ವ್ಯಕ್ತಿಯೊಬ್ಬನ ಹುಟ್ಟಿನ ಕಾರಣದಿಂದ ಆತನ ಜಾತಿಯ ಆಧಾರದಲ್ಲೇ ವ್ಯಕ್ತಿಯ ಘನತೆ ಹಾಗೂ ಆತನಿಗೆ ಸಂಪನ್ಮೂಲ, ಅವಕಾಶಗಳ ಲಭ್ಯತೆಯನ್ನು ನಿರ್ಧರಿಸುವ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯು ಭಾರತದಲ್ಲಿ ಈಗಲೂ ಬಲವಾಗಿ ಬೇರೂರಿದೆ. ಕರ್ನಾಟಕದಲ್ಲಿ ನಡೆಸಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ವರದಿಯು ಸಾಮಾಜಿಕ ಶ್ರೇಣೀಕರಣದಿಂದ ಸೃಷ್ಟಿಯಾಗಿರುವ ಅಸಮಾನತೆಯನ್ನು ಮೂಲೋತ್ಪಾಟನೆ ಮಾಡಿ, ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ದೃಷ್ಟಿಯಿಂದ ತೀರಾ ಅಗತ್ಯವಾದುದು.

‘ಜಾತಿ ಜನಗಣತಿ’ ಎಂದೇ ಹೆಸರುವಾಸಿಯಾಗಿರುವ ಈ ಸಮೀಕ್ಷೆಯ ಮಿತಿಗಳು ಮತ್ತು ಅದರ ದೋಷಗಳ ಕುರಿತು ಚರ್ಚೆಯಾಗುವುದಕ್ಕಿಂತಲೂ ಹೆಚ್ಚಾಗಿ ರಾಜ್ಯದಲ್ಲಿ ಪ್ರಬಲ ಸಮುದಾಯಗಳು ಎಂದೇ ಗುರುತಿಸಿಕೊಂಡಿರುವ ಲಿಂಗಾಯತರು ಹಾಗೂ ಒಕ್ಕಲಿಗರ ಸಂಖ್ಯಾಬಲಕ್ಕೆ ಸಂಬಂಧಿಸಿದ ದತ್ತಾಂಶ ಮತ್ತು ಗಣತಿದಾರರು ಎಲ್ಲರ ಮನೆಗಳಿಗೂ ಬಂದಿದ್ದರೆ? ಇಲ್ಲವೆ? ಎಂಬುದರ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಸಾಮಾಜಿಕ ನ್ಯಾಯ ಹಂಚಿಕೆಯ ಸೂತ್ರ ರೂಪಿಸುವಲ್ಲಿ ತೊಡಕು ಸೃಷ್ಟಿಸಬಹುದಾದ ಗಹನವಾದ ವಿಷಯಗಳ ಕುರಿತು ಚರ್ಚೆಯನ್ನು ಕೇಂದ್ರೀಕರಿಸುವ ಬದಲಾಗಿ ಒಂದೆರಡು ಸಮುದಾಯಗಳ ಸಂಖ್ಯೆಗೆ ಸಂಬಂಧಿಸಿದಂತಹ ಹೆಚ್ಚು ಪ್ರಾಧಾನ್ಯವಲ್ಲದ ವಿಷಯದ ಸುತ್ತಲೇ ಚರ್ಚೆ ಸಾಗಿರುವುದು ದುರದೃಷ್ಟಕರ ಮತ್ತು ವಿಪರ್ಯಾಸದ ಸಂಗತಿ.

ಈ ಸಮೀಕ್ಷೆಯು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ 195 ಜಾತಿ ಮತ್ತು ಉಪಜಾತಿಗಳ ಮಧ್ಯೆ ‘ಪ್ರವರ್ಗ–1ಬಿ’ಯನ್ನು ಯಾವ ಆಧಾರದ ಮೇಲೆ ಸೃಷ್ಟಿಸಿದೆ. ಈ ಪ್ರವರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮೀಕ್ಷೆ ನಡೆದಾಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವರು ಪ್ರತಿನಿಧಿಸುವ ಕುರುಬ ಜಾತಿಯನ್ನು ಸೇರಿಸಿರುವುದರಿಂದ ಈ ಪ್ರಶ್ನೆ ಮಹತ್ವ ಪಡೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಮೀಸಲಾತಿಯಲ್ಲಿ ಈ ಪ್ರವರ್ಗಕ್ಕೆ ಹೆಚ್ಚಿನ ಪಾಲು ದೊರಕಿಸುವ ಪ್ರಸ್ತಾವವನ್ನು ಕೂಡ ಆಯೋಗ ಶಿಫಾರಸು ಮಾಡಿರುವುದು ಅದರ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಆಧಾರದಲ್ಲಿ ‘ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿ’ಗೆ ಯಾವುದೇ ಜಾತಿಯನ್ನು ಸೇರಿಸುವ ಅಥವಾ ಪಟ್ಟಿಯಿಂದ ತೆಗೆದುಹಾಕುವ ಸಾಂವಿಧಾನಿಕ ಅಧಿಕಾರವನ್ನು ರಾಜ್ಯ ಸರ್ಕಾರವು ಹೊಂದಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ.

2025ರ ಏಪ್ರಿಲ್ 11ರಂದು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ವರದಿಯನ್ನು ಅಧಿಕೃತವಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವವರೆಗೂ ಹಿಂದುಳಿದ ವರ್ಗಗಳಲ್ಲಿ ‘ಪ್ರವರ್ಗ 1ಬಿ’ ಎಂಬ ಉಪ ವರ್ಗೀಕರಣವೇ ಅಸ್ತಿತ್ವದಲ್ಲಿ ಇರಲಿಲ್ಲ. ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿ ಆಯೋಗ 1990ರಲ್ಲಿ ಸಲ್ಲಿಸಿದ್ದ ವರದಿಯ ಆಧಾರದಲ್ಲಿ 1994ರಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗಗಳ ಆಧಾರದಲ್ಲಿ ವರ್ಗೀಕರಣ ಮಾಡಲಾಗಿತ್ತು. ಆಗ ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಸೃಜಿಸಲಾಗಿತ್ತು. ಸಾಮಾಜಿಕ ಅಸ್ಪೃಶ್ಯತೆಯ ಹೊರತಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಣಲಕ್ಷಣಗಳನ್ನು ಹೊಂದಿರುವ ಅತ್ಯಂತ ಹಿಂದುಳಿದ ಜಾತಿಗಳನ್ನು ಪ್ರವರ್ಗ–1ರ ಪಟ್ಟಿಯಲ್ಲಿ ಇರಿಸಲಾಗಿತ್ತು. ಅತಿ ಹಿಂದುಳಿದ ಜಾತಿಗಳನ್ನು ಪ್ರವರ್ಗ 2ಎ ಪಟ್ಟಿಯಲ್ಲಿ ಇರಿಸಿದ್ದರೆ, ಮುಸ್ಲಿಮರು, ಒಕ್ಕಲಿಗರು ಮತ್ತು ಲಿಂಗಾಯತರನ್ನು ಅನುಕ್ರಮವಾಗಿ 2ಬಿ, 3ಎ ಮತ್ತು 3ಬಿ ಪ್ರವರ್ಗಗಳಿಗೆ ಸೇರಿಸಲಾಗಿತ್ತು. ದಶಕಗಳ ಕಾಲದಿಂದಲೂ ರಾಜ್ಯದಲ್ಲಿನ ಹಿಂದುಳಿದ ವರ್ಗಗಳಿಗೆ ಇದು ಒಪ್ಪಿತವಾದ ಪ್ರವರ್ಗಗಳ ವರ್ಗೀಕರಣವಾಗಿತ್ತು. ವೈಯಕ್ತಿಕ ನೆಲೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಅಥವಾ ಅಭಿವೃದ್ಧಿ ಹೊಂದಿರುವುದರ ಮಾನದಂಡಗಳ ಆಧಾರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳ ಮರುವರ್ಗೀಕರಣ ಅಗತ್ಯವಾಗಿತ್ತು. ಅದು ವಸ್ತುನಿಷ್ಠವಾಗಿ ಮತ್ತು ವೈಜ್ಞಾನಿಕವಾಗಿ ನಡೆಯಬೇಕಿತ್ತು. ಆದರೆ ನನ್ನ ಪ್ರಕಾರ, ಕರ್ನಾಟಕದ ಜಾತಿ ಜನಗಣತಿಯಲ್ಲಿ ಈ ಪ್ರಕ್ರಿಯೆಯು ಆ ರೀತಿಯಲ್ಲಿ ನಡೆದಿಲ್ಲ.

ನಾವು ಈಗ ಪ್ರವರ್ಗ 1ಬಿ ವಿಚಾರಕ್ಕೆ ಬರೋಣ. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ವರದಿಯ 118ನೇ ಪುಟದಿಂದ ಪ್ರವರ್ಗ 1ಬಿ ವಿಚಾರ ಆರಂಭವಾಗುತ್ತದೆ. 80 ಜಾತಿಗಳು ಮತ್ತು ಅವುಗಳ ಉಪಜಾತಿಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ 80 ಸಮುದಾಯಗಳೂ ಹಿಂದೆ ಪ್ರವರ್ಗ 1ರಲ್ಲಿ (ಹಾಲಕ್ಕಿ ಒಕ್ಕಲಿಗ, ದೇವದಾಸಿ, ಹಂದಿಗೊಲ್ಲ ಇತ್ಯಾದಿ) ಅಥವಾ ಪ್ರವರ್ಗ 2ಎ (ಕುರುಬ, ಮಡಿವಾಳ, ಕುಂಬಾರ ಇತ್ಯಾದಿ) ಪಟ್ಟಿಯಲ್ಲಿದ್ದವು. ಕುಲಶಾಸ್ತ್ರೀಯ ಅಧ್ಯಯನದ ಮೂಲಕ ಮುಂದುವರಿದಿರುವಿಕೆ, ಹಿಂದುಳಿದಿರುವಿಕೆ ಗುರುತಿಸಿ ಅಥವಾ ಈ ಎರಡನ್ನೂ ಆಧರಿಸುವುದು ಸೇರಿದಂತೆ ಯಾವ ಮಾನದಂಡಗಳ ಆಧಾರದಲ್ಲಿ ಈ ಜಾತಿಗಳನ್ನು ಹೊಸ ಗುಂಪಿನಲ್ಲಿ ಸೇರಿಸಲಾಗಿದೆ? ದ್ವಿತೀಯ ಮೂಲದ ಮಾಹಿತಿಯಾದ ಉದ್ಯೋಗದಲ್ಲಿನ ಪ್ರಾತಿನಿಧ್ಯವನ್ನು ಮರೆಮಾಚಿ ಪ್ರವರ್ಗ 1ಬಿಯನ್ನು ಸೃಷ್ಟಿಸಿದಂತೆ ಭಾಸವಾಗುತ್ತದೆ.

ಪರಿಶಿಷ್ಟ ಪಂಗಡಗಳ ಎಲ್ಲ ಗುಣಲಕ್ಷಣಗಳನ್ನು ಹೊಂದಿದ್ದು, ಆ ಪಟ್ಟಿಗೆ ಸೇರಲು ಅರ್ಹತೆ ಹೊಂದಿರುವ ಹಾಲಕ್ಕಿ ಒಕ್ಕಲಿಗರು, ಐತಿಹಾಸಿಕವಾಗಿ ಶೋಷಣೆಗೆ ಒಳಗಾಗಿರುವ ದೇವದಾಸಿಯರು, ಎಲ್ಲ ಮಾನದಂಡಗಳ ದೃಷ್ಟಿಯಿಂದಲೂ ಹಿಂದುಳಿದಿರುವ ಹಂದಿಗೊಲ್ಲ ಸಮುದಾಯಗಳ ಜನರು ಕುರುಬರಂತಹ ಜನಸಂಖ್ಯಾಬಾಹುಳ್ಯವಿರುವ, ಮುಖ್ಯವಾಹಿನಿಯಲ್ಲಿದ್ದು, ಪ್ರಭಾವಿಯಾಗಿರುವ ಸಮುದಾಯಗಳ ಜನರೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವೇ? ಅತಿಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ವಿಚಾರದಲ್ಲಿ, ಅತ್ಯಂತ ಚಿಕ್ಕ ಸಮುದಾಯಗಳು ಮತ್ತು ಅಲೆಮಾರಿಗಳ ಜೊತೆ ಕುರುಬ ಸಮುದಾಯವನ್ನು ಸೇರಿಸಿರುವುದು ಪ್ರಬಲ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರನ್ನು ಪ್ರತ್ಯೇಕ ಪ್ರವರ್ಗಗಳಲ್ಲಿ ಇರಿಸಿರುವುದಕ್ಕಿಂತಲೂ ದೊಡ್ಡ ಅಡ್ಡಿಯಾಗಬಲ್ಲದು.

ಸಮೀಕ್ಷೆಯ ವರದಿ ಪ್ರಕಾರ, 73,97,313 ಜನಸಂಖ್ಯೆ ಹೊಂದಿರುವ ಪ್ರವರ್ಗ 1ಬಿಗೆ ಶೇಕಡ 12ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ. 77,78,209 ಜನಸಂಖ್ಯೆ ಇರುವ ಪ್ರವರ್ಗ 2ಎಗೆ ಶೇ 10ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ. 4 ಲಕ್ಷದಷ್ಟು ಕಡಿಮೆ ಜನಸಂಖ್ಯೆ ಇದ್ದಾಗ್ಯೂ ಪ್ರವರ್ಗ 2ಎಗಿಂತ ಪ್ರವರ್ಗ 1ಬಿಗೆ ಶೇ 2ರಷ್ಟು ಹೆಚ್ಚಿನ ಮೀಸಲಾತಿಯನ್ನು ಯಾವ ಆಧಾರದಲ್ಲಿ ಶಿಫಾರಸು ಮಾಡಲಾಗಿದೆ? ಮೀಸಲಾತಿ ನಿಗದಿಗೆ ಜನಸಂಖ್ಯೆಯೇ ಮಾನದಂಡ ಆಗಬೇಕು. ಆದರೆ, ಈ ಸಮೀಕ್ಷೆಯಲ್ಲಿ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹಂಚಿಕೆಯನ್ನು ಶಿಫಾರಸು ಮಾಡಿಲ್ಲ ಎಂಬುದನ್ನು ಪ್ರವರ್ಗ 1ಬಿ ಮೀಸಲಾತಿ ಹಂಚಿಕೆಯ ಶಿಫಾರಸು ತೋರಿಸುತ್ತದೆ. ಇನ್ನು ಪ್ರವರ್ಗ 1ಬಿ ವಿಷಯದಲ್ಲಿ ಹಿಂದುಳಿದಿರುವಿಕೆಯ ಮಾನದಂಡವು ನಿಗೂಢವಾಗಿ ಅಡಗಿರಬಹುದೇ? ಹಾಗಿದ್ದಲ್ಲಿ, ಯಾವ ಕುಲಶಾಸ್ತ್ರೀಯ ಆಧಾರದಲ್ಲಿ ಈ ಸಮುದಾಯಗಳ ಹಿಂದುಳಿದಿರುವಿಕೆಯನ್ನು ನಿರ್ಧರಿಸಲಾಯಿತು? ಪ್ರವರ್ಗ 2ಬಿಗೆ ಈಗ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಶೇ 5ರಷ್ಟನ್ನು ಪ್ರವರ್ಗ 1ಬಿಗೆ ವರ್ಗಾಯಿಸುವುದರ ಜೊತೆಯಲ್ಲೇ ಇನ್ನೂ ಶೇ 7ರಷ್ಟನ್ನು ಒದಗಿಸಿ, ಒಟ್ಟು ಶೇ 12ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ. ಇದರ ಹಿಂದೆ ಯಾವ ತಾರ್ಕಿಕ ಸಮರ್ಥನೆ ಇದೆ ಎಂಬುದು ತಿಳಿಯಬೇಕು.

ಈಗ ನಮ್ಮ ಮುಂದೆ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ: ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಬಂದ ನಂತರದ 35 ವರ್ಷಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾನದಂಡಗಳ ನೆಲೆಯಲ್ಲಿ ಯಾವ ಜಾತಿಯೂ ಮುಂದುವರಿದಿಲ್ಲವೇ? ತಮ್ಮ ಜನಸಂಖ್ಯೆಗಿಂತಲೂ ಹೆಚ್ಚು ಪ್ರಾತಿನಿಧ್ಯ ಪಡೆದ ಯಾವ ಜಾತಿಯೂ ಇಲ್ಲವೇ? ಅಂತಹ ಜಾತಿಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಬೇಕಲ್ಲವೇ?

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ದತ್ತಾಂಶಗಳ ಅಧ್ಯಯನ ವರದಿಯ ಅಂತಿಮ ಶಿಫಾರಸುಗಳನ್ನು ಸಲ್ಲಿಸುವಾಗ ಕಾಂತರಾಜ ಆಯೋಗವು ನಡೆಸಿದ್ದ ಸಮೀಕ್ಷೆಯಲ್ಲಿ ಸಂಗ್ರಹಿಸಿದ್ದ ಪ್ರಾಥಮಿಕ ಮಾಹಿತಿಗಳನ್ನಷ್ಟೇ ಆಧಾರವಾಗಿ ಬಳಸಲಾಗಿದೆ. ದ್ವಿತೀಯ ಮೂಲದ ಮಾಹಿತಿಗಳನ್ನು ಆಧಾರವಾಗಿ ಬಳಸಿಕೊಳ್ಳಲು ಆಯೋಗವು ವಿಫಲವಾಗಿದೆ. ಪ್ರಾಥಮಿಕ ಮಾಹಿತಿಗಳನ್ನು ವಿಶ್ಲೇಷಿಸುವಾಗ ದ್ವಿತೀಯ ಮೂಲದ ವರದಿಗಳನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಇತರ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ಖಾತರಿಪಡಿಸಿಕೊಳ್ಳಲು ಬಳಸಿಕೊಳ್ಳಬೇಕಿತ್ತು. ಕುರುಬ ಸಮುದಾಯವು ಅತ್ಯಂತ ಹಿಂದುಳಿದಿರುವ ಕಾರಣಕ್ಕಾಗಿ ತನ್ನದೇ ಆದ ಪ್ರತ್ಯೇಕ ಪ್ರವರ್ಗ ಮತ್ತು ಹೆಚ್ಚಿನ ಮೀಸಲಾತಿಗೆ ಹಕ್ಕು ಮಂಡಿಸಿದ ಮಾಹಿತಿಯು ಯಾವ ದ್ವಿತೀಯ ಮೂಲಗಳಲ್ಲಿ ಲಭ್ಯವಿತ್ತು?

ಅಂತಿಮವಾಗಿ, ಲಿಂಗಾಯತರು ಮತ್ತು ಒಕ್ಕಲಿಗರ ಸಂಖ್ಯೆಗೆ ಸಂಬಂಧಿಸಿದ ವಿಷಯವೇ ಕರ್ನಾಟಕದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಕುರಿತ ಚರ್ಚೆಯ ಕೇಂದ್ರಬಿಂದು ಆಗಬಾರದು. ಕುರುಬ ಸಮುದಾಯಕ್ಕೆ ಆಧಾರರಹಿತವಾಗಿ ಅತ್ಯಂತ ಹಿಂದುಳಿದಿರುವಿಕೆಯ ಪಟ್ಟವನ್ನು ನೀಡಿ, ಹೆಚ್ಚಿನ ಮೀಸಲಾತಿಯ ಶಿಫಾರಸಿನೊಂದಿಗೆ ಅವೈಜ್ಞಾನಿಕವಾಗಿ ಪ್ರವರ್ಗ 1ಬಿ ರಚನೆಗೆ ಶಿಫಾರಸು ಮಾಡಿರುವುದರ ಬಗ್ಗೆಯೇ ಹೆಚ್ಚು ಚರ್ಚೆ ಆಗಬೇಕಿದೆ.

ಸಾರ್ವಜನಿಕ ವೇದಿಕೆಗಳಲ್ಲಿ ಸಾಮಾಜಿಕ ನ್ಯಾಯದ ಕುರಿತು ಗಟ್ಟಿ ಧ್ವನಿಯಲ್ಲಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಬೇಕು.

ಲೇಖಕ: ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.