ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಶಿಕ್ಷಣ ವ್ಯವಸ್ಥೆ: ಹೊಸ ದೃಷ್ಟಿಕೋನ

ಶಿಕ್ಷಣ ಕ್ಷೇತ್ರದ ನ್ಯೂನತೆ ನಿವಾರಣೆಯು ಸರ್ಕಾರದ ಆದ್ಯತೆಯಾಗಲಿ
Published 1 ಜನವರಿ 2024, 0:30 IST
Last Updated 1 ಜನವರಿ 2024, 0:30 IST
ಅಕ್ಷರ ಗಾತ್ರ

ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಸುಸ್ಥಿರ ಅಭಿವೃದ್ಧಿಯ ಸಾಧನ. ಅಸಮಾನತೆ ಹಾಗೂ ತಾರತಮ್ಯ ನಿವಾರಣೆಗೆ ಪ್ರಬಲ ಅಸ್ತ್ರ. ರಾಷ್ಟ್ರ ನಿರ್ಮಾಣದ ಪ್ರಧಾನ ಅಂಶಗಳಲ್ಲಿ ಒಂದು. ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಯ ಚಾಲಕ ಶಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಇವೆಲ್ಲವೂ ಸಾರ್ವತ್ರಿಕವಾಗಿ ರುಜುವಾತಾಗಿರುವ ಅಂಶಗಳು. ಆದ್ದರಿಂದಲೇ, ಮಾನವ ಹಕ್ಕುಗಳ ಮೊದಲ ಸಾರ್ವತ್ರಿಕ ಘೋಷಣೆಯಲ್ಲಿಯೇ (ಯುಡಿಎಚ್‌ಆರ್) ಶಿಕ್ಷಣವನ್ನು ಅದರ ಭಾಗವನ್ನಾಗಿಸಲಾಗಿದೆ.

ಶಿಕ್ಷಣದ ಈ ನಿರ್ಣಾಯಕ ಪಾತ್ರದ ಬಗ್ಗೆ ಪೂರ್ಣ ಅರಿವಿದ್ದರೂ ಅದನ್ನು ಕೊಡಮಾಡಬೇಕಾದ ಸರ್ಕಾರಗಳು ಮಾತ್ರ ಗೊತ್ತಿದ್ದೂ ಗೊತ್ತಿಲ್ಲದಂತೆ ಜಾಣತನವನ್ನು ಪ್ರದರ್ಶಿಸುತ್ತಿವೆ. ಬಲಿಷ್ಠ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರ್ಕಾರಗಳು ದಯನೀಯವಾಗಿ ಸೋತಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಶೋಚನೀಯ ಪರಿಸ್ಥಿತಿ, ಶಿಕ್ಷಕರ ಕೊರತೆ, ಶೌಚಾಲಯಗಳ ದುಃಸ್ಥಿತಿ, ಕಡ್ಡಾಯ ಶಿಕ್ಷಣದ ಭಾಗವಾಗಿ 8ರಿಂದ 10 ವರ್ಷ ಶಾಲೆಯಲ್ಲಿ ಕಲಿತರೂ ಸರಿಯಾಗಿ ಓದಲಾರದ, ಬರೆಯಲಾರದ ಸ್ಥಿತಿ... ಇವೆಲ್ಲವೂ ಇದಕ್ಕೆ ನಿದರ್ಶನಗಳು.

ಬೇರೆ ಬೇರೆ ಪಠ್ಯಕ್ರಮಗಳಿಗೆ ಶಾಲೆಗಳು ಸಂಯೋಜನೆ ಹೊಂದಲು ಅವಕಾಶ ಕಲ್ಪಿಸುವ ಮೂಲಕ ಹೊಸ ಬಗೆಯ ಅಸಮಾನತೆಗೆ ಸರ್ಕಾರವೇ ಕಾರಣವಾಗಿದೆ. ಮಕ್ಕಳು ತಾಯ್ನುಡಿಯಲ್ಲಿ ಕಲಿಯಲಾಗದ ಸನ್ನಿವೇಶ ಸೃಷ್ಟಿಯಾಗಿದೆ. ಭಾಷೆಯ ಆಧಾರದ ಮೇಲೆ ರಾಜ್ಯಗಳು ರಚನೆಯಾದರೂ ಆಯಾ ರಾಜ್ಯದ ಆಡಳಿತ ಭಾಷೆಯನ್ನು ಒಂದು ಭಾಷೆಯನ್ನಾಗಿ ಸಮರ್ಪಕವಾಗಿ ಕಲಿಸಲು ಆಗದಂತಹ ಸ್ಥಿತಿ ನೆಲೆಗೊಂಡಿದೆ. ಬ್ರಿಟಿಷರು ನಮ್ಮನ್ನು ಬಿಟ್ಟುಹೋಗಿದ್ದರೂ ಅವರ ಆಡಳಿತದ ಪಳೆಯುಳಿಕೆಗಳು ಉಳಿದುಕೊಂಡಿವೆ. ವಸಾಹತುಶಾಹಿ ಮನಃಸ್ಥಿತಿ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದಿದೆ.

ಶಾಲಾ ಕಾಲೇಜುಗಳು ಕೆಲವರ ಪಾಲಿಗೆ ವ್ಯಾಪಾರಿ ಕೇಂದ್ರಗಳಂತಾಗಿವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗೆ ಶ್ರಮಿಸಬೇಕಾದ ಕಾರ್ಯಾಂಗ ಮತ್ತು ಶಾಸಕಾಂಗದ ಪ್ರತಿನಿಧಿಗಳು ದೊಡ್ಡ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಇದು, ಹೊಸ ಬಗೆಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಇಂತಹ ಹತ್ತು ಹಲವು ಸಮಸ್ಯೆಗಳು ರಾಜ್ಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಭಾರಿ ಬಿಕ್ಕಟ್ಟಿಗೆ ಸಿಲುಕಿಸಿವೆ.

ಸಮಸ್ಯೆಯ ಮೂಲವನ್ನು ಗುರುತಿಸದೆ, ಸುಧಾರಣೆಗೆ ಸಂಬಂಧಿಸಿದಂತೆ ಆಡುವ ಮಾತುಗಳು ಸಮಸ್ಯೆ ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತವೆ. ಅನೇಕ ವರ್ಷಗಳಿಂದ ನಾವು ಇಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಅದರಿಂದ ಕನಿಷ್ಠ ಪ್ರಯೋಜನವೂ ಆಗಿಲ್ಲ ಎಂಬುದು ಕಹಿಸತ್ಯ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಶಿಥಿಲ ಸ್ಥಿತಿಯಿಂದ ಪೂರ್ಣ ನಾಶದ ಕಡೆಗೆ ಮುಖ ಮಾಡಿದೆ. ಸರ್ಕಾರಿ ಶಾಲೆಗಳು  ಮಕ್ಕಳಿಲ್ಲದೇ ಬಾಗಿಲು ಬಂದ್‌ ಮಾಡುತ್ತಿವೆ. ಖಾಸಗಿ ಶಾಲೆಗಳಿಗೆ ಮಕ್ಕಳ ಪ್ರವಾಹವೇ ಹರಿದುಬರುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ನಾವು ಎದುರಿಸುತ್ತಿರುವ ಅಸಮಾನತೆ, ತಾರತಮ್ಯ, ಹಾಗೂ ಗುಣಾತ್ಮಕತೆ ಕೊರತೆಯಂತಹವು ಗಂಭೀರವಾದ ಸಾಂಸ್ಥಿಕ ಬಿಕ್ಕಟ್ಟುಗಳು. ಅವುಗಳಿಗೆ ಸಮಗ್ರ ಸಾಂಸ್ಥಿಕ ಪರಿಹಾರವನ್ನೇ ಹುಡುಕಬೇಕು. ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವುದು ಅಥವಾ ಶಿಕ್ಷಣ ಇಲಾಖೆಯ ಶಾಲೆಗಳನ್ನು ಪರೋಪಕಾರಿಗಳು ಅಥವಾ ಕಂಪನಿಗಳ ಸಿಎಸ್‌ಆರ್‌ ವ್ಯವಸ್ಥೆಗೆ ಒಳಪಡಿಸುವ ಅಥವಾ ಶಾಸಕರಿಗೆ ದತ್ತು ನೀಡುವಂತಹ ಉಪಕ್ರಮಗಳು ದೀರ್ಘಕಾಲಿಕ ಮತ್ತು ಶಾಶ್ವತ ಪರಿಹಾರಗಳು ಆಗುವುದಿಲ್ಲ. ಬದಲಿಗೆ, ವ್ಯವಸ್ಥೆ ಮತ್ತಷ್ಟು ದುರ್ಬಲವಾಗುವ ಸಾಧ್ಯತೆಯೇ ಹೆಚ್ಚು.

ಮಕ್ಕಳು ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಸಾಂವಿಧಾನಿಕ ಹಕ್ಕು ಮೊದಲು ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿತ್ತು. ಅದು, ಆಶಯದ ಸ್ವರೂಪದ್ದಾಗಿತ್ತು. ನಂತರ 2002ರಲ್ಲಿ, ಸುಪ್ರೀಂ ಕೋರ್ಟ್‌ನ 1992 ಮತ್ತು 1993ರ ಐತಿಹಾಸಿಕ ತೀರ್ಪುಗಳನ್ನು ಆಧರಿಸಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು. ಈ ಹಕ್ಕಿನ ಉಲ್ಲಂಘನೆಯಾದ ಸಂದರ್ಭದಲ್ಲಿ ನ್ಯಾಯ ಕೇಳಿ ಕೋರ್ಟ್‌ ಮೆಟ್ಟಿಲೇರಬಹುದು. ಮೂಲಭೂತ
ಹಕ್ಕನ್ನು ಸಾಕಾರಗೊಳಿಸಲು 2010ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಲಾಯಿತು.

ಕಾಯ್ದೆಯ ಆಶಯದಂತೆ, ಒಂದು ಶಾಲೆಯಲ್ಲಿ ಕನಿಷ್ಠ ಇರಲೇಬೇಕಾದ ಮೂಲ ಸೌಕರ್ಯಗಳನ್ನು 2013ರ ವೇಳೆಗೆ ಒದಗಿಸಲೇಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಿ ಅಂತಹ ನ್ಯಾಯಸಮ್ಮತ ಸೌಕರ್ಯಗಳನ್ನು ಪಡೆಯಬಹುದಾದ ಹಕ್ಕನ್ನು ಸಂವಿಧಾನವು ಮಕ್ಕಳಿಗೆ, ಪಾಲಕರಿಗೆ ನೀಡಿತು. ಪ್ರತಿ ಶಾಲೆಯಲ್ಲಿ ಇರಲೇಬೇಕಾದ ಶಿಕ್ಷಕರ ಸಂಖ್ಯೆ, ಸರ್ವಋತು ಬಳಕೆಯ ಕಟ್ಟಡ, ಪ್ರತಿಯೊಬ್ಬ ಶಿಕ್ಷಕರಿಗೆ ಕಡೇಪಕ್ಷ ಒಂದು ತರಗತಿ ಕೊಠಡಿ, ಕಚೇರಿ, ಉಗ್ರಾಣ ಮತ್ತು ಮುಖ್ಯೋಪಾಧ್ಯಾಯರ ಕೊಠಡಿ, ತಡೆರಹಿತ ಪ್ರವೇಶ ಮಾರ್ಗ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಎಲ್ಲ ಮಕ್ಕಳಿಗೂ ಸುರಕ್ಷಿತ ಹಾಗೂ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು, ಮಧ್ಯಾಹ್ನದ ಊಟ ತಯಾರಿಸುವುದಕ್ಕಾಗಿ ಶಾಲೆಯಲ್ಲಿ ಅಡುಗೆ ಮನೆ, ಆಟದ ಮೈದಾನ, ಕಾಂಪೌಂಡ್‌, ಪ್ರತಿ ತರಗತಿಗೂ ಅಗತ್ಯ ಇರುವಷ್ಟು ಬೋಧನಾ-ಕಲಿಕಾ ಸಾಧನ, ಪ್ರತಿ ಶಾಲೆಯಲ್ಲಿ ವೃತ್ತಪತ್ರಿಕೆ, ನಿಯತಕಾಲಿಕ ಮತ್ತು ಕಥೆ ಪುಸ್ತಕಗಳನ್ನು ಒಳಗೊಂಡಂತೆ ಎಲ್ಲ ವಿಷಯಗಳ ಕುರಿತಾದ ಪುಸ್ತಕಗಳನ್ನೂ ಒದಗಿಸಿರುವ ಗ್ರಂಥಾಲಯ, ಅಗತ್ಯವಿರುವಷ್ಟು ಆಟದ ಸಾಮಗ್ರಿ ಮತ್ತು ಕ್ರೀಡೋಪಕರಣಗಳನ್ನು ಒದಗಿಸಲೇಬೇಕೆಂದು ಕಾಯ್ದೆಯು ನಿಗದಿಗೊಳಿಸಿತು.

ಇವು ಕಾಯ್ದೆ ಜಾರಿಗೆ ಬಂದ ಮೂರು ವರ್ಷಗಳ ಒಳಗಾಗಿ ಪ್ರತಿ ಶಾಲೆಯೂ ಹೊಂದಿರಲೇಬೇಕಾದ ಸೌಕರ್ಯಗಳು. ಆದರೆ, ಕಾಯ್ದೆ ಜಾರಿಯಾಗಿ 13 ವರ್ಷಗಳು ಕಳೆದರೂ ರಾಜ್ಯದಲ್ಲಿ ಇದರ ಅನುಪಾಲನೆ ಶೇ 26.3ರಷ್ಟು. ಅಂದರೆ, 100 ಶಾಲೆಗಳನ್ನು ತೆಗೆದುಕೊಂಡರೆ, 23 ಸರ್ಕಾರಿ ಶಾಲೆಗಳಲ್ಲಿ ಮಾತ್ರ ಈ ಎಲ್ಲಾ ಸೌಲಭ್ಯಗಳಿವೆ. ಉಳಿದಂತೆ, 77 ಶಾಲೆಗಳಲ್ಲಿ ಈ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಇಲ್ಲ. ಈ ಶಾಲೆಗಳನ್ನು ಕಾಯ್ದೆಯ ಅನ್ವಯ ಅಮಾನ್ಯಗೊಳಿಸಬಹುದಾಗಿದೆ.

ಇನ್ನು ಶಿಕ್ಷಣ ಅಥವಾ ಕಲಿಕೆಯ ವಿಷಯಕ್ಕೆ ಬಂದರೆ, ಇಂದಿಗೂ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಯಲ್ಲಿರುವ ಮಕ್ಕಳು ಸಮರ್ಪಕವಾದ ಕಲಿಕೆಯಿಲ್ಲದೆ ತೊಳಲಾಡುತ್ತಿದ್ದಾರೆ. ಹೆಣ್ಣುಮಕ್ಕಳು ಹಲವು ಬಗೆಯ ತಾರತಮ್ಯಗಳನ್ನು ಎದುರಿಸುತ್ತಲೇ ಇದ್ದಾರೆ. ಅತ್ಯಂತ ದುರ್ಬಲ, ಅವಕಾಶವಂಚಿತ, ಕಡಿಮೆ ಆದಾಯ ವರ್ಗಕ್ಕೆ ಸೇರಿದ ಮಕ್ಕಳು ಹಾಗೂ ಅಂಗವಿಕಲ, ವಲಸೆ, ನಿರಾಶ್ರಿತ ಮತ್ತು ಸ್ಥಳಾಂತರಗೊಂಡ ಮಕ್ಕಳು ಶಿಕ್ಷಣ ಸೌಲಭ್ಯದ ಅವಕಾಶಕ್ಕಾಗಿ ಪರಿತಪಿಸುತ್ತಿದ್ದಾರೆ. ಇವೆಲ್ಲವೂ ಸಮಸ್ಯೆಯ ಸ್ವರೂಪ ಮತ್ತು ಆಳವನ್ನು ಸೂಚಿಸುತ್ತವೆ. ನಮ್ಮ ನ್ಯಾಯಾಲಯಗಳು ಈ ಬಗೆಯ ಉಲ್ಲಂಘನೆಯನ್ನು ಪದೇಪದೇ ಪ್ರಸ್ತಾಪಿಸಿವೆ.

ಈ ಸಮಸ್ಯೆಗಳು ಒಂದೆಡೆ ಇದ್ದರೆ, ಸಮಕಾಲೀನ ಶಿಕ್ಷಣದ ಪ್ರಸ್ತುತತೆಗೆ ಸವಾಲು ಒಡ್ಡುವ ಅನೇಕ ಬೆಳವಣಿಗೆಗಳು ಶಾಲಾ ಆವರಣದ ಹೊರಗೆ ಘಟಿಸುತ್ತಿವೆ. ಎಲ್ಲವನ್ನೂ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಂತಹ ತಾಂತ್ರಿಕ ಬದಲಾವಣೆ, ಹವಾಮಾನ ವೈಪರೀತ್ಯ ತಂದೊಡ್ಡಿರುವ ಬಿಕ್ಕಟ್ಟುಗಳು, ಸಂಪತ್ತಿನ ಆಧಾರದಲ್ಲಿ ಬೆಳೆಯುತ್ತಿರುವ ಅಸಮಾನತೆ, ಜಾತಿ, ಧರ್ಮ, ವರ್ಗದ ಹೆಸರಿನಲ್ಲಿ ನಡೆಯುತ್ತಿರುವ ಧ್ರುವೀಕರಣ, ತಾರತಮ್ಯಗಳಂಥವು ಸಮಕಾಲೀನ ಶಿಕ್ಷಣದ ಪ್ರಸ್ತುತತೆಗೆ ದೊಡ್ಡ ಸವಾಲನ್ನು ಒಡ್ಡಿವೆ, ಬದುಕನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಮೂಲಕ ಹೊಸ ಬಗೆಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ. ನಮ್ಮ ಸರ್ಕಾರದ ಹೊಸ ವರ್ಷದ ಕಾರ್ಯಸೂಚಿಯಲ್ಲಿ ಇದಕ್ಕೆ ಆದ್ಯತೆ ಸಿಗಬೇಕಿದೆ. ಯುವಪೀಳಿಗೆಯ ಭವಿಷ್ಯ ಉಜ್ವಲಗೊಳಿಸುವುದಕ್ಕೆ, ಸಾಮರಸ್ಯದ ಸಹಬಾಳ್ವೆಗೆ, ಅಸಮಾನತೆಯ ನಿವಾರಣೆಗೆ ಪೂರಕವಾಗುವಂತಹ ಶಿಕ್ಷಣ ವ್ಯವಸ್ಥೆ ರೂಪಿಸುವ ದಿಸೆಯಲ್ಲಿ ಸರ್ಕಾರ ದೃಢ ಹೆಜ್ಜೆ ಇಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT