ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಘಟನೆಯ ತನಿಖೆ ನಡೆಸಲು ರಾಜ್ಯ ಸರ್ಕಾರ ಜೂನ್ 5ರಂದು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಆಯೋಗದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಆದರೆ, ವರದಿಯಲ್ಲಿ ಉಲ್ಲೇಖಿಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವುದಾಗಿ ಹೇಳಿದ ಸರ್ಕಾರ ಇದ್ದಕ್ಕಿದ್ದಂತೆ ಅಧಿಕಾರಿಗಳ ಅಮಾನತು ರದ್ದುಗೊಳಿಸಲು ನಿರ್ಧರಿಸಿದ್ದು ಅಚ್ಚರಿಯ ಬೆಳವಣಿಗೆ.

ಇದೀಗ ರಾಜ್ಯ ಸರ್ಕಾರ ಈ ಅಧಿಕಾರಿಗಳಿಗೆ ಹುದ್ದೆ ತೋರಿಸಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ ಅವರನ್ನು ಕಾರಾಗೃಹ ಮತ್ತು ಸುಧಾರಣೆ ಇಲಾಖೆಯ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ. ವಿಕಾಸ್ ಕುಮಾರ್ ಅವರನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ, ಶೇಖರ್ ಟೆಕ್ಕಣ್ಣನವರ ಅವರನ್ನು ನಗರ ಗುಪ್ತವಾರ್ತೆಯ ಡಿಸಿಪಿಯಾಗಿ ಹುದ್ದೆ ನೀಡಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಏಕಸದಸ್ಯ ತನಿಖಾ ಆಯೋಗ ಸಲ್ಲಿಸಿದ ವರದಿಯಲ್ಲಿ ಕಾಲ್ತುಳಿತದ ಘಟನೆಗೆ ಕೆಎಸ್ಸಿಎ, ಡಿಎನ್ಎ, ಆರ್ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿರುವುದು ಗಮನಾರ್ಹ. ಇವರೆಲ್ಲರ ಕರ್ತವ್ಯಲೋಪವನ್ನು ಗುರುತಿಸಿರುವ ಆಯೋಗ ಲಭ್ಯವಿದ್ದ ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸುವುದು ಅಸಾಧ್ಯವೆಂದು ಗೊತ್ತಿದ್ದರೂ ಕಾರ್ಯಕ್ರಮ ನಡೆಸಿದ್ದು ದುರಂತಕ್ಕೆ ಕಾರಣವೆಂದು ಹೇಳಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ, ವ್ಯಾಪಕ ಪೊಲೀಸ್ ನಿಯೋಜನೆ ಇರಲಿಲ್ಲ, ಅಭಿಮಾನಿಗಳ ಸಂಖ್ಯೆ ಅಂದಾಜಿಸುವಲ್ಲಿ ಪೊಲೀಸರು, ಆರ್ಸಿಬಿ ಹಾಗೂ ಕೆಎಸ್ಸಿಎ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದನ್ನು ಆಯೋಗ ಒತ್ತಿ ಹೇಳಿದೆ. ಸಂಜೆ 3.25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ, 5.30ರ ತನಕ ಪೊಲೀಸ್ ಆಯುಕ್ತರಿಗೆ ಮಾಹಿತಿ ಇರಲಿಲ್ಲ, ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು ಸಂಜೆ 4 ಗಂಟೆಗೆ ಎಂಬ ಕರ್ತವ್ಯಲೋಪಗಳು ಸಾಮಾನ್ಯ ಸ್ವರೂಪದವೇನಲ್ಲ. ಜನಸಂದಣಿ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವ ಬಗ್ಗೆಯೂ ತನಿಖಾ ಆಯೋಗ ಪ್ರಸ್ತಾಪಿಸಿದೆ.

ಪೊಲೀಸ್ ಅಧಿಕಾರಿಗಳ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಇಷ್ಟೆಲ್ಲಾ ಆರೋಪಗಳಿದ್ದರೂ ಸರ್ಕಾರ ಅವರ ಅಮಾನತು ರದ್ದುಗೊಳಿಸಿ ವಿವಿಧ ಹುದ್ದೆಗಳಿಗೆ ನೇಮಕಗೊಳಿಸಿರುವ ಕ್ರಮ ಏನನ್ನು ಧ್ವನಿಸುತ್ತದೆ? ಜನರ ಆಕ್ರೋಶ ಶಮನ ಮಾಡಲು ಈ ಅಧಿಕಾರಿಗಳು ಮತ್ತು ಸರ್ಕಾರ ಸೇರಿಕೊಂಡು ‘ನೀನು ಸತ್ತಂತೆ – ನಾನು ಅತ್ತಂತೆ’ ನಾಟಕ ಆಡಿದರೇ ಎಂಬ ಅನುಮಾನ ಹುಟ್ಟುವುದು ಸಹಜ.

ಜೂನ್ 3ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹೆಸರಿನ ತಂಡ ಮೊದಲ ಬಾರಿಗೆ ಕಪ್ ಗೆದ್ದದ್ದು ಒಂದು ಸುದ್ದಿಯಾಗಿ, ಹೆಚ್ಚೆಂದರೆ ಆ ತಂಡದ ಅಭಿಮಾನಿಗಳ ಸಂತಸದ ಗಳಿಗೆಯಾಗಿ ಮುಗಿಯಬೇಕಾದ ಸಾಮಾನ್ಯ ಸಂಗತಿ. ಆದರೆ, ಆ ಸಂದರ್ಭ ಬೇರೊಂದು ಅನಾಹುತಕಾರಿ ದಿಕ್ಕಿನೆಡೆ ಮುಖ ಮಾಡಿದ್ದು, ದುರಂತ ಆಹ್ವಾನಿಸಿದ್ದು ಹೊರನೋಟಕ್ಕೆ ಅನಿರೀಕ್ಷಿತ ಎಂಬಂತೆ ಕಂಡರೂ ನಿರೀಕ್ಷೆಯ ಪರಿಧಿ ದಾಟಿದಂತಿರಲಿಲ್ಲ.

ಕಾಲ್ತುಳಿತದ ಹಿಂದಿನ ದಿನವೇ ಜನಸಮೂಹ ಪ್ರಕಟಿಸಿದ ಅಭಿಮಾನದ ಹೆಸರಿನ ಹುಚ್ಚಾಟದಲ್ಲಿ ಅಪಾಯದ ಸುಳಿವುಗಳು ಸ್ಪಷ್ಟವಾಗಿದ್ದವು. ಆದಾಗ್ಯೂ ಸಿದ್ಧತೆಯೇ ಇಲ್ಲದ ಕಾರ್ಯಕ್ರಮಕ್ಕೆ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಲಾಯಿತು. ಆಯೋಜಕರು ಮೊದಲು ಟಿಕೆಟ್ ಅಂದರು, ನಂತರ ಉಚಿತ ಎಂದು ಘೋಷಿಸಿ ಗೊಂದಲ ಸೃಷ್ಟಿಸಿದರು. ಸಮೂಹ ವರ್ತನೆಯ ತುಸುವೇ ಜ್ಞಾನವಿರುವ ಸಾಮಾನ್ಯ ವ್ಯಕ್ತಿಗೂ ಅರ್ಥವಾಗಬಹುದಾದ ಪರಿಸ್ಥಿತಿಯ ಗಂಭೀರತೆ, ಅಗಾಧ ಸಂಪನ್ಮೂಲ ಹಾಗೂ ಸಾಮರ್ಥ್ಯ ಹೊಂದಿದ ಆಡಳಿತಗಾರರು ಹಾಗೂ ಸಂಬಂಧಿಸಿದ ಪೊಲೀಸ್ ವಿಭಾಗಗಳ ಅರಿವಿಗೆ ನಿಲುಕದಿದ್ದುದು ವಿಪರ್ಯಾಸಕರ.

ಮುಖ್ಯವಾಗಿ ವಾಣಿಜ್ಯ ಚಟುವಟಿಕೆಯ ಭಾಗವಾದ ಐಪಿಎಲ್ ಪಂದ್ಯಾವಳಿಗಳು ನೈಜ ಕ್ರೀಡಾಭಾವನೆಯ ಮೂಲತತ್ವಗಳಿಗೆ ಹೊರತಾದ ಭೂಮಿಕೆಯಲ್ಲಿ ಅವತರಿಸಿರುವುದು ಎಲ್ಲರಿಗೂ ಗೊತ್ತಿರುವುದೇ. ಅದರ ಭಾಗವಾಗಿರುವ ಆರ್ಸಿಬಿ ತಂಡದ ಜನಕ ಬೇರಾರೂ ಅಲ್ಲ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ; ತಂಡದ ಹೆಸರಿನಲ್ಲಿ ಬೆಂಗಳೂರು ಇದೆ ಎನ್ನುವುದನ್ನು ಬಿಟ್ಟರೆ ತಂಡಕ್ಕೂ ಬೆಂಗಳೂರಿಗೂ ಕರ್ನಾಟಕಕ್ಕೂ ಸರ್ಕಾರಕ್ಕೂ ಸಾವಯವ ಸಂಬಂಧವೇ ಇಲ್ಲ, ಬಹುಪಾಲು ಆಟಗಾರರೂ ಕರ್ನಾಟಕದವರಲ್ಲ! ಹೀಗಿರುವಾಗ, ಒಂದು ರಾಜ್ಯದ ಸರ್ಕಾರವೇ ಕಾರ್ಪೊರೇಟ್ ಸಂಸ್ಥೆ ಒಡೆತನದ ಕ್ರಿಕೆಟ್ ತಂಡದ ಅಭಿಮಾನಿಯಂತೆ, ಕುರುಡು ಆರಾಧಕನಂತೆ ವರ್ತಿಸಿದ್ದು, ಆಚರಣೆಗೆ ಮುಂದಾಗಿದ್ದು ತೀರಾ ವಿಚಿತ್ರ ಹಾಗೂ ಅಸಮರ್ಥನೀಯ.

ಜೂನ್ 4ರಂದು ಸಂಭ್ರಮಾಚರಣೆಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ದೊಡ್ಡ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನಗತ್ಯ ಆಸಕ್ತಿ ತೋರಿಸಿದ್ದನ್ನು ನಾಡು ನೋಡಿದೆ. ಅವರು ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಸ್ವತಃ ಸ್ವಾಗತಿಸಿ, ರಸ್ತೆಯುದ್ದಕ್ಕೂ ಆರ್ಸಿಬಿ ಧ್ವಜ ಬೀಸಿದರು. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇನೂ ಕಡಿಮೆಯಲ್ಲ ಎಂಬಂತೆ ವಿಧಾನಸೌಧದ ಮೆಟ್ಟಿಲ ಮೇಲೆ ವಿಜೇತ ತಂಡಕ್ಕೆ ಸನ್ಮಾನ ಸಮಾರಂಭ ಏರ್ಪಡಿಸಿ, ಮೊಮ್ಮಗ ನೊಂದಿಗೆ ಸಂಭ್ರಮಿಸಲು ಮುಂದಾದರು. ಅವರ ಹಿಂಬಾಲಕರು, ಮುಂಬಾಲಕರು ಒಟ್ಟುಗೂಡಿದ್ದ ವಿಧಾನಸೌಧ ಬಳಿಯ ಕಾರ್ಯಕ್ರಮ ಸರ್ಕಾರದ್ದೋ, ರಾಜಕಾರಣಿಗಳ ಕುಟುಂಬದ್ದೋ, ಕ್ರಿಕೆಟ್ ಅಭಿಮಾನಿಗಳದ್ದೋ ಒಂದೂ ಅರ್ಥವಾಗದ ರೀತಿಯಲ್ಲಿ ವೇದಿಕೆಯ ಮೇಲೆ ಮತ್ತು ಎದುರಿಗೆ ಜನಜಂಗುಳಿ ಜಮಾಯಿಸಿತು. ಅಲ್ಲಿ ರಾಜ್ಯಪಾಲರ ಉಪಸ್ಥಿತಿ ಇದ್ದರೂ ಶಿಷ್ಟಾಚಾರದ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಇತ್ತ ಲಕ್ಷಾಂತರ ಅಭಿಮಾನಿಗಳ ಜಮಾವಣೆ ಯಿಂದ ಸ್ಟೇಡಿಯಂ ಪ್ರವೇಶ ದ್ವಾರದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 11 ಕ್ರಿಕೆಟ್ ಪ್ರೇಮಿಗಳು ಕಾಲ್ತುಳಿತಕ್ಕೆ ಬಲಿಯಾದರು; 50ಕ್ಕಿಂತ ಹೆಚ್ಚು ಜನ ಗಾಯಗೊಂಡರು. ಆರಂಭದಲ್ಲಿ ಸಾವುನೋವುಗಳಿಗೆ ಕಾರಣವಾದ ದುರಂತದ ಹೊಣೆಯನ್ನು ಪರಸ್ಪರ ಹೊತ್ತುಹಾಕಲು ಪ್ರಯತ್ನಿಸಲಾಯಿತು. ಕೊನೆಗೆ ಪೊಲೀಸರ ವೈಫಲ್ಯವೇ ಕಾರಣವೆಂದು ತೀರ್ಮಾನಿಸಿದ ಸರ್ಕಾರ, ಮಹಾನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಎಚ್.ಟಿ. ಬಾಲಕೃಷ್ಣ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡುವ ಮೂಲಕ ಜನಾಕ್ರೋಶಕ್ಕೆ ಗುರಾಣಿ ಹಿಡಿದಿದ್ದರು. ಆಗ ಸರ್ಕಾರದ ಹಿತಾಸಕ್ತಿ ಕಾಯಲು ಬಲಿಯಾದ ಅಧಿಕಾರಿಗಳ ಹಿತವನ್ನು ಈಗ ಸರ್ಕಾರ ಕಾಪಾಡಲು ಮುಂದಾಗಿರುವುದು ಸ್ವಯಂವೇದ್ಯ.

ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ (ಸಿಎಟಿ) ದೂರು ನೀಡಿದ್ದರು. ನ್ಯಾಯಮಂಡಳಿಯು ಅವರ ಅಮಾನತು ರದ್ದುಗೊಳಿಸಿದ್ದಲ್ಲದೇ ಅಮಾನತು ಅವಧಿಯನ್ನು ಸೇವೆಯ ಭಾಗವೆಂದು ಪರಿಗಣಿಸಲು ಆದೇಶಿಸಿತ್ತು. ಈ ಘಟನೆಗೆ ಆರ್ಸಿಬಿಯನ್ನೇ ಹೊಣೆ ಮಾಡಿರುವ ನ್ಯಾಯಮಂಡಳಿ, ಪೊಲೀಸರ ಅನುಮತಿಯಿಲ್ಲದೆ ವಿಜಯೋತ್ಸವ ಮೆರವಣಿಗೆಯ ಆಹ್ವಾನ ಪತ್ರಿಕೆಯನ್ನು ಆರ್ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ಭಾರೀ ಜನಸಮೂಹ ಸೇರಲು ಕಾರಣವಾಯಿತು ಮತ್ತು ಪೊಲೀಸರಿಗೆ ತಯಾರಿಗೆ ಸಮಯವಿರಲಿಲ್ಲ ಎಂಬುದನ್ನು ಉಲ್ಲೇಖಿಸಿದೆ. ಜೊತೆಗೆ, ಇನ್ನಿಬ್ಬರು ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ ಮತ್ತು ಶೇಖರ್ ತೆಕ್ಕಣ್ಣವರ್ ಅವರ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ನ್ಯಾಯಮಂಡಳಿ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು.

ಎಲ್ಲದಕ್ಕೂ ಮೊದಲು ಬೆಂಗಳೂರಿನ ಕೇಂದ್ರ ಅಪರಾಧ ಶಾಖೆಯು (ಸಿಸಿಬಿ) ಆರ್ಸಿಬಿ ಮತ್ತು ಡಿಎನ್ಎ ಸಂಸ್ಥೆಗಳ ಅಧಿಕಾರಿಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಿತ್ತು. ಸಿಸಿಬಿಯ ಕಾರ್ಯವ್ಯಾಪ್ತಿ ಮತ್ತು ಕಾರ್ಯವಿಧಾನದ ಲೋಪಕ್ಕಾಗಿ ಕರ್ನಾಟಕ ಹೈಕೋರ್ಟು ಅವರ ಬಂಧನವನ್ನು ರದ್ದುಗೊಳಿಸಿತು. ಈ ಮಧ್ಯೆ ಆ ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನೂ ಸಿಕ್ಕಾಗಿದೆ. ಈಗ ತನಿಖೆಯನ್ನು ಸಿಐಡಿ ಮುಂದುವರಿಸಿದೆ. ಹೈಕೋರ್ಟ್ ಕೂಡ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿಕೊಂಡಿದೆ.

ನಡೆದಿರುವುದು ಒಂದೇ ಘಟನೆ. ಆದರೆ, ಎಷ್ಟೊಂದು ಬಗೆಯ ವಿಚಾರಣೆ–ತನಿಖೆ? ಸಿಐಡಿ ತನಿಖೆ, ಇಲಾಖಾ ವಿಚಾರಣೆ, ನ್ಯಾಯಾಂಗ ಆಯೋಗದ ವಿಚಾರಣೆ, ಸಿಎಟಿಯ ಅವಲೋಕನ ಹಾಗೂ ಹೈಕೋರ್ಟ್ನ ಪಿಐಎಲ್, ಇವೆಲ್ಲವೂ ಸೇರಿ ಸತ್ಯಕ್ಕೆ ತೊಡಕುಗಳ ಉರುಳು ಹಾಕಬಾರದಲ್ಲವೇ?

ಹನ್ನೊಂದು ಜೀವಗಳ ದುರ್ಮರಣಕ್ಕೆ ಕಾರಣವಾದ ದುರ್ಘಟನೆ ಸಂಭವಿಸಿದ ದಿನ ಕ್ರಿಕೆಟ್ ಅಭಿಮಾನಿಗಳ ಸಂಖ್ಯಾಬಲವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಸ್ಪಷ್ಟ ಲೆಕ್ಕಾಚಾರ ನಡೆದಿತ್ತು ಎಂಬ ಸತ್ಯಾಂಶವನ್ನು ಯಾವ ತನಿಖಾ ಸಂಸ್ಥೆಯೂ, ಯಾವ ಆಯೋಗವೂ ಹೊರಗೆಳೆಯಲಾರವು. ಆ ಅಂಶ ತನಿಖಾ ವಿಷಯದ ಭಾಗವಾಗಿರಲೂ ಸಾಧ್ಯವಿಲ್ಲ. ಆದರೆ ಅದು ಜನರನ್ನು ಈಗಾಗಲೇ ತಲುಪಿಯಾಗಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.