ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಸ್. ಅರುಣ್ ಅವರ ವಿಶ್ಲೇಷಣೆ: ಯೂ–ಟರ್ನ್‌ ಪ್ರಸಂಗ ಹೇಳುವುದೇನು?

ಬಹುಮತ ಕೊರತೆಯ ಸಂಕಷ್ಟ ಮತ್ತು ಮಿತ್ರಪಕ್ಷಗಳನ್ನು ನಿಭಾಯಿಸುವ ಸವಾಲು
ಬಿ.ಎಸ್. ಅರುಣ್
Published 5 ಸೆಪ್ಟೆಂಬರ್ 2024, 20:21 IST
Last Updated 5 ಸೆಪ್ಟೆಂಬರ್ 2024, 20:21 IST
ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (ಯುಪಿಎಸ್)‌ ಜಾರಿಗೆ ತರುವುದಾಗಿ ಹೇಳಿದ್ದರ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುಪಿಎಸ್‌ನ ‘ಯು’ ಅಕ್ಷರವು ಕೇಂದ್ರ ಸರ್ಕಾರದ ‘ಯೂ–ಟರ್ನ್‌’ ನೀತಿಯನ್ನು ಪ್ರತಿನಿಧಿಸುತ್ತದೆ ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿತು.‌ ಇದರ ಜತೆಗೆ, ಸತತ ಮೂರನೇ ಅವಧಿಗೆ ಮೂರು ತಿಂಗಳ ಹಿಂದೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈವರೆಗೆ ಮೂರು ಪ್ರಸ್ತಾವಗಳನ್ನು ಹಿಂಪಡೆದು ತೀವ್ರ ಮುಜುಗರ ಅನುಭವಿಸಿದೆ.

ಇವುಗಳೆಂದರೆ, ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಇಂಡೆಕ್ಸೇಷನ್‌ ನಿಯಮ, ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ ಮತ್ತು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಅಧಿಕಾರಿಗಳ ಲ್ಯಾಟರಲ್‌ ಎಂಟ್ರಿ ನೇಮಕಾತಿ ವಿಚಾರ. ಇದರ ಜತೆಗೆ ಹಿಂದಿನ ಸಂಸತ್‌ ಅಧಿವೇಶನದಲ್ಲಿ ಮಂಡಿಸಲಾದ ವಕ್ಫ್‌ ಮಸೂದೆ ತಿದ್ದುಪಡಿಯನ್ನು ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸದನ ಸಮಿತಿಗೆ (ಜೆಪಿಸಿ) ಒಪ್ಪಿಸಿದ್ದು ಅಧಿಕಾರಾರೂಢ ಬಿಜೆಪಿಗೆ ನುಂಗಲಾರದ ತುತ್ತಾಗಿರಬಹುದು. ಏಕೆಂದರೆ, ಈ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಒಂದು ಅಥವಾ ಎರಡು ಬಾರಿ ಮಾತ್ರ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಿರಬಹುದು.

ಈ ಹಿಂದಿನ ಎರಡು ಅವಧಿಗಳಲ್ಲಿ ಬಿಜೆಪಿಯು ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಹೊಂದಿತ್ತು. ಆದರೆ, ಈ ಮೂರು ತಿಂಗಳ ಅನುಭವವು ಮೋದಿ ನೇತೃತ್ವದ ಬಿಜೆಪಿಗೆ ಹೊಸದು. ಏಕೆಂದರೆ, ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಮೋದಿ ನಾಯಕತ್ವದ ಬಿಜೆಪಿಯು ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ ಹಾಗೂ 10 ವರ್ಷಗಳಲ್ಲಿ ಪ್ರಥಮ ಬಾರಿಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಶಕ್ತಿಯುತವಾಗಿವೆ. ವಿರೋಧ ಪಕ್ಷಗಳಿಗೆ ಹಿಂದಿನ ಹತ್ತು ವರ್ಷಗಳಲ್ಲಿ ಆಡಳಿತ ಪಕ್ಷವನ್ನು ಬಗ್ಗಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.

ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದರೂ 2024ರ ಚುನಾವಣೆಯು ದೇಶದ ರಾಜಕೀಯವನ್ನು ಬಹಳಷ್ಟು ಮಟ್ಟಿಗೆ ಬದಲಾಯಿಸಿದೆ. ಹೋದ ಬಾರಿ ಗೆದ್ದಿದ್ದ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಸೋತ ಬಿಜೆಪಿ, ಲೋಕಸಭೆಯಲ್ಲಿ 240 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಹಿಂದಿನ ಎರಡೂ ಚುನಾವಣೆಗಳಲ್ಲಿ ಜಯಭೇರಿ ಹೊಡೆದಿದ್ದ ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣದಂತಹ ರಾಜ್ಯಗಳಲ್ಲಿ ಈ ಬಾರಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿತು. 2014 ಹಾಗೂ 2019ರಲ್ಲಿ ತಮ್ಮ ವರ್ಚಸ್ಸಿನ ಬಲದ ಮೇಲೆ ಪಕ್ಷವನ್ನು ಗೆಲ್ಲಿಸಿಕೊಂಡು ಬಂದ ಪ್ರಧಾನಿ ಮೋದಿ ಅವರಿಗೆ ಮೊದಲ ಬಾರಿ ಹಿನ್ನಡೆ ಉಂಟಾಯಿತು.

ಬದಲಾದ ಈ ಪರಿಸ್ಥಿತಿಯನ್ನು ವಿರೋಧ ಪಕ್ಷಗಳು ಸಂಪೂರ್ಣವಾಗಿ ಉಪಯೋಗಿಸಿಕೊಂಡಂತೆ ಕಾಣುತ್ತದೆ. ಅದು ಆಗಬೇಕು ಕೂಡ. ಇಲ್ಲದಿದ್ದರೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿದ್ದೂ ಪ್ರಯೋಜನವಾದರೂ ಏನು? ಆದರೆ ಮೋದಿಯವರಿಗೆ ಇದು ಹೊಸದು. ತಾವು 13 ವರ್ಷಗಳ ಕಾಲ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಪ್ರಧಾನಿಯಾಗಿ ಹಿಂದಿನ 10 ವರ್ಷಗಳಲ್ಲಿ ಅವರಿಗೆ ಮೈತ್ರಿ ಪಕ್ಷಗಳನ್ನು ನಿಭಾಯಿಸುವ ಅನಿವಾರ್ಯ ಇರಲಿಲ್ಲ. ಮೊದಲ ಬಾರಿಗೆ ಈಗ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ, ಅಂದರೆ ಮಿತ್ರಪಕ್ಷಗಳನ್ನು ಜತೆಯಲ್ಲಿ ಕರೆದೊಯ್ಯುವ ಹಾಗೂ ಅವುಗಳನ್ನು, ಅವುಗಳ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಬಿದ್ದಿದೆ.

ಇದರ ಜತೆಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಉತ್ಸಾಹಭರಿತವಾದ, ಆಡಳಿತ ಪಕ್ಷವನ್ನು ಕಟ್ಟಿಹಾಕುವಂತಹ ಹರಿತವಾದ ವಾದಗಳು ಎನ್‌ಡಿಎ ಸರ್ಕಾರವನ್ನು ಈ ಮೂರು ತಿಂಗಳಲ್ಲಿ ಬಹಳ ಬಾರಿ ಪೇಚಿಗೆ ಸಿಲುಕಿಸಿವೆ.

ಯುಪಿಎಸ್‌ ಜಾರಿ ಮಾಡಿದರೆ ಯೂ–ಟರ್ನ್‌ ಹೇಗಾಗುತ್ತದೆ? 2022ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು, ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆಗ ಜಾರಿಯಲ್ಲಿದ್ದ ‘ರಾಷ್ಟ್ರೀಯ ಪಿಂಚಣಿ ಯೋಜನೆ’ಗೆ (ಎನ್‌ಪಿಎಸ್)‌ ಬಿಜೆಪಿಯ ಬೆಂಬಲವಿತ್ತು. ತಾನು ಅಧಿಕಾರಕ್ಕೆ ಬಂದರೆ ಹಳೆಯ ಯೋಜನೆಯನ್ನು ಮತ್ತೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಆಶ್ವಾಸನೆ ಕೊಟ್ಟಿತ್ತು. ಆದರೆ ತನಗೆ ಇಲ್ಲಾದ ಸೋಲಿಗೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸುವುದರಲ್ಲಿ ವಿಫಲವಾದುದಕ್ಕೆ ಒಂದು ಮುಖ್ಯ ಕಾರಣ ಪಿಂಚಣಿ ಯೋಜನೆ ಎಂದು ಭಾವಿಸಿದ ಎನ್‌ಡಿಎ ಸರ್ಕಾರ, ಈ ಯೋಜನೆಯನ್ನು ಪರಿಷ್ಕರಿಸಿ ಯುಪಿಎಸ್‌ ಜಾರಿಗೆ ತಂದಿದೆ. ಇದನ್ನೇ ಖರ್ಗೆ ಯೂ–ಟರ್ನ್‌ ಎಂದು ಕರೆದಿರುವುದು.

ಕೇಂದ್ರ ಸರ್ಕಾರವು ಹಿಂಪಡೆದ ಇನ್ನೊಂದು ತೀರ್ಮಾನ ಅಧಿಕಾರಿಗಳ ಲ್ಯಾಟರಲ್‌ ಎಂಟ್ರಿ. ಅಂದರೆ, ಕೇಂದ್ರ ಸೇವೆಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರನ್ನು ಹಾಗೂ ಖಾಸಗಿ ವಲಯದವರನ್ನು ಸರ್ಕಾರಿ ಇಲಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದು. ಇದೇನೂ ಹೊಸದಲ್ಲ ಅಥವಾ ತಪ್ಪು ಕೂಡ ಅಲ್ಲ. ಜವಾಹರಲಾಲ್‌ ನೆಹರೂ ಪ್ರಧಾನಿ ಆಗಿದ್ದ ಅವಧಿಯಿಂದಲೂ ಈ ರೀತಿಯ ನೇಮಕಾತಿ ನಡೆಯುತ್ತ ಬಂದಿದೆ. ಆರ್ಥಿಕ ತಜ್ಞ ಕೂಡ ಆಗಿರುವ ಮನಮೋಹನ್‌ ಸಿಂಗ್‌, ಅರ್ಥಶಾಸ್ತ್ರಜ್ಞ ಮೋಂಟೆಕ್‌ ಸಿಂಗ್‌ ಅಹ್ಲುವಾಲಿಯ, ಸಾರ್ವಜನಿಕ ವಲಯದ ಪಿತಾಮಹ ಎಂದೇ ಹೆಸರಾಗಿರುವ ವಿ.ಕೃಷ್ಣಮೂರ್ತಿ, ವಿದ್ಯುತ್‌ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಕಾರಣರಾದ ಆರ್‌.ವಿ.ಶಾಹಿ, ರಿಸರ್ವ್‌ ಬ್ಯಾಂಕಿನ ಗವರ್ನರ್‌ ಆಗಿದ್ದ ಐ.ಜಿ.ಪಟೇಲ್‌ ಅವರಂತಹವರು ಕೇಂದ್ರ ಸರ್ಕಾರದ ಉನ್ನತ ಹಂತದ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿದವರು.

ಆದರೆ ಈಗ ಇದಕ್ಕೆ ಅಡ್ಡ ಬಂದಿದ್ದು ಮೀಸಲಾತಿ. ರಾಹುಲ್‌ ಗಾಂಧಿ ಹಾಗೂ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಲ್‌ಜೆಪಿಯು ಲ್ಯಾಟರಲ್‌ ಎಂಟ್ರಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದವರಿಗೆ ಪ್ರಾತಿನಿಧ್ಯ ಇರಬೇಕೆಂದು ಆಗ್ರಹಿಸಿದರು. ತನ್ನ ‘400 ಪಾರ್‌’ ಹೇಳಿಕೆಯ ಪರಿಣಾಮವಾಗಿ ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ರದ್ದತಿಯ ಹುನ್ನಾರ ನಡೆದಿದೆ ಎಂದು ಮೇಲ್ಕಂಡ ವರ್ಗಗಳಿಗೆ ಅನ್ನಿಸಿದೆ, ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅವು ತನ್ನ ವಿರುದ್ಧ ಮತ ಚಲಾಯಿಸಿರಬಹುದೆಂದು ಬಿಜೆಪಿ ಭಾವಿಸಿದೆ.

ಇದಕ್ಕೆ ಪೂರಕವಾಗಿಯೋ ಎನ್ನುವಂತೆ ಸದ್ಯದಲ್ಲೇ ನಾಲ್ಕು ರಾಜ್ಯಗಳ ಚುನಾವಣೆಗಳು ಜರುಗಲಿವೆ. ವಿರೋಧ ಪಕ್ಷಗಳು ಇದನ್ನೇ ದೊಡ್ಡ ಪ್ರಚಾರದ ಸಂಗತಿಯನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇತ್ತು. ಈ ವಿಷಯಕ್ಕೆ ಸಂಬಂಧಿಸಿದ ಖಾತೆ ಪ್ರಧಾನಿಯ ನೇರ ಅಧೀನದಲ್ಲಿಯೇ ಇದೆ. ದಲಿತ ಸಂಘಟನೆಗಳು ಆಗಸ್ಟ್‌ 21ರಂದು ಈ ವಿಷಯವಾಗಿ ‘ಭಾರತ್‌ ಬಂದ್‌’ ಕೂಡ ಘೋಷಿಸಿದ್ದವು. ಈ ಎಲ್ಲ ಕಾರಣಗಳಿಂದ, ಲ್ಯಾಟರಲ್‌ ಎಂಟ್ರಿಗೆ ಜಾಹೀರಾತು ಹೊರಡಿಸಿದ ಮೂರು ದಿನಗಳಲ್ಲೇ ಸರ್ಕಾರ ಇದನ್ನು ವಾಪಸ್‌ ಪಡೆಯಿತು.

ಈ ಬಾರಿಯ ಬಜೆಟ್‌ನ ಒಂದು ಪ್ರಮುಖ ಅಂಶಗಳಲ್ಲಿ ಷೇರುಗಳ ಮೇಲೆ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಮತ್ತು ಇಂಡೆಕ್ಸೇಷನ್‌ (ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿ ತೆರಿಗೆ ಲೆಕ್ಕ ಮಾಡುವುದು) ಅನುಕೂಲಗಳನ್ನು ರದ್ದುಪಡಿಸುವ ಪ್ರಸ್ತಾವವೂ ಸೇರಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವವನ್ನು ಹಿಂದಕ್ಕೆ ಪಡೆಯಲಾಯಿತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತರಬೇಕೆಂದಿದ್ದ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಕರಡನ್ನು ಕೂಡ ಸರ್ಕಾರ ವಾಪಸ್‌ ಪಡೆಯಿತು. ಈ ಕರಡು ಮಸೂದೆಯ ಪ್ರಕಾರ, ಒಟಿಟಿ ಅಥವಾ ಡಿಜಿಟಲ್ ಸುದ್ದಿ ಪ್ರಸಾರಕರು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ. ಸಮೂಹ ಮಾಧ್ಯಮದಲ್ಲಿ ಬಿಜೆಪಿಯ ಹೊಗಳುಭಟರೇ ಹೆಚ್ಚಾಗಿರುವ ಕಾರಣಕ್ಕೆ ಜನ ಆನ್‌ಲೈನ್ ಮೂಲಕ ವಿಷಯ ಪ್ರಸ್ತುತಪಡಿಸುವವರು ಅಥವಾ ‘ಸೋಷಿಯಲ್‌ ಮೀಡಿಯ ಇನ್‌ಫ್ಲೂಯೆನ್ಸರ್ಸ್‌’ ಮೂಲಕ ಸುದ್ದಿ ಪಡೆಯುವುದು ಹಿಂದಿನ ಚುನಾವಣೆಯ ಸಮಯದಲ್ಲಿ ಜಾಸ್ತಿಯಾಯಿತು ಎಂದು ಸಮೀಕ್ಷೆಯೊಂದು ಹೇಳುತ್ತದೆ. ಈ ಕರಡು ಮಸೂದೆಯ ಒಂದು ಮೂಲ ಉದ್ದೇಶ ಈ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಎಂಬುದು ಕೆಲವರ ಅಭಿಪ್ರಾಯ.

ವಕ್ಫ್‌ ಮಸೂದೆ ತಿದ್ದುಪಡಿಯು ಸಂಸತ್‌ನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ತಿದ್ದುಪಡಿಯ ಬಗ್ಗೆ ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಹಾಗೂ ತೆಲುಗುದೇಶಂ ಆತಂಕ ವ್ಯಕ್ತಪಡಿಸಿದವು. ಈ ಕಾರಣಗಳಿಂದ ಅದನ್ನು ಜೆಪಿಸಿ ಪರಿಶೀಲನೆಗೆ ಒಪ್ಪಿಸಲು ಸರ್ಕಾರ ಸಮ್ಮತಿಸಿತು.

ಈ ಹಿಂದೆ ಮೋದಿ ನೇತೃತ್ವದ ಸರ್ಕಾರವು ಕರಡು ಮಸೂದೆಯನ್ನು ಜೆಪಿಸಿಗೆ ವಹಿಸಲು ಒಪ್ಪಿದ್ದು ಬಹುಶಃ ಒಂದೇ ಒಂದು ಬಾರಿ. ಹಿಂದಿನ ಲೋಕಸಭೆಯಲ್ಲಿ ಮಂಡಿಸಲಾದ ‘ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ’ಯನ್ನು ಸರ್ಕಾರವು ಜೆಪಿಸಿಯ ಪರಿಶೀಲನೆಗೆ ಒಪ್ಪಿಸಿತ್ತು. ಜೆಪಿಸಿಯು 81 ಬದಲಾವಣೆಗಳನ್ನು ಸೂಚಿಸಿತ್ತು. ಈ ಬದಲಾವಣೆಗಳೊಂದಿಗೆ ಹೋದ ವರ್ಷ ಇದು ಅಂಗೀಕಾರವಾಯಿತು.

ಈ ಹಿಂದೆ ಇನ್ನೂ ಎರಡು ಮಸೂದೆಗಳನ್ನು ವಾಪಸ್‌ ಪಡೆಯಲಾಗಿತ್ತು. ಅವುಗಳೆಂದರೆ, ಕೃಷಿ ಮಸೂದೆ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಮಸೂದೆ. ಕೃಷಿ ಮಸೂದೆಯಂತೂ ಭಾರಿ ಪ್ರತಿರೋಧಕ್ಕೆ ಕಾರಣವಾಗಿತ್ತು. ಸಂಸತ್ತಿನಲ್ಲಿ ಮಂಡಿಸಿದ ಒಂದು ವರ್ಷದ ನಂತರ, 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮುನ್ನ, ಮೋದಿ ನೇತೃತ್ವದ ಸರ್ಕಾರ ಇವುಗಳನ್ನು ವಾಪಸ್‌ ಪಡೆಯಿತು.

ಇದು ಎನ್‌ಡಿಎ ಸರ್ಕಾರದ ‘ಯೂ–ಟರ್ನ್‌’ ಗಾಥೆ.

*****

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT