂದ್ರ ಪಾಟೀಲರನ್ನು ಒಂದೇ ಸರಣಿಯಲ್ಲಿ ಸೇರಿಸಿರುವುದು ಮತ್ತಷ್ಟು ಅನಾಹುತಕಾರಿ.

ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ಲಿಂಗಸುಗೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ, ವೀರೇಂದ್ರ ಪಾಟೀಲರ ನೇತೃತ್ವದ ಆಗಿನ ಮಂತ್ರಿಮಂಡಲದಲ್ಲಿ ಸಂಪುಟ ದರ್ಜೆ ಸಚಿವೆಯಾಗಿದ್ದ ಲಿಂಗಾಯತ ಸಮುದಾಯದ ಬಸವರಾಜೇಶ್ವರಿ ಅವರಿಗೆ ಸೇರಿದ ಟ್ರ್ಯಾಕ್ಟರುಗಳನ್ನು ಜಪ್ತಿ ಮಾಡುತ್ತಾರೆ. ಎಷ್ಟೇ ಒತ್ತಡ ಇದ್ದರೂ ಪ್ರಾಮಾಣಿಕ ಅಧಿಕಾರಿಯನ್ನು ವರ್ಗಾಯಿಸಲು ಮುಖ್ಯಮಂತ್ರಿ ಒಪ್ಪುವುದಿಲ್ಲ. ಬಾಲಸುಬ್ರಮಣಿಯನ್ ಅವರೇ ಈ ಪ್ರಸಂಗವನ್ನು ತಮ್ಮ ಆತ್ಮಚರಿತ್ರೆ ‘ಕಲ್ಯಾಣ ಕೆಡುವ ಹಾದಿ’ ಕೃತಿಯಲ್ಲಿ ಉಲ್ಲೇಖಿಸಿ ಅಲ್ಲಿಂದಲೇ ಆಡಳಿತ ವ್ಯವಸ್ಥೆಯ ಪತನವನ್ನು ಗುರುತಿಸಿದ್ದಾರೆ.

ಮುಖ್ಯಮಂತ್ರಿಗಳಾದವರು ತಮ್ಮ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನಗಳನ್ನು ಕೊಡುತ್ತಾರೆ ಮತ್ತು ಈಗಿನ ಸರ್ಕಾರದಲ್ಲಿ ಲಿಂಗಾಯತರಿಗೆ ಅವಕಾಶಗಳಿಲ್ಲ ಎಂಬ ಶಿವಶಂಕರಪ್ಪ ಅವರ ಮಾತಿನಲ್ಲಿ ಹೊರನೋಟಕ್ಕೆ ತೋರುವಂತೆ ವೈರುಧ್ಯವಿಲ್ಲ. ಲಿಂಗಾಯತ ಮುಖ್ಯಮಂತ್ರಿಯ ಇಂಗಿತ ಸ್ಪಷ್ಟವಾಗಿದೆ! ಇದಕ್ಕೆ ಪೂರಕವಾಗಿ ಎಂಬಂತೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ವಿಜಯೇಂದ್ರ ಪಕ್ಷಭೇದವಿಲ್ಲದೆ ತಮ್ಮ ಸಮುದಾಯದ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

ಶಿವಶಂಕರಪ್ಪನವರು ಮುಂದುವರಿದು, ‘ನಾವು ಒಗ್ಗಟ್ಟಾಗಿ ಇಲ್ಲದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಉಪಪಂಗಡಗಳೆಲ್ಲಾ ಒಂದಾಗಬೇಕು’ ಎಂದೂ ಕರೆ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಲಿಂಗಾಯತ ಧರ್ಮವೇ ವಿವಿಧ ಕಸುಬು ಹಿನ್ನೆಲೆಯ ಹಲವಾರು ಉಪಜಾತಿಗಳ ಬಹುದೊಡ್ಡ ಸಮೂಹ. ಆದರೆ ಮುನ್ನೆಲೆಯಲ್ಲಿ ಆದ್ಯತೆ, ಪ್ರಾತಿನಿಧ್ಯ, ಅಧಿಕಾರ ಅನುಭವಿಸುತ್ತಿರುವುದು ಮೇಲ್ಮಟ್ಟದಲ್ಲಿರುವ ಬೆರಳೆಣಿಕೆಯಷ್ಟು ಲಿಂಗಾಯತ ಉಪಜಾತಿಗಳು. ಸಮಾನತೆ ಸಾರಿದ ಬಸವಣ್ಣನ ಅನುಯಾಯಿಗಳೇ ಅದನ್ನು ಪಾಲಿಸದಿದ್ದರೆ ಹೇಗೆ? ಆ ದೃಷ್ಟಿಯಿಂದ ಲಿಂಗಾಯತರಲ್ಲಿ ಎಲ್ಲಾ ಹಂತಗಳಲ್ಲಿ ಒಳಮೀಸಲಾತಿಯ ಅಳವಡಿಕೆ ಅತ್ಯಗತ್ಯ ಎನ್ನಿಸುತ್ತದೆ. ಭ್ರಷ್ಟ ಅಧಿಕಾರಿಗಳ ಆಯಕಟ್ಟಿನ ಸ್ಥಾನಗಳಿಗಾಗಿ ದನಿಯೆತ್ತುವ ಬದಲು ವೀರಶೈವ ಲಿಂಗಾಯತ ಮಹಾಸಭಾದಂತಹ ಸಂಘಟನೆಯು  ಉಪೇಕ್ಷೆಗೆ ಒಳಗಾಗಿರುವ ಉಪಪಂಗಡಗಳಿಗೆ ನ್ಯಾಯ ದೊರಕಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕಿದೆ.

ಇತ್ತೀಚೆಗೆ ಅನೇಕ ಜಾತಿಗಳು, ಧರ್ಮಗಳು ಅಸ್ಮಿತೆ ಕಾರಣಕ್ಕಾಗಿಯೋ ರಾಜಕೀಯ ಅಧಿಕಾರಕ್ಕಾಗಿಯೋ ನೇತಾರರ ಸ್ವಾರ್ಥ ಸಾಧನೆಗಾಗಿಯೋ ಸಂಘಟಿತವಾಗುವುದನ್ನು ಗಮನಿಸುತ್ತಿದ್ದೇವೆ. ದುರ್ಬಲ ವ್ಯಕ್ತಿಗಳು, ಶೋಷಿತ ಸಮುದಾಯ ಸಂಘಟಿತವಾಗುವುದರಲ್ಲಿ ಅರ್ಥ, ಅಗತ್ಯ, ಸಮರ್ಥನೆ ಎಲ್ಲವೂ ಇರುತ್ತವೆ. ಇದಕ್ಕೆ ತದ್ವಿರುದ್ಧವಾಗಿ ಪ್ರಬಲರು, ಶೋಷಕರ ಸಂಘಟನೆ ಸ್ವಸ್ಥ ಸಮಾಜಕ್ಕೆ ಅಪಾಯಕಾರಿ.

ನಿಜವಾಗಿಯೂ ಅಸ್ಪೃಶ್ಯತೆಯ ಬೇಗೆಯಲ್ಲಿ ಬೆಂದ ಸಮುದಾಯಗಳು ಮತ್ತು ದೃಶ್ಯದಲ್ಲೇ ಬಾರದ ಸಣ್ಣಪುಟ್ಟ ಶೋಷಿತ ಜಾತಿ-ಪಂಗಡಗಳಿಗೆ ಅವಕಾಶ ಕಲ್ಪಿಸುವ ದಿಸೆಯಲ್ಲಿ ದೊಡ್ಡ ಸಮಾಜಗಳು ಸಂಯಮ ವಹಿಸಬೇಕಿದೆ. ಪರಿಶಿಷ್ಟ ಜಾತಿ, ಪಂಗಡಗಳಲ್ಲದೆ ಹಿಂದುಳಿದ ಹಾಗೂ ಇತರೆ ಹಿಂದುಳಿದ ಜಾತಿಗಳೆಲ್ಲವೂ ಒಳಮೀಸಲಾತಿ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುವುದು ಕಾಲದ ಅಗತ್ಯವಾಗಿ ಕಾಣಿಸುತ್ತಿದೆ. ಹುಟ್ಟಿನ ಕಾರಣಕ್ಕೋ ನಂಬಿಕೆ-ಆಚರಣೆ ಕಾರಣಕ್ಕೋ ಆಯಾ ಜಾತಿಗಳಲ್ಲಿ ಗುರುತಿಸಲ್ಪಡುವ ಎಲ್ಲಾ ಬಲಾಢ್ಯ ಜಾತಿಗಳ ಪ್ರಜ್ಞಾವಂತರು ಈ ವಿಷಯದಲ್ಲಿ ಆಂತರಿಕ ವಿಮರ್ಶಕರಾಗಿ ಹೊಮ್ಮಿದರೆ ನಾಲ್ಕು ಹೆಜ್ಜೆ ಹಾಕಬಹುದು.

ಚಂದ್ರಕಾಂತ ವಡ್ಡು
ಚಂದ್ರಕಾಂತ ವಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT