ಗ್ರಹಣವಿರಲಿ, ಇಲ್ಲದಿರಲಿ ಸೌರಮಂಡಲದ ಯಜಮಾನನಾದ ಸೂರ್ಯನನ್ನು ಹತ್ತಿರದಿಂದ ಬರಿಗಣ್ಣಿನಲ್ಲಿ ಬಹಳ ಹೊತ್ತು ಗಮನಿಸುವುದಾಗಲೀ ಛಾಯಾಚಿತ್ರ ತೆಗೆಯುವುದಾಗಲೀ ಯಾವುದೇ ಗಗನನೌಕೆ ಬಳಸಿ ತೀರಾ ಹತ್ತಿರ ಸುಳಿಯುವುದಾಗಲೀ ಆಗದ ಮಾತು. ಸೂರ್ಯನ ವಾತಾವರಣದ ಅಧ್ಯಯನಕ್ಕಾಗಿ ಸಜ್ಜಾಗಿರುವ ಆದಿತ್ಯ ಎಲ್–1 ಎಂಬ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಸೂರ್ಯನನ್ನು ಇಪ್ಪತ್ತನಾಲ್ಕು ಗಂಟೆಯೂ ಹತ್ತಿರದಿಂದ ನೋಡುವುದು, ಸೂರ್ಯನ ಕಿರೀಟ (ಕೊರೋನಾ), ಅಯಸ್ಕಾಂತೀಯ ಗುಣ, ಚಿಮ್ಮುವ ಜ್ವಾಲಾಬುಗ್ಗೆ, ಬೀಸಿಬರುವ ಸೌರ ಮಾರುತಗಳನ್ನು ವಿವಿಧ ತರಂಗಾಂತರಗಳಲ್ಲಿ ವಿವರವಾಗಿ ಅಭ್ಯಸಿಸುವುದು ಸಾಧ್ಯವಾಗಲಿದೆ.
ಚಂದ್ರಯಾನ– 3ರ ಯಶಸ್ಸಿನ ಬೆನ್ನಲ್ಲೇ ಇಸ್ರೊ ಈಗ ಸೂರ್ಯನತ್ತ ಮುಖ ಮಾಡಿದೆ. 1,500 ಕಿಲೊ ಗ್ರಾಂ ತೂಕದ ಸೂರ್ಯ ವೀಕ್ಷಣಾಲಯ ಆದಿತ್ಯ ಎಲ್–1, ಪಿಎಸ್‍ಎಲ್‍ವಿ- ಎಕ್ಸ್‌ಟ್ರಾಲಾರ್ಜ್ ರಾಕೆಟ್‌ನಲ್ಲಿ ಕೂತು, ಭೂಮಿಯಿಂದ ಹದಿನೈದು ಲಕ್ಷ ಕಿ.ಮೀ. ದೂರದಲ್ಲಿರುವ ಜಾಗಕ್ಕೆ (ಲಗ್ರಾಂಜಿಯನ್ ಬಿಂದು 1) ನೂರಿಪ್ಪತ್ತು ದಿನಗಳ ಪಯಣ ಪ್ರಾರಂಭಿಸಲಿದೆ. ಅಲ್ಲಿಗೆ ತಲುಪಿದ ಮೇಲೆ ಸೂರ್ಯನ ಎದುರಿಗೆ ಕೆಳಎತ್ತರದ ಕಕ್ಷೆಯಲ್ಲಿ (ಹ್ಯಾಲೊ ಆರ್ಬಿಟ್) ಸುಮಾರು 5 ವರ್ಷ ಸುತ್ತುವ ಆದಿತ್ಯ, ಭೂಮಿಗೆ ಸಮೀಪದ ಬಾಹ್ಯಾಕಾಶದ ವಾಯುಗುಣ, ಕೊರೋನಾದಿಂದ ಚಿಮ್ಮಿ ಬರುವ ಜ್ವಾಲಾಬುಗ್ಗೆಗಳ ಉಗಮದ ಬಗ್ಗೆ ಖಚಿತ ಮಾಹಿತಿ ನೀಡಲಿದೆ.
ಸೂರ್ಯನ ಪ್ರಭೆ ಮತ್ತು ಶಾಖ ಸದಾಕಾಲ ಒಂದೇ ರೀತಿ ಇರುವುದಿಲ್ಲ. ಹೈದನೊಬ್ಬ ಬಾಯಲ್ಲಿ ಪೆಟ್ರೋಲ್ ತುಂಬಿಕೊಂಡು ಪುರ್ ಅಂತ ಮೇಲಕ್ಕೆ ಉಗುಳಿ ಅದಕ್ಕೆ ಬೆಂಕಿ ತಗುಲಿಸಿ ಭುಗ್ಗೆಂದು ಜ್ವಾಲೆ ಹೊಮ್ಮಿಸುವುದನ್ನು ನಾವು ನೋಡಿದ್ದೇವೆ. ಹಾಗೆಯೇ ಸೂರ್ಯನೂ ಆಗಾಗ ಜ್ವಾಲೆಯನ್ನು ಕಕ್ಕುತ್ತಾನೆ. ಆಗ ಅತಿ ಶಕ್ತಿಶಾಲಿ ಪ್ರೋಟಾನ್ ಪ್ರವಾಹ ಹೊಮ್ಮುತ್ತದೆ. ಅದಕ್ಕೆ ಕಾಂತಶಕ್ತಿಯೂ ಹೆಚ್ಚೇ ಇರುತ್ತದೆ. ಚಂಡಮಾರುತದಂತೆ ಚಿಮ್ಮಿ ಬರುವ ಜ್ವಾಲಾ ಬುಗ್ಗೆಗಳನ್ನು ಸೋಲಾರ್ ಫ್ಲೇರ್ ಎನ್ನುತ್ತಾರೆ. ಈ ಬುಗ್ಗೆ ಸೂರ್ಯನಿಂದ ಚಿಮ್ಮಿ ಯಾವ ದಿಕ್ಕಿಗಾದರೂ ಸಾಗಿ ಹೋಗಿ ಅಲ್ಲಿನ ಆಕಾಶಕಾಯಗಳ ಮೇಲೆ ಅಪ್ಪಳಿಸ ಬಹುದು. ಭೂಮಿಗೂ ಬೀಸಿ ಬರಬಹುದು. ಜೀವಿಗಳಿಗೆ ಏನೂ ಆಗದಂತೆ ರಕ್ಷಾ ಕವಚವಿದೆ. ಆದರೆ ಭೂಮಿಗೆ ಹೊದೆಸಿದಂತಿರುವ ಕಾಂತಶಕ್ತಿ ಏರುಪೇರಾಗಬಹುದು. ಭೂಮಿಯ ಹಗಲಿನ ಭಾಗದಲ್ಲಿರುವ ವಿದ್ಯುತ್ ಗ್ರಿಡ್‍ಗಳು ಕುಸಿಯಬಹುದು. ಎಲೆಕ್ಟ್ರಿಕ್ ವಸ್ತುಗಳು ಹಾಳಾಗಬಹುದು. ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು ನಾಶವಾಗಬಹುದು. ಜಿಪಿಎಸ್ ವ್ಯವಸ್ಥೆ ಏರುಪೇರಾಗಬಹುದು.
ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯ ರೊಚ್ಚಿಗೇಳುತ್ತಾನೆ. 1859 ಮತ್ತು 1921ರಲ್ಲಿ ಸೂರ್ಯನಿಂದ ಬೀಸಿಬಂದ ಸೌರ ಮಾರುತದ ಶಕ್ತಿ ಅದೆಷ್ಟಿತ್ತೆಂದರೆ, ಅಮೆರಿಕ, ಕೆನಡಾದಲ್ಲಿ ಟೆಲಿಗ್ರಾಫ್ ಕಚೇರಿಗಳು ಹೊತ್ತಿ ಉರಿದಿದ್ದವು.
ಬಾಹ್ಯಾಕಾಶದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಸಮತಲದಲ್ಲಿ ನಿಂತು ಸೂರ್ಯನನ್ನು ನೋಡಲು ಇರುವ ಅನುಕೂಲಕರ ಬಿಂದುಗಳನ್ನು ಲಗ್ರಾಂಜಿಯನ್ ಬಿಂದು ಎನ್ನುತ್ತಾರೆ. ಲಗ್ರಾಂಜಿಯನ್ ಬಿಂದುವಿನಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲಗಳು ಅಲ್ಲಿಗೆ ತೆರಳುವ ಯಾವುದೇ ಉಪಗ್ರಹ ಅಥವಾ ಸಣ್ಣ ನೌಕೆಯನ್ನು ಸಮತೋಲನದಲ್ಲಿ ಇರಿಸುತ್ತವೆ. ಇಲ್ಲಿ ವೀಕ್ಷಣಾಸಾಧನ ನಿಲ್ಲಿಸಿದರೆ ಇಂಧನದ ಬಳಕೆ ಕಡಿಮೆ ಇರುತ್ತದೆ. ಬಾಹ್ಯಾಕಾಶದಲ್ಲಿ ಒಟ್ಟು ಐದು ಲಗ್ರಾಂಜಿಯನ್ ಬಿಂದುಗಳಿವೆ. ಇವುಗಳಲ್ಲಿ ಎಲ್–1 ಭೂಮಿ ಮತ್ತು ಸೂರ್ಯನ ನಡುವೆ ಒಂದೇ ಸರಳರೇಖೆಯಲ್ಲಿದೆ. ಸದ್ಯಕ್ಕೆ ಎಲ್-2ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಠಿಕಾಣಿ ಹೂಡಿದೆ.
ಸೂರ್ಯಾಧ್ಯಯನದ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಆದಿತ್ಯ ಎಲ್–1 ವೀಕ್ಷಣಾಲಯದಲ್ಲಿ ಏಳು ಉಪಕರಣಗಳಿವೆ (ಪೇಲೋಡ್). ನಾಲ್ಕು ನೇರವಾಗಿ ಸೂರ್ಯನನ್ನು ದಿಟ್ಟಿಸಿದರೆ ಉಳಿದವು ಲಗ್ರಾಂಜಿಯನ್ ಬಿಂದುವಿನತ್ತ ಸೂರ್ಯನಿಂದ ಹರಿದುಬರುವ ಕಣ ಮತ್ತು ಕ್ಷೇತ್ರಗಳನ್ನು ಆಯಾ ಕ್ಷಣದಲ್ಲೇ ಅಭ್ಯಸಿಸಿ ವರದಿ ನೀಡುತ್ತವೆ. ಸೂರ್ಯನ ಕೊರೋನಾ ವೀಕ್ಷಿಸಲು ವಿಸಿಬಲ್ ಎಮಿಶನ್ ಲೈನ್ ಕೊರೋನಾಗ್ರಾಫ್, ಸೂರ್ಯನ ಕಾಂತ ಶಕ್ತಿಯನ್ನು ಅಳೆಯಲು ಶಕ್ತಿಶಾಲಿ ಮ್ಯಾಗ್ನೆಟೊಮೀಟರ್, ಪ್ರಖರ ಪ್ರತಿಫಲನ ನೀಡುವ ವಿಶಾಲ ಕನ್ನಡಿಗಳ ಶಕ್ತಿಶಾಲಿ ಟೆಲಿಸ್ಕೋಪ್, ಪ್ಲಾಸ್ಮಾ ಅಧ್ಯಯನ ಸಾಧನ, ಎಕ್ಸ್‌ರೇ ಸ್ಪೆಕ್ಟ್ರೋಮೀಟರ್‌ಗಳು ಕೊರೋನಾ, ಬಿಸಿ ಮಾರುತ ಮತ್ತು ಜ್ವಾಲೆಗಳ ಸ್ಪಷ್ಟ ವಿವರಗಳನ್ನು ಭೂಮಿಗೆ ರವಾನಿಸಲಿವೆ.
ಇಲ್ಲಿಯವರೆಗೆ ಸಂಪೂರ್ಣ ಸೂರ್ಯಗ್ರಹಣದ ಕಾಲದಲ್ಲಿ ಮಾತ್ರ ಕೊರೋನಾದ ಅಧ್ಯಯನ ಸಾಧ್ಯವಿತ್ತು. ಈಗ ಆದಿತ್ಯನಲ್ಲಿರುವ ಕೊರೋನಾಗ್ರಾಫ್ ಬಳಸಿ ಕೃತಕವಾಗಿ ಸಂಪೂರ್ಣ ಸೂರ್ಯಗ್ರಹಣ ಉಂಟು ಮಾಡಿ ಕೊರೋನಾವನ್ನು ಇನ್ನಷ್ಟು ಸ್ಪಷ್ಟವಾಗಿ ಅರಿಯಬಹುದು ಎನ್ನುತ್ತಾರೆ ನೈನಿತಾಲ್‍ನ ಆರ್ಯಭಟ ಸಂಶೋಧನಾ ಕೇಂದ್ರದ ವಿಜ್ಞಾನಿ ದೀಪಂಕರ್ ಬ್ಯಾನರ್ಜಿ. ಬೇಕಾದ ಸಲಕರಣೆ ಮತ್ತು ತಂತ್ರಜ್ಞಾನವನ್ನು ನಮ್ಮ ವಿಜ್ಞಾನಿಗಳೇ ಒದಗಿಸಿದ್ದಾರೆ.
ಆದಿತ್ಯ ಹೋಗುವ ಜಾಗಕ್ಕೆ ಈಗಾಗಲೇ ತೆರಳಿರುವ ಅಮೆರಿಕ ಮತ್ತು ಜರ್ಮನಿ, ಅನೇಕ ಮಹತ್ವದ ಸೌರ ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ದೂರ 14 ಕೋಟಿ ಕಿ.ಮೀ.ಗಳು. ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ 2021ರ ಏಪ್ರಿಲ್ 25ರಂದು ಸೂರ್ಯನ ಬಳಿ ಹೋಗುವ ತನ್ನ ಎಂಟನೇ ಪ್ರಯತ್ನದಲ್ಲಿ, ಐದು ತಾಸುಗಳವರೆಗೆ ಕೊರೋನಾವನ್ನೇ ಇಣುಕಿ ನೋಡಿತ್ತು ಎಂದು ‘ನ್ಯೂ ಸೈಂಟಿಸ್ಟ್’ ಪತ್ರಿಕೆ ವರದಿ ಮಾಡಿತ್ತು. ಮರುವರ್ಷ ಜನವರಿಯಲ್ಲಿ ಸೂರ್ಯನ ಪ್ರತಾಪಕ್ಕೆ ಎದುರಾದ ನೌಕೆಯ ಹೊರಕವಚ 612 ಡಿಗ್ರಿ ಸೆಲ್ಸಿಯಸ್‍ನಷ್ಟು ಬಿಸಿಯಾಗಿತ್ತು. ಆದರೆ ನೌಕೆಯ ಒಳಗಿನ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ದಾಟಿರಲಿಲ್ಲ. ನಾಸಾದ ಉನ್ನತ ತಂತ್ರಜ್ಞಾನವು ನೌಕೆಯ ಕೈಹಿಡಿದಿತ್ತು.
ಆದಿತ್ಯ ನೆಲೆಗೊಳ್ಳುವ ಜಾಗದಲ್ಲಿ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಸೋಹೊ (ಸೋಲಾರ್ ಆ್ಯಂಡ್ ಹೆಲಿಯೊಸ್ಫೆರಿಕ್ ಅಬ್ಸರ್ವೇಟರಿ) ವೀಕ್ಷಣಾಲಯವನ್ನು 1995ರಷ್ಟು ಹಿಂದೆಯೇ ಸ್ಥಾಪಿಸಿವೆ. ಬರೀ ಮೂರು ವರ್ಷಗಳಿಗಾಗಿ ಅಲ್ಲಿಗೆ ತೆರಳಿದ್ದ ಸೋಹೊ ಇಂದಿನವರೆಗೂ ಕೆಲಸ ಮಾಡುತ್ತಿದೆ. ಅಂಥ ಸುಧಾರಿತ ವ್ಯವಸ್ಥೆ ಮತ್ತು ನೌಕೆಗಳು ಅಲ್ಲಿವೆ ಎಂದ ಮೇಲೆ ನಾವೇಕೆ ನಮ್ಮ ಆದಿತ್ಯನನ್ನು ಅಲ್ಲಿಗೆ ಕಳಿಸುತ್ತಿದ್ದೇವೆ ಎಂಬ ಪ್ರಶ್ನೆ ಸಹಜ. ಅದಕ್ಕೆ ಕಾರಣಗಳಿವೆ. ಸೂರ್ಯನ ಕುರಿತಾದ ಹೆಚ್ಚಿನ ಮಾಹಿತಿ ಮುಂಚೂಣಿ ರಾಷ್ಟ್ರಗಳ ಬಳಿ ಮಾತ್ರ ಇದೆ. ಏನೇ ಬೇಕಾದರೂ ಅವರನ್ನೇ ಕೇಳಬೇಕು. ನಾಸಾದ ಪಾರ್ಕರ್ ಸೋಲಾರ್ ಯೋಜನೆಯವರು ಡೇಟಾ ಕೊಟ್ಟರೆ ಮಾತ್ರ ವಿಶ್ಲೇಷಣೆ ಸಾಧ್ಯವಿತ್ತು.
ಈಗ ಹಾಗಲ್ಲ. ಸೂರ್ಯ ನಮಗೂ ಎಟುಕಲಿದ್ದಾನೆ. ಸೂರ್ಯನಿಂದ ಹೊರಹೊಮ್ಮುವ ರಾಶಿ ರಾಶಿ ಮೂಲಕಣ ಪ್ರವಾಹವನ್ನು ಅಭ್ಯಸಿಸಲು ನಮಗೆ ಬೇಕಾದ ಕೋನದಲ್ಲಿ ಆದಿತ್ಯನನ್ನು ತಿರುಗಿಸಿ ನೋಡಬಹುದು. ಅಷ್ಟೇ ಅಲ್ಲ, ಇತರ ದೇಶಗಳಿಗೂ ನಮ್ಮ ಆದಿತ್ಯಪೀಠದಲ್ಲಿ ಜಾಗ ಕೊಡಬಹುದು. ಸೂರ್ಯನಿಂದ ಹೊಮ್ಮುವ ಜ್ವಾಲಾ ಬುಗ್ಗೆಯನ್ನು ಅಧ್ಯಯನ ಮಾಡುವುದು ಆದಿತ್ಯನ ಮುಖ್ಯ ಉದ್ದೇಶಗಳಲ್ಲೊಂದು. ಅಂಥ ಜ್ವಾಲೆ ಭೂಮಿಯೆಡೆಗೆ ಬರುವುದೇ ಆದರೆ ಅದು ಆದಿತ್ಯ ಇರುವ ಕಕ್ಷೆಯನ್ನು ದಾಟಿ ನಮ್ಮೆಡೆಗೆ ಬರಬೇಕು. ಹಾಗಾದಲ್ಲಿ ಮೊದಲ ಮುನ್ಸೂಚನೆ ಆದಿತ್ಯನಿಗೇ ದೊರೆತು ನಾವು ಹುಷಾರಾಗಬಹುದು.
ರಿಯಲ್ ಆದಿತ್ಯನ ಸೌರಜ್ವಾಲೆ ನಮ್ಮ ಕೃತಕ ಆದಿತ್ಯನನ್ನೇ ಸುಟ್ಟು ಕರಕಲಾಗಿಸಬಹುದಲ್ಲವೇ? ಇಡೀ ಯೋಜನೆಯೇ ಹಳಿ ತಪ್ಪಬಹುದಲ್ಲವೇ? ಆತಂಕ ಬೇಕಿಲ್ಲ. ಅಂಥ ಅಪಾಯಗಳನ್ನು ಎದುರಿಸಲು ಸುರಕ್ಷಾ ಕ್ರಮ ಮತ್ತು ಆದಿತ್ಯನ ಉಪಕರಣಗಳಿಗೆ ತ್ವರಿತವಾಗಿ ಸುರಕ್ಷಾ ಹೊದಿಕೆ ತೊಡಿಸುವ ಇಲ್ಲವೆ ಇಡೀ ಉಪಗ್ರಹವನ್ನೇ ಕಕ್ಷೆಯಿಂದ ಕೆಲಕಾಲ ದೂರ ಸರಿಸುವ ವ್ಯವಸ್ಥೆ ಇದ್ದೇ ಇರುತ್ತದೆ.
ನಮ್ಮೆಲ್ಲರ ಬದುಕಿಗೆ ಸೂರ್ಯ ಅದೆಷ್ಟು ಮುಖ್ಯ ಎಂದು ಕಲೆ, ಸಂಸ್ಕೃತಿ, ಆಚರಣೆಗಳಲ್ಲೆಲ್ಲ ನಾವೇ ಕೊಂಡಾಡುತ್ತಾ ಬಂದಿದ್ದೇವೆ. ಸೂರ್ಯ ನಮಗೆ ಮಿತ್ರನೇ ಆಗಿದ್ದ. ಆದರೆ ಈ ಅತಿಮಾನವ ಯುಗದಲ್ಲಿ ಪ್ರಚಂಡ ವಿದ್ಯುತ್ ಹಾಗೂ ಸರಕು ಜಾಲಗಳನ್ನು ಹೆಣೆದುಕೊಂಡಿರುವ ನಮಗೆ ಸೂರ್ಯ ಶತ್ರುವಾದರೂ ಅಚ್ಚರಿ ಇಲ್ಲ. ಅದೇನೇ ಇದ್ದರೂ ಆದಿತ್ಯನ ಅಂತರಂಗ ಅರಿಯಲು ಇನ್ನೊಬ್ಬ ಆದಿತ್ಯ ಪಯಣಿಸಲಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.