ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಶೈಕ್ಷಣಿಕ ಚಿಂತನ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು. ಅದು, ಒಂದು ಸಮಾರಂಭದ ಹಾಗೆ ಇರುವ ಬದಲಿಗೆ ಸಂವಾದದ ರೂಪದಲ್ಲಿ ಇತ್ತು. ಪ್ರಸ್ತುತ ದಿನಗಳಲ್ಲಿ ಇತಿಹಾಸದ ಕುರಿತಾಗಿ ಆಗುತ್ತಿರುವ ಹಲವು ಮಗ್ಗುಲುಗಳ ಅಪವ್ಯಾಖ್ಯಾನಗಳು ಮತ್ತು ಸತ್ಯಕ್ಕೆ ದೂರವಾದ ಮಾಹಿತಿಗಳ ಕುರಿತಾಗಿ ಉಪನ್ಯಾಸಕರು ನಿಜವಾದ ಆತಂಕ ಮತ್ತು ಬೇಸರದಿಂದ ಪ್ರಶ್ನೆಗಳನ್ನು ಎತ್ತಿದರು. ಈ ನೆಲೆಯಲ್ಲಿ, ಇತಿಹಾಸ ಉಪನ್ಯಾಸಕರ ಸಂಘದ ಪ್ರಯತ್ನ ಗಮನಾರ್ಹ.

ಸಂವಾದದಲ್ಲಿ ನನಗೆ, ‘ಕಲಾವಿಭಾಗಕ್ಕೆ ಕಡಿಮೆ ಅಂಕಗಳನ್ನು ಪಡೆದವರು ಹೆಚ್ಚಾಗಿ ಬರುತ್ತಾರೆ. ಅವರಲ್ಲಿ ಕಲಿಕಾ ದಕ್ಷತೆಯನ್ನು ಮೂಡಿಸುವುದು ಹೇಗೆ?’ ಎನ್ನುವ ಶೈಕ್ಷಣಿಕ ಕಾಳಜಿಯ ಪ್ರಶ್ನೆ ಬಂದ ಹಾಗೆಯೇ, ‘ಎಡ–ಬಲ ರಾಜಕೀಯ ಸಿದ್ಧಾಂತಿಗಳು ನಿರೂಪಿಸುವ ಇತಿಹಾಸದ ಅಬ್ಬರದಲ್ಲಿ ಇತಿಹಾಸದ ಪದ್ಧತಿಗೆ ಅನುಗುಣವಾದ ಇತಿಹಾಸವನ್ನು ಬಿಡಿಸಿ ಹೇಳುವುದು ಹೇಗೆ? ತಪ್ಪು ವಿಚಾರವನ್ನು ತುಂಬಿಕೊಂಡ ವಿದ್ಯಾರ್ಥಿಗಳು ಅವರ ನಂಬಿಕೆಗೆ ಗಾಢವಾಗಿ ಬದ್ಧರಾಗಿದ್ದಾಗ, ಅವರು ತಿಳಿದುಕೊಂಡದ್ದು ತಪ್ಪು ಎಂದು ಮನವರಿಕೆ ಮಾಡಿಕೊಡುವುದು ಹೇಗೆ? ಸ್ಥಳೀಯ ಇತಿಹಾಸವು ಪಠ್ಯಪುಸ್ತಕಗಳಿಂದ ದೊಡ್ಡ ಪ್ರಮಾಣದಲ್ಲಿ ಕಣ್ಮರೆಯಾಗಿದೆ; ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?’ ಎಂಬ ಪ್ರಶ್ನೆಗಳು ಬಂದವು.

‘ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ತಿದ್ದಿ ಸರಿಯಾದದ್ದನ್ನು ಹೇಳಿದ ತಕ್ಷಣ, ನಮ್ಮ ಮೇಲೆ ಕೀಳು ಮಟ್ಟದ ನಿಂದನೆಗಳು ನಡೆಯುತ್ತವೆ. ನಾವು ಅಧ್ಯಾಪಕರಾಗಿರುವುದರಿಂದ ಅದೇ ಭಾಷೆಯಲ್ಲಿ ಉತ್ತರಿಸಲು ನಮಗೆ ಆಗುವುದಿಲ್ಲ. ಆಗ ನಾವು ಮೌನಿಗಳಾಗಿಬಿಡುತ್ತೇವೆ. ಈ ಸನ್ನಿವೇಶವನ್ನು ಎದುರಿಸಿ ಮಾತನಾಡುವುದು ಹೇಗೆ?’ ಎಂದೆಲ್ಲ ಇತಿಹಾಸಕ್ಕೆ ಸಂಬಂಧಿಸಿದ ಸಾಮಾಜಿಕ ಕಾಳಜಿಯ ಪ್ರಶ್ನೆಗಳು ಬಂದವು. ಇವೆಲ್ಲ ಇತಿಹಾಸ ಅಧ್ಯಾಪಕರು ತಮ್ಮ ಬೋಧನಾ ವಿಷಯದ ಮೇಲೆ ನಡೆಯುತ್ತಿರುವ ದಾಳಿಯ ಕುರಿತಾಗಿ ವ್ಯಕ್ತಪಡಿಸಿದ ಕಾಳಜಿಗಳೇ ಆಗಿದ್ದವು.

ಇತಿಹಾಸದ ಅಧ್ಯಾಪಕರ ರಾಜಕೀಯ ಒಲವು ಯಾವ ಕಡೆಗೇ ಇರಬಹುದು. ಆದರೆ ಇತಿಹಾಸ ಎಂಬ ವಿಷಯ ಅವರಿಗೆ ಅನ್ನ ಕೊಡುವ ವಿಷಯವೂ ಹೌದು ಮತ್ತು ಅವರು ಇತಿಹಾಸವನ್ನು ವ್ಯವಸ್ಥಿತ ಪದ್ಧತಿಯ ಮೂಲಕವೇ ಅಭ್ಯಾಸ ಮಾಡಿದವರೂ ಹೌದು. ಆದ್ದರಿಂದ ರಾಜಕೀಯ ಒಲವನ್ನು ಮೀರಿದ ಒಂದು ಅಕಡೆಮಿಕ್ ಬದ್ಧತೆ ಅವರಿಗೆ ತಮ್ಮ ಬೋಧನಾ ವಿಷಯದ ಬಗ್ಗೆ ಇರುತ್ತದೆ. ಆದ್ದರಿಂದ ತೀರಾ ತಪ್ಪಾಗಿ ವ್ಯಾಖ್ಯಾನಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ. ಆದ್ದರಿಂದ ಇತಿಹಾಸ ಅಧ್ಯಾಪಕರೇ ಇತಿಹಾಸದ ಬಗ್ಗೆ ಮಾತನಾಡುವುದು ಹೆಚ್ಚು ಅಪೇಕ್ಷಣೀಯವಾಗಿರುತ್ತದೆ.

ಇತಿಹಾಸ ಅಧ್ಯಾಪಕರಿಗೆ ಸತ್ಯಗಳು ಗೊತ್ತಿಲ್ಲವೆಂದೂ ಅಲ್ಲ, ಹೇಳುವ ಮನಸ್ಸಿಲ್ಲವೆಂದೂ ಅಲ್ಲ. ಬದಲು, ಸತ್ಯವನ್ನು ಹೇಳಲು ವೈಚಾರಿಕ ಭಯವಿದೆ. ಈ ಭಯ ಅನಾಗರಿಕ ವೈಚಾರಿಕ ದಾಳಿಗಳ ಕಾರಣದಿಂದ ಬಂದಿದೆ. ಅಧ್ಯಾಪಕರಾದವರಿಗೆ ದಾಳಿಕೋರರು ಬಳಸುವ ಭಾಷೆಗೆ ತತ್ಸಮಾನವಾದ ಭಾಷೆಯನ್ನು ಬಳಸಲು ಆಗುವುದಿಲ್ಲ. ವೃತ್ತಿಯ ಆಚಾರ ಸಂಹಿತೆ ಇರುತ್ತದೆ. ಅದನ್ನು ಕಡೆಗಣಿಸಿ ಅಧ್ಯಾಪಕರು ಮಾತನಾಡಲು ಆಗುವುದಿಲ್ಲ. ಮೇಲಾಗಿ ತೀರಾ ಕಳಪೆ ಭಾಷೆಯಲ್ಲಿ ಮಾತನಾಡುವುದು ಅಧ್ಯಾಪಕರಾದವರ ಮನಸ್ಸಿಗೆ ಹಿತವೆನಿಸುವುದಿಲ್ಲ. ಇತಿಹಾಸವನ್ನು ಸರಿಯಾಗಿ ವಿವರಿಸಬಲ್ಲವರ ಈ ಸಭ್ಯತೆಯೇ ಇತಿಹಾಸವನ್ನು ತಿರುಚುವ ಶಕ್ತಿಗಳಿಗೆ ದೊರಕಿರುವ ಅವಕಾಶವೂ ಆಗಿದೆ. ಸಜ್ಜನಿಕೆಯೇ ದೌರ್ಬಲ್ಯವಾಗುವ ಸ್ಥಿತಿ ಇದು.

ಆದರೆ ಇತಿಹಾಸ ಅಧ್ಯಾಪಕರು ಮನಸ್ಸು ಮಾಡಿದರೆ ಈ ಸ್ಥಿತಿಯನ್ನು ಬದಲಿಸಬಹುದು. ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಹೇಳುವವರು ಒಂಟಿಯಾಗಿದ್ದಾಗ ವೈಚಾರಿಕ ದಾಳಿಗಳ ಮುಖಾಂತರ ಅವರ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತದೆ. ಆದರೆ ಅವರು ಸಂಘಟಿತರಾಗಿ ಸರಿಯಾದುದನ್ನು ಹೇಳಲು ಹೊರಟರೆ ಬಾಯಿ ಮುಚ್ಚಿಸಲು ಆಗುವುದಿಲ್ಲ. ಆದ್ದರಿಂದ ಇತಿಹಾಸ ಉಪನ್ಯಾಸಕರ ಸಂಘ ಎನ್ನುವ ಒಂದು ಸಂಘಟಿತ ವೇದಿಕೆಯ ಮೂಲಕವೇ ಸಮರ್ಪಕ ಇತಿಹಾಸವನ್ನು ಹೇಳಬಹುದು.

ಸಾಮಾಜಿಕ ಜಾಲತಾಣದಲ್ಲಾಗಲಿ, ಬೇರೆ ರೀತಿಯಲ್ಲಾಗಲಿ ತೊಡಗಿಕೊಳ್ಳುವಿಕೆಗಳು ವ್ಯಕ್ತಿಯ ಹೆಸರಿನಲ್ಲಿರದೆ ಸಂಘಟನೆಯ ಹೆಸರಿನಲ್ಲಿ ಇರಬೇಕು. ಸಂಘಟನೆಯಲ್ಲಿ ಯಾರಾದರೊಬ್ಬರು ಅಥವಾ ತಿಂಗಳಿಗೆ ಒಬ್ಬೊಬ್ಬರ ಹಾಗೆ ಇದನ್ನು ನಿರ್ವಹಿಸಬೇಕು. ಒಂದು ಇಶ್ಯೂ ಬಂದಾಗ ಸಂಘಟನೆಗೆ ಸೀಮಿತವಾದ ವೇದಿಕೆಯಲ್ಲಿ ಇಶ್ಯೂಗೆ ಏನು ಪ್ರತಿಕ್ರಿಯೆ ಕೊಡಬೇಕು ಎಂಬ ಬಗ್ಗೆ ಪರಸ್ಪರ ಚರ್ಚಿಸಿ ತೀರ್ಮಾನಿಸಬೇಕು. ಸಂಘಟನೆಯ ಹೆಸರಿನಲ್ಲೇ ಚರ್ಚೆಗಳು ನಡೆದಾಗ ವೈಯಕ್ತಿಕ ತೇಜೋವಧೆ ಮಾಡಿ ಕುಗ್ಗಿಸಲು ಆಗುವುದಿಲ್ಲ ಮತ್ತು ಒಂದು ವೇಳೆ ಅಂತಹ ಪ್ರಯತ್ನಗಳು ನಡೆದಾಗಲೂ ಅದರಿಂದ ವೈಯಕ್ತಿಕವಾಗಿ ಯಾರನ್ನೂ ಕುಗ್ಗಿಸಲು ಆಗುವುದಿಲ್ಲ. ಇದಲ್ಲದೆ, ವೈಯಕ್ತಿಕ ತೊಡಗಿಕೊಳ್ಳುವಿಕೆಯ ಮೂಲಕವೂ ಇದನ್ನು ನಿರ್ವಹಿಸಲು ಸಾಧ್ಯವಿದೆ. ಆಗ ಸಂಘಟನೆಯ ಸದಸ್ಯರು ಒಬ್ಬೊಬ್ಬರಾಗಿ ಕಾಣಿಸಿಕೊಳ್ಳದೆ ಒಬ್ಬರ ಜೊತೆಯಲ್ಲಿ ಹಲವರು ಜೊತೆಜೊತೆಯಾಗಿ ಕಾಣಿಸಿಕೊಳ್ಳಬೇಕು.

ಸಮರ್ಪಕವಾದದ್ದನ್ನು ಹಲವರು ಒಟ್ಟೊಟ್ಟಾಗಿ ಹೇಳಲು ಹೊರಟಾಗ ವೈಯಕ್ತಿಕ ತೇಜೋವಧೆಯ ಮೂಲಕ ಬಾಯಿಮುಚ್ಚಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಇತಿಹಾಸ ಉಪನ್ಯಾಸಕರೇ ಆದದ್ದರಿಂದ ಸ್ವಾಭಾವಿಕವಾಗಿ ಅವರ ವಿಚಾರಗಳಿಗೆ ಸ್ವೀಕೃತಿಯ ಅರ್ಹತೆ ಜಾಸ್ತಿ ಇರುತ್ತದೆ. ನಿಜವಾಗಿ ಮನವರಿಕೆ ಮಾಡಿಕೊಡಬೇಕಾದ್ದು ಯಾರಿಗೆ? ರಾಜಕೀಯಾತ್ಮಕವಾಗಿ ಎರಡು ಸಿದ್ಧಾಂತಗಳಾಗಿ ಒಡೆದುಕೊಂಡವರಿಗೆ ಮನವರಿಕೆ ಮಾಡಿಕೊಡಲು ಆಗುವುದಿಲ್ಲ, ಮತ್ತವರಿಗೆ ಮನವರಿಕೆ ಮಾಡಿಕೊಡಬೇಕಾಗಿಯೂ ಇಲ್ಲ. ರಾಜಕೀಯ ಸಿದ್ಧಾಂತವಾಗಿ ಒಡೆದುಕೊಳ್ಳದ ಮೂರನೆಯ ದೊಡ್ಡ ಜನಸಮುದಾಯವನ್ನು ತಮ್ಮೊಂದಿಗೆ ತರುವುದಕ್ಕಾಗಿ ಅಸಮರ್ಪಕ ಇತಿಹಾಸವನ್ನು ಪ್ರಚುರಪಡಿಸಲಾಗುತ್ತದೆ.

ಸಮರ್ಪಕವಾದದ್ದನ್ನು ಹೇಳಿದರೆ ಈ ವರ್ಗ ಅದನ್ನು ಸ್ವೀಕರಿಸುತ್ತದೆ. ಇವರಿಗೆ ಸೈದ್ಧಾಂತಿಕ ತಟಸ್ಥರು ಹೇಳುವ ವಿಷಯಗಳು ಮಹತ್ವದ್ದಾಗುತ್ತವೆ. ಅಧ್ಯಾಪಕರು ಸಹಜವಾಗಿ ರಾಜಕೀಯ ಸಿದ್ಧಾಂತದಲ್ಲಿ ತಟಸ್ಥರಾಗಿಯೂ ಅವರ ಬೋಧನಾ ವಿಷಯದಲ್ಲಿ ಕ್ರಿಯಾಶೀಲರಾಗಿಯೂ ಇರಬೇಕಾದವರಾಗಿದ್ದಾರೆ. ಆದ್ದರಿಂದ ಅವರ ತೊಡಗಿಕೊಳ್ಳುವಿಕೆಗೆ ತಾನೇ ತಾನಾಗಿ ಜಾಸ್ತಿ ಮಹತ್ವ ಇದೆ.

ಸಂವಾದದಲ್ಲಿ ಕಾಣಿಸಿದ ಪ್ರಶ್ನೆಗಳಲ್ಲಿ ಸ್ಥಳೀಯ ಇತಿಹಾಸದ್ದು ಪ್ರಮುಖ ಪ್ರಶ್ನೆಯಾಗಿದೆ. ಸ್ಥಳೀಯ ಇತಿಹಾಸದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಕೊಡುವುದರಲ್ಲಿ ಎರಡು ವಿಧಾನಗಳಿವೆ. ಮೊದಲನೆಯದು, ಪಠ್ಯಕ್ರಮದಲ್ಲೇ ಸ್ಥಳೀಯ ಇತಿಹಾಸ ಸೇರಿಕೊಂಡಿದ್ದಾಗ ನೇರವಾಗಿ ಅದನ್ನೇ ಬೋಧಿಸಲು ಸಾಧ್ಯವಾಗುತ್ತದೆ. ಮೂರು-ನಾಲ್ಕು ದಶಕಗಳ ಹಿಂದೆ ಪ್ರಾರಂಭಿಕ ಶಿಕ್ಷಣದ ಯಾವುದೋ ಒಂದು ತರಗತಿಯಲ್ಲಿ ರಾಜ್ಯದ ಎಲ್ಲ ಮಕ್ಕಳಿಗೂ ಅನ್ವಯವಾಗುವ ಒಂದು ಪಾಠ ಪುಸ್ತಕ ಮತ್ತು ಅದಕ್ಕೆ ಪೂರಕವಾಗಿ ಆಯಾ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ವಿಚಾರಗಳನ್ನು ಮಾತ್ರ ಒಳಗೊಂಡಿರುವ ಇನ್ನೊಂದು ಪಾಠ ಪುಸ್ತಕ ಇರುತ್ತಿತ್ತು. ಬೋಧನೆಯ ವಿವಿಧ ಹಂತಗಳಲ್ಲಿಯೂ ಸ್ಥಳೀಯ ವಿಚಾರಗಳು ಸೇರ್ಪಡೆಯಾಗುತ್ತಿದ್ದವು. ಹೀಗಿದ್ದಾಗ ನೇರವಾಗಿ ಸ್ಥಳೀಯ ಇತಿಹಾಸವನ್ನೇ ಬೋಧಿಸಲು ಬರುತ್ತದೆ.

ಎರಡನೆಯದು, ಪರೋಕ್ಷವಾಗಿ ಸ್ಥಳೀಯ ಇತಿಹಾಸವನ್ನು ತಂದು ಬೋಧಿಸಲು ಸೂಕ್ತವಾಗುವ ರೀತಿಯಲ್ಲಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು. ಈ ಪದ್ಧತಿಯಲ್ಲಿ ಪಠ್ಯ ಕ್ರಮದಲ್ಲಿ ನೇರವಾಗಿ ಸ್ಥಳೀಯ ವಿಷಯಗಳ ವಿವರಣೆ ಇರುವುದಿಲ್ಲ. ಆದರೆ ಸಾಮಾನ್ಯೀಕೃತ ಪಠ್ಯಕ್ರಮದ ನಿರೂಪಣೆಯು ಬೋಧಕರು ಸ್ಥಳೀಯ ಇತಿಹಾಸವನ್ನು ಸಾಮಾನ್ಯೀಕೃತ ಇತಿಹಾಸದೊಂದಿಗೆ ಸಂಯೋಜಿಸಿ ಬೋಧಿಸಲು ಸಾಧ್ಯವಾಗುವ ಹಾಗೆ ಇರುತ್ತದೆ. ಇದು ಸಾಧ್ಯವಾಗಬೇಕಾದರೆ ಪಠ್ಯದ ನಿರೂಪಣೆಯು ಸ್ಥಳೀಯ ವಿಷಯಗಳನ್ನು ಸಂಯೋಜಿಸಲು ಸೂಕ್ತವಾಗುವಂತೆ ಇರಬೇಕು. ಅಲ್ಲದೆ ಅಧ್ಯಾಪಕರಿಗೆ ವೈಯಕ್ತಿಕ ನೆಲೆಯಲ್ಲಿ ಸ್ಥಳೀಯ ಇತಿಹಾಸದ ಜ್ಞಾನವಿದ್ದು ಎಲ್ಲಿಗೆ ಅದನ್ನು ಸಂಯೋಜಿಸಬಹುದು ಎನ್ನುವ ಬೋಧನಾ ಪದ್ಧತಿಯ ತಜ್ಞತೆ ಇರಬೇಕು ಮತ್ತು ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವುದರಲ್ಲಿ, ಬೋಧಿಸಿದ ಅಧ್ಯಾಪಕರಿಗೆ ಸ್ವಾತಂತ್ರ್ಯ ಇರಬೇಕು.

ಈಗ ಅಂತಾರಾಷ್ಟ್ರೀಯ ಮಟ್ಟದ ಪಠ್ಯಕ್ರಮಗಳ ಮಾದರಿಯಲ್ಲಿ ಪಠ್ಯಕ್ರಮವನ್ನು ರೂಪಿಸುವ ಶಿಕ್ಷಣ ಪದ್ಧತಿಯಲ್ಲಿ ವಿವರವಾಗಿಯೂ ವಿಧಾನವಾಗಿಯೂ ಸ್ಥಳೀಯ ಇತಿಹಾಸವನ್ನು ತರಲು ಕಷ್ಟವಾಗುತ್ತಿದೆ. ಪಠ್ಯಪುಸ್ತಕಗಳ ನಿರೂಪಣೆಯಲ್ಲಿ ಸ್ಥಳೀಯ ವಿಷಯಗಳನ್ನು ಸಂಯೋಜಿಸಲು ಅವಕಾಶ ಇದ್ದಾಗ್ಯೂ ಪ್ರಶ್ನೆಪತ್ರಿಕೆಯು ಹೆಚ್ಚಾಗಿ ಸಾರ್ವತ್ರಿಕ ಮಾದರಿಯಲ್ಲಿಯೇ ಇರುವುದರಿಂದ ಸ್ಥಳೀಯ ಇತಿಹಾಸ ಬೋಧಿಸಿದರೂ ಪರೀಕ್ಷೆಯಲ್ಲಿ ಅದಕ್ಕೆ ಮಹತ್ವ ಇರುವುದಿಲ್ಲ. ಆಗ ವಿದ್ಯಾರ್ಥಿಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ‘ಸರಳತೆಯಿಂದ ಸಂಕೀರ್ಣದತ್ತ’ ಅಥವಾ ‘ಮೂರ್ತತೆಯಿಂದ ಅಮೂರ್ತತೆಯತ್ತ’ ಎನ್ನುವುದು ಬೋಧನಾ ಪದ್ಧತಿಯ ಮೂಲ ತತ್ವಗಳಲ್ಲಿ ಒಂದು. ಆದ್ದರಿಂದ ಇತಿಹಾಸ ಪಠ್ಯಗಳು ವಿದ್ಯಾರ್ಥಿಗಳಿಗೆ ಸ್ಥಳೀಯತೆಯೊಂದಿಗೆ ಸಂಬಂಧ ಬೆಸೆಯುವ ದೃಷ್ಟಿಯಿಂದಲೂ ಕಲಿಕೆಯ ಸುಗಮ ನಿರ್ವಹಣೆಯ ದೃಷ್ಟಿಯಿಂದಲೂ ಸ್ಥಳೀಯ ಇತಿಹಾಸವನ್ನು ಒಳಗೊಳ್ಳಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಇತಿಹಾಸ ಉಪನ್ಯಾಸಕರ ಸಂಘಗಳು ಎಲ್ಲೆಲ್ಲಿ ಸ್ಥಳೀಯ ಇತಿಹಾಸವನ್ನು ಹೇಗೆ ಕೊಡಬಹುದು ಎಂಬುದರ ಪಟ್ಟಿ ಮಾಡಿ ಪಠ್ಯ ಪರಿಷ್ಕರಣೆಗೆ ಮನವಿ ಮಾಡಿಕೊಳ್ಳುವ ಮೂಲಕ ಪಠ್ಯದ ಪರಿಷ್ಕರಣೆಯಲ್ಲಿ ಸ್ಥಳೀಯ ಇತಿಹಾಸ ಸೇರಿಕೊಳ್ಳುವ ಹಾಗೆ ಮಾಡಲು ಪ್ರಯತ್ನಿಸಬೇಕು. ರಾಜ್ಯದಾದ್ಯಂತ ಇತಿಹಾಸ ಉಪನ್ಯಾಸಕರ ಸಂಘಗಳು ಈ ರೀತಿ ಪ್ರಯತ್ನಿಸಿದರೆ ಆಗ ಉಪಯೋಗ ಆಗಲು ಸಾಧ್ಯವಿದೆ.

ಕಲಾ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಲಿಕೆಯಲ್ಲಿ ಹಿಂದುಳಿದವರಾಗಿರುತ್ತಾರೆ, ಅವರಲ್ಲಿ ಕಲಿಕಾ ದಕ್ಷತೆಯನ್ನು ಹೆಚ್ಚಿಸುವುದು ಹೇಗೆ ಎಂಬುದು ಇತಿಹಾಸ ಉಪನ್ಯಾಸಕರಿಗೆ ಮಾತ್ರ ಇರುವ ಪ್ರಶ್ನೆಯಲ್ಲ. ಮಾನವಿಕಗಳನ್ನು ಬೋಧಿಸುವ ಎಲ್ಲ ಉಪನ್ಯಾಸಕರ ಪ್ರಶ್ನೆಯೂ ಹೌದು. ಏಕೆಂದರೆ ನಮ್ಮ ರೂಢಿಗತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಆಧರಿಸಿ ಕೋರ್ಸ್ ಅನ್ನು ಆರಿಸಿಕೊಳ್ಳುವ ಪದ್ಧತಿ ತೀರಾ ವಿರಳ. ಜಾಸ್ತಿ ಅಂಕಗಳನ್ನು ಪಡೆದವರು ವಿಜ್ಞಾನ, ತುಸು ಕಡಿಮೆ ಅಂಕಗಳನ್ನು ಪಡೆದವರು ವಾಣಿಜ್ಯ, ತೀರಾ ಕಡಿಮೆ ಅಂಕಗಳನ್ನು ಪಡೆದವರು ಕಲಾ, ಅಂದರೆ ಮಾನವಿಕಗಳನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿಯೇ ರೂಢಿಯಲ್ಲಿದೆ. ಇಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಗೆ ತೊಡಗಿಸಬೇಕಾದರೆ ಬೋಧನೆಯನ್ನು ಹೆಚ್ಚು ಆಕರ್ಷಕವೂ ಕುತೂಹಲಕಾರಿಯಾಗಿಯೂ ರೂಪಿಸಿಕೊಂಡು, ಕಲಿತ ವಿಷಯಗಳ ಮೂಲಕ ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು.

ಎರಡನೆಯದಾಗಿ, ಕಾಲೇಜು ಹಂತಕ್ಕೆ ಬರುವ ವಿದ್ಯಾರ್ಥಿಗಳಿಗೆ ಅವರ ಮನೆಯ ಸಮಸ್ಯೆ, ಅವರ ಔದ್ಯೋಗಿಕ ಭವಿಷ್ಯ, ಮದುವೆಯಂತಹ ವಿಚಾರಗಳ ಬಗ್ಗೆ ಬಹಳಷ್ಟು ಅರಿವು ಬೆಳೆದಿದ್ದು ಅವುಗಳನ್ನು ನಿಭಾಯಿಸುವ ಶಕ್ತಿ ಬಂದಿರುವುದಿಲ್ಲ. ಇಂತಹ ವಿಚಾರಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಭಿನ್ನಭಿನ್ನವಾಗಿರುತ್ತವೆ. ಆಗ ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪ್ರತ್ಯೇಕವಾಗಿ ನಿರ್ವಹಿಸಿ ವಿದ್ಯಾರ್ಥಿಗಳಿಗಿರುವ ಮಾನಸಿಕ ತಡೆಗಳನ್ನು ನಿವಾರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ವೈಯಕ್ತಿಕ ತಡೆಗಳನ್ನು ನಿವಾರಿಸುವುದು ಮತ್ತು ಕಲಿಕಾ ವಿಷಯಗಳ ಮೂಲಕ ಸಿಗುವ ಅವಕಾಶಗಳ ಭರವಸೆಯನ್ನು ಮನವರಿಕೆ ಮಾಡಿಕೊಡುವುದು ಪರಸ್ಪರ ಸಂಯೋಜಿಸಲ್ಪಟ್ಟಾಗ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯುತ್ತಾರೆ.

ಈ ಎಲ್ಲ ನೆಲೆಗಟ್ಟಿನಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲು ಇತಿಹಾಸ ಉಪನ್ಯಾಸಕರ ಸಂಘಗಳಿಗೆ ಅವಕಾಶವಿದೆ. ಉಪನ್ಯಾಸಕರ ಸಂಘಗಳೇ ಇಂಥದ್ದನ್ನು ಮಾಡಿದಾಗ ಸಾಮಾಜಿಕವಾಗಿಯೂ ಶೈಕ್ಷಣಿಕವಾಗಿಯೂ ಹೆಚ್ಚು ಒಳ್ಳೆಯ ಸಾಮಾಜಿಕ ಪರಿಸರ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.