ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪಠ್ಯಕ್ರಮ ಚೌಕಟ್ಟು–ಮೌಲ್ಯದ ಅಭಿವ್ಯಕ್ತಿ

ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಾಲಾ ಸಂಸ್ಕೃತಿಯ ಪಾತ್ರ ಹಿರಿದು
Published 11 ಡಿಸೆಂಬರ್ 2023, 19:32 IST
Last Updated 11 ಡಿಸೆಂಬರ್ 2023, 19:32 IST
ಅಕ್ಷರ ಗಾತ್ರ

ಒಂದು ಶಾಲೆಯ ಪಠ್ಯಕ್ರಮವು ವಿದ್ಯಾರ್ಥಿಗಳ ಕಲಿಕೆ ಯನ್ನು ರೂಪಿಸುವ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಕಲಿಕಾ ಗುರಿಗಳು, ಪಠ್ಯವಿಷಯ, ಪಠ್ಯ ಪುಸ್ತಕಗಳು, ಬೋಧನಾವಿಧಾನ, ಮೌಲ್ಯಮಾಪನ ಮಾತ್ರವಲ್ಲದೆ ಶಾಲೆಯ ಸಂಸ್ಕೃತಿ ಮತ್ತು ಕಾರ್ಯವಿಧಾನಗಳು ಸಹ ಪ್ರಮುಖವೆನಿಸುತ್ತವೆ. ಪಠ್ಯಕ್ರಮದ ಸಂಕುಚಿತ ದೃಷ್ಟಿಕೋನಗಳು ಹಲವು ಬಾರಿ ಅದರ ಗುರಿ ಮತ್ತು ಅಭ್ಯಾಸ ಕ್ರಮವನ್ನು ನಿರ್ಧರಿಸುತ್ತವೆ. ಶಿಕ್ಷಣದಲ್ಲಿ ಶಾಲಾ ಸಂಸ್ಕೃತಿ ಮತ್ತು ಕಾರ್ಯವಿಧಾನಗಳು ವಹಿಸುವ ಪ್ರಮುಖ ಪಾತ್ರವನ್ನು ಈ ಬಗೆಯ ದೃಷ್ಟಿಕೋನಗಳು ನಿರ್ಲಕ್ಷಿಸುತ್ತವೆ ಅಥವಾ ಈ ಕುರಿತು ಬೂಟಾಟಿಕೆಯ ಕಾಳಜಿಯನ್ನಷ್ಟೇ ತೋರುತ್ತವೆ.

ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು– 2023 (ಎನ್‌ಸಿಎಫ್)‌, ಸಂಸ್ಕೃತಿ ಮತ್ತು ಕಾರ್ಯವಿಧಾನಗಳನ್ನು ಸದುದ್ದೇಶದ ಹೇಳಿಕೆಗಳಿಗಷ್ಟೇ ಸೀಮಿತಗೊಳಿಸದೆ, ಅವುಗಳಿಗೆ ಸಲ್ಲಬೇಕಾದ ಪ್ರಾಮುಖ್ಯವನ್ನು ನೀಡುತ್ತದೆ. ಉದ್ದೇಶ ಮತ್ತು ತತ್ವಗಳನ್ನು ನಡವಳಿಕೆ ಹಾಗೂ ಅಭ್ಯಾಸಗಳ ರೂಪದಲ್ಲಿ ಕಾರ್ಯರೂಪಕ್ಕೆ ಇಳಿಸುತ್ತದೆ. ವಿದ್ಯಾರ್ಥಿಗಳು ಸಂಸ್ಕೃತಿಯ ಅನುಭವವನ್ನು ಪಡೆಯುವ ರೀತಿ ಹೀಗೆಯೇ. ಉದಾಹರಣೆಗೆ, ಎಲ್ಲರನ್ನೂ ಗೌರವಿಸುವುದು, ಬಹುತ್ವ, ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಬರೀ ಬಾಯಿಮಾತಿನಲ್ಲಿ ಹೇಳುವ ಬದಲು, ದೈನಂದಿನ ಶಾಲಾ ಬದುಕಿನಲ್ಲಿ ಈ ಮೌಲ್ಯಗಳು ಅಭಿವ್ಯಕ್ತಗೊಳ್ಳುವಂತೆ ಮಾಡುವುದು ಹೇಗೆ ಎಂಬುದರ ಬಗ್ಗೆ ಇದು ಗಮನಹರಿಸುತ್ತದೆ.

ಪ್ರಾಂಶುಪಾಲರು ಅಥವಾ ಶಿಕ್ಷಕರನ್ನು ಪೋಷಕರು ಭೇಟಿಯಾದಾಗ ಅವರನ್ನು ನಡೆಸಿಕೊಳ್ಳುವ ರೀತಿ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ವರ್ತನೆ, ಇತರರಿಗೆ ನೆರವಾಗುವ ವಿದ್ಯಾರ್ಥಿಗಳ ಸದ್ಗುಣವನ್ನು ಗುರುತಿಸುವಂತಹ ಅನೇಕ ವಿಷಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಶಾಲಾ ಸಂಸ್ಕೃತಿಯು ವಿದ್ಯಾರ್ಥಿಗಳ ಕಲಿಕೆಯಲ್ಲಿ ಎರಡು ರೀತಿಯ ಪಾತ್ರಗಳನ್ನು ವಹಿಸುತ್ತದೆ. ಕ್ರಿಯಾಶೀಲ, ಪ್ರೇರಣೆಯಾಗಬಲ್ಲ ವಿದ್ಯಾರ್ಥಿಗಳೊಂದಿಗೆ ಸೇರಿ ಪರಿಣಾಮಕಾರಿ ಕಲಿಕಾ ಪರಿಸರವನ್ನು ರೂಪಿಸುತ್ತದೆ ಹಾಗೂ ಮೌಲ್ಯಗಳನ್ನು ರೂಢಿಸಿಕೊಳ್ಳಲು ಅನುವಾಗಿಸುತ್ತದೆ.

ಸಂಸ್ಕೃತಿಯು ಕಲಿಕೆಯ ವಿಭಿನ್ನ ಪರಿಸರಗಳನ್ನು ಪೋಷಿಸಬಲ್ಲದು. ನಿರ್ಬಂಧ, ನಿಯಂತ್ರಣ, ನಿಯಮ ಪಾಲನೆಗೆ ಒತ್ತು ನೀಡಬಹುದು ಅಥವಾ ವ್ಯಕ್ತಿಗಳಲ್ಲಿ ವಿಶ್ವಾಸ ತುಂಬಿ, ಸ್ವಯಂಶಿಸ್ತು ರೂಢಿಸಿಕೊಳ್ಳಲು ಪೂರಕವಾಗಬಹುದು, ಕಠಿಣ ಪರಿಶ್ರಮದಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಉತ್ತೇಜಿಸ
ಬಹುದು. ಮೊದಲನೆಯದನ್ನು ಮಾಡುವುದು ತುಂಬಾ ಸುಲಭ. ಆದರೆ ಎರಡನೆಯದನ್ನು ಸಾಧಿಸಬೇಕಾದರೆ ಶಿಕ್ಷಕರು ಮತ್ತು ಇಡೀ ಶಾಲೆಯ ಸಂಘಟಿತ ಪ್ರಯತ್ನ ಬೇಕಾಗುತ್ತದೆ. ಸಂರಚನಾಕ್ರಮ ಮತ್ತು ಮಾರ್ಗ
ದರ್ಶನದ ಕೊರತೆಯು ಕಲಿಕೆಯ ವಿಚಾರದಲ್ಲಿ ಭೀತಿ ಹಾಗೂ ಅಪನಂಬಿಕೆಯಷ್ಟೇ ಸಮಸ್ಯೆಯನ್ನು ಉಂಟುಮಾಡಬಲ್ಲದು. ವಿದ್ಯಾರ್ಥಿಗಳ ಪಾಲಿಗೆ ಭಯರಹಿತ, ಪ್ರೇರಣೆಯುತ ಮತ್ತು ಉತ್ತೇಜನಕಾರಿ ಪರಿಸರವನ್ನು ಒಳಗೊಂಡ ಸೂಕ್ತ ಮಾರ್ಗದರ್ಶನವು ಕಲಿಕೆಯ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಶಾಲೆಗಳು ಹೇಗೆ ಸೂಕ್ತ ಕಲಿಕಾ ಪರಿಸರವನ್ನು ರೂಪಿಸುತ್ತವೆ ಮತ್ತು ಮೌಲ್ಯಗಳನ್ನು ವೃದ್ಧಿಸುತ್ತವೆ ಎಂಬುದನ್ನು ಅರಿಯುವ ಮೊದಲು ಶಾಲಾ ಸಂಸ್ಕೃತಿ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. ಇದು, ಎರಡು ಅಂತರ್‌ಸಂಬಂಧಿ ಆಯಾಮಗಳನ್ನು ಹೊಂದಿದೆ. ಮೊದಲನೆಯದು, ಮೌಲ್ಯಗಳು, ರೂಢಿಗಳು ಮತ್ತು ನಂಬಿಕೆಗಳು. ಎರಡನೆಯದು, ನಡವಳಿಕೆಗಳು, ಸಂಬಂಧಗಳು ಮತ್ತು ಕಾರ್ಯವಿಧಾನಗಳು. ಯಾವುದೇ ಶಾಲೆಯು ಈ ಅನುಭವಗಳನ್ನು ರೂಢಿಸಬೇಕಾದರೆ, ಸಂಸ್ಕೃತಿಯ ಮೂರು ವಿಧದ ಲಕ್ಷಣಗಳು ಹೊರಹೊಮ್ಮುವುದಕ್ಕೆ ಮಹತ್ವ ನೀಡಬೇಕಾಗುತ್ತದೆ.

ಮೊದಲನೆಯದಾಗಿ, ಶಾಲೆ ಮತ್ತು ಅದರೊಂದಿಗೆ ಭಾಗಿಯಾಗುವ ಜನರ ನಡುವಿನ ಸಂಬಂಧ. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರು, ಸಹಾಯಕ ಸಿಬ್ಬಂದಿ, ಪೋಷಕರು... ಈ ಎಲ್ಲರೂ ಒಳಗೊಳ್ಳುತ್ತಾರೆ. ಉದಾಹರಣೆಗೆ, ಸ್ಪರ್ಧಾತ್ಮಕತೆಗೆ ವಿರುದ್ಧವಾಗಿ ಸಹಕಾರಿ ಮನೋಭಾವ ಮತ್ತು ಸಹೋದ್ಯೋಗಿಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು, ಸದಾಕಾಲ ನಿರ್ದೇಶನವನ್ನೇ ನೀಡುವುದಕ್ಕೆ ವಿರುದ್ಧವಾಗಿ ಸಲಹೆ ಪಡೆದು ಮುನ್ನಡೆಯುವ ಪ್ರಾಂಶುಪಾಲರು ಮತ್ತು ಸಂವಾದದ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ವಿದ್ಯಾರ್ಥಿಗಳು. ಶೈಕ್ಷಣಿಕ ಹಿನ್ನೆಲೆಯಲ್ಲಿನ ಕಾರ್ಯಕಾರಿ ಸಂಬಂಧಗಳು ಪರಸ್ಪರ ನಂಬಿಕೆ, ಗೌರವ, ಮುಕ್ತತೆ, ಸಂವಹನ ಮತ್ತು ಸಹಯೋಗ ಅಲ್ಲದೆ ಕಾಳಜಿ ಮತ್ತು ಜವಾಬ್ದಾರಿಯುತ ವರ್ತನೆಗಳಿಂದ ಗುರುತಿಸಲ್ಪಡುತ್ತವೆ.

ಎರಡನೆಯದಾಗಿ, ಶಾಲೆಯಲ್ಲಿ ಪ್ರದರ್ಶಿಸಲು ಮತ್ತು ಸಂಭ್ರಮಿಸಲು ಪರಿಗಣಿಸಬೇಕಾದ ಸಂಕೇತಗಳು. ಬಹುತೇಕ ಶಾಲೆಗಳು ಸ್ಪಷ್ಟವಾಗಿ ಕಾಣುವ ಮತ್ತು ಸೂಚ್ಯವಾಗಿರುವ ಅನೇಕ ಸಂಕೇತಗಳನ್ನು ಹೊಂದಿರುತ್ತವೆ. ಶಾಲೆಗೆ ಮೌಲ್ಯಯುತ ಎನಿಸುವ ಅಂಶಗಳಿಗೆ ಪ್ರದರ್ಶನ ಫಲಕಗಳು ಒತ್ತು ನೀಡುತ್ತವೆ. ಉದಾಹರಣೆಗೆ, ಮಂಡಳಿಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳ ಭಾವಚಿತ್ರ, ಶಾಲೆಯು ಗೆದ್ದ ಪ್ರಶಸ್ತಿಗಳು ಅಥವಾ ಶಾಲೆಗೆ ಭೇಟಿ ನೀಡಿದ ಸಂದರ್ಶಕರ ಚಿತ್ರಗಳಂತಹವನ್ನು ಪ್ರದರ್ಶಿ
ಸುವುದು. ಆಗಾಗ್ಗೆ ಶಾಲೆಯ ಫಲಕಗಳಲ್ಲಿ ‘ಹೇಳಿಕೆ’ಗಳು ಅಥವಾ ‘ಉಲ್ಲೇಖ’ಗಳನ್ನು ಬರೆಯಲಾಗುತ್ತದೆ. ಇವು ಸಹ ಯಾವುದಕ್ಕೆ ಬೆಲೆ ಕೊಡಲಾಗುತ್ತದೆ ಎಂಬುದನ್ನು ನೇರವಾಗಿ ಸೂಚಿಸುತ್ತವೆ.

ಪ್ರಾಂಶುಪಾಲರು ಅಥವಾ ಸಿಬ್ಬಂದಿಯ ಕೊಠಡಿ, ತರಗತಿ ಕೋಣೆಗಳು ಅಥವಾ ಶಾಲಾ ಆವರಣದಲ್ಲಿ ಪ್ರಮುಖ ಮತ್ತು ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ಅಥವಾ ಪ್ರತಿಮೆಗಳನ್ನು ಇಡಲಾಗುತ್ತದೆ. ಭೌತಿಕ ವಸ್ತುಗಳ ಆಯ್ಕೆ ಮತ್ತು ಏರ್ಪಾಡು ದೊಡ್ಡ ಮಟ್ಟದ ಸಾಂಕೇತಿಕ ಮೌಲ್ಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಪ್ರಾಂಶುಪಾಲರ ಕುರ್ಚಿಯು ಶಿಕ್ಷಕರ ಕುರ್ಚಿಗಿಂತ ಚೆನ್ನಾಗಿರುತ್ತದೆ. ತರಗತಿ ಕೋಣೆಯಲ್ಲಿ ಮಾಡಿರುವ ಪೀಠೋಪಕರಣಗಳ ಏರ್ಪಾಡು ಶಾಲೆಯು ಬೋಧನೆ- ಕಲಿಕೆ ಪ್ರಕ್ರಿಯೆಯ ಕುರಿತು ಹೊಂದಿರುವ ನಂಬಿಕೆಗಳನ್ನು ಪ್ರತಿನಿಧಿಸಬಲ್ಲದು. ಶಾಲಾ ಸಭೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ನಡೆಸುವ ಯಾವುದೇ ಸಂಭ್ರಮಾಚರಣೆ ಅಥವಾ ಶ್ಲಾಘನೆಯು ಆಳವಾದ ಸಾಂಕೇತಿಕ ಮೌಲ್ಯವನ್ನು ಒಳಗೊಂಡಿರುತ್ತದೆ. ಈ ಎಲ್ಲ ಸಂಕೇತಗಳನ್ನು ಪಠ್ಯಕ್ರಮದ ಉದ್ದೇಶಗಳೊಂದಿಗೆ ವಿಚಾರಪೂರ್ಣವಾಗಿ ಮತ್ತು ಎಚ್ಚರಿಕೆಯಿಂದ ಹೊಂದಿಸಬೇಕಾಗುತ್ತದೆ.

ಮೂರನೆಯದಾಗಿ, ತರಗತಿ ಕೋಣೆ ಮತ್ತು ಶಾಲಾ ಕಾರ್ಯನಿರ್ವಹಣೆಗೆ ಸಂಬಂಧಿಸಿದ ವ್ಯವಸ್ಥೆ ಹಾಗೂ ಅಭ್ಯಾಸಗಳು. ತರಗತಿ ಕೋಣೆಯ ಪ್ರಮುಖ ಅಭ್ಯಾಸಗಳಲ್ಲಿ ಆಸನ ವ್ಯವಸ್ಥೆಯೂ ಸೇರಿದೆ. ಇದು ಹುಡುಗ, ಹುಡುಗಿಯರಿಬ್ಬರೂ ಒಟ್ಟಿಗೆ ಕುಳಿತುಕೊಳ್ಳುವಂತೆ ಮಾಡುವುದು ಅಥವಾ ಶೈಕ್ಷಣಿಕವಾಗಿ ಚುರುಕಾದ ವಿದ್ಯಾರ್ಥಿಗಳಿಗೆ ಯಾವುದೇ ಆದ್ಯತೆ ನೀಡದಿರುವಂತಹ ಸಂಗತಿಗಳನ್ನು ಒಳಗೊಂಡಿದೆ. ಬೋಧನೆ ಮತ್ತು ಕಲಿಕಾ ಸಾಮಗ್ರಿಗಳ ಲಭ್ಯತೆ ಮತ್ತು ಅವು ಎಲ್ಲರಿಗೂ ಸುಲಭವಾಗಿ ಸಿಗುವಂತಹ ಸ್ಥಿತಿ, ಅಗತ್ಯ ಪ್ರಮಾಣದಲ್ಲಿ ದೊರೆಯುವಿಕೆ ಹಾಗೂ ಅದನ್ನು ಹೇಗೆ ಹಂಚಲಾಗುತ್ತಿದೆ ಎನ್ನುವುದನ್ನು ಖಾತರಿಪಡಿಸುವುದನ್ನು ಸಹ ಒಳಗೊಂಡಿದೆ.

ಅಲ್ಲದೆ, ಕಲಿಕಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ಜವಾಬ್ದಾರಿ ವಹಿಸುವುದು ಹಾಗೂ ತರಗತಿಯ ಸ್ವಚ್ಛತೆಯ ಹೊಣೆಯನ್ನು ಸಹ ಅವರಿಗೆ ವಹಿಸುವುದು, ಇತರ ಪ್ರಮುಖ ಶಾಲಾ ಪ್ರಕ್ರಿಯೆಗಳಲ್ಲಿ ಶಾಲಾ ಪ್ರಾರ್ಥನಾ ಸಭೆ, ಊಟದ ಸಮಯದ ನಿರ್ವಹಣೆ ಮತ್ತು ಸಿದ್ಧತೆ, ಕ್ರೀಡೆ, ಸಭೆ ಮತ್ತು ಕಾರ್ಯಕ್ರಮಗಳ ನಿರ್ವಹಣೆಯ ಜವಾಬ್ದಾರಿ ಹಂಚಿಕೆ, ಶಾಲೆಯನ್ನು ಸುಸ್ಥಿತಿಯಲ್ಲಿ ಇಡುವುದು, ಕ್ರೀಡೆ ಮತ್ತು ಅದರ ನಿರ್ವಹಣೆಯಲ್ಲಿನ ಅಭ್ಯಾಸಗಳು, ಪೋಷಕರು ಹಾಗೂ ಸ್ಥಳೀಯ ಸಮುದಾಯದ ಜೊತೆಗೆ ಶಾಲೆಯು ತೊಡಗಿಕೊಳ್ಳುವಂತಹ ಸಂಗತಿಗಳು ಸೇರಿವೆ.

ಸಂಘಟನಾತ್ಮಕ ಸಂಸ್ಕೃತಿಯು ಎಲ್ಲ ರೀತಿಯ ಸಾಧನೆಯ ಮೇಲೆ ಉಂಟುಮಾಡುವ ವಿಸ್ತೃತ ಪರಿಣಾಮದ ಕುರಿತು ನಮ್ಮಲ್ಲಿ ಹೆಚ್ಚಿನವರಿಗೆ ವೈಯಕ್ತಿಕ ಅನುಭವಗಳಿವೆ. ಶಾಲೆಗಳು ಇದಕ್ಕೆ ಹೊರತಾಗಿಲ್ಲ. ಶೈಕ್ಷಣಿಕ ಗುರಿ ಸಾಧನೆಯಲ್ಲಿ ಎನ್‌ಸಿಎಫ್‌, ಶಾಲಾ ಸಂಸ್ಕೃತಿಗೆ ಅದರಲ್ಲೂ ಶಿಕ್ಷಕರಿಗೆ ಪ್ರಾಯೋಗಿಕ ಮತ್ತು ನಿರೂಪಿತ ರೀತಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.

ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಿಇಒ ಮತ್ತು ಅಜೀಮ್ ಪ್ರೇಮ್ ಜಿ ಯುನಿವರ್ಸಿಟಿ ಉಪ ಕುಲಪತಿ ಅನುರಾಗ್ ಬೆಹರ್

ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಿಇಒ ಮತ್ತು ಅಜೀಮ್ ಪ್ರೇಮ್ ಜಿ ಯುನಿವರ್ಸಿಟಿ ಉಪ ಕುಲಪತಿ ಅನುರಾಗ್ ಬೆಹರ್

–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT