ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ದ್ವೇಷದ ಹೊರೆ ಬಲು ಭಾರ

Published : 22 ಸೆಪ್ಟೆಂಬರ್ 2024, 22:33 IST
Last Updated : 22 ಸೆಪ್ಟೆಂಬರ್ 2024, 22:33 IST
ಫಾಲೋ ಮಾಡಿ
Comments

ಮಹಾತ್ಮ ಗಾಂಧಿಯವರ ಆಪ್ತ ಕಾರ್ಯದರ್ಶಿ ಮಹಾದೇವ ದೇಸಾಯಿ ಅವರು ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೆ 1936ರಲ್ಲಿ ಹೀಗೆ ಬರೆದಿದ್ದರು: ‘ಪೂಜನೀಯ ಗುರುದೇವ, ಹಿಂದೂ ಧರ್ಮವನ್ನು ತೊರೆದೂ ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಸಿಖ್ ಧರ್ಮವನ್ನು ಅಪ್ಪಿಕೊಳ್ಳುವುದು ಎಂಬುದನ್ನು ಹೇಳಲು, ಹರಿಜನರು ಸಿಖ್ ಧರ್ಮಕ್ಕೆ ಮತಾಂತರ ಹೊಂದುವುದನ್ನು ಸಮರ್ಥಿಸಲು ಹಲವರು ನಿಮ್ಮ ಅಭಿಪ್ರಾಯವನ್ನು ಉಲ್ಲೇಖಿಸುತ್ತಿದ್ದಾರೆ. ಇಂಥದ್ದಕ್ಕೆ ನೀವು ಒಪ್ಪಿಗೆ ನೀಡಿದ್ದೀರಿ ಎಂಬುದನ್ನು ನಂಬಲು ಬಾಪು ಅವರಿಗೆ ಆಗುತ್ತಿಲ್ಲ... ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದೇ?’

ಇದಕ್ಕೆ ಕವಿಯು ತರ್ಕಬದ್ಧವಾದ, ದೀರ್ಘವಾದ ಉತ್ತರ ನೀಡಿದರು. ಅದನ್ನು ಚುಟುಕಾಗಿ ಹೀಗೆ ಉಲ್ಲೇಖಿಸಬಹುದು: ‘ಪ್ರಿಯ ಮಹಾದೇವ... ನಾನು ಅವರಿಗೆ ಧಾರ್ಮಿಕ ನಂಬಿಕೆಯನ್ನು ಬದಲಾಯಿಸಲು ಸಲಹೆ ನೀಡಿಲ್ಲ. ಆದರೆ, ನಮಗೆಲ್ಲ ತಿಳಿದಿರುವ ಕಾರಣಕ್ಕೆ ಅವರು ಇಂತಹ ತೀವ್ರವಾದ ಹೆಜ್ಜೆ ಇರಿಸಲು ಆಲೋಚಿಸಿದ್ದಲ್ಲಿ, ಸಿಖ್ ಧರ್ಮದ ಬಗ್ಗೆ ಮನವಿ ಮಾಡಿದ್ದೇನೆ. ಇದೇ ಅಭಿಪ್ರಾಯವನ್ನು ನಾನು ಬೌದ್ಧ ಧರ್ಮದ ಬಗ್ಗೆಯೂ ಹೊಂದಿದ್ದೇನೆ. ನಿತ್ಯದ ಬಳಕೆಯಲ್ಲಿ, ಹಿಂದೂ ಧರ್ಮವು ಒಂದು ಜೀವನ ಪದ್ಧತಿ ಮಾತ್ರ. ಅದರ ತಾತ್ವಿಕ ಹಾಗೂ ಸಾಂಸ್ಕೃತಿಕ ನೆಲೆಯು ಅದೆಷ್ಟೇ ಮಹಾನ್ ಆಗಿರಲಿ, ಆ ಧರ್ಮದ ಹೆಸರಿನಲ್ಲಿ ಬಹುಕಾಲದಿಂದ ಮಾಡಿಕೊಂಡು ಬಂದಿರುವ ಸಾಮಾಜಿಕ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅದಷ್ಟೇ ಸಾಕಾಗುವುದಿಲ್ಲ. ನಮ್ಮ ಧರ್ಮವು ಸಮಾಜವನ್ನು ಹಲವು ಶ್ರೇಣೀಕೃತ ಗುಂಪುಗಳನ್ನಾಗಿ ವಿಭಜಿಸುತ್ತದೆ. ತಳದಲ್ಲಿ ಇರುವವರಿಗೆ ಸಾಮಾಜಿಕ ನ್ಯಾಯವನ್ನು ನಿರಾಕರಿಸಿರುವುದಷ್ಟೇ ಅಲ್ಲದೆ, ತಾವು ಮನುಷ್ಯನಿಗಿಂತ ಕಡೆ ಎಂಬ ಭಾವನೆ ಅವರಲ್ಲಿ ಮೂಡುವಂತೆ ನಿರಂತರವಾಗಿ ಮಾಡಲಾಗುತ್ತಿದೆ...’

ಅಮೆರಿಕದಲ್ಲಿ 1861ರಲ್ಲಿ ದಕ್ಷಿಣದ ಕೆಲವು ರಾಜ್ಯಗಳು ಗುಲಾಮಗಿರಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದಾಗ, ಅಲ್ಲಿ ರಕ್ತಸಿಕ್ತವಾದ ಜನಾಂಗೀಯ ಯುದ್ಧ ಆರಂಭವಾಯಿತು. ಅದು ಅಮೆರಿಕವನ್ನು ಎರಡಾಗಿಸಿತು. ಈ ಯುದ್ಧವು ನಾಲ್ಕು ವರ್ಷ ನಡೆಯಿತು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ಆದರೆ, ದಕ್ಷಿಣದ ಸೇನೆಗೆ ಸೋಲಾಯಿತು, ಗುಲಾಮಗಿರಿಯನ್ನು ಕೊನೆಗೊಳಿಸಲಾಯಿತು. ಲಿಂಕನ್ ಅವರ ದೃಢನಿಶ್ಚಯ ಹಾಗೂ ಧೈರ್ಯವು ಅಮೆರಿಕ ಹೋಳಾಗುವುದನ್ನು ತಪ್ಪಿಸಿತು. ಅವರು ಆಗ ಆಡಿದ್ದ ಮಾತುಗಳು ಇಂದಿಗೂ ಅನುರಣಿಸುತ್ತವೆ. ‘ಎಲ್ಲ ಮನುಷ್ಯರೂ ಸಮಾನರು ಎಂದು ನಾನು ನಂಬಿದ್ದೇನೆ. ದೇಶವು ಅರ್ಧ ಗುಲಾಮಗಿರಿಯಲ್ಲಿ, ಇನ್ನರ್ಧ ಸ್ವತಂತ್ರವಾಗಿ ಇರಲಾರದು. ನಾನು ಗುಲಾಮನಾಗಲಾರೆ, ಹಾಗಾಗಿ ನಾನು ಒಡೆಯನೂ ಆಗಲಾರೆ. ಇದು ಪ್ರಜಾತಂತ್ರದ ಬಗ್ಗೆ ನನ್ನ ಆಲೋಚನೆಯನ್ನು ಹೇಳುತ್ತದೆ...’ ಎಂಬುದು ಅವರ ಮಾತುಗಳಾಗಿದ್ದವು.

ನಮ್ಮ ದೇಶವು ಇಂದು ದ್ವೇಷದ ಕಾರಣಕ್ಕೆ ಒಡೆದುಹೋಗಿದೆ. ಧರ್ಮ, ಜಾತಿ ಮತ್ತು ವರ್ಗದ ಕಾರಣಕ್ಕೆ ಒಡೆದಿರುವ ದೇಶವು ಇಂದಲ್ಲ ನಾಳೆ ತೀವ್ರತರವಾದ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ..

ನಮ್ಮಲ್ಲಿ ಬಹುಕಾಲದಿಂದ ಆಚರಣೆಯಲ್ಲಿರುವ ತಾರತಮ್ಯ ಹಾಗೂ ಅಸ್ಪೃಶ್ಯತೆಯು ನಾವು ಪ್ರತಿಪಾದಿಸುವ ಸರ್ವೇಶ್ವರವಾದದ ಮೇಲೆಯೇ ಒಂದು ಕಪ್ಪು ಚುಕ್ಕೆಯಂತೆ ಕಾಣುತ್ತದೆ. ಅಷ್ಟೇ ಅಲ್ಲ, ಅವು ನಮ್ಮ ಪ‍ವಿತ್ರ ಉಪನಿಷತ್ತುಗಳಿಗೂ ವಿರುದ್ಧವಾಗಿವೆ. ಗಂಗೆಯ ಅಷ್ಟೂ ಪವಿತ್ರ ನೀರನ್ನು ಬಳಸಿಯೂ ನಾವು ನಮ್ಮ ಪಾಪವನ್ನು ತೊಳೆದುಕೊಳ್ಳಲು ಆಗುವುದಿಲ್ಲ. ದಲಿತರ ಮೇಲಿನ ದೌರ್ಜನ್ಯದ ಸುದ್ದಿ ಇಲ್ಲದ ಒಂದು ದಿನವೂ ಇಲ್ಲ. 

ಎರಡು ಪ್ರಸಂಗಗಳನ್ನು ನಾನು ಇಲ್ಲಿ ಉಲ್ಲೇಖಿಸುವೆ. ನಾನು ಸೇನೆಯಿಂದ ನಿವೃತ್ತಿ ಪಡೆದ ನಂತರ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ನನ್ನ ಕುಟುಂಬದ ಜಮೀನು ಹೇಮಾವತಿ ಅಣೆಕಟ್ಟೆಯ ನೀರಿನಲ್ಲಿ ಮುಳುಗಡೆ ಆಗಿದ್ದಕ್ಕೆ ಪರಿಹಾರ ರೂಪದಲ್ಲಿ ಹಾಸನದ ಮೂಲೆಯೊಂದರಲ್ಲಿ ಕೆಲವು ಎಕರೆ ಜಮೀನು ನೀಡಲಾಗಿತ್ತು. ನಾನು ಸೇನೆಯ ಸೆಕೆಂಡ್‌ ಹ್ಯಾಂಡ್ ಟೆಂಟ್, ಅಡುಗೆ ಪಾತ್ರಗಳು, ಕೆಲವು ಕೃಷಿ ಉಪಕರಣಗಳನ್ನು ತೆಗೆದುಕೊಂಡು, ಪರಿಶಿಷ್ಟ ಸಮುದಾಯದ ಒಬ್ಬ ಯುವಕ, ಬಡಗಿಗಳು ಹಾಗೂ ಕಾರ್ಮಿಕರ ಜೊತೆ 1979ರ ಒಂದು ದಿನ ಆ ಜಮೀನಿಗೆ ತೆರಳಿದೆ. ಅಲ್ಲಿ ಕ್ಯಾಂಪ್ ಹಾಕುವ ಉದ್ದೇಶ ನನ್ನದಾಗಿತ್ತು.

ಟೆಂಟ್ ಹಾಕಲು ನಾವು ಎಲ್ಲ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಒಂದು ಕಿ.ಮೀ. ನಡೆದೆವು. ಸೂರ್ಯ ಕಂತುವ ಹೊತ್ತಿಗೆ ಅಲ್ಲಿ ತಲುಪಿದೆವು. ನಾವು ಯಾರೂ ಮಧ್ಯಾಹ್ನದ ಊಟ ಮಾಡಿರಲಿಲ್ಲ. ಪಕ್ಕದ ತೊರೆಯಲ್ಲಿ ಸ್ನಾನ ಮುಗಿಸಿದೆವು. ಒಂದಿಷ್ಟು ಕಟ್ಟಿಗೆ ಒಗ್ಗೂಡಿಸುವಂತೆ, ಅಡುಗೆ ಸಿದ್ಧಪಡಿಸುವಂತೆ ನಾನು ಪರಿಶಿಷ್ಟ ಸಮುದಾಯದ ಯುವಕನಿಗೆ ಹೇಳಿದೆ. ನಾನು ಬಾಳೆ ಎಲೆ ಹಾಕಿಕೊಂಡು, ಊಟಕ್ಕೆ ಕಾಯುತ್ತ ಕುಳಿತೆ. ಸೇನೆಯಲ್ಲಿನ ದಿನಗಳ ಮಾದರಿಯಲ್ಲೇ, ಎಲ್ಲರಿಗೂ ಊಟಕ್ಕೆ ಬರುವಂತೆ ಹೇಳಿದೆ. ಅಡುಗೆ ಸಿದ್ಧಪಡಿಸಿದ್ದು ದಲಿತನಾದ ಕಾರಣ ತಾವು ಊಟ ಮಾಡುವುದಿಲ್ಲ, ನಾನು ಮನೆಯಿಂದ ತಂದ ಊಟವನ್ನು ತಮಗೆ ಬಡಿಸಬೇಕು ಎಂದು ಆಗ ಒಬ್ಬರು ನನ್ನ ಕಿವಿಯಲ್ಲಿ ಉಸುರಿದರು. ನನಗೆ ಅರೆಕ್ಷಣ ನಂಬಲಾಗಲಿಲ್ಲ. ಊಟ ಶುರುಮಾಡಿದ ನಾನು, ಮರುದಿನ ಬೇಗನೆ ಏಳಬೇಕಿರುವ ಕಾರಣ ಎಲ್ಲರೂ ಊಟ ಮಾಡಬೇಕು ಎಂದು ಹೇಳಿದೆ.

ಅವರು ಒಬ್ಬರನ್ನೊಬ್ಬರು ನೋಡಿಕೊಂಡರು. ಅವರಲ್ಲಿನ ಹಸಿವು ಪೂರ್ವಗ್ರಹವನ್ನು ನುಂಗಿಹಾಕಿತು. ಆ ಜಾಗದಲ್ಲಿ ಬೇರೆ ಆಹಾರ ಸಿಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಅವರು ಊಟ ಮಾಡಿದರು. ಸರ್ವಜ್ಞ ಹೇಳಿದ ‘ಅನ್ನ ದೇವರ ಮುಂದೆ, ಇನ್ನು ದೇವರು ಉಂಟೆ ಅನ್ನವಿರುವನಕ ಪ್ರಾಣವು – ಜಗದೊಳಗನ್ನವೇ ದೈವ’ ಎಂಬ ಮಾತನ್ನು ನಾನು ಆಗ ನೆನಪು ಮಾಡಿಕೊಂಡೆ. ನಮ್ಮ ಗುಂಪಿನಲ್ಲಿ ಲಿಂಗಾಯತ, ಗೌಡ, ಕುರುಬ, ವಿಶ್ವಕರ್ಮ ಮತ್ತು ಬ್ರಾಹ್ಮಣ ಜಾತಿಯವರಿದ್ದರು. ಸಂಪ್ರದಾಯವಾದಿ ಬ್ರಾಹ್ಮಣರು ಮಾತ್ರವೇ ಅಲ್ಲದೆ, ದಲಿತರು ಮುಟ್ಟಿದ್ದನ್ನು ಇತರ ಜಾತಿಗಳವರೂ ಸೇವಿಸುವುದಿಲ್ಲ ಎಂಬುದನ್ನು ನಾನು ಅರ್ಥ ಮಾಡಿಕೊಂಡೆ. ಮುಸ್ಲಿಮರು, ಕ್ರೈಸ್ತರು, ಸಿಖ್ಖರು ಅಥವಾ ಬೌದ್ಧರಲ್ಲಿ ದಲಿತರು ಭ್ರಾತೃತ್ವ ಕಾಣುವುದು ಏಕೆ ಎಂಬುದು ನನಗೆ ಅರ್ಥವಾಗಿತ್ತು. ಈ ಯಾವ ಧರ್ಮಗಳಲ್ಲಿಯೂ ಅಮಾನವೀಯವಾದ ಅಸ್ಪೃಶ್ಯತೆ ಇಲ್ಲ. ನಾವು ನಮ್ಮ ದೇವಸ್ಥಾನಗಳ ಬಾಗಿಲನ್ನು ದಲಿತರಿಗೆ ಮುಚ್ಚಿರುವಾಗ, ಅವರು ಬೇರೆ ಧರ್ಮಗಳನ್ನು ಅಪ್ಪಿಕೊಂಡಾಗ ಅದನ್ನು ಆಶ್ಚರ್ಯದಿಂದ ಕಾಣಬೇಕೇ?

ಕೆಲವು ವರ್ಷಗಳ ನಂತರ ನಾನು ರೇಷ್ಮೆ ಬೆಳೆಗಾರನಾಗಿ ಒಂದು ದಿನ ಬೆಳಿಗ್ಗೆ ರಾಮನಗರ ರೇಷ್ಮೆ ಮಾರುಕಟ್ಟೆಗೆ ಹೋಗಿದ್ದೆ. ಬೆಳಿಗ್ಗೆ 6 ಗಂಟೆಗೆ ಅಲ್ಲಿಗೆ ಹೋದಾಗ, ಮಾರುಕಟ್ಟೆ ಎಂದಿನಂತೆ ಗಿಜಿಗುಡುತ್ತಿರಲಿಲ್ಲ. ಅದು ಪ್ರೇತಕಳೆ ಹೊದ್ದಿತ್ತು. ಹಿಂದೂ–ಮುಸ್ಲಿಮರ ನಡುವೆ ಘರ್ಷಣೆ ಉಂಟಾಗಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ; ರೀಲರ್‌ಗಳು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ನನಗೆ ಯಾರೋ ತಿಳಿಸಿದರು. ನನ್ನಂತೆಯೇ ಕರ್ನಾಟಕದ ಹಲವು ಕಡೆಗಳಿಂದ ಬಂದಿದ್ದ ರೈತರು, ರೇಷ್ಮೆ ಗೂಡು ಮಾರಲಾಗದೆ ನಷ್ಟ ಅನುಭವಿಸುವ ಆತಂಕಕ್ಕೆ ಒಳಗಾಗಿದ್ದರು.

ರೇಷ್ಮೆ ಬೆಳೆಯುವ ಹಿಂದೂ ರೈತರಿಗೆ, ರೇಷ್ಮೆಗೂಡು ಖರೀದಿಸುವ ರೀಲರ್‌ಗಳು ದೇವರಿದ್ದಂತೆ. ರೀಲರ್‌ಗಳು ಮುಸ್ಲಿಮರು. ಈ ರೀಲರ್‌ಗಳಿಗೆ, ನೂಲು ಖರೀದಿಸುವವರು ದೇವರಿದ್ದಂತೆ. ನೇಕಾರರಿಗೆ, ಅವರ ಬಟ್ಟೆಯನ್ನು ಖರೀದಿಸುವ ಸಗಟು ವರ್ತಕರು ದೇವರು. ಸಗಟು ವರ್ತಕರಲ್ಲಿ ಮಾರ್ವಾಡಿಗಳು, ಗುಜರಾತಿಗಳು ಹೆಚ್ಚಿದ್ದಾರೆ. ಎಲ್ಲರಿಗೂ, ಕೊನೆಯಲ್ಲಿ, ಗ್ರಾಹಕರು ಪರಮದೈವ. ಅವರು ಎಲ್ಲ ಜಾತಿಗಳ ಜನರು. ನಮ್ಮ ಸಮಾಜವೆಂಬುದು ಕಾಂಚೀಪುರಂ ಅಥವಾ ಬನಾರಸಿ ಸೀರೆಯಲ್ಲಿನ ನೇಯ್ಗೆಯಂತೆಯೇ ತೀರಾ ಸಂಕೀರ್ಣ. ಇಲ್ಲಿ ಎಲ್ಲರೂ ಪರಸ್ಪರ ಅವಲಂಬಿತರು.

ನಮ್ಮನ್ನು ನಾವು ಜಾತಿ, ವರ್ಗ, ವರ್ಣದ ಮಸೂರದ ಮೂಲಕ ಕಾಣುವುದು ಅದೆಂತಹ ಮೂರ್ಖತನ... ಮತಬ್ಯಾಂಕ್ ಮೇಲೆ ಕಣ್ಣಿಟ್ಟು, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಮುಸ್ಲಿಮರನ್ನು ಓಲೈಸಿದ್ದು ಬಹುಸಂಖ್ಯಾತರ ಪ್ರತಿರೋಧಕ್ಕೆ ಕಾರಣವಾಯಿತು. ಈ ಅವಕಾಶವನ್ನು ಆರ್‌ಎಸ್‌ಎಸ್‌ ಮಾರ್ಗದರ್ಶನದಲ್ಲಿ ಬಿಜೆಪಿ ಬಳಸಿಕೊಂಡಿತು. 

ಮಾರ್ಟಿನ್ ಲೂಥರ್ ಕಿಂಗ್ ಒಮ್ಮೆ ‘ದ್ವೇಷದ ಹೊರೆಯನ್ನು ತಾಳಿಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದ್ದ. ‘ಒಂದು ದೇಶ, ಒಗ್ಗಟ್ಟಿನ ಜನ’ ಎಂದು ನಮ್ಮನ್ನು ನಾವು ಕಾಣಲು ಆಗದಿದ್ದರೆ, ನಮಗೆ ಭವಿಷ್ಯ ಇದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT