ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಮಗೆ ಬೇಕಾದುದು ತಾಯ್ತನ

Published 6 ಏಪ್ರಿಲ್ 2024, 0:23 IST
Last Updated 6 ಏಪ್ರಿಲ್ 2024, 0:23 IST
ಅಕ್ಷರ ಗಾತ್ರ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಲಿಂಗ ತಾರತಮ್ಯವು ರೂಢಿಗತವಾಗಿ ಬಳಸುವ ಭಾಷೆಯಲ್ಲೂ ಪ್ರಕಟಆಗುತ್ತ ಬಂದಿದೆ. ಗಂಡಿನ ಮೇಲುಗೈ ಮಾತಿನ ವರಸೆಗೆ ಒಂದು ಇತಿಹಾಸವೇ ಇದೆ. ಸಮಕಾಲೀನ ಸಂದರ್ಭವು ಮಹಿಳಾಪರ ಚಳವಳಿಗಳನ್ನೂ ಒಳಗೊಂಡಂತೆ ಅನೇಕ ಸಮಾನತಾ ಚಳವಳಿಗಳನ್ನು ಕಂಡಿದ್ದರೂ ಗಂಡಾಳಿಕೆಯ ಭಾಷೆಗೆ ಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಗಂಡಿನ ಮೇಲಾಳಿಕೆಯ ಮಾತುಗಳು ಸಹಜವೆಂಬಂತೆ ಭೋರ್ಗರೆಯುತ್ತಿವೆ. ‘ನಿನಗೆ ಗಂಡಸ್ತನ ಇದ್ರೆ ನನ್ ಎದ್ರಿಗೆ ಬಾ’ ಎಂದು ಕೆಲವರು ಸವಾಲು ಹಾಕುತ್ತಾರೆ. ‘ನೀನು ಗಂಡಸೇ ಆಗಿದ್ದರೆ ಬಹಿರಂಗ ಚರ್ಚೆಗೆ ಬಾ’ ಎಂದು ಆಹ್ವಾನಿ

ಸುತ್ತಾರೆ. ಇಂಥ ಮಾತುಗಳು ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗುತ್ತವೆ. ಈ ಎಲ್ಲ ಮಾತುಗಳು ಗಂಡಸರು ಮಾತ್ರ ಸಬಲರೆಂದೂ ಹೆಂಗಸರು ದುರ್ಬಲರೆಂದೂ ನಂಬಿದ ಸಾಮಾಜಿಕ ನೆಲೆಯಿಂದ ಹೊರಬರುತ್ತವೆ. ಕೆಲವು ಪ್ರದೇಶಗಳ ಮಹತ್ವವನ್ನು ಹೇಳುವಾಗ ‘ಇದು ಗಂಡು ಮೆಟ್ಟಿದ ನಾಡು’ ಎಂಬ ನುಡಿಪ್ರಯೋಗವನ್ನು ಮಾಡಲಾಗುತ್ತದೆ. ಇದು ಹೆಮ್ಮೆಯ ಅಭಿವ್ಯಕ್ತಿಯಾಗಿದ್ದು, ಧೈರ್ಯ ಮತ್ತು ದಿಟ್ಟತನದ ಸಂಕೇತವಾಗಿ ‘ಗಂಡು’ ಎಂಬ ಪದ ಬಳಕೆಯಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿಯಂಥ ಅನೇಕ ಸ್ತ್ರೀಶಕ್ತಿ ಸಂಕೇತಗಳನ್ನು ನಮ್ಮ ದೇಶ ಕಂಡಿದ್ದರೂ ‘ಹೆಣ್ಣು ಮೆಟ್ಟಿದ ನಾಡು’ ಎಂದು ಯಾವ ಪ್ರದೇಶಕ್ಕೂ ಹೇಳುವುದಿಲ್ಲ. ವೈಯಕ್ತಿಕವಾಗಿ ಇವರ ಶೌರ್ಯ, ಸಾಹಸಗಳನ್ನು ಹೊಗಳಲಾಗುತ್ತದೆಯೇ ವಿನಾ ಪ್ರದೇಶವೊಂದರ ಧೈರ್ಯ ಮತ್ತು ದಿಟ್ಟತನದ ‘ದನಿರೂಪಕ’ವಾಗಿ ಪುರುಷವಾಚಕದ ಬಳಕೆಯೇ ರೂಢಿಯಾಗಿಬಿಟ್ಟಿದೆ. ಖಡಕ್ಕಾದ ಪದಗಳ ಪ್ರಯೋಗವನ್ನು ಮುಂದೊಡ್ಡಿ ‘ನಮ್ಮದು ಗಂಡು ಭಾಷೆ’ ಎಂದು ಬೀಗುವ ಪ್ರವೃತ್ತಿಯೂ ಇದೆ.

‘ಗಂಡಸುತನ’ವನ್ನು ಮುನ್ನೆಲೆಗೆ ತಂದು ಸವಾಲೆಸೆಯುವ ಹಸಿಬಿಸಿ ಮಾತುಗಳ ‘ರೂಢಿ’ಯು ಬರೀ ಭಾಷೆಯ ಪ್ರಶ್ನೆಯಲ್ಲ. ಇದರ ಹಿಂದೆ ಒಂದು ಇತಿಹಾಸವೇ ಇದೆ ಎಂಬ ನನ್ನ ಆರಂಭದ ಮಾತನ್ನು ಸ್ವಲ್ಪ ವಿಸ್ತರಿಸಬಯಸುತ್ತೇನೆ. ಲಿಂಗತಾರತಮ್ಯದ ಭಾಷೆಯ ಬಳಕೆಗೂ ನಾವು ಬದುಕುತ್ತ ಬಂದ ಸಾಮಾಜಿಕ-ಆರ್ಥಿಕ ಸಂದರ್ಭಕ್ಕೂ ಸಂಬಂಧವಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಯಾರು ನಿಯಂತ್ರಣ ಸಾಧಿಸುತ್ತಾರೋ ಅವರ ಆಶಯದ ಪರಿಭಾಷೆಯೇ ಪ್ರಚಲಿತವಾಗುತ್ತದೆ. ಪುರುಷರೇ ಕುಟುಂಬದ ಆಸ್ತಿ ಮತ್ತು ಅಧಿಕಾರದ ಪೂರ್ಣನಿಯಂತ್ರಕರಾಗುತ್ತಾ ಬಂದ ಇತಿಹಾಸದ ವಾಸ್ತವವನ್ನು ಇಲ್ಲಿ ಗಮನಿಸಬೇಕು.

ಮನುಷ್ಯರ ಆರಂಭಿಕ ಬದುಕಿನಲ್ಲಿ, ಆಸ್ತಿ ಮತ್ತು ಅಧಿಕಾರವನ್ನು ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಕೊಟ್ಟಿರಲಿಲ್ಲ. ಖಾಸಗಿ ಆಸ್ತಿಯ ಕಲ್ಪನೆಯೇ ಆಗ ಇರಲಿಲ್ಲ. ಅಂದರೆ ಭೂಮಿಯನ್ನೂ ಒಳಗೊಂಡಂತೆ ಯಾವುದೇ ಪ್ರಾಕೃತಿಕ ಸಂಪತ್ತು ಯಾರಿಗೂ ಸೇರಿರಲಿಲ್ಲ ಅಥವಾ ಎಲ್ಲರಿಗೂ ಸೇರಿತ್ತು. ಇಂಥ ಸಾಮಾಜಿಕ-ಆರ್ಥಿಕ ಸನ್ನಿವೇಶಗಳನ್ನು ‘ಪ್ರಾಚೀನ ಸಮತಾವಾದ’ (ಪ್ರಿಮಿಟಿವ್‌ ಕಮ್ಯುನಿಸಂ) ಎಂದು ಕೆಲವರು ಕರೆದಿದ್ದಾರೆ. ಇಂಥ ಸನ್ನಿವೇಶದ ಪ್ರಸ್ತಾಪವು ಮಾರ್ಗನ್ ಎಂಬ ಮಾನವಶಾಸ್ತ್ರಜ್ಞ ಬರೆದ ‘ಏನ್ಷಿಯಂಟ್ ಸೊಸೈಟಿ’ ಎಂಬ ಗ್ರಂಥದಲ್ಲೂ ಇದೆ. ಮಾರ್ಗನ್ ಮೊದಲ ಬಾರಿಗೆ ‘ಸಂಸ್ಕೃತಿಯು ಸ್ಥಗಿತವಲ್ಲ, ಅದು ಸದಾ ವಿಕಾಸ ಹೊಂದುತ್ತ ಹೋಗುತ್ತದೆ’ ಎಂಬ ಸಿದ್ಧಾಂತವನ್ನು ಮಂಡಿಸಿದರು. ಮನುಷ್ಯ ಸಂಸ್ಕೃತಿಯು ಸರಳರೇಖೆಯಂತೆ ವಿಕಾಸ ಹೊಂದುತ್ತ ನಾಗರಿಕತೆಯ ಹಂತ ತಲುಪಿದ್ದನ್ನುಪ್ರತಿಪಾದಿಸಿದರು.

ಮುಂದೆ ಸ್ಟೀವರ್ಡ್ ಎಂಬ ಮಾನವಶಾಸ್ತ್ರಜ್ಞ, ಸಂಸ್ಕೃತಿ ವಿಕಾಸಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಿದ್ಧಾಂತವನ್ನು ಮಂಡಿಸಿದರು. ಸಂಸ್ಕೃತಿಯು ಸರಳ ರೇಖೆಯಂತೆ ವಿಕಾಸವಾಗುವುದಿಲ್ಲ, ತಿರುವುಗಳಿಂದ ಕೂಡಿರುತ್ತದೆ ಎಂದು ಪ್ರತಿಪಾದಿಸಿದರು. ಇವರ ಸಿದ್ಧಾಂತದಲ್ಲಿ ಕುಟುಂಬದ ಆಸ್ತಿ ಮತ್ತು ಅಧಿಕಾರವನ್ನು ಪುರುಷರು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರ ಫಲವಾಗಿ ಹೆಣ್ಣಿನ ಶೀಲದ ಕಲ್ಪನೆ ಮುನ್ನೆಲೆಗೆ ಬಂದ ಸೂಚನೆಯಿದೆ. ಮನುಷ್ಯರ ಆದಿ ಬದುಕಿನಲ್ಲಿ ನಗ್ನತೆಯು ಸಹಜವಾಗಿದ್ದು, ಆನಂತರದ ಹಂತದಲ್ಲಿ ಖಾಸಗಿ ಆಸ್ತಿಯ ಕಲ್ಪನೆ ಮತ್ತು ಪುರುಷ ನಿಯಂತ್ರಣ ಬಂದಾಗ, ಹೆಂಗಸರು ಮೈತುಂಬ ಬಟ್ಟೆ ಧರಿಸುವುದು ಕಡ್ಡಾಯವಾಯಿತೆಂದೂ

‌ಬಹುಪತಿ ಪದ್ಧತಿಗೆ ವಿರೋಧ ವ್ಯಕ್ತವಾಯಿತೆಂದೂ ಸ್ಟೀವರ್ಡ್ ನಿರೂಪಿಸಿದ್ದಾರೆ. ಅಂದರೆ ಗಂಡಾಳಿಕೆಗೂ ಆಸ್ತಿ ಮತ್ತು ಅಧಿಕಾರಕ್ಕೂ ಸಂಬಂಧವುಂಟಾಗಿ,ಅದಕ್ಕನುಗುಣವಾದ ಲಿಂಗತಾರತಮ್ಯದ ಭಾಷೆಯೂ ಬಳಕೆಗೆ ಬಂದಿದೆ. ಅಷ್ಟೇಅಲ್ಲ, ಆಸ್ತಿ ವರ್ಗಾವಣೆಗೂ ಗಂಡು ಸಂತಾನಕ್ಕೂ ಸಂಬಂಧ ಕಲ್ಪಿಸಲಾಗಿದೆ. ಮುಂದೆ ಲಿಂಗತಾರತಮ್ಯದ ಅನಿಷ್ಟ ಪದ್ಧತಿಗಳೂ ಜಾರಿಗೆ ಬಂದಿವೆ. ನಿದರ್ಶನವಾಗಿ ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆಯಂಥ ಅಮಾನವೀಯಆಚರಣೆಗಳನ್ನು ಉಲ್ಲೇಖಿಸಬಹುದು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನೇಕ ಸ್ತ್ರೀ ಸುಧಾರಣಾ ಚಳವಳಿಗಳು ನಡೆದಿವೆ. ಮಾನವೀಯ ಮೌಲ್ಯಕ್ಕೆ ಬದ್ಧರಾದ ಪುರುಷರೂ ಸ್ತ್ರೀಪರ ಹೋರಾಟ ಮಾಡಿದ ಒಂದು ಸಾಂಕೇತಿಕ ನಿದರ್ಶನವಾಗಿ ರಾಜಾರಾಮ್ ಮೋಹನರಾಯರು ಸತಿಪದ್ಧತಿಯ ವಿರುದ್ಧ ನಡೆಸಿದ ಆಂದೋಲನವನ್ನು ನೆನೆಯಬಹುದು. ಜಗತ್ತಿನಾದ್ಯಂತ ಮಹಿಳೆಯರ ಮುಂಚೂಣಿಯಲ್ಲೇ ಅನೇಕ ಆಂದೋಲನಗಳು ನಡೆದಿವೆ. ಮಹಿಳೆಯರ ಅಸ್ಮಿತೆ ಹಾಗೂ ಅಸ್ತಿತ್ವವನ್ನು ಸಾದರಪಡಿಸುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ ಗಮನೀಯವಾಗಿದೆ. 1910ರಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅವರು ಪ್ರತಿವರ್ಷ ಮಹಿಳಾ ದಿನವನ್ನು ಆಚರಿಸಬೇಕೆಂಬ ನಿರ್ಣಯವನ್ನು ಮಂಡಿಸಿದರು. 1911ರಲ್ಲಿ ಮಹಿಳೆಯರ ಮತದಾನದ ಹಕ್ಕಿಗಾಗಿ ಚಳವಳಿ ನಡೆದು ಮಾರ್ಚ್ 8ರಂದು ಮಹಿಳಾ ದಿನವನ್ನು ಮೊದಲಿಗೆ ಆಚರಿಸಲಾಯಿತು.

ನಿಜ, ಅಂದಿಗೆ ಹೋಲಿಸಿದರೆ ಇಂದಿನದಿನಮಾನಗಳಲ್ಲಿ ಮಹಿಳೆಯರ ಹಕ್ಕಿನ ಪರವಾದ ಸಾಮಾಜಿಕ ವಾತಾವರಣ ಮೂಡುತ್ತಿದೆ. ಮಹಿಳೆಯರ ಪರವಾದ ಹಕ್ಕು ಮಂಡನೆ ಎಂಬುದು ಪುರುಷ ವಿರೋಧವಲ್ಲ, ಮಹಿಳೆಯರ ಸ್ವಾತಂತ್ರ್ಯವನ್ನು ದಮನಿಸುವ ವ್ಯವಸ್ಥೆಯ ವಿರೋಧ ಎಂಬ ಅರಿವೂ ಇದೆ. ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅವಕಾಶಗಳು ಸಿಗುತ್ತಿವೆ. ಸಮಾನತೆಯ ಆಶಯಗಳು ಮುನ್ನೆಲೆಗೆ ಬಂದಿವೆ. ಆದರೆ ‘ಗಂಡಸುತನ’ದ ದೌರ್ಜನ್ಯಗಳು ನಿಂತಿಲ್ಲ, ವಿಕೃತಿಗಳು ವಿನಾಶವಾಗಿಲ್ಲ. ಒಂದು ಮಾಹಿತಿಯ ಪ್ರಕಾರ, ನಮ್ಮ ದೇಶದಲ್ಲಿ ಒಂದು ದಿನಕ್ಕೆ 86 ಅತ್ಯಾಚಾರಗಳು ನಡೆಯುತ್ತಿವೆ ಮತ್ತು ಮೂರು ಅತ್ಯಾಚಾರ ಪ್ರಕರಣಗಳಲ್ಲಿ ಎರಡು ವರದಿಯೇಆಗುವುದಿಲ್ಲವೆಂದು ಹೇಳಲಾಗಿದೆ.

ಮಹಿಳೆಯರ ಮೇಲೆ ಮಾತ್ರವಲ್ಲ, ದಲಿತರ ಮೇಲೆ, ಎಲ್ಲ ಜಾತಿಗಳ ಬಡವರ ಮೇಲೂ ದೌರ್ಜನ್ಯಗಳು ನಡೆಯುತ್ತಿವೆ. ಮೊದಲು ಫ್ಯೂಡಲ್ ಪದ್ಧತಿಯ ಗಂಡಾಳಿಕೆ ಮತ್ತು ಈಗ ಬಂಡವಾಳಶಾಹಿ ಪದ್ಧತಿಯ ‘ಹೊಸ ಆರ್ಥಿಕ ಗಂಡಾಳಿಕೆ’ ಚಾಲ್ತಿಯಲ್ಲಿದೆ. ಇಂಥ ಸನ್ನಿವೇಶದಲ್ಲಿ ನಮಗೆ ಬೇಕಾದ್ದು ಗಂಡಸುತನವಲ್ಲ, ಎಲ್ಲರನ್ನೂ ತನ್ನ ಕಂದಗಳೆಂದು ಕಂಡುಕೊಳ್ಳುವ ತಾಯ್ತನ ಬೇಕು. ತಾಯ್ತನವು ಭಾಷೆಯಲ್ಲೂ ಬರಬೇಕು. ಬದುಕಿನಲ್ಲಿ ಮೊದಲು ಬರಬೇಕು. ತಾಯಿಯು ತನ್ನ ಮಕ್ಕಳಲ್ಲಿ ತಾರತಮ್ಯ ಮಾಡುವುದಿಲ್ಲ. ತಾನು ಜನ್ಮ ಕೊಟ್ಟ ಕಂದಮ್ಮಗಳು ಗಂಡಾಗಲಿ ಹೆಣ್ಣಾಗಲಿ ಸಮಾನ ವಾತ್ಸಲ್ಯದಿಂದ ಕಾಣುವುದು ತಾಯಿ ಗುಣ. ನಮಗಿಂದು ಬೇಕಾದ್ದುಜಾತಿ, ಧರ್ಮ, ಲಿಂಗ ತಾರತಮ್ಯಗಳಿಲ್ಲದಸಾಮಾಜಿಕ- ಆರ್ಥಿಕ ಸಮತೆ ಮತ್ತು ಮಮತೆಯುಳ್ಳ ತಾಯ್ತನದ ಸಮಾಜ.

ನಮ್ಮ ಮನಸ್ಸಿನಲ್ಲಿ ತಾಯ್ತನ, ಮೆದುಳಿನಲ್ಲಿ ಮಗುತನ ಇರಬೇಕು. ಮಗುತನವೆಂದರೆ ಅಹಂಕಾರವಿಲ್ಲದ ಅರಿವಿನ ಆಸಕ್ತಿ, ತಾಯ್ತನವೆಂದರೆ ಸಮಾನತೆ ಮತ್ತು ಸೌಹಾರ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT