ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಕ್ಕೂಟದ ಕಹಿ ಬಂಧ: ಕೇಂದ್ರ–ರಾಜ್ಯಗಳ ಸಂಘರ್ಷಕ್ಕೆ ಕೊನೆಯೇ ಇಲ್ಲವೆ?

Published : 21 ಜನವರಿ 2023, 22:30 IST
ಫಾಲೋ ಮಾಡಿ
Comments

ಮತ್ತೊಂದು ಗಣರಾಜ್ಯೋತ್ಸವ ಬಂದಿದೆ. ಆದರೆ, ದೇಶದ ಗಣತಂತ್ರ ವ್ಯವಸ್ಥೆ ಹಿಂದೆಂದಿಗಿಂತಲೂ ಈಗ ಹೆಚ್ಚು ಸಂಘರ್ಷಗಳನ್ನು ಕಾಣುತ್ತಿದೆ. ದೇಶದಲ್ಲಿ ಅತೀ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಈ ವಿಷಯವೂ ಒಂದಾಗಿದೆ. ಹಾಗಾದರೆ ಕೇಂದ್ರ–ರಾಜ್ಯಗಳ ಸಂಘರ್ಷಕ್ಕೆ ಕೊನೆಯೇ ಇಲ್ಲವೆ?

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ತಮ್ಮ ರಾಷ್ಟ್ರೀಯ ಪಕ್ಷ ‘ಭಾರತ ರಾಷ್ಟ್ರ ಸಮಿತಿ’ಗೆ ಚಾಲನೆ ನೀಡಲು ಜನವರಿ 18ರಂದು ‘ಭಾರಿ ಬಹಿರಂಗ ಸಭೆ’ಯೊಂದನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಮೂವರು ಮುಖ್ಯಮಂತ್ರಿಗಳು ಹಾಗೂ ಒಬ್ಬರು ಮಾಜಿ ಮುಖ್ಯಮಂತ್ರಿ ಭಾಗಿಯಾಗಿದ್ದರು. ಕೇರಳ, ತೆಲಂಗಾಣ, ತಮಿಳುನಾಡು, ದೆಹಲಿ ಸೇರಿದಂತೆ ಹಲವೆಡೆ ರಾಜ್ಯಪಾಲರ ಹುದ್ದೆಯ ದುರ್ಬಳಕೆ ಆಗುತ್ತಿರುವುದು ಈ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದ ಸಾಮಾನ್ಯ ಅಂಶವಾಗಿತ್ತು.

ಭಾರತವು ಪ್ರಜಾತಂತ್ರ ವ್ಯವಸ್ಥೆಯಾದ ನಂತರದಲ್ಲಿ ಅತಿಹೆಚ್ಚು ಚರ್ಚೆಗೆ ಒಳಗಾದ ವಿಷಯಗಳಲ್ಲಿ ಕೇಂದ್ರ–ರಾಜ್ಯ ನಡುವಿನ ಸಂಬಂಧವೂ ಒಂದು. ಎರಡು ವಿಷಯಗಳನ್ನು ಮುಖ್ಯವಾಗಿ ಗಮನಿಸಿದಾಗ ಈ ವಿಚಾರವು ಇನ್ನಷ್ಟು ಸ್ಪಷ್ಟವಾಗಿ ಗೊತ್ತಾಗುತ್ತದೆ: ಕೇಂದ್ರದಲ್ಲಿ ಕಾಂಗ್ರೆಸ್ಸಿನ ಆಡಳಿತವಿದ್ದಾಗ ಹೆಚ್ಚಾಗಿ ನಡೆದ ರಾಜ್ಯ ಸರ್ಕಾರಗಳ ವಜಾ ಪ್ರಕ್ರಿಯೆ; ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಚಿನ ದಿನಗಳಲ್ಲಿ ರಾಜ್ಯಪಾಲರು ತೋರಿದ ವಿವಾದಾತ್ಮಕ ನಡೆ. ಹಣಕಾಸು ಮತ್ತು ಆಡಳಿತಾತ್ಮಕ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಹೆಚ್ಚಿನ ಅಧಿಕಾರದ ಹಂಚಿಕೆಯಾಗಬೇಕು ಎಂಬ ವಿಷಯವನ್ನು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಪ್ರಸ್ತಾಪಿಸಿವೆ. ಆದರೆ, ಅದಕ್ಕೆ ಹೆಚ್ಚಿನ ಗಮನ ಸಿಕ್ಕಿಲ್ಲ.

ಕಾಂಗ್ರೆಸ್ ಪಕ್ಷವು ದಶಕಗಳ ಕಾಲ ಪ್ರಬಲ ರಾಜಕೀಯ ಶಕ್ತಿಯಾಗಿದ್ದು ಕೇಂದ್ರದಲ್ಲಿ ಅಧಿಕಾರ ಚಲಾಯಿಸಿತು. 1980ರ ದಶಕದ ಕೊನೆಯಿಂದ ದುರ್ಬಲವಾಗುತ್ತ ಸಾಗಿತು. ಅಲ್ಲಿಯವರೆಗೆ ಪಕ್ಷವು ತನ್ನ ವಿರೋಧಿ ಪಕ್ಷದ ಅಧಿಕಾರ ಇರುವ ರಾಜ್ಯಗಳಲ್ಲಿ ಸರ್ಕಾರವನ್ನು ವಜಾಗೊಳಿಸುವ ವಿಚಾರದಲ್ಲಿ ಹಿಂದೆ–ಮುಂದೆ ನೋಡುತ್ತಿರಲಿಲ್ಲ. 1977ರಲ್ಲಿ ಕೇಂದ್ರದಲ್ಲಿ ಅಲ್ಪ ಅವಧಿಗೆ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರ ಕೂಡ ಕಾಂಗ್ರೆಸ್ಸಿನ ಕೊಳಕು ಕೆಲಸವನ್ನು ತಾನೂ ಮಾಡಲು ಹಿಂದೇಟು ಹಾಕಲಿಲ್ಲ. ಅದು ಕಾಂಗ್ರೆಸ್ ಆಡಳಿತವಿದ್ದ ಏಳು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿತು. ಕೇಂದ್ರ ಸರ್ಕಾರವು ಸಂವಿಧಾನದ 356ನೆಯ ವಿಧಿಯ ಮೂಲಕ ಮನಸೋಇಚ್ಛೆ ಚಲಾಯಿಸುತ್ತಿದ್ದ ಅಧಿಕಾರವು ‘ಪ್ರಶ್ನೆಗೆ ಅತೀತವಾಗಿದ್ದೇನೂ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ 1994ರಲ್ಲಿ ಎಸ್‌.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸಾರಿತು. ಅದಾದ ನಂತರವಷ್ಟೇ ಪರಿಸ್ಥಿತಿ ಬದಲಾಯಿತು. 1987ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್, ಬೊಮ್ಮಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರವನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬೊಮ್ಮಾಯಿ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಚಾರಿತ್ರಿಕ ತೀರ್ಪು ಬಂದಿದ್ದು ಹಾಗೂ 1996ರ ನಂತರದಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಆಳ್ವಿಕೆ ಶುರುವಾಗಿದ್ದು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರು ತಮ್ಮ ಅಧಿಕಾರವನ್ನು ಕೊಳಕಾಗಿ ಪ್ರದರ್ಶಿಸುವ ಈ ಪರಿಪಾಟಕ್ಕೆ ಕಡಿವಾಣ ಹಾಕಿತು. ಅಲ್ಲಿಯವರೆಗೆ ಕಾಂಗ್ರೆಸ್‌, ರಾಜ್ಯ ಸರ್ಕಾರಗಳನ್ನು ಬಹಳ ಸಹಜವೆಂಬಂತೆ ವಜಾಗೊಳಿಸುತ್ತಿತ್ತು. ಜಗತ್ತಿನ ಮೊದಲ ಚುನಾಯಿತ ಕಮ್ಯುನಿಸ್ಟ್‌ ಸರ್ಕಾರಗಳ ಪೈಕಿ ಒಂದಾದ ಕೇರಳದ ಇ.ಎಂ.ಎಸ್. ನಂಬೂದರಿಪಾಡ್ ನೇತೃತ್ವದ ಸರ್ಕಾರವನ್ನು 1959ರಲ್ಲಿ ವಜಾಗೊಳಿಸುವ ಮೂಲಕ ಈ ಪರಿಪಾಟ ಆರಂಭವಾಗಿತ್ತು. ಆ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ವಜಾಗೊಂಡಿತ್ತು.

ಕಳೆದ ಕೆಲವು ವರ್ಷಗಳಿಂದ, ಅದರಲ್ಲೂ ಮುಖ್ಯವಾಗಿ ಕಳೆದ ಎರಡು ದಶಕಗಳಲ್ಲಿ, ರಾಜ್ಯಪಾಲರ ಪಾತ್ರ ಹಾಗೂ ಅವರು ಮತ್ತು ರಾಜ್ಯ ಸರ್ಕಾರಗಳು ಹೊಂದಿರುವ ಅಧಿಕಾರವು ಗಮನ ಸೆಳೆದಿದೆ. ಆಸಕ್ತಿಕರ ಅಂಶವೆಂದರೆ, ಹಣಕಾಸಿನ ಅನುದಾನವನ್ನು ರಾಜ್ಯಗಳಿಗೆ ನೀಡುವ ವಿಚಾರವಾಗಿ ರಾಜ್ಯ ಸರ್ಕಾರಗಳು ಅರೆ ಮನಸ್ಸಿನಿಂದ ಪ್ರಸ್ತಾಪಿಸಿದ್ದರ ಬಗ್ಗೆ ಸೂಕ್ತವಾದ ಚರ್ಚೆ ಅಥವಾ ಕೇಂದ್ರ ಸರ್ಕಾರದ ಕಡೆಯಿಂದ ಗಂಭೀರ ಕ್ರಮ ಆಗಿಲ್ಲ. ಆದರೆ, ರಾಜ್ಯಪಾಲರು ನಿಭಾಯಿಸಿದ ವಿವಾದಾತ್ಮಕ ಪಾತ್ರ ಮಾತ್ರ ಚರ್ಚೆಯ ಕೇಂದ್ರಸ್ಥಾನಕ್ಕೆ ಬಂದಿದೆ.

ಕೆಲವು ರಾಜ್ಯಪಾಲರು ಈಚಿನ ಕೆಲವು ವರ್ಷಗಳಲ್ಲಿ ತೆಗೆದುಕೊಂಡ ಕೆಲವು ಕ್ರಮಗಳನ್ನು ಗಮನಿಸಿದರೆ, ರಾಜ್ಯ ಹಾಗೂ ಕೇಂದ್ರದ ನಡುವಿನ ಸಂಬಂಧದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ನಡೆ ಅವಾಗಿದ್ದವು ಎಂಬುದು ಗೊತ್ತಾಗುತ್ತದೆ. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷದ ಆಡಳಿತವಿರುವ ಯಾವ ರಾಜ್ಯವೂ ಅಲ್ಲಿನ ರಾಜ್ಯಪಾಲರ ವಿರುದ್ಧ ದೂರು ಹೇಳದೆ ಉಳಿದಿಲ್ಲ. ತಮಿಳುನಾಡು, ಕೇರಳ, ತೆಲಂಗಾಣ, ದೆಹಲಿ, ಜಾರ್ಖಂಡ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ (ತೀರಾ ಈಚಿನವರೆಗೆ) ತಮ್ಮದೇ ಆದ ದೂರುಗಳನ್ನು ಹೊಂದಿದ್ದವು. ಕಿರಣ್ ಬೇಡಿ ಅವರು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್ ಆಗಿದ್ದಾಗ ಇವೆಲ್ಲ ಶುರುವಾಗಿದ್ದು. ಬೇಡಿ ಅವರು ಅಲ್ಲಿನ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರೊಂದಿಗೆ ಸುದೀರ್ಘ ಜಗಳದಲ್ಲಿ ತೊಡಗಿದ್ದರು. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ಜೊತೆ ಜಗಳ ಇಲ್ಲದೆ ಒಂದು ದಿನವೂ ಕಳೆಯುವುದಿಲ್ಲ.

ಇಲ್ಲಿ ಆಸಕ್ತಿಕರ ವಿಷಯವೊಂದು ಇದೆ. ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರಗಳ ನಡುವಿನ ಹಗ್ಗ ಜಗ್ಗಾಟದಲ್ಲಿ ಕಂಡುಬರುವ ಸಾಮಾನ್ಯ ಸಂಗತಿಯೊಂದು ಇದೆ. ಅದು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ. ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಹೌದು. ಕುಲಪತಿಗಳ ನೇಮಕ ವಿಚಾರದಲ್ಲಿ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳಲು ಕೇರಳ, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ರಾಜ್ಯಗಳು ಮುಂದಾಗಿವೆ. ಇದಕ್ಕೆ ಅಲ್ಲಿನ ರಾಜ್ಯಪಾಲರ ಕಡೆಯಿಂದ ವಿರೋಧವೂ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು 24 ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಿತು. ಆದರೆ ಆಗ ಅಲ್ಲಿ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರು (ಅಲ್ಲಿನ ಸರ್ಕಾರದ ಜೊತೆ ಅವರು ನಿರಂತರವಾಗಿ ಜಟಾಪಟಿ ನಡೆಸುತ್ತಿದ್ದರು) ಈ ನೇಮಕಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದರು. ಕೇರಳದ ಎಡರಂಗ ಸರ್ಕಾರವು ಅಲ್ಲಿನ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಅವರು ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯನ್ನು ಮರುನೇಮಕ ಮಾಡಿದ್ದನ್ನು ಒಪ್ಪಲು ನಿರಾಕರಿಸಿತು. ಆದರೆ ಕೊನೆಯಲ್ಲಿ ರಾಜ್ಯಪಾಲರ ಆದೇಶಕ್ಕೆ ಮಣಿಯಿತು. ರಾಜ್ಯ ಸರ್ಕಾರದಿಂದ ನೇಮಕ ಆಗಿದ್ದ 10 ಕುಲಪತಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದರು.

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಅಲ್ಲಿನ ವಿಧಾನಸಭೆಯ ಅಧಿವೇಶನದಿಂದ ಹೊರನಡೆದಿದ್ದು ಈಚೆಗೆ ಸುದ್ದಿಯಾಯಿತು. ಹೊಸ ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ವಾಡಿಕೆ. ರಾಜ್ಯಪಾಲ ರವಿ ಅವರು ಭಾಷಣದಲ್ಲಿ ತಮ್ಮದೇ ಆದ ಕೆಲವು ಪದಗಳನ್ನು ಸೇರಿಸಿದರು. ರಾಜ್ಯದ ಸಚಿವ ಸಂಪುಟವು ಸಿದ್ಧಪಡಿಸಿ, ಅನುಮೋದನೆ ನೀಡಿ ತಮಗೆ ಕೊಟ್ಟಿದ್ದ ಭಾಷಣದಲ್ಲಿನ ಕೆಲವು ಪದಗಳನ್ನು ಕೈಬಿಟ್ಟರು. ರಾಜ್ಯ ಸರ್ಕಾರದ ಮುಖ್ಯಸ್ಥರಾಗಿ ರಾಜ್ಯಪಾಲರು, ನೀತಿಗಳಿಗೆ ಸಂಬಂಧಿಸಿದ ಹೇಳಿಕೆಯನ್ನು ಸರ್ಕಾರ ಬಯಸಿದ ರೀತಿಯಲ್ಲಿ ಓದಬೇಕಿರುವುದು ಸಂಪ್ರದಾಯ. ರವಿ ಅವರು ಭಾಷಣದಲ್ಲಿನ ಪದಗಳನ್ನು ಕೈಬಿಟ್ಟಿದ್ದುದು ಅಪೂರ್ವವಾದ ನಿದರ್ಶನ. ರವಿ ಅವರ ಕ್ರಮದ ಕಾರಣದಿಂದಾಗಿ ಆಡಳಿತಾರೂಢ ಡಿಎಂಕೆ ಪಕ್ಷವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ರವಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿತು.

ತಮಿಳುನಾಡು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಇಷ್ಟಕ್ಕೇ ಸೀಮಿತವಾಗಿಲ್ಲ. ರವಿ ಅವರು ಅಲ್ಲಿನ ವಿಧಾನಸಭೆಯ ಅಂಗೀಕಾರ ಸಿಕ್ಕಿರುವ ಹಲವು ಮಸೂದೆಗಳಿಗೆ ಅನುಮೋದನೆ ನೀಡದೆ ಕುಳಿತಿದ್ದಾರೆ. ನೀಟ್‌ ವಿಚಾರವಾಗಿ ಅಲ್ಲಿ ಸಮಸ್ಯೆ ತಲೆದೋರಿತ್ತು. ನೀಟ್ ಆಧಾರಿತ ಪ್ರವೇಶಗಳಿಂದ ತನ್ನ ವಿದ್ಯಾರ್ಥಿಗಳಿಗೆ ವಿನಾಯಿತಿ ಬೇಕು ಎಂದು ತಮಿಳುನಾಡು ಸರ್ಕಾರ ಬಯಸಿತು. ಇದಕ್ಕೆ ಸಂಬಂಧಿಸಿದ ಮಸೂದೆಯ ವಿಚಾರವಾಗಿ ನಿರ್ಣಯ ಕೈಗೊಳ್ಳದ ರವಿ ಅವರು ಅದನ್ನು ವಿಧಾನಸಭೆಗೆ ಮರಳಿಸಿದರು. ವಿಧಾನಸಭೆಯು ಆ ಮಸೂದೆಗೆ ಮತ್ತೆ ಅನುಮೋದನೆ ನೀಡಿತು.

ರವಿ ಅವರು ಏಳು ತಿಂಗಳ ಹಿಂದೆ ಅದನ್ನು ರಾಷ್ಟ್ರಪತಿಗೆ ಅನುಮೋದನೆಗೆ ರವಾನಿಸಿದರು. ಮಸೂದೆಯು ಈಗ ಕೇಂದ್ರ ಆರೋಗ್ಯ ಸಚಿವಾಲಯದ ಪರಿಶೀಲನೆಯಲ್ಲಿದೆ.

ತೆಲಂಗಾಣ ರಾಜ್ಯ ಸರ್ಕಾರ ಕೂಡ ಅಲ್ಲಿನ ರಾಜ್ಯಪಾಲೆ ತಮಿಳುಸಾಯಿ ಸೌಂದರರಾಜನ್ ಜೊತೆ ಸಂಘರ್ಷ ಹೊಂದಿದೆ. ಇದರ ಜೊತೆಗೆ, ಅಲ್ಲಿನ ಮುಖ್ಯಮಂತ್ರಿ ಕೆಸಿಆರ್‌, ಶಿಷ್ಟಾಚಾರವನ್ನು ಮೀರಿದ್ದೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ವಿಮಾನ ನಿಲ್ದಾಣಕ್ಕೆ ಹೋಗಿಲ್ಲ. ಅಲ್ಲದೆ, ರಾಜ್ಯದಲ್ಲಿ ಮೋದಿ ಅವರು ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಂಡಿಲ್ಲ. ತನ್ನ ಅಧಿಕಾರ ಹಾಗೂ ಕಾರ್ಯಗಳ ವಿಚಾರವಾಗಿ ಗೊಂದಲಗಳು ಇರುವ ಕಾರಣ ದೆಹಲಿ ಸರ್ಕಾರ ಕೂಡ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜೊತೆ ಪ್ರತಿದಿನವೂ ಸಂಘರ್ಷದಲ್ಲಿ ತೊಡಗಿಕೊಂಡಿದೆ. ರಾಜಸ್ಥಾನ ಮತ್ತು ಛತ್ತೀಸಗಡದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು, ಪಂಜಾಬ್‌ನಲ್ಲಿನ ಎಎ‍ಪಿ ನೇತೃತ್ವದ ಸರ್ಕಾರ, ಜಾರ್ಖಂಡ್‌ನಲ್ಲಿನ ಮೈತ್ರಿ ಸರ್ಕಾರ ತಮ್ಮ ರಾಜ್ಯಪಾಲರ ಜೊತೆ ಅಷ್ಟೇನೂ ಒಳ್ಳೆಯ ಸಂಬಂಧ ಹೊಂದಿಲ್ಲ. ಆದರೆ, ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವ ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಇಲ್ಲ. ಒಡಿಶಾದಲ್ಲಿ ಬಿಜೆಡಿ ಮತ್ತು ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಬಿಜೆಪಿಯನ್ನು ವಿರೋಧಿಸುತ್ತಿಲ್ಲ. ಅವು ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗಳಿಗೆ ಸಂಸತ್ತಿನಲ್ಲಿ ಬೆಂಬಲ ಕೊಟ್ಟಿವೆ. ಹೀಗಾಗಿ ಈ ಎರಡು ರಾಜ್ಯಗಳ ಸರ್ಕಾರಗಳು ತಮ್ಮ ರಾಜ್ಯಪಾಲರ ಜೊತೆ ಹೊಂದಿರುವ ಸಂಬಂಧವು ಅರ್ಥವಾಗುವಂಥದ್ದು.

ರಾಜ್ಯ ಸರ್ಕಾರಗಳು ಕೇಂದ್ರದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿಲ್ಲದಿರುವುದು ಹಾಗೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೆರವು ಒದಗಿಸುವ ಮನಸ್ಸನ್ನು ಅಷ್ಟೇನೂ ಹೊಂದಿಲ್ಲದಿರುವುದು ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಅನ್ಯಾಯವಾಗುವಂತೆ ಮಾಡಿದೆ. ರಾಜ್ಯ ಹಾಗೂ ಕೇಂದ್ರದ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಿರುವ ರಾಜ್ಯಪಾಲರು ಈ ವಿಚಾರದಲ್ಲಿ ನೆರವಿಗೆ ಬಂದಿಲ್ಲ. ಇವೆಲ್ಲದರ ನಡುವೆ ಏಟು ಬಿದ್ದಿರುವುದು ಒಕ್ಕೂಟ ವ್ಯವಸ್ಥೆಗೆ. ರಾಜ್ಯಪಾಲರ ಪಾತ್ರ ಏನಿರಬೇಕು ಎಂಬುದರ ಬಗ್ಗೆ ಎಲ್ಲರ ಗಮನ ಹರಿದಿರುವ ಕಾರಣದಿಂದಾಗಿ, ರಾಜ್ಯಗಳ ಹಣಕಾಸಿನ ಅಧಿಕಾರ ಹಾಗೂ ಸಂಪನ್ಮೂಲಗಳ ಹಂಚಿಕೆಯ ಬಗ್ಗೆ ಅಗತ್ಯವಾಗಿ ಕೊಡಬೇಕಾಗಿದ್ದ ಗಮನವನ್ನು ಕೊಡಲಾಗುತ್ತಿಲ್ಲ.

ರಾಜ್ಯಗಳಿಗೆ ಜಿಎಸ್‌ಟಿ ಸಂಗ್ರಹದಲ್ಲಿ ಈಗಿರುವ ಶೇಕಡ 50ರಷ್ಟು ಪಾಲನ್ನು ಶೇ 60ಕ್ಕೆ ಹೆಚ್ಚಿಸುವುದು, ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳಿಗೆ ನೀಡುವ ಪರಿಹಾರವನ್ನು 2022–23ರಿಂದ ಅನ್ವಯವಾಗುವಂತೆ ಐದು ವರ್ಷಗಳಿಗೆ ಮುಂದುವರಿಸಬೇಕೆನ್ನುವುದು ಕೂಡ ರಾಜ್ಯಗಳ ಬೇಡಿಕೆ.

ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧವನ್ನು ಮರುಪರಿಶೀಲಿಸುವ ಬಗ್ಗೆ ಅವಲೋಕನ ನಡೆಸುವ ಅಂತರ್‌ರಾಜ್ಯ ಮಂಡಳಿಯು ವರ್ಷದಲ್ಲಿ ಮೂರು ಬಾರಿ ಸಭೆ ಸೇರಬೇಕು. ಆದರೆ ಅದು 2017ರ ನಂತರ ಸಭೆ ಸೇರಿಲ್ಲ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧದ ಕುರಿತು ಶಿಫಾರಸು ಮಾಡಲು ಕೇಂದ್ರವು ಹಲವು ಆಯೋಗಗಳನ್ನು ರಚಿಸಿದೆ. ಆದರೆ ಆಯೋಗಗಳ ಶಿಫಾರಸುಗಳ ಸೂಕ್ತ ಅನುಷ್ಠಾನ ಆಗಿಲ್ಲ. ದೇಶವು 2014ರ ನಂತರದಲ್ಲಿ ಬಲಿಷ್ಠ ಕೇಂದ್ರ ಸರ್ಕಾರವನ್ನು ಹೊಂದಿರುವ ಕಾರಣ, ರಾಜ್ಯ ಹಾಗೂ ಕೇಂದ್ರದ ನಡುವಿನ ಸಮತೋಲನವನ್ನು ಗೌರವಿಸುವ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರುವುದು ಕೇಂದ್ರದ ಮೇಲೆಯೇ ಆಗಿರುತ್ತದೆ. ರಾಜ್ಯಗಳ ಹಿತಾಸಕ್ತಿಯ ವಿಚಾರದಲ್ಲಿ ಹೆಚ್ಚು ಹೊಂದಾಣಿಕೆಯ ಮನೋಭಾವ ತೋರಿಸುವುದೂ ಅದರ ಹೊಣೆಯೇ ಆಗಿರುತ್ತದೆ.

(ಲೇಖಕ ಹಿರಿಯ ಪತ್ರಕರ್ತ)

ಕನ್ನಡಕ್ಕೆ: ವಿಜಯ್‌ ಜೋಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT