ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ | ಕಲೆ ಮೂಲಕ ಜೀವನಕಲೆಯ ಪಾಠ

Published 4 ಸೆಪ್ಟೆಂಬರ್ 2023, 19:37 IST
Last Updated 4 ಸೆಪ್ಟೆಂಬರ್ 2023, 19:37 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್‌ 'ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಿರೂಪಣೆ: ಗಣಪತಿ ಹೆಗಡೆ, ಕಾರವಾರ

ಬಾಲ್ಯವನ್ನು ಕಡು ಬಡತನದಿಂದಲೇ ಕಳೆದಿದ್ದೆ. ಈಗಲೂ ಶಾಲೆಯಲ್ಲಿ ಮಕ್ಕಳೊಂದಿಗೆ ಕಳೆಯುವಾಗ ನನಗೆ ಬಾಲ್ಯದ ದಿನಗಳು ಪದೇ ಪದೇ ನೆನಪಾಗುತ್ತವೆ. ನನ್ನಿಂದ ಕಲಿತ ಬಡ ಮಕ್ಕಳು ವಿಶಿಷ್ಟವಾದ ಸಾಧನೆ ಮಾಡಿದರೆ, ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆಯಿಲ್ಲ ಎಂಬ ಭಾವನೆ ನನ್ನದು. ವೃತ್ತಿ ಜೀವನದಲ್ಲಿ ನನಗೆ ಅಂತಹ ನೂರಾರು ಪ್ರಶಸ್ತಿಗಳು ಸಂದಿವೆ.

ಮಕ್ಕಳಿಗೆ ಪಾಠ ಮಾಡುವುದಷ್ಟೇ ನನ್ನ ಕೆಲಸವಲ್ಲ ಮತ್ತು ಹಾಗೆಂದು ನಾನು ಭಾವಿಸಿಯೂ ಇಲ್ಲ. ಮಕ್ಕಳಲ್ಲಿ ಇರುವ ಪ್ರತಿಭೆ ಗುರುತಿಸಿ, ಅದನ್ನು ಬೆಳಕಿಗೆ ತರುವುದೇ ಕಾಯಕ ಎಂಬ ಭಾವನೆ ನನ್ನದು. ಪುಸ್ತಕ ಮತ್ತು ಶಾಲಾ ಕೊಠಡಿ ಹೊರಗಡೆ ಚೆಂದದ ಜಗತ್ತಿದೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಡಲು ಪ್ರಯತ್ನಿಸುತ್ತೇನೆ. ರಂಗಭೂಮಿ, ಸಾಹಿತ್ಯ, ಸಂಗೀತ, ಚಿತ್ರಕಲೆ ಹೀಗೆ ವಿವಿಧ ಕಲಾ ಪ್ರಕಾರಗಳನ್ನು ಅವರಿಗೆ ಮನದಟ್ಟು ಮಾಡಿ, ಆಸಕ್ತಿ ಮೂಡಿಸುತ್ತೇನೆ.

ನಾನು ಶಿಕ್ಷಕ ಆಗಬೇಕು ಎಂಬ ಹಂಬಲ ಬಾಲ್ಯದಲ್ಲೇ ಚಿಗುರಿತ್ತು. ಅಪ್ಪ ಸಣ್ಣ ಚಹಾ ಅಂಗಡಿ ನಡೆಸುತ್ತಿದ್ದರು. ಆದಾಯಕ್ಕಿಂತ ಸಾಲವೇ ಹೆಚ್ಚಿತ್ತು. ಇಷ್ಟೆಲ್ಲದರ ಮಧ್ಯೆಯೂ ಹಿರಿಯ ಅಣ್ಣ ಜಿ.ಪಿ. ಭಾಗ್ವತ್ ನನ್ನನ್ನು ಓದಿಸಿದರು. 1990ರಲ್ಲಿ ನನ್ನ ಕನಸು ಸಾಕಾರಗೊಂಡಿತು. ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಮುಂಡಗೋಡ ತಾಲ್ಲೂಕಿನ ಕೊಳಗಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದೆ.

ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವಾಗ ಬಿ.ಇಡಿ ಪದವಿ ಪಡೆಯಲು ನಿರ್ಧರಿಸಿದೆ. ಆಗ ಎರಡು ವರ್ಷ ಸಂಬಳರಹಿತ ರಜೆ ಪಡೆದೆ. ಪತ್ನಿ ಮಹಾದೇವಿ ಹೆಗಡೆ ಕೂಡ ಶಿಕ್ಷಕಿಯಾಗಿದ್ದರು. ಅವರ ವೇತನವು ನನ್ನ ಓದಿಗೆ ನೆರವಾಯಿತು. 1998ರಲ್ಲಿ ನೇರ ನೇಮಕಾತಿ ಮೂಲಕ ರಾಯಭಾಗ ಪ್ರೌಢಶಾಲೆಗೆ ಸೇರಿದೆ. ಖಾನಾಪುರದಲ್ಲಿ ಶಿಕ್ಷಣ ಸಂಯೋಜಕನಾಗಿ ನೇಮಕಗೊಂಡೆ. ಆದರೆ, ಮಕ್ಕಳಿಗೆ ಪಾಠ ಮಾಡುವುದು ನನ್ನ ಗುರಿಯಾಗಿತ್ತು. ಅದಕ್ಕೆ ಒಂದೇ ವರ್ಷಕ್ಕೆ ಸಂಯೋಜಕ ಹುದ್ದೆ ತೊರೆದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಶಾಲೆಯಲ್ಲಿ ಮರಳಿ ಶಿಕ್ಷಕನಾದೆ.

ರಂಗಭೂಮಿ ನನ್ನ ಆಸಕ್ತಿಯ ಕ್ಷೇತ್ರ. ಶಿಕ್ಷಕನಾದರೂ ರಂಗಭೂಮಿ ಜೊತೆಗಿನ ನಂಟು ಬಿಟ್ಟಿಲ್ಲ. 1998–99ರಲ್ಲಿ ಕಾರ್ಗಿಲ್ ಯುದ್ಧ ನಡೆಯುತಿತ್ತು. ಎಲ್ಲೆಲ್ಲೂ ಯುದ್ಧದ್ದೇ ಮಾತು. ಆಗ ನಾನು ಕೆಲಸ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ರಾಯಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಾರ್ಗಿಲ್ ಕಥನ ಆಧರಿಸಿ ನಾಟಕ ತರಬೇತಿ ನೀಡಿದೆ. ನಾಟಕವು ರಾಜ್ಯಮಟ್ಟದಲ್ಲಿ ಮೊದಲ ಬಹುಮಾನ ಗಳಿಸಿತು. ಇದು ಜೀವನಕ್ಕೆ ಇನ್ನೊಂದು ತಿರುವು ಕೊಟ್ಟಿತು.

‘ನಾನೂ ಗಾಂಧಿ ಆಗ್ತೇನೆ’ ಎಂಬ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಜತೆಗೆ, ಉತ್ತಮ ನಿರ್ದೇಶಕ ಪ್ರಶಸ್ತಿಯೂ ಲಭಿಸಿತು. ಮುಂಡಗೋಡ ತಾಲ್ಲೂಕಿನ ಮಳಗಿ ಶಾಲೆಯಲ್ಲಿದ್ದಾಗ ಸಮಾನ ಮನಸ್ಕ ಶಿಕ್ಷಕರ ಜೊತೆ ಸೇರಿ ‘ಗುರು ಬಳಗ’ ಹೆಸರಿನ ರಂಗಕರ್ಮಿಗಳ ತಂಡ ಕಟ್ಟಿದೆ. ದಾನಿಗಳ ನೆರವಿನಿಂದ ರಂಗ ಪರಿಕರಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ಸಾಮಾಜಿಕ ಜಾಗೃತಿ ಮೂಡಿಸುವ ನಾಟಕ ಪ್ರದರ್ಶಿಸುವುದು ಹವ್ಯಾಸವಾಯಿತು.

ದಾನಿಗಳ ನೆರವು ಪಡೆದು ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಇ–ಕಲಿಕಾ ತರಗತಿ ರಚಿಸಿಕೊಂಡಿದ್ದೇನೆ. ಸಾಹಿತಿಗಳ, ಸಾಹಿತ್ಯ ಮತ್ತು ಅದಕ್ಕೆ ಪೂರಕವಾದ ಚಟುವಟಿಕೆಗಳ ಕುರಿತು ಮಕ್ಕಳಿಗೆ ವಿಡಿಯೊದ ಮೂಲಕ ಪಾಠ ಮಾಡುತ್ತೇನೆ. ಪ್ರತಿ ತರಗತಿ ಮುಗಿದ ಬಳಿಕ ‘ಕನ್ನಡದ ಕೋಟ್ಯಧಿಪತಿ’ ಮಾದರಿಯಲ್ಲಿ ರಸಪ್ರಶ್ನೆ ಆಯೋಜಿಸುತ್ತೇನೆ.

ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಪರಿಣಾಮಕಾರಿಯಾಗಿ ಕಲಿಸುವುದು ನನ್ನ ಗುರಿ. ಅದಕ್ಕಾಗಿ, ಪ್ರತಿ ತರಗತಿಯಲ್ಲಿ ಕನಿಷ್ಠ ಎರಡು ಹೊಸ ಕನ್ನಡ ಪದಗಳನ್ನು ಕಲಿಸುತ್ತೇನೆ. ಗೋಡೆ ಬರಹದ ತಿಂಗಳ ಪತ್ರಿಕೆಯನ್ನು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಂದ ಕನ್ನಡದಲ್ಲಿ ರಚಿಸುವಂತೆ ಮಾಡಿದ್ದೇನೆ. 

ಕನ್ನಡ ಕಲಿಕೆ ಜೊತೆ ನಾಟಕ, ಸಂಗೀತವನ್ನು ಆಸಕ್ತಿಯಿಂದ ಕಲಿಸುವ ನಾರಾಯಣ ಸರ್ ನಮ್ಮ ಪಾಲಿನ ಹೆಮ್ಮೆಯ ಮೇಷ್ಟ್ರು. ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ.
ದರ್ಶನ್ ಎಸ್.ಭಟ್ಟ, ವಿದ್ಯಾರ್ಥಿ
ಸರಳ ರೀತಿ ಪಾಠ ಬೋಧಿಸುವುದರ ಜೊತೆಗೆ ಬದುಕಿನ ಮಹತ್ವವನ್ನು ತಿಳಿಸುವ ನಾರಾಯಣ ಸರ್ ಅಪರೂಪದ ಮೇಷ್ಟ್ರು. ಅವರು ನಮ್ಮ ಪಾಲಿಗೆ ದೇವರು ಕೊಟ್ಟ ಉಡುಗೊರೆ.
ರಕ್ಷಾ ದಿನೇಶ್ ಹೆಗಡೆ, ವಿದ್ಯಾರ್ಥಿನಿ

ನಾರಾಯಣ ಭಾಗ್ವತ್‌

* ಕೋವಿಡ್ ಲಸಿಕೆ ಕುರಿತು ವಿಜ್ಞಾನ ನಾಟಕ ರಚಿಸಿ, ನಿರ್ದೇಶಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದವರು

* ‘ನುಡಿಗನ್ನಡ’ ಹೆಸರಿನ ಬ್ಲಾಗ್ ರಚಿಸಿಕೊಂಡು ಅ‍ಪೂರ್ವ ಕೃತಿಗಳನ್ನು ನಾಟಕವಾಗಿ ರೂಪಾಂತರಿಸುತ್ತಾರೆ.  ರಾಜ್ಯದ ವಿವಿಧ ಜಿಲ್ಲೆಗಳ ಕನ್ನಡ ಶಿಕ್ಷಕರಲ್ಲಿ ಇರುವ ನಾಟಕಗಳ ಧ್ವನಿ ಮುದ್ರಣ ಸಂಗ್ರಹಿಸಿ, ಅದನ್ನು ಮಕ್ಕಳ ಕಲಿಕೆಗೆ ಬಳಸಲು ನೆರವಾಗುತ್ತಾರೆ

* ಸಾಹಿತಿಗಳ ಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಪಾಠ ಬೋಧಿಸುತ್ತಾರೆ

* ವಿವಿಧ ಕ್ಷೇತ್ರಗಳ ವಿಷಯ ತಿಳಿಸಿ, ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ಕೊಡುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT