ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಎಚ್ಚರ... ಕುಟಿಲ ‘ಜಾಲ’ ಕಾಯುತ್ತಿದೆ

ಸಾಮಾಜಿಕ ಜಾಲತಾಣ ನಮಗೆ ನೀಡಿರುವ ಅಸಾಧಾರಣ ಸ್ವಾತಂತ್ರ್ಯದ ಪರಾಮರ್ಶೆ ನಡೆಯಬೇಕಿದೆ
Published : 19 ಆಗಸ್ಟ್ 2024, 0:33 IST
Last Updated : 19 ಆಗಸ್ಟ್ 2024, 0:33 IST
ಫಾಲೋ ಮಾಡಿ
Comments

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 10 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಅದರ 20 ಪಟ್ಟು ಮಂದಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸುತ್ತಾರೆ. ಪ್ರತಿ ಮೂರು ಸೆಕೆಂಡ್‍ಗೆ ಒಂದು ಆತ್ಮಹತ್ಯೆಯ ಪ್ರಯತ್ನ ನಡೆದು, ಪ್ರತಿ 40 ಸೆಕೆಂಡ್‍ಗೆ ಒಂದು ಸಾವು ಸಂಭವಿಸುತ್ತದೆ. 2022ರಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆಯಿಂದ 1.71 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ, ಭಾರತದಲ್ಲಿ ಆತ್ಮಹತ್ಯೆ ಬಹುಮುಖ್ಯವಾದ ಸಾರ್ವಜನಿಕ ಆರೋಗ್ಯ ಸಮಸ್ಯೆ.

ಈ ವರ್ಷದ ಜುಲೈ 1ರಿಂದ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆಯ ಅನುಸಾರ ಆತ್ಮಹತ್ಯೆ ಇಂದು ಶಿಕ್ಷಾರ್ಹ ಅಪರಾಧವಲ್ಲ. ಆದರೆ ಆತ್ಮಹತ್ಯೆಗೆ ಪ್ರಚೋದಿಸುವ, ಅದಕ್ಕೆ ಕುಮ್ಮಕ್ಕು ನೀಡುವ ಕೃತ್ಯವು ಶಿಕ್ಷಾರ್ಹ ಅಪರಾಧ. ಚೆನ್ನೈ ನಗರದಲ್ಲಿ ಮೇ ತಿಂಗಳಿನಲ್ಲಿ ನಡೆದ ಪ್ರಕರಣವೊಂದನ್ನು ಗಮನದಲ್ಲಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅವ್ಯಾಹತವಾದ ಮಾನಸಿಕ ಕಿರುಕುಳವನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ರಮ್ಯಾ ಮತ್ತು ವೆಂಕಟೇಶ್, ಚೆನ್ನೈ ನಗರದ ಸಾಫ್ಟ್‌ವೇರ್‌ ಕ್ಷೇತ್ರದ ದಂಪತಿ. ಅವರಿಗೆ ಇಬ್ಬರು ಮಕ್ಕಳು. ಮಗನಿಗೆ ಐದು ವರ್ಷ. ಮಗಳಿಗೆ ಏಳು ತಿಂಗಳು. ಆವಡಿ ಸಮೀಪದ ತಿರುಮುಲ್ಲವಯಲ್‍ನ ಗೇಟೆಡ್ ಕಮ್ಯೂನಿಟಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ಕುಟುಂಬದ ವಾಸ. ಏಪ್ರಿಲ್ 28ರಂದು ಭಾನುವಾರ, ಬಾಲ್ಕನಿಯಲ್ಲಿ ಮಗಳಿಗೆ ಊಟ ಮಾಡಿಸುತ್ತಿದ್ದ ಸಮಯದಲ್ಲಿ, ಮಗು ಆಕಸ್ಮಿಕವಾಗಿ ಅಮ್ಮನ ಮಡಿಲಿನಿಂದ ಜಾರಿ ಬಾಲ್ಕನಿಯಿಂದ ಕೆಳಗುರುಳಿತು. ಎರಡನೆಯ ಅಂತಸ್ತಿನ ಬಾಲ್ಕನಿಯ ಮೇಲೆ, ಬಿಸಿಲು ತಡೆಯಲು ಅಳವಡಿಸಿದ್ದ ಇಳಿಜಾರು ಚಾವಣಿಯ ಅಂಚಿಗೆ ಸಿಲುಕಿ ನೇತಾಡತೊಡಗಿತು.

ಕ್ಷಣಾರ್ಧದಲ್ಲಿ ನಡೆದುಹೋದ ಈ ಘಟನೆಯಿಂದ ದಿಗ್ಭ್ರಾಂತಗೊಂಡ ತಾಯಿಯ ಚೀತ್ಕಾರದಿಂದ ಎಚ್ಚೆತ್ತು ಹೊರಗೆ ಧಾವಿಸಿದ ನೆರೆಹೊರೆಯವರು, ಮಗುವನ್ನು ರಕ್ಷಿಸಲು ಮುಂದಾದರು. ಪಕ್ಕದ ಮನೆಯ ಯುವಕನೊಬ್ಬ ಮನೆಯ ಹೊರಗಿನಿಂದ, ಸಾಹಸದಿಂದ ಬಾಲ್ಕನಿಯ ಮೇಲೇರಿ, ಚಾವಣಿಯ ಅಂಚಿಗೆ ಸಿಕ್ಕಿಕೊಂಡಿದ್ದ ಮಗುವನ್ನು ಎಚ್ಚರಿಕೆಯಿಂದ ಬಿಡಿಸಿ ಕೆಳಗಿಳಿಸಿದ. ದುರಂತದಲ್ಲಿ ಕೊನೆಯಾಗಬಹುದಿದ್ದ ಅನಾಹುತ ಸುಖಾಂತ್ಯ ಕಂಡಿತು. ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯ ವಿಡಿಯೊ ಮಾಡಿದ್ದವರು ಅದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರು. ಅತ್ಯಲ್ಪ ಸಮಯದಲ್ಲಿ ಆ ವಿಡಿಯೊ ವೈರಲ್ ಆಯಿತು. ಕಾಮೆಂಟ್‍ಗಳ ಮಹಾಪೂರವೇ ಹರಿದುಬಂತು.

ಮಗುವನ್ನು ಉಳಿಸಿದ ಯುವಕ ಹರಿಪ್ರಸಾದ್ ನಿಜ ಜೀವನದ ಹೀರೊ ಆದ. ಆದರೆ ತಾಯಿ ಖಳನಾಯಕಿಯಾದಳು. ಆಕೆಯ ತೇಜೋವಧೆಯಾಯಿತು. ‘ಬೇಜವಾಬ್ದಾರಿಯ ಹೆಂಗಸು, ತಾಯಿಯಾಗಲು ನಾಲಾಯಕ್‌, ಮಕ್ಕಳ ಬಗ್ಗೆ ಕಾಳಜಿ ಇಲ್ಲದವಳು, ಕೆಳಗೆ ಬಿದ್ದ ಮಗು ಹೆಣ್ಣಾದ್ದರಿಂದ ಅಸಡ್ಡೆ, ಮಗು ನಿಜವಾಗಿಯೂ ಅವಳದಾಗಿರುವುದು ಸಾಧ್ಯವಿಲ್ಲ, ಗಮನ ಕೊಡಲು ಬಿಡುವಿಲ್ಲದವರಿಗೆ ಮಗುವೇಕೆ ಬೇಕು?’ ಈ ಬಗೆಯ ನೂರಾರು ಟೀಕೆಗಳು ಬಂದವು. ರಮ್ಯಾ ಬಗ್ಗೆಯಾಗಲೀ ಆಕೆಯ ಕುಟುಂಬದ ಬಗ್ಗೆಯಾಗಲೀ ಒಂದಿಷ್ಟೂ ತಿಳಿಯದ ನೆಟ್ಟಿಗರು ಆಕೆಯ ಮೇಲೆ ಆಪಾದನೆ ಹೊರಿಸಿದರು, ವಿಚಾರಣೆ ನಡೆಸಿದರು, ಅಂತಿಮವಾಗಿ ತಾಯಿಯಾಗಲು ಆಕೆ ಅನರ್ಹ ಎಂಬ ತೀರ್ಪನ್ನೂ ನೀಡಿದರು.

ಮಗುವನ್ನು ಕಳೆದುಕೊಳ್ಳುವುದರಿಂದ ಕೂದಲೆಳೆಯಲ್ಲಿ ಪಾರಾದ ಆಘಾತ, ಅದು ಸಾಲದೆಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ನಡೆದ ಮಾನಸಿಕ ಚಿತ್ರಹಿಂಸೆ, ಆಳವಾದ ಗಾಯದಿಂದ ತತ್ತರಿಸಿಹೋಗಿ ಖಿನ್ನತೆಗೊಳಗಾದ ರಮ್ಯಾ, ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಕೊಯಮತ್ತೂರು ಸಮೀಪದ ತವರು ಮನೆಗೆ ಬಂದರು. ಆದರೆ ಆ ವೇಳೆಗಾಗಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಜನಜನಿತವಾಗಿ, ಚರ್ಚೆಗೊಳಗಾಗಿದ್ದ ಪ್ರಕರಣದ ಕುರಿತ ಟೀಕಾಪ್ರಹಾರಗಳು ತವರೂರಿನಲ್ಲೂ ಆಕೆಯ ಬೆನ್ನುಬಿಡಲಿಲ್ಲ. ಆಕೆಯ ಪೋಷಕರು, ಪತಿ ಎಷ್ಟೇ ಬೆಂಬಲ ನೀಡಿದರೂ ಆಪ್ತ ಸಮಾಲೋಚನೆಯ ಸಹಾಯ ದೊರೆತರೂ ತೀವ್ರ ಖಿನ್ನತೆಯಿಂದ ಹೊರಬರದ ರಮ್ಯಾ ಮೇ 19ರಂದು ಆತ್ಮಹತ್ಯೆಗೆ ಶರಣಾದರು.

ರಮ್ಯಾ ಆತ್ಮಹತ್ಯೆಯ ನಂತರ ಆಕೆಯ ಬಗ್ಗೆ ಮನಸೋಇಚ್ಛೆ ಪ್ರತಿಕ್ರಿಯಿಸಿದ್ದವರೆಲ್ಲ ಸಾಮಾಜಿಕ ಮಾಧ್ಯಮದಿಂದ ಕಾಲ್ತೆಗೆದರು. ಆ ಪ್ರಕರಣದ ಬದಲಿಗೆ, ಆತ್ಮಹತ್ಯೆಗೆ ಕಾರಣರಾರು ಎಂಬ ವಿಷಯದ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಹಾಗಾದರೆ ರಮ್ಯಾ ಆತ್ಮಹತ್ಯೆಗೆ ಯಾರು ಹೊಣೆ? ತರ್ಕರಹಿತವಾದ, ಭಾವನಾತ್ಮಕವಾದ ನೆಲೆಯಿಂದ ಯೋಚಿಸಿದವರಿಗೆ, ಆಕೆಯ ಬಗ್ಗೆ ಅತ್ಯಂತ ಕಟುವಾಗಿ ವಿಷ ಕಾರಿದವರೇ ಕಾರಣ ಎನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಕಾನೂನು ಮತ್ತು ನ್ಯಾಯಾಲಯ ಹಾಗೆ ಯೋಚಿಸುವುದಿಲ್ಲ. ಆತ್ಮಹತ್ಯೆಗೆ ಪ್ರಚೋದಿಸುವುದು, ಕುಮ್ಮಕ್ಕು ನೀಡುವುದು, ಆತ್ಮಹತ್ಯೆಯೇ ಅನಿವಾರ್ಯವಾಗುವಂತಹ ಪರಿಸ್ಥಿತಿಯನ್ನು ಕುತಂತ್ರದಿಂದ ಸೃಷ್ಟಿಸುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಇಲ್ಲಿ ಪ್ರಚೋದನೆ ಅಥವಾ ಇನ್‌ಸ್ಟಿಗೇಷನ್ ಬಹು ಮುಖ್ಯ.

2001ರಲ್ಲಿ ರಮೇಶ್ ಕುಮಾರ್ ವರ್ಸಸ್‌ ಛತ್ತೀಸಗಢ ರಾಜ್ಯದ ಪ್ರಕರಣದಲ್ಲಿ ‘ಪ್ರಚೋದನೆ’ ಎಂಬುದಕ್ಕೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾದ ವ್ಯಾಖ್ಯಾನ ನೀಡಿದೆ. ಪ್ರಚೋದನೆಯಲ್ಲಿ ಕೃತ್ಯ ಮತ್ತು ಉದ್ದೇಶ ಎರಡೂ ಇರಬೇಕು. ಮಾತು, ಟೀಕೆ, ಅವಮಾನ ಮಾಡುವುದು, ತೇಜೋವಧೆ, ಸುಳ್ಳುಸುದ್ದಿ ಹಬ್ಬಿಸುವಂತಹವೆಲ್ಲ ಕೃತ್ಯಗಳು. ಈ ಎಲ್ಲ ಕೃತ್ಯಗಳೂ ಸತತವಾಗಿ ನಡೆಯುತ್ತಿದ್ದು, ಅವುಗಳೆಲ್ಲದರ ಅಂತಿಮ ಉದ್ದೇಶವು ವ್ಯಕ್ತಿ ಬೇರೆ ದಾರಿ ಕಾಣದೆ, ಕಟ್ಟಕಡೆಯದಾಗಿ ಆತ್ಮಹತ್ಯೆಗೆ ಮೊರೆ ಹೋಗುವುದಾಗಿರಬೇಕು. ಅಂತಹ ಉದ್ದೇಶವಿರುವುದು ಸ್ಪಷ್ಟವಾಗಿ ಸಾಬೀತಾಗಬೇಕು. ಆ ಬಗೆಯ ಉದ್ದೇಶವಿಲ್ಲದೇ ಕೋಪದಿಂದ ಕೂಗಾಡಿದರೆ, ಕಟುವಾಗಿ ಟೀಕಿಸಿದರೆ ಅದು ಆತ್ಮಹತ್ಯೆಗೆ ಪ್ರಚೋದಿಸಿದಂತೆ ಆಗುವುದಿಲ್ಲ. ರಮ್ಯಾ ಪ್ರಕರಣದಲ್ಲಿ ನೆಟ್ಟಿಗರು ಆಕೆಯನ್ನು ತೀವ್ರವಾಗಿ ಟೀಕಿಸಿ, ಅವಮಾನಿಸಿದ್ದು ನಿಜ. ಆದರೆ ಅದರ ಉದ್ದೇಶ ಆಕೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬುದಾಗಿರಲಿಲ್ಲ.

ಆಫ್‍ಲೈನ್ ಪ್ರಕರಣಗಳಲ್ಲಿ, ಅಂದರೆ ನಿಜಜೀವನದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಮಾಡುವವರನ್ನು, ಕುಮ್ಮಕ್ಕು ಕೊಡುವವರನ್ನು ಗುರುತಿಸಿ, ತನಿಖೆ ನಡೆಸುವುದು ಪೊಲೀಸರಿಗೆ ಬಹಳ ಕಷ್ಟವೇನಲ್ಲ. ಆದರೆ ರಮ್ಯಾಗೆ ಸಂಬಂಧಿಸಿದಂತಹ ಆನ್‍ಲೈನ್ ಪ್ರಕರಣದಲ್ಲಿ, ನೂರಾರು ಅಜ್ಞಾತ, ಅನಾಮಧೇಯ ನೆಟ್ಟಿಗರು ಟೀಕೆ ಟಿಪ್ಪಣಿ ಮಾಡುವುದರಿಂದ, ಅವರಲ್ಲಿ ಯಾರ ಕಾಮೆಂಟ್ ಯಾವ ರೀತಿಯಲ್ಲಿ ಪ್ರಭಾವ ಬೀರಿತು ಎಂಬುದನ್ನು ನಿರ್ಧರಿಸುವುದು ಬಹುತೇಕ ಸಾಧ್ಯವಾಗದ ಸಂಗತಿ.

ಇಲ್ಲಿ ಇನ್ನೊಂದು ವಿಷಯವಿದೆ. ಪ್ರಕರಣದ ನಂತರ ತನ್ನನ್ನು ಅಪಮಾನಿಸುವಂತಹ, ನಿಂದಿಸುವಂತಹ ಟೀಕೆಗಳು ಬರಲು ಆರಂಭವಾದಾಗ, ರಮ್ಯಾಗೆ ಸಾಮಾಜಿಕ ಜಾಲತಾಣದಿಂದ ದೂರವುಳಿದು, ತನ್ನನ್ನು ತಾನು ರಕ್ಷಿಸಿಕೊಳ್ಳುವ ಅವಕಾಶವಿತ್ತು. ಅದಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ ಆಕೆ ಆ ಆಯ್ಕೆಯನ್ನು ಬಳಸಿಕೊಳ್ಳಲಿಲ್ಲ. ಹಾಗಾದರೆ ರಮ್ಯಾ ಆತ್ಮಹತ್ಯೆಯೊಂದಿಗೆ ಮುಗಿದ ಈ ದುರಂತ ಪ‍್ರಕರಣದ ಬಗ್ಗೆ, ಆಕೆಯ ಬಗ್ಗೆ ದಿನಗಟ್ಟಲೆ ಅವ್ಯಾಹತವಾಗಿ ಮಾತಿನ, ಇಮೋಜಿಗಳ ದಾಳಿ ನಡೆಸಿದ ಅನಾಮಿಕ ಪರಪೀಡಕರ ಪಾತ್ರವೇ ಇಲ್ಲವೆ? ಖಂಡಿತ ಇಲ್ಲವೆನ್ನುವಂತಿಲ್ಲ. ಮಗು ಜಾರಿ ಬಿದ್ದದ್ದು ಆಕಸ್ಮಿಕ ಪ್ರಕರಣ. ಅಂತಹ ಪರಿಸ್ಥಿತಿಯಲ್ಲಿ ಟೀಕೆಗಳು ಬಂದರೂ ಅವು ವಿಷಕಾರಿ ಆಗಬಾರದು. ಜವಾಬ್ದಾರಿಯುತ ಆಗಿರಬೇಕು. ಅವಮಾನಿಸುವಂತೆ ಇರಬಾರದು, ಎಚ್ಚರಿಸುವಂತೆ ಇರಬೇಕು.

ಅಜ್ಞಾತವಾಗಿ ಇದ್ದುಕೊಂಡೇ ನಮ್ಮ ಆಭಿಪ್ರಾಯಗಳನ್ನು ತಿಳಿಸುವ ಅಸಾಧಾರಣ ಸ್ವಾತಂತ್ರ್ಯವನ್ನು ಸಾಮಾಜಿಕ ಜಾಲತಾಣ ನಮಗೆ ನೀಡಿದೆ. ಆದರೆ ಆ ಸ್ವಾತಂತ್ರ್ಯವು ಸ್ವೇಚ್ಛಾಚಾರವಾಗಿ ಸಭ್ಯತೆಯ, ಶಿಷ್ಟಾಚಾರದ, ಮಾನವೀಯತೆಯ ಚೌಕಟ್ಟುಗಳನ್ನು ದಾಟದಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ಆ ತಾಯಿಯ ವಿರುದ್ಧ ಅತ್ಯುಗ್ರವಾದ ವಾಗ್ಬಾಣಗಳನ್ನು ಬಿಡುವ ಮುನ್ನ, ಅದರ ಪರಿಣಾಮಗಳ ಬಗೆಗೆ ನೆಟ್ಟಿಗರು ಕಿಂಚಿತ್ತು ಯೋಚಿಸಿದ್ದರೆ, ಟೀಕೆಗಳ ತೀವ್ರತೆ ಕಡಿಮೆಯಾಗುತ್ತಿತ್ತೇನೊ? ಆತ್ಮಹತ್ಯೆಯ ಯೋಚನೆ ತೀವ್ರವಾದಾಗ, ಎಲ್ಲ ನಗರ–ಪಟ್ಟಣಗಳಲ್ಲೂ ಇಂದು ಲಭ್ಯವಿರುವ ಸಹಾಯವಾಣಿಯನ್ನು ರಮ್ಯಾ ಸಂಪರ್ಕಿಸಿದ್ದರೆ ಸಾವನ್ನು ಖಂಡಿತ ತಡೆಯಬಹುದಿತ್ತು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರಿಗೆ ಒಂದು ಮಟ್ಟದ ಪ್ರಬುದ್ಧತೆ ತೀರಾ ಅಗತ್ಯ. ಪ್ರಶಂಸೆ, ಮೆಚ್ಚುಗೆ, ಲೈಕ್‍ಗಳು, ಕಟುಟೀಕೆ, ನಿಂದನೆ, ತೇಜೋವಧೆಯಂತಹವು ನಮ್ಮ ನಿಲುವು, ನಡವಳಿಕೆಯನ್ನು ಅತಿಯಾಗಿ ಪ್ರಭಾವಿಸದಂತಹ ವಿವೇಚನೆ ನಮಗೆ ಇರಬೇಕು. ಆಗಮಾತ್ರ ಜಾಲತಾಣವು ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲವನ್ನೂ ನಂಬುವವರು, ವಾಸ್ತವ ಮತ್ತು ಮಿಥ್ಯಾ ಜಗತ್ತಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿಯದವರು ಯಾವುದೇ ಆಘಾತಕ್ಕೆ ಒಳಗಾಗದಂತೆ ಸಾಮಾಜಿಕ ಜಾಲತಾಣದಲ್ಲಿ ವಿಹರಿಸುವುದು ಕಷ್ಟಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT