ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಮಾತೃಧಾರೆ ಮತ್ತು ಸ್ವಸ್ಥ ಮನಸ್ಸು

ಮಾತೃತ್ವವನ್ನು ವೈಭವೀಕರಿಸದೆ, ಅದರ ಪ್ರಾಯೋಗಿಕ ಅಂಶಗಳನ್ನು ವಿಶ್ಲೇಷಿಸಬೇಕಾಗಿದೆ
Published 4 ಆಗಸ್ಟ್ 2024, 23:39 IST
Last Updated 4 ಆಗಸ್ಟ್ 2024, 23:39 IST
ಅಕ್ಷರ ಗಾತ್ರ

ಸ್ತನ್ಯಪಾನ ಸಪ್ತಾಹ ನಡೆಯುತ್ತಿದೆ. ಸ್ತನ್ಯಪಾನ ಮಾಡಿಸು ವಲ್ಲಿ ಇರುವ ಅಡ್ಡಿಗಳನ್ನು ನಿವಾರಿಸುವ ಉದ್ದೇಶದ ಧ್ಯೇಯವಾಕ್ಯವನ್ನು ನೀಡಲಾಗಿದೆ. ಮಗುವಿಗೆ ಸ್ತನ್ಯಪಾನ ಮಾಡಿಸುವುದು ಅತ್ಯುತ್ತಮವಾದದ್ದು ಎಂಬುದರಲ್ಲಿ ನಮಗೆ ಯಾವ ಸಂದೇಹವೂ ಇಲ್ಲ. ಆದರೆ, ಎದೆ ಹಾಲುಣಿಸುವಾಗ ತಾಯಿಯ ಮನಸ್ಸಿನ ಬಗೆಗೆ ನಾವು ಎಷ್ಟು ಗಮನ ಹರಿಸುತ್ತೇವೆ?! ಹಾಲು ತಾಯಿಯ ಎದೆಯಲ್ಲಿ ಹರಿದುಬರಲು ಮನಸ್ಸಿನ ಸ್ವಾಸ್ಥ್ಯ ಎಷ್ಟು ಅಗತ್ಯ? ಬಹುತೇಕ ತಾಯಂದಿರಿಗೆ ಅಥವಾ ಅವರ ಆರೈಕೆ ಮಾಡುವ ಅವರ ತಾಯಂದಿರಿಗೆ ಈ ಅಂಶದ ಬಗೆಗಿರುವ ಜ್ಞಾನ ಅರೆಬರೆಯಷ್ಟೆ.

ಒಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಆಕೆಯು ಮೊದಲೇ ಒಂದು ಮಗುವಿರುವ ತಾಯಿ. ಈಗ ಕೈಯಲ್ಲಿ ಮತ್ತೊಂದು ಹಸುಗೂಸು. ಹಸುಗೂಸಿಗೆ ಹಾಲುಣಿಸುತ್ತಲೇ ಮೊದಲ ಮಗುವಿಗೂ ಅವಳು ಸಮಯ ನೀಡಬೇಕು. ತಾಯಿಗೆ ತನಗಿಂತ ಹೊಸ ಮಗುವೇ ಹೆಚ್ಚು ಇಷ್ಟ ಎಂದು ಭಾವಿಸುವ ಮೊದಲ ಮಗು, ಹಾಲುಣಿಸುತ್ತಿರುವ ತಾಯಿಯ ಗಮನ ಸೆಳೆಯಲು ತನ್ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ತಾಯಿಗೆ ದಣಿವು. ಆಕೆ ಯಾವುದನ್ನು ಮಾಡಬೇಕು?! ಎರಡನೇ ಮಗುವಿಗೆ ಬೇಗ ಬೇಗ ಹಾಲು ಕುಡಿಸಿ, ನಿದ್ರೆ ಮಾಡಿಸಿ, ಮೊದಲ ಮಗುವನ್ನು ನಿಭಾಯಿಸತೊಡಗುತ್ತಾಳೆ. ಒಂದೇ ಗುಕ್ಕಿಗೆ ಒಂದಷ್ಟು ಹಾಲು ಹೀರಿ, ಬಾಯಾರಿಕೆಯನ್ನಷ್ಟೇ ತಣಿಸಿಕೊಂಡಿದ್ದ ಮಗು ಸ್ವಲ್ಪ ಸಮಯದಲ್ಲೇ ಎದ್ದು ಬಿಡುತ್ತದೆ! ತಾಯಿಗೆ ಸಾಕೋಬೇಕಾಗುತ್ತದೆ. ಇದು ಸಾಮಾನ್ಯವಾಗಿ ನಾವು ಎಲ್ಲೆಡೆ ನೋಡುವ ಚಿತ್ರಣ.

ಮತ್ತೆ ಮತ್ತೆ ಎದೆಹಾಲು ಉಣಿಸುವ ರೀತಿ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದರ ಮಹತ್ವ, ಒಂದು ಸ್ತನದ ಪೂರ್ತಿ ಹಾಲನ್ನು ಹೀರಿದ ನಂತರವೇ ಮತ್ತೊಂದು ಸ್ತನದಿಂದ ಮಗುವಿಗೆ ಉಣಿಸಬೇಕಾದ ಅಗತ್ಯ ಎಲ್ಲವನ್ನೂ ವೈದ್ಯಕೀಯ ತಂಡ ವಿವರಿಸಿ ಅಭ್ಯಾಸ ಮಾಡಿಸಿರುತ್ತದೆ. ಆದರೆ ಇವುಗಳನ್ನು ಪಾಲಿಸುವುದು ತಾಯಿಗೆ ಸುಲಭವಲ್ಲ. ಹಾಗೆ ಪಾಲಿಸಲು ಕುಟುಂಬದವರ ಅಪಾರ ಬೆಂಬಲದ ಜೊತೆಗೆ ಶಿಸ್ತಿನಿಂದ ಕೂಡಿದ ಗಟ್ಟಿಯಾದ ಮನೋಭಾವ ತಾಯಿಯಲ್ಲಿ ಇರಬೇಕಾಗುತ್ತದೆ. ಇಬ್ಬರು ಮಕ್ಕಳನ್ನು ಏಕಕಾಲಕ್ಕೆ ನಿರ್ವಹಿಸುವ ಒತ್ತಡದಲ್ಲಿ, ಮಗು ಎದೆಹಾಲಲ್ಲಿ ಮೊದಲು ಬರುವ ‘ಫೋರ್‌ಮಿಲ್ಕ್‌’, ಅಂದರೆ ನೀರಿನಂತಹ, ಬಾಯಾರಿಕೆ ತಣಿಸುವ ಹಾಲಿನ ಅಂಶವನ್ನು ಮಾತ್ರ ಹೀರಿ ಮಲಗಿದಾಕ್ಷಣ ತಾಯಿ ನಿಟ್ಟುಸಿರುಬಿಟ್ಟು ಸುಮ್ಮನಾಗಬಹುದು. ಬರೀ ನೀರು ಕುಡಿದರೆ ಹೊಟ್ಟೆ ತುಂಬೀತೆ? ಕೆಲ ಸಮಯದ ನಂತರ ಮಗು ಎದ್ದು ಮತ್ತೆ ಅಳಲಾರಂಭಿಸುತ್ತದೆ. ಹಾಗಾಗಿ, ಇಂತಹ ಸಮಯದಲ್ಲಿ ತಾಯಿ ಈ ಅಂಶಗಳನ್ನು ಪರಿಶೀಲಿಸಿ, ಇವುಗಳನ್ನು ಸರಿಪಡಿಸಿ, ಮಗುವಿಗೆ ಹೊಟ್ಟೆ ತುಂಬುವಂತೆ ‘ಹೈಂಡ್‌ ಮಿಲ್ಕ್‌’ (ಕುಡಿಸಲು ಆರಂಭಿಸಿದ ಕೆಲ ಸಮಯದ ನಂತರ ಬರುವ ಹಾಲು)  ಕುಡಿಸದಿದ್ದರೆ, ಆಕೆ ಒತ್ತಡ, ನಿದ್ರಾಹೀನತೆಗೆ ಗುರಿಯಾಗುವುದು ಖಂಡಿತ.

ಹೊಸ ತಾಯಂದಿರಿಗೆ ಸಾಮಾನ್ಯವಾಗಿ ಮಧ್ಯೆ ಮಧ್ಯೆ ಎದೆಹಾಲು ಕುಡಿಸುವ ಪ್ರಕ್ರಿಯೆಯಿಂದ ‘ನಿದ್ರಾಹೀನತೆ’ ದೊಡ್ಡ ಸಮಸ್ಯೆಯಾಗುತ್ತದೆ. ಇಲ್ಲಿಯೂ ತಾಯಿಯ ಮನಸ್ಸು ಯೋಚಿಸಬೇಕಾದ ರೀತಿಯೆಂದರೆ, ‘ಇದು ತಾತ್ಕಾಲಿಕ ಸ್ಥಿತಿ, ಮಗು ಬಲುಬೇಗ ಕೆಲವು ತಿಂಗಳುಗಳಲ್ಲಿ ರಾತ್ರಿ ನಿದ್ರೆ ಮಾಡುವುದನ್ನು ಕಲಿಯುತ್ತದೆ’. ಕುಟುಂಬದ ಉಳಿದವರು ತಾಯಿಯ ಈ ನಿದ್ರಾಹೀನತೆಯನ್ನು ಗುರುತಿಸುವುದು, ಗೌರವಿಸುವುದು, ಮಧ್ಯೆ ತಾವೂ ಏಳುವುದರಿಂದ ಆಕೆಗೆ ಜೊತೆ ನೀಡುವುದನ್ನು ಅವಶ್ಯವಾಗಿ ಮಾಡಬೇಕು.

ತಾಯಿಯ ಹಸಿ ಮೈಗೆ ನಾವು ಜತನದಿಂದ ಆರೈಕೆ ಮಾಡುತ್ತೇವೆ. ಆದರೆ ಆ ಸಂದರ್ಭದಲ್ಲಿ ಮನಸ್ಸೂ ‘ಹಸಿ’ಯೇ ಎಂಬುದನ್ನು ಗಮನಿಸುವುದು ಕಡಿಮೆ. ತಾಯಿಯಲ್ಲಿ ಖಿನ್ನತೆ, ಆತಂಕ, ಭ್ರಮೆ ಬರಲು ಈ ಸಂದರ್ಭವು ದೊಡ್ಡ ಕಿಂಡಿಯನ್ನೇ ತೆರೆಯಲು ಸಾಧ್ಯವಿದೆ. ಮಗುವಿನ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ, ವೈದ್ಯರು ‘ಸುರಕ್ಷಿತ’ ಎಂದು ಹೇಳಿದರೂ ಸಾಮಾನ್ಯ ಆರೋಗ್ಯದ ಸಮಸ್ಯೆಗಳಿಗೂ ‘ಔಷಧಿಯು ಎದೆಹಾಲಿನ ಮೂಲಕ ಮಗುವಿಗೆ ಹೋಗಿಬಿಟ್ಟರೆ’ ಎಂದು ಹೆದರಿ ತಾಯಿಯ ಅನಾರೋಗ್ಯದ ಸಮಸ್ಯೆಯನ್ನು ಕುಟುಂಬದವರು ನಿರ್ಲಕ್ಷಿಸುವುದು, ಒಂದೊಮ್ಮೆ ಎದೆಹಾಲು ವಿವಿಧ ಕಾರಣಗಳಿಂದ ತಾಯಿಯಲ್ಲಿ ಸ್ರವಿಸಲು ತಡವಾದಾಗ ಅದರಿಂದ ತಾಯಿ ಖಿನ್ನತೆ, ತಪ್ಪಿತಸ್ಥ ಭಾವನೆಯಿಂದ ನರಳುವುದು, ತನ್ನ ಮಗು ಮುಂದೆ ‘ಬುದ್ಧಿವಂತ’ನಾಗದಿದ್ದರೆ ಎಂದು ಆತಂಕ ಪಡುವುದು, ಎದೆಹಾಲು ನೀಡಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಿಂದ ಉದ್ಯೋಗ ಬಿಡುವುದು ಇಲ್ಲವೇ ಹಾಲು ಬಿಡಿಸುವುದು ಇವೆಲ್ಲವೂ ವೈದ್ಯರು ತಮ್ಮ ವೃತ್ತಿಜೀವನದಲ್ಲಿ ನೋಡುವಂತಹ ಸಾಮಾನ್ಯ ಸಂದರ್ಭಗಳೇ ಆಗಿರುತ್ತವೆ.

ಸಮಸ್ಯೆಯೆಂದರೆ, ಇಂತಹ ಆತಂಕದ ಮನಃಸ್ಥಿತಿ ಎದೆಹಾಲಿನ ಗುಣಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಿ, ಮಗುವಿನಲ್ಲಿ ಕಿರಿಕಿರಿ, ಹಟಮಾರಿತನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪರಿಹಾರ ‘ನಿರ್ದಿಷ್ಟ’ ಎನ್ನುವಂತೆ ಇರಲಾರದು. ಅವರವರ ಆದ್ಯತೆ, ಬೆಂಬಲ, ಆಯ್ಕೆಯನ್ನು ಅನುಸರಿಸಿ ನಿರ್ಧಾರ ಕೈಗೊಳ್ಳಬೇಕು. ವೈದ್ಯರ ಬಳಿ ಮುಕ್ತ ಮನಸ್ಸಿನ ಚರ್ಚೆ, ಅವರ ಸಲಹೆಯನ್ನು ವಿಶ್ವಾಸದಿಂದ ನಂಬುವ ಮನೋಭಾವ ಸಹಾಯಕ.

ಕೆಲವು ಸಂದರ್ಭಗಳಲ್ಲಿ ತಾಯಿಯ ಅನಾರೋಗ್ಯಕ್ಕೆ ಚಿಕಿತ್ಸೆ ಅನಿವಾರ್ಯವೆಂದಾದಾಗ, ಅದನ್ನು ಒಪ್ಪಿಕೊಳ್ಳುವುದು ಸೂಕ್ತ. ಏಕೆಂದರೆ ತಾಯಿಯ ಅನಾರೋಗ್ಯದಿಂದ, ತಾಯಿ-ಮಗು ಇಬ್ಬರ ಮನಃಸ್ಥಿತಿಯ ಮೇಲೆ ಆಗುವ ಪರಿಣಾಮ, ಅದರಿಂದ ಇಳಿಯುವ ಎದೆಹಾಲಿನ ಗುಣಮಟ್ಟವನ್ನು ಗಮನಿಸದಿದ್ದರೆ, ತಾಯಿ-ಮಗು ಅನಾರೋಗ್ಯದ  ವರ್ತುಲದೊಳಕ್ಕೆ ಸಿಲುಕಲು ಅದು ಕಾರಣವಾಗಿಬಿಡಬಹುದು.

ಸ್ತನ್ಯಪಾನ ಸಪ್ತಾಹದ ಸಂದರ್ಭದಲ್ಲಿ, ಎದೆಹಾಲನ್ನು ಬಿಡಿಸುವಾಗ ನಡೆಯಬೇಕಾದ ಸುಗಮ ಪ್ರಕ್ರಿಯೆಯ ಬಗೆಗೂ ನಾವು ಗಮನಹರಿಸಲೇಬೇಕು. ಒಂದರಿಂದ ಎರಡು ವರ್ಷಗಳ ಕಾಲ ಹಾಲುಣಿಸಿದ ಮೇಲೆಯೂ ತಾಯಿಗೆ ಹಾಲು ಬಿಡಿಸುವಾಗ ಸಂಕಟ, ತಪ್ಪಿತಸ್ಥ ಭಾವನೆ ಕಾಡುವುದು ಸಹಜ. ಅದರೊಂದಿಗೆ ಮಗು ಇನ್ನು
ಮುಂದೆ ತನ್ನನ್ನು ಅವಲಂಬಿಸುವುದಿಲ್ಲ ಎಂಬ ಆತಂಕವೂ! ಮಗುವಿನ ‘ಚೀಪುವ ಆನಂದ’ವನ್ನು
ಶಿಸ್ತಿನಿಂದ ಬಿಡಿಸಲು ಅಮ್ಮಂದಿರಿಗೆ ಅದೆಷ್ಟು ಕಷ್ಟ! ತಾಯಿಯ ಎದೆಹಾಲುಣ್ಣುವಾಗ ಸಿಗುವ ಸುರಕ್ಷಿತ ಭಾವವನ್ನು ಮಕ್ಕಳು ಇತರ ವಿವಿಧ ಚಟುವಟಿಕೆಗಳ ಮೂಲಕ ಕಂಡುಕೊಳ್ಳಲು ಮುಂದಾಗುತ್ತಾರೆ. ಹೆಬ್ಟೆಟ್ಟು ಚೀಪುವುದು, ಬಟ್ಟೆ ತುಂಡನ್ನು ಮೂಸುವುದು, ಗೊಂಬೆಯನ್ನು ಹಿಡಿದೇ ಮಲಗುವುದು, ಹಾಲಿನ ಬಾಟಲಿ ಬಾಯಿಯಲ್ಲಿಟ್ಟೇ ನಿದ್ರೆ ಮಾಡುವಂತಹ ಕ್ರಿಯೆಗಳು ಇದರಲ್ಲಿ ಸೇರುತ್ತವೆ. ಇವುಗಳಿಂದ ಬರುವ ಇತರ ಆರೋಗ್ಯ ಸಮಸ್ಯೆಗಳೂ ವೈವಿಧ್ಯಮಯವೇ. ಎದೆ ಹಾಲುಣ್ಣುವ ಪ್ರಕ್ರಿಯೆ ಇಲ್ಲದೆಯೂ ಮಗುವಿನಲ್ಲಿ ‘ಸುರಕ್ಷತೆ’ಯ ಭಾವ ಮೂಡುವಂತೆ ಮಾಡಬಹುದು ಎಂಬುದನ್ನು ಇಲ್ಲಿ ನಾವು ನೆನಪಿಡಬೇಕು. ತಾಯಿ ಹಾಗೂ ಇತರ ಹಿರಿಯರು ಹಲವು ಚಟುವಟಿಕೆಗಳ ಮೂಲಕ ಅದರೊಂದಿಗೆ ಒಡನಾಡುವುದರಿಂದ ಇದು ಸಾಧ್ಯ ಎನ್ನುವುದು ಗಮನಾರ್ಹ ಅಂಶ.

ಎದೆ ಹಾಲುಣಿಸುವುದು ಮತ್ತು ಮಾತೃತ್ವವನ್ನು ವೈಭವೀಕರಿಸುವ ಪ್ರವೃತ್ತಿಯಿಂದ ತಾಯಿ-ಮಗು ಇಬ್ಬರ ಆರೋಗ್ಯಕ್ಕೆ ಹೆಚ್ಚೇನೂ ಉಪಯೋಗ ಆಗಲಾರದು. ಅದರ ಬದಲು ‘ಎದೆ ಹಾಲುಣಿಸುವ’ ಪ್ರಕ್ರಿಯೆಯ ಪ್ರಾಯೋಗಿಕ ಅಂಶಗಳನ್ನು ವಿಶ್ಲೇಷಿಸಿ, ತಾಯಿಗೆ ವಿವಿಧ ರೀತಿಯಲ್ಲಿ ನಾವು ಬೆಂಬಲ ನೀಡುವಂತಾದರೆ, ಸ್ವಸ್ಥ- ಸುಖಿ ತಾಯಿ ಮತ್ತು ಆರೋಗ್ಯವಂತ ಮಗು ಇಬ್ಬರೂ ನಮ್ಮ ಮಧ್ಯೆ ಹೆಚ್ಚಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT