ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಮವಸ್ತ್ರ: ಇಷ್ಟು ರಾದ್ಧಾಂತ ಬೇಕಿತ್ತೇ?

ಉಡುಗೆ– ತೊಡುಗೆಯು ಸಾಮಾಜಿಕ ಧ್ರುವೀಕರಣಕ್ಕೆ ಬಳಕೆಯಾಗುವುದು ಬೇಡ
ಅಕ್ಷರ ಗಾತ್ರ

ಸಮವಸ್ತ್ರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರತಿಭಟನೆ ಗಳು ನಮ್ಮ ದೇಶದಾದ್ಯಂತ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲೂ ಚರ್ಚೆಗೆ ಗ್ರಾಸವಾಗಿವೆ. ಕಳೆದ ಆರೇಳು ವರ್ಷಗಳ ಚಾಳಿಯಂತೆ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ವಿಷಯದ ಮೂಲವನ್ನು ಗಮನಿಸುವ ಬದಲು, ಪಿತೂರಿಯನ್ನೇ ಕಂಡಿದ್ದರಿಂದ ಕೀಳು ಅಭಿ ರುಚಿಯ ಮಾತಿನ ಬಾಣಗಳು ಸ್ಪರ್ಧಾತ್ಮಕವಾಗಿ
ಪ್ರಯೋಗವಾಗುತ್ತಿವೆ. ಸಮಸ್ಯೆಯನ್ನು ಪರಿಹರಿಸುವ ಪ್ರಥಮ ಜವಾಬ್ದಾರಿ ಸರ್ಕಾರದ್ದು. ಆದರೆ ಸರ್ಕಾರ ಕೆಲವು ವಾರಗಳ ಹಿಂದೆಯೇ ಎಚ್ಚರ ವಹಿಸಿ ಸಕ್ರಿಯವಾಗಿದ್ದರೆ ವಿವಾದವನ್ನು ಬಗೆಹರಿಸಲು ಸಾಧ್ಯವಿತ್ತು.

ಸಮವಸ್ತ್ರದ ಕಲ್ಪನೆ ಮೊತ್ತಮೊದಲಿಗೆ ಬ್ರಿಟನ್‌ನಲ್ಲಿ‌ ಸಾಕಾರಗೊಂಡಿದ್ದು, ಇದನ್ನು ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ವೈಶಿಷ್ಟ್ಯದ ಹೆಗ್ಗುರುತಾಗಿ ಬಳಸಿಕೊಂಡವು. ಕಾಲಕ್ರಮೇಣ ಸಮವಸ್ತ್ರವು ಏಕರೂಪತೆಯ ಸಂಕೇತವಾಗಿ ಬೆಳೆದು ಭಾರಿ ಟೀಕೆಗೆ ಒಳಗಾಯಿತು. ಮಿಲಿಟರಿ ಪೋಷಾಕು ಹಾಗೂ ಶಿಸ್ತಿಗೆ ಸಮಾನ ನೆಲೆಯಲ್ಲಿರುವಂತೆ ಕಾಣಿಸಿತು. ಇತ್ತೀಚಿನ ದಶಕ ಗಳಲ್ಲಂತೂ ಅದನ್ನು ಸಮಾಜದ ಧ್ರುವೀಕರಣಕ್ಕೂ ಬಳಸಿಕೊಳ್ಳಲಾಗುತ್ತಿದೆ. ಜರ್ಮನಿ, ಫ್ರಾನ್ಸ್‌, ಅಮೆರಿಕ ಮತ್ತಿತರ ದೇಶಗಳಲ್ಲಿ ಸಮವಸ್ತ್ರಕ್ಕೆ ತೀವ್ರ ವಿರೋಧ ಕಂಡುಬಂದಿದ್ದು, ಉಡು‍‍ಪು ಧರಿಸುವಲ್ಲಿ ವಿದ್ಯಾರ್ಥಿಗಳಿಗೆ ಇರಬೇಕಾದ ಸ್ವಾತಂತ್ರ್ಯವನ್ನು ಗುರುತಿಸಲಾಯಿತು.

ಭಾರತದ ಸಂದರ್ಭದಲ್ಲಿ ಕಲಿಕೆ, ಶಿಸ್ತು, ಸಮಾನತೆ ಮತ್ತು ಏಕತೆಗೇ ಒತ್ತುಕೊಡಲಾಯಿತು. ಶಿಸ್ತಿನ ಕಲ್ಪನೆ ನಮ್ಮ ಕೌಟುಂಬಿಕ ಚೌಕಟ್ಟಿನಲ್ಲಿಯೇ ಇದೆ. ಕಲಿಕೆಗೆ ಅತ್ಯವಶ್ಯಕವಾದ ಪ್ರಕ್ರಿಯೆಯೆಂದರೆ ಪ್ರಶ್ನೆ ಕೇಳುವುದು. ಆದರೆ ನಮ್ಮಲ್ಲಿ ಸಾಮಾನ್ಯವಾಗಿ ಪ್ರಶ್ನೆ ಕೇಳುವುದನ್ನು ಹಿರಿಯರಿಗೆ ತೋರುವ ‘ಅವಿಧೇಯತೆ’ ಎಂದೇ ಭಾವಿಸ ಲಾಗುತ್ತದೆ. ನಮ್ಮ ಶಾಲಾ ತರಗತಿಗಳಲ್ಲಿ ಈಗಲೂ ಇಂತಹ ಧೋರಣೆ ಇರುವುದನ್ನು ಕಾಣುತ್ತೇವೆ. ‘ಪಾಠ ಹೇಳುವ’ ಸಂಪ್ರದಾಯದಲ್ಲಿ ವಿದ್ಯಾರ್ಥಿಸ್ನೇಹಿ ಶಿಕ್ಷಕರಿದ್ದರೂ (ಅಂತಹವರು ಬಹಳಷ್ಟು ಮಂದಿ ಇದ್ದಾರೆ) ಮಕ್ಕಳ ಕುತೂಹಲ, ಸಂದೇಹ ಮತ್ತು ಗ್ರಹಿಕೆಯ ಕೊರತೆಯನ್ನು ಹೊರಹಾಕುವ ಒಟ್ಟಾರೆ ವಾತಾವರಣವನ್ನು ಇನ್ನೂ ರುಜುವಾತುಪಡಿಸಬೇಕಿದೆ.

ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿ ಯಲ್ಲಿ ಪ್ರಶ್ನೆ- ಸ್ಪಷ್ಟೀಕರಣಕ್ಕೆ ಅವಕಾಶ ಕೊಡುವುದು ಶಿಕ್ಷಕರಿಗೂ ಕಷ್ಟ! ಆದರೂ ಶಿಸ್ತಿನ ಹೆಸರಿನಲ್ಲಿ ಮಕ್ಕಳ ಕುತೂಹಲಕ್ಕೆ ಕಡಿವಾಣ ಹಾಕುವುದರಿಂದ ಅವರ ಬೆಳವಣಿಗೆ ಕುಂಠಿತವಾಗುತ್ತದೆ (ಈ ಸಂದರ್ಭದಲ್ಲಿ ನನಗೆ ನೆನಪಾಗುವುದು ನ್ಯಾಷನಲ್‌ ಹೈಸ್ಕೂಲಿನ ಒಳಗೆ ಡಾ. ಎಚ್.‌ನರಸಿಂಹಯ್ಯ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಹಿಂದಿನ ಗೋಡೆಯ ಮೇಲಿದ್ದ ಪ್ರಶ್ನಾರ್ಥಕ ಚಿಹ್ನೆಯ ಫಲಕ!)

ಭಾರತವು ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಅನುಸರಿಸಿದ್ದ ಬ್ರಿಟನ್ನಿನಲ್ಲಿಯೇ ಏಕತಾಭಾವ, ಸಾಮರಸ್ಯ, ಶಿಸ್ತು, ಗುಣಮಟ್ಟದ ಶಿಕ್ಷಣ ಇವ್ಯಾವುವೂ ಸಮವಸ್ತ್ರದ ಪರಿಣಾಮ ಅಲ್ಲವೆಂಬ ಅಭಿಪ್ರಾಯವು ಬಲವಾಗಿದೆ. ಹಲವು ದೇಶಗಳಿಂದ, ವಿವಿಧ ಸಾಂಸ್ಕೃತಿಕ ಹಿನ್ನೆಲೆ ಯಿಂದ ಅಲ್ಲಿಗೆ ವಲಸೆ ಬಂದ ಭಾರಿ ಸಂಖ್ಯೆಯ ಜನ, ವಿವಿಧ ಭಾಷೆಗಳು, ವಿಭಿನ್ನ ಜೀವನಶೈಲಿಯ ಸಮುದಾಯಗಳಲ್ಲಿ ಮಕ್ಕಳಿಗೆ ಸಮವಸ್ತ್ರದ ಆಕರ್ಷಣೆ ಯಾಗಲೀ ಅದನ್ನು ಅವರ ಮೇಲೆ ಹೇರುವ ಪರಿಪಾಟವಾಗಲೀ ಇಲ್ಲದಿರುವುದು ಗಮನಾರ್ಹ. ‘ಸಮವಸ್ತ್ರದವರೊಂದಿಗಿದ್ದಾಗ ಸಮಭಾವಗಳು ಉದ್ಭವಿಸಿಬಿಡುತ್ತವೆ ಎನ್ನುವುದು ಕೇವಲ ಭ್ರಮೆ’ ಎಂದು ಮನೋವಿಜ್ಞಾನಿ ಎ. ಶ್ರೀಧರ ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಫೆ. 12). ಸಮಾಜಶಾಸ್ತ್ರಜ್ಞರ ಅಧ್ಯಯನಗಳೂ ಇದನ್ನೇ ಪ್ರತಿಪಾದಿಸುತ್ತವೆ.

ಕಲಿಕೆಗೆ ಮುಕ್ತ ವಾತಾವರಣ ಸೃಷ್ಟಿಸಿರುವ ರವೀಂದ್ರ ನಾಥ ಟ್ಯಾಗೋರ್‌ ಅವರ ‘ಶಾಂತಿನಿಕೇತನ’, ಜಿಡ್ಡು ಕೃಷ್ಣಮೂರ್ತಿ ಅವರ ‘ವ್ಯಾಲಿ ಸ್ಕೂಲ್‌’ಗಳಂತೆಯೇ ಬ್ರಿಟನ್ನಿನಲ್ಲೂ ಹಲವಾರು ಶಾಲೆಗಳು ಜನಪ್ರಿಯವಾಗಿವೆ. ಶ್ರೀಮಂತರು, ಪ್ರತಿಷ್ಠಿತರ ಮಕ್ಕಳ ಖ್ಯಾತ ಖಾಸಗಿ
ಶಾಲೆಗಳಾದ ‌‘ಈಟನ್’ ಮತ್ತು ‘ಹ್ಯಾರೋ’ ಇತರ ಶಾಲೆಗಳಿಗೆ ಮಾದರಿಯಾಗಿ ಉಳಿದಿಲ್ಲ. ಬದಲಾಗಿ, ವ್ಯಕ್ತಿವೈಶಿಷ್ಟ್ಯಕ್ಕೆ (ಸಮಾನತೆಗಲ್ಲ) ಮತ್ತು ವಿವಿಧತೆಗೆ ಪ್ರಾಮುಖ್ಯ ನೀಡಲಾಗುತ್ತಿದೆ.

ಲಂಡನ್‌ನಲ್ಲಿರುವ ಪ್ರಸಿದ್ಧ ಹಾಗೂ ಜನಪ್ರಿಯ ಅಂತರರಾಷ್ಟ್ರೀಯ ಶಾಲೆಯೊಂದರಲ್ಲಿ ಪೋಷಾಕು ಸಂಹಿತೆಯನ್ನು (dress code) ಪ್ರಕಟಿಸಲಾಗಿದೆ. ಆದರೂ ಅದು, ‘ಸಮವಸ್ತ್ರವಲ್ಲ, ಕಾರಣ- ತಮ್ಮ ಉಡುಪನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿ
ಗಳಿಗಿರಲಿ; ತೊಡುವ ಬಟ್ಟೆಯು ಕಲಿಕೆಯ ಮೇಲೆ ಪ್ರಭಾವ ಬೀರಲಾರದು. ಪರೀಕ್ಷೆಗಳಲ್ಲಿ ನಮ್ಮ ಶಾಲೆಯ ಫಲಿತಾಂಶ ಅತ್ಯಂತ ಮೇಲ್ಮಟ್ಟದಲ್ಲಿದೆ. ಪೋಷಕರು ನಮ್ಮನ್ನು ಗುರುತಿಸಿರುವುದು ಶಿಕ್ಷಣದಲ್ಲಿ ನಾವು ಸಾಧಿಸಿರುವ ಗುಣವಿಶೇಷಕ್ಕೇ ಹೊರತು ಸಮವಸ್ತ್ರದಿಂದಲ್ಲ’ ಎಂದು ಸ್ಪಷ್ಟಪಡಿಸಿದೆ. ನಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹಾಜರಿರುವುದು ಕೆಲವೇ ಗಂಟೆಗಳು. ಅದರ ನಾಲ್ಕರಷ್ಟು ಸಮಯವನ್ನು ಮನೆಯೂ ಒಳಗೊಂಡಂತೆ ಕಣ್ಣಿಗೆ ರಾಚುವಂಥ ಅಸಮತೆಯ ಸಮಾಜದಲ್ಲಿ ಕಳೆಯುತ್ತಾರೆ. ಅಂತಲ್ಲಿ ಈ ಮಕ್ಕಳಿಗೆ ಸಮಾನತೆ, ಸಮಾನ ಅವಕಾಶ ಎಂಬುದು ಗಗನಕುಸುಮದಂತಿವೆ.

ಧರ್ಮಾಂಧತೆಯಿಂದ ಪ್ರೇರಿತವಾದ ಧ್ರುವೀಕರಣದ ಅಧಿಕೇಂದ್ರವಾದ ದಕ್ಷಿಣ ಕನ್ನಡ ಪ್ರದೇಶದಲ್ಲಿ ಹಲವು ವರ್ಷಗಳಿಂದ ಶಿಕ್ಷಕಿಯಾಗಿರುವ ಪರಿಣೀತಾ ಶೆಟ್ಟಿ ಅವರು ಒಂದು ವಾರದ ಹಿಂದೆ ದಾಖಲಿಸಿರುವ ಅನುಭವ ಇಂದಿನ ಸಂದಿಗ್ಧದ ಮೇಲೆ ಬೆಳಕು ಚೆಲ್ಲುತ್ತದೆ. ‘ಬಾಹ್ಯ ನೋಟಕ್ಕೆ ಕಾಣುವ ಬದಲಾವಣೆಗಳು, ವಿವಿಧ ಧಾರ್ಮಿಕ ಹಿನ್ನೆಲೆ, ನಂಬಿಕೆಗಳು, ವ್ಯವಹಾರ ಪದ್ಧತಿ, ಆಲೋಚನಾ ಕ್ರಮಗಳು ಹಾಗೂ ಮಾತಿನ ಶೈಲಿ ಯಾವುವೂ ತರಗತಿ ಯಲ್ಲಿ ಒಳಗೊಳ್ಳುವಿಕೆಗೆ ಅಡ್ಡಬಂದಿಲ್ಲ. ತರಗತಿಯೊಳಗಿನ ವಿವಿಧತೆ ಹೊರಗಿನ ವಾಸ್ತವದ ಒಂದು ತುಣುಕು ಇದ್ದಂತೆ’ ಎಂದಿದ್ದಾರೆ.

[object Object]
ಪ್ರೊ.ಬಿ.ಕೆ.ಚಂದ್ರಶೇಖರ್‌

ಮುಂದೆ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಉದ್ದೇಶವಿರುವ ವಿದ್ಯಾರ್ಥಿಗಳು ಪ್ರೌಢಶಾಲೆ ಮತ್ತು ಪಿಯು ಹಂತದಲ್ಲಿ ಸಮವಸ್ತ್ರ ಧರಿಸುವುದು ಸೂಕ್ತ. ಶಿಕ್ಷಣ ಸಂಸ್ಥೆಗಳ ಶಿಕ್ಷಕೇತರ ಉದ್ಯೋಗಿಗಳೂ ಸಮವಸ್ತ್ರ ಧರಿಸುವುದು ಅವರನ್ನು ಗುರುತಿಸುವ ದೃಷ್ಟಿಯಿಂದ ಅನುಕೂಲಕರ. ಹಾಗೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡಾಸ್ಪರ್ಧೆಗಳಲ್ಲಿ ವಿವಿಧ ತಂಡಗಳು ಸಮವಸ್ತ್ರ ತೊಡುವುದು ಅನಿವಾರ್ಯ. ಸಮವಸ್ತ್ರದ ವಿಷಯವು ಕಾನೂನು ಸುವ್ಯವಸ್ಥೆಯ ಜೊತೆಗೆ ರಾಜಕೀಯ, ಧಾರ್ಮಿಕ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಇದರಿಂದ ಮೂಡಿರುವ ದ್ವೇಷ, ಸೇಡು ತೀರಿಸಿಕೊಳ್ಳುವ ಹಟಮಾರಿ ಧೋರಣೆ ಇನ್ನೂ ಕೆಲವು ಕಾಲ ನಮ್ಮ ಜನಸಮುದಾಯಗಳ ಸಂಬಂಧ ಗಳಲ್ಲಿ ಉಳಿಯಲಿವೆ ಎನ್ನುವುದು ಆತಂಕಕಾರಿ ವಿಷಯ.

‘ಭಾರತದ ಆಡಳಿತವು ಸಂವಿಧಾನಕ್ಕೆ ಅನುಗುಣ ವಾಗಿ ನಡೆಯುತ್ತಿದೆ. ಅದು ಇಸ್ಲಾಂ ಧರ್ಮದ ಪ್ರಕಾರ ನಡೆಯಲು ಸಾಧ್ಯವಿಲ್ಲ... ಸಮವಸ್ತ್ರವನ್ನು ಕಡ್ಡಾಯ ಗೊಳಿಸಬೇಕು’ ಎಂಬ ಪ್ರಚೋದನಕಾರಿ ಮಾತನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇತ್ತೀಚೆಗೆ ಹೇಳಿದ್ದಾರೆ. ಸಮವಸ್ತ್ರದ ಸಂಗತಿಯನ್ನು ದೊಡ್ಡ ಸಮಸ್ಯೆಯಾಗಿ ಬಿಂಬಿಸುವ ಅಗತ್ಯವಾದರೂ ಏನಿತ್ತು? ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅತ್ಯಂತ ಸಮಯೋಚಿತವಾದ ಬುದ್ಧಿವಾದ ಹೇಳಿದ್ದಾರೆ: ‘ಹಿಜಾಬ್‌ ಕುರಿತ ವಿವಾದ ಒಂದು ಸಮಸ್ಯೆಯೇ ಅಲ್ಲ. ನನ್ನನ್ನು ಕಾಣಲು ಕೆಲವರು ಹಣೆಗೆ ಗಂಧ ಹಚ್ಚಿಕೊಂಡು ಬರುತ್ತಾರೆ, ಇನ್ನು ಕೆಲವರು ತಮ್ಮ ಧಾರ್ಮಿಕ ಚಿಹ್ನೆ ಗಳನ್ನು ಧರಿಸಿ ಬರುತ್ತಾರೆ. ನಾವು ಎಲ್ಲಾ ಧರ್ಮದ ಜನರ ಧಾರ್ಮಿಕ ಆಚರಣೆಗಳನ್ನು ಗೌರವಿಸುತ್ತಲೇ ಅವರೊಡನೆ ಕೆಲಸ ಮಾಡುತ್ತೇವೆ. ಅವರ ಧರ್ಮಾಚರಣೆ ಮತ್ತು ಸಂಸ್ಕೃತಿಗಳಲ್ಲಿ ಮೂಗು ತೂರಿಸುವುದಿಲ್ಲ. ಇಂಥ ವಿಷಯಗಳನ್ನು ಪರಿಗಣಿಸದಿರುವುದೇ ಸರಿ’.

ಸರ್ಕಾರವು ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಸುತ್ತೋಲೆ ಹೊರಡಿಸಿ, ಸಮವಸ್ತ್ರವು ವಿದ್ಯಾರ್ಥಿಗಳಿಗೆ ಇತರ ಲಾಭಗಳನ್ನು ತಂದುಕೊಡುವುದರ ಜೊತೆಗೆ ‘ಒಂದು ಕುಟುಂಬ’ದಂತೆ ನಡೆದುಕೊಳ್ಳುವ ಮನೋಧೋರಣೆ ಯನ್ನು ಬೆಳೆಸುತ್ತದೆ ಎಂದು ಹೇಳಿಕೊಂಡಿದೆ. ಇದು, ಪ್ರಾಮಾಣಿಕ ನಂಬಿಕೆಯಾಗಲು ಸಾಧ್ಯವೇ?

ಪ್ರಾಥಮಿಕ ಹಂತ ದಾಟುವ ವೇಳೆಗೆ, ‘ಒಂದು ಕುಟುಂಬ’ದಂತೆ ಬೆಳೆಯಬೇಕಾದ ಮಕ್ಕಳು ಓದುವ ಪಠ್ಯದಲ್ಲಿ– ವಿಶೇಷವಾಗಿ ಚರಿತ್ರೆ, ಸಮಾಜ ವಿಜ್ಞಾನದಲ್ಲಿ– ‘ಅಲ್ಪಸಂಖ್ಯಾತ ಸಾಮಂತರ’ ವಿರುದ್ಧದ ಮನೋಭಾವಕ್ಕೆ ಪೂರಕವಾದ ಪಠ್ಯಗಳೇ ಇರುವಾಗ, ಮಕ್ಕಳು ಇಂತಹ ವೈರುಧ್ಯಗಳನ್ನು ಗ್ರಹಿಸುವುದಾದರೂ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT