ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ-ಚೀನಾ: ಏಷ್ಯಾದ ದೈತ್ಯ ಶಕ್ತಿಗಳ ನಡುವಿನ ಹೋಲಿಕೆ ಹೇಗಿದೆ?

Last Updated 24 ಡಿಸೆಂಬರ್ 2022, 13:59 IST
ಅಕ್ಷರ ಗಾತ್ರ

ಭಾರತ ಮತ್ತು ಚೀನಾಗಳ ನಡುವೆ ಒಂದು ವೈಮನಸ್ಯದ ವಾತಾವರಣ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಈ ಎರಡೂ ರಾಷ್ಟ್ರಗಳ ನಡುವೆ ವಿವಿಧ ವಲಯಗಳ ಹೋಲಿಕೆ ಹೇಗಿದೆ? ಭಾರತ ಮತ್ತು ಚೀನಾಗಳು ಪರಸ್ಪರ ಸಮಾನವಾಗಿವೆಯೇ?

ಚೀನಾ ಬಹುತೇಕ ಎಲ್ಲ ವಿಚಾರಗಳಲ್ಲೂ ಭಾರತದಿಂದ ಯುಗಗಳಷ್ಟು ಮುಂದಿದೆ. ಸ್ವಾತಂತ್ರ್ಯ ಪಡೆದ ಬಳಿಕ, 1950 ಹಾಗೂ 60ರ ದಶಕದಲ್ಲಿ ಭಾರತ ಚೀನಾಗಿಂತ ಶಿಕ್ಷಣ, ಮೂಲಭೂತ ಸೌಕರ್ಯಗಳು, ವಿಜ್ಞಾನ, ಕೈಗಾರಿಕೀಕರಣ ಇತ್ಯಾದಿಗಳಲ್ಲಿ ಮುಂದಿತ್ತು. ಆ ಸಮಯದಲ್ಲಿ ಚೀನಾ ತನ್ನ ಅಪಾರವಾದ ಜನಸಂಖ್ಯೆಗೆ ಆಹಾರ ಒದಗಿಸಲು, ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಷ್ಟಪಡುತ್ತಿತ್ತು.

ಆದರೆ 1970ರ ದಶಕದಲ್ಲಿ ಈ ಎಲ್ಲ ಚಿತ್ರಣಗಳೂ ಬದಲಾಗತೊಡಗಿದವು. ಚೀನಾ ತಾನು ಜಾಗತಿಕ ಸೂಪರ್ ಪವರ್ ಆಗಿ ಹೊರಹೊಮ್ಮುವ ಗುರಿ ಹಾಕಿಕೊಂಡು ಕಾರ್ಯ ನಿರ್ವಹಿಸತೊಡಗಿದರೆ, ಭಾರತ ಅಂತಹ ಯೋಜನೆಗಳಿಗೆ ಹೊರಡದೆ, ಇನ್ನೂ ತೃತೀಯ ಜಗತ್ತಿನ ರಾಷ್ಟ್ರವಾಗೇ ಉಳಿದಿತ್ತು. ಭಾರತ ತನ್ನ ಜನರ ಆರೋಗ್ಯ, ಆಹಾರದ ಕುರಿತಾದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾಗ, ಚೀನಾ ಕೈಗಾರಿಕೀಕರಣ ನಡೆಸಿತ್ತು. ಭಾರತ ಕೈಗಾರಿಕೀಕರಣದ ಕುರಿತು ಯೋಚಿಸುವಾಗ ಚೀನಾ ಆ ಕ್ಷೇತ್ರದಲ್ಲಿ ಭಾರತದಿಂದ ಸಾಕಷ್ಟು ಮುಂದೆ ಸಾಗಿತ್ತು.

1)‌ ಆರ್ಥಿಕತೆಯಲ್ಲಿ ಚೀನಾ - ಭಾರತ

ಜಿಡಿಪಿಯ ಲೆಕ್ಕಾಚಾರದಲ್ಲಿ ಚೀನಾದ ಆರ್ಥಿಕತೆ ಭಾರತೀಯ ಆರ್ಥಿಕತೆಗಿಂತ ಆರು ಪಟ್ಟು ದೊಡ್ಡದಾಗಿದೆ. ಇನ್ನು ತಲಾ ಆದಾಯದ ವಿಚಾರಕ್ಕೆ ಬಂದಾಗ, ಒಬ್ಬ ಸಾಮಾನ್ಯ ಚೀನೀ ನಾಗರಿಕ ಸಾಮಾನ್ಯ ಭಾರತೀಯನಿಗಿಂತ ಆರು ಪಟ್ಟು ಹೆಚ್ಚಿನ ತಲಾ ಆದಾಯ ಹೊಂದಿದ್ದಾನೆ. ಆದ್ದರಿಂದ ಆರ್ಥಿಕ ಅಭಿವೃದ್ಧಿ ಚೀನಾದಲ್ಲಿ ಹೆಚ್ಚಾಗಿದ್ದು, ಭಾರತೀಯ ನಾಗರಿಕರಿಗೆ ಹೋಲಿಸಿದರೆ ಚೀನಾ ನಾಗರಿಕರು ಹೆಚ್ಚಿನ ಖರೀದಿ ಸಾಮರ್ಥ್ಯ ಹೊಂದಿದ್ದಾರೆ.

ಪ್ರಸ್ತುತ ಜಿಡಿಪಿ ಹಾಗೂ ಕೊಳ್ಳುವ ಸಾಮರ್ಥ್ಯದ (ಪಿಪಿಪಿ) ಆಧಾರದಲ್ಲಿ ಚೀನಾ ಜಗತ್ತಿನಲ್ಲಿ ನಂಬರ್ ವನ್ ರಾಷ್ಟ್ರ ಎನಿಸಿದೆ. ಭಾರತ ಪ್ರಸ್ತುತ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಹಂತಕ್ಕೆ ತಲುಪಲೂ ಭಾರತ ಸಾಕಷ್ಟು ಶ್ರಮವಹಿಸಿದೆ. ಚೀನಾದ ಒಟ್ಟಾರೆ ಜಿಡಿಪಿ 18 ಟ್ರಿಲಿಯನ್ ಡಾಲರ್ ಆಗಿದ್ದರೆ, ಭಾರತದ ಜಿಡಿಪಿ ಮೂರು ಟ್ರಿಲಿಯನ್ ಡಾಲರ್ ಅಷ್ಟೇ ಆಗಿದೆ. ಜಿಡಿಪಿ ವಿಚಾರದಲ್ಲಿ ಭಾರತ ಚೀನಾಗಳ ನಡುವೆ ಬೃಹತ್ ಅಂತರವಿದೆ.

ತಲಾ ಜಿಡಿಪಿ ಎನ್ನುವುದು ತಲಾ ಕೊಳ್ಳುವ ಸಾಮರ್ಥ್ಯದ ಆಧಾರದಲ್ಲಿ ಅಂದಾಜಿಸಲಾಗುತ್ತದೆ. ಪರ್ಚೇಸಿಂಗ್ ಪವರ್ ಪ್ಯಾರಿಟಿ ದರಗಳನ್ನು ಬಳಸಿ, ಜಿಡಿಪಿಯನ್ನು ಡಾಲರ್‌ಗೆ ಪರಿವರ್ತಿಸಲಾಗುತ್ತದೆ.

2) ಶಿಕ್ಷಣ ಕ್ಷೇತ್ರ

ಇಂದು ಚೀನಾದ ಶಿಕ್ಷಣ ವ್ಯವಸ್ಥೆ ಮಾವೋನ ದಿನಗಳಿಂದ ಸಾಕಷ್ಟು ಮುಂದಕ್ಕೆ ಸಾಗಿ ಬಂದಿದೆ. ಇಂದು ಜಾಗತಿಕ ಮಟ್ಟದಲ್ಲಿ ಚೀನಾದ ಶಿಕ್ಷಣ ವ್ಯವಸ್ಥೆಯು ಅಮೆರಿಕಾದ ನಂತರದ ಸ್ಥಾನದಲ್ಲಿದೆ. ಅದೂ ಅಲ್ಲದೆ ಚೀನಾ ತನ್ನ ಅತ್ಯುನ್ನತ ವೈಜ್ಞಾನಿಕ ಆವಿಷ್ಕಾರಗಳಿಗೂ ಹೆಸರಾಗಿದೆ. ಜಗತ್ತಿನ 200 ಶ್ರೇಷ್ಠ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಚೀನಾದ 25 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದರೂ, ಇಂದಿಗೂ ಭಾರತದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಮಾತ್ರ ಒಂದು ಮಟ್ಟಿಗೆ ವ್ಯವಸ್ಥಿತವಾಗಿದೆ. ಜಗತ್ತಿನ 200 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಕೇವಲ ಮೂರು ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.

3) ಆರೋಗ್ಯ ಕ್ಷೇತ್ರ

ಭಾರತಕ್ಕೆ ಹೋಲಿಸಿದರೆ ಚೀನಾದಲ್ಲಿ ಎರಡುವರೆ ಪಟ್ಟು ಹೆಚ್ಚು ವೈದ್ಯರಿದ್ದಾರೆ. ಭಾರತದಲ್ಲಿ ಪ್ರತಿ 10,000 ಜನರಿಗೆ 9 ವೈದ್ಯರಿದ್ದರೆ, ಚೀನಾದಲ್ಲಿ ಹತ್ತು ಸಾವಿರ ಜನರಿಗೆ 25 ವೈದ್ಯರಿದ್ದಾರೆ.

ಆದರೆ ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಈ ಅಂದಾಜಿಗಳನ್ನು ಮೀರಿ ಭಾರತ ಯಶಸ್ವಿಯಾಯಿತು. ಮೇ 2022ರಲ್ಲಿ ಟೋಕಿಯೋದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷರಾದ ಜೋ ಬಿಡನ್ ಅವರು ಸಾಂಕ್ರಾಮಿಕದ ನಿಯಂತ್ರಣದಲ್ಲಿ ಭಾರತದ ಯಶಸ್ಸು ಮತ್ತು ಚೀನಾದ ವೈಫಲ್ಯವನ್ನು ಹೋಲಿಸಿ ಮಾತನಾಡಿದರು. ಅವರು ಕೋವಿಡ್ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಎದುರಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದರು.

ಹಿರಿಯ ಅಧಿಕಾರಿ ಒಬ್ಬರ ಪ್ರಕಾರ, ಚೀನಾ ಮತ್ತು ಭಾರತಗಳ ಜನಸಂಖ್ಯೆ ಬಹುತೇಕ ಒಂದೇ ರೀತಿ ಇರುವುದರಿಂದ ಬಿಡನ್‌ ಅವರು ಭಾರತದ ಯಶಸ್ಸು ಮತ್ತು ಚೀನಾದ ವೈಫಲ್ಯವನ್ನು ಸಮೀಕರಿಸಿದರು.

ಇಂದಿಗೂ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಯಶಸ್ಸು ಸಾಧಿಸಬಹುದು. ಚೀನಾ ಹಾಗೂ ರಷ್ಯಾಗಳಂತಹ ನಿರಂಕುಶಪ್ರಭುತ್ವಗಳು ಬದಲಾಗುತ್ತಿರುವ ಜಗತ್ತನ್ನು ಸುಲಭವಾಗಿ ನಿಭಾಯಿಸಲು ಸಾಧ್ಯ ಎನ್ನುವುದು ಕೇವಲ ಭ್ರಮೆ ಎಂದಿದ್ದರು ಬಿಡನ್. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ದೀರ್ಘ ಸಮಯ ತೆಗೆದುಕೊಳ್ಳುತ್ತವೆ, ಆದ್ದರಿಂದ ನಿರಂಕುಶ ಪ್ರಭುತ್ವ ಒಳ್ಳೆಯದು ಎನ್ನುವುದು ಆಧಾರ ರಹಿತ ಮಾತು ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

4) ಉತ್ಪಾದನಾ ವಲಯ

ಚೀನಾವನ್ನು ಜಾಗತಿಕ ಉತ್ಪಾದನಾ ವಲಯದ ರಾಜಧಾನಿ ಎಂದೇ ಕರೆಯಲಾಗುತ್ತದೆ. ಚೀನಾದ ಬಳಿ ಕಡಿಮೆ ಗುಣಮಟ್ಟದ ಹಾಗೂ ಹೆಚ್ಚಿನ ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಸಾಮರ್ಥ್ಯವಿದೆ. ಕಡಿಮೆ ಗುಣಮಟ್ಟದ ವಸ್ತುಗಳನ್ನು ರಫ್ತು ಮಾಡಿಯೂ ಅದು ಬೆಳೆಯಿತು. ನೈಜವಾಗಿ ಹೇಳುವುದಾದರೆ ಚೀನಾದ ಅಪಾರ ಪ್ರಮಾಣದ ಜಿಡಿಪಿ ಬೆಳವಣಿಗೆಯ ಹಿಂದೆ ಅದರ ಉತ್ಪಾದನಾ ವಲಯದ ಕೊಡುಗೆ ಪ್ರಮುಖವಾಗಿದೆ. 2021 ರಲ್ಲಿ ಚೀನಾದ ಉತ್ಪಾದನಾ ವಲಯ ನಾಲ್ಕು ಟ್ರಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಹೊಂದಿದ್ದರೆ, ಭಾರತದ ಉತ್ಪಾದನಾ ವಲಯದ ಮೌಲ್ಯ ಕೇವಲ 450 ಬಿಲಿಯನ್ ಡಾಲರ್ ಆಗಿತ್ತು. ಅದು ಚೀನಾದ ಉತ್ಪಾದನೆಯ 1/9 ಅಷ್ಟೇ ಆಗಿತ್ತು.

5) ಮೂಲಭೂತ ಸೌಲಭ್ಯಗಳು

ಕಳೆದ 20 ವರ್ಷಗಳಲ್ಲಿ ಚೀನಾ ಕಳೆದ 100 ವರ್ಷಗಳಲ್ಲಿ ಅಮೆರಿಕಾ ಬಳಸಿದ್ದಕ್ಕಿಂತ ಹೆಚ್ಚು ಕಾಂಕ್ರೀಟ್ ಬಳಕೆ ಮಾಡಿದೆ. ಈ ಲೆಕ್ಕಾಚಾರವೇ ಚೀನಾ ಯಾವ ವೇಗದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದನ್ನು ತಿಳಿಸುತ್ತದೆ. ಚೀನಾದ ಕಂಪನಿಗಳು ಚೀನಾದಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಬಿಆರ್‌ಐ ಯೋಜನೆಯಡಿ ಜಗತ್ತಿನಾದ್ಯಂತ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿವೆ.

ಭಾರತದ ಪರಿಸ್ಥಿತಿ ಚೀನಾಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಾರತದ ಬಳಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಸಾಲದೆಂಬಂತೆ ನಗರ ಪ್ರದೇಶಗಳನ್ನು ಹೊರತುಪಡಿಸಿ, ಈಗ ಭಾರತದ ಬಳಿ ಇರುವ ಮೂಲಸೌಕರ್ಯಗಳ ಗುಣಮಟ್ಟವೂ ಸಾಕಷ್ಟು ಕೆಳ ಹಂತದಲ್ಲಿದೆ. ಭಾರತ ಇತ್ತೀಚೆಗಷ್ಟೇ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಆರಂಭಿಸಿದೆ. ಆದ್ದರಿಂದ ಕನಿಷ್ಠ 2-3 ದಶಕಗಳ ನಂತರವಷ್ಟೇ ಭಾರತ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಚೀನಾ ಈಗಿರುವ ಅಂತ ತಲುಪಬಹುದು. ಆದರೆ ಅಷ್ಟರಲ್ಲಿ ಚೀನಾ ಯುಗಗಳಷ್ಟು ಮುಂದೆ ಸಾಗಿರುತ್ತದೆ.

6) ಮಿಲಿಟರಿ ವಲಯ

ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಎನ್ನುವುದು ಜಗತ್ತಿನ ಎಲ್ಲ ರಾಷ್ಟ್ರಗಳ ಮಿಲಿಟರಿ ಸಾಮರ್ಥ್ಯದ ರಾಂಕಿಂಗ್ ಆಗಿದೆ. ಯಾವುದೇ ರಾಷ್ಟ್ರ ಹೊಂದಿರುವ ಎಸ್ಐಪಿಆರ್‌ಐ ರೀತಿಯ ಆಯುಧಗಳ ಸಂಖ್ಯೆಯನ್ನು ಎಣಿಸುವ ಬದಲು, ಈ ವೆಬ್ ಸೈಟ್ ಮಿಲಿಟರಿ ಉಪಕರಣಗಳು, ಮೂಲಭೂತ ಸೌಕರ್ಯಗಳು, ಹಾಗೂ ಆರ್ಥಿಕ ಸಾಮರ್ಥ್ಯದ ಆಧಾರದಲ್ಲಿ ರಾಂಕಿಂಗ್ ನೀಡುತ್ತದೆ. ಗ್ಲೋಬಲ್ ಫೈರ್ ಪವರ್ (ಜಿಎಫ್‌ಪಿ) ವಿಶ್ಲೇಷಣೆಯಲ್ಲಿ ಬಳಸುವ ಲೆಕ್ಕಾಚಾರಗಳು ಅತ್ಯಂತ ಸಂಕೀರ್ಣವಾದ ಅಲ್ಗಾರಿದಮ್ ಆಧಾರಿತವಾಗಿದೆ. ಇದು ಏಕಕಾಲದಲ್ಲಿ ಐವತ್ತು ಅಂಶಗಳನ್ನು ಪರಿಗಣಿಸುತ್ತದೆ. ಇದರ ಪ್ರಕಾರ, ವಿವಿಧ ದೇಶಗಳ ಮಿಲಿಟರಿ ರಾಂಕಿಂಗ್ ಈ ಕೆಳಗಿನಂತಿವೆ.

ಈ ರಾಂಕಿಂಗ್‌ನಲ್ಲಿ ಯಾವುದಾದರೂ ರಾಷ್ಟ್ರ ಗಳಿಸಿದ ಅಂಕಗಳು ಕಡಿಮೆಯಾದಷ್ಟೂ, ಅದರ ಮಿಲಿಟರಿ ಸಾಮರ್ಥ್ಯ ಅಷ್ಟು ಹೆಚ್ಚಿದೆ ಎಂದು ತಿಳಿಯಬಹುದು. ಅದರ ಪ್ರಕಾರ, ಅಮೆರಿಕಾ ಹೊಂದಿರುವ ಅಂಕ 0.0453. ರಷ್ಯಾ 0.0501 ಅಂಕ ಹೊಂದಿದೆ. ಚೀನಾ 0.0511 ಅಂಕ ಗಳಿಸಿದೆ. ಈ ರಾಂಕಿಂಗ್ ಪ್ರಕಾರ, ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ಸೇನೆ 0.0979 ಅಂಕ ಹೊಂದಿದ್ದು, ಇದು ಚೀನಾದಿಂದ 19 ಪಟ್ಟು ಕಡಿಮೆಯಾಗಿದೆ. ಈ ರಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಅಂಕ 0.1572 ಆಗಿದ್ದು, ಅದು ಭಾರತದಿಂದ 16 ಪಟ್ಟು ದುರ್ಬಲವಾಗಿದೆ.

ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಎಲ್ಲ ಸರಕಾರಗಳಿಗೂ ಬಂದೂಕು ಮತ್ತು ಆಹಾರದ ಮಧ್ಯದ ಆಯ್ಕೆ ಯಾವಾಗಲೂ ಒಂದು ಸವಾಲಾಗಿತ್ತು. ಹೀಗಾಗಿಯೇ ಸ್ವತಂತ್ರವಾಗಿದ್ದ ಚೀನಾದಂತೆ ವೇಗದ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂಬುದೊಂದು ಅನಿಸಿಕೆ. ಇದರ ಜೊತೆಗೆ ಭ್ರಷ್ಟಾಚಾರವೂ ಬೇರಿನಿಂದಲೇ ದೇಶದ ಆರ್ಥಿಕತೆಯನ್ನು ಅಲುಗಾಡಿಸುತ್ತಿದೆ. ಇವೆಲ್ಲವನ್ನು ಮೆಟ್ಟಿ ನಿಂತು ಚೀನಾಕ್ಕೆ ಸರಿಸಮಾನವಾಗಿ ಬೆಳೆಯುವುದೊಂದು ಸವಾಲು.

ಲೇಖಕರು:ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT