ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಗ್ರಹಿಸಬೇಕಿದೆ ಫಲಿತಾಂಶದ ಸಂದೇಶ

Published 10 ಜೂನ್ 2024, 0:11 IST
Last Updated 10 ಜೂನ್ 2024, 0:11 IST
ಅಕ್ಷರ ಗಾತ್ರ

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸಿದಾಗ ಮತದಾರರು ಅತ್ಯಂತ ಪ್ರಬುದ್ಧರಾಗಿ ಮತ ಚಲಾಯಿಸಿದ್ದಾರೆ ಎನ್ನುವುದು ಮನವರಿಕೆ ಆಗುತ್ತದೆ. ಈ ಫಲಿತಾಂಶವು ನಿಸ್ಸಂಶಯವಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ಐತಿಹಾಸಿಕ ಗೆಲುವು. ಇಂತಹ ವಿಸ್ಮಯಕಾರಿ ಫಲಿತಾಂಶವನ್ನು ಯಾವುದೇ ಮತಗಟ್ಟೆ ಸಮೀಕ್ಷೆಗೂ ಗ್ರಹಿಸಲು ಸಾಧ್ಯವಾಗಲಿಲ್ಲ. ಈ ಫಲಿತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ದೇಶದ ಪ್ರಜೆಗಳು ಮತ್ತು ಪಕ್ಷಗಳಿಗೆ ಇದು ಹಲವಾರು ಒಳನೋಟಗಳನ್ನು ನೀಡುತ್ತದೆ.

ಇಲ್ಲಿನ ಮೊದಲ ಪಾಠ, ಇಲ್ಲಿ ‘ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ’. ಅಭಿವೃದ್ಧಿಯ ಬಗ್ಗೆ ನೇತಾರರು ಏನೇ ಹೇಳಿಕೊಳ್ಳಲಿ, ಅದರ ಫಲ ತಮಗೆಷ್ಟು ತಲುಪಿದೆ ಎನ್ನುವುದಷ್ಟೇ ನಮ್ಮ ಮತದಾರರಿಗೆ ಮುಖ್ಯವಾಗುತ್ತದೆ. ಜಾಹೀರಾತುಗಳ ಮೂಲಕ ಪಕ್ಷಗಳು ಬಿಂಬಿಸುವ ‘ಅಭಿವೃದ್ಧಿ’ ಚಿತ್ರಣಕ್ಕೆ ಜನ ಮರುಳಾಗಿಲ್ಲ.

ಈ ಫಲಿತಾಂಶದ ಇನ್ನೊಂದು ವಿಶೇಷ ಅಂಶವೆಂದರೆ, ಕಣದಲ್ಲಿರುವ ಅಭ್ಯರ್ಥಿ ಎಂತಹವರು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಜನ ಮತದಾನ ಮಾಡಿದಂತಿದೆ. ಅಂದರೆ, ಪಕ್ಷದ ಒಬ್ಬಿಬ್ಬರು ನಾಯಕರನ್ನೇ ಕೇಂದ್ರಬಿಂದುವಾಗಿಸಿ ಚುನಾವಣೆ ಎದುರಿಸಿದರೂ ಸ್ಥಳೀಯ ಅಭ್ಯರ್ಥಿ ಅರ್ಹನಾಗಿಲ್ಲದಿದ್ದರೆ ಮತದಾರರು ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸುತ್ತಾರೆ ಎಂಬ ಸಂದೇಶ ಕೆಲವಾದರೂ ಕ್ಷೇತ್ರಗಳಲ್ಲಿ ದಾಖಲಾಗಿದೆ. ಹಾಗಾಗಿ, ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ, ಅವರ ಜಾತಿ, ಹಣಬಲ, ತೋಳ್ಬಲಕ್ಕಿಂತ ಹೆಚ್ಚಾಗಿ ಶಾಸನಸಭೆಗೆ ಹೋಗಲು ಇರಬೇಕಾದ ಅರ್ಹತೆಯತ್ತಲೂ ಗಮನಹರಿಸಬೇಕಾಗುತ್ತದೆ. ನಾಯಕರ ನಾಮಬಲ ಮಾತ್ರದಿಂದ ಒಂದು ಚುನಾವಣೆಯನ್ನೇನೋ ಗೆಲ್ಲಬಹುದು, ಆದರೆ, ಮತ್ತೆ ಮತ್ತೆ ಅದೇ ಅಭ್ಯರ್ಥಿಯನ್ನು ಆ ಒಂದೇ ಕಾರಣಕ್ಕಾಗಿ ಜನ ಗೆಲ್ಲಿಸಲಾರರು.

ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದವರಲ್ಲಿ ಕೆಳವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಯುವಜನ, ಗೃಹಿಣಿಯರು ಮತ್ತು ಅಲ್ಪಸಂಖ್ಯಾತರ ಪಾತ್ರ ಹೆಚ್ಚಿನದು. ಯಾಕೆಂದರೆ, ಸಾಮಾನ್ಯವಾಗಿ ಈ ಸಮೂಹದ ಜನರ ದೈನಂದಿನ ಬದುಕಿನ ಮೇಲೆ ಸರ್ಕಾರದ ಕಾರ್ಯಕ್ರಮಗಳು ಅತಿ ಹೆಚ್ಚು ಪ್ರಭಾವ ಬೀರುತ್ತವೆ. ವಸ್ತುಸ್ಥಿತಿ ಅವರ ಗ್ರಹಿಕೆಗೆ ತ್ವರಿತವಾಗಿ ನಿಲುಕುತ್ತದೆ. ಅದಕ್ಕೆ ಅನುಗುಣವಾಗಿ ಮತ ನೀಡುವುದು ಸಹಜ ವಿದ್ಯಮಾನ. ಈ ದಿಸೆಯಲ್ಲಿ, ಪ್ರಸಕ್ತ ಚುನಾವಣಾ ಫಲಿತಾಂಶವು ದೇಶ ಇಂದು ಎದುರಿಸುತ್ತಿರುವ ಕೆಲವು ಗಂಭೀರ ಸಮಸ್ಯೆಗಳ ಸತ್ಯದರ್ಶನ ಮಾಡಿಸುತ್ತದೆ.

ವಿದೇಶಿ ನೆಲದಲ್ಲಿ ಭಾರತದ ಕುರಿತು ಒಳ್ಳೆಯ ಚಿತ್ರಣ ಮೂಡುತ್ತಿದೆ ಎನಿಸಿದರೂ ಮಾಧ್ಯಮಗಳ ಮುಂದೆ ಮಾತನಾಡುವ ‘ಉಳ್ಳವರು’ ಸಂತುಷ್ಟರಂತೆ ಕಂಡುಬಂದರೂ ತೆರೆಮರೆಯಲ್ಲಿ ಹೊಗೆಯಾಡುತ್ತಿರುವ ನಿರುದ್ಯೋಗ, ಬಡತನ, ಬೆಲೆ ಏರಿಕೆ, ಉಳ್ಳವರು ಮತ್ತು ಇಲ್ಲದವರ ನಡುವೆ ಹೆಚ್ಚಾಗುತ್ತಿರುವ ಅಂತರದಂತಹ ಅಸಲಿ ಸಮಸ್ಯೆಗಳು ಪರಿಣಾಮ ಬೀರದೇ ಇರುವುದಿಲ್ಲ.

ಸಿಎಸ್‌ಡಿಎಸ್‌– ಲೋಕನೀತಿ ಸಂಸ್ಥೆ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಂಡುಬಂದಂತೆ, ದೇಶ ಇಂದು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಗಳೆಂದರೆ- ನಿರುದ್ಯೋಗ ಮತ್ತು ಬೆಲೆ ಏರಿಕೆ. ಬಡವರ್ಗಗಳ ಯುವಜನ ಈ ಮತದಾನದ ಮೂಲಕ ದೇಶದ ಉದ್ಯೋಗ ಸ್ಥಿತಿಗತಿ ಕುರಿತಂತೆ ತಮ್ಮ

ಅಸಮಾಧಾನವನ್ನು ಹೊರಹಾಕಿರುವುದು ಸ್ಪಷ್ಟವಾಗಿದೆ. ಈ ಮಾತು ಬೆಲೆ ಏರಿಕೆಗೂ ಅನ್ವಯಿಸುತ್ತದೆ. ಬೆಲೆ ಏರಿಕೆಗೆ ಅನುಗುಣವಾಗಿ ಕೆಳ ಮಧ್ಯಮ ವರ್ಗದವರ ಖರೀದಿ ಶಕ್ತಿ ಹೆಚ್ಚಿಸಲು ಬೇಕಾದ ಆದಾಯ ಮೂಲಗಳು ಹೆಚ್ಚಾಗಲಿಲ್ಲ. ಇದು, ಬಹಳಷ್ಟು ಕುಟುಂಬಗಳಲ್ಲಿ ಸಿಟ್ಟು ಮತ್ತು ಅಸಮಾಧಾನ ಹೆಚ್ಚಿಸಿರುವ ಸಾಧ್ಯತೆ ಇದೆ.

ಇನ್ನು ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೆ, ತಮ್ಮ ದೈನಂದಿನ ಬದುಕಿನ ನಿರ್ವಹಣೆಗೆ ಪೂರಕವಾದ ವಿಚಾರಗಳಿಗೆ ಸರ್ಕಾರಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದು ಮುಖ್ಯವಾಗುತ್ತದೆ. ಈ ದಿಸೆಯಲ್ಲಿ, ಇವರು ಸರ್ಕಾರಗಳಿಂದ ಹೆಚ್ಚಿನ ಧನಸಹಾಯವನ್ನು ನಿರೀಕ್ಷಿಸುತ್ತಾರೆ. ಅವರ ಮೊದಲ ಆದ್ಯತೆ ತಮ್ಮ ಕುಟುಂಬ ‘ವಿಕಸಿತ’ ಆಗುವುದು. ಅಂದರೆ, ದೇಶ ವಿಕಸಿತವಾಗುವಾಗ ತಮ್ಮ ಬದುಕು ಕೂಡ ಅದರೊಂದಿಗೆ ವಿಕಸಿತವಾಗಬೇಕು ಎನ್ನುವ ನಿಲುವು ಅವರದ್ದು. ತಮ್ಮ ಬದುಕಿನ ಸಹನೀಯ ಮುಂದುವರಿಕೆಗೆ ಅವರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಯಸುತ್ತಾರೆ ಎನ್ನುವುದು ಈಗ ಸ್ಪಷ್ಟವಾಗಿದೆ.

ಇತಿಹಾಸವು ನಮ್ಮ ಭವಿಷ್ಯದ ದಾರಿಗೆ ದೀವಿಗೆ ಆಗಬೇಕೇ ವಿನಾ ಗಾಯಗಳನ್ನು ಕೆರೆದುಕೊಂಡು ದೇಹವನ್ನೆಲ್ಲಾ ಹುಣ್ಣಾಗಿಸುವುದಕ್ಕಲ್ಲ ಎನ್ನುವ ತತ್ವದ ಆಧಾರದಲ್ಲಿ ದೇಶವನ್ನು ಮುನ್ನಡೆಸುವುದು ಒಳ್ಳೆಯದು ಎನ್ನುವ ಸಂದೇಶವನ್ನು ಸಹ ಈ ಫಲಿತಾಂಶ ನೀಡಿದೆ ಎನ್ನಬಹುದು. ಈ ಮಹಾಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯನ್ನು ಮರಳಿ ಕಂಡುಕೊಂಡಿವೆ, ವಿರೋಧ ಪಕ್ಷಗಳು ತಮ್ಮ ಅಸ್ತಿತ್ವವನ್ನು ಸಾರಿವೆ. ಆರೋಗ್ಯಕರ

ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಬಹಳ ಮುಖ್ಯ. ಯಾವುದೇ ಒಂದು ಪಕ್ಷ ಮಾತ್ರ ನಿರಂತರವಾಗಿ ಗೆಲ್ಲುತ್ತಿದ್ದರೆ ಮತ್ತು ವಿರೋಧ ಪಕ್ಷಗಳು ನೆಲ ಕಚ್ಚಿದರೆ, ಇದಕ್ಕೆ ಪ್ರಜಾಪ್ರಭುತ್ವವು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಹೀಗಾದಲ್ಲಿ, ದೇಶ ನಿಧಾನವಾಗಿ ನಿರಂಕುಶ ಪ್ರಭುತ್ವದತ್ತ ವಾಲುತ್ತದೆ.

ವಿಶೇಷವಾಗಿ, ಉತ್ತರಪ್ರದೇಶದ ಫಲಿತಾಂಶ ಹಲವು ನೆಲೆಗಳಲ್ಲಿ ಅಚ್ಚರಿ ಮೂಡಿಸಿರುವುದು ನಿಜ. ಅಲ್ಲಿನ ಸ್ಥಿತಿಯನ್ನು ಮತ್ತು ದೇಶದ ಒಟ್ಟಾರೆ ಮತದಾನ ಪ್ರವೃತ್ತಿಯನ್ನು ಯಾವ ಮತಗಟ್ಟೆ ಸಮೀಕ್ಷೆಯೂ ಯಾಕೆ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಗತ್ಯ. ಜನ ತಮ್ಮ ರಾಜಕೀಯ ಆಯ್ಕೆಯನ್ನು ಬಹಿರಂಗವಾಗಿ ಹಂಚಿಕೊಳ್ಳಲು ಹಿಂಜರಿದಿರಬಹುದು. ಅವ್ಯಕ್ತ ಭಯ ಮತ್ತು ಪ್ರಧಾನ ಮಾಧ್ಯಮಗಳು ಬಿಂಬಿಸುತ್ತಿದ್ದ ಜನಪ್ರಿಯ ವ್ಯಾಖ್ಯಾನಗಳು ಇದಕ್ಕೆ ಕಾರಣ ಆಗಿರಲೂಬಹುದು. ಆದರೆ, ಈ ಪ್ರಕ್ರಿಯೆಗೆ ವ್ಯತಿರಿಕ್ತವಾಗಿ, ಅಂದರೆ, ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಭಯಪಟ್ಟವರು, ಅವಕಾಶ ಸಿಗದವರು, ಅಂಚಿಗೆ ತಳ್ಳಲ್ಪಟ್ಟವರು ಹಿಂದಿನ ಎರಡು ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಮೂಲಕ ಅವರು ಒಂದು ಪರ್ಯಾಯ ಜನಾಭಿಪ್ರಾಯವನ್ನು ಮೂಡಿಸಿದ್ದಂತೂ ಹೌದು.

ಪ್ರಬಲ ವಿರೋಧ ಪಕ್ಷ ಮತ್ತು ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ನಾಗರಿಕ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಎರಡು ಆಧಾರಸ್ತಂಭಗಳು. ಈಗ ಪ್ರಬಲ ವಿರೋಧ ಪಕ್ಷವಂತೂ ಇರಲಿದೆ. ಇದರಿಂದಾಗಿ, ಸರ್ಕಾರವು ಯಾವುದೇ ಅಸಾಂವಿಧಾನಿಕ ನಿರ್ಣಯವನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿಹೇರಬಹುದು ಎನ್ನುವ ಆತಂಕ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಿದೆ.

ತಮ್ಮ ವಿರುದ್ಧ ಧ್ವನಿ ಎತ್ತುವವರ ಬಗ್ಗೆ ಅಧಿಕಾರದಲ್ಲಿ ಇರುವವರಿಗೆ ಅಸಹನೆ ಇರುತ್ತದೆ. ಅಂಥವರನ್ನು ದಮನ ಮಾಡುವ ಪ್ರಯತ್ನಗಳು ನಡೆಯುತ್ತವೆ. ಅದಕ್ಕೆ ಪ್ರತಿರೋಧ ತೋರಲು ಚುನಾವಣೆಯೂ ಒಂದು ಅವಕಾಶವಾಗಿ ಒದಗಿಬರುತ್ತದೆ. ಸಣ್ಣಮಟ್ಟಿಗೆ ಅದಕ್ಕೂ ಈ ಚುನಾವಣೆ ಬಳಕೆಯಾಗಿದೆ. ಸಾಮಾನ್ಯವಾಗಿ ನಮ್ಮ ಚುನಾವಣಾ ಸಮೀಕ್ಷೆಗಳು, ಪ್ರಧಾನ ಮಾಧ್ಯಮಗಳು ಮತ್ತು ಹೆಚ್ಚಾಗಿ ನಗರಕೇಂದ್ರಿತವಾಗಿ ಕಾರ್ಯನಿರ್ವಹಿಸುವ ಸರ್ಕಾರಗಳು ಕೂಡ ಹಳ್ಳಿಗಳ ಸಮಸ್ಯೆ, ರೈತರ ಸಂಕಷ್ಟಗಳು, ವಿನಾಶದ ಅಂಚಿನಲ್ಲಿರುವ ಜೀವವೈವಿಧ್ಯ ಮತ್ತು ಅದರಿಂದ ಉದ್ಭವಿಸಿರುವ ಪ್ರಾಕೃತಿಕ ವಿಕೋಪಗಳಂತಹವನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ಗ್ರಹಿಸುವಲ್ಲಿ ಸೋಲುತ್ತವೆ. ಜನರ ನಾಡಿಮಿಡಿತ ಎಟುಕದೇ ಇರುವುದಕ್ಕೆ ಇದೂ ಕಾರಣವಾಗಿರಬಹುದು.

ಒಟ್ಟಿನಲ್ಲಿ ಇದು ದೇಶದ ಬಹುತ್ವ, ಸಂವಿಧಾನ ರಕ್ಷಣೆಗೆ ಪೂರಕವಾದ, ‘ಅಭಿವೃದ್ಧಿ’ಯ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಒಳಗೊಳ್ಳಬೇಕಾದ ಅನಿವಾರ್ಯವನ್ನು ಜಾಗೃತಗೊಳಿಸುವಂತಹ ಫಲಿತಾಂಶ. ಈ ಫಲಿತಾಂಶದ ಮೂಲಕ ಜನರ ನಾಡಿಮಿಡಿತವನ್ನು ಗ್ರಹಿಸಿ, ಎನ್‌ಡಿಎ ಮೈತ್ರಿಕೂಟವು ಅದರಂತೆ ಕಾರ್ಯ

ನಿರ್ವಹಿಸಬೇಕಾಗಿದೆ. ರಾಷ್ಟ್ರೀಯ ಪಕ್ಷಗಳು ಎಷ್ಟೇ ಪ್ರಬಲವಾಗಿರಲಿ, ಅವು ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡು ಕೆಲಸ ಮಾಡುವುದು ಒಕ್ಕೂಟ ವ್ಯವಸ್ಥೆಗೆ ಹಿತಕರ ಎಂಬ ಸಂದೇಶವೂ ಈ ಫಲಿತಾಂಶದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT