ಭೌತಿಕವಾಗಿ ನೆರೆಹೊರೆಯವರಾಗಿದ್ದರೂ ಮಾನಸಿಕವಾಗಿ ಮೈಲಿ ದೂರ ಇರುವ ಭಾರತೀಯ ಸಮಾಜದಲ್ಲಿ ಸಹಬಾಳ್ವೆ ತೋರಿಕೆಯ ಪ್ರದರ್ಶನವಾಗಿ ಉಳಿದಿದೆ. ಶಿಕ್ಷಣದಲ್ಲಿ ಸಮಾನತೆ ತರುವುದು ಹಾಗೂ ಧರ್ಮವನ್ನು ಮಾನವೀಯಗೊಳಿಸುವುದು ‘ಸಹಜ ಸಹಬಾಳ್ವೆ’ಗೆ ಪೂರಕ.

ಭಾರತದಲ್ಲಿ ಜಾತಿಭೇದದ ಕಾರಣವಾಗಿ ಸಹಬಾಳ್ವೆ ಅನ್ನುವುದು ಸಹಜವಾಗಿಲ್ಲ; ಇಲ್ಲಿ ತಾರತಮ್ಯವೇ ಸಹಜವಾಗಿದೆ! ಇದು ‘ವಿಕಲಾಂಗ ಸಹಬಾಳ್ವೆ’. ಒಂದು ಗ್ರಾಮದಲ್ಲಿ ಬೇರೆ ಬೇರೆ ಜಾತಿಯವರು ಭೌತಿಕವಾಗಿ ಕೂಗಳತೆಯ ದೂರದಲ್ಲಿ ವಾಸಿಸುತ್ತಿದ್ದರೂ, ಅಕ್ಕಪಕ್ಕದಲ್ಲಿದ್ದರೂ, ಅವರ ನಡುವೆ ಮಾನಸಿಕ ದೂರ ಮೈಲಿಗಟ್ಟಲೆ ಇರುತ್ತದೆ, ಸಹಜ ಸಹಬಾಳ್ವೆಯ ಒಡನಾಟ ಇಲ್ಲದ ಕಾರಣವಾಗಿ.

ಯಾವುದೇ ಒಂದು ಊರಲ್ಲಿ ತಳ ಸಮುದಾಯಕ್ಕೆಸೇರಿದವರು ಯಾರಾದರೂ ಆ ಊರಿನ ದೇವ
ಸ್ಥಾನಕ್ಕೆ ಪ್ರವೇಶ ಮಾಡಿದರು ಅಂದರೆ, ಅದು ಜಾತಿಗಲಭೆಗೆ ತಿರುಗುತ್ತದೆ. ಪ್ರವೇಶ ತಡೆದು ದೌರ್ಜನ್ಯ ಎಸಗಿದವರನ್ನು ‘ಯಾಕೆ ಹೀಗೆ ಮಾಡಿದಿರಿ’ ಎಂದು ಕೇಳಿದರೆ, ‘ಈ ಹಿಂದೆ ಈ ರೀತಿ ಇರಲಿಲ್ಲ. ಅವರೂ ನಾವೂ ಅಣ್ಣತಮ್ಮಂದಿರಂತೆ ಇದ್ದೆವು. ಅವರಷ್ಟಕ್ಕೆ ಅವರಿದ್ದರು, ನಮ್ಮಷ್ಟಕ್ಕೆ ನಾವಿದ್ದೆವು. ಈಗ ಅವರಲ್ಲಿ ಓದಿದ ಹುಡುಗರ ದೆಸೆಯಿಂದ ಹೀಗೆಲ್ಲಾ ಆಗುತ್ತಿದೆ’ ಎನ್ನುವುದು ದೇವಸ್ಥಾನ ಪ್ರವೇಶಕ್ಕೆ ತಡೆಯೊಡ್ಡಿ ದೌರ್ಜನ್ಯ ಎಸಗಿದವರ ಸಾಮಾನ್ಯವಾದ ಮಾತು. ಎಲ್ಲಾ ಜಾತಿ ಜಗಳಗಳಲ್ಲೂ ಇಂಥವೇ ಮಾತುಗಳು.

ಇದು ಸಹಬಾಳ್ವೆಯೆ? ಹೌದಾದರೆ, ಯಾವ ರೀತಿಯ ಸಹಬಾಳ್ವೆ ಇದು? ಇದು, ಮನುಷ್ಯ ಮತ್ತು
ಸಾಕುಪ್ರಾಣಿಗಳೊಡನೆ ಇರಬಹುದಾದ ಸಹಬಾಳ್ವೆ ಅಥವಾ ಮಾಲೀಕ–ಗುಲಾಮನ ನಡುವೆ ಇರಬಹುದಾದ ಸಹಬಾಳ್ವೆ. ಈ ವಿಕಲಾಂಗ ಸಹಬಾಳ್ವೆ ಹೇಗೆ ಸಹಬಾಳ್ವೆಯಾಗುತ್ತದೆ?

ನಮಗೆ ಸಹಜ ಮಾನವೀಯ ಸಹಬಾಳ್ವೆ ಬೇಕು. ಅಸ್ಪೃಶ್ಯರಾದಿಯಾಗಿ ಬ್ರಾಹ್ಮಣರವರೆಗೆ ಇರುವ ಸಕಲ ಜಾತಿ, ಮತ, ಪಂಗಡಗಳು ತಾನು ಬೇರೆ, ತಾನು ಮೇಲು ಎಂಬ ಜಾತಿ ಮನೋವಿಕಲತೆಯನ್ನು ತಮ್ಮ ಮನದೊಳಗೆ ಬಚ್ಚಿಟ್ಟುಕೊಂಡಿವೆ. ಇದನ್ನು ಸ್ವಲ್ಪ ಮೀರಿದರೆ ಸಾಕು, ಎಲ್ಲರೊಳಗೂ ಸಹನೆ–ಪ್ರೀತಿ–ಸಹಬಾಳ್ವೆ ಚಿಗುರುತ್ತವೆ.

ಇದಾಗಲು ಏನು ಮಾಡಬೇಕು? ನಮ್ಮ ಸಮಾಜದಲ್ಲಿ ಜಾತಿ ತಾರತಮ್ಯಗಳು, ರೂಢಿಗಳು ಬೂದಿ
ಮುಚ್ಚಿದ ಕೆಂಡದಂತೆ ಬಚ್ಚಿಟ್ಟುಕೊಂಡಿವೆ. ಜಾತಿಯ ರೂಢಿಗಳು ತಪ್ಪಿದಾಗ, ಜಾತ್ಯಸ್ಥರು ಇದು ತಮ್ಮ ಮೇಲಾದ ದಾಳಿ ಎಂದೇ ಪರಿಗಣಿಸುವ ಮನಃಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ತಳಸಮುದಾಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಕ್ರಿಯಾಶೀಲರಾಗಬೇಡವೆ?

ಜೊತೆಗೆ, ಎಲ್ಲಾ ಜಾತಿ–ಮತಗಳಲ್ಲಿರುವ ಪ್ರಜ್ಞಾವಂತರು ಇದು ತಳ ಸಮುದಾಯದ ಸಾಂವಿಧಾನಿಕ ಹಕ್ಕು ಮಾತ್ರವಲ್ಲ; ಜಾತಿಯನ್ನು ದಾಟುವುದು ತಮ್ಮ ಬಿಡುಗಡೆಗಾಗಿಯೇ ಅನಿವಾರ್ಯ ಕ್ರಿಯೆ ಎಂಬ ಅರಿವಿನೊಡನೆ ಸಂಘಟಿತರಾಗಿ ತಂತಮ್ಮ ಜಾತಿಗಳಲ್ಲಿನ ಜಾತೀಯತೆಯ ಕೊಳಕಿಗೆ ಸ್ನಾನ ಮಾಡಿಸಲು ಕ್ರಿಯಾಶೀಲರಾಗುವುದಾದರೆ ಸಮಾಜದೊಳಗೆ ಘರ್ಷಣೆಯೂ ಕಮ್ಮಿಯಾಗುತ್ತದೆ, ಭಾರತದ ಸಮಾಜವೂ ಸಹ್ಯವಾಗುತ್ತದೆ.

ಮೂಲನಿವಾಸಿಗಳು ಬಾಯಿಲ್ಲದವರಾಗಿದ್ದಾರೆ; ಅವರನ್ನು ಕೆಲವರು ಒಂದು ಜೀವ ಎಂದು ನೋಡದೆ ಅಸ್ತ್ರ ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಉಳಿದವರು ಅವರನ್ನು ತುಳಿದುಕೊಂಡು ಓಡಾಡುತ್ತಿದ್ದಾರೆ. ಇಂದಿನ ಅವರ ಜೀವನ ಸ್ಥಿತಿ ಕಾಡಿನ ಒಳಗೂ ಇಲ್ಲ, ಹೊರಗೂ ಇಲ್ಲ ಎಂಬಂತಾಗಿಬಿಟ್ಟಿದೆ. ಅಲೆಮಾರಿ
ಗಳು ಅಲೆಯುತ್ತಲೇ ಇದ್ದಾರೆ. ಅಲ್ಪಸಂಖ್ಯಾತರಲ್ಲಿ ಕ್ರಿಶ್ಚಿಯನ್ನರು, ಅದರಲ್ಲೂ ಮುಸ್ಲಿಮರಂತೂ ರಾಜಕಾರಣ ಹಾಗೂ ಆಡಳಿತದ ಭಾಗವಹಿಸು ವಿಕೆಯಲ್ಲಿ ಕಾಣಿಸದಿರುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗುತ್ತಿದೆ. ಕೋಮುವಾದಿ ಪಕ್ಷದ ಆಳ್ವಿಕೆ ಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನ
ಬಹುದು. ಜಾತಿಪದ್ಧತಿಯಿಂದ ಹೊರಗಿಟ್ಟಿದ್ದ ದಲಿತ ಸಮುದಾಯವನ್ನು ಶಕ್ತ್ಯಾನುಸಾರ ಒಳಗೊಳ್ಳದಿರುವ ಹುನ್ನಾರವೂ ಜರುಗುತ್ತಿದೆ. ಮಹಿಳೆಯರು ಒಳಗಿದ್ದೂ ಹೊರಗಿನವರಾಗಿದ್ದಾರೆ. ಬಹುಸಂಖ್ಯಾತ ಸಮು
ದಾಯದ ಭಾಗವಹಿಸುವಿಕೆ ಇಲ್ಲದ ಪ್ರಜಾಪ್ರಭುತ್ವ ಇದು. ಇಂಥದ್ದನ್ನು ಪ್ರಜಾಪ್ರಭುತ್ವ ಅನ್ನದೆ, ಲಕ್ವಕ್ಕೆ ತುತ್ತಾದ ಪ್ರಜಾಪ್ರಭುತ್ವ ಎನ್ನಬೇಕಾಗುತ್ತದೆ.

ಈಗಲಾದರೂ ಆರೋಗ್ಯಕರ ಪ್ರಜಾಪ್ರಭುತ್ವದ ದಿಕ್ಕಿಗೆ ಹೆಜ್ಜೆಗಳನ್ನಿಡಬೇಕಾಗಿದೆ. ಮೊದಲ ಹೆಜ್ಜೆಯಾಗಿ, ಕೆಳಮನೆಯಲ್ಲಿ ಯಾರಿಗೆ ಪ್ರಾತಿನಿಧ್ಯ ಇಲ್ಲವೋ ಆ ಸಮುದಾಯಗಳಿಗೆ ಮೇಲ್ಮನೆಯಲ್ಲಿ ಪ್ರಾತಿನಿಧ್ಯದ ಅವಕಾಶ ಕಲ್ಪಿಸಿ ಪ್ರಜಾಪ್ರಭುತ್ವವನ್ನು ಸ್ವಲ್ಪವಾದರೂ ಗುಣಮುಖವಾಗಿಸಬೇಕಾಗಿದೆ. ಅವಕಾಶವಂಚಿತ ಸಮುದಾಯಗಳಿಗೆ ವಿಧಾನಸಭೆ, ಲೋಕಸಭೆ ಇತ್ಯಾದಿ ಜನಪ್ರತಿನಿಧಿಗಳ ವ್ಯವಸ್ಥೆಗಳಲ್ಲಿ ಮೀಸಲು ನೀಡಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣ, ಉದ್ಯೋಗಾವಕಾಶ, ರಾಜಕೀಯ ಪ್ರಾತಿನಿಧ್ಯ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಗುವುದು ಪ್ರಜಾಪ್ರಭುತ್ವದ ಉಳಿವಿಗಾಗಿ ಅಗತ್ಯವಿದೆ.

ಹಳ್ಳಿ ದಿಳ್ಳಿ ಎನ್ನದೆ ಭೌತಿಕ ತ್ಯಾಜ್ಯವು ಭಾರತದ ಸಹಜ ವಾತಾವರಣವಾಗಿಬಿಟ್ಟಿದೆ. ತ್ಯಾಜ್ಯವನ್ನು ಒಳಗೇ
ಇಟ್ಟುಕೊಂಡಿದ್ದೇವೆ. ತ್ಯಾಜ್ಯ ನಿರ್ವಹಣೆಯನ್ನು ಆದ್ಯತಾ ಕೆಲಸವಾಗಿಸಿ ವಿದ್ಯುತ್ ಹಾಗೂ ಗೊಬ್ಬರ
ವಾಗಿ ಪರಿವರ್ತಿಸುವ ವ್ಯವಸ್ಥೆಯಾಗಬೇಕು. ಹಾಗೇ ಭಾರತೀಯರು ತಮ್ಮ ಮನಸಿನೊಳಗೆ ಜಾತಿಭೇದ ತಾರತಮ್ಯದ ಮನೋಮಲ ತ್ಯಾಜ್ಯವನ್ನು ವಿಸರ್ಜಿಸದೆ ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಇದನ್ನೂ ವಿಸರ್ಜಿಸ ಬೇಕಾಗಿದೆ. ತನ್ನ ಜಾತಿ ಶ್ರೇಷ್ಠ ಅಂದುಕೊಂಡವರ ಮಾನವತೆ ನೆಗೆದುಬಿದ್ದು ಪ್ರಾಣ ಕಳೆದುಕೊಳ್ಳುತ್ತದೆ. ತನ್ನ ಧರ್ಮ ಶ್ರೇಷ್ಠ ಅಂದುಕೊಂಡವರ ಧರ್ಮವೇ ನೆಗೆದುಬಿದ್ದು ಪ್ರಾಣ ಕಳೆದುಕೊಳ್ಳುತ್ತದೆ.

ಭಾರತೀಯರು ಜಾತಿಯ ತಾರತಮ್ಯದ ಮನೋಮಲವನ್ನು ವಿಸರ್ಜಿಸಿ ಶುಚಿಗೊಂಡರೆ ಆಗ ಅಲ್ಲಿ ಶ್ರೇಣಿ ಇರುವುದಿಲ್ಲ. ಶ್ರೇಣೀಕೃತವಾಗಿ ಒಬ್ಬರ ಮೇಲೆ ಒಬ್ಬರು ನಿಲ್ಲುವ ಭಾರವೂ ಇರುವುದಿಲ್ಲ. ಬದಲಾಗಿ ಒಂದೇ ನೆಲದಲ್ಲಿ ಅಕ್ಕಪಕ್ಕ ನಿಲ್ಲುವಂತಾಗುತ್ತದೆ. ಆಗ ನಮ್ಮ ವೈವಿಧ್ಯಕ್ಕೆ ಸಾಂಸ್ಕೃತಿಕ ಸ್ವರೂಪ ಪ್ರಾಪ್ತಿಯಾಗಿ ಅದೇ ಆಕರ್ಷಣೆ ಆಗಿಬಿಡಲೂಬಹುದು. ಈ ದಿಕ್ಕಲ್ಲಿ ಒಂದು ಸಣ್ಣ ಹೆಜ್ಜೆ: ಖಾಸಗಿಯಾಗಲಿ, ಸರ್ಕಾರವೇ ಆಗಲಿ ನಿವೇಶನ, ವಸತಿ, ಮನೆ ಹಂಚುವಾಗ ಜಾತಿಮತಗಳು ಮಿಳಿತವಾಗುವಂತೆ ರೋಸ್ಟರ್ ಪದ್ಧತಿ ಜಾರಿಗೆ ತರಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮದ ಹಾಗೂ ಎಲ್ಲಾ ಜಾತಿ, ಮತ, ವರ್ಗಗಳ ಎಳೆಯ ಮಕ್ಕಳು ಬೆರೆತು ಕಲಿಯುವ ಅಕ್ಕಪಕ್ಕದ ಅಂದರೆ ನೆರೆಹೊರೆಯ ಶಾಲೆಗಳ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಎಲ್ಲಾ ಜಾತಿ, ಮತ, ವರ್ಗಗಳ ಮಕ್ಕಳು ಬೆರೆಯುವುದೇ ಭಾರತಕ್ಕೆ ಬಲುದೊಡ್ಡ ಶಿಕ್ಷಣ. ಹೀಗೆ ಇಂಥವು.

ಭಾರತದ ಪುರಾತನ ಸಂತ ಪರಂಪರೆಯ ಒಳ ಗಣ್ಣಿನ ನೋಟದಲ್ಲಿ ಸಂಸ್ಕೃತಿಯನ್ನು ನೋಡಿದಾಗ, ಆ ನೋಟಕ್ಕೆ ಛಿದ್ರತೆ, ತಾರತಮ್ಯಗಳೇ ದೆವ್ವವಾಗಿ ಕಾಣಿಸುತ್ತದೆ; ಐಕ್ಯತೆ, ಕೂಡಿಸುವುದೇ ದೈವವಾಗಿ ಕಾಣಿಸುತ್ತದೆ. ದೈವವನ್ನು, ಹಣ–ಅಧಿಕಾರಕ್ಕಾಗಿ ಬಳಸಿ ಕೊಂಡರೆ ಅದು ‘ಅಧಮ ಧರ್ಮ’ ಆಗುತ್ತದೆ. ಇದನ್ನು ಅನುಸರಿಸುವವರನ್ನು ‘ವ್ಯಭಿಚಾರಿ ಧರ್ಮಿಗಳು’ ಎಂದೂ ಕರೆಯಬಹುದು. ಹಾಗೇ ತಮ್ಮಷ್ಟಕ್ಕೆ ತಾವೇ ಆಚರಣೆ ಮಾಡಿಕೊಂಡರೆ ಅದು ‘ಮಧ್ಯಮ ಧರ್ಮ’ ಆಗುತ್ತದೆ. ಇದನ್ನು ಅನುಸರಿಸುವವರನ್ನು ‘ಕುಟುಂಬ ಧರ್ಮಿಗಳು’ ಎಂದೂ ಕರೆಯಬಹುದು. ತನ್ನೊಳಗೆ ದೈವ ಕಂಡುಕೊಳ್ಳುವ ಪ್ರಕ್ರಿಯೆಯು ‘ಉನ್ನತ ಧರ್ಮ’ ಆಗುತ್ತದೆ, ಇದೇ ಧಾರ್ಮಿಕತೆ. ಈ ದಿಕ್ಕಲ್ಲಿ ನಾವು ಚಲಿಸಬೇಕಾಗಿದೆ. ಸಾಂಪ್ರದಾಯಿಕ ಧರ್ಮಗಳಿಗೂ ದಯೆ ಮತ್ತು ಕಾರುಣ್ಯದ ಚುಚ್ಚುಮದ್ದು ನೀಡಬೇಕಾಗಿದೆ. ಸಹನೆ–ಪ್ರೀತಿ–ಸಹಬಾಳ್ವೆಯನ್ನು ತನ್ನ ನಡಿಗೆ ಮಾಡಿಕೊಂಡು ಧರ್ಮವೂ ಉಳಿಯಬೇಕಾಗಿದೆ.

ಯೋಗ ಅಂದರೆ ಕೂಡಿಕೊಂಡದ್ದು ಎಂದು ಅರ್ಥ. ಆದರೆ, ಭಾರತದಲ್ಲಿ ಯೋಗವೂ ಮೂರಾಗಿ ವಿಂಗಡಿಸಿಕೊಂಡಿದೆ: ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ. ಇವು ಮೂರಾದರೂ ಅಂತಿಮವಾಗಿ ‘ಪರಮ’(Absolute)ವನ್ನೇ ಸೇರುತ್ತವೆ ಎಂದು ವಾದ ಮಾಡಬಹುದಾದರೂ, ಮನುಷ್ಯರನ್ನೇ ಮೂರು ಆಗಿ ವಿಂಗಡಿಸುವ ಈ ಮೂರು ಬೇಕೆ? ಕೂಡಿಕೆ ಯೋಗಕ್ಕೂ ಈ ಮೂರು ಬೇಕೆ?

ಇದನ್ನು ಸ್ಪಷ್ಟಪಡಿಸುವುದಕ್ಕೆ ಒಂದು ಉದಾ ಹರಣೆ: ಮಾದಾರ ಧೂಳಯ್ಯ ಅಪರೂಪದ ವಚನ
ಕಾರ. ಚಪ್ಪಲಿ ಕಾಯಕದವನು. ಧೂಳಯ್ಯನ ಒಂದು ವಚನದಲ್ಲಿ ಅವನು ಚಪ್ಪಲಿ ರಿಪೇರಿ ಕಾಯಕ
ದಲ್ಲಿದ್ದಾನೆ; ಆಗ ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷನಾದ ಪರಮೇಶ್ವರನ ಕಂಡ ಧೂಳಯ್ಯ, ‘ಅಯ್ಯಾ, ಇಲ್ಲೇಕೆ ಬಂದು ನನ್ನ ಕೆಲಸಕ್ಕೆ ತೊಂದರೆ ಕೊಡುತ್ತಿದ್ದೀಯಾ. ನಿನ್ನ ಹೊಗಳುವವರು, ಪೂಜಿಸು
ವವರು ಕಾಯುತ್ತಿದ್ದಾರೆ, ಹೋಗಿ ಅವರಿಗೆ ಮುಕ್ತಿ ಕೊಡು’ ಅನ್ನುತ್ತಾನೆ. ಇದು ವಚನದ ಸಾರಾಂಶ.

ಹಾಗಾದರೆ, ಮಾದಾರ ಧೂಳಯ್ಯನಿಗೆ ಭಕ್ತಿ ಇಲ್ಲವೆ? ಆತನ ಭಕ್ತಿಯು ಅವನು ಮಾಡುವ ಕಾಯಕದಲ್ಲಿ ಲೀನವಾಗಿವೆ. ಹಾಗಾದರೆ ಇಲ್ಲಿ ಜ್ಞಾನ ಎಲ್ಲಿದೆ? ಅದು ಉಳಿಯ ಮೊನೆಯಲ್ಲಿ ಪ್ರತ್ಯಕ್ಷನಾಗುವ ಪರಮೇಶ್ವರನಿಗೆ ಧೂಳಯ್ಯ ಹೇಳುವ ಮಾತುಗಳಲ್ಲಿ ಪ್ರಕಾಶಿಸುತ್ತ ಅರಿವಾಗಿ ಮೂಡಿದೆ. ಧೂಳಯ್ಯನಲ್ಲಿ ಕರ್ಮವು ಕಾಯಕವಾಗಿ, ಭಕ್ತಿಯು ಅರ್ಪಿತವಾಗಿ, ಜ್ಞಾನವು ಅರಿವು ಆಗಿ ಒಟ್ಟಾಗಿ ಏಕೀಭವಿಸಿ ಒಡಮೂಡಿದೆ. ಈ ಕಾಣ್ಕೆಯನ್ನು ನಾವು ಬಿತ್ತಿ ಬೆಳೆಯಬೇಕಾಗಿದೆ.

ಇಂದಿನ ಯುಗವು ವ್ಯಾಪಾರಿ ಯುಗ. ಮಧ್ಯವರ್ತಿ, ಜಾಹೀರಾತು, ಥಳಕು, ವಂಚನೆ ಈ ಯುಗದ ಸ್ವಭಾವ. ವ್ಯಾಪಾರಿ ದ್ರೋಹ ಹಾಗೂ ದಲ್ಲಾಳಿಯ ಮೋಡಿ ಮಾತು, ಪ್ರದರ್ಶನ ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲೂ ರಾರಾಜಿಸುತ್ತಿದೆ. ಜೊತೆಗೆ ಇದು ದೇವರನ್ನೂ, ಧರ್ಮ ಅಂದುಕೊಂಡಿರುವ ಧರ್ಮಗಳನ್ನೂ ಬಿಟ್ಟಿಲ್ಲ. ಹಾಗಾಗಿ, ನಮಗೀಗ 12ನೇ ಶತಮಾನದ ವಚನಕಾರ ಯುಗದ ಬಸವಣ್ಣ ನಡೆದು ನುಡಿದ ನುಡಿಗಳು ನಮ್ಮ ಕೈ ಹಿಡಿದು ನಡೆಸಬಹುದು.

ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ/ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು ಕೂಡಲಸಂಗಮದೇವಾ?

ಇಂಥವು, ಈ ನೆಲದಲ್ಲಿ ಸಂಭವಿಸಬೇಕು. ವಿಶ್ವಮಾನವನಾಗಿ ಹುಟ್ಟುವ ಶಿಶುವು ಬೆಳೆಯುತ್ತಲೂ ವಿಶ್ವಮಾನವನಾಗೇ ಉಳಿಯುವಂತಾಗಲು ಇಂಥವು ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.