ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ಭಾಷಾ ಪತ್ರಿಕೆಯಲ್ಲಿ ಅನುತ್ತೀರ್ಣರಾಗುತ್ತಿರುವವರ ಪ್ರಮಾಣ ಜಾಸ್ತಿಯಾಗುತ್ತಿದೆ ಎನ್ನುವುದು ಪ್ರತಿಬಾರಿಯೂ ಕೇಳಿಬರುತ್ತದೆ. ಆದರೆ ಇದಕ್ಕೆ ಕಾರಣ ಪತ್ತೆ ಹಚ್ಚಿ ಸಮಸ್ಯೆಯನ್ನು ಪರಿಹರಿಸುವ ಕ್ರಮಗಳು ಕಾಣಿಸುತ್ತಿಲ್ಲ. ಪರಿಹಾರದ ಕ್ರಮಗಳನ್ನು
ಕಂಡುಕೊಳ್ಳಬೇಕಾದರೆ ಸಮಸ್ಯೆಯ ಸ್ವರೂಪವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಎಲ್ಲಕ್ಕೂ ಮುಖ್ಯವಾಗಿ ಇಂದಿನ ಒಟ್ಟು ಶೈಕ್ಷಣಿಕ ಸನ್ನಿವೇಶವೇ ಭಾಷಾಶಾಸ್ತ್ರದ ಅಧ್ಯಯನವನ್ನು ‘ಅನುಪಯುಕ್ತ’ ಎಂಬ ಅರ್ಥದಲ್ಲಿ ಸಾಂಕೇತಿಕವಾಗಿಸಿದೆ. ಭಾಷಾಶಾಸ್ತ್ರದ ನಿಷ್ಪ್ರಯೋಜಕತ್ವದ ಪ್ರಜ್ಞೆಯು ಕನ್ನಡವನ್ನು ಮಾತ್ರ ಬಾಧಿಸುತ್ತಿಲ್ಲ; ಇಂಗ್ಲಿಷ್, ಹಿಂದಿ, ಸಂಸ್ಕೃತ... ಹೀಗೆ ಎಲ್ಲ ಭಾಷಾ ಪಠ್ಯಗಳನ್ನೂ ಬಾಧಿಸುತ್ತಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಇಂಗ್ಲಿಷ್ನ ವಿಷಯಕ್ಕಾದಾಗ ಸಂವಹನ ಭಾಷೆಯಾಗಿ ಅದಕ್ಕೊಂದು ಮಹತ್ವವನ್ನು ಕೊಡಲಾಗುತ್ತದೆ. ಅಲ್ಲಿಗೆ ಇತರ ಭಾಷಾ ಪಠ್ಯಗಳ ಕಲಿಕೆ ಚೆನ್ನಾಗಿ ನಡೆಯುತ್ತಿದೆ ಎಂದೇನೂ ಇಲ್ಲ. ಬಹಳಷ್ಟು ಪದವಿಪೂರ್ವ ವಿಜ್ಞಾನ ಕಾಲೇಜುಗಳಲ್ಲಿ ಭಾಷಾ ಪಠ್ಯಗಳ ಬೋಧನೆ ಮೂರು ಅಥವಾ ನಾಲ್ಕು ತಿಂಗಳಲ್ಲಿ ಮುಗಿದು, ನಂತರ ಆ ಅವಧಿಗಳು ನೀಟ್, ಸಿಇಟಿ ಕೋಚಿಂಗ್ ತರಗತಿಗಳಾಗಿ ಬದಲಾಗುವುದನ್ನು ಕಾಣಬಹುದು.

ಶೈಕ್ಷಣಿಕ ಸನ್ನಿವೇಶವು ಈ ಮಾದರಿಯಲ್ಲಿ ರೂಪು ಗೊಳ್ಳಲು ಉನ್ನತ ಶಿಕ್ಷಣ ಮತ್ತು ಔದ್ಯೋಗಿಕ ಸಂಘಟನೆಗಳೂ ಕಾರಣವಾಗಿವೆ. ಉನ್ನತ ಶಿಕ್ಷಣದ ಪಾರಂಪರಿಕ ವ್ಯವಸ್ಥೆಯು ಕುಸಿದುಬಿದ್ದಿದೆ. ಹೆಚ್ಚು ಔದ್ಯೋಗಿಕ ಸ್ವರೂಪದ ಹೊಸ ಹೊಸ ಕೋರ್ಸುಗಳು ಪ್ರಾಮುಖ್ಯ ಪಡೆದಿವೆ. ಆರ್ಥಿಕ ವ್ಯವಸ್ಥೆಯ ಮರು ನಿರೂಪಣೆಯಲ್ಲಿ ಇದು ತೀರಾ ಸಹಜ. ಆದರೆ ಈ ಪ್ರಕ್ರಿಯೆಯು ಭಾಷಾ ಕೌಶಲವನ್ನು ಬಹಳ ಕನಿಷ್ಠ ಮಟ್ಟಕ್ಕೆ ಇಳಿಸಿದೆ. ಈ ಇಡೀ ಶೈಕ್ಷಣಿಕ ಮತ್ತು ಔದ್ಯೋಗಿಕ ಘಟಕಗಳಿಗೆ ಸಂವಹನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಇಂಗ್ಲಿಷ್ ಗೊತ್ತಿರಬೇಕು. ಅದರ ಹೊರತಾಗಿ ಇಂಗ್ಲಿಷೂ ಸೇರಿದ ಹಾಗೆ ಬೇರೆ ಯಾವುದೇ ಭಾಷಾಶಾಸ್ತ್ರ ಜ್ಞಾನದ ಅವಶ್ಯಕತೆಯೂ ಇಲ್ಲ.

ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳು ಬಹುಮಟ್ಟಿಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಹೊಂದಿರುತ್ತವೆ. ಇದಕ್ಕೆ ಭಾಷಾ ಶಿಕ್ಷಕರ ನೇಮಕಾತಿ ಪರೀಕ್ಷೆಯೂ ಹೊರತಲ್ಲ. ಅಂದರೆ ಭಾಷಾ ಶಿಕ್ಷಕರ ಭಾಷಾ ಕೌಶಲವನ್ನೇ ವ್ಯಾಪಕವಾಗಿ ಪರೀಕ್ಷಿಸುವ ವ್ಯವಸ್ಥೆ ಇಲ್ಲ! ಯುಪಿಎಸ್ಸಿ, ಕೆಪಿಎಸ್ಸಿ ಪ್ರಬಂಧ ಮಾದರಿಯ ಪ್ರಶ್ನೆಗಳ ಪರೀಕ್ಷೆಗಳಲ್ಲಿಯೂ ವಿಷಯವನ್ನು ಒಂದೊಂದು ಅಂಶವಾಗಿ ಹೇಳುವುದಕ್ಕೆ ಮಹತ್ವ ಇದೆಯೇ ವಿನಾ ಪ್ರಬಂಧ ಮಾದರಿಯಲ್ಲೇ ಉತ್ತರಿಸಬೇಕೆಂಬ ನಿರೀಕ್ಷೆ ಇಲ್ಲ. ವಿಷಯ ಗೊತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಮಾತ್ರ ಅಲ್ಲಿನ ಉದ್ದೇಶ. ಭಾಷಾ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದು ಬೇಕಾಗಿಲ್ಲ.

ಈ ರೀತಿಯ ಶೈಕ್ಷಣಿಕ ಮತ್ತು ಆರ್ಥಿಕ ಸನ್ನಿವೇಶದ ನಿರ್ಮಾಣದಲ್ಲಿ ಸಿಇಟಿ ಮತ್ತು ನೀಟ್ ವ್ಯವಸ್ಥೆಗಳು ಉಳಿದೆಲ್ಲ ಕಲಿಕೆಗಳ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಶಿಕ್ಷಣೋದ್ಯಮದ ಕತ್ತು ಕುಯ್ಯುವ ಸ್ಪರ್ಧೆ ಹೇಗಿದೆ ಎಂದರೆ, ಒಂದು ಕಾಲೇಜಿನ ಪರಿಸರದಲ್ಲಿ ಮತ್ತೊಂದು ಕಾಲೇಜಿನವರು ಮಫ್ತಿಯಲ್ಲಿ ಬಂದು ನಿಲ್ಲುವುದು, ಆ
ಕಾಲೇಜಿಗೆ ಸೇರಲೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬಸ್ ಇಳಿದ ತಕ್ಷಣ ಅವರ ಬಳಿ ಹೋಗಿ ಅವರು
ಸೇರಬಯಸಿದ ಕಾಲೇಜು ನೀಟ್, ಸಿಇಟಿ ಕೋಚಿಂಗ್ಗೆ ಯಾಕೆ ಸೂಕ್ತವಾಗಿಲ್ಲ ಎಂದು ಅವರಿಗೆ ವಿವರಿಸುವುದು, ತಮ್ಮ ಕಾಲೇಜು ಹೇಗೆ ಅತ್ಯುತ್ತಮವಾಗಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟು ಅಲ್ಲಿಂದಲೇ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ತಮ್ಮ ಕಾಲೇಜಿಗೆ ಕರೆದೊಯ್ದು ದಾಖಲಾತಿ ಮಾಡಿಸುವಂತಹುದನ್ನು ಕಾಣಬಹುದು. ಸ್ಪರ್ಧಾತ್ಮಕ ಶಿಕ್ಷಣೋದ್ಯಮಕ್ಕೆ ಇದು ಅನಿವಾರ್ಯ. ಆದರೆ ಇದರಿಂದ ವಿದ್ಯಾರ್ಥಿಯ ಆಯ್ಕೆಯ ಸ್ವಾತಂತ್ರ್ಯವೇ ಹೊರಟು ಹೋಗುತ್ತದೆ.

ನೀಟ್, ಸಿಇಟಿ ಫಲಿತಾಂಶವೇ ಕಾಲೇಜಿನ ಗುಣಮಟ್ಟದ ನಿರ್ಧಾರಕವೂ ಆಗುತ್ತದೆ. ಅಂಕಗಳ ಆಧಾರದಲ್ಲಿ
ಬುದ್ಧಿವಂತರಾದವರೆಲ್ಲರೂ ನೀಟ್, ಸಿಇಟಿಯನ್ನೇ ಆರಿಸಿಕೊಂಡಾಗ ಕ್ರಮೇಣ ಈ ಪ್ರವೇಶ ಪರೀಕ್ಷೆಗಳ ಮೂಲಕವೇ ಅಧ್ಯಯನ ನಡೆಸಿ ಉದ್ಯೋಗ ಬಯಸುವ ಕ್ಷೇತ್ರಗಳಲ್ಲಿ ಅತಿಯಾದ ಸ್ಪರ್ಧೆ ಉಂಟಾಗುತ್ತದೆ. ಅದರಿಂದಾಗಿ ಅವಕಾಶಗಳು ಕಡಿಮೆ ಆಗುತ್ತವೆ. ಬುದ್ಧಿವಂತರೇ ಹೆಚ್ಚು ಹೆಚ್ಚು ಅವಕಾಶವಂಚಿತರಾಗುವ ಸ್ಥಿತಿ ಬರುವ ತನಕವೂ ನೀಟ್, ಸಿಇಟಿ ವ್ಯವಸ್ಥೆಗಳು ಶಿಕ್ಷಣದ ಇತರ ಎಲ್ಲ ಕ್ಷೇತ್ರಗಳನ್ನೂ ಪ್ರಭಾವಿಸುವುದು ಮುಂದುವರಿಯಲಿದೆ. ಆದರೆ ಈ ಪ್ರಭಾವವೇ ಯಾವ ಉದ್ಯೋಗಕ್ಕೂ ಭಾಷಾಶಾಸ್ತ್ರದ ಜ್ಞಾನದ ಅವಶ್ಯಕತೆ ಇಲ್ಲ, ವಿಷಯ ಜ್ಞಾನ ಇದ್ದರೆ ಸಾಕು ಎಂಬ ಚಿಂತನೆಯನ್ನು ಹುಟ್ಟಿಸಿದೆ. ಅಂದರೆ ಭಾಷಾ ಕಲಿಕೆಗೆ ಮಹತ್ವವನ್ನು ತರಬೇಕಾದರೆ ಮೊದಲು ಔದ್ಯೋಗಿಕ ಕ್ಷೇತ್ರಕ್ಕೆ ಭಾಷಾ ಸಾಮರ್ಥ್ಯ ಇರುವ ಅಭ್ಯರ್ಥಿಗಳು ಬೇಕು ಮತ್ತು ಅದಕ್ಕಾಗಿ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಷಾಶಾಸ್ತ್ರದ ಸಾಮರ್ಥ್ಯವನ್ನು ಪರೀಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಉನ್ನತ ಶಿಕ್ಷಣ ಸಂಘಟಿತವಾಗಿರುವ ಕ್ರಮವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮೇಲೂ ಪ್ರಭಾವ ಬೀರುತ್ತದೆ. ಮೇಲ್ನೋಟಕ್ಕೆ ಈ ಪ್ರಭಾವ ಗೊತ್ತಾಗುವು ದಿಲ್ಲ. ತುಸು ಆಳವಾಗಿ ಅಭ್ಯಸಿಸಿದಾಗ ಗೊತ್ತಾಗುತ್ತದೆ. ಎರಡು– ಮೂರು ದಶಕಗಳ ಹಿಂದೆ ಪ್ರೌಢ ಶಿಕ್ಷಣದಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ತೆಗೆದುಕೊಂಡರೆ ಒಳ್ಳೆಯ ಅಂಕಗಳನ್ನು ಪಡೆಯಲು ಸುಲಭವಾಗುತ್ತದೆ ಎಂಬ ಭಾವನೆ ಇತ್ತು. ಏಕೆಂದರೆ ಸಂಸ್ಕೃತ ಪತ್ರಿಕೆಯನ್ನು ಕನ್ನಡದಲ್ಲಿ ಬರೆಯಬಹುದಾಗಿತ್ತು. ಬಲು ಸರಳವಾಗಿ ಪ್ರಶ್ನೆಪತ್ರಿಕೆಯನ್ನು ಸಂಯೋಜಿಸಲಾಗುತ್ತಿತ್ತು. ಈಗ ಎಲ್ಲ ಭಾಷಾ ಪಠ್ಯಗಳ ಪ್ರಶ್ನೆಪತ್ರಿಕೆಯನ್ನೂ ಅತಿ ಸರಳಗೊಳಿಸ ಲಾಗಿದೆ. ಒಂದು ‘ಪತ್ರ’ ಬರವಣಿಗೆಗೆ ನಾಲ್ಕು ಅಂಕಗಳು, ಒಂದು ‘ಪದ್ಯ ಕಂಠಪಾಠ’ಕ್ಕೆ ನಾಲ್ಕು ಅಂಕಗಳು, ಒಂದು ‘ರಜೆ ಅರ್ಜಿ’ಗೆ ನಾಲ್ಕು ಅಂಕಗಳು, ಒಂದು ‘ಪ್ರಬಂಧ’ಕ್ಕೆ ನಾಲ್ಕು ಅಂಕಗಳು, ಇನ್ನೊಂದು ಹತ್ತು ಅಂಕಗಳಿಗೆ ಬೇಕಾದಷ್ಟು ಒಂದು ಅಂಕದ ವ್ಯಾಕರಣಾಂಶಗಳು ಎಂಬ ಶೈಲಿಯಲ್ಲಿ ಅಂದಾಜಿಸಿ ಅಷ್ಟಕ್ಕೆ ಮಾತ್ರ ಭಾಷಾ ಪಠ್ಯವನ್ನು ಕಲಿಸುವ ಮತ್ತು ಕಲಿಯುವ ಪದ್ಧತಿ ಬಂದಾಗಿದೆ. ಅಂದರೆ ಭಾಷಾ ಕೌಶಲಗಳನ್ನು ಕಲಿಸುವುದೇ ಇಲ್ಲ!

ಆಗ ಕನ್ನಡ ಭಾಷೆಗೆ ಸಂಬಂಧಿಸಿದ ಸ್ಥಿತಿ ಹೇಗಿರುತ್ತದೆ? ವಿದ್ಯಾರ್ಥಿಗಳು ಕನ್ನಡದ ಸನ್ನಿವೇಶದಲ್ಲಿ ಇರುವುದರಿಂದ ಸಂವಹನ ಭಾಷೆಯಾಗಿ ಅವರಿಗೆ ಕನ್ನಡ ತಿಳಿದಿರುತ್ತದೆ. ಆದರೆ ಸಂವಹನ ಕನ್ನಡ ಎನ್ನುವುದು ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಧಾರವಾಡ ಕನ್ನಡ, ವಿಜಯಪುರ ಕನ್ನಡ, ಬೀದರ್ ಕನ್ನಡ ಎಂದೆಲ್ಲ ನಾನಾ ಸ್ವರೂಪದಲ್ಲಿರುತ್ತದೆ. ಆದರೆ ಸಂವಹನ ಭಾಷೆಯಾಗಿ ಹೊಂದಿರುವ ತಿಳಿವಳಿಕೆಯೇ ಭಾಷಾಶಾಸ್ತ್ರದ ವ್ಯವಸ್ಥಿತ ಅಧ್ಯಯನವೂ ಆಗಿರುವುದಿಲ್ಲ, ಭಾಷಾ ಕೌಶಲವೂ ಆಗಿರುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಬೇಕಾದರೆ ಭಾಷಾ ಬೋಧನೆಯ ಗುಣಮಟ್ಟ
ವನ್ನು ಹೆಚ್ಚಿಸಬೇಕು ಮತ್ತು ಪ್ರಶ್ನೆಪತ್ರಿಕೆಯ ಮಟ್ಟವನ್ನು ತುಸು ಏರಿಸಬೇಕು. ಆಗ ಒಂದು ಬಾರಿಗೆ ಫಲಿತಾಂಶ ಇನ್ನೂ ಕಡಿಮೆ ಬಂದೀತು. ಆದರೆ ನಿಧಾನವಾಗಿ ಭಾಷಾ ಕಲಿಕೆ ಚೇತರಿಸಿಕೊಳ್ಳುತ್ತದೆ.

ಭಾಷಾ ಕಲಿಕೆಯ ಉನ್ನತೀಕರಣವು ಪ್ರೌಢಶಾಲೆಗಿಂತ ಮುಖ್ಯವಾಗಿ ಪ್ರಾಥಮಿಕ ಶಾಲೆಯಲ್ಲಿ ಆಗಬೇಕು. ಅಕ್ಷರಗಳ ಅರಿವು, ಪದಗಳ ನಿರ್ಮಾಣ, ಸರಳ ವಾಕ್ಯ, ಸಂಯುಕ್ತ ವಾಕ್ಯ, ಸಂಕೀರ್ಣ ವಾಕ್ಯ ರಚನೆಯ ಕೌಶಲವು ಐದನೇ ತರಗತಿಯ ಮೊದಲು ಆಗದೇ ಇದ್ದರೆ ಮುಂದೆ ಅದನ್ನು ಕಲಿಯುವುದು ಮತ್ತು ಕಲಿಸುವುದು ಬಹಳ ಕಷ್ಟಕರ ಆಗಿರುತ್ತದೆ. ಏಕೆಂದರೆ ಮುಂದಿನ ಹಂತದಲ್ಲಿ ಕಲಿಕಾಂಶ ಗಳು ವಿಸ್ತರಿಸಲ್ಪಡುತ್ತವೆ. ವಿಸ್ತರಿಸಲ್ಪಟ್ಟ ಕಲಿಕಾಂಶ ಗಳನ್ನು ಬೋಧಿಸದೆ ಮುಂದಿನ ತರಗತಿಗಳ ಪರೀಕ್ಷೆ ನಡೆಸಲು ಬರುವುದಿಲ್ಲ. ಆ ತರಗತಿಗಳ ಬೋಧನಾಂಶಗಳನ್ನು ಬೋಧಿಸಿದರೆ ವಾಕ್ಯ ರಚನೆಯೇ ಗೊತ್ತಿಲ್ಲದವನಿಗೆ ಏನೂ ಅರ್ಥವಾಗುವುದಿಲ್ಲ. ಹಾಗೆಂದು ಅನುತ್ತೀರ್ಣಗೊಳಿಸಲು ಆಗುವುದಿಲ್ಲ, ಅನುತ್ತೀರ್ಣಗೊಳಿಸಿದರೂ ಉಪಯೋಗವಿಲ್ಲ ಎನ್ನುವ ಬಿಕ್ಕಟ್ಟಿನ ಸನ್ನಿವೇಶದಲ್ಲೇ ಮುಂದಿನ ತರಗತಿಗಳು ಮುಂದುವರಿಯುತ್ತವೆ. ಭಾಷೆಯ ವಿಷಯಗಳು ಗೊತ್ತಿದ್ದರೂ ವಾಕ್ಯ ರಚಿಸಿ ಬರೆಯಲು ಗೊತ್ತಿಲ್ಲದೇ ಬಹಳಷ್ಟು ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಯಲ್ಲಿ ಅನುತ್ತೀರ್ಣಗೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ಅಕ್ಷರಗಳನ್ನು ಜೋಡಿಸಿ ಪದ ರಚಿಸುವಾಗ ಉಂಟಾಗುವ ದೋಷಗಳೂ ಅನುತ್ತೀರ್ಣತೆಗೆ ಕಾರಣವಾಗಬಹುದು.

ಭಾಷಾ ಕಲಿಕೆಯ ದೋಷಗಳನ್ನು ಪ್ರಾಥಮಿಕ ಶಿಕ್ಷಣದಲ್ಲೇ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಪ್ರಾಥಮಿಕ ಶಾಲೆಯ ಭಾಷಾ ಶಿಕ್ಷಕರಿಗೆ ಇತರ ಕೆಲಸಗಳ ಹೊರೆಯನ್ನು ಕಡಿಮೆ ಮಾಡಿ, ಭಾಷೆಯನ್ನು ಕಲಿಸಲು ಸಮಯ ಒದಗಿಸಬೇಕು. ಆಗ ಮಾತ್ರ ಭಾಷಾ ಕಲಿಕೆಯ ಸಮಸ್ಯೆಯನ್ನು ನಿವಾರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.