ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಮುಂಚೂಣಿಗೆ ಖರ್ಗೆ: ಲಾಭ ಯಾರಿಗೆ?

Published : 24 ಡಿಸೆಂಬರ್ 2023, 23:31 IST
Last Updated : 24 ಡಿಸೆಂಬರ್ 2023, 23:31 IST
ಫಾಲೋ ಮಾಡಿ
Comments

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕೆನ್ನುವ ವಿರೋಧ ಪಕ್ಷಗಳ ಈ ಕೂಟದ ಕೆಲವು ಸದಸ್ಯರ ಸಲಹೆ ಕುತೂಹಲಕಾರಿ ಆಗಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇತ್ತೀಚೆಗೆ ನಡೆದ ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ ಈ ಸಲಹೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಮರ್ಥಿಸಿದ್ದಾರೆ. ಈ ಇಬ್ಬರು ಮುಖ್ಯಮಂತ್ರಿ
ಗಳು ಖರ್ಗೆ ಅವರ ಬಗ್ಗೆ ಒಳ್ಳೆಯ ಭಾವನೆಯಿಂದಲೇ ಹಾಗೆ ಹೇಳಿರಬಹುದು. ಆದರೂ ಅವರು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯಲು ಹೊರಟಿದ್ದಾರೇನೋ ಎಂದು ಅನ್ನಿಸದೇ ಇರದು.

ಈ ಸಲಹೆಯ ಹಿಂದೆ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅಥವಾ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯನ್ನು ತಡೆಯುವ ಹುನ್ನಾರವಿದೆಯೇ? ಏಕೆಂದರೆ, ಈ ಸಭೆಗೆ ಮುನ್ನಾದಿನ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಮತಾ, ‘ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ, ಸಂಸದರೆಲ್ಲ ಸೇರಿ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ’ ಎಂದಿದ್ದರು. ರಾಹುಲ್‌ ಪ್ರಧಾನಿ ಅಭ್ಯರ್ಥಿ ಆಗುವುದಕ್ಕೆ ಈ ಇಬ್ಬರೂ ಎಂದೂ ಸಹಮತ ವ್ಯಕ್ತಪಡಿಸಿದವರಲ್ಲ.

ನಿತೀಶ್‌ ಅವರನ್ನು ಈ ನಾಯಕರು ತಮ್ಮ ಸರಿಸಮಾನ ಎಂದೇ ಭಾವಿಸುತ್ತಾರೆ. ಕಾಂಗ್ರೆಸ್ಸನ್ನು ಪರೀಕ್ಷಿಸುವ ಉದ್ದೇಶ ಕೂಡ ಇವರ ನಡೆಯ ಹಿಂದೆ ಇರಬಹುದು– ಉತ್ತರದ ಮೂರು ರಾಜ್ಯಗಳಲ್ಲಿ ಸೋಲುಂಡಿರುವ ಕಾಂಗ್ರೆಸ್‌ಗೆ, ಚೌಕಾಸಿ ನಡೆಸುವ ಸಾಮರ್ಥ್ಯ ಬಹಳಷ್ಟು ಕಡಿಮೆಯಾಗಿದೆ. ಖರ್ಗೆ ಪರವಾದ ಈ ಹೇಳಿಕೆಯ ಬಗ್ಗೆ ಬಿಹಾರದ ನಾಯಕದ್ವಯರಾದ ನಿತೀಶ್‌ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಏನನ್ನುತ್ತಾರೆ? ವರದಿಗಳ ಪ್ರಕಾರ, ಈ ಇಬ್ಬರಿಗೂ ಖರ್ಗೆ ಅವರು ಪ್ರಧಾನಿ ಅಭ್ಯರ್ಥಿಯಾಗುವುದು ಇಷ್ಟವಿಲ್ಲ. ನಿತೀಶ್ ಅವರ ಪರವಾಗಿ ಇರುವ ಅಂಶಗಳೆಂದರೆ, ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸುವ ದಿಸೆಯಲ್ಲಿ ಮೊದಲು ಕೆಲಸ ಪ್ರಾರಂಭಿಸಿದ್ದು ನಿತೀಶ್.‌ ಅವರು ಸ್ವತಃ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಬಯಸಿದ್ದಿರಲೂಬಹುದು. ಲಾಲು ಕೂಡ ನಿತೀಶ್‌ ದೆಹಲಿಗೆ ಹೋಗಲಿ ಎಂದು ಕಾಯುತ್ತಿದ್ದಾರೆ. ಏಕೆಂದರೆ, ಆಗ ತಮ್ಮ ಪುತ್ರ ತೇಜಸ್ವಿ ಯಾದವ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎನ್ನುವ ಅವರ ಪುತ್ರಪ್ರೇಮ ಇದರ ಹಿಂದೆ ಇದೆ.

ಇನ್ನು ಇತರ ನಾಯಕರ ಬಗ್ಗೆ ಹೇಳುವುದಾದರೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಇನ್ನೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಡಿಎಂಕೆ ನಾಯಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಎಂದಿಗೂ ಕಾಂಗ್ರೆಸ್‌ನವರೇ ಪ್ರಧಾನಿ ಅಭ್ಯರ್ಥಿ ಆಗಬೇಕೆಂದು ಬಯಸುವವರು. ‘ಇಂಡಿಯಾ’ ಸಭೆಯಲ್ಲಿ ಡಿಎಂಕೆ ಸದಸ್ಯರ ವಿರುದ್ಧ ನಿತೀಶ್‌ ಎಬ್ಬಿಸಿದ ಭಾಷಾ ವಿವಾದವನ್ನು, ಪ್ರಧಾನಿ ಅಭ್ಯರ್ಥಿಯನ್ನಾಗಿ ಖರ್ಗೆ ಅವರನ್ನು ಘೋಷಿಸಬೇಕೆಂಬ ಸಲಹೆಗೆ ಅವರ ಪರೋಕ್ಷ ಪ್ರತಿಕ್ರಿಯೆ ಎಂದೇ ನೋಡಲಾಗುತ್ತಿದೆ.

ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಲು ಒಂದು ಪ್ರಕ್ರಿಯೆ ಇದೆ. ಅದರ ಪ್ರಕಾರ, ಆ ಅಭ್ಯರ್ಥಿಯ ಹೆಸರನ್ನು ಅವರು ಪ್ರತಿನಿಧಿಸುವ ಪಕ್ಷವು ಮೊದಲು ಸೂಚಿಸಬೇಕು. ಅಂದರೆ, ಈಗ ಖರ್ಗೆ ಅವರ ಹೆಸರನ್ನು ಮೊದಲು ಕಾಂಗ್ರೆಸ್‌ ಸೂಚಿಸಬೇಕಾಗುತ್ತದೆ. ರಾಹುಲ್‌ ಗಾಂಧಿ ಈವರೆಗೆ ಪಕ್ಷದ ಅಧ್ಯಕ್ಷರಾಗಲು ಅಸಮ್ಮತಿ ವ್ಯಕ್ತಪಡಿಸಿ
ದ್ದಾರೆಯೇ ವಿನಾ ಪ್ರಧಾನಿ ಹುದ್ದೆಯ ಪ್ರಸ್ತಾವಕ್ಕಲ್ಲ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಖರ್ಗೆ ಮಣಿಸಿದರು. ಆಗ ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲ ಇತ್ತು. ಆದರೆ ಈಗಿನ ಸಂದರ್ಭದಲ್ಲಿ, ಗಾಂಧಿ ಕುಟುಂಬವು ಖರ್ಗೆ ಅವರ ಹೆಸರನ್ನು ಮುಂಚೂಣಿಗೆ ತರುವುದೇ?

ಇದರ ಮುಂದಿನ ಪ್ರಕ್ರಿಯೆಯೆಂದರೆ, ‘ಇಂಡಿಯಾ’ ಕೂಟದ ನಾಯಕನ ಆಯ್ಕೆ. ಇಲ್ಲಿ ಒಮ್ಮತದ ನಿರ್ಧಾರ ಬಹುಮುಖ್ಯ. ಅಕಸ್ಮಾತ್‌, ಈ ಕೂಟವು ಕಾಂಗ್ರೆಸ್‌ ಪಕ್ಷ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಸ್ವತಃ ಖರ್ಗೆಯವರ ಪರವಾಗಿ ನಿರ್ಧಾರ ತೆಗೆದುಕೊಂಡರೆ, ಕಾಂಗ್ರೆಸ್‌ಗೆ ಅದನ್ನು ತಿರಸ್ಕರಿಸುವುದು ಕಷ್ಟವಾಗುತ್ತದೆ. ಮಮತಾ– ಕೇಜ್ರಿವಾಲ್‌ ಸಲಹೆಯ ನಂತರ, ರಾಜಕೀಯ ಮುತ್ಸದ್ದಿತನ ತೋರಿಸಿದ ಖರ್ಗೆ, ‘ನಾವು ಮೊದಲು ಗೆಲ್ಲೋಣ, ನಂತರ ಇಂತಹ ವಿಷಯಗಳ ಬಗ್ಗೆ ತೀರ್ಮಾನಿಸೋಣ’ ಎಂದರು.  ತಮ್ಮ ಸ್ಥಾನ, ಅಧಿಕಾರವನ್ನು ನಿರ್ಧರಿಸುವವರು ಏನಿದ್ದರೂ ಗಾಂಧಿ ಪರಿವಾರದವರೇ ವಿನಾ ವಿರೋಧಿ ಕೂಟವಲ್ಲ ಎಂಬುದು ಖರ್ಗೆಯವರಿಗೂ ಚೆನ್ನಾಗಿ ಗೊತ್ತು. ಹೀಗಾಗಿ, ಗಾಂಧಿ ಕುಟುಂಬದ ಮೂಲಕ ಮಾತ್ರವೇ ತಮ್ಮ ಹೆಸರು ಮುನ್ನೆಲೆಗೆ ಬರಬೇಕೆಂದು ಖರ್ಗೆ ಇಚ್ಛಿಸುತ್ತಾರೆ.

ಖರ್ಗೆ ‘ಇಂಡಿಯಾ’ದ ಪ್ರಧಾನಿ ಅಭ್ಯರ್ಥಿ ಆಗುವುದರಿಂದ ಆಗುವ ಲಾಭ-ನಷ್ಟಗಳೇನು? ಒಂದು ಬಹುದೊಡ್ಡ ಪ್ಲಸ್‌ ಪಾಯಿಂಟ್ ಎಂದರೆ, ಅವರ ಸ್ವೀಕಾರಾರ್ಹತೆ. ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಯಾವುದೇ ಕಳಂಕ ಅಂಟಿಸಿಕೊಳ್ಳದಿರುವುದು ಅಥವಾ ವಿವಾದದಲ್ಲಿ ಸಿಲುಕಿಕೊಳ್ಳದೇ ಇರುವುದು, ಈ ಮೂಲಕ ಅದು ವೈಯಕ್ತಿಕವಾಗಿ ಮಾತ್ರವಲ್ಲದೆ ಅವರು ನಿರ್ವಹಿಸಿದ ಹುದ್ದೆ ಹಾಗೂ ಪಕ್ಷದ ಘನತೆ, ಗೌರವವನ್ನೂ ಹೆಚ್ಚಿಸಿರುವುದು. ಖರ್ಗೆ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಹಿಂದಿಯನ್ನು ಚೆನ್ನಾಗಿ ಬಲ್ಲರು. ದಲಿತ ನಾಯಕರೂ ಆಗಿರುವುದರಿಂದ, ಪ್ರಚಾರದ ಸಮಯದಲ್ಲಿ ಅವರನ್ನು ಟೀಕಿಸಲು ಬಿಜೆಪಿ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ.

ಹಿಂದೆ ಒಂದೆರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಕೂಡ ಖರ್ಗೆಯವರನ್ನು ಕೊಂಡಾಡಿದ್ದುಂಟು. ಆದಾಗ್ಯೂ, ಮೋದಿಯವರಿಗೆ ವಿರುದ್ಧವಾಗಿ ಎದುರಾಳಿಯೊಬ್ಬರು ನಿಲ್ಲುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಏಕೆಂದರೆ, ಮೋದಿಯವರಂಥ ಭಾಷಣಕಾರ ಹಾಗೂ ವರ್ಚಸ್ವಿ ನಾಯಕ ವಿರೋಧ ಪಕ್ಷದಲ್ಲಿ ಇಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತು. ಮೋದಿಯವರಿಗೆ ಬಹುಶಃ ರಾಹುಲ್‌ ಅಥವಾ ಕಾಂಗ್ರೆಸ್‌ನ ಯಾವುದೇ ನಾಯಕ ತಮ್ಮ ಎದುರಾಳಿಯಾದರೆ ಒಳ್ಳೆಯದು. ಏಕೆಂದರೆ, ಆಗ ಕಾಂಗ್ರೆಸ್‌ನ ಕೌಟುಂಬಿಕ ರಾಜಕಾರಣವನ್ನು ಅಸ್ತ್ರವಾಗಿ ಬಳಸಿಕೊಳ್ಳುವುದು ಅವರಿಗೆ ಸುಲಭವಾಗುತ್ತದೆ.

ಇನ್ನು ಖರ್ಗೆಯವರ ಮೈನಸ್‌ ಪಾಯಿಂಟ್‌ಗಳನ್ನು ಗಮನಿಸಿದರೆ, ಇಂಡಿಯಾ ಮೈತ್ರಿಕೂಟಕ್ಕೆ ಅವರಿಂದ ಕೆಲವು ಅನನುಕೂಲಗಳು ಆಗಬಹುದು. ಮೊದಲನೆಯದಾಗಿ, ಖರ್ಗೆ ಇಡೀ ಭಾರತದಾದ್ಯಂತ ಮನೆಮಾತಾಗಿರುವ ನಾಯಕನಲ್ಲ. ಅವರು ದೇಶದಾದ್ಯಂತ ಮತಗಳನ್ನು ಸೆಳೆಯಬಲ್ಲ ನಾಯಕನೂ ಅಲ್ಲ. ಅವರಿಂದ ದಲಿತ ಮತಗಳ ಕ್ರೋಡೀಕರಣ ಆಗಲಿದೆಯೇ? ಬಹುಶಃ ಆಗಲಿಕ್ಕಿಲ್ಲ. ಏಕೆಂದರೆ, ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿಯು ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದೆ. 2019ರಲ್ಲಿ, ದೇಶದಾದ್ಯಂತ ಇರುವ 84 ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ 46ರಲ್ಲಿ ಕೇಸರಿ ಪಕ್ಷ ಗೆಲುವು ದಾಖಲಿಸಿದೆ. ದೇಶದ ಶೇ 17ರಷ್ಟಿರುವ ದಲಿತರ ಮತಗಳನ್ನು ಕ್ರೋಡೀಕರಿಸಲು ಖರ್ಗೆಯವರ ಮೇಲೆ ಒತ್ತಡ ಬರುವುದಂತೂ ನಿಶ್ಚಿತ.

ಈ ಸಮರ್ಥ ನಾಯಕನಿಗೆ ಸಂಬಂಧಿಸಿದ ಮತ್ತೊಂದು ಅನನುಕೂಲ, ಅವರ ವಯಸ್ಸು. 81ರ ಹರೆಯದ ಖರ್ಗೆ ದೇಶದ ಶೇ 65ರಷ್ಟಿರುವ ಯುವಜನರ ಮತಗಳನ್ನು ಎಷ್ಟರಮಟ್ಟಿಗೆ ಸೆಳೆಯಬಲ್ಲರು? ಪ್ರಧಾನಿ ಅಭ್ಯರ್ಥಿಯಾದ ಮೇಲೆ ದೇಶದಾದ್ಯಂತ ತಿರುಗಾಡಬೇಕಾಗುತ್ತದೆ. ಕಾಲುನೋವಿನಿಂದ ಬಳಲುತ್ತಿರುವ ಅವರು ಈ ಇಳಿವಯಸ್ಸಿನಲ್ಲಿ ಇಂತಹ ಸವಾಲನ್ನು ಎದುರಿಸಬಲ್ಲರೇ? ಕೊನೆಯದಾಗಿ, ಖರ್ಗೆಯವರ ಮೇಲೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಒತ್ತಡ ಬರಬಹುದು. ಈಗಾಗಲೇ ರಾಜ್ಯಸಭಾ ಸದಸ್ಯರಾಗಿರುವ ಅವರು ನೇರ ಚುನಾವಣೆ ಎದುರಿಸುವ ಸಾಧ್ಯತೆ ಕಡಿಮೆ. 2019ರಲ್ಲಿ ಖರ್ಗೆ 95 ಸಾವಿರಕ್ಕೂ ಹೆಚ್ಚು ಮತಗಳಿಂದ ಸ್ವಕ್ಷೇತ್ರ ಕಲಬುರಗಿಯಲ್ಲಿ ಸೋತಿದ್ದರು.

ಖರ್ಗೆ ಅವರು ಉತ್ತರಪ್ರದೇಶದಿಂದ ಸ್ಪರ್ಧಿಸಬೇಕೆಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಕಾಂಗ್ರೆಸ್‌ನ ಸ್ಥಿತಿ ನೋಡಿ: ಅಲ್ಲಿರುವ ಪರಿಶಿಷ್ಟ ಜಾತಿಯ 17 ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 2014 ಹಾಗೂ 2019ರಲ್ಲಿ ಒಂದು ಕ್ಷೇತ್ರದಲ್ಲೂ ಗೆದ್ದಿಲ್ಲ. 2014ರಲ್ಲಿ ಬಿಜೆಪಿ ಎಲ್ಲ 17 ಹಾಗೂ 2019ರಲ್ಲಿ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಒಟ್ಟಿನಲ್ಲಿ, ವಿರೋಧಿ ಬಣದಿಂದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆನ್ನುವ ಪ್ರಶ್ನೆ ಕುತೂಹಲಕಾರಿ ಘಟ್ಟ ತಲುಪಿದೆ.

–ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT